|ಬೊಲಿವಾರ್ ಕಾಲ್ಪನಿಕ ಚಿತ್ರ ಸಿಮೋನ್ ಯೋಸೆ ಆಂಟೊನಿಯೊ ಡಿ ಲಾ ಸಾಂತೀಸಿಮಾ ಟ್ರಿನಿಡಾಡ್ ಬೊಲಿವಾರ್ ಇ ಪಾಂಟೆ ಪಲೇಸಿಯೊಸ್ ಇ ಬ್ಲಾಂಕೊ (ಜನನ ಜುಲೈ ೨೪, ೧೭೮೩ ವೆನೆಜುವೆಲಾ ದೇಶದ ಕರಾಕಸ್ ನಗರ; ಮರಣ ಡಿಸೆಂಬರ್ ೧೭, ೧೮೩೦, ಕೊಲಂಬಿಯಾ ದೇಶದ ಸಾಂತಾ ಮಾರ್ತಾ ನಗರ) ದಕ್ಷಿಣ ಅಮೇರಿಕದ ಹಲವು ಸ್ವಾತಂತ್ರ್ಯ ಚಳುವಳಿಗಳ ನಾಯಕತ್ವ ವಹಿಸಿದ್ದನು. ಇವುಗಳನ್ನು ಒಟ್ಟಾಗಿ ಬೊಲಿವಾರ್ ಯುದ್ಧ ಎಂದು ಕರೆಯಲಾಗುತ್ತದೆ. ವೆನೆಜುವೆಲಾ, ಕೊಲಂಬಿಯಾ, ಈಕ್ವೆಡಾರ್, ಪೆರು, ಪನಾಮ, ಮತ್ತು ಬೊಲಿವಿಯಾ ದೇಶಗಳ ಸ್ವಾತಂತ್ರ್ಯ ಸಂಗ್ರಾಮಗಳ ನಾಯಕತ್ವ ವಹಿಸಿದ್ದ ಇವನನ್ನು ಈ ದೇಶಗಳಲ್ಲಿ ಶ್ರೇಷ್ಠ ನಾಯಕನೆಂದು ಪರಿಗಣಿಸಲಾಗುತ್ತದೆ. ಇವನನ್ನು ಎಲ್ ಲಿಬರ್ಟಡೊರ್ ("ವಿಮೋಚಕ") ಎಂದು ಕರೆಯಲಾಗುತ್ತದೆ.

Bolívar en Carabobo.jpg

ಕುಟುಂಬ ಮತ್ತು ಬಾಲ್ಯಸಂಪಾದಿಸಿ

ದಕ್ಷಿಣ ಅಮೇರಿಕದ ಬಂಗಾರ ಮತ್ತು ಕಂಚಿನ ಅದಿರುಗಳ ಗಣಿಗಾರಿಕೆ ಮಾಡುತ್ತಿದ್ದ ಶ್ರೀಮಂತ ಮನೆತನವೊಂದರಲ್ಲಿ ಜನ್ಮ ತಾಳಿದ ಬೊಲಿವಾರ್, ನಂತರ ಈ ಐಶ್ವರ್ಯವನ್ನು ಖಂಡದ ದೇಶಗಳ ಸ್ವಾತಂತ್ರ್ಯ ಸಂಗ್ರಾಮಗಳನ್ನು ನಡೆಸಲು ಬಳಸಿದನು.

ಎಲ್ ಲಿಬರ್ಟದೊರ್ (ವಿಮೋಚಕ)ಸಂಪಾದಿಸಿ

 
ಕರಾಕಸ್ ನಗರದಲ್ಲಿರುವ ಬೊಲಿವಾರ್ ಪ್ರತಿಮೆ

೧೮೦೭ರಲ್ಲಿ ನೆಪೋಲಿಯನ್, ಜೋಸೆಫ್ ಬೊನಾಪಾರ್ಟೆಯನ್ನು ಸ್ಪೇನ್ ಮತ್ತು ಅದರ ವಸಾಹತುಗಳ ರಾಜನನ್ನಾಗಿ ನೇಮಿಸಿದಾಗ ಬೊಲಿವಾರ್ ಪ್ರತಿರೋಧ ಚಳುವಳಿಗಳಲ್ಲಿ ಭಾಗಿಯಾದನು. ಕರಾಕಸ್ ಜಂತಾ (ಹೂಂತಾ - ಕ್ಷಿಪ್ರ ಕ್ರಾಂತಿಯ ನಂತರ ಸ್ವಲ್ಪ ಕಾಲ ಆಡಳಿತ ನಡೆಸುವ ಗುಂಪು) ೧೮೧೦ರಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡು ಬೊಲಿವಾರ್‌ನನ್ನು ರಾಜತಾಂತ್ರಿಕ ಉದ್ದೇಶಕ್ಕೆ ಬ್ರಿಟನ್ನಿಗೆ ಕಳುಹಿಸಲಾಯಿತು. ವೆನೆಜುವೆಲಾಕ್ಕೆ ಬೊಲಿವಾರ್ ೧೮೧೧ರಲ್ಲಿ ಹಿಂದಿರುಗಿದ ಮರು ವರ್ಷ ಜಂತಾ ನಾಯಕ ಫ್ರಾನ್ಸಿಸ್ಕೊ ಡಿ ಮಿರಾಂಡಾ ಸ್ಪಾನಿಷ್ ಸೇನೆಗೆ ಶರಣಾಗತನಾದ ನಂತರ ಬೊಲಿವಾರ್ ಕಾರ್ಟಾಜಿನ ಪ್ರದೇಶಕ್ಕೆ ಓಡಿ ಹೋಗಬೇಕಾಯಿತು.

೧೮೧೩ರಲ್ಲಿ "ಹೊಸ ಗ್ರನಾಡಾ" ಸೇನಾಧಿಪತ್ಯವನ್ನು ವಹಿಸಿದ ನಂತರ ಮೇ ೧೪ರಂದು ವೆನೆಜುವೆಲಾ ಮೇಲೆ ದಾಳಿ ಮಾಡಿ ಹಲವು ಪ್ರದೇಶಗಳನ್ನು ಸ್ಪೇನ್ ಹಿಡಿತದಿಂದ ಬಿಡಿಸಿದ ಮೇಲೆ ಅವನನ್ನು ಎಲ್ ಲಿಬರ್ಟಡೊರ್ (ಸ್ಪಾನಿಷ್ ಸೇನೆಯಿಂದ ಬಿಡಿಸಿದ ವಿಮೋಚಕ) ಎಂದು ಬಣ್ಣಿಸಲಾಯಿತು. ನಂತರ ೧೮೧೪ರಲ್ಲಿ ಕೊಲಂಬಿಯಾ ರಾಷ್ಟ್ರವಾದಿಗಳ ಜೊತೆಗೂಡಿ ಬೊಗೊಟ ನಗರವನ್ನು ಬಿಡಿಸಿದನು. ಸೆಪ್ಟೆಂಬರ್ ೭, ೧೮೨೧ರಂದು ಈಗಿನ ಕಾಲದ ವೆನೆಜುವೆಲಾ, ಕೊಲಂಬಿಯಾ, ಪನಾಮ, ಮತ್ತು ಈಕ್ವೆಡಾರ್ ದೇಶಗಳನ್ನೊಳಗೊಂಡ "ಗರಿಷ್ಠ ಕೊಲಂಬಿಯಾ ಗಣರಾಜ್ಯ" ಒಕ್ಕೂಟದ ಸ್ಥಾಪನೆಯಾಗಿ ಬೊಲಿವಾರ್ ಅದರ ರಾಷ್ಟ್ರಪತಿಯಾದನು.

೧೮೨೧ರಲ್ಲಿ ಸ್ಪಾನಿಷ್ ಹಿಡಿತದಿಂದ ಪೆರು ದೇಶವನ್ನು ಸಂಪೂರ್ಣವಾಗಿ ಮುಕ್ತಗೊಳಿಸಿದ ನಂತರ ೧೮೨೪ರಲ್ಲಿ ಪೆರುವಿನ ಸಂಸತ್ತು ಬೊಲಿವಾರ್‌ನನ್ನು ಸರ್ವಾಧಿಕಾರಿಯನ್ನಾಗಿ ನಾಮಕರಣ ಮಾಡಿತು. ಇದರಿಂದ ಬೊಲಿವಾರ್ ಪೆರು ದೇಶದ ರಾಜಕೀಯ ಮತ್ತು ಸೇನಾಡಳಿತವನ್ನು ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಾಯಿತು. ಆಗಸ್ಟ್ ೬, ೧೮೨೫ರಲ್ಲಿ ಪೆರು ದೇಶದಿಂದ ಬೊಲಿವಿಯಾ ಗಣರಾಜ್ಯವನ್ನು ಬೊಲಿವಾರ್ ಗೌರವಾರ್ಥವಾಗಿ ಸ್ಥಾಪಿಸಲಾಯಿತು.

ಈ ಎಲ್ಲ ದೇಶಗಳ ಸ್ವಾತಂತ್ರ್ಯದ ನಂತರ ಗರಿಷ್ಠ ಕೊಲಂಬಿಯಾದ ಹಿಡಿತ ತೆಗೆದುಕೊಳ್ಳಲು ಬೊಲಿವಾರ್‌ಗೆ ಕಷ್ಟವಾಯಿತು. ಇದರ ಕಾರಣ ಆಂತರಿಕ ಗುಂಪುಗಾರಿಕೆ ಮತ್ತು ಭಿನ್ನಮತ. ಇದನ್ನು ತಡೆಯಲು, ಹಾಗೂ ಗರಿಷ್ಠ ಕೊಲಂಬಿಯಾದ ಒಗ್ಗಟ್ಟನ್ನು ಉಳಿಸಲು ೧೮೨೮ರಲ್ಲಿ ಸಾಂವಿಧಾನಿಕ ಸಮಾವೇಶವನ್ನು ಕರೆದನು. ಗರಿಷ್ಠ ಕೊಲಂಬಿಯಾದಲ್ಲಿ ಕೇಂದ್ರಾಡಳಿತವನ್ನು ತಂದು ಆಜೀವ ರಾಷ್ಟ್ರಾಧ್ಯಕ್ಷರನ್ನು ನೇಮಕ ಮಾಡುವ ಬೊಲಿವಾರ್ ಯೋಜನೆಯನ್ನು ಹಲವಾರು ಪ್ರಾದೇಶಿಕ ನಾಯಕರು ವಿರೋಧಿಸಿದರು. ಇದರಿಂದ ಅತೃಪ್ತನಾದ ಬೊಲಿವಾರ್ ಒಕ್ಕೂಟವನ್ನು ಉಳಿಸಲು ಆಗಸ್ಟ್ ೨೭ ೧೮೨೮ರಂದು ತನ್ನನ್ನು ಸರ್ವಾಧಿಕಾರಿಯನ್ನಾಗಿ ಘೋಷಿಸಿಕೊಂಡನು. ಒಗ್ಗಟ್ಟನ್ನು ಉಳಿಸುವ ಸಲುವಾಗಿ ಇದು ತಾತ್ಕಾಲಿಕ ಪರಿಹಾರವೆಂದು ಹೇಳಿಕೊಂಡರೂ ಅವನ ರಾಜಕೀಯ ವಿರೋಧಿಗಳು ಇದರಿಂದ ಕುಪಿತರಾಗಿ ಬೊಲಿವಾರ್ ಹತ್ಯೆಯ ಪ್ರಯತ್ನವೂ ನಡೆಯಿತು. ಇದರಿಂದ ಬೊಲಿವಾರ್ ದೈಹಿಕವಾಗಿ ಸಮರ್ಥನಾಗಿದ್ದರೂ ಮಾನಸಿಕವಾಗಿ ಕುಗ್ಗಿ ಹೋದನು. ಇದರ ನಂತರ ಹೊಸ ಗ್ರನಾಡಾ, ವೆನೆಜುವೆಲಾ, ಮತ್ತು ಈಕ್ವೆಡಾರ್ ದೇಶಗಳಲ್ಲಿ ಹಲವಾರು ಅಸಮಾಧಾನದ ಕಿಡಿಯನ್ನು ಹೊತ್ತಿಸಿ ಸರಕಾರದ ವಿರುದ್ಧ ತಿರುಗಿಬಿದ್ದರು.

ಸಾವುಸಂಪಾದಿಸಿ

ಕೊನೆಗೆ ಬೊಲಿವಾರ್ ಏಪ್ರಿಲ್ ೨೭, ೧೮೩೦ರಂದು ರಾಷ್ಟ್ರಾಧ್ಯಕ್ಷ ಪದವಿಗೆ ರಾಜೀನಾಮೆ ನೀಡಿ ಯೂರೋಪಿನಲ್ಲಿ ನೆಲೆಯೂರಲು ಯೋಜನೆ ಹೊಂದಿದ್ದನು. ಆದರೆ ಪ್ರಯಾಣಕ್ಕೆ ಮುಂಚೆಯೇ ಕ್ಷಯರೋಗ (ಟಿ ಬಿ)ದೊಂದಿಗೆ ಸೆಣೆಸಲಾರದೇ ಡಿಸೆಂಬರ್ ೧೭, ೧೮೩೦ರಂದು ಅಸುನೀಗಿದನು.

ಟಿಪ್ಪಣಿಸಂಪಾದಿಸಿ

  • ಬೊಲಿವಾರ್ ೧,೨೩,೦೦೦ ಕಿ.ಮಿ ಪ್ರಯಾಣ ಮಾಡಿದನು. ಇದು ಕ್ರಿಸ್ಟೊಫರ್ ಕೊಲಂಬಸ್ ಮತ್ತು ವಾಸ್ಕೊ ಡ ಗಾಮ ಇಬ್ಬರ ಯಾನವನ್ನು ಸೇರಿಸಿದರೆ ಅದಕ್ಕಿಂತ ಹೆಚ್ಚು.
  • ಅಧಿಕೃತವಾಗಿ ನಾಲ್ಕು ದೇಶಗಳ ರಾಷ್ಟ್ರಾಧ್ಯಕ್ಷ: ಬೊಲಿವಿಯಾ, ಕೊಲಂಬಿಯಾ, ಪೆರು, ಮತ್ತು ವೆನೆಜುವೆಲಾ

ಇವುಗಳನ್ನೂ ನೋಡಿಸಂಪಾದಿಸಿ

ಹೊರಗಿನ ಸಂಪರ್ಕಗಳುಸಂಪಾದಿಸಿ