ಅಕ್ರೂರ
ಸೋಮನಾಥ ಕವಿ (ಕ್ರಿ.ಶ.೧೬೦೦) - ಕನ್ನಡ ಭಾಷೆಯಲ್ಲಿ ಅಕ್ರೂರ ಚರಿತ್ರೆ ಕೃತಿಯನ್ನು ಈತ ಭಾಮಿನಿ ಷಟ್ಪದಿಯಲ್ಲಿ ಬರೆದಿದ್ದಾನೆ. ಅಕ್ರೂರನ ತಂದೆಯ ಕಡೆಯಿಂದ ಕೃಷ್ಣನ ಮಿತ್ರನಾದ ಯಾದವ. ಯದುವಂಶದ ಶ್ವಫಲ್ಕನ ಮಗ. ತಾಯಿ ಗಾಂದಿನಿ, ಕಂಸನ ಅಷ್ಟಮಂತ್ರಿಗಳಲ್ಲಿ ಒಬ್ಬ. ಆಹುಕನ ಮಗಳಾದ ಭುತನುವನ್ನು ಮದುವೆಯಾಗಿದ್ದ. ಕಂಸನ ಅಪ್ಪಣೆಯಂತೆ ಬಲರಾಮ ಕೃಷ್ಣರನ್ನು ಮಧುರೆಗೆ ಕರೆತರುವಾಗ ಯಮುನೆಯಲ್ಲಿ ಸ್ನಾನ ಮಾಡುತ್ತಿದ್ದ ಇವನಿಗೆ ಕೃಷ್ಣ ತನ್ನ ದಿವ್ಯರೂಪವನ್ನು ತೋರಿದ. ದ್ರೌಪದೀ ಸ್ವಯಂವರ ಕಾಲದಲ್ಲಿ ಇವನೂ ಹೋಗಿದ್ದ. ಪಾಂಡವರು ಅಜ್ಞಾತವಾಸ ಮುಗಿಸಿ ಉಪಪ್ಲಾವ್ಯ ನಗರದಲ್ಲಿ ವಾಸವಾಗಿದ್ದಾಗ ಅವರಲ್ಲಿಗೆ ಹೋಗಿದ್ದ. ಈತನಿಗೆ ಬಭ್ರು ಎಂದು ಇನ್ನೊಂದು ಹೆಸರು. ಪರಮ ಭಾಗವತರಲ್ಲೊಬ್ಬನಾದ ಈತನನ್ನು ಕುರಿತ ಸೋಮನಾಥಕೃತ ಅಕ್ರೂರ ಚರಿತೆ ಎಂಬ ಕನ್ನಡ ಷಟ್ಪದಿ ಕಾವ್ಯವಿದೆ.