ಮಿಡಿ ಉಪ್ಪಿನಕಾಯಿ
ಉಪ್ಪಿನಕಾಯಿಗಳಲ್ಲೇ ಪ್ರಸಿದ್ದವಾದ ಉಪ್ಪಿನಕಾಯಿ, ಮಾವಿನ ಮಿಡಿ ಉಪ್ಪಿನಕಾಯಿ. ಇದು ಭಾರತ ,ಮಲೆನಾಡಿನ ಭಾಗದಲ್ಲಿ ಹೆಚ್ಚು ಪ್ರಸಿದ್ಧಿ ಹೊಂದಿದೆ. ಈ ಉಪ್ಪಿನಕಾಯಿ ಬಹಳ ವಿಶಿಷ್ಟವಾದುದು.ಇದನ್ನು ಎಲ್ಲಾ ತರಹದ ಮಾವಿನ ಕಾಯಿ ಇಂದ ಮಾಡಲು ಸಾಧ್ಯವಿಲ್ಲ. ಅದರದ್ದೇ ಆದ ಮಾವಿನ ತಳಿಗಳಿಂದ ಮಾತ್ರ ಮಾಡಲು ಸಾಧ್ಯ. ಜೀರಿಗೆ ಮಿಡಿ, ಅಪ್ಪೆ ಮಿಡಿ, ಕಡಲೆ ಮಿಡಿ ಕೆಲವು ತಳಿಗಳು. ಈ ಮಿಡಿ ಉಪ್ಪಿನಕಾಯಿಯನ್ನು ತಯಾರಿಸಲು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಅದಕ್ಕೆ ಹೆಚ್ಚಿನ ಚಾಕಚಕ್ಯತೆ ಬೇಕು. ಈ ಉಪ್ಪಿನಕಾಯಿಯನ್ನು ತಯಾರಿಸಲು ಹೆಚ್ಚಿನ ಸಮಯ ಹಿಡಿಯುತ್ತದೆಯಾದರೂ ಇದು ನೀಡುವ ಸ್ವಾದ ಬಹಳ ರುಚಿಕರವಾಗಿರುತ್ತದೆ. ಮಿಡಿ ಉಪ್ಪಿನಕಾಯಿಯನ್ನು ತಯಾರಿಸಲು ಹೆಚ್ಚಿನ ಪರಿಶ್ರಮ ಅಗತ್ಯ. ಮೊದಲು ಮಾವಿನ ಕಾಯಿಯನ್ನು ಉಪ್ಪಿನಲ್ಲಿ ಹಾಕಿ ಒಂದು ಜಾಡಿಯಲ್ಲಿ(ಭರಣಿಯಲ್ಲಿ) ಸುಮಾರು ಒಂದು ವಾರದ ತನಕ ಇಡಬೇಕು. ವಾರದ ನಂತರ ಮಿಡಿ, ಉಪ್ಪನ್ನು ಹೀರಿಕೊಂಡದ್ದನ್ನು ಗಮನಿಸಿ, ಅದನ್ನು ನಂತರ ಉಪ್ಪುನೀರಿನಿಂದ ಬೇರೆ ಮಾಡಿ, ಅದನ್ನು ಒಳ್ಳೆಯ ಶುದ್ದ ಬಟ್ಟೆಯ ಮೇಲೆ ಹರಡಿಸಿ ಆರಲು ಬಿಡಬೇಕು. ಉಪ್ಪಿನಕಾಯಿ ಮಾಡಲು ಬಳಸಿದ ಉಪ್ಪಿನ ನೀರನ್ನು ಕುದಿಸಿ ಆರಲು ಬಿಡಬೇಕು. ಕುದಿಸಿ ಆರಿಸಿದ ಉಪ್ಪಿನ ನೀರಿಗೆ ಅಚ್ಚ ಮೆಣಸಿನ ಪುಡಿ, ಸಾಸಿವೆ ಪುಡಿ, ಜೀರಿಗೆ ಪುಡಿ, ಇಂಗು, ಅರಿಸಿನ ಪುಡಿ, ಸ್ವಲ್ಪ ಮೆಂತ್ಯೆ ಹಾಕಿ ಅದನ್ನು ಸರಿಯಾಗಿ ಮಿಶ್ರಣ ಮಾಡಿ ಅದಕ್ಕೆ, ಮಾವಿನ ಮಿಡಿಗಳನ್ನು ಹಾಕಿ ಜಾಡಿಯಲ್ಲಿ ಸುಮಾರು ೩ ತಿಂಗಲ ಕಾಲ ಇಡಬೇಕು. ಹೀಗೆ ತಯಾರು ಮಾಡಿದ ಉಪ್ಪಿನಕಾಯಿ ಸವಿಯಲು ಬಲು ರುಚಿಕರವಾಗಿರುತ್ತದೆ. ಈ ಮಿಡಿ ಉಪ್ಪಿನಕಾಯಿಯನ್ನು ಮೊಸರನ್ನದ ಜೊತೆ ಸವಿದರಂತೂ ಇನ್ನೂ ರುಚಿಯಾಗಿರುತ್ತದೆ. ಹೀಗೆ ತಯಾರು ಮಾಡಿದ ಉಪ್ಪಿನಕಾಯಿಯನ್ನು ವರುಷಾನುಗಟ್ಟಲೆ ಇಡಬಹುದು.