ಅಪ್ಪೆ, ಅಪ್ಪೆಕಾಯಿ, ಅಪ್ಪೆಮಿಡಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಇದೊಂದು ವೈಶಿಷ್ಟ್ಯಪೂರ್ಣವಾದ ಉಪ್ಪಿನಕಾಯಿಗೆಂದೇ ಬಳಸುವ ಮಾವು. ಇವು ಸುವಾಸನಾಭರಿತವಾಗಿ ಹಾಗೂ ರುಚಿಕರವಾಗಿದ್ದು ಉಪ್ಪಿನಕಾಯಿ ಮಾಡಲು ಪ್ರಶಸ್ತವಾಗಿರುತ್ತವೆ. ಅಪ್ಪೆಮಾವು ಜೀರಿಗೆ ಸುವಾಸನೆ, ಕರ್ಪೂರದ ಸುವಾಸನೆ ಮುಂತಾದ ವಿವಿಧ ಸುವಾಸನೆಗಳಲ್ಲಿ ದೊರಕುತ್ತದೆ. ಎಲ್ಲಾ ಮಾವಿನತಳಿಗಳು ಅನಾಕಾರ್ಡಿಯೆಸಿಯೇ ಕುಟುಂಬವರ್ಗಕ್ಕೆ ಸೇರಿದ್ದರೂ ಅಪ್ಪೆಮಾವು ಅನುವಂಶಿಕವಾಗಿ ಸಾಂಪ್ರದಾಯಿಕ ತಳಿಗಳಿಗಿಂತ ವಿಭಿನ್ನವಾಗಿದೆ. ಅತ್ಯುತ್ತಮ ತಳಿಗಳನ್ನು ಅವುಗಳ ರುಚಿ, ಆಕಾರ, ಗಾತ್ರ, ಸುವಾಸನೆ, ಬಾಳಿಕೆ ಅವಧಿ, ಹಣ್ಣಿನ ತಿರುಳುಬಣ್ಣ, ಅಷ್ಟೆ ಅಲ್ಲದೆ ಕಟಾವಿನ ಸಮಯದಿಂದ ಗುರುತಿಸುತ್ತಾರೆ. ಅಪ್ಪೆಮಿಡಿಯ ಹೂವು ಹಾಗೂ ಕಾಯಿ ಆಗಲು ಅತಿ ಹೆಚ್ಚು ತೇವಾಂಶಭರಿತ ವಾತಾವರಣ ಬೇಕಾಗುತ್ತದೆ. ಸ್ವಾಭಾವಿಕವಾಗಿ ಅಪ್ಪೆಮಿಡಿ ಮರಗಳು ಉತ್ತರ ಕನ್ನಡದ ನದಿತೀರ, ಹೊಳೆಬದಿಗಳಲ್ಲಿ ಕಂಡುಬರುತ್ತದೆ. ಶಿವಮೊಗ್ಗ ಜಿಲ್ಲೆಯ ಸಾಗರ, ರಿಪ್ಪನ್ ಪೇಟೆ, ಬೆಳಗಾವಿ ಜಿಲ್ಲೆಯ ಖಾನಾಪುರ, ಲೋಂಡಾ ಮತ್ತು ಚಿತ್ತೂರು, ಧಾರವಾಡ ಜಿಲ್ಲೆಯ ಕಲಘಟಗಿ ಪ್ರದೇಶಗಳೂ ಕೆಲವು ಸ್ಥಳೀಯ ತಳಿಗಳಿಗೆ ಹೆಸರಾಗಿವೆ.[೧] ವಾಣಿಜ್ಯಕವಾಗಿ ಇದೊಂದು ಉಪ ಅರಣ್ಯ ಉತ್ಪನ್ನವಾಗಿದೆ. ಪೂರ್ಣ ಬೆಳೆದ ಒಂದು ಅಪ್ಪೆಮಾವಿನ ಮರ ಒಂದು ವರ್ಷಕ್ಕೆ ೫೦೦೦ದಿಂದ ೧೦೦೦೦ವರೆಗೆ ಮಿಡಿಗಳನ್ನು ಬಿಡುತ್ತದೆ. ಕಾಯಿಯು ಹಣ್ಣಾದಮೇಲೆ ಸ್ವಲ್ಪ ಸಿಹಿಯಾದ ರುಚಿಯನ್ನು ಪಡೆದುಕೊಳ್ಳುವುದಕ್ಕೆ 'ಜೀರಿಗೆ ಮಿಡಿ' ಹಾಗೂ ಹುಳಿಯ ಅಂಶವನ್ನೇ ಇಟ್ಟುಕೊಳ್ಳುವುದು 'ಅಪ್ಪೆಮಿಡಿ' ಎಂದು ಕರೆಯುತ್ತಾರೆ.

ಒಂದು ಜಾತಿಯ ಅಪ್ಪೆಮಿಡಿ
ಒಂದು ಜಾತಿಯ ಅಪ್ಪೆಮಿಡಿ

ಮಾದರಿ ಅಪ್ಪೆಮಿಡಿಯ ಗುಣಲಕ್ಷಣಗಳುಸಂಪಾದಿಸಿ

 • ಮಿಡಿ ಉದ್ದವಾಗಿರಬೇಕು
 • ತೊಟ್ಟಿನಿಂದ ಬರುವ ಸೊನೆ ಜಾಸ್ತಿಯಾಗಿರಬೇಕು ಮತ್ತು ಬೆಂಕಿ ತಾಗಿಸಿದರೆ ಕರ್ಪೂರದಂತೆ ಉರಿಯಬೇಕು.
 • ಸುವಾಸನಾಭರಿತವಾಗಿರಬೇಕು.
 • ಉಪ್ಪುನೀರಿನಲ್ಲಿ ಹಾಕಿದ ನಂತರದಲ್ಲಿ ಹಣ್ಣಿನ ತಿರುಳಬಣ್ಣ ಬಿಳಿಯಾಗಬೇಕು, ಮೂರು ವರ್ಷವಾದರೂ ಹಾಳಾಗಬಾರದು
 • ಉಪ್ಪಿನಲ್ಲಿ ಹಾಕಿದ ಮಿಡಿ ಕೊಬ್ಬರಿಯಂತೆ ಪಟ್ಟನೆ ತುಂಡಾಗುವಂತಿರಬೇಕು.

ವಿವಿಧ ತಳಿಗಳುಸಂಪಾದಿಸಿ

ಉತ್ತರಕನ್ನಡ ಜಿಲ್ಲೆಯಲ್ಲಿಯೇ ೩೦೦ಕ್ಕೂ ಹೆಚ್ಚಿನ ತಳಿಗಳು ಇವೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ನೂರಾರು ಮಿಡಿಮಾವಿನ ತಳಿಗಳಿದ್ದು, ಪ್ರತಿ ಜಿಲ್ಲೆಯಲ್ಲಿ ೨೫-೩೦ರಷ್ಟು ಗೊಂಚಲು ಫಲ ನೀಡುವ ಕೃಷಿ ಯೋಗ್ಯ ತಳಿಗಳನ್ನು ಗುರುತಿಸಬಹುದಾಗಿದೆ. ಉತ್ತರಕನ್ನಡ, ಶಿವಮೊಗ್ಗ ಕಡೆಯ ಕೃಷಿಕರು ತಮ್ಮ ತಮ್ಮ ಊರಿನ ಸುತ್ತಮುತ್ತ ಕಂಡುಬರುವ ವಿಶಿಷ್ಠ ಗುಣಗಳುಳ್ಳ ಮರಗಳನ್ನು ಗುರುತಿಸಿ ಅವುಗಳಿಂದ ಕಸಿ ತಳಿಗಳನ್ನು ರೂಪಿಸಿದ್ದಾರೆ. ಕೆಲವು ತಳಿಗಳಿಗೆ ಅವುಗಳನ್ನು ಬೆಳೆಸಿದ ಕುಟುಂಬ ನಿರ್ದಿಷ್ಟ ಹೆಸರುಗಳೂ ಇವೆ. ಅನಂತಭಟ್ಟ ಅಪ್ಪೆ, ಮಾಳಂಜಿ ಅಪ್ಪೆ, ಹಳದೋಟ ಅಪ್ಪೆ, ಕರ್ಪೂರ ಅಪ್ಪೆ, ಚೌತಿ ಅಪ್ಪೆ, ಕೆಂಗ್ಲೆ ಬಿಳಿ ಅಪ್ಪೆ, ಭೀಮನಗುಂಡಿ ಅಪ್ಪೆ, ಅಡ್ಡೇರಿ ಜೀರಿಗೆ, ಚೆನ್ನಿಗನತೋಟ ಜೀರಿಗೆ, ಕೂರಂಬಳ್ಳಿ ಜೀರಿಗೆ, ದೊಂಬೆಸರ ಜೀರಿಗೆ, ಜೇನಿ ಜೀರಿಗೆ, ಅಡ್ಡೇರಿ ಜೀರಿಗೆ, ಪಡವಗೋಡು ಜೀರಿಗೆ, ಕಾಳಿಗುಂಡಿ ಅಪ್ಪೆ, ಭೀಮನಕೋಣೆ ಕೆಂಚಪ್ಪೆ, ಜಲ್ಲೆ ಅಪ್ಪೆ, ಸೂಡೂರು ಲಕ್ಷ್ಯ ಅಪ್ಪೆ, ಕರ್ಣಕುಂಡಲ, ಹಾರ್ನಳ್ಳಿ ಅಪ್ಪೆ, ಕಂಚಪ್ಪೆ, ಹೊಸಗದ್ದೆ ಅಪ್ಪೆ, ಗೆಣಸಿನಕುಳಿ ಜೀರಿಗೆ,ಅಂಡಗಿ ಅಪ್ಪೆ. ಕಣಗಲಕೈ ಅಪ್ಪೆ ಮುಂತಾದ ಹೆಸರಿನ ಅಪ್ಪೆ ತಳಿಗಳಿವೆ.

ಕೃಷಿಯೋಗ್ಯ ತಳಿಗುಣಸಂಪಾದಿಸಿ

 • ಇವು ಪ್ರತಿವರ್ಷ ಫಲಬಿಡುತ್ತವೆ.
 • ನೆಟ್ಟ ನಾಲ್ಕಾರು ವರ್ಷಗಳಲ್ಲಿ ಫಲ ಶುರುವಾಗುತ್ತವೆ.
 • ಗೊಂಚಲು ಗೊಂಚಲಾಗಿ ಕಾಯಿ ಬಿಡುತ್ತದೆ.
 • ಒಂದೊಂದು ಗೊಂಚಲಲ್ಲಿ ೧೦ ರಿಂದ ೨೦ ಕಾಯಿ ಬಿಡಬೇಕು.

ಅಪ್ಪೆಮಿಡಿ ಮಾವು ಬೆಳೆ ತೆಗೆಯುವುದು ಅತ್ಯಂತ ಲಾಭದಾಯಕವಾದ ಉದ್ಯೋಗವಾಗಿದೆ. ಪ್ರತಿ ಮರದಲ್ಲಿ ೧೦೦ರಿಂದ ೧೫೦ ಕೆ.ಜಿ. ಮಿಡಿ ಬೆಳೆಯಲು ಸಾಧ್ಯವೆಂದು ಸಮೀಕ್ಷೆಯಿಂದ ತಿಳಿದು ಬಂದಿದೆ.[೨]

ಅಪ್ಪೆಮಿಡಿ ಬಳಕೆಸಂಪಾದಿಸಿ

ಮುಖ್ಯವಾಗಿ ಅಪ್ಪೆಮಾವು ಉಪ್ಪಿನಕಾಯಿ ತಯಾರಿಕೆಗೆ ಬಳಕೆಯಾಗುತ್ತದೆ. ಇದರೊಂದಿಗೆ ಮಲೆನಾಡಿನ ಮನೆಗಳಲ್ಲಿ ಅಪ್ಪೆ ಹುಳಿ/ನೀರ್ಗೊಜ್ಜು, ಸಾಸ್ಮೆ, ಗೊಜ್ಜು ಮತ್ತು ಚಟ್ನಿ ಪದಾರ್ಥಗಳ ತಯಾರಿಕೆಯಲ್ಲೂ ಬಳಕೆಯಾಗುತ್ತದೆ.

ತಳಿ ಸಂರಕ್ಷಣೆ ಹಾಗೂ ಸಂವರ್ಧನೆಸಂಪಾದಿಸಿ

ಅಪ್ಪೆಮಿಡಿ ಮಾವು ಬೆಳೆಗೆ ಮಲೆನಾಡಿನ ವಾತಾವರಣ ಪೂರಕವಾಗಿದೆ. ಇತರೆ ಭಾಗಗಳಲ್ಲಿ ಈ ಮಾವಿನ ತಳಿ ಸಂರಕ್ಷಿಸುವುದು ಕಷ್ಟಸಾಧ್ಯ. ಬೇರೆ ಬೇರೆ ಕಾರಣಗಳಿಂದಾಗಿ ಅಪ್ಪೆಮಿಡಿ ಮಾವು ತಳಿಗಳು ವಿನಾಶದ ಅಂಚಿನಲ್ಲಿದೆ. ಅಪ್ಪೆಮಿಡಿಯ ಅವೈಜ್ಞಾನಿಕ ಸಂಗ್ರಹಣೆಯಿಂದ ಅಪರೂಪದ ತಳಿಗಳು ನಶಿಸುವ ಹಂತ ತಲುಪಿವೆ.[೩]

 • 'ಅರಣ್ಯ ಮಹಾವಿದ್ಯಾಲಯ, ಶಿರಸಿ'ಯು ಅಪ್ಪೆಮಿಡಿ ಕೃಷಿಕರ ಮತ್ತು ಕಸಿ ತಜ್ಞರ ಕೂಟವೊಂದನ್ನು ರಚಿಸಿದ್ದು, ಅದರ ಮೂಲಕ ಮೂಲತಳಿಗಳ ಸಂವರ್ಧನೆ ಮತ್ತು ಸಂರಕ್ಷಣಾ ಕಾರ್ಯಗಳನ್ನು ಕೈಗೊಂಡಿದೆ. ಯುನೈಟೆಡ್ ನೇಷನ್ಸ್ ಎನ್ವಿರಾನ್‌ಮೆಂಟ್ ಪ್ರೋಗ್ರಾಮ್'ನ (ಯುಎನ್‌ಇಪಿ) ಸ್ಥಾನಿಕ ಹಣ್ಣು ತಳಿ ಸಂರಕ್ಷಣೆ ಮತ್ತು ಅಭಿವೃದ್ಧಿ ಯೋಜನೆಯಡಿ ಲಖನೌ, ನಾಗಪುರ, ಬೆಂಗಳೂರು ಹಾಗೂ ಶಿರಸಿಯಲ್ಲಿ ಅಪ್ಪೆಮಿಡಿ, ಸಿಟ್ರಸ್ ಹಾಗೂ ಗಾರ್ಸಿನಿಯಾ ತಳಿ ಸಂರಕ್ಷಣೆ ಯೋಜನೆ ಅನುಷ್ಠಾನಗೊಂಡಿದೆ. ಅರಣ್ಯ ಕಾಲೇಜ್ ಈ ಯೋಜನೆ ಅನುಷ್ಠಾನದ ರೂವಾರಿಯಾಗಿದ್ದು, ಕೃಷಿಕರ ಸಹಭಾಗಿತ್ವದಲ್ಲಿ ಹೆಜ್ಜೆ ಇಟ್ಟಿದೆ. ಸಿರಿಅಪ್ಪೆ, ಮಾವಿನಕಟ್ಟೆ ಅಪ್ಪೆ, ಪುರಪ್ಪೆ, ನಂದಗಾರು ಅಪ್ಪೆ, ಹಳದೋಟ ಅಪ್ಪೆ, ಮಾಳಂಜಿ ಅಪ್ಪೆ, ತುಡಗುಣಿ ಅಪ್ಪೆ ಸೇರಿದಂತೆ ೪೫ ಸ್ಥಳೀಯ ಜಾತಿ ಮಿಡಿ ಮಾವಿನ ಮರಗಳನ್ನು ಗುರುತಿಸಿ ಇವುಗಳ ಕಸಿ ಗಿಡಗಳನ್ನು ಬೆಳೆಸಿ ವಿತರಿಸುವ ಕೆಲಸ ನಡೆಯುತ್ತಿದೆ.[೪]
 • ಕೇಂದ್ರ ಸರ್ಕಾರದ ಭೌಗೋಳಿಕ ಗುರುತಿಸುವಿಕೆ (geographical indication) ಪಟ್ಟಿಯಲ್ಲಿ ಮಲೆನಾಡಿನ ಅಪ್ಪೆಮಿಡಿ ಸೇರ್ಪಡೆಗೊಂಡಿದೆ.[೫]
 • ಪರಿಸರವಾದಿಗಳಾದ ಶಿವಾನಂದ ಕಳವೆ ಹಾಗೂ ಯಲ್ಲಪ್ಪರೆಡ್ಡಿಯವರು ಅಪ್ಪೆತಳಿಗಳ ಸಂರಕ್ಷಣಾ ಕಾರ್ಯಗಳಲ್ಲಿ ತೊಡಗಿದ್ದಾರೆ.[೫]
 • ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದಲ್ಲಿ ತಳಿಗಳನ್ನು ಬೆಳೆಸಲಾಗುತ್ತಿದೆ.[೧]

ಉಲ್ಲೇಖಗಳುಸಂಪಾದಿಸಿ

 1. ೧.೦ ೧.೧ 'Appemidi' in need of resurrection, ಡೆಕ್ಕನ್ ಹೆರಾಲ್ಡ್, 25 April, 2011
 2. ಅಪ್ಪೆಮಿಡಿ ರಕ್ಷಣೆಗೆ ಮುಂದಾಗಲಿ, ಕನ್ನಡಪ್ರಭ ವಾರ್ತೆ 29 Mar 2014
 3. ಮಾರುಕಟ್ಟೆಗೆ ಬಂತು ಅಪ್ಪೆಮಿಡಿ: ಜಾಗಬಿಡಿ, ಕನ್ನಡಪ್ರಭ, 24 ಮಾರ್ಚ್ 2014]
 4. ಅಪ್ಪೆಮಿಡಿ ತಳಿ ಸಂರಕ್ಷಣೆ ಯೋಜನೆ, ಪ್ರಜಾವಾಣಿ ವಾರ್ತೆ, 07/19/2013
 5. ೫.೦ ೫.೧ ಸಂಧ್ಯಾ ಹೆಗಡೆ ಆಲ್ಮನೆ,ಅಪ್ಪೆಮಿಡಿ ರುಚಿ ನೋಡಿ, ಪ್ರಜಾವಾಣಿ ವಾರ್ತೆ 04/10/2012

ಹೊರಗಿನ ಕೊಂಡಿಗಳುಸಂಪಾದಿಸಿ

ಇವನ್ನೂ ನೋಡಿಸಂಪಾದಿಸಿ