ಓಲೆ ರೋಮರ್ (1644-1710) ಡೆನ್ಮಾರ್ಕಿನ ಒಬ್ಬ ಖಗೋಳವಿಜ್ಞಾನಿ.

ಓಲೆ ರೋಮರ್, ಜೇಕಬ್ ಕೋನಿಂಗ್‍ನ ವರ್ಣಚಿತ್ರ ಸು. ೧೭೦೦

ಆರಂಭಿಕ ಜೀವನ

ಬದಲಾಯಿಸಿ

ಆರ್ಹಸ್, ಜಟ್‌ಲೆಂಡಿನಲ್ಲಿ 1644 ಸೆಪ್ಟೆಂಬರ್ 25 ರಂದು ಜನಿಸಿದ. 18ನೆಯ ವಯಸಿನಲ್ಲಿ ಈತನನ್ನು ಕೋಪನ್‌ಹೇಗನ್ ವಿಶ್ವವಿದ್ಯಾಲಯಕ್ಕೆ ಕಳಿಸಲಾಯಿತು. ಅಲ್ಲಿ ಈತ ಗಣಿತ ಮತ್ತು ಖಗೋಳವಿಜ್ಞಾನಗಳ ಅಧ್ಯಯನ ನಡೆಸಿದ. ಆ ದಿನಗಳಂದು ಈತ ರಾಸ್‌ಮಸ್ ಬಾರ್ತೊಲಿನ್ ಎಂಬ ವೈದ್ಯನ ಮನೆಯಲ್ಲಿ ತಂಗಿದ್ದ. ರೋಮರನ ಸಾಮರ್ಥ್ಯವನ್ನು ಕಂಡು ಮೆಚ್ಚಿಕೊಂಡಿದ್ದ ಬಾರ್ತೊಲಿನ್, ಇನ್ನೂ ಪ್ರಕಟಗೊಳ್ಳದೆ ಉಳಿದಿದ್ದ ಮತ್ತೊಬ್ಬ ಡೆನ್ಮಾರ್ಕಿನ ಖಗೋಳವಿಜ್ಞಾನಿ ಟೈಕೋ ಬ್ರಾಹೇ (1546-1601) ಎಂಬವನ ಹಸ್ತಪ್ರತಿಗಳ ಸಂಪಾದನ ಕಾರ್ಯವನ್ನು ಇವನಿಗೆ ವಹಿಸಿದ.[]

ನಂತರದ ಜೀವನ, ಸಾಧನೆಗಳು

ಬದಲಾಯಿಸಿ

1671ರಲ್ಲಿ ವಿಜ್ಞಾನ ಅಕಾಡೆಮಿಯ ಕಡೆಯಿಂದ ಫ್ರೆಂಚ್ ಖಗೋಳವಿಜ್ಞಾನಿ ಜೀನ್ ಪಿಕಾರ್ಡ್ (1620-82) ಎಂಬವ ಬಂದು ಬಾರ್ತೊಲಿನ್ನನನ್ನು ಹೆವನ್ ದ್ವೀಪದಲ್ಲಿದ್ದ ಟೈಕೂ ಬ್ರಾಹೇಯ ಯುರಾನಿಬರ್ಗ್ ಎಂಬ ಖಗೋಳ ವೇಧಶಾಲೆಯ ಸ್ಥಾನ ನಿರ್ದೇಶಕಗಳನ್ನು ನಿರ್ಧರಿಸಲು ನೆರವಾಗಬೇಕೆಂದು ಕೇಳಿಕೊಂಡ. ಬಾರ್ತೊಲಿನ್ ಹೆವೆನ್ ದ್ವೀಪಕ್ಕೆ ರೋಮರ್‌ನನ್ನು ತನ್ನ ಸಂಗಡ ಕರೆದುಕೊಂಡು ಹೋದ. ವೇಧಶಾಲೆಯ ರೇಖಾಂಶವನ್ನು ಗೊತ್ತುಪಡಿಸಲು ಅವರು ಗುರುಗ್ರಹದ ಅಯೋ ಎಂಬ ಮೊದಲ ಉಪಗ್ರಹದ ಗ್ರಹಣಗಳನ್ನು ಅವಲೋಕಿಸಿದರು. ಭೂಮಿ ಮತ್ತು ಗುರುಗ್ರಹ ಒಂದಕ್ಕೊಂದು ಹತ್ತಿರವಿದ್ದ, ಗುರುಗ್ರಹದಿಂದ ಭೂಮಿ ದೂರ ಸರಿಯುವಾಗ ಅಳೆದ ಉಪಗ್ರಹದ ಅವಧಿ, ಭೂಮಿ, ಗುರುಗ್ರಹದಿಂದ ದೂರವಿದ್ದು ಅದು ಗ್ರಹದ ಕಡೆಗೆ ಸರಿಯುವ ಮುಹೂರ್ತದಲ್ಲಿ ಅಳೆದ ಉಪಗ್ರಹದ ಅವಧಿಗಿಂತ ಹೆಚ್ಚು ಇರುವುದು ಕಂಡುಬಂತು. ಇದು ಬೆಳಕಿನ ಪರಿಮಿತವೇಗಕ್ಕೆ ಸಂಬಂಧಿಸಿದ ವಿಚಾರ ಇರಬಹುದೆಂದು ರೋಮರ್ ಶಂಕಿಸಿದ. ಇಂಥದೆ ಕೆಲಸವನ್ನು ಪ್ಯಾರಿಸ್ಸಿನಲ್ಲಿ ಮಾಡುತ್ತಿದ್ದ ಖಗೋಳವಿಜ್ಞಾನಿ ಜಿ.ಡಿ.ಕ್ಯಾಸಿನೀ (1625-1712) ಇವನ ಅಭಿಪ್ರಾಯಕ್ಕೆ ಮನ್ನಣೆ ನೀಡಲಿಲ್ಲ. ತತ್ಪೂರ್ವ ಗೆಲಿಲಿಯೋನನ್ನು (1564-1642) ಬಿಟ್ಟರೆ ಅರಿಸ್ಟಾಟಲ್ (ಕ್ರಿ.ಪೂ. 384-322), ಕೆಪ್ಲರ್ (1571-1630) ಮತ್ತು ಡೇಕಾರ್ಟರಂಥ (1596-1650) ವಿಜ್ಞಾನಿಗಳು ಬೆಳಕಿನ ವೇಗ ಅಪರಿಮಿತ, ಅದು ತತ್‌ಕ್ಷಣವೇ ಪ್ರಸಾರವಾಗುತ್ತದೆ ಎಂದು ನಂಬಿದ್ದರು. ಡೇಕಾರ್ಟ್‌ನ ಅಭಿಪ್ರಾಯಗಳಿಗೆ ಆಗಿನ ಕಾಲಕ್ಕೆ ಬಲು ಮನ್ನಣೆ ಇತ್ತು.

ಪಿಕಾರ್ಡ್ ತನ್ನ ಜೊತೆಯಲ್ಲಿ ರೋಮರನನ್ನೂ ಪ್ಯಾರಿಸಿಗೆ ಕರೆದುಕೊಂಡು ಬಂದ. ರೋಮರ್ ಪ್ಯಾರಿಸಿನಲ್ಲಿ 9 ವರ್ಷ ಉಳಿದಿದ್ದ. ಅಲ್ಲೆ ಇವನ ವಾಸಕ್ಕೆ ರಾಯಲ್ ವೇಧಶಾಲೆಯಲ್ಲೇ ವ್ಯವಸ್ಥೆ ಮಾಡಲಾಗಿತ್ತು. ಬೆಳಕಿನ ವೇಗ ಪರಿಮಿತವಾದದ್ದೊ ಅಪರಿಮಿತವಾದದ್ದೊ ಎಂಬುದರ ಬಗ್ಗೆ ಪ್ಯಾರಿಸ್ ಅಕಾಡೆಮಿಯಲ್ಲಿ ಜಿಜ್ಞಾಸೆ ನಡೆಯುತ್ತಿತ್ತು. ಇದು ರೋಮರ್‌ಗೂ ತಿಳಿದಿತ್ತು. ಹೆವನ್ ದ್ವೀಪದಲ್ಲಿ ನಡೆಸಿದ್ದ ಮಾಪನೆಗಳು ಇವನನ್ನು ಗೆಲಿಲಿಯೊ ಅಭಿಪ್ರಾಯದ ಕಡೆಗೆ ಒಯ್ದಿದ್ದುವು. ಕಾಲವನ್ನು ನಿಷ್ಕೃಷ್ಟವಾಗಿ ಅಳೆಯುವ ಅಗತ್ಯವೂ ಇತ್ತು. ಆ ಅಗತ್ಯದ ಸಂದರ್ಭವನ್ನು ರೋಮರ್ ಆಯ್ದುಕೊಂಡ. ಗುರುವಿನ ಮೊದಲ ಉಪಗ್ರಹದ ಅವಧಿಮಾಪನೆಯಲ್ಲಿ ಬೆಳಕು ಕ್ರಮಿಸಬಹುದಾದ ಗರಿಷ್ಠ ದೂರವೇ ಭೂಕಕ್ಷೆಯ ವ್ಯಾಸವಾಗಿರುತ್ತದೆ. ಆದ್ದರಿಂದ ರೋಮರ್ ಭೂಮಿ ಮತ್ತು ಗುರು ಒಂದಕ್ಕೊಂದು ತೀರ ಸಮೀಪವಿರುವಾಗ ಹಾಗೂ ಅವು ಒಂದಕ್ಕೊಂದು ತೀರ ದೂರವಿರುವಾಗ ಮೊದಲ ಉಪಗ್ರಹದ ಅವಧಿಗಳನ್ನು ಅಳೆದ. ಅವುಗಳ ನಡುವಿನ ವ್ಯತ್ಯಾಸ 22 ಮಿನಿಟುಗಳಷ್ಟಾಗಿತ್ತು. ಇದು ಸೂರ್ಯನ ಸುತ್ತ ಭೂಕಕ್ಷೆಯಲ್ಲಿ ಬೆಳಕು ಆ ಕಕ್ಷೆಯ ಒಂದು ಸ್ಥಾನದಿಂದ ವ್ಯಾಸೀಯ ವಿರುದ್ಧ ಸ್ಥಾನಕ್ಕೆ ಹೋಗಲು ತೆಗೆದುಕೊಳ್ಳುವ ಕಾಲ ಎಂದು ರೋಮರ್ ತಿಳಿಸಿದ. ಆತ ಭೂಕಕ್ಷೆಯ ವ್ಯಾಸವನ್ನು ಗಮನಿಸಿ ಬೆಳಕಿನ ವೇಗ ಸೆಕೆಂಡಿಗೆ 140,000 ಮೈಲಿಗಳು ಎಂದು  ಪ್ರಕಟಿಸಿದ (1676).[][] ಇದೇ ಬೆಳಕಿನ ವೇಗದ ಮೊತ್ತಮೊದಲನೆಯ ಅಳತೆ. ಸೂರ್ಯನನ್ನು ನಾವು ನೋಡುವುದು ಅದು ಉದಯಿಸಿದ 11 ಮಿನಿಟುಗಳ ತರುವಾಯ ಎಂದು ಈ ಅಳತೆ ತಿಳಿಸುತ್ತದೆ. ನಿಖರವಾದ ಆಧುನಿಕ ಅಳತೆಗಳ ಪ್ರಕಾರ ಈ ಕಾಲ 8 ಮಿನಿಟ್ 10 ಸೆಕೆಂಡ್.[]

1679ರಲ್ಲಿ ರೋಮರ್ ಇಂಗ್ಲೆಂಡಿಗೆ ಭೇಟಿಕೊಟ್ಟ. ಅಲ್ಲಿ ಈತ ನ್ಯೂಟನ್ (1642-1727), ಫ್ಲಾಮ್‌ಸ್ಟೀಡ್ (1646-1719), ಹ್ಯಾಲಿ (1656-1742) ಮೊದಲಾದ ಖಗೋಳವಿಜ್ಞಾನಿಗಳನ್ನು ಸಂದರ್ಶಿಸಿದ. 1681ರಲ್ಲಿ ಇವನು ಡೆನ್ಮಾರ್ಕಿಗೆ ಹಿಂತಿರುಗಿದ. ಬಳಿಕ ಕೋಪನ್‌ಹೇಗನ್ ವಿಶ್ವವಿದ್ಯಾಲಯದಲ್ಲಿ ಗಣಿತವಿಜ್ಞಾನದ ಪ್ರಾಧ್ಯಾಪಕನಾಗಿ ನೇಮಕಗೊಂಡ. ಡೆನ್ಮಾರ್ಕಿನ ದೊರೆ ಐದನೆಯ ಕ್ರಿಶ್ಚಿಯನ್ ಈತನನ್ನು ರಾಜಖಗೋಳ ವಿಜ್ಞಾನಿಯಾಗಿಯೂ ಕೋಪನ್‌ಹೇಗನ್ನಿನ ವೇಧಶಾಲೆಯ ನಿರ್ದೇಶಕನಾಗಿಯೂ ನೇಮಿಸಿದ. ಇದಲ್ಲದೆ ರೋಮರನಿಗೆ ಅಲ್ಲಿಯ ಸರ್ಕಾರದ ಅನೇಕ ಉನ್ನತ ಅಧಿಕಾರಗಳೂ ಪ್ರಾಪ್ತವಾದುವು. ಇಷ್ಟಾದರೂ ಈತ ಖಗೋಳವಿಜ್ಞಾನದ ಅಧ್ಯಯನವನ್ನು ಮಾತ್ರ ನಿರ್ಲಕ್ಷಿಸಲಿಲ್ಲ. ತನ್ನ ಮನೆಯನ್ನೇ ಅವನು ಒಂದು ವೇಧಶಾಲೆಯಾಗಿ ಪರಿವರ್ತಿಸಿಕೊಂಡಿದ್ದ.

ರೋಮರ್ ಒಂದು ಹೊಸ ಉಷ್ಣತಾಮಾಪಕವನ್ನು ಉಪಜ್ಞಿಸಿದ್ದ. ನಿರ್ದಿಷ್ಟ ಲೆಕ್ಕಾಚಾರಕ್ಕೆ ಉಷ್ಣತಾಶ್ರೇಣಿಯನ್ನು ಎರಡು ಸ್ಥಿರ ಬಿಂದುಗಳಿಂದ ನಿಗದಿ ಮಾಡಬೇಕೆಂದು ಯೋಚಿಸಿದ್ದ. ಇದಕ್ಕೆ ಈತ ಆಯ್ಕೆಮಾಡಿ ಕೊಂಡದ್ದು ಎಂದರೆ ನೀರಿನ ಕುದಿಬಿಂದು (ನೀರು ಕುದಿಯುವಾಗಿನ ಉಷ್ಣತೆ) ಮತ್ತು ಹಿಮದ ದ್ರವನಬಿಂದುಗಳು.[] ಇವನ್ನೇ ಮುಂದೆ ಸ್ಪೀಡನ್ನಿನ ಖಗೋಳವಿಜ್ಞಾನಿ ಆಂಡರ್ಸ್ ಸೆಲ್ಸಿಯಸ್ (1701-44) ತನ್ನ ಉಷ್ಣತಾಮಾಪಕಗಳಲ್ಲಿ ಬಳಸಿದ.

1705ರಲ್ಲಿ ರೋಮರ್‌ನಿಗೆ ಕೋಪನ್‌ಹೇಗನ್ನಿನ ಮೇಯರ್ ಸ್ಥಾನ ಲಭಿಸಿತು. ಬಳಿಕ ಈತ ಪೊಲೀಸ್ ಮುಖ್ಯಾಧಿಕಾರಿಯಾದ.[] ಲಭಿಸಿದ ಎಲ್ಲ ಸ್ಥಾನಗಳಲ್ಲೂ ಈತ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ.

ಉಲ್ಲೇಖಗಳು

ಬದಲಾಯಿಸಿ
  1. Friedrichsen; Tortzen (2001), pp. 19–20.
  2. "Ole Christensen Roemer". 2015-11-13. Retrieved 2023-09-04.
  3. Romer (1676). "Démonstration touchant le mouvement de la lumière trouvé par M. Roemer de l'Académie des sciences" [Demonstration concerning the movement of light found by Mr. Romer of the Academy of Sciences]. Le Journal des Sçavans (in ಫ್ರೆಂಚ್): 233–236.
  4. Cain, Fraser (15 April 2013). "How long does it take sunlight to reach the Earth?". phys.org (in ಇಂಗ್ಲಿಷ್). Archived from the original on 2 March 2022. Retrieved 2 March 2022.
  5. Tom Shachtman (12 December 2000). Absolute Zero and the Conquest of Cold. Houghton Mifflin Harcourt. pp. 48–. ISBN 0-547-52595-8. ... down to an almost mythical point, an absolute zero, the end of the end. Around 1702, while Amontons was doing his best work in Paris, in Copenhagen the astronomer Ole Romer, who had calculated the finite speed of light, broke his leg. Confined to his home for some time, he took the opportunity of forced idleness to produce a thermometer having two fixed points ...
  6. A. Sarlemijn; M.J. Sparnaay (22 October 2013). Physics in the Making: Essays on Developments in 20th Century Physics. Elsevier Science. pp. 48–. ISBN 978-1-4832-9385-1. The other, Ole Rømer, was Bartholin's amanuensis, later his son-in-law. ... man, became the Danish king's mathematician (mathematicus regius), professor of astronomy at the University of Copenhagen, and eventually chief of police of that city.

ಹೊರಗಿನ ಕೊಂಡಿಗಳು

ಬದಲಾಯಿಸಿ


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: