ಎನಾಮೆಲ್ ಎಂದರೆ ಒಂದು ವಸ್ತುವಿನ ಮೈಮೇಲೆ ನುಣುಪು ಮತ್ತು ದೃಢವಾದ ಒಪ್ಪಕೊಡುವ ಲೇಪನ. ಇದಕ್ಕೆ ಗಾಜುಲೇಪನವೆಂದೂ ಕರೆಯುವುದಿದೆ.

ಇರಾನ್‍ನ ಮೀನಾಕಾರಿ ಕಲೆ

ಎನಾಮೆಲ್‍ನ ವರ್ಗಗಳು

ಬದಲಾಯಿಸಿ

ಇದರಲ್ಲಿ ಎರಡು ಮುಖ್ಯ ವರ್ಗಗಳಿವೆ.

  1. ಲೋಹ ಮತ್ತು ಮಣ್ಣಿನಿಂದ ಮಾಡಿದ ಪದಾರ್ಥಗಳ ಮೈಮೇಲೆ ಕರಗಿಸಿ ಘನವಸ್ತುಗಳಿಂದಾದ ಗಾಜಿನಂತಿರುವ ಮತ್ತು ರಾಸಾಯನಿಕ ವರ್ತನೆಯನ್ನು ನಿರೋಧಿಸುವ ವಿಟ್ರಿಯಸ್ ಅಥವಾ ಪೋರ್ಸಿಲೇನ್ ಎನಾಮೆಲುಗಳು.
  2. ವರ್ಣದ್ರವ್ಯಗಳು, ವಾರ್ನಿಷುಗಳು ಮತ್ತು ಲ್ಯಾಕರುಗಳನ್ನು ಒಳಗೊಂಡು, ಲೇಪಿಸಿದಾಗ ಒಣಗಿ, ಅಪೇಕ್ಷಿತ ಹೊಳಪು ಕೊಡುವ ದ್ರವಮಿಶ್ರಣಗಳು.[]

ಪೋರ್ಸಿಲೇನ್ ಎನಾಮೆಲುಗಳು

ಬದಲಾಯಿಸಿ

ಪೋರ್ಸಿಲೇನ್ ಎನಾಮೆಲುಗಳನ್ನು ಬಹುತೇಕ ಕಬ್ಬಿಣ[] ಸಲಕರಣೆಗಳನ್ನು ಲೇಪಿಸಲು ಬಳಸುವರು. ಅಂಥ ಲೇಪನ ಪ್ರಬಲ ಕ್ಷಾರಗಳು ಮತ್ತು ಹೈಡ್ರೋಫ್ಲೋರಿಕ್ ಆಮ್ಲದ ಹೊರತು ಇತರ ಎಲ್ಲ ರಾಸಾಯನಿಕ ವಸ್ತುಗಳ ಸಂಪರ್ಕದಲ್ಲಿ ಸುರಕ್ಷಿತವಾಗಿರುತ್ತದೆ. ಆದ್ದರಿಂದ ರಾಸಾಯನಿಕ ಔಷಧ, ಆಹಾರ, ಪಾನೀಯ ಮತ್ತು ಕ್ಷೀರ ಕೈಗಾರಿಕೆಗಳಲ್ಲಿ ಉಪಯೋಗಿಸುವ ಉಪಕರಣಗಳನ್ನು ಸಾಮಾನ್ಯವಾಗಿ ಪೋರ್ಸಿಲೇನ್ ಎನಾಮೆಲ್ ಮಾಡುವರು. ಎನಾಮೆಲ್ ಮಾಡಿದ ಉಕ್ಕಿನಿಂದ[] ತಯಾರಿಸಿದ ವಸ್ತುಗಳಲ್ಲಿ ಒಲೆಗಳು, ಶೈತ್ಯಕಾರಕ ಯಂತ್ರಗಳು, ಮೇಜಿನ ಮೇಲ್ಭಾಗಗಳು, ವಣಿಕ ಮತ್ತು ವಾಸಗೃಹಗಳ ಅಲಂಕಾರಿಕ ಹೊರಭಾಗಗಳು ಮತ್ತು ಅಡುಗೆಮನೆಯ ಉಪಕರಣಗಳನ್ನು ಹೆಸರಿಸಬಹುದು. ಎನಾಮೆಲ್‍ಗೊಳಿಸಿದ ಬೀಡುಕಬ್ಬಿಣದಿಂದ ಸ್ನಾನದ ತೊಟ್ಟಿಗಳು ಮತ್ತು ಇತರ ನೈರ್ಮಲ್ಯ ಸಾಧನಗಳನ್ನು ತಯಾರಿಸುವರು.

ಎನಾಮೆಲ್ ಮಾಡುವ ಬಗೆ: ಎನಾಮೆಲ್ ಮಾಡುವ ಮುನ್ನ ಲೋಹಭಾಗಕ್ಕೆ ಅಂಟಿಕೊಂಡಿರುವ ಜಿಡ್ಡು ಮತ್ತು ಆಕ್ಸೈಡಿನ ಪದರಗಳನ್ನು ತೊಡೆದು ಹಾಕಿ ಸ್ವಚ್ಛಗೊಳಿಸಬೇಕು. ಅನಂತರ ಎನಾಮೆಲ್ಲಿನ ಫ್ರಿಟ್ (ಗಾಜಿನಂತಿರುವ ಮಿಶ್ರಣ) ತಯಾರಿಸಿಕೊಳ್ಳಬೇಕು. ಇದಕ್ಕೆ ಎರಡು ವಿಧವಾದ ವಸ್ತುಗಳು ಬೇಕು. ರಾಸಾಯನಿಕ ವರ್ತನೆಯನ್ನು ನಿರೋಧಿಸುವ ಗುಣವುಳ್ಳ ಆಮ್ಲೀಯ ಸ್ವಭಾವದ ಕ್ವಾರ್ಟ್ಸ್ ಮತ್ತು ಫೆಲ್‍ಸ್ಟಾರ್ ಖನಿಜಗಳು. ಎರಡನೆಯದಾಗಿ ಪ್ರತ್ಯಾಮ್ಲೀಯ ಸ್ವಭಾವದ ಬಿಳಿಗಾರ, ಫ್ಲೋರ್‌ಸ್ಟಾರ್, ಕ್ರಯೊಲೈಟ್, ಸೋಡಾಬೂದಿ, ಸೋಡಿಯಂ ನೈಟ್ರೇಟ್ ಮತ್ತು ಲಿಥಾರ್ಜ್ (ಸೀಸದ ಮಾನಾಕ್ಸೈಡ್) ಮುಂತಾದ ಸ್ರಾವಕಗಳು (ಫ್ಲಕ್ಸಸ್). ಇವೆರಡನ್ನೂ ಒಟ್ಟಿಗೆ ಕರಗಿಸಿದರೆ ಫ್ರಿಟ್ ದೊರೆಯುವುದು.

ತೇವವಿಧಾನ: ತೇವವಿಧಾನದಲ್ಲಿ ದ್ರವಿತ ಫ್ರಿಟ್ಟನ್ನು ನೀರಿಗೆ ಸುರಿಯುವರು. ಆಗ ಅದು ಹುಡಿಯಾಗುವುದು. ಇದರೊಂದಿಗೆ ನೀರು, ಜೇಡಿಮಣ್ಣು ಮತ್ತು ಅಪಾರದರ್ಶಕಕಾರಿಗಳಾದ (ಒಪೇಸಿಫೈಯರ್ಸ್) ತವರ, ಜಿರ್ಕೊನಿಯಂ ಅಥವಾ ಆಕ್ಸೈಡುಗಳನ್ನು ಸೇರಿಸಿ ಗಿರಣಿಯಲ್ಲಿ ಅರೆಯುವರು. ನೀರನ್ನುಳಿದು ಈ ಇತರ ವಸ್ತುಗಳ ಅಂಶ ಫ್ರಿಟ್ಟಿನ ತೂಕದ 15%ಕ್ಕಿಂತ ಹೆಚ್ಚು ಇರಲಾರದು. ಈ ಮಿಶ್ರಣಕ್ಕೆ ಸ್ಲಿಪ್ ಎಂದು ಹೆಸರು. ಇದು ಲೋಹದ ಮೈಮೇಲೆ ಸರಿಯಾಗಿ ರೂಪಗೊಳ್ಳಲು ಸೋಡಾಬೂದಿ ಮತ್ತು ಬಿಳಿಗಾರಗಳು ನೆರವಾಗುವುವು. ಎನಾಮೆಲ್ ಮಾಡಬೇಕಾದ ಭಾಗವನ್ನು ಸ್ಲಿಪ್ಪಿನಲ್ಲಿ ಅದ್ದಬಹುದು; ಇಲ್ಲವೇ ಸ್ಲಿಪ್ಪನ್ನೇ ಲೋಹದ ಮೇಲೆ ಸಿಂಪಡಿಸಬಹುದು. ಒಣಗಿದ ಅನಂತರ ಲೇಪಿತ ಪದಾರ್ಥವನ್ನು ಎನಾಮೆಲ್ ಕುಲುಮೆಯಲ್ಲಿ ಸುಡಲಾಗುವುದು. ಈ ರೀತಿ 1-3 ಲೇಪನಗಳನ್ನು ಕೊಡುವುದು ವಾಡಿಕೆ. ಮೊದಲನೆಯ ಆಧಾರ ಪದರ ಕೋಬಾಲ್ಟ್ ಆಕ್ಸೈಡ್ ಆಗಿದ್ದರೆ ಲೇಪನ ಲೋಹಕ್ಕೆ ಬಲವಾಗಿ ಅಂಟಿಕೊಳ್ಳುವುದು.

ಶುಷ್ಕವಿಧಾನ: ಶುಷ್ಕವಿಧಾನದಲ್ಲಿ ಫ್ರಿಟ್ಟನ್ನು ಅಪಾರದರ್ಶಕಕಾರಿಗಳು ಅಥವಾ ಬಣ್ಣಗಳೊಂದಿಗೆ ಗಿರಣಿಯಲ್ಲಿ ಅರೆಯಲಾಗುವುದು. ಆಗ ನಯವಾದ ಪುಡಿ ದೊರೆಯುತ್ತದೆ. ಮುಂಚೆಯೇ ತೇವ ವಿಧಾನದಿಂದ ಆಧಾರ ಲೇಪನ ಮಾಡಿದ ಪದಾರ್ಥದ ಮೇಲೆ ಈ ಪುಡಿಯನ್ನು ಉದುರಿಸುವರು. ಅನಂತರ ಎನಾಮೆಲ್ ಕುಲುಮೆಯಲ್ಲಿ ಸುಟ್ಟರೆ ಲೇಪನ ಪರಿಪೂರ್ಣವಾಗುವುದು.

ಆಮ್ಲನಿರೋಧಕ ಕಬ್ಬಿಣದ ಎನಾಮೆಲ್ಲುಗಳಲ್ಲಿ ಸಿಲಿಕ ಮತ್ತು ಫೆಲ್‍ಸ್ಟಾರ್ ಅಂಶ ಹೆಚ್ಚಾಗಿದ್ದು ಸ್ರಾವಕಗಳ ಅಂಶ ಕಡಿಮೆಯಾಗಿರುತ್ತದೆ. ಇವುಗಳಲ್ಲಿ ಟೈಟೇನಿಯಂ ಡೈಆಕ್ಸೈಡಿರುವುದು ಸಾಮಾನ್ಯ. ಎನಾಮೆಲ್ ಹೊಂದಿದ ವಸ್ತುವಿನ ಸ್ವಭಾವ ಮತ್ತು ಅದರ ಉದ್ದೇಶಿತ ಉಪಯೋಗವನ್ನು ಗಮನಿಸಿ ಅದನ್ನು ಸುಡುವ ಕಾಲಾವಧಿ ಮತ್ತು ಉಷ್ಣತೆಯನ್ನು ನಿರ್ಧರಿಸಬೇಕಾಗುತ್ತದೆ. ಉದಾಹರಣೆಗೆ ತೇವವಿಧಾನದಿಂದ ಎನಾಮೆಲ್ ಮಾಡಿದ ಬೀಡು ಕಬ್ಬಿಣವನ್ನು 6250-7600 ಸೆಂ. ಗ್ರೇ. ಉಷ್ಣಾತಾಮಿತಿಯಲ್ಲಿ 10-15 ಮಿನಿಟುಗಳ ಕಾಲ ಸುಡುವುದು ರೂಢಿ. ಕೆಲವು ಎನಾಮೆಲುಗಳನ್ನು 7000-8700 ಸೆಂಟಿಗ್ರೇಡಿನಲ್ಲಿ 1-5 ಮಿನಿಟುಗಳವರೆಗೆ ಸುಟ್ಟರೆ ಸಾಕು. ಎನಾಮೆಲ್ ಪದರಕ್ಕೆ ಘಾಸಿಯಾಗದಂತೆ ಪದಾರ್ಥವನ್ನು ವಿರೂಪಗೊಳಿಸುವುದು ಸಾಧ್ಯವಿಲ್ಲ.

ದ್ರವಮಿಶ್ರಣಗಳು

ಬದಲಾಯಿಸಿ

ವಾರ್ನಿಷ್ ಬಳಿದ ವಸ್ತು ಬಿಸಿಲಿನ ಝಳಕ್ಕೆ ಸಿಗುವಂತಿದ್ದರೆ ಆಗ ಬಣ್ಣಗಳನ್ನು ಕೂಡಿಸಿ ಬ್ರಷಿಂಗ್ ಎನಾಮೆಲ್ ಮಾಡುವರು. ಲೋಹಕ್ಕೆ ಇದರ ಲೇಪನವಾಗಿದ್ದು ಸೂಕ್ತ ಪ್ರಮಾಣದ ಮಿಶ್ರಣವಾಗಿದ್ದರೆ ಅದನ್ನು ಉನ್ನತ ಉಷ್ಣಕ್ಕೆ ಒಡ್ಡಬಹುದು. ಆಗ ಅದು ಬೇಯಿಸಿದ ಎನಾಮೆಲ್ ಎನಿಸಿಕೊಳ್ಳುತ್ತದೆ. ಇವು ಸಾವಯವ ವಸ್ತುಗಳಿಂದ ಕೂಡಿದ್ದು ನಿರವಯವ ವಸ್ತುಗಳಿರುವ ಪೋರ್ಸಿಲೇನು ಎನಾಮೆಲ್ಲುಗಳಿಗಿಂತ ಭಿನ್ನವಾದುವು.

ಲ್ಯಾಕರ್ ಎನಾಮೆಲ್: ಲ್ಯಾಕರ್ ಎನಾಮೆಲುಗಳಲ್ಲಿ ಲ್ಯಾಕರ್ ಮತ್ತು ಬಣ್ಣ ಮಾತ್ರ ಇರುತ್ತವೆ. ಲೀನಕಾರಿ (ಸಾಲ್ವೆಂಟ್) ಆವಿಯಾದ ಕೂಡಲೇ ಮೇಲ್ಮೈ ಪೊರೆಯ ರಚನೆ ಪೂರ್ಣಗೊಂಡರೆ ಅದನ್ನು ಲ್ಯಾಕರ್ ಎನ್ನುತ್ತೇವೆ. ಆದರೆ ಸುಭದ್ರ ಪೊರೆಯ ರಚನೆಯಾಗಲು ರಾಸಾಯನಿಕ ಕ್ರಿಯೆಯೂ ನಡೆಯುವ ಅಗತ್ಯವಿದ್ದರೆ ಅದು ಲ್ಯಾಕರ್ ಎನಾಮೆಲ್ ಎನಿಸಿಕೊಳ್ಳುತ್ತದೆ. ಇದೇ ಅವೆರಡರ ನಡುವೆ ಇರುವ ಮೂಲ ವ್ಯತ್ಯಾಸ. ಸುಲಭ ವೆಚ್ಚದಲ್ಲಿ ವಸ್ತುವಿನ ಆದಷ್ಟು ಭಾಗದ ಮೇಲೆ ಶಾಶ್ವತವಾದ ಮತ್ತು ಬಲವಾದ ಪೊರೆಯನ್ನು ಮೂಡಿಸುವುದು ಲ್ಯಾಕರ್ ಎನಾಮೆಲಿನ ಉದ್ದೇಶ. ಆಟಿಕೆಗಳು (ಟಾಯ್ಸ್) ಮತ್ತು ಇತರ ಅಲ್ಪ ಬಾಳಿಕೆ ವಸ್ತುಗಳಿಗೆ ಉಪಯೋಗಿಸುವ ಎನಾಮೆಲುಗಳುಂಟು. ಇವುಗಳಲ್ಲಿ ಜಿಗುಟುಗುಣವುಳ್ಳ ಸೆಲ್ಯುಲೋಸ್ ಎಸ್ಟರುಗಳ ಅಂಶ ಕಡಿಮೆಯಿದ್ದು ಅಗ್ಗದ ಲೀನಕಾರಿಗಳು ಮತ್ತು ಒರಟು ಬಣ್ಣಗಳಿರುತ್ತವೆ. ಬಣ್ಣವನ್ನು ಮೊದಲು ಹರಳೆಣ್ಣೆಯಲ್ಲಿಯೂ ಅನಂತರ ಲ್ಯಾಕರನೊಂದಿಗೂ ಅರೆಯುವುದು ಪದ್ಧತಿ. ಬಾಲ್ ಗಿರಣಿ ಇದಕ್ಕೆ ಅನುಕೂಲ. ಇತ್ತೀಚೆಗೆ ತೀವ್ರ ವೇಗದ ಕಲಾಯ್ಡ್ ಗಿರಣಿಗಳು ಬಳಕೆಗೆ ಬಂದಿವೆ.

ವಸ್ತುವಿಗೆ ಲ್ಯಾಕರ್ ಎನಾಮೆಲ್ ಭದ್ರವಾಗಿ ಅಂಟಿಕೊಳ್ಳುವಂತೆ ಮಾಡುವುದೂ ಒಂದು ಸಮಸ್ಯೆ. ಬಣ್ಣ ಬೆರೆತಿರುವುದರಿಂದ ಮೂಲ ಲ್ಯಾಕರಿಗಿಂತ ಅದರ ಎನಾಮೆಲ್ಲಿನ ಅಂಟುಗುಣ ಕಡಿಮೆಯಾಗಿರುತ್ತದೆ. ತತ್ಫಲವಾಗಿ ಲೇಪನದ ಪೊರೆಯ ಭಿದುರತೆ ಹೆಚ್ಚುತ್ತದೆ. ಅಂಟುಗುಣ ಪದಾರ್ಥದ ಮೇಲ್ಮೈ ಲಕ್ಷಣಗಳನ್ನೂ ಅವಲಂಬಿಸಿರುವುದು. ಆದ್ದರಿಂದ ತೃಪ್ತಿಕರವಾದ ಲೇಪನವುಂಟಾಗಲು ಒಂದೊಂದು ವಸ್ತುವಿಗೆ ಅದಕ್ಕಾಗಿಯೇ ವಿಶಿಷ್ಟ ರೀತಿಯಲ್ಲಿ ತಯಾರಿಸಿದ ಎನಾಮೆಲ್ ಹೊಂದಿಕೊಳ್ಳಬೇಕಾಗುತ್ತದೆ. ಇದು ಮತ್ತೊಂದು ಸಮಸ್ಯೆ. ಮರ, ಹಿತ್ತಾಳೆ ಮತ್ತು ಕೆಲವು ದರ್ಜೆಯ ಉಕ್ಕುಗಳನ್ನು ಎನಾಮೆಲ್ ಮಾಡುವುದು ಸುಲಭ. ಆದರೆ ಅಲ್ಯೂಮಿನಿಯಂ ಮತ್ತು ತವರಗಳಿಗೆ ಮೂಲ ಲೇಪನದ ಜೊತೆಗೆ ಅನೇಕ ಒಪ್ಪಲೇಪನಗಳು (ಫಿನಿಷಿಂಗ್ ಕೋಟ್ಸ್) ಅಗತ್ಯ. ಬಣ್ಣದ ಲ್ಯಾಕರ್ ಎನಾಮೆಲ್ ಬಳಿದ ಮೇಲೆ ಬರೀ ಲ್ಯಾಕರಿನ ಅಂತಿಮ ಲೇಪನ ಮಾಡಿದರೆ ಗಾಜಿನಂತಿರುವ ಒಪ್ಪಕೊಡುತ್ತದೆ. ಕಪ್ಪು ಮತ್ತು ಕೆಂಪು ಬಣ್ಣಗಳಿಗೆ ಇದರ ಅಗತ್ಯವಿಲ್ಲ.

ಒಂದೇ ಲೇಪನ ಸಾಕಾಗುವುದರಿಂದ ಕಪ್ಪು ಮತ್ತು ಕೆಂಪು ಬಣ್ಣದ ಲ್ಯಾಕರ್ ಎನಾಮೆಲುಗಳಿಗೆ ಬೇಡಿಕೆ ಹೆಚ್ಚು. ದಾರ್ಢ್ಯ ಮತ್ತು ಮೃದುತ್ವ ಅದರ ಪ್ರಧಾನ ಗುಣಗಳು. ಲೇಪನ ಪಡೆದ ವಸ್ತುವನ್ನು ಬಗ್ಗಿಸುವ ಸಂದರ್ಭವಿದ್ದರೆ ಪ್ಲಾಸ್ಟಿಸೈಸರುಗಳನ್ನು (ಬಾಷ್ಪಗುಣ ಕಡಿಮೆಯಿರುವ ಲೀನಕಾರಿಗಳು) ಸೇರಿಸದೆ ವಿಧಿಯಿಲ್ಲ. ಅದರಲ್ಲೂ ಬಣ್ಣಬಂಧಿತ ಎನಾಮೆಲ್ ಪೊರೆ ಭಿದುರವಾಗಿರುವುದರಿಂದ ಅದರ ಅಗತ್ಯ ಇನ್ನೂ ಬಹಳ. ಪ್ಲಾಸ್ಟಿಸೈಸರುಗಳ ಅಂಶ ಹೆಚ್ಚಿದಷ್ಟೂ ಒಣಗುವ ಅವಧಿ ಹೆಚ್ಚಿ ಮೃದುವಾದ ಪೊರೆಯುಂಟಾಗುತ್ತದೆ.

ಉಷ್ಣ ನಿರೋಧನ ಮತ್ತು ದಾರ್ಢ್ಯಗಳಲ್ಲಿ ಪಿಂಗಾಣಿ ಎನಾಮೆಲುಗಳನ್ನು ಸರಿಗಟ್ಟಬಲ್ಲ ಸಾವಯವ ಎನಾಮೆಲುಗಳನ್ನು ಶೋಧಿಸುವ ಯತ್ನ ಸಾಗಿವೆ. ಹೀಗೆಯೇ ಪಿಂಗಾಣಿ ಎನಾಮೆಲ್ಲುಗಳನ್ನು ಕಡಿಮೆ ಉಷ್ಣದಲ್ಲಿ ಬೇಯಿಸಿ ಕೋಮಲವಾದ ಪದರ ಬಿಡಿಸುವ ಪ್ರಯತ್ನವೂ ನಡೆದಿದೆ. ಗೃಹೋಪಕರಣಗಳ ತಯಾರಿಕೆಯಲ್ಲಿ ಈ ಎರಡು ಬಗೆಯ ಎನಾಮೆಲುಗಳ ಬಳಕೆ ವ್ಯಾಪಕವಾಗಿದೆ. ವಿದ್ಯುತ್ ಒಲೆ ಅಥವಾ ಬಟ್ಟೆ ತೊಳೆಯುವ ಯಂತ್ರದ ಮೇಲೆ ಗೋಚರಿಸದಷ್ಟು ಅವುಗಳಲ್ಲಿ ಹೋಲಿಕೆ ಇರುತ್ತದೆ. ಸೂಕ್ಷ್ಮವಾಗಿ ಪರೀಕ್ಷಿಸಿದ ಹೊರತು ಅವೆರಡರ ನಡುವಣ ವ್ಯತ್ಯಾಸವನ್ನು ಸಾಮಾನ್ಯ ವೀಕ್ಷಕ ಕಂಡುಹಿಡಿಯಲಾರ.

ಉಲ್ಲೇಖನಗಳು:

ಬದಲಾಯಿಸಿ
  1. http://www.vea.org.uk/what-is-enamel/
  2. Pew, Steve, "The Who, What, Why, Where, and When of Cast Iron Enameling," Advances in Porcelain Enamel Technology, 177-186, (2010).
  3. Sullivan, J.D. and Nelson, F.W., "Stainless Steel Requires Special Enameling Procedures", Proceedings of the Porcelain Enamel Institute Technical Forum," 150-155 (1970).

ಹೊರಗಿನ ಕೊಂಡಿಗಳು

ಬದಲಾಯಿಸಿ
"https://kn.wikipedia.org/w/index.php?title=ಎನಾಮೆಲ್&oldid=1153183" ಇಂದ ಪಡೆಯಲ್ಪಟ್ಟಿದೆ