ಸಿಟ್ರಿಕ್ ಆಮ್ಲ
ಸಿಟ್ರಿಕ್ ಆಮ್ಲ ಒಂದು ಇಂಗಾಲ ಸಂಯುಕ್ತ. ಇದರ ರಾಸಾಯನಿಕ ಸೂತ್ರ HOC(CO2H)(CH2CO2H)2.[೧] ಇದು ಒಂದು ವರ್ಣರಹಿತ, ದುರ್ಬಲ ಸಾವಯವ ಆಮ್ಲ.
ತಯಾರಿಕೆಸಂಪಾದಿಸಿ
ಕಿತ್ತಳೆ, ನಿಂಬೆ, ಅನಾನಸ್ ವರ್ಗದ ಹುಳಿ ಹಣ್ಣುಗಳಲೆಲ್ಲಾ ಸಿಟ್ರಿಕ್ ಆಮ್ಲಾಂಶವಿದೆ. ಬಹು ಕಾಲದವರೆಗೂ ಸಿಟ್ರಿಕ್ ಆಮ್ಲ ತಯಾರಿಕೆಗೆ ಈ ಹಣ್ಣುಗಳ ರಸಗಳೇ ಆಧಾರವಾಗಿದ್ದವು. ಈ ಹಣ್ಣುಗಳನ್ನು ಹೇರಳವಾಗಿ ಬೆಳೆಯುವ ಇಟಲಿ, ಅಮೆರಿಕದ ಕ್ಯಾಲಿಫೋರ‍್ನಿಯ ಮತ್ತು ಹವಾಯ್ ದ್ವೀಪಗಳು ಸಿಟ್ರಿಕ್ ಆಮ್ಲ ಉತ್ಪಾದನೆಯಲ್ಲಿ ಅಗ್ರಸ್ಥಾನ ಪಡೆದಿದ್ದವು. ಕಚ್ಚಾ ನಿಂಬೆ, ಕಿತ್ತಳೆಯ ಕೆಳದರ್ಜೆಯ ಹುಳಿ ಹಣ್ಣುಗಳು, ಅನಾನಸ್ ಹಣ್ಣಿನ ಮುಖ್ಯ ತಿರುಳಿನ ಗಾಲಿಗಳನ್ನು ಪ್ರತ್ಯೇಕಿಸಿದ ಮೇಲೆ ಉಳಿಯುವ ಚೂರುಗಳು ಇವೆಲ್ಲವನ್ನೂ ಹಿಂಡಿ, ಕಚ್ಚಾರಸವನ್ನು ಕೆಲದಿನಗಳು ಹುಳಿ ಹಿಡಿಯಲು ಹಾಗೇ ಬಿಡುವುದು ಮೊದಲ ಹಂತ. ಅನಂತರ ರಸವನ್ನು ಶೋಧಿಸಿ ತಿಳಿರಸಕ್ಕೆ ಶುದ್ಧವಾದ ಸುಣ್ಣಕಲ್ಲಿನ ಪುಡಿಯನ್ನು (ಕ್ಯಾಲ್ಸಿಯಂ ಕಾರ್ಬೋನೇಟ್) ಬೆರೆಸಿದರೆ ಕ್ಯಾಲ್ಸಿಯಂ ಸಿಟ್ರೇಟ್ ಲವಣ ಘನರೂಪದಲ್ಲಿ ಹೊರಬೀಳುವುದು. ಆ ಲವಣವನ್ನು ಶೋಧಿಸಿ, ಬಿಸಿನೀರಿನಲ್ಲಿ ತೊಳೆದು ಅನಂತರ ಸಲ್ಫ್ಯೂರಿಕ್ ಆಮ್ಲದೊಡನೆ ಬೆರೆಸಿದರೆ ಸಿಟ್ರಿಕ್ ಆಮ್ಲ ದ್ರಾವಣರೂಪದಲ್ಲಿಯೂ ಕ್ಯಾಲ್ಸಿಯಂ ಸಲ್ಫೇಟ್ ಘನರೂಪದಲ್ಲಿಯೂ ದೊರೆಯುವುವು.[೨] ಘನವಸ್ತುವನ್ನು ಸೋಸಿ ತೆಗೆದರೆ ತಿಳಿ ಸಿಟ್ರಿಕ್ ಆಮ್ಲ ದ್ರಾವಣ ಸಿಗುವುದು. ಜಲಾಂಶವನ್ನು ಬತ್ತಿಸಿದರೆ ಘನ ಸಿಟ್ರಿಕ್ ಆಮ್ಲ ಉಳಿದುಕೊಳ್ಳುವುದು.
ಸಿಟ್ರಿಕ್ ಆಮ್ಲದ ವ್ಯಾಪಾರದಲ್ಲಿ ಇಟಲಿ ದೇಶದ ಪ್ರಾಬಲ್ಯ ಮತ್ತು ಏಕಸ್ವಾಮ್ಯವನ್ನು ಮುರಿಯಲು ಅಮೆರಿಕದಲ್ಲಿ ನಡೆಸಿದ ಸಂಶೋಧನೆಗಳ ಫಲವಾಗಿ ಸಕ್ಕರೆಯಿಂದ ಸಿಟ್ರಿಕ್ ಆಮ್ಲವನ್ನು ತಯಾರಿಸುವ ನೂತನ ಕ್ರಮ ಆಚರಣೆಗೆ ಬಂದು ಈಗ ಹೆಚ್ಚಾಗಿ ಬಳಕೆಯಲ್ಲಿದೆ. ಅಲ್ಯೂಮಿನಿಯಂ ಅಥವಾ ಸ್ಟೆಯಿನ್‌ಲೆಸ್ ಸ್ಟೀಲ್ ಪಾತ್ರೆಯೊಂದರಲ್ಲಿ ಅಸಫ಼ರ್‌ಜಿಲಸ್ ನಿಗರ್ ಎಂಬ ಸೂಕ್ಷ್ಮದರ್ಶಕೀಯ ಬೂಷ್ಟು ವರ್ಗದ ಜೀವಿಯನ್ನು (ಫಂಗೈ) ಸಕ್ಕರೆಯ ದ್ರಾವಣದೊಳಗೆ ವೃದ್ಧಿಸಲು ಅವಕಾಶ ಮಾಡಿಕೊಟ್ಟರೆ ಕೆಲದಿನಗಳಲ್ಲಿ ಸಿಟ್ರಿಕ್ ಆಮ್ಲ ತಯಾರಾಗುತ್ತದೆ.[೩] ಮುಂದೆ ಗಷ್ಟನ್ನು ಶೋಧಿಸಿ ತೆಗೆದು, ತಿಳಿದ್ರಾವಣದಿಂದ ಜಲಾಂಶವನ್ನು ಬತ್ತಿಸಿ ಸಿಟ್ರಿಕ್ ಆಮ್ಲವನ್ನು ಪಡೆಯಬಹುದು. ಉಷ್ಣ ದೇಶವಾದ ಭಾರತದಲ್ಲಿ ಹುಳಿ ಕಿತ್ತಳೆ, ನಿಂಬೆ, ಅನಾನಸ್ ಹಣ್ಣುಗಳು ಸಮೃದ್ಧಿಯಾಗಿ ಬೆಳೆಯುವವಾಗಿದ್ದು ಆ ಹಣ್ಣುಗಳು ಬಿಡುವ ಕಾಲದಲ್ಲಿ ಬೇಡಿಕೆಗಿಂತ ಪೂರೈಕೆ ಸಂದರ್ಭಗಳು ಹೆಚ್ಚಾಗಿದ್ದಾಗಲೆಲ್ಲ ಕೊಳೆಸುವುದಕ್ಕಿಂತ ಅವುಗಳಿಂದ ಸಿಟ್ರಿಕ್ ಆಮ್ಲವನ್ನು ಪಡೆಯಬಹುದಾಗಿದೆ.
ಗುಣಗಳುಸಂಪಾದಿಸಿ
ನೀರಿನಲ್ಲಿ ಸುಲಭವಾಗಿ ಧಾರಾಳವಾಗಿ ಲೀನವಾಗುವುದು. ಹಿತಕರವಾದ ಹುಳಿ ರುಚಿಯಿದ್ದು ಸುಲಭವಾಗಿ ಜೀರ್ಣವಾಗುವುದು. ಪ್ರಬಲ ದ್ರಾವಣದಲ್ಲಿಯೂ ಅಪಾಯಕಾರಿಯಲ್ಲ.
ಉಪಯೋಗಗಳುಸಂಪಾದಿಸಿ
ಇದು ಆಹಾರ ಪಾನೀಯಗಳ ಕೈಗಾರಿಕೆಯಲ್ಲಿ ಹೇರಳವಾಗಿ ಬಳಕೆಯಲ್ಲಿರುವ ಆಮ್ಲ. ಬೆಲೆ ಕಡಿಮೆ. ಈ ಕಾರಣಗಳಿಂದ ಮಿಠಾಯಿ, ಕಲ್ಲುಸಕ್ಕರೆ, ಹಣ್ಣುಗಳಿಂದ ಮಾಡುವ ಸಿಹಿಗಳು, ಸಿಹಿಪಾನೀಯಗಳು, ಹಣ್ಣಿನ ರಸಗಳು ಮುಂತಾದ ಖಾದ್ಯ ವಸ್ತುಗಳ ತಯಾರಿಕೆಯಲ್ಲಿ ಸಿಟ್ರಿಕ್ ಆಮ್ಲವನ್ನು ಧಾರಾಳವಾಗಿ ಉಪಯೋಗಿಸುವರು. ಅಲ್ಲದೆ ಕೆಲವು ಔಷಧಿಗಳು, ಕೇಶ ಮತ್ತು ಅಂಗರಾಗಗಳು, ಲೋಹಗಳನ್ನು ಸ್ವಚ್ಛಮಾಡಲು ಬಳಸುವ ದ್ರಾವಣಗಳು, ಚರ್ಮ ಹದಮಾಡುವಿಕೆ, ಶಾಯಿ ತಯಾರಿಕೆ, ಬಟ್ಟೆಗಳಿಗೆ ಬಣ್ಣ ಸ್ಥಿರಗೊಳಿಸುವುದು ಮುಂತಾದಇತರ ಕೈಗಾರಿಕೆಗಳಲ್ಲೂ ಉಪಯೋಗಗಳಿವೆ.
ಉಲ್ಲೇಖಗಳುಸಂಪಾದಿಸಿ
- ↑ "Citric acid | C6H8O7 - PubChem". Archived from the original on January 19, 2022. Retrieved December 19, 2021.
- ↑ ಟೆಂಪ್ಲೇಟು:Ullmann
- ↑ Currie, James (1917). The Journal of Biological Chemistry (in ಇಂಗ್ಲಿಷ್). American Society for Biochemistry and Molecular Biology. pp. 15–27.