ಅಸ್ಸಾಮಿನ ಪ್ರಾಕ್ತನ ಚರಿತ್ರೆ
ಅಸ್ಸಾಮಿನಲ್ಲಿ ಇದುವರೆಗೆ ತಿಳಿದಿರುವ ಅತ್ಯಂತ ಪ್ರಾಚೀನ ಅವಶೇಷಗಳೆಂದರೆ ಗ್ಯಾರೋ, ಕಾಚಾರ್ ಮತ್ತು ಖಾಸಿ ಪರ್ವತ ಪ್ರದೇಶಗಳು. ಬ್ರಹ್ಮಪುತ್ರ ಕಣಿವೆ ಮತ್ತು ಸಾದಿಯ ಗಡಿ ವಿಭಾಗಗಳಲ್ಲಿ ದೊರಕಿರುವ ನೂತನ ಶಿಲಾಯುಗದ ಆಯುಧಗಳು. ಈ ಶಿಲಾಯುಗದ ಬಗ್ಗೆ ವಿಶೇಷ ಅಧ್ಯಯನವನ್ನು ನಡೆಸಿರುವ ಪ್ರೊ. ಅಬ್ದುಲ್ ಹಸನ್‍ದಾನಿ ಇಲ್ಲಿನ ನೂತನ ಶಿಲಾಯುಗದ ಸಂಸ್ಕೃತಿಗಳು ಚೀನ ಮತ್ತು ಆಗ್ನೇಯ ಏಷ್ಯದ ಸಂಸ್ಕೃತಿಗಳ ಬುಡಕಟ್ಟಿಗೆ ಸೇರಿದವುಗಳೆಂದು ಭಾರತದ ಇತರ ಭಾಗಗಳಲ್ಲಿ ಪ್ರಚಲಿತವಾಗಿದ್ದ ನೂತನ ಶಿಲಾಯುಗದ ಸಂಸ್ಕೃತಿಗಳಿಗೂ ಅಸ್ಸಾಮಿನವಕ್ಕೂ ನಿಶ್ಚಿತ ಸಂಬಂಧವೇನೂ ಇಲ್ಲವೆಂದೂ ಸಾಧಿಸಿದ್ದಾನೆ. ಅಲ್ಲದೆ ಈ ಶಿಲಾಯುಧಗಳಲ್ಲಿ ಕೆಲವು ಲೋಹದ ಆಯುಧಗಳ ಮಾದರಿಯಲ್ಲಿ ತಯಾರಿಸಲ್ಪಟ್ಟವೆಯೆಂದೂ ಇನ್ನು ಕೆಲವು ಲೋಹದ ತಂತಿ ಅಥವಾ ಉಳಿಯನ್ನು ಉಪಯೊಗಿಸಿಯೇ ಮಾಡಲ್ಪಟ್ಟಿರಬೇಕೆಂದು ನಿಷ್ಕರ್ಷಿಸಿ, ಅದೇ ಕಾರಣಗಳಿಂದ ಅಸ್ಸಾಮಿನ ನೂತನ ಶಿಲಾಯುಗದ ಸಂಸ್ಕೃತಿಗಳು ಕ್ರಿ.ಪೂ. ೧೩೦೦ ಅಥವಾ ೧೨೦೦ ಕ್ಕಿಂತ ಈಚಿನವೆಂದು ಅಭಿಪ್ರಾಯಪಟ್ಟಿದ್ದಾನೆ. ಅಸ್ಸಾಮಿನ ನೂತನ ಶಿಲಾಯುಗದ ಸಂಸ್ಕೃತಿಗಳಲ್ಲಿ ಉಪಯೋಗದಲ್ಲಿದ್ದ ಮುಖ್ಯವಾದ ಕೆಲವು ರೀತಿಯ ಆಯುಧಗಳನ್ನು ಮಾಡುವಾಗ ದೊಡ್ಡ ಕಲ್ಲಿನಿಂದ ಚೆಕ್ಕೆಗಳನ್ನು ತೆಗೆದು, ಅವುಗಳ ಸಾಮಾನ್ಯ ರೂಪವನ್ನು ಸಾಧಿಸಿದ ಅನಂತರ ಅಲ್ಲಲ್ಲಿ ಕಲ್ಲಿನಿಂದ ಕುಟುಕಿ ಓರೆಕೊರೆಗಳನ್ನು ಸರಿಪಡಿಸಿಕೊಂಡು, ಕೊನೆಯದಾಗಿ ಉಜ್ಜಿ ನಯ ಮಾಡುವುದು ಬಳಕೆಯಲ್ಲಿದ್ದ ಸಾಮಾನ್ಯ ವಿಧಾನವಾಗಿತ್ತು. ಈ ಶಿಲಾಯುಧಗಳೆಲ್ಲವೂ ಒಂದೇ ಸಾಂಸ್ಕೃತಿಕ ಪರಂಪರೆಗೆ ಸೇರಿದುವಾದರೂ ವಿವಿಧ ಪ್ರದೇಶಗಳಲ್ಲಿ ದೊರಕುವ ಆಯುಧಗಳ ರಚನಾ ರೀತಿಗಳಲ್ಲಿ ಮತ್ತು ಕಲ್ಲಿನ ಉಪಯೋಗದಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳು ಕಂಡುಬರುತ್ತವೆ. ಉದಾಹರಣೆಗೆ ಸಾದಿಯಗಡಿ ವಿಭಾಗದಲ್ಲಿನ ಆಯುಧಗಳು ಜೇಡ್ ಕಲ್ಲಿನವಾದರೆ, ನಾಗಾಬೆಟ್ಟದವು ಪಟ್ಟೆಗಲ್ಲಿನವು. ಮರಳು ಗಲ್ಲು ಮತ್ತು ಪಳೆಯುಳಿಕೆಯ ಮರ ಸಹ ಬಳಕೆಯಲ್ಲಿತ್ತು. ಅಸ್ಸಾಮಿನ ಶಿಲಾಯುಗದ ವಿಷಯದಲ್ಲಿ ಅಲ್ಲಿನ ಆಯುಧಗಳ ಬಗ್ಗೆ ಹೊರತು ಇನ್ನೇನು ತಿಳಿದಿಲ್ಲ. ಈ ಪೂರ್ವ ಭಾರತದ ನವಶಿಲಾಯುಗದ ಸಂಸ್ಕೃತಿಯ ಕರ್ತೃಗಳು ಅಸ್ಟ್ರೋಏಷಿಯಾಟಿಕ್ ಭಾಷೆಯನ್ನಾಡುತ್ತಿದ್ದ ಜನರಿರಬಹುದೆಂದು ಕೆಲವು ವಿದ್ವಾಂಸರು ಊಹಿಸಿದ್ದಾರೆ. ಆದರೆ ಇದುವರೆಗೆ ಇದಕ್ಕೆ ಖಚಿತ ಆಧಾರಗಳೇನೂ ದೊರಕಿಲ್ಲ.
ಶಿಲಾಸಮಾಧಿ
ಬದಲಾಯಿಸಿಅಸ್ಸಾಮಿನ ಕೆಲವು ಪ್ರದೇಶಗಳಲ್ಲಿ ಬೃಹತ್ ಶಿಲಾಸಮಾಧಿಗಳು (ಮೆಗಾಲಿತ್ಸ್) ಬೆಳಕಿಗೆ ಬಂದಿವೆ. ಆದರೆ ಇವುಗಳ ಕಾಲವಾಗಲಿ ಕರ್ತೃಗಳ ವಿಷಯವಾಗಲಿ ಸಂಬಂಧಪಟ್ಟ ಸಂಸ್ಕೃತಿಯ ವಿವರವಾಗಲಿ ಏನೂ ತಿಳಿದಿಲ್ಲ. ಇತ್ತೀಚಿನವರೆಗೂ ಅಲ್ಲಿನ ಕೆಲವು ಆದಿವಾಸಿಗಳು ಬೃಹತ್ ಶಿಲಾಸಮಾಧಿಗಳನ್ನು ನಿರ್ಮಿಸುತ್ತಿದ್ದರೆಂಬುದಕ್ಕೆ ಸಹ ಆಧಾರಗಳಿವೆ.
ಕಟ್ಟಡ
ಬದಲಾಯಿಸಿಭೂಕಂಪ ಮತ್ತು ಅತಿವೃಷ್ಟಿ ಸಾಮಾನ್ಯವಾಗಿರುವ ಅಸ್ಸಾಮ್ ಪ್ರದೇಶದಲ್ಲಿ ಪ್ರಾಚೀನ ಕಾಲದ ಕಟ್ಟಡಗಳು ಉಳಿದುಬರುವುದು ಅಪೂರ್ವ. ಭಗ್ನಾವಶೇಷಗಳು ಅಲ್ಲಲ್ಲಿ ಇದ್ದಿರಬಹುದಾದರೂ ಅಲ್ಲಿನ ಯಥೇಚ್ಛವಾದ ಸಸ್ಯರಾಶಿ ಇವನ್ನು ಜನರ ದೃಷ್ಟಿಯಿಂದ ಬಹುಬೇಗ ಹುದುಗಿಸಿಬಿಡುತ್ತದೆ. ಅಕಸ್ಮಾತ್ತಾಗಿ ಕೆಲವು ಗುರಿತಿಸಲ್ಪಟ್ಟಿದ್ದರೂ ಈ ಪ್ರದೇಶದಲ್ಲಿ ಸಂಚಾರ ಸೌಲಭ್ಯಗಳು ಕಡಿಮೆಯಿರುವುದರಿಂದ ಇವು ವಿದ್ವಾಂಸರನ್ನು ಆಕರ್ಷಿಸಿವುದೂ ಕಡಿಮೆ. ಹೀಗಾಗಿ ಅಸ್ಸಾಮಿನ ವಾಸ್ತುಶಿಲ್ಪದ ಬಗ್ಗೆ ನಮಗೆ ತಿಳಿದಿರುವ ವಿಷಯ ಅತ್ಯಲ್ಪ. ಈಗಿನ ಗೌಹತಿ ಮತ್ತು ತೇಜಪುರ ಊರುಗಳು ಪ್ರಾಚೀನ ಪ್ರಸಿದ್ಧ ಪ್ರಾಗ್ಜೋತಿಷಪುರ ಮತ್ತು ಹಾರುಪ್ಪೇಶ್ವರ ಪಟ್ಟಣಗಳ ಮೇಲೆ ಕಟ್ಟಲ್ಪಟ್ಟಿವೆ. ಈಗಲೂ ಈ ಊರುಗಳಲ್ಲಿ ಕಟ್ಟಡಗಳನ್ನು ಕಟ್ಟುವಾಗ ಆ ಪಟ್ಟಣಗಳ ಹಲವಾರು ಅವಶೇಷಗಳು ಬೆಳಕಿಗೆ ಬರುತ್ತಿವೆ. ಗೌಹತಿಯಲ್ಲಿ ಅನತಿದೂರದಲ್ಲಿ ಕೆಲವು ದೇವಮೂರ್ತಿಗಳು ಬಂಡೆಯ ಮೇಲೆ ಕೆತ್ತಲ್ಪಟ್ಟಿವೆ. ವಿಷ್ಣು, ಸೂರ್ಯ, ಗಣೇಶ, ದುರ್ಗಾದೇವತೆಗಳ ವಿಗ್ರಹಗಳೂ ಕೆಲವು ಪ್ರಾಚೀನ ಕಟ್ಟಡಗಳ ಕಂಬಗಳೂ ಅಲ್ಲಲ್ಲಿನ ಅಗೆತದಲ್ಲಿ ಬೆಳಕಿಗೆ ಬಂದಿದೆ. ಗೌಹಾತಿಯ ಬಳಿಯ ಊರ್ವಶೀ ದ್ವೀಪದಲ್ಲಿ ಸಹ ಇದೇ ರೀತಿಯ ವಿಗ್ರಹಗಳು ಸಿಕ್ಕಿವೆ. ತೇಜಪುರದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯನ್ನು ಕಟ್ಟುವಾಗ, ದೊಡ್ಡ ದೊಡ್ಡ ಕೆತ್ತಿದ ಕಲ್ಲುಗಳು ಸಿಕ್ಕಿದ್ದವು. ಇದರಲ್ಲಿ ಕೆಲವನ್ನು ಅಲ್ಲಿಯ ನಗರ ಸಭೆಯ ಉದ್ಯಾನದಲ್ಲಿ ಇರಿಸಿದ್ದಾರೆ; ಇವುಗಳಲ್ಲಿನ ಒಂದು ಕಂಬ ಕೆಳಭಾಗದಲ್ಲಿ ಹದಿನಾರು ಮುಖದ್ದಾಗಿದ್ದು ಮೇಲ್ಭಾಗದಲ್ಲಿ ಕಲ್ಯಾಣಿ ಚಾಲುಕ್ಯರ ದೇವಾಲಯಗಳ ಕಂಬಗಳಂತೇ ಗುಂಡಗೆ ತಿರುಗಣೆಗಳಲ್ಲಿ ತಿರುಗಿಸಿದ್ದಂತೆ ಇವೆ. ಅದರ ಮೇಲ್ಭಾಗದಲ್ಲಿ ದೇವಾಲಯದ ಮಾದರಿಯ ಕೆತ್ತನೆಯಿದ್ದು ಒಳಗೆ ಲಿಂಗವನ್ನು ತೋರಿಸಿದೆ. ಬಾಗಿಲವಾಡದ ಮೇಲ್ಪಟ್ಟಿಯಾಗಿದ್ದ ಇನ್ನೊಂದು ಕಲ್ಲಿನಲ್ಲಿ ಮಧ್ಯೆ ಸೂರ್ಯ ಮೂರ್ತಿಯೂ ಪಕ್ಕಗಳಲ್ಲಿ ಬ್ರಹ್ಮ ಮತ್ತು ಶಿವ ವಿಗ್ರಹಗಳೂ ಕೆತ್ತಲ್ಪಟ್ಟಿವೆ. ಈ ವಾಸ್ತುಶಿಲ್ಪದ ಅವಶೇಷಗಳು ಕ್ರಿ.ಶ ೧೦ನೆಯ ಶತಮಾನಕ್ಕೆ ಸೇರಿದವು. ಅದೇ ಉದ್ಯಾನದಲ್ಲಿಟ್ಟಿರುವ ಗಜಲಕ್ಷ್ಮಿಯ ಚಿತ್ರವಿರುವ ಕಲ್ಲು ಪ್ರಾಯಶಃ ೧೨ನೆಯ ಶತಮಾನದ ದೇವಾಲಯದ್ದಿರಬಹುದೆಂದು ವಿದ್ವಾಂಸರ ಊಹೆ.
ಅಸ್ಸಾಮಿನ ದೇವಾಲಯ
ಬದಲಾಯಿಸಿಅಸ್ಸಾಮಿನ ಅತಿಪ್ರಾಚೀನ ದೇವಾಲಯದ ಉಳಿಕೆಗಳು ತೇಜ್‍ಪುರದ ಬಳಿಯ ದಹ್‍ಪಾರ್ವತೀಯ ಎಂಬ ಗ್ರಾಮದಲ್ಲಿವೆ. ಇಲ್ಲಿದ್ದ ಇಟ್ಟಿಗೆಯ ದೇವಾಲಯ ೧೮೯೭ರ ಭೂಕಂಪದಲ್ಲಿ ಬಿದ್ದುಹೋದುದರಿಂದ, ಅದರಡಿಯಲ್ಲಿ ಸೇರಿಹೋಗಿದ್ದ ಆರನೆಯ ಶತಮಾನದ ಗುಪ್ತಶೈಲಿಯ ಕಟ್ಟಡದ ಭಾಗಗಳು ಬೆಳಕಿಗೆ ಬಂದವು. ಬಾಗಿಲ ಎರಡು ಕಡೆಯ ಕಂಬಗಳಲ್ಲಿ ಗಂಗ, ಯಮುನ ಶಿಲ್ಪಗಳಿವೆ. ಗಣಗಳು ಮತ್ತು ನಾಗನಾಗಿ ವಿಗ್ರಹಗಳನ್ನು ಕೆತ್ತಿರುವ ಕಲ್ಲುಗಳು ಸಹ ಇಲ್ಲಿ ದೊರಕಿವೆ. ಕಾಮರೂಪ ಜಿಲ್ಲೆಯ ಪ್ರಸಿದ್ಧ ಶಾಕ್ತಪೀಠವಾದ ಕಾಮ್ಯಾಹದಲ್ಲಿ, ಈಗಿರುವ ದೇವಾಲಯ ಬಹಳ ಇತ್ತೀಚಿನದಾದರೂ ೭ - ೮ನೆಯ ಶತಮಾನದ ಕೆಲವು ಶಿಲ್ಪಗಳೂ ಸಿಕ್ಕಿವೆ. ಕಾಮಾಖ್ಯ ಬೆಟ್ಟದ ಮೇಲೆ ಕಂಡು ಬಂದ ಹತ್ತನೆಯ ಶತಮಾನದ ಕೆಲವು ಸರಸ್ವತೀ ವಿಗ್ರಹ ಒಂದು ಸುಂದರ ಶಿಲ್ಪ. ಈ ಶಿಲ್ಪದಲ್ಲಿ ಬಿಹಾರ ಮತ್ತು ಮಧ್ಯಭಾರತ ಶಿಲ್ಪ ಶೈಲಿಯ ಪ್ರಭಾವ ಸ್ಪಷ್ಟವಾಗಿದೆ.
ತೇಜಪುರದಿಂದ ಪೂರ್ವಕ್ಕೆ ಬಾಮುನಿ ಬೆಟ್ಟದ ಮೇಲೆ ಕಡೆದ ಗ್ರಾನೈಟ್ ಬಂಡೆಗಳಿಂದ ಕಟ್ಟಿದ್ದ ಹಲವು ದೇವಾಲಯಗಳ ಅವಶೇಷಗಳು ಮೂರುಕಡೆಗಳಲ್ಲಿ ಕಂಡುಬಂದಿವೆ. ಇವೆಲ್ಲ ಶೈವ ದೇವಾಲಯಗಳಿಗೆ ಸಂಬಂಧಪಟ್ಟದ್ದವೆಂದೂ ಹೇಳಬಹುದು. ಲಶಿಮಪುರ ಜಿಲ್ಲೆಯ ಪುಲ್ಬಾರಿಯ ಬಳಿ ಸಹ ಹಳೆಯ ದೇವಾಲಯದ ಮುರುಕುಗಳೂ ಒಂದು ಕಲ್ಲಿನ ಕಮಾನೂ ಕೆಲವು ದೇವಮೂರ್ತಿಗಳೂ ಸಿಕ್ಕಿವೆ. ಸಿಬ್ಸಾಗರದಲ್ಲಿಯೂ ಒಂದು ವಿಷ್ಣು ದೇವಾಲಯದ ಉಳಿಕೆಗಳಿವೆ. ಆದರೆ ಇವಾವುದರ ಬಗ್ಗೆಯೂ ಹೆಚ್ಚು ವಿಷಯಗಳು ತಿಳಿದಿಲ್ಲ.
ದೀಮಾಪುರದಲ್ಲಿ ಒಂದು ದೊಡ್ಡ ಪಟ್ಟಣದ ಅವಶೇಷಗಳಿವೆ. ಇದು ಕ್ರಿ.ಶ ೧೫೩೬ರಲ್ಲಿ ಅಹೋಮರ ಆಕ್ರಮಣದವರೆಗೂ ಕಚಾರಿ ದೊರೆಗಳ ರಾಜಧಾನಿಯಾಗಿತ್ತು. ಊರಿನ ಸುತ್ತಲೂ ಕೋಟೆ ಇದ್ದು ಅಲ್ಲಲ್ಲಿ ಭದ್ರವಾಗಿ ಕಟ್ಟಿದ ಹೆಬ್ಬಾಗಿಲುಗಳಿವೆ. ಊರಿನ ಸುತ್ತಳತೆ ಸುಮಾರು ೨.೫ ಮೈ. ಗಳು. ಕೋಟೆಯ ಒಳಗೆ, ಪೂರ್ವದ ಬಾಗಿಲಿನಿಂದ ಪ್ರಾರಂಭವಾಗಿ ದಕ್ಷಿಣೋತ್ತರವಾಗಿ ಸಮಾನಾಂತರವಾಗಿ ಹಬ್ಬಿರುವ ಕಂಬಗಳ ಎರಡು ಸಾಲುಗಳಿವೆ. ಇವು ನಾಜೂಕಾಗಿ ಒಂದೇ ಕಲ್ಲಿನಲ್ಲಿ ಕೆತ್ತಲ್ಪಟ್ಟಿದ್ದು ಚದುರಂಗ ಕಾಯಿಯಂತೆ ಕಾಣುತ್ತವೆ. ಒಂದೊಂದು ೬'- ೯' ಎತ್ತರವಿದ್ದು ೨.೫' ದಪ್ಪವಿದೆ. ಇವಲ್ಲದೆ ಗಿ ಆಕಾರದಲ್ಲಿ ಕೆತ್ತಲ್ಪಟ್ಟಿರುವ ಹಲವಾರು ಕಲ್ಲುಗಳೂ ಇಲ್ಲಿ ನೆಡಲ್ಪಟ್ಟಿವೆ. ಇವುಗಳ ಮೇಲೆ ಬಳ್ಳಿಗಳು ಮತ್ತು ಜ್ಯಾಮಿತಿಕ ಆಕೃತಿಗಳ ಸುಂದರ ಕೆತ್ತನೆಗಳಿವೆ. ಇದೇ ರೀತಿಯ ಕಂಬಗಳೂ ಅದೇ ಪ್ರಾಂತ್ಯದಲ್ಲಿ ಜಮಗುರಿ ರೈಲ್ವೆ ನಿಲ್ದಾಣದಿಂದ ಸುಮಾರು ೧೫ ಮೈ. ದೂರದಲ್ಲಿರುವ, ಕಾಸೋಮರಿ ಪಥಾರ ಎಂಬಲ್ಲೂ ಕಂಡು ಬಂದಿವೆ. ಇವುಗಳ ಮೇಲೆರುವ ಕೆತ್ತನೆಗಳು, ಈಗಿನ ನಾಗಾ ಜನರಲ್ಲಿ ಈ ನಮೂನೆಯ ಮರದ ಕಂಬಗಳನ್ನು ಮೃತ ವೀರರ ಸ್ಮಾರಕವಾಗಿ ನೆಡುವ ಪದ್ಧತಿಯಿರುವುದರಿಂದ, ದೀಮಾಪುರ ಮತ್ತು ಕಾಸೋಮರಿ ಪಥಾರ್‍ನ ಕಂಬಗಳೂ ಆ ಉದ್ಧೇಶಕ್ಕಾಗಿಯೇ ನೆಟ್ಟವಾಗಿರಬಹುದೆಂದು ಊಹಿಸಬಹುದು. ಇತ್ತೀಚಿನವರೆಗೆ ನರಬಲಿಗೆ ಪ್ರಸಿದ್ಧವಾಗಿದ್ದ ಸಾದಿಯಾ ಬಳಿಯ ತಾಮ್ರೇಶ್ವರೀ ದೇವಾಲಯ ಬಹುಶಃ ಈ ಕಾಲದ್ದು. ದೇವಾಲಯದ ಮೇಲ್ಭಾಗ ತಾಮ್ರದ ತಗಡುಗಳಿಂದ ಹೊದಿಸಲ್ಪಟ್ಟಿದೆ. ಇಲ್ಲಿ ಸಿಕ್ಕಿರುವ ಕೆಲವು ಹಾಸು ಹೆಂಚುಗಳಲ್ಲಿನ ಚಿತ್ರಗಳಿಗೂ ದೀಮಾಪುರದ ಕೆತ್ತನೆಗಳಿಗೂ ಸಾಮ್ಯವಿದೆ. ದೀಮಾಪುರದ ಅನಂತರ ಕಚಾರಿ ಅರಸರ ರಾಜಧಾನಿಯಾಗಿದ್ದ ಮೈಟಾಂಗ್‍ನಲ್ಲಿಯೂ ಆ ಕಾಲದ ಕೋಟೆಯ ಗೋಡೆ, ಭಗ್ನ ಕಟ್ಟಡಗಳು ಮತ್ತು ಶಿಲ್ಪಗಳು ಉಳಿದುಬಂದಿವೆ. ಶಾಸ್‍ಪುರ್ ಎಂಬಲ್ಲಿಯೂ ಕಚಾರಿ ದೊರೆಗಳ ಕಾಲದ ಮನೆಗಳು, ಸ್ನಾನಗೃಹ ಮುಂತಾದುವು ಕಂಡುಬಂದಿವೆ. ಇಲ್ಲಿನ ಬಾಗಿಲ ಬಳಿಯೊಂದರ ಶಾಸನ ಅದು ಮೇಘನಾರಾಯಣನ ಕಾಲದಲ್ಲಿ ಕಟ್ಟಲ್ಪಟ್ಟ ವಿಷಯವನ್ನು ತಿಳಿಸುತ್ತದೆ.
ಸಾದಿಯಾದಿಂದ ೨೪ ಮೈಲು ದೂರದಲ್ಲಿ ಕೆತ್ತಿದ ಗ್ರಾನೈಟ್ ಬಂಡೆಗಳಿಂದ ಕಟ್ಟಿರುವ ಶಿಶುಪಾಲನ ಮತ್ತು ಭೀಷ್ಮಕನ ಕೋಟೆಗಳು ಬಹುಶಃ ಅಹೊಮ್ ದೊರೆಗಳ ಕಾಲದವು. ಕಾಲಂಬರಿ ಎಂಬಲ್ಲಿ ೧೭೫೮ ರಲ್ಲಿ ಕಟ್ಟಿದ ವಾಸುದೇವ ದೇವಾಲಯವೂ, ೧೭೯೦ರಲ್ಲಿ ಗೌರಿನಾಥಸಿಂಹನಿಂದ ಕಟ್ಟಲ್ಪಟ್ಟ ಬೋರ್ದೋಲದ ದೇವಾಲಯವೂ ಬಿಷ್‍ನಾತ್‍ನ ಶಿವದೇವಾಲಯವೂ ಅಹೊಮ್ ವಾಸ್ತುಶಿಲ್ಪಕ್ಕೆ ಒಳ್ಳೆಯ ಉದಾಹರಣೆಗಳು. ಕಾಲಬರಿ ದೇವಾಲಯದಲ್ಲಿ ಈ ಕಾಲದ ರಂಗುರಂಗಿನ ಹಾಸುಹೆಂಚುಗಳಿಂದ ನೆಲವನ್ನು ಅಲಂಕರಿಸಿದ್ದಾರೆ. ಕಾಮರೂಪ ಜಿಲ್ಲೆಯ ಹಾಜೋ ಎಂಬಲ್ಲಿ ಇರುವ ಹಯಗ್ರೀವ ಮತ್ತು ಕೇದಾರನಾಥ ದೇವಾಲಯಗಳು, ಘಯಾಸುದ್ದೀನನ ಗೋರಿ ಗಮನಾರ್ಹವಾದ ಕಟ್ಟಡಗಳು. ಸಾದಿಯಾದಲ್ಲಿ ಶೇರ್‍ಷಾನ ಶಾಸನವಿರುವ (೧೫೪೨) ಒಂದು ಫಿರಂಗಿ ಇದೆ.
ಅಸ್ಸಾಮಿನ ಶಾಸನ
ಬದಲಾಯಿಸಿಅಸ್ಸಾಮಿನ ಶಾಸನಗಳ ಬಗ್ಗೆ ವ್ಯವಸ್ಥಿತ ಅಧ್ಯಯನವೇನೂ ನಡೆದಿಲ್ಲ. ಕಾಮರೂಪ ಜಿಲ್ಲೆಯ ಕಾಮಾಖ್ಯದ ಬಳಿಯ ನೀಲಾಚಲ ಬೆಟ್ಟದ ಮೇಲೆ ಸಿಕ್ಕಿರುವ ಕ್ರಿ.ಶ ೫ನೆಯ ಶತಮಾನದ ಶಾಸನವೇ ಇದುವರೆಗೆ ತಿಳಿದಿರುವಲ್ಲಿ ಹಳೆಯದು. ಪುಷ್ಯವರ್ಮನ ವಂಶದ ಸುರೇಂದ್ರವರ್ಮನ ಈ ಶಾಸನ ಗುಪ್ತಲಿಪಿ ಮತ್ತು ಸಂಸ್ಕೃತ ಭಾಷೆಯಲ್ಲಿದ್ದು, ನೀಲಾಚಲ ಬೆಟ್ಟದಲ್ಲಿ ಬಲಭದ್ರ ಸ್ವಾಮಿಗಾಗಿ ಒಂದು ಗುಹೆಯನ್ನು ನಿರ್ಮಿಸಿದ ವಿಷಯವನ್ನು ತಿಳಿಸುತ್ತದೆ. ಹರ್ಷವರ್ಧನನ ಸಮಕಾಲೀನನಾದ ಭಾಸ್ಕರಶರ್ಮನ ದೊಂಬಿ ತಾಮ್ರಶಾಸನ, (೭ನೆಯ ಶಸತಮಾನದ) ಪ್ರಾಲಂಭನ ವಂಶದ ವನಮಾಲನ ತೇಜ್‍ಪುರ ತಾಮ್ರ ಶಾಸನ ಮತ್ತು ಬಲವರ್ಮನ ನೌಗಾಂಗ್ ತಾಮ್ರ ಶಾಸನ (೧೦ನೆಯ ಶತಮಾನ) ಅಸ್ಸಾಮಿನ ಪಾಲವಂಶದ ರತ್ನಪಾಲನ ಬಾರ್ಗಾವ್ ಮತ್ತು ಸ್ತಲ್ಕಾಚಿ ತಾಮ್ರ ಶಾಸನಗಳು (೧೧ನೆಯ ಶತಮಾನ) ಮತ್ತು ಅದೇ ವಂಶದ ಇಂದ್ರಪಾಲನ ಗೌಹತಿ ತಾಮ್ರ ಶಾಸನ (೧೧ನೆಯ ಶತಮಾನ) ಚಾರಿತ್ರಿಕವಾಗಿ ಮುಖ್ಯವಾದ ಕೆಲವು ಶಾಸನಗಳು. ಇವೆಲ್ಲ ಭಾರತದ ಇತರೆಡೆಯ ಶಾಸನಗಳ ರೀತಿಯಲ್ಲಿಯೇ ಇದ್ದು, ಪೂರ್ವಗುಪ್ತಲಿಪಿಯಿಂದ ಬೆಳೆದು ಬಂದ ಬಂಗಾಲೀ - ಅಸ್ಸಾಮೀ ಲಿಪಿಯಲ್ಲಿ ಸಂಸ್ಕೃತ ಭಾಷೆಯಲ್ಲಿ ಬರೆಯಲ್ಪಟ್ಟಿವೆ. ೧೭೩೭ರ ಎರಡನೆಯ ರಾಮಸಿಂಹನ ಶತಕ್ ತಾಮ್ರಶಾಸನ ಕಾಚಾರಿ ಅರಸರ ಕಾಲದ ಮುಖ್ಯ ಶಾಸನ. ಅಹೋಂ ದೊರೆಗಳು ಮೊದ ಮೊದಲು ಅಹೋಂ ಭಾಷೆ ಮತ್ತು ಲಿಪಿಯಲ್ಲಿಯೇ ತಮ್ಮ ತಾಮ್ರ ಶಾಸನಗಳನ್ನು ಬರೆಸುತ್ತಿದ್ದರು. ಅನಂತರ ಶಾಸನಗಳು ಅಸ್ಸಾಮೀ ಲಿಪಿಯಲ್ಲಿ ಬರೆಯಲ್ಪಟ್ಟಿವೆ. ಅವುಗಳ ಭಾಷೆ ಭಾಗಶಃ ಸಂಸ್ಕೃತ, ಭಾಗಶಃ ಅಸ್ಸಾಮೀ. ೧೭೩೨ರಲ್ಲಿ ಶಿವಸಿಂಹ ಮತ್ತು ಅವನ ಪತ್ನಿ ಅಂಬಿಕಾಳಿಂದ ಕೊಡಲ್ಪಟ್ಟ ತಾಮ್ರಶಾಸನ. ೧೭೭೫ರ ಲಕ್ಷ್ಮಿನರಸಿಂಹನ ಶಾಸನ ಮತ್ತು 1792ರ ಗೌರೀನಾಥಸಿಂಹನ ಶಾಸನಗಳು ಅಹೋಮರ ತಾಮ್ರಶಾಸನಗಳಲ್ಲಿ ಮುಖ್ಯವಾದವು. ಅವರ ಶಿಲಾಶಾಸನಗಳು ಸಾಮಾನ್ಯವಾಗಿ ಸಂಸ್ಕೃತ ಭಾಷೆಯಲ್ಲಿವೆ.
ನಾಣ್ಯಗಳು
ಬದಲಾಯಿಸಿಅಸ್ಸಾಮಿನಲ್ಲಿ ಸಿಕ್ಕಿರುವ ಹೆಚ್ಚು ನಾಣ್ಯಗಳೆಲ್ಲ ಅಹೋಂ ರಾಜರ ಕಾಲಕ್ಕೆ ಸೇರಿದುವು. ಮೊದಲ ಅಹೋಂ ನಾಣ್ಯಗಳ ಬರೆಹ ಅಹೋಂ ಲಿಪಿ ಮತ್ತು ಭಾಷೆಯಲ್ಲಿಯೇ ಇರುತ್ತಿದ್ದವು. ಅನಂತರದವುಗಳಲ್ಲಿ ಅಸ್ಸಾಮೀ ಬಂಗಾಲೀ ಲಿಪಿಯಲ್ಲಿ ಸಂಸ್ಕೃತದ ಬರೆಹವಿರುತ್ತದೆ. ಅಹೋಮರ ನಾಣ್ಯಗಳೆಲ್ಲ ಸಾಮಾನ್ಯವಾಗಿ ಬೆಳ್ಳಿಯವು. ಚಿನ್ನವೂ ಸಹ ಅಪೂರ್ವವಾಗಿ ಉಪಯೋಗಿಸಲ್ಪಡುತ್ತಿತ್ತು. ಹೆಚ್ಚಿನ ನಾಣ್ಯಗಳು ಅಷ್ಟಭುಜಾಕೃತಿಯಲ್ಲಿದ್ದು, ಮುಂಭಾಗದಲ್ಲಿ ರಾಜದುಂಬಿಯ ಸ್ವರೂಪದಲ್ಲಿ ಶಿವನ ಅಥವಾ ಇತರ ಹಿಂದೂ ದೇವರ ಪಾದವನ್ನು ಚುಂಬಿಸುತ್ತಿರುವ ಚಿತ್ರವನ್ನು ಹೊಂದಿವೆ. ಇವುಗಳ ಮೇಲೆ ರಾಜನ ಹೆಸರು ಮತ್ತು ಶಕ ಗಣನೆಯಲ್ಲಿ ನಾಣ್ಯದ ಅಚ್ಚಿನ ವರ್ಷ ನಮೂದಿಸಲ್ಪಟ್ಟಿವೆ. ನಾಣ್ಯಗಳ ತೂಕ ೪.೨ ಗ್ರೇನ್‍ನಿಂದ ೧೭೬.೭ ಗ್ರೇನ್‍ವರೆಗೆ ವಿವಿಧ ಮಾನಗಳಲ್ಲಿ ದೊರೆಯುತ್ತವೆ. ವೃತ್ತಾಕಾರದ ನಾಣ್ಯಗಳೂ ಪ್ರಮಥೇಶ್ವರೀ ಮತ್ತು ರಾಜೇಶ್ವರಸಿಂಹನ ಪಾರಸಿ ಬರೆಹವುಳ್ಳ ಚೌಕನೆಯ ನಾಣ್ಯಗಳೂ ಕೆಲವು ಅಪೂರ್ವವಾದವು. ಈಚೆಗೆ ಕಚಾರಿ ಅರಸರ ಕೆಲವು ನಾಣ್ಯಗಳು ಬೆಳಕಿಗೆ ಬಂದಿವೆ.