ಉದ್ಧವ
ಉದ್ಧವ ಹಿಂದೂ ಧರ್ಮದ ಪುರಾಣ ಪಠ್ಯಗಳಲ್ಲಿನ ಒಂದು ಪಾತ್ರ. ಇವನು ಕೃಷ್ಣನ ಸ್ನೇಹಿತ ಮತ್ತು ಸಲಹೆಗಾರ. ಭಾಗವತ ಪುರಾಣದಲ್ಲಿ ಇವನು ಗಮನಾರ್ಹ ಪಾತ್ರ ವಹಿಸುತ್ತಾನೆ. ಕೃಷ್ಣನೇ ಸ್ವತಃ ಉದ್ಧವನಿಗೆ ನೇರವಾಗಿ ಯೋಗ ಮತ್ತು ಭಕ್ತಿಯ ಪ್ರಕ್ರಿಯೆಗಳನ್ನು ಕಲಿಸಿಕೊಡುತ್ತಾನೆ. ಈ ಚರ್ಚೆಗಳ ತತ್ವವನ್ನು ಹಲವುವೇಳೆ ಉದ್ಧವ ಗೀತೆ ಎಂದು ಸೂಚಿಸಲಾಗುತ್ತದೆ. ಇದು ಕೃಷ್ಣನು ಅರ್ಜುನನಿಗೆ ಬೋಧಿಸುವ ಭಗವದ್ಗೀತೆಯನ್ನು ಹೋಲುತ್ತದೆ. ಕೆಲವು ಪಠ್ಯಗಳ ಪ್ರಕಾರ ಉದ್ಧವನು ಕೃಷ್ಣನ ಸೋದರಸಂಬಂಧಿಯೂ ಆಗಿದ್ದ, ಏಕೆಂದರೆ ಇವನು ದೇವಭಗನ ಮಗ, ದೇವಭಗನು ಕೃಷ್ಣನ ತಂದೆ ವಸುದೇವನ ಸೋದರ. ಉದ್ಧವನ ದೈಹಿಕ ನೋಟ ಕೃಷ್ಣನನ್ನು ಎಷ್ಟು ಹೋಲುತ್ತಿತ್ತೆಂದರೆ ಕೆಲವು ಸಂದರ್ಭಗಳಲ್ಲಿ ಅವನನ್ನು ತಾತ್ಕಾಲಿಕವಾಗಿ ಕೃಷ್ಣನೆಂದು ತಪ್ಪುತಿಳಿಯಲಾಗುತ್ತದೆ.
ಭಾಗವತ ಪುರಾಣದಲ್ಲಿ, ಕೃಷ್ಣನು ಕಂಸನನ್ನು ಕೊಂದ ನಂತರ, ಉದ್ಧವನು ಅವನನ್ನು ನೋಡಲು ಬಂದ. ಇದು ಕೃಷ್ಣನಿಗೆ ಸಂತೋಷ ತಂದಿತು. ಆಮೇಲೆ ಕೃಷ್ಣನು ತನ್ನ ಪರವಾಗಿ ಉದ್ಧವನನ್ನು ವೃಂದಾವನಕ್ಕೆ ಗೋಪಿಗಳು ಮತ್ತು ಗ್ರಾಮದ ಇತರ ನಿವಾಸಿಗಳಿಗೆ ತನ್ನ ಸಂದೇಶದೊಂದಿಗೆ ಭೇಟಿಕೊಡುವಂತೆ ವಿನಂತಿಸಿದನು. ವೃಂದಾವನದವರು ಕೃಷ್ಣನ ಒಡನಾಟವನ್ನು ಕಳೆದುಕೊಂಡಿದ್ದರು. ವೃಂದಾವನದ ಜನರಿಗೆ ತನ್ನನ್ನು ಮರೆತುಬಿಡಲು ಹೇಳುವಂತೆ ಉದ್ಧವನನ್ನು ಕೃಷ್ಣನು ಕೇಳಿಕೊಂಡನು, ಏಕೆಂದರೆ ಅವರು ತನ್ನನ್ನು ಮರೆತಾಗ ಮಾತ್ರ ತಾನು ಭೂಮಿಯ ಮೇಲಿನ ತನ್ನ ಕರ್ತವ್ಯಗಳನ್ನು ಪೂರ್ಣಗೊಳಿಸಬಹುದಾಗಿತ್ತು. ಕೃಷ್ಣನ ಪ್ರತಿ ಗೋಪಿಕೆಯರ ಭಕ್ತಿಯಿಂದ ಉದ್ಧವನು ಎಷ್ಟು ಎದೆತುಂಬಿದನೆಂದರೆ ಮುಂದಿನ ೬ ತಿಂಗಳು ಅವನು ವೃಂದಾವನದಲ್ಲೆ ಇದ್ದು ಗೋಪಿಯರನ್ನು ತನ್ನ ಗುರುಗಳಾಗುವಂತೆ ಕೇಳಿಕೊಂಡನು. ಗೋಪಿಯರು ಹೇಳಿದರು "ಅಕ್ರೂರ ವೃಂದಾವನಕ್ಕೆ ಬಂದಾಗ ನಮ್ಮ ಕೃಷ್ಣನನ್ನು ತನ್ನ ಜೊತೆ ಕರೆದುಕೊಂದು ಹೋದನು, ಮತ್ತು ಈಗ ನೀನು ನಮ್ಮಿಂದ ಕೃಷ್ಣನ ನೆನಪುಗಳನ್ನೂ ತೆಗೆದುಕೊಂಡು ಹೋಗಲು ಇಲ್ಲಿ ಬಂದಿದ್ದೀಯಾ? ಉದ್ಧವನು ಇದನ್ನು ಕೇಳಿ ಮೂಕನಾದ. ವೃಂದಾವನದ ನಿವಾಸಿಗಳು ಕೇಳಿದ ಸಂದೇಶದ ಒಳವಸ್ತು ಮತ್ತು ಅದರಿಂದ ಪ್ರಚೋದಿತವಾದ ಅನಿಸಿಕೆಗಳು ಗೌಡೀಯ ವೈಷ್ಣವ ಪಂಥದ ಸಂಪ್ರದಾಯದಲ್ಲಿ ದೇವರ ಪ್ರೀತಿಯ ಅತ್ಯುನ್ನತ ತಿಳಿವಳಿಕೆಯನ್ನು ರೂಪಿಸುತ್ತದೆ.
ಕೃಷ್ಣನು ತನ್ನ ಮುಂಬರುವ ನಿರ್ಗಮನದ ನಂತರ ಸಮಾಧಾನಿಸುವ ಸಲುವಾಗಿ ಉದ್ಧವನಿಗೆ ತಾನು ಪ್ರಪಂಚ ಬಿಡುವ ಸ್ವಲ್ಪ ಮೊದಲು ಉದ್ದವ ಗೀತೆಯನ್ನು ಹೇಳಿದನು. ಅದು ಉದ್ಧವನು ಯಾದವ ಸಮುದಾಯದ ಸನ್ನಿಹಿತವಾದ ನಾಶವನ್ನು ನೋಡಿದ ನಂತರ ಅವನ ಕಂಗೆಟ್ಟ ಸ್ಥಿತಿಯಿಂದ ಶುರುವಾಗುತ್ತದೆ.
ಉದ್ಧವನು ಕೃಷ್ಣನ ಭಕ್ತ ಹಾಗೂ ಆತ್ಮೀಯ ಸ್ನೇಹಿತನಾಗಿ ಪ್ರಸಿದ್ಧನಾಗಿದ್ದ, ಆದರೆ ಅವನು ಕೂಡ ನಾಶ ನಡೆಯದಂತೆ ಏಕೆ ತಡೆಯಲಿಲ್ಲ ಎಂಬುದನ್ನು ತಿಳಿಯಲು ಆಗಲಿಲ್ಲ. ಸೃಷ್ಟಿಕರ್ತ ಬ್ರಹ್ಮ ಮತ್ತು ಸ್ವರ್ಗನಿವಾಸಿಗಳು ತನ್ನ ಅವತಾರದ ಉದ್ದೇಶ ಈಡೇರಿದ ನಂತರ ದೈವಿಕ ನಿವಾಸಸ್ಥಾನಕ್ಕೆ ಹಿಂದಿರುಗುವಂತೆ ಕೃಷ್ಣನನ್ನು ಬೇಡಿದರು.