ಹರ್ಮಾನ್ ಮಿಂಕೋವ್‍ಸ್ಕಿ

ಗಣಿತಜ್ಞ

ಹರ್ಮಾನ್ ಮಿಂಕೋವ್‍ಸ್ಕಿ (1864-1909) ಒಬ್ಬ ರಷ್ಯನ್[] ಸಂಜಾತ ಜರ್ಮನ್[][][] ಗಣಿತವಿದ.

ಜನನ, ವಿದ್ಯಾಭ್ಯಾಸ

ಬದಲಾಯಿಸಿ

ಸೋವಿಯೆತ್ ಒಕ್ಕೂಟ, ದಕ್ಷಿಣ-ಮಧ್ಯ ಲಿಥುವೇನಿಯದ ಕೌನಾಸ್ ನಗರದ ಬಳಿಯ ಅಲೆಕ್ಸೋಟಸ್ ಎಂಬಲ್ಲಿ ಜನಿಸಿದ (22 ಜೂನ್ 1864). ಈತನಿಗೆ ಎಂಟು ವರ್ಷ ವಯಸ್ಸಾಗಿದ್ದಾಗ ಇವನ ಜರ್ಮನ್ ತಂದೆತಾಯಂದಿರು ಕೋನಿಗ್ಸ್‌ಬರ್ಗಿಗೆ (ಸೋವಿಯೆತ್ ರಷ್ಯದ ಕಾಲೇಗ್ರಾಡ್‌ನಿನ್) ಬಂದು ನೆಲಸಿದರು.[] ಇವನ ಹಿರಿಯಣ್ಣ ಆಸ್ಕರ್ ಖ್ಯಾತ ರೋಗತಜ್ಞನಾದ.[] ಬರ್ಲಿನ್ನಿನ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸದ ಮೂರು ಚಾತುರ್ಮಾಸದ ಅವಧಿಗಳನ್ನು ಬಿಟ್ಟರೆ ಇವನ ಉನ್ನತ ವಿದ್ಯಾಭ್ಯಾಸವೆಲ್ಲ ಕೋನಿಗ್ಸ್‌ಬರ್ಗಿನಲ್ಲೇ ನಡೆಯಿತು. ಆ ಸಮಯದಲ್ಲಿ ಡೇವಿಡ್ ಹಿಲ್ಬರ್ಟ್ (1862-1943) ಮತ್ತು ಹರ್‌ವಿಟ್ಸ್ ಎಂಬವರ ಮೈತ್ರಿ ಇವನಿಗೆ ಒದಗಿತು. ಹಿಲ್ಬರ್ಟ್ ಮಿಂಕೋವ್‌ಸ್ಕಿಯ ಸಹಾಪಾಠಿಯಾಗಿದ್ದವ. ಹರ್‌ವಿಟ್ಸ್ ಆಗ ತಾನೇ ಪ್ರಾಧ್ಯಾಪಕ ಹುದ್ದೆಯನ್ನು ಗಳಿಸಿದ್ದವ. ಪ್ಯಾರಿಸ್ ಅಕೆಡೆಮಿ ಆಫ್ ಸೈನ್ಸಸ್ ಸಂಸ್ಧೆ ಗಣಿತಶಾಸ್ತ್ರದಲ್ಲಿ ವಿಶೇಷ ಪರಿಶ್ರಮವಹಿಸಿ ಮೇಧಾಸಾಮರ್ಥ್ಯ ಪ್ರದರ್ಶಿಸುವವರಿಗಾಗಿ ಗ್ರ್ಯಾಂಡ್ ಪ್ರಿನ್ ಪ್ರಶಸ್ತಿ ನೀಡಿಕೆಯ (1883) ಬಗೆಗಿನ ಪ್ರಕಟನೆಯೊಂದನ್ನು ಹೊರಡಿಸಿತು (1881). ಈ ಪ್ರಶಸ್ತಿಗಾಗಿ ಗೊತ್ತುಪಡಿಸಿದ್ದ ಗಣಿತ ವಿಷಯವಾದರೊ ಪೂರ್ಣಾಂಕಗಳ ಐದು ವರ್ಗಗಳ ಮೊತ್ತದ ರೂಪದಲ್ಲಿರುವ ಪೂರ್ಣಾಂಕವೊಂದರ ವಿವಿಧ ನಿರೂಪಣೆಗಳು ಎಂದಿತ್ತು. ಈ ನಿರೂಪಣೆಗಳ ಸಂಖ್ಯೆಗಳನ್ನು ಕುರಿತು ಐಸೆನ್‌ಸ್ಟೈನ್ ಎಂಬ ಗಣಿತವಿದ ಸೂತ್ರಗಳನ್ನು ನೀಡಿದ್ದ. ಈ ಬಗ್ಗೆ ಎಚ್.ಜೆ.ಸ್ಮಿತ್ ಎಂಬ ಗಣಿತವಿದನೊಬ್ಬ ಸಾಧನೆಗಳ ಸ್ಥೂಲವಿವರಣೆಯನ್ನು 1867ರಲ್ಲೇ ಪ್ರಕಟಪಡಿಸಿದ್ದು ಅಕೆಡಮಿಗೆ ತಿಳಿದಿರಲಿಲ್ಲ. ಹೀಗಾಗಿ ಸ್ಮಿತ್ ತನ್ನ ವಿವರಣಾತ್ಮಕ ವಿವೇಚನೆಗಳನ್ನು ಕಳುಹಿಸಿಕೊಟ್ಟ. ಸ್ಮಿತ್ ಅಕೆಡೆಮಿಗೆ ಕಳುಹಿಸಿಕೊಟ್ಟ ಪ್ರಬಂಧದ ಅರಿವಿಲ್ಲದಿದ್ದು, ಹದಿನೆಂಟರ ಹರೆಯದ ಮಿಂಕೋವ್‌ಸ್ಕಿ, 140 ಪುಟಗಳ, ಪಾಂಡಿತ್ಯಪೂರ್ಣ ವಿವೇಚನೆಯನ್ನು ಮುಂದಿಟ್ಟ. ಇದು ಐಸೆನ್‌ಸ್ಟೈನ್ ತಿಳಿಸಿದ್ದ ಅಲ್ಲೊಂದು ಇಲ್ಲೊಂದು ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು, ಅನುಕಲ ಗುಣಾಂಕಗಳಿರುವ (integral coefficient) ಚರಗಳಲ್ಲಿ ನಿರೂಪಣೆಗೊಂಡಿರುವ ವರ್ಗಾತ್ಮಕ ರೂಪಗಳ ಇಡೀ ಸಿದ್ಧಾಂತದ ಪುನಾರಚನೆಯೇ ಆಗಿತ್ತು. ಸ್ಮಿತ್ ನೀಡಿದ ನಿರೂಪಣೆಗಿಂತಲೂ ಉತ್ತಮವಾದ ನಿರೂಪಣೆಯನ್ನು ಮಿಂಕೋವ್‌ಸ್ಕಿ ನೀಡಿದ್ದ. ಇವರೀರ್ವರ ಮೇಧಾಸಾಮರ್ಥ್ಯಗಳ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಅಕೆಡೆಮಿಗೆ ಬಲು ತ್ರಾಸದ ಕೆಲಸಗಾಗಿ ಕೊನೆಗೆ ಇಬ್ಬರಿಗೂ ಗ್ರ್ಯಾಂಡ್ ಪ್ರಿನ್ ಪ್ರಶಸ್ತಿ ನೀಡಿ ಗೌರವಿಸಿತು.

ಈತ ಕೋನಿಗ್ಸ್‌ಬರ್ಗಿನಲ್ಲಿ ಡಾಕ್ಟೊರೇಟ್ ಪದವಿ ಗಳಿಸಿದ (1885).

ವೃತ್ತಿಜೀವನ, ಸಾಧನೆಗಳು

ಬದಲಾಯಿಸಿ

ಮುಂದೆ 1894ರ ತನಕವೂ ಬಾನ್ ನಗರದಲ್ಲೇ ಬೋಧಿಸುತ್ತಿದ್ದು ಅನಂತರ ಕೋನಿಗ್ಸ್‌ಬರ್ಗಿಗೆ ಹಿಂದಿರುಗಿದ. ಅಲ್ಲಿಂದ ಮುಂದೆ (1896) ಜೂರಿಕ್ಕಿಗೆ ಹೋಗಿ 1902ರ ತನಕವೂ ಹರ್‌ವಿಟ್ಸ್‌ನ ಸಂಗಡ ಕೆಲಸಮಾಡಿದ. ಈತನ ಮತ್ತೊಬ್ಬ ಸಂಗಡಿಗ ಹಿಲ್ಬರ್ಟನಿಗೆ ಗಾಟಂಗೆನ್ನಿನಲ್ಲಿ ಪ್ರಾಧ್ಯಾಪಕ ಹುದ್ದೆ ಲಭಿಸಿತ್ತು. ಮಿಂಕೋವ್‌ಸ್ಕಿ ತನ್ನ ಅಂತ್ಯಕಾಲದ ತನಕವೂ ಗಾಟಿಂಗೆನ್ನಿನಲ್ಲೇ ಇದ್ದು ಬೋಧಿಸುತ್ತಿದ್ದ.

ಆಲ್ಬರ್ಟ್ ಐನ್‌ಸ್ಟೈನನ ಸಾಪೇಕ್ಷತಾ ಸಿದ್ಧಾಂತದ ಗಣಿತೀಯ ತಳಹದಿಯನ್ನು ಕುರಿತಂತೆ ಸಂಶೋಧನೆಗಳು ಅದರಲ್ಲೂ ವಿಶೇಷ ಸಾಪೇಕ್ಷತಾ ಸಿದ್ಧಾಂತಕ್ಕೆ ನಾಲ್ಕು ಆಯಾಮದ ಗಣಿತೀಯ ಚೌಕಟ್ಟು (ಇದು ಮಿಂಕೋವ್‌ಸ್ಕಿ ಆಕಾಶ-ಮಿಂಕೊವ್‌ಸ್ಕಿ ಸ್ಪೇಸ್ ಎಂದೇ ಪ್ರಖ್ಯಾತವಾಗಿದೆ) ಒದಗಿಸಿದ ಖ್ಯಾತಿ ಮಿಂಕೋವ್‌ಸ್ಕಿಯದು. ಆಕಾಶ ಮತ್ತು ಕಾಲವನ್ನು ಕುರಿತು ಈತ ರಚಿಸಿದ ರೌಮ್ ಊಂಡ್ ಜೀಟ್ (1907) ಎಂಬ ಗ್ರಂಥದಲ್ಲಿ ಈ ಬಗ್ಗೆ ವಿವರಗಳಿವೆ. ಸಂಖ್ಯೆಗಳನ್ನು ಕುರಿತ ಕ್ಷೇತ್ರ ಸಿದ್ಧಾಂತ ಮತ್ತು ನಿರ್ಧಾರಕ ಸಿದ್ಧಾಂತಗಳ ಬಗ್ಗೆಯೂ ಮಿಂಕೋವ್‌ಸ್ಕಿ ಕೆಲಸ ಮಾಡಿದ್ದ.

ಈತ 12 ಜನವರಿ 1909ರಲ್ಲಿ. ಗಾಟಿಂಗೆನ್ನಿನಲ್ಲಿ ಕಾಲವಾದ.

ಉಲ್ಲೇಖಗಳು

ಬದಲಾಯಿಸಿ
  1. Encyclopedia of Earth and Physical Sciences. New York: Marshall Cavendish. 1998. p. 1203. ISBN 9780761405511.
  2. "Hermann Minkowski German mathematician". Encyclopædia Britannica. Retrieved 6 January 2021.
  3. Gregersen, Erik, ed. (2010). The Britannica Guide to Relativity and Quantum Mechanics (1st ed.). New York: Britannica Educational Pub. Association with Rosen Educational Services. p. 201. ISBN 978-1-61530-383-0.
  4. Bracher, Katherine; et al., eds. (2007). Biographical Encyclopedia of Astronomers (Online ed.). New York: Springer. p. 787. ISBN 978-0-387-30400-7.
  5. "Historical note: Oskar Minkowski (1858–1931). An outstanding master of diabetes research". 2006.
  6. Oskar Minkowski (1858–1931). Archived 29 December 2013 ವೇಬ್ಯಾಕ್ ಮೆಷಿನ್ ನಲ್ಲಿ.. The Jewish genealogy site JewishGen.org (Lithuania database, registration required) contains the birth record in the Kovno rabbinical books of Hermann's younger brother Tuvia in 1868 to Boruch Yakovlevich Minkovsky and his wife Rakhil Isaakovna Taubman.

ಹೊರಗಿನ ಕೊಂಡಿಗಳು

ಬದಲಾಯಿಸಿ

Archival collections

ಬದಲಾಯಿಸಿ