ಪಟ್ಟಾಭಿಷೇಕ (ಅಭಿಷೇಕ) ಎಂದರೆ ಮಕುಟಾಭಿಷೇಕ ಎಂದು ಸಾಮಾನ್ಯವಾದ ಅರ್ಥವಾದರೂ ಸ್ನಾನ, ಮಂತ್ರ, ಪ್ರೋಕ್ಷಣೆ ಎನ್ನುವ ಅರ್ಥವೂ ಉಂಟು. ಮೂಲ ಅರ್ಥ ಸುರಿಯುವುದು (ಅಭಿ+ಷಿಚ್). ರಾಜಸೂಯಯಾಗಕ್ಕೆ ಸಂಬಂಧಪಟ್ಟಂತೆ ಅಭಿಷೇಕದ ವಿಧಿಯನ್ನು ಕೃಷ್ಣಯಜುರ್ವೇದದಲ್ಲೂ ಕೆಲವು ಬ್ರಾಹ್ಮಣಗಳಲ್ಲೂ ಕಾಣಬಹುದು. ನಮ್ಮ ದೇಶದಲ್ಲಿ ಮಾತ್ರವಲ್ಲದೆ, ಜಗತ್ತಿನ ಎಲ್ಲ ದೇಶಗಳಲ್ಲೂ ರಾಜರಿಗೂ ಅಧಿಕಾರಿಗಳಿಗೂ ಇಂಥ ಅಭಿಷೇಚನ ದೀಕ್ಷೆ ಒದಗುತ್ತಿದ್ದುದೂ ತಿಳಿದುಬರುತ್ತದೆ. ಅಸಂಸ್ಕೃತ ಜನಾಂಗಗಳಲ್ಲಿ ವೀರರಿಗೂ ಗಣನಾಯಕರಿಗೂ ರಕ್ತಸ್ನಾನ ನಡೆಯುತ್ತಿದ್ದುದರಿಂದ ಅವರ ಶೌರ್ಯವೃದ್ಧಿಯಾಗುವುದೆಂಬ ನಂಬಿಕೆಯಿದ್ದಿತು. ಆದರೆ ಭಾರತದೇಶದಲ್ಲಿ ಅಭಿಷೇಕದ ವಿಚಾರವಾಗಿ ಶಾಸ್ತ್ರವೊಂದನ್ನೇ ಸಿದ್ಧಮಾಡಿದರು. ಮೊದಲಿಗೆ ರಾಜಾಧಿರಾಜರಾದ ಚಕ್ರವರ್ತಿಗಳಿಗೆ ಮಾತ್ರ ಅಭಿಷೇಕದೀಕ್ಷೆ ನಡೆಯುತ್ತಿತ್ತು. ಐತರೇಯ ಬ್ರಾಹ್ಮಣದಲ್ಲಿ ಸರ್ವತೋಧಿಕನಾದ ರಾಜ ಅಭಿಷೇಕಕ್ಕೆ ಯೋಗ್ಯನೆಂಬ ಮಾತು ಬರುತ್ತದೆ. ವiಹಾಭಾರತದಲ್ಲಿ ಎಲ್ಲ ದೇಶಗಳಲ್ಲೂ ತನ್ನ ಔನ್ನತ್ಯವನ್ನು ಸಾಧಿಸಿಕೊಂಡ ಯುಧಿಷ್ಠಿರ ರಾಜಸೂಯಯಾಗಮಾಡಿ ಅದರ ಅಂಗವಾಗಿ ಅಭಿಷಿಕ್ತನಾದ ವಿವರಬರುತ್ತದೆ. ಇದು ಸಭಾಪರ್ವದಲ್ಲೂ ಯುದ್ಧ ಮುಗಿದು ಕೌರವರೆಲ್ಲ ಹತರಾದ ಮೇಲೆ ಶಾಂತಿ ಪರ್ವದಲ್ಲೂ ಬರುತ್ತದೆ. ಅಶೋಕನೂ ಹರ್ಷನೂ ಅಭಿಷಿಕ್ತರಾದರು. ಸಾಮಾನ್ಯರಾದ ರಾಜರೂ ಸಾಮಂತರೂ ಚಕ್ರವರ್ತಿಗಳಂತೆಯೇ ಅಭಿಷಿಕ್ತರಾಗುವ ಪದ್ಧತಿ ಕಾಲಕ್ರಮೇಣ ಮೊದಲಾಯಿತು. ಎಲ್ಲ ರಾಜರಿಗೂ ಅಭಿಷೇಕ ವಿಧಿಯನ್ನು ಹೇಳುವ ಸ್ಮøತಿಗ್ರಂಥಗಳೂ ಹುಟ್ಟಿಕೊಂಡುವು. ಯಾವ ರಾಜನೂ ರಾಜ್ಯಭಾರ ಮಾಡಲು ಆರಂಭಿಸುವ ಮೊದಲು ಅಭಿಷಿಕ್ತನಾಗಲೇಬೇಕೆಂದೂ ಹಾಗಿಲ್ಲದಿದ್ದರೆ ಅವನಿಗೆ ವಿಷ್ಣುವಿನ ಅಂಶ ಒದಗುವುದಿಲ್ಲವೆಂದೂ ಕಲ್ಪನೆ ಬಂದಿತು. ರಾಜ್ಯಾಭಿಷೇಕ ಪದ್ಧತಿಗಳೂ ಅಭಿಷೇಕಪ್ರಯೋಗಗಳೂ ಕಾಣಿಸಿಕೊಂಡುವು. ರಾಜಮಾತ್ರವಲ್ಲದೆ ಯುವರಾಜನೂ ಪಟ್ಟಾಭಿಷಿಕ್ತನಾಗುವ ಪದ್ಧತಿ ರಾಮಾಯಣದಲ್ಲೇ ಕಾಣುತ್ತದೆ. ಅಯೋಧ್ಯಾ ಕಾಂಡದಲ್ಲಿ ಯೌವರಾಜ್ಯಾಭಿಷೇಕದ ವಿಸ್ತಾರವಾದ ವಿವರಣೆ ಇದೆ. ರಾಮ ರಾವಣ ವಧಾನಂತರ ಅಯೋಧ್ಯೆಗೆ ಹಿಂದಿರುಗಿ ಅಭಿಷಿಕ್ತನಾಗುವುದು ಪುಷ್ಯಾಭಿಷೇಕ ಎನಿಸಿಕೊಳ್ಳುತ್ತದೆ. ಇದರ ವಿವರಗಳು ಅಥರ್ವವೇದದ ಪರಿಶಿಷ್ಟ, ವರಾಹಮಿಹಿರನ ಬೃಹತ್ಸಂಹಿತೆ, ಕಾಲಿಕಾಪುರಾಣ ಮೊದಲಾದ ಗ್ರಂಥಗಳಲ್ಲಿವೆ. ಪುಷ್ಯನಕ್ಷತ್ರ ಇರುವ ದಿನವೇ (ಅಹ್ನಾಯ ಪುಷ್ಯೇ ದಿವಸೇ ಯತಿಷ್ಯೇ ಭೋಜನ, ಚಂಪೂ ರಾಮಾಯಣ) ಇದು ನಡೆಯಬೇಕೆಂಬ ವಿವರವಿದೆ. ಈ ಕಾಲದಲ್ಲಿ ರಾಜರು ಮಾತ್ರವಲ್ಲದೆ ಇತರರೂ ಪುಷ್ಯಸ್ನಾನ ಮಾಡುವ ಪದ್ಧತಿಯಿತ್ತು. ರಾಜನ ಆಪ್ತವರ್ಗಕ್ಕೆ ಸೇರಿದ ಮಂತ್ರಿಗಳಿಗೂ ಮೂರ್ಧಾಭಿಷೇಚನ ವಿಧಿ ನಡೆಯುತ್ತಿದ್ದುದು ಹರ್ಷಚರಿತೆಯಿಂದ ತಿಳಿದುಬರುತ್ತದೆ. ರಾಜನ ಪುರೋಹಿತನೂ ಅಭಿಷಿಕ್ತನಾಗುತ್ತಿದ್ದ; ಇವನ ಅಭಿಷೇಕಕ್ಕೆ ಬೃಹಸ್ಪತಿಸ್ತವ ಎನ್ನುವ ಹೆಸರಿತ್ತು.

ಫ಼್ರಾನ್ಸ್‌ನ ಏಳನೇ ಚಾರ್ಲ್ಸ್‌ನ ಪಟ್ಟಾಭಿಷೇಕ (೧೪೨೯)

ವೈದಿಕಯುಗದಲ್ಲಿ ಪ್ರಚಲಿತವಾಗಿದ್ದ ವಿಧಿಗಳು ಕಾಲಕ್ರಮದಲ್ಲಿ ಮಾರ್ಪಟ್ಟುದನ್ನು ಮುಂದಿನ ಗ್ರಂಥಗಳಲ್ಲಿ ಕಾಣಬಹುದು. ಮಹಾಭಾರತ, ರಾಮಾಯಣ, ಮಾನಸಾರ, ಅಗ್ನಿಪುರಾಣಗಳಲ್ಲಿ ಪರಿಷ್ಕøತ ಅಭಿಷೇಕದ ವಿವರಗಳು ದೊರೆಯುತ್ತವೆ. ಬರುಬರುತ್ತ ಕ್ಷತ್ರಿಯರಿಗೆ ಮಾತ್ರ ಈ ವಿಧಿ ಸೀಮಿತವಾಯಿತು. ಈ ವಿಧಿಗೆ ಮುನ್ನ ರಾಜನು ಸ್ನಾನಮಾಡಿ ಶುಚಿರ್ಭೂತವಾಗಿ ದೀಕ್ಷೆಯನ್ನು ತಳೆಯುತ್ತಿದ್ದ. ಈ ಸಂದರ್ಭದಲ್ಲಿ ತನ್ನ ರಾಜ್ಯಭಾರಕ್ಕೆ ಪ್ರವೇಶ ಮಾಡುವ ಮುನ್ನ ಅಧಿಕಾರವರ್ಗದವರನ್ನು ನೇಮಿಸಿಕೊಳ್ಳುವುದು; ರಾಜ್ಯಭಾರದ ಪ್ರತೀಕಗಳಾದ ನವರತ್ನಗಳು, ಪಟ್ಟಮಹಿಷಿ, ಪಟ್ಟದಾನೆ, ಪಟ್ಟದಕುದುರೆ, ಶ್ವೇತಚ್ಛತ್ರ ಮುಂತಾದವನ್ನು ಆರಿಸಿಕೊಳ್ಳುವುದು; ವ್ಯಾಘ್ರಾಜಿನವನ್ನು ಹಾಸಿದ ಭದ್ರಾಸನವನ್ನು ಏರ್ಪಡಿಸಿಕೊಳ್ಳುವುದು ಮುಂತಾದ ವಿಧಿಗಳು ನಡೆಯುತ್ತವೆ. ರಾಜ ತನ್ನ ಪಟ್ಟದರಾಣಿಯೊಡನೆ ಭದ್ರಾಸನದಲ್ಲಿ ಮಂಡಿಸಿರಲು ಪುರೋಹಿತರು ಸಪ್ತಸಮುದ್ರಗಳ, ಸಕಲತೀರ್ಥಗಳ ನೀರನ್ನು ಪ್ರೋಕ್ಷಣೆ ಮಾಡುತ್ತಾರೆ. ಅನಂತರ ಸಚಿವರೂ ಪುರಪ್ರಮುಖರೂ ಇತರ ಬ್ರಾಹ್ಮಣವರ್ಗದವರೂ ಪ್ರೋಕ್ಷಣೆ ಮಾಡುತ್ತಾರೆ. ಅಭಿಷೇಕ ವಿಧಿಗಳು ನಡೆದ ಅನಂತರ ರಾಜ ಕುದುರೆಯೇರಿ ನಗರ ಪ್ರದಕ್ಷಿಣೆ ಮಾಡಿಬರುವ ವಾಡಿಕೆಯಿತ್ತು.

ಅಭಿಷೇಕಗಳಲ್ಲಿ ಯಜ್ಞಯಾಗಾದಿಗಳ ಸಂದರ್ಭದಲ್ಲಿ ಬರುವ ಪುನರಭಿಷೇಕ ಮತ್ತು ಐಂದ್ರಮಹಾಭಿಷೇಕ ಎನ್ನುವ ಎರಡು ವಿಧಿಗಳಿದ್ದುವು. ಪುನರಭಿಷೇಕವೆಂದರೆ ಯಜ್ಞದೀಕ್ಷೆಯಿಂದ ಹೊರಬಂದ ರಾಜನಿಗೆ ನಡೆಯುವ ವಿಧಿ. ಅದಕ್ಕೂ ರಾಜ್ಯಭಾರ ಪ್ರಾರಂಭಕ್ಕೂ ಸಂಬಂಧವಿಲ್ಲ. ಇಂದ್ರ ದೇವತೆಗಳ ಒಡೆತನವನ್ನು ಗಳಿಸಿದುದನ್ನು ಸೂಚಿಸುವ ಐಂದ್ರಮಹಾಭಿಷೇಕವನ್ನು ಪುರೋಹಿತ ತನ್ನ ರಾಜ ಪೃಥ್ವೀವಲ್ಲಭನಾಗಬೇಕೆಂದು ನಡೆಸುತ್ತಾನೆ. ಇದು ರಾಜ್ಯಭಾರದ ಆರಂಭದಲ್ಲೇ ನಡೆಯುವ ವಿಧಿ. ನ್ಯಗ್ರೋಧ, ಉದುಂಬರ, ಅಶ್ವತ್ಥ, ಪ್ಲಕ್ಷ ಮರಗಳಿಂದ ಮಾಡಿದ ಕಲಶವನ್ನು ಬಳಸಿ, ಮಂತ್ರೋದಕವನ್ನು ಸಿದ್ಧಮಾಡಿ, ಉದುಂಬರ ಮರದಿಂದ ಮಾಡಿದ ಭದ್ರಾಸನದ ಮೇಲೆ ಕುಳಿತ ರಾಜನಿಗೆ ಅದರಿಂದಲೂ ಪಂಚಾಮೃತದಿಂದಲೂ ಅಭಿಷೇಕ ಮಾಡುವ ವಿವರವಿದೆ. ವಿದ್ಯುಕ್ತಮಂತ್ರವನ್ನು ಉಚ್ಚರಿಸಿ ರಾಜ ಸಿಂಹಾಸನವನ್ನು ಏರಿದೊಡನೆ ರಾಜಕರ್ತಾರರು ಇವನೇ ರಾಜನೆಂದು ಘೋಷಿಸುತ್ತಾರೆ. ಪುರೋಹಿತನನ್ನು ರಾಜ ಸನ್ಮಾನಿಸಿದ ಮೇಲೆ ಪುರೋಹಿತ ಅವನಿಗೆ ಒಂದು ಸುರಾಪಾತ್ರೆಯನ್ನು ಕೊಡುತ್ತಾನೆ. ಅಭಿಷೇಕದ ವಿಧಿಯಲ್ಲಿ ಪುರೋಹಿತನದೇ ಪ್ರಮುಖಪಾತ್ರ.

ರಾಜಸೂಯಯಾಗದಲ್ಲಿ ಅಭ್ಯಾರೋಹಣೇಯ, ಅಭಿಷೇಚನೀಯ, ದಶಪೇಯ, ಕೇಶಪನೀಯ, ಪ್ಯುಷ್ಟಿ, ದ್ವಿರಾತ್ರ, ಕ್ಷತ್ರಧೃತಿ ಎನ್ನುವ ವಿಧಿಗಳು ಕಾಣಬರುತ್ತವೆ. ಮೊದಲನೆಯದು ಪವಿತ್ರ ಎನ್ನುವ ಅಂಕುರಾರ್ಪಣವಿಧಿ. ಅಭಿಷೇಚನೀಯ ಎನ್ನುವ ವಿಧಿ ಐದು ದಿನಗಳ ಉತ್ಸವ; ಇದು ಚೈತ್ರಮಾಸದಲ್ಲೇ ನಡೆಯಬೇಕೆಂಬ ಕಟ್ಟಳೆಯಿದೆ. ರಾಜನ ಹೆಸರನ್ನು ಹೇಳಿ, ಸವಿತೃ, ಅಗ್ನಿ, ಬೃಹಸ್ಪತಿ, ಸೋಮ, ಇಂದ್ರ ಮೊದಲಾದ ದೇವತೆಗಳನ್ನು ಆಹ್ವಾನಿಸಿ, ಹದಿನೇಳು ದ್ರವಗಳನ್ನೂ ಮೇಲೆ ಹೇಳಿದ ಉದುಂಬರಾದಿ ಕಲಶಗಳನ್ನೂ ಸಿದ್ಧಪಡಿಸುತ್ತಾರೆ. ಸರ್ವಾಭರಣಭೂಷಿತನಾದ ರಾಜಧನುರ್ಧಾರಿಯಾಗಿ ಅಮಂಗಳ ನಿವಾರಕ ವಿಧಿಗಳನ್ನು ನಡೆಸಿ ಸಿಂಹಾಸನದ ಸಮ್ಮುಖದಲ್ಲಿ ಪೂರ್ವಾಭಿಮುಖವಾಗಿ ನಿಂತು ಕಲಶಗಳ ನೀರಿನಿಂದ ಪುರೋಹಿತ ತನ್ನನ್ನು ಅಭಿಷಿಂಚಿಸಿದ ಮೇಲೆ ಸಿಂಹಾಸನ ಏರುತ್ತಾನೆ. ಇದರ ವಿವರಗಳು ಶತಪಥ ಬ್ರಾಹ್ಮಣದಲ್ಲಿ ಬರುತ್ತವೆ. ವಾಜಪೇಯದಲ್ಲೂ ಹೀಗೆಯೇ ವಿವರಗಳು ಹಲವಾರು ಇವೆ. ಇಲ್ಲಿ ಸೋಮದೀಕ್ಷೆಯ ವಿವರ ಮಹತ್ತ್ವದ್ದು.

ಅಭಿಷೇಕಕ್ಕೆ ಸಂಬಂಧಿಸಿದಂತೆ ಸುಗಂಧದ್ರವ್ಯಗಳ ಲೇಪನ ಮುಖ್ಯ. ಇದು ಗ್ರೀಸ್, ರೋಮ್, ಈಜಿಪ್ಟ್ ಜನರಲ್ಲಿ ಕೂಡ ವಿಶೇಷವಾಗಿ ಬಳಕೆಯಲ್ಲಿದ್ದಿತು. ಇದರ ಮುಖ್ಯ ಉದ್ದೇಶ ಸಂಸ್ಕಾರ ರೂಪವಾದುದು. ಈ ದ್ರವ್ಯಗಳ, ಅಂಗರಾಗಗಳ ವಿಲೇಪನದಿಂದ ವೀರ್ಯವೃದ್ಧಿಯೂ ತೇಜೋವೃದ್ಧಿಯೂ ಅಲೌಕಿಕಫಲಗಳೂ ಒದಗುವುವೆಂಬ ಕಲ್ಪನೆಯಿತ್ತು. ಇಂದ್ರಜಾಲ ಕ್ರಿಯೆಗಳಿಗೂ ಅಂಗರಾಗ ಲೇಪನಕ್ಕೂ ಸಂಬಂಧವಿದ್ದುದು ಕಂಡುಬರುತ್ತದೆ. ಅಭಿಷೇಕಕ್ಕೆ ನಾಂದಿಯಾಗಿ ಅಂಗರಾಗ ವಿಲೇಪನ ಅವಶ್ಯವಾದ ಕ್ರಿಯೆಯಾಗಿತ್ತು; ಆಫ್ರಿಕ, ಆಸ್ಟ್ರೇಲಿಯ, ದಕ್ಷಿಣ ಸಂಸ್ಕಾರಗಳಲ್ಲೂ ಮೃತನ ಉತ್ತರಕ್ರಿಯೆಗಳಲ್ಲೂ ಅಭಿಷೇಕ ಅಂಗರಾಗ ಲೇಪನಗಳು ಎಲ್ಲ ದೇಶಗಳಲ್ಲೂ ಉಂಟು. ಬೌದ್ಧಜನರಲ್ಲೂ ಹಿಂದೂ ಜನರಲ್ಲೂ ಅಭಿಷೇಕ ಅಂಗರಾಗಲೇಪನಗಳು ನಿತ್ಯಸಹಚಾರಿಗಳು. ಅರಬ್ಬಿಯರಲ್ಲೂ ಇದು ಬಳಕೆಯಲ್ಲಿತ್ತು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: