ಅಸ್ಸಾಮಿನ ಇತಿಹಾಸ

ಅಸ್ಸಾಮಿನ ಇತಿಹಾಸವೆಂದರೆ, ಅದರ ೪೦೦ ಮೈಲಿ ಉದ್ದ, ಸುಮಾರು ೫೦ ಮೈಲಿ ಅಗಲ ಬ್ರಹ್ಮಪುತ್ರ ನದೀಬಯಲಿನ ಇತಿಹಾಸ. ಪರ್ವತ ಪ್ರಾಂತ್ಯಗಳಲ್ಲಿ ವಾಸಿಸುತ್ತಿದ್ದ ಜನರು ಇಲ್ಲಿನ ಜನರೊಂದಿಗೆ ಈ ಶತಮಾನದವರೆಗೂ ಬೆರೆಯದೇ ಬಯಲು ಪ್ರದೇಶದ ಮೇಲೆ ದಾಳಿ ನಡೆಸುತ್ತಲೇ ಇದ್ದರು. ಬರ್ಮದ ಇರವಾಡಿ ಪ್ರದೇಶದಲ್ಲಿದ್ದ ಅಹೋಂ ಎಂಬ ಜನರಲ್ಲಿ ಕೆಲವರು ಹದಿಮೂರನೆಯ ಶತಮಾನದಲ್ಲಿ ಇಲ್ಲಿ ಬಂದು ನೆಲೆಸಿದರು. ಅವರಿಂದಲೇ ಅಸ್ಸಾಂ ಎಂಬ ಹೆಸರು ಬಂದಿದೆ. ಇವರು ಹಿಂದಿನಿಂದ ವಾಸಮಾಡುತ್ತಿದ್ದ ಕಚಾರಿ, ಕೋಚ್, ಮೇಚ್. ಚೂತಿಯಾ ಮುಂತಾದ ಜನರೊಂದಿಗೆ ಬಹುಕಾಲ ಹೋರಾಡಬೇಕಾಯಿತು.

ಭಾರತದ ಇತಿಹಾಸ ಪೂರ್ವಕಾಲದಲ್ಲಿ ಈ ದೇಶಕ್ಕೆ ಪ್ರಾಗ್ಜ್ಯೋತಿಷ ಎಂಬ ಹೆಸರಿತ್ತೆಂದೂ ಅದನ್ನು 'ಭಗದತ್ತ'ನೆಂಬ ಅರಸು ಆಳುತ್ತಿದ್ದನೆಂದೂ ತಿಳಿದುಬರುತ್ತದೆ. ಮುಂದೆ ಈ ದೇಶಕ್ಕೆ ಕಾಮರೂಪ ಎಂಬ ಹೆಸರು ಬಂತು. ಕ್ರಿಸ್ತಯುಗದ ಆರಂಭದಲ್ಲಿ ಆರ್ಯರು ಇಲ್ಲಿ ಬಂದು ನೆಲೆಸಿದರು. ಕ್ರಿ.ಶ ೪ ರಿಂದ ೭ ನೆಯ ಶತಮಾನದವರೆಗೆ, ಪುಷ್ಯವರ್ಮನೆಂಬ ರಾಜನ ಸಂತತಿಯವರು ಇಲ್ಲಿ ಆಳಿದರು. ಸ್ವಲ್ಪಕಾಲ ಅವರು ಸಮುದ್ರಗುಪ್ತನ ಮಾಂಡಲೀಕರಾಗಿಯೂ ಇದ್ದರು. ಹುಯೆನ್‍ತ್ಸಾಂಗ್[] ಕ್ರಿ.ಶ ೬೪೦ರಲ್ಲಿ ಈ ರಾಜ್ಯಕ್ಕೆ ಬಂದಿದ್ದ. ೧೩ನೆಯ ಶತಮಾನದಲ್ಲಿ ಮುಸ್ಲಿಮರು ಈ ರಾಜ್ಯದ ಮೇಲೆ ಧಾಳಿ ನಡೆಸಿದರು.

ಹುಯೆನ್‍ತ್ಸಾಂಗ್

ಹದಿಮೂರನೆಯ ಶತಮಾನದಲ್ಲಿ ಅಹೋಂ ಜನ ಈ ದೇಶವನ್ನಾಕ್ರಮಿಸಿದ ಮೇಲೆ ಅವರು ಸ್ಥಳೀಯ ಕಚಾರಿಗಳೊಂದಿಗೆ ಹೊಡೆದಾಡಬೇಕಾಯಿತು. ಕಚಾರಿಗಳು ಸೋತು ದಕ್ಷಿಣ ಪ್ರಾಂತ್ಯಕ್ಕೆ ಹೋಗಿ ನೆಲೆಸಿದರು. ಇವರ ರಾಜ್ಯ ಪದ್ಧತಿ ವಿಶಿಷ್ಟ ರೀತಿಯದು. ದೊರೆ ಮತ್ತು ಸಾಮಂತ ಮಂಡಲಿ, ಇವೆರಡಕ್ಕೂ ಅಧಿಕಾರ ಸಮನಾಗಿ ಹಂಚಲ್ಪಟ್ಟಿತ್ತು. ದೊರೆಯ ಆಯ್ಕೆ (ರಾಜವಂಶದವರಲ್ಲಿ ಮಾತ್ರ) ಸಾಮಂತ ಮಂಡಲಿಗೆ ಸೇರಿತ್ತು. ಶೂರರಾದ ಅಹೋಮರು ಮುಸ್ಲಿಮರ ಅನೇಕ ದಾಳಿಗಳನ್ನೆದುರಿಸಿ ಅವರನ್ನು ಹಿಂದಕ್ಕಟ್ಟಿದರು. ಹದಿನೇಳನೆಯ ಶತಮಾನದಲ್ಲಿ ಕೊಂಚಕಾಲ ಮಾತ್ರ ಅಸ್ಸಾಮಿನ ದಕ್ಷಿಣ ಭಾಗವನ್ನು ಮೊಗಲ ಸಾಮ್ರಾಟರಿಗೆ ಬಿಟ್ಟುಕೊಡಬೇಕಾಯಿತು. ಇದೇ ಕಾಲದಲ್ಲೇ ಅಹೋಂ ರಾಜ ರುದ್ರಸಿಂಹ ಹಿಂದೂಮತಾನುಯಾಯಿಯಾದ. ಅವನ ಮಗ ಶಿವಸಿಂಹನ (೧೭೧೪ - ೪೪) ಕಾಲದಲ್ಲಿ ಹಿಂದೂಮತ ರಾಜ್ಯದ ಪ್ರಧಾನಮತವಾಯಿತು. ಮುಂದೆ ಕೊಂಚಕಾಲ ಅಸ್ಸಾಮಿನ ರಾಜಕೀಯ ಸ್ಥಿತಿ ಹದಗೆಟ್ಟಿತು. ಪರ್ವತ ಪ್ರಾಂತಗಳ ಜನರು ದೇಶದೊಳಗೆ ನುಗ್ಗಿ ಲೂಟಿ, ಕೊಲೆ ನಡೆಸಿದರು; ಇವರ ಹಾವಳಿ ತಡೆಯುವುದಕ್ಕೆ ದೊರೆ ಗೌರೀನಾಥ ೧೭೯೨ರಲ್ಲಿ ಬ್ರಿಟೀಷರ ನೆರವು ಕೋರಬೇಕಾಯಿತು. ಅದೂ ಸರಿಯಾಗಿ ದೊರಕಲಿಲ್ಲ. ರಾಜ್ಯದಲ್ಲೇ ದೊರೆಗೆ ಪ್ರತಿಪಕ್ಷವೊಂದು ಹುಟ್ಟಿತು. ಈ ಪಕ್ಷ ಬರ್ಮೀಯರ ಸಹಾಯ ಕೇಳಿತು. ಅವರು ಬಂದು ಇಡೀ ದೇಶದಲ್ಲಿ ಲೂಟಿ ಕೊಲೆಗಳನ್ನು ನಡೆಸಿ ಹಿಂತಿರುಗಿದರು. ಮುುಂದೆ ಅಸ್ಸಾಂ ಬ್ರಿಟಿಷರ ವಶಕ್ಕೆ ಬಂದು, ೧೮೭೪ರಲ್ಲಿ ಚೀಫ್ ಕಮಿಷನರ್ ಪ್ರಾಂತ್ಯವಾಯಿತು. ೧೯೧೯ರಲ್ಲಿ ಗವರ್ನರ್ ಪ್ರಾಂತ್ಯವಾಯಿತು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಜಪಾನಿಯರು ಬರ್ಮ ದೇಶವನ್ನು ಸ್ವಾಧೀನಪಡಿಸಿಕೊಂಡ ಮೇಲೆ, ಕೋಹಿಮ ಹತ್ತಿರದ ನಾಗಾಬೆಟ್ಟ ಪ್ರದೇಶ ಬ್ರಿಟಿಷರ ಪ್ರತಿಭಟನೆಯ ಮುಖ್ಯ ಕೇಂದ್ರವಾಯಿತು. ಆ ಸೈನ್ಯಕ್ಕೆ ಸಾಮಾನು ಸರಂಜಾಮು ಸಾಗಾಣಿಕೆ ಅಸ್ಸಾಂ ಮುಖಾಂತರವೇ ಹೋಗಬೇಕಾಗಿತ್ತು.

೧೯೫೦ರ ಜನವರಿ ೨೦ರ ಸ್ವತಂತ್ರಭಾರತ ರಾಜ್ಯಾಂಗದ ಪ್ರಕಾರ ಅಸ್ಸಾಂ ರಾಷ್ಟ್ರದ ಎ ಪ್ರಾಂತ್ಯವಾಯಿತು. ಅದರ ಉತ್ತರದ ಕೆಲವು ಪ್ರಾಂತ್ಯಗಳಲ್ಲಿ ನಾಗಾಜನರ ಬಂಡಾಯ ಇನ್ನೂ ನಿಂತಿಲ್ಲದಿರುವುದರಿಂದ ಆ ಭಾಗ ಭಾರತದ ಕೇಂದ್ರ ಸರ್ಕಾರದ ಹತೋಟಿಯಲ್ಲೇ ಇದೆ.

ಉಲ್ಲೇಖಗಳು

ಬದಲಾಯಿಸಿ