ಸತ್ಯಂ ಹಗರಣ ಬದಲಾಯಿಸಿ

ಸತ್ಯಂ ಹಗರಣವು ಭಾರತದ ಅತಿ ಮುಖ್ಯ ಹಗರಣಗಳಲ್ಲಿ ಒಂದು. ಈ ಹಗರಣವು ೨೦೦೯ರಲ್ಲಿ ಬೆಳಕಿಗೆ ಬಂದಿತು. "ಸತ್ಯಂ ಕಂಪ್ಯೂಟರ್ ಸರ್ವೀಸಸ್" ಸಂಸ್ಥೆಯ ಅಧ್ಯಕ್ಷರಾದ ರಾಮಲಿಂಗ ರಾಜು ಅವರು ತಮ್ಮ ತಪ್ಪೊಪ್ಪಿಗೆಯಲ್ಲಿ ಸಂಸ್ಥೆಯ ಲೆಕ್ಕಪುಸ್ತಕಗಳಲ್ಲಿ ತಪ್ಪು ಮಾಹಿತಿ ತೋರಿಸಿರುವುದಾಗಿ ಒಪ್ಪಿಕೊಂಡರು. ತನ್ಮೂಲಕ ಈ ಹಗರಣವು ದೇಶದಾದ್ಯಂತ ಅತಿ ದೊಡ್ಡ ಸುದ್ದಿಯಾಯಿತು.

 
ಸತ್ಯಂ ಕಂಪ್ಯೂಟರ್ಸ್ ನ ಸಂಸ್ಥಾಪಕರಾದ ರಾಮಲಿಂಗ ರಾಜು

ತಮ್ಮ ತಪ್ಪೊಪ್ಪಿಗೆಯ ಪತ್ರದಲ್ಲಿ ರಾಮಲಿಂಗ ರಾಜು ಇಂತೆಂದಿದ್ದರು-"ನಿಜವಾದ ಲಾಭಗಳಿಗೂ ಪುಸ್ತಕದ ಲಾಭಗಳಿಗೂ ಇದ್ದ ವ್ಯತ್ಯಾಸ ಮೊದಮೊದಲು ಕಡಿಮೆ ಇತ್ತಾದರೂ ಕೆಲವು ವರ್ಷಗಳಲ್ಲಿ ಆ ವ್ಯತ್ಯಾಸ ಬೆಳೆದಿದೆ. ಕಂಪನಿಯ ಬೆಳವಣಿಗೆಯೊಂದಿಗೆ ಈಗ ಆ ವ್ಯತ್ಯಾಸವೂ ಅಗಾಧವಾಗಿ ಬೆಳೆದಿದೆ"

ಇತಿಹಾಸ ಬದಲಾಯಿಸಿ

ಮೊದಲ ತಪ್ಪೊಪ್ಪಿಗೆ ಬದಲಾಯಿಸಿ

೨೦೦೯ರ ಜನವರಿ ೭ರಂದು ರಾಮಲಿಂಗ ರಾಜು ಅವರು "ಸತ್ಯಂ ಕಂಪ್ಯೂಟರ್ ಸರ್ವೀಸಸ್"ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ತಾವು ಸಂಸ್ಥೆಯ ಲೆಕ್ಕ ಪುಸ್ತಕಗಳನ್ನು $೧.೪೭ ಬಿಲಿಯನ್ ಗಳಷ್ಟು ತಪ್ಪಾಗಿ ತೋರಿಸಿರುವುದಾಗಿ ಒಪ್ಪಿಕೊಂಡರು. ಈ ತಪ್ಪೊಪ್ಪಿಗೆಯ ಪರಿಣಾಮ ಇಡೀ ಜಗತ್ತಿನ ಅತಿ ದೊಡ್ಡ ವ್ಯಾಪಾರ ಸಂಸ್ಥೆಗಳೆಲ್ಲವೂ ಆಘಾತ ಹೊಂದಿದವು.

ರಾಮಲಿಂಗ ರಾಜು ಲೆಕ್ಕ ಲೆಕ್ಕ ಪುಸ್ತಕಗಳನ್ನು ತಿದ್ದಿದ್ದಕ್ಕೆ ನೀಡಿದ ಕಾರಣ ಇಂತಿದೆ- "ಕಂಪನಿಯ ಮಾಲೀಕತ್ವದಲ್ಲಿ ಬಹು ಸಣ್ಣ ಭಾಗ ಸಂಸ್ಥಾಪಕರದ್ದಾಗಿತ್ತು. ಹೀಗಾಗಿ ಕಡಿಮೆ ಲಾಭಗಳಿಂದಾಗಿ ಕಂಪನಿಯನ್ನು ಇತರರಿಗೆ ಮಾರಬೇಕಾದ ಪರಿಸ್ಥಿತಿ ಒದಗಿಬರಬಹುದಿತ್ತು"

ಫೆಬ್ರವರಿ ೨೦೦೯ರಲ್ಲಿ ಸಿ.ಬಿ.ಐ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡು ಒಂದು ವರ್ಷದ ಅವಧಿಯಲ್ಲಿ ೩ ಭಾಗಗಳಲ್ಲಿ ಆರೋಪಪಟ್ಟಿ (ಛಾರ್ಜ್ ಶೀಟ್) ಸಲ್ಲಿಸಿದರು. ತದನಂತರ ಎಲ್ಲಾ ಆರೋಪಪಟ್ಟಿಗಳನ್ನೂ ಒಗ್ಗೂಡಿಸಲಾಯಿತು.

೨೦೧೫ರ ಏಪ್ರಿಲ್ ೧೦ರಂದು ರಾಮಲಿಂಗ ರಾಜು ತಪ್ಪಿತಸ್ಥರೆಂದು ನಿರ್ಣಯವಾಯಿತು. ರಾಜು ಅವರೊಂದಿಗೆ ಹತ್ತು ಜನ ಇತರರಿಗೂ ಶಿಕ್ಷೆಯಾಯಿತು.

ಲೆಕ್ಕ ಪರಿಶೋಧಕರ ಪಾತ್ರ ಬದಲಾಯಿಸಿ

ಸತ್ಯಂ ಹಗರಣದ ವರದಿ ಹೊರಬಂದಾಗ ಪ್ರೈಸ್ ವಾಟರ್ ಹೌಸ್ ಕೂಪರ್ (ಪಿ. ಡಬ್ಲ್ಯು. ಸಿ) ಸಂಸ್ಥೆಯು ಸತ್ಯಂ ನ ಸ್ವತಂತ್ರ ಲೆಕ್ಕ ಪರಿಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪಿ. ಡಬ್ಲ್ಯು. ಸಿ.ಯ ಭಾರತೀಯ ವಿಭಾಗಕ್ಕೆ ಅಮೇರಿಕದ ಸೆಕ್ಯೂರಿಟೀಸ್ ಅಂಡ್ ಎಕ್ಸ್ ಛೇಂಜ್ ಕಮಿಷನ್ ಲೆಕ್ಕ ಪರಿಶೋಧನೆಯ ಪ್ರಮಾಣಗಳನ್ನು ಪಾಲಿಸದೇ ಇದ್ದದ್ದಕ್ಕಾಗಿ ಹಾಗೂ ನೈತಿಕ ಮೌಲ್ಯಗಳನ್ನು ಮೀರಿದ್ದಕ್ಕಾಗಿ $೬ ಮಿಲಿಯನ್ ದಂಡ ವಿಧಿಸಿತು.

ಪರಿಣಾಮಗಳು ಬದಲಾಯಿಸಿ

ಜನವರಿ ೯ ೨೦೦೯ರಂದು ಸತ್ಯಂ ಅನ್ನು ಸೆನ್ಸೆಕ್ಸ್ ಮತ್ತು ನಿಫ್ಟಿಯಿಂದ ತೆಗೆದುಹಾಕಲಾಯಿತು. ಜನವರಿ ೧೦, ೨೦೦೯ರಂದು ಕಂಪನಿ ಲಾ ಬೋರ್ಡ್ ಪ್ರಸಕ್ತ ಸಾಲಿನ ನಿರ್ದೇಶಕರನ್ನು ವಜಾಗೊಳಿಸಿ ೧೦ ಹೊಸ ಹಂಗಾಮಿ ನಿರ್ದೇಶಕರನ್ನು (ನಾಮಿನಲ್ ಡೈರೆಕ್ಟೆರ್) ನೇಮಿಸಿತು. ಕಾರ್ಪೊರೇಟ್ ವ್ಯವಹಾರ ಸಚಿವರಾದ ಪ್ರೇಮ್ ಚಂದ್ ಗುಪ್ತ ರವರ ಹೇಳಿಕೆಯ ಪ್ರಕಾರ- "ಪ್ರಸಕ್ತ ನಿರ್ದೇಶಕರು ತಾವು ಮಾಡಬೇಕಾದ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಐ.ಟಿ ಉದ್ಯಮದ ವಿಶ್ವಾಸಾರ್ಹತೆ ಇದರಿಂದಾಗಿ ಹಾಳಾಗಬಾರದು"

ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ ಗಳ ನಿಯಂತ್ರಕ ಸಂಸ್ಥೆ ಐ.ಸಿ.ಏ.ಐ, ಪಿ. ಡಬ್ಲ್ಯು. ಸಿ ಸಂಸ್ಥೆಗೆ ಷೋಕಾಸ್ ನೋಟೀಸನ್ನು ಕಳಿಸಿತು. ಐ.ಸಿ.ಏ.ಐ ನ ಅಧ್ಯಕ್ಷ ವೇದ್ ಜೈನ್ ೨೧ ದಿನಗಳ ಒಳಗಾಗಿ ಉತ್ತರ ಕಳಿಸುವಂತೆ ಪಿ. ಡಬ್ಲ್ಯು. ಸಿ ಸಂಸ್ಥೆಗೆ ತಿಳಿಸಲಾಗಿದೆ ಎಂದು ಹೇಳಿಕೆ ನೀಡಿದರು.

ಜನವರಿಯಲ್ಲಿ ಸತ್ಯಂ ಸಂಸ್ಥೆಯನ್ನು ವರ್ಲ್ಡ್ ಬ್ಯಾಂಕಿನೊಂದಿಗೆ ವ್ವವಹಾರ ಮಾಡುವುದರಿಂದ ನಿರ್ಬಂಧಿಸಲಾಯಿತು.

ಜನವರಿ ೧೦, ೨೦೦೯ರಂದು ಸಿ.ಐ.ಡಿ ಯು ಸತ್ಯಂ ನ ಅಂದಿನ ಸಿ.ಎಫ್.ಓ ಆಗಿದ್ದ ವದ್ಲಮಾನಿ ಶ್ರೀನಿವಾಸ್ ಅವರನ್ನು ವಿಚಾರಣೆಗೆ ತೆಗೆದುಕೊಂಡಿತು

ಕೆಲವು ವಿಮರ್ಶಕರು ಈ ಹಗರಣವನ್ನು ಭಾರತದ ಎನ್ರಾನ್ ಹಗರಣ ಎಂದಿದ್ದಾರೆ. ಇನ್ನು ಕೆಲವು ಸಾಮಾಜಿಕ ಚಿಂತಕರು ಭಾರತದಲ್ಲಿ ತಮ್ಮ ತಮ್ಮ ಪರಿವಾರದವರೇ ವ್ಯಾಪಾರಕ್ಕೆ ಬರುವ ವಾತಾವರಣ ಇರುವುದೇ ಇಂತಹ ಹಗರಣಗಳಿಗೆ ಕಾರಣ ಎಂದು ಅಭಿಪ್ರಾಯ ಪಟ್ಟಿದ್ದಾರೆ.

೨೦೧೦ರಲ್ಲಿ ರಾಮಲಿಂಗ ರಾಜು ಅವರು ಸಿ.ಬಿ.ಐ ತಮ್ಮ ಮೇಲೆ ಹೊರಿಸಿರುವ ಅಪವಾದಗಳು ಸರಿಯಿಲ್ಲ ಎಂದು ಹೇಳಿಕೆ ನೀಡಿದರು. [೧]

೨೦೦೯ರ ಜೂನ್ ನಲ್ಲಿ ಮಹಿಂದ್ರ ಗ್ರೂಪ್ ನ ಟೆಕ್ ಮಹಿಂದ್ರ ಕಂಪನಿಯು ಸತ್ಯಂನೊಂದಿಗೆ ಸೇರಿತು. ಹೀಗೆ ಒಗ್ಗೂಡಿಸಲಾದ ಹೊಸ ಕಂಪನಿಯನ್ನು ಮಹಿಂದ್ರ ಸತ್ಯಂ ಎಂದು ಕರೆಯಲಾಯಿತು. [೨]

೨೦೧೧ರ ನವೆಂಬರ್ ನಲ್ಲಿ ಸಿ.ಬಿ.ಐ ಆರೋಪಪಟ್ಟಿ ಸಲ್ಲಿಸದ ಕಾರಣ ಸುಪ್ರೀಂ ಕೋರ್ಟಿನಿಂದ ರಾಮಲಿಂಗರಾಜು ಅವರಿಗೆ ಜಾಮೀನು ದೊರೆಯಿತು.

ಅಕ್ಟೋಬರ್ ೨೦೧೩ರಲ್ಲಿ ಭಾರತದ ಎನ್ಫೋರ್ಸ್ಮೆಂಟ್ ಡೈರೆಕ್ಟೋರೇಟ್ ರಾಜು ಅವರ ವಿರುದ್ಧ ಮನಿ ಲಾಂಡರಿಂಗ್ ಆರೋಪ ಹೊರಿಸಿ ಆರೋಪ ಪಟ್ಟಿ ಸಲ್ಲಿಸಿತು.

೨೦೧೪ರ ಜುಲೈ ನಲ್ಲಿ ಸೆಬಿ ಸಂಸ್ಥೆಯು ರಾಮಲಿಂಗರಾಜು ಅವರನ್ನು ಷೇರು ಮಾರುಕಟ್ಟೆಯಲ್ಲಿ ೧೪ ವರ್ಷಗಳ ಕಾಲ ಭಾಗವಹಿಸದಂತೆ ನಿರ್ಬಂಧಿಸುವುದು ಮಾತ್ರವಲ್ಲದೇ ೧೮೪೯ ಕೋಟಿ ರೂಪಾಯಿಗಳ ದಂಡ ವಿಧಿಸಿತು.

೨೦೧೫ರ ಏಪ್ರಿಲ್ ನಲ್ಲಿ ವಿಶೇಷ ಸಿ.ಬಿ.ಐ ನ್ಯಾಯಾಲಯವು ರಾಜು ಮತ್ತು ಒಂಬತ್ತು ಇತರರನ್ನು ಅಪರಾಧಿಗಳೆಂದು ಪರಿಗಣಿಸಿ ತೀರ್ಪು ನೀಡಿತು. ಅಪರಾಧಿಗಳಲ್ಲಿ ಇಬ್ಬರು ಪಿ. ಡಬ್ಲ್ಯು. ಸಿ.ಯ ಪಾಲುದಾರರಾಗಿದ್ದವರು.

ರಾಮಲಿಂಗ ರಾಜು ಅವರಿಗೆ ೫ ಕೋಟಿ ರೂಪಾಯಿಗಳ ದಂಡವನ್ನೂ ವಿಧಿಸಲಾಯಿತು.

ಉಲ್ಲೇಖಗಳು ಬದಲಾಯಿಸಿ

http://www.thehindu.com/specials/timelines/satyam-scandal-who-what-and-when/article10818226.ece?source=ppc&gclid=EAIaIQobChMI2rKAyuGV2QIVhhiPCh0wZAJTEAAYASAAEgIGevD_BwE https://en.wikipedia.org/wiki/Satyam_scandal https://en.wikipedia.org/wiki/Mahindra_Satyam http://www.thehindubusinessline.com/companies/price-waterhouse-no-intentional-wrongdoing-in-satyam-scam/article10026687.ece

  1. http://www.thehindubusinessline.com/companies/price-waterhouse-no-intentional-wrongdoing-in-satyam-scam/article10026687.ece
  2. https://en.wikipedia.org/wiki/Mahindra_Satyam