ಸ್ಕೌಟ್ಸ್ ಮತ್ತು ಗೈಡ್ಸ್
ಮಕ್ಕಳು ನಾಲ್ಕು ಗೋಡೆಗಳ ನಡುವೆ ಓದು-ಬರಹಗಳನ್ನು ಕಲಿಯುವದರ ಜೊತೆಗೆ, ನಿಸರ್ಗದ ಮಡಿಲಲ್ಲಿ ಒಂದಾಗಿ ಬೆರೆತು, ಸಮನ್ವಯದಿಂದ ಬಾಳಲು ಕಲಿಯುವಂತೆ ಪ್ರೇರೇಪಿಸಲಿರುವ ಕಾರ್ಯಕ್ರಮವೇ ಸ್ಕೌಟ್ ಮತ್ತು ಗೈಡ್ ಚಳುವಳಿಯ ಮೂಲೋದ್ದೇಶ. ಪ್ರಕೃತಿಯ ಪರಿಸರದಲ್ಲಿ ನಿಂತ ಬೆಟ್ಟ, ಹರಿಯುವ ನದಿ, ಹಾರಾಡುವ ಹಕ್ಕಿ, ಅಡ್ಡಾಡುವ ಪ್ರಾಣಿಗಳು, ಸುಳಿಯುವ ಗಾಳಿ, ಇತ್ಯಾದಿಗಳನ್ನು ನೋಡಿ ಕಲಿಯುವ, ಅವುಗಳೊಡನೆ ಆಡಿ ನಲಿಯುವ ಅವಕಾಶಗಳನ್ನು ಕಲ್ಪಿಸಿಕೊಂಡು ಸ್ಕೌಟ್ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ಚಳವಳಿಯ ಹುಟ್ಟು
ಬದಲಾಯಿಸಿ೧೯೦೭ರ ಆಗಸ್ಟ್ ತಿಂಗಳಲ್ಲಿ ಇಂಗ್ಲೆಂಡ್ ದೇಶದ ಬ್ರೌನ್ ಸೀ ದ್ವೀಪದಲ್ಲಿ ಭೂಸೈನ್ಯದ ನಿವೃತ್ತ ಜನರಲ್ ರಾಬರ್ಟ್ ಬೇಡನ್ ಪೊವಲ್ ೨೦ ಹುಡಗರೊಡನೆ ಒಂದು ಪ್ರಾಯೋಗಿಕ ಶಿಬಿರದ ಮೂಲಕ ಸ್ಕೌಟ್ ಮತ್ತು ಗೈಡ್ ಚಳವಳಿಯನ್ನು ಪ್ರಾರಂಭಿಸಿದರು. ಕಿರಿಯ ವಯಸ್ಸಿನ ಮಕ್ಕಳ ಸಮುದಾಯದ ಶಕ್ತಿ-ಸಾಮರ್ಥ್ಯಗಳಿಗೆ ಸಂಘಟನೆ, ಶಿಸ್ತು ಮತ್ತು ಸೇವಾಭಾವನೆಯ ಸ್ವರೂಪವನ್ನೀಯುವದು ಅವರ ಗುರಿಯಾಗಿತ್ತು. ಇದರಲ್ಲಿ ಜಯಶೀಲರಾದ ಪೊವಲ್ ಸ್ಕೌಟಿಂಗ್ ಫಾರ್ ಬಾಯ್ಸ್ ಎಂಬ ಹೆಸರಿನ ಪುಸ್ತಕದಲ್ಲಿಈ ಶಿಬಿರದ ಸಫಲತೆಯನ್ನು ವಿವರಿಸಿ ಪ್ರಕಟಿಸಿದರು.
ಹುಡುಗರ ಕಾರ್ಯ-ಚಟುವಟಿಕೆಗಳನ್ನು ಗಮನಿಸಿ ಪ್ರಭಾವಿತರಾದ ಹುಡುಗಿಯರೂ ೧೯೧೦ರಲ್ಲಿ ಸ್ಕೌಟ್ ಹುಡುಗರ ಸಮವಸ್ತ್ರಗಳನ್ನು ಧರಿಸಿಕೊಂಡು ಕ್ರಿಸ್ಟಲ್ ಪ್ಯಾಲೆಸ್ ರೇಲಿಯನ್ನು ನಡೆಸಿ, ಆ ಮೂಲಕ ತಮಗೂ ಸ್ಕೌಟ್ ಚಳವಳಿಯಲ್ಲಿ ಭಾಗವಹಿಸುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಪೊವೆಲರು ತಮ್ಮ ಸೋದರಿ ಏಗ್ನೆಸ್ ಪೊವೆಲರ ಸಹಾಯದೊಡನೆ ಹುಡುಗಿಯರ ಸ್ಕೌಟ್ ಆರಂಭಿಸಲು ನಿರ್ಧರಿಸಿದರು.
ಬೆಳೆವಣಿಗೆ
ಬದಲಾಯಿಸಿಪೊವೆಲರ ಕಾರ್ಯಕ್ರಮಗಳು ಜಗತ್ತಿನಾದ್ಯಂತ ಅನ್ವಯವಾಗುವ ತತ್ವಗಳಿಂದ ಕೂಡಿರುವದರಿಂದ ಯುವಜನಾಂಗಕ್ಕೆ ಬಹುಬೇಗನೆ ಹಿಡಿಸಿತು. ಕಿರಿಯರ ಉತ್ಸಾಹ ಮತ್ತು ಸಾಹಸಭರಿತ ಅಪೇಕ್ಷೆಗಳನ್ನು ಪೂರೈಸಲು ಸರಳವಾಗಿರುವ ಚಟುವಟಿಕೆಗಳು ಸಮಾಜದ ಹಿರಿಯ-ಕಿರಿಯರೆಲ್ಲರ ಮನಸ್ಸನ್ನು ಗೆದ್ದವು. ಸಭ್ಯ ಸಮಾಜ ನಿರ್ಮಾಣಕ್ಕೆ ಸ್ಕೌಟ್ ಮತ್ತು ಗೈಡ್ ಚಳವಳಿ ಒಂದು ಪರಿಣಾಮಕಾರಿ ಮಾರ್ಗವೆಂದು ಎಲ್ಲರಿಗೂ ಮನವರಿಕೆಯಾಯಿತು. ಹೀಗಾಗಿ, ಇಂದು ಪ್ರಪಂಚಾದಾದ್ಯಂತ ೨೧೬ ರಾಷ್ಟ್ರಗಳ ಸುಮಾರು ೩೦ ಲಕ್ಷ ಜನರು ಸ್ಕೌಟ್ ಮತ್ತು ಗೈಡ್ ಚಳವಳಿಯ ಸದಸ್ಯರಾಗಿದ್ದಾರೆ. ೧೫೧ ದೇಶಗಳಲ್ಲಿ ಅಂತರ್ರಾಷ್ಟ್ರೀಯ ಮನ್ನಣೆ ಪಡೆದ ರಾಷ್ಟ್ರೀಯ ಸ್ಕೌಟ್ ಸಂಸ್ಥೆಗಳಿವೆ.
ವಿಶ್ವ ಸ್ಕೌಟ್ ಮತ್ತು ಗೈಡ್ ಸಂಸ್ಥೆ
ಬದಲಾಯಿಸಿವಿಶ್ವ ಸ್ಕೌಟ್ ಸಂಸ್ಥೆ ಗೆ ಆರು ವಲಯಗಳಿವೆ: ೧. ಆಫ್ರಿಕಾ ೨. ಅರಬ್ ೩. ಏಶಿಯಾ ಪೆಸಿಫಿಕ್ ೪. ಯುರೇಶಿಯಾ ೫. ಯೂರೋಪ್ ಮತ್ತು ೬. ಅಂತರ ಅಮೆರಿಕಾ.
ವಿಶ್ವ ಗೈಡ್ ಸಂಸ್ಥೆಗೆ ಐದು ವಲಯಗಳಿವೆ: ೧. ಆಫ್ರಿಕಾ ೨. ಅರಬ್ ೩. ಏಶಿಯಾ ಪೆಸಿಫಿಕ್ ೪. ಯೂರೋಪ್ ಮತ್ತು ೫. ಪಶ್ಚಿಮಾರ್ಧ ಗೋಳ.
ಟೆಂಪ್ಲೇಟು:Infobox WorldScouting
ಭಾರತದಲ್ಲಿ ಮೊದಲ ಬಾರಿಗೆ ಸ್ಕೌಟ್ ಚಟುವಟಿಕೆ ಆರಂಭವಾದದು ೧೯೦೯ರಲ್ಲಿ. ನಿವೃತ್ತ ಕ್ಯಾಪ್ಟನ್ ಟಿ ಎಚ್ ಬೇಕರ್ ಎಂಬವರು ಬೆಂಗಳೂರಿನ ಬಿಶಪ್ ಕಾಟನ್ ಶಾಲೆಯಲ್ಲಿ ಒಂದು ಬಾಯ್ ಸ್ಕೌಟ್ ತಂಡದ ರೂಪದಲ್ಲಿ ಆರಂಭಿಸಿದರು. ಮುಂದೆರಡು ವರ್ಷಗಳಲ್ಲಿ ಜಬಲ್ಪುರದಲ್ಲಿ ಲೆಫ್ಟಿನಂಟ್ ಕರ್ನಲ್ ಪಕೆನ್‌ಹೆಮ್ ವಾಲ್ಶ್ ಎಂಬವರು ಮತ್ತು ಪುಣೆಯ ಸಮೀಪದ ಕರ್ಕಿಯಲ್ಲಿ ಕ್ಯಾಪ್ಟನ್ ಟಾಡ್ ಅವರೂ ಅಂಥ ಸ್ಕೌಟ್ ತಂಡಗಳನ್ನು ಶುರುಮಾಡಿದರು. ಶಿಮ್ಲಾ, ಚೆನ್ನೈ, ಲೋನ್‌ವಾಲಾ (ಮುಂಬಯಿ)ಗಳಲ್ಲೂ ಆರಂಭವಾದ ಈ ಸಂಸ್ಥೆಗಳು ಲಂಡನಿನ ಇಂಪೀರಿಯಲ್ ಪ್ರಧಾನ ಕಛೇರಿಯಲ್ಲಿ ನೋಂದಿತವಾದವು. ಈ ತಂಡಗಳಲ್ಲಿ ಐರೋಪ್ಯ ಮತ್ತು ಆಂಗ್ಲೋ-ಇಂಡಿಯನ್ ಹುಡುಗರಿಗೆ ಮಾತ್ರ ಭಾಗಿಯಾಗುವ ಅವಕಾಶವಿತ್ತು.
೧೯೧೭ರ ಮಾರ್ಚ್ ೨೧ರಂದು ಭಾರತದಲ್ಲಿ ದೇಶೀಯ ಮಕ್ಕಳಿಗೆ ಸ್ಕೌಟ್ ಚಳವಳಿ ಅಧಿಕೃತವಾಗಿ ಶುರುವಾಯಿತು. ರಾಷ್ಟ್ರೀಯ ನಾಯಕರಾದ ಪಂಡಿತ ಮದನ ಮೋಹನ ಮಾಳವೀಯ, ಪಂಡಿತ ಹೃದಯನಾಥ ಕುಂಜ್ರು ಮತ್ತು ಪಂಡಿತ ಶ್ರೀರಾಮ್ ಬಾಜಪೈ ಸೇರಿ ಸೇವಾ ಸಮಿತಿ ಸ್ಕೌಟ್ ಎಸೋಸಿಯೇಶನನ್ನು ಸ್ಥಾಪಿಸಿದರು. ಇದರ ಪ್ರಧಾನ ಕಛೇರಿ ಅಲಹಾಬಾದಿನಲ್ಲಿತ್ತು. ಶ್ರೀ ಜಾರ್ಜ್ ಎಸ್ ಅರುಂಡೇಲರ ಸಹಯೋಗದಲ್ಲಿ ಡಾ ಅನ್ನಿ ಬೆಸೆಂಟ್ ಚೆನ್ನೈಯಲ್ಲಿ ಸ್ಕೌಟ್ ಎಸೊಸಿಯೇಶನ್ ಫಾರ್ ಇಂಡಿಯನ್ ಬಾಯ್ಸ್ ಎಂಬ ಸಂಸ್ಥೆಯನ್ನು ಆರಂಭಿಸಿದರು. ಕ್ರಮೇಣ ದೇಶದ ನಾನಾ ಭಾಗಗಳಲ್ಲಿ ಅನೇಕ ತಂಡಗಳು ಹುಟ್ಟಿಕೊಳ್ಳಲಾರಂಭಿಸಿದವು. ಹುಡುಗರಿಗೆ ಸ್ಕೌಟ್ ಇದ್ದ ಹಾಗೆ ಹುಡುಗಿಯರಿಗೆ ಗೈಡ್ ಸಂಘಟನೆಗಳೂ ಆರಂಭವಾದವು. ಬಾಯ್ ಸ್ಕೌಟ್ಸ್ ಎಸೋಸಿಯೇಶನ್ ಆಫ್ ಇಂಡಿಯ, ಇಂಡಿಯನ್ ಬಾಯ್ ಸ್ಕೌಟ್ಸ್ ಎಸೋಸಿಯೇಶನ್, ಹಿಂದುಸ್ತಾನ್ ಸ್ಕೌಟ್ಸ್ ಎಸೋಸಿಯೇಶನ್, ದ ಗರ್ಲ್ಸ್ ಗೈಡ್ ಎಸೋಸಿಯೇಶನ್, ಮೊದಲಾದ ಅನೇಕ ಸಂಘಟನೆಗಳು ಹುಟ್ಟಿಕೊಂಡವು.
ಏಕೀಕರಣ
ಬದಲಾಯಿಸಿ೧೯೨೧ ಮತ್ತು ೧೯೩೭ರಲ್ಲಿ ಪೊವೆಲರು ಭಾರತಕ್ಕೆ ಭೇಟಿ ನೀಡಿದಾಗ ಇಲ್ಲಿದ್ದ ಎಲ್ಲಾ ಸ್ಕೌಟ್ ಸಂಘಟನೆಗಳನ್ನು ಒಂದುಗೂಡಿಸಲು ಪ್ರಯತ್ನಿದರು. ಆದರೆ ಅವರಿಗೆ ಇದರಲ್ಲಿ ಸಫಲತೆ ದೊರೆಯಲಿಲ್ಲ. ಇದಕ್ಕೆ ಈ ಚಳವಳಿಯ ಒಂದು ಮುಖ್ಯ ಅಂಗವಾದ ಪ್ರಮಾಣ ವಚನದಲ್ಲಿ "ಚಕ್ರವರ್ತಿಗೆ ಕರ್ತವ್ಯಬದ್ಧರಾಗಿರುವೆವು" ಎಂಬ ವಾಕ್ಯಾಂಶ ಕಾರಣವಾಗಿತ್ತು. ರಾಷ್ಟ್ರಾಭಿಮಾನಿ ನಾಯಕರಲ್ಲಿದ್ದ ದೇಶಭಕ್ತಿಭಾವನೆಗಳು ಬ್ರಿಟಿಶ್ ಚಕ್ರಾಧಿಪತ್ಯಕ್ಕೆ ವಿಧೇಯತೆಯನ್ನು ತೋರುವದನ್ನು ಒಪ್ಪಲಿಲ್ಲ. ಬದಲು "ಭಾರತಮಾತೆಗೆ ನಿಷ್ಠೆಯಿಂದ ವಿಧೇಯರಾಗಿರುವೆವು" ಎಂಬ ವಾಕ್ಯಾಂಶವನ್ನು ಸೇರಿಸುವ ಒತ್ತಾಯ ಮಾಡಲಾಯಿತು.
ಸ್ವಾತಂತ್ರ್ಯದ ನಂತರ ೧೯೫೦ರ ನವಂಬರ್ ೨೭ರಂದು ಈ ಎಲ್ಲಾ ಸಂಘಟನೆಗಳನ್ನು ಒಟ್ಟುಗೂಡಿಸಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಆರ್ಗನೈಸೇಶನ್ ರೂಪುಗೊಂಡಿತು. ೧೯೫೧ರ ಆಗಸ್ಟ್ ೧೫ರಂದು ‘ದ ಗರ್ಲ್ಸ್ ಗೈಡ್ ಎಸೋಸಿಯೇಶನ’ನ್ನು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಆರ್ಗನೈಸೇಶನ್ನಿಗೆ ವಿಧ್ಯುಕ್ತವಾಗಿ ಸೇರಿಸಲ್ಪಟ್ಟಿತು.
ಇಂದು ಭಾರತದಲ್ಲಿ ೨೮,೮೬, ೪೬೦ ಸ್ಕೌಟ್ ಮತ್ತು ೧೫೨೪೮೦೦ ಗೈಡ್‌ಗಳಿದ್ದಾರೆ.(೧ನೇ ಡಿಸೆಂಬರ್ ೨೦೧೦ರ ಗಣತಿಯ ಪ್ರಕಾರ) [೧]
ನಿಯಮಾವಳಿ
ಬದಲಾಯಿಸಿಸೊಸೈಟಿಗಳ ನೋಂದಾವಣೆ ನಿಬಂಧನೆಗಳ ಅನ್ವಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನೋಂದಾಯಿತ ಸಂಘವಾಗಿದೆ. ಇದು ಸಂಪೂರ್ಣವಾಗಿ ಸ್ವ-ಇಚ್ಛಿತ, ರಾಜಕೀಯೇತರ, ಜಾತ್ಯಾತೀತ ಸಂಸ್ಥೆ.
೧೯೬೩ರವರೆಗೆ ಇದರ ರಾಷ್ಟ್ರೀಯ ಪ್ರಧಾನ ಕಾರ್ಯಾಲಯವು ನವದೆಹಲಿಯ ಕನಾಟ್ ಪ್ಲೇಸ್‌ನಲ್ಲಿರುವ ರೀಗಲ್ ಬಿಲ್ಡಿಂಗಿನಲ್ಲಿತ್ತು. ಬಳಿಕ ಇದು ತನ್ನದೇ ಕಟ್ಟಡವನ್ನು ಪಡೆದು, ನವದೆಹಲಿಯ ಮಹಾತ್ಮಾ ಗಾಂಧೀ ಮಾರ್ಗದಲ್ಲಿರುವ ಇಂದ್ರಪ್ರಸ್ಥ ಎಸ್ಟೇಟಿನ ಲಕ್ಷ್ಮೀ ಮಜುಮ್ದಾರ್ ಭವನದಲ್ಲಿ ಕಾರ್ಯಾಲಯವನ್ನು ಹೊಂದಿದೆ. ರಾಷ್ಟ್ರಪತಿಗಳು ಈ ಸಂಸ್ಥೆಯ ಪ್ರಧಾನ ಪೊಷಕರಾಗಿರುವರಲ್ಲದೆ, ಪೋಷಕರಾಗಿ ಉಪರಾಷ್ಟ್ರಪತಿಗಳಿರುವರು.
೧೯೧೭ರಲ್ಲಿ ಸ್ಕೌಟ್ ಚಳವಳಿ ಕರ್ನಾಟಕದಲ್ಲಿ ಪ್ರಾರಂಭವಾಯಿತು. ‘ದ ಬಾಯ್ಸ್ ಸ್ಕೌಟ್ಸ್ ಆಫ್ ಮೈಸೂರ್’ ಎಂಬ ಹೆಸರಿನ ಸಂಸ್ಥೆಗೆ ಅಂದಿನ ಮಹಾರಾಜರಾಗಿದ್ದ ಶ್ರೀ ಕೃಷ್ಣದೇವರಾಜ ಒಡೆಯರ್ ಪೋಷಕರಾಗಿದ್ದರು. ಅವರ ಸೋದರ ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ರಾಜ್ಯ ಮುಖ್ಯಸ್ಥರಾಗಿದ್ದರು. ತಮ್ಮ ಆಡಳಿತದ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸ್ಕೌಟ್ ಚಟುವಟಿಕೆಗಳನ್ನು ಆರಂಭಿಸಬೇಕೆಂದು ಮಹಾರಾಜರು ೧೯೧೭ರ ಅಕ್ಟೋಬರ್ ೩ರಂದು ರಾಜಾಜ್ಞೆಯನ್ನು ಹೊರಡಿಸಿದರು. ಶ್ರೀ ಜಯಚಾಮರಾಜ ಒಡೆಯರರೂ ಬಾಲಕರಾಗಿದ್ದಾಗ ಸ್ಕೌಟಿನಲ್ಲಿ ಮುಖ್ಯ ಕಬ್ ಆಗಿದ್ದರು.
ನಂತರ ೧೯೨೭ರಲ್ಲಿ ‘ದ ಬಾಯ್ಸ್ ಸ್ಕೌಟ್ಸ್ ಆಫ್ ಮೈಸೂರ್’ ಸಂಸ್ಥೆಯ ಸೋದರ ಸಂಸ್ಥೆಯಾಗಿ ‘ದ ಗರ್ಲ್ ಗೈಡ್ಸ್ ಆಫ್ ಮೈಸೂರ್’ ಎಂಬುದು ಸ್ಥಾಪನೆಯಾಯಿತು. ಇವೆರಡೂ ಸ್ವತಂತ್ರವಾಗಿಯೇ ಕಾರ್ಯ ನಿರ್ವಹಿಸುತ್ತಿದ್ದು, ೧೯೫೧ರಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಘಟನೆಯೊಂದಿಗೆ ವಿಲೀನವಾಯಿತು.
ಕರ್ನಾಟಕದಲ್ಲಿ ೨೦೦೮-೦೯ರ ಗಣತಿಯಂತೆ ೧,೬೧,೮೨೧ ಸ್ಕೌಟ್ಸ್ ಮತ್ತು ೧,೦೬,೭೭೯ ಗೈಡ್ಸ್ (ಒಟ್ಟು ೨,೬೮,೬೦೦) ಇದ್ದಾರೆ. ಇದರಲ್ಲಿ ಕೇಂದ್ರೀಯ ವಿದ್ಯಾಲಯ ಸಂಘಟನೆ, ನವೋದಯ ವಿದ್ಯಾ ಸಮಿತಿ ಮತ್ತು ರೈಲ್ವೇ ಇಲಾಖೆಯ ಸದಸ್ಯರು ಸೇರಿಲ್ಲ.
ಅಭಿವೃದ್ಧಿ
ಬದಲಾಯಿಸಿ೧೯೬೪ರಿಂದ ೧೯೮೨ರವರೆಗೆ ರಾಜ್ಯ ಮುಖ್ಯ ಆಯುಕ್ತರಾಗಿದ್ದ ಶ್ರೀ ಕೊಂಡಜ್ಜಿ ಬಸಪ್ಪನವರ ನೇತೃತ್ವದಲ್ಲಿ ದೊಡ್ಡ ಪ್ರಮಾಣದ ಅಭಿವೃದ್ಧಿ ಕಾರ್ಯಗಳು ನಡೆದವು. ದೊಡ್ಡಬಳ್ಳಾಪುರದ ಬಳಿ ಇರುವ ಬೆಸೆಂಟ್ ಪಾರ್ಕ್ ಗಮನಾರ್ಹ ಏಳಿಗೆಯನ್ನು ಕಂಡಿತಲ್ಲದೆ, ದಾವಣಗೆರೆ ಸಮೀಪದಲ್ಲಿ ತರಬೇತಿ ಶಿಬಿರದ ಸ್ಥಾಪನೆಯೂ ಆಯಿತು.
ಉಲ್ಲೇಖ
ಬದಲಾಯಿಸಿ- ↑ "Triennal review: Census as at 1 December 2010". World Organization of the Scout Movement.
ಕೊಂಡಿಗಳು
ಬದಲಾಯಿಸಿhttp://www.bsgindia.org/membership.htm Archived 2007-05-20 ವೇಬ್ಯಾಕ್ ಮೆಷಿನ್ ನಲ್ಲಿ.. http://scout.org/en/content/download/22261/199900/file/Census.pdfArchived 2013-09-02 ವೇಬ್ಯಾಕ್ ಮೆಷಿನ್ ನಲ್ಲಿ..