ಮನೋವಿಜ್ಞಾನ ಒಂದು ವ್ಯವಸ್ಥಿತ ಅಧ್ಯಯನ ರಂಗ, ಪ್ರಾಯೋಗಿಕ ಕ್ಷೇತ್ರ. ಮಾನವ ಜೀವಿಯ ಅಮೂಲಾಗ್ರ ವಿಕಾಸ ಮತ್ತು ಸುಸ್ಥಿತಿಗಾಗಿ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿ ಜ್ಞಾನ ಸಂಗ್ರಹಿಸಿ ಅದನ್ನು ಮಾನವ ಕಲ್ಯಾಣಕ್ಕೆಂದು ಬಳಸುವ ಒಂದು ಕ್ಷೇತ್ರ. ಪ್ರಪಂಚ ಹೆಚ್ಚು ಸಂಕೀರ್ಣವಾದಂತೆಲ್ಲಾ ಮಾನವರ ಸಮಸ್ಯೆಗಳೂ ಬೆಳೆಯುತ್ತಾ ಹೋಗುತ್ತಿವೆ. ಯುದ್ಧ, ಆಂತರಿಕ ಕಲಹಗಳು, ಭಯೋತ್ಪಾದನೆ, ನಿರಾಶ್ರಿತರ ಸಮಸ್ಯೆ, ಪರಿಸರ ಮಾಲಿನ್ಯ, ಬಡತನ, ನಿರುದ್ಯೋಗ, ಮುಂತಾದವು ಎಲ್ಲಾ ದೇಶಗಳಲ್ಲೂ ಮಾನಸಿಕ ಅಸ್ವಸ್ಥತೆಯನ್ನು ಹೆಚ್ಚಿಸಿವೆ. ಇಂತಹ ಪರಿಸ್ತಿತಿಯಲ್ಲಿ ಮನೋವಿಜ್ಞಾನದ ಪ್ರಸ್ತುತತೆಯೂ ಹೆಚ್ಚುತ್ತಿದೆ. ಪ್ರಾಚೀನ ಸಂಸ್ಕೃತಿಗಳಲ್ಲಿ ಮಾನವನ ಅಂತರಂಗ ವ್ಯವಹಾರಗಳ ಬಗ್ಗೆ ಅನೇಕ ನಂಬಿಕೆಗಳಿದ್ದವು. "ನಮ್ಮೊಳಗೆ ಒಬ್ಬ ಆದೃಶ್ಯ ಪುರುಷ (ಕಣ್ಣಿಗೆ ಕಾಣದ ವ್ಯಕ್ತಿ) ಇದ್ದು ಮಾನವರು ತೋರುವ ವೈವಿಧ್ಯಪೂರ್ಣ ವರ್ತನೆಗೆ ಅವನೇ ಕಾರಣನು", ಎಂದು ಪ್ರಾಚೀನರು ನಂಬಿದ್ದರು. ಗ್ರೀಕ್ ದಾರ್ಶನಿಕರು ಸೈಕೆ ಅಥವಾ ಮಾನವನ ಆತ್ಮವನ್ನು ಅಭ್ಯಸಿಸುವ ಶಾಸ್ತ್ರವನ್ನು ಸೈಕಾಲಜಿ[] ಎಂದು ಕರೆದರು. ಕಲ್ಪನೆ ಮತ್ತು ತರ್ಕದ ಆಧಾರದ ಮೇಲೆ ಮನೋವಿಜ್ಞಾನಕ್ಕೆ ಆತ್ಮ ಜ್ಞಾನ, ಮನಸ್ಸಿನ ಜ್ಞಾನ ಮುಂತಾದ ವ್ಯಾಖ್ಯೆಗಳನ್ನು ಕೊಡಲಾಗಿತ್ತು. ವಿಜ್ಞಾನದ ಪ್ರಗತಿಯಾದಂತೆಲ್ಲಾ ಅಂತಹ ವ್ಯಾಖ್ಯೆಗಳು ವೈಜ್ಞಾನಿಕ ನಿಯಮಗಳಿಗೆ ಅನುಗುಣವಾಗಿ ಇಲ್ಲದಿದ್ದುದರಿಂದ, ಆಧುನಿಕರು ಬೇರೆ ವ್ಯಾಖ್ಯೆಗಳನ್ನು ಹುಡುಕ ತೊಡಗಿದರು. ಸರಳವಾಗಿ ಮನೋವಿಜ್ಞಾನವನ್ನು 'ವರ್ತನೆಯ ಅಧ್ಯಯನ' ಎಂದು ಕರೆಯಲಾಗಿದೆ. ವ್ಯಕ್ತಿಯ ಪ್ರತ್ಯಾವರಣಕ್ಕೆ ಸಂಬಂಧಿಸಿದಂತೆ ಆತನ ಚಟುವತಿಕೆಗಳ ಅಧ್ಯಯನವನ್ನು ವೈಜ್ಞಾನಿಕವಾಗಿ ನಡೆಸುವುದೇ ಮನೋವಿಜ್ಞಾನ. 'ವರ್ತನೆ' ಎಂದರೆ ಆಟ, ಓಟಗಳಂತಹ ಕಣ್ಣಿಗೆ ಕಾಣುವ ಕ್ರಿಯೆಗಳು ಮಾತ್ರವಲ್ಲ, ಆಲೋಚನೆ, ಭಾವನಾನುಭವ, ಪ್ರಜ್ಞಾತ್ಮಕ, ಸುಪ್ತಚೇತನ, ಪ್ರಸಾಮಾನ್ಯ, ಅಪಸಾಮಾನ್ಯ ಕ್ರಿಯೆಗಳೂ ಈ ವರ್ತನೆಯಲ್ಲಿ ಸೇರುತ್ತವೆ. ಮನೋವಿಜ್ಞಾನ ಮಾನವ ಸ್ವಭಾವವನ್ನು ಅರ್ಥ ಮಾಡಿಕೊಳ್ಳುವ ವಿಜ್ಞಾನವಾಗಿರುವುದರಿಂದ ಅದು ಮುಖ್ಯವಾಗಿ ಕೆಳಗಿನ ಮೂರು ಪ್ರಶ್ನೆಗಳಿಗೆ ಉತ್ತರ ಅರಸುತ್ತದೆ.

  1. ಮಾನವ ವರ್ತನೆ ಎಂದರೆ ಯಾವುದು?
  2. ಮಾನವರು ಹೇಗೆ ವರ್ತಿಸುತ್ತಾರೆ?
  3. ಅವರ ವರ್ತನೆಗೆ ಕಾರಣಗಳೇನು?

ಮನೋವಿಜ್ಞಾನದ ಇತಿಹಾಸ

ಬದಲಾಯಿಸಿ
 
ವಿಲ್ ಹೆಲ್ಮ್ ವುಂಡ್ಟ್
 
ವಿಲಿಯಂ ಜೇಮ್ಸ್
 
ಜಾನ್ ವಾಟ್ಸನ್

ಪ್ರಾಚೀನ ಗ್ರೀಕ್ ದಾರ್ಶನಿಕರು ಆತ್ಮದ ಬಗ್ಗೆ ನಡೆಸುವ ಅಧ್ಯಯನವನ್ನು ಮನಃಶಾಸ್ತ್ರವೆಂದು ಕರೆದರು. ಜರ್ಮನಿಯ ವಿಲ್ ಹೆಲ್ಮ್ ವುಂಡ್ಟ್[] ಎಂಬುವರು ಚೇತನಾನುಭವಗಳನ್ನು ಅಭ್ಯಸಿಸಲು ೧೮೭೯ರಲ್ಲಿ ಪ್ರಯೋಗಶಾಲೆಯನ್ನು ಸ್ಥಾಪಿಸಿ ಮನೋವಿಜ್ಞಾನವನ್ನು "ಜಾಗೃತ ಪ್ರಜ್ಞೆಯ ಅಧ್ಯಯನ" ಎಂದು ಕರೆದರು. ವಿಲಿಯಂ ಜೇಮ್ಸ್[] ಎಂಬ ಅಮೆರಿಕಾದ ಪ್ರಥಮ ಮನೋವಿಜ್ಞಾನಿ "ಮನಸ್ಸಿನ ಕ್ರಿಯಾತ್ಮಕತೆಯನ್ನು ಅರಿಯುವುದೇ ಮನೋವಿಜ್ಞಾನನದ ಮುಖ್ಯಗುರಿ" ಎಂದರು. ಜಾನ್ ವಾಟ್ಸನ್[] ಎಂಬ ಮತ್ತೊಬ್ಬ ಅಮೇರಿಕನ್, "ಮನಸ್ಸು, ಆತ್ಮ, ಚೇತನ ಅನ್ನುವುದೆಲ್ಲಾ ಯಾರಿಗೆ ಗೊತ್ತು, ಯಾರು ನೋಡಿದ್ದಾರೆ, ಹೇಗೆ ಅವುಗಳ ಅಸ್ತಿತ್ವವನ್ನು ಪ್ರಮಾಣಿಸುತ್ತಾರೆ?" ಎಂದು ವಾದಿಸಿ, "ನಾವು ನೋಡಿ, ಮಾಪನ ಮಾಡ ಬಹುದಾದದ್ದು 'ವರ್ತನೆ' ಒಂದೇ, ಆದ್ದರಿಂದ ವರ್ತನೆಯ ವೈಜ್ಞಾನಿಕ ಅಧ್ಯಯನವೇ ಮನೋವಿಜ್ಞಾನ", ಎಂದು ತರ್ಕಿಸಿ ವರ್ತನವಾದ ಎಂಬ ಕ್ರಾಂತಿಕಾರಿ ಪಂಥವನ್ನು ಸ್ಥಾಪಿಸಿರುವರು.

 
ಅಡೊಲ್ಫ್ ಹಿಟ್ಲರ್

ವಿಶ್ವದ ಮಹಾಸಮರಗಳು ಮನಃಶಾಸ್ತ್ರವು ವೈಜ್ಞಾನಿಕವಾಗಿ ಬೆಳೆಯಲು ಒಂದು ಕಾರಣವಾಗಿದೆ. ಪ್ರಥಮ ವಿಶ್ವಸಮರದ ಕಾಲದಲ್ಲಿ ಹಿಟ್ಲರ್[] ಎಂಬ ಸರ್ವಾಧಿಕಾರಿ, ಜರ್ಮನರು 'ಆರ್ಯ' ಜನಾಂಗಕ್ಕೆ ಸೇರಿದ ಶ್ರೇಷ್ಠರೆಂದು ಸಾರಿ, ಬೇರೆ ಜನಾಂಗದವರ ಕಗ್ಗೂಲೆ ನಡೆಸಿದರು. 'ನಾಟ್ಸಿ'ಗಳ ಈ ದೌರ್ಜನ್ಯದಿಂದ ಪಾರಾಗಿ ಅನೇಕ ಮೇಧಾವಿಗಳು, ಪ್ರಾಜ್ಞರು, ವಿಜ್ಞಾನಿಗಳು ಅಮೇರಿಕಕ್ಕೆ ಬಂದರು. ಇದು ಅನೇಕ ಅನ್ವೇಷಣೆ ಮತ್ತು ಚಿಂತನೆಗಳ ಬೆಳವಣಿಗೆಗೆ ನಾಂದಿಯಾಯಿತು. ವ್ಯಕ್ತಿತ್ವ ಅಧ್ಯಯನಕ್ಕೆ ಹೊಸ ವಿಧಾನಗಳು, ಮಾಪನಗಳು, ಬುದ್ಧಿಶಕ್ತಿ ಪರೀಕ್ಷೆಗಳು ಪ್ರಕಟಗೊಂಡವು. ಎರಡನೆ ಮಹಾಸಮರದಲ್ಲಿ ನಡೆದ ನರಮೇಧದ ಫಲವಾಗಿ ಹತಾಶೆ ಮತ್ತು ಜಿಗುಪ್ಸೆ ಅನುಭವಿಸಿದ ಜನರು ಮನುಷ್ಯನ ಈ ಅಮಾನುಷ ಪ್ರವೃತ್ತಿಗೆ ಕಾರಣ ಹಾಗೂ ಪರಿಹಾರ ಹುಡುಕಲು ಪ್ರಯತ್ನಿಸಿದರು. ಮಾನವತಾ ವಾದ, ಅಸ್ತಿತ್ವವಾದ ಮುಂತಾದ ಪಂಥಗಳು ಈ ಸಮಯದಲ್ಲಿ ಜನಪ್ರಿಯವಾದವು. ಯುದ್ಧದಿಂದ ಘಾಸಿಗೊಂಡ, ಸೈನ್ಯದಿಂದ ಹೊರಬಿದ್ದ ಲಕ್ಷಾಂತರ ಸೈನಿಕರ ಚಿಕಿತ್ಸೆ ಮತ್ತು ಪುನಶ್ಚೇತನಕ್ಕೆಂದು ಸಾವಿರಾರು ಮನೋವಿಜ್ಞಾನಿಗಳು ಆಸ್ಪತ್ರೆಗಳಲ್ಲಿ ನೇಮಿಸಲ್ಪಟ್ಟರು. ವರ್ತನ ಚಿಕಿತ್ಸೆ, ಸಮೂಹ ಚಿಕಿತ್ಸೆ ಅನಿರ್ದೇಶಿತ ಪರಾಮರ್ಶನಗಳು ಹೆಚ್ಚು ಬಳಕೆಗೆ ಬಂದವು.

ಹಿಂದೆ ಮನೋವಿಜ್ಞಾನದಲ್ಲಿ ಎಲ್ಲಾ ಅಧ್ಯಯನಗಳೂ, ಪ್ರಯೋಗಗಳೂ ಸಾಧಾರಣವಾಗಿ ಪುರುಷರ ಮೇಲೆ ನಡೆದಿರುತಿತ್ತು. ಮನುಷ್ಯ ಎಂದರೆ ಪುರುಷ ಎಂದೇ ಅರ್ಥೈಸಲಾಗುತಿತ್ತು. ಸ್ತ್ರೀಯರ ಮಾನಸಿಕ ಬೆಳವಣಿಗೆ, ವ್ಯಕ್ತಿತ್ವ, ವಿಕಾಸ, ಅವರ ಸಾಮರ್ಥ್ಯ ಮುಂತಾದವುಗಳ ಬಗ್ಗೆ ಪುರುಷರ ಕಲ್ಪನೆಗಳನ್ನೇ ವೈಜ್ಞಾನಿಕ ಸತ್ಯವೆಂದು ಪ್ರತಿಪಾದಿಸಲಾಗುತಿತ್ತು. ಮಹಿಳಾ ವಿಜ್ಞಾನಿಗಳು ಅನೇಕ ಸಾಧನೆಗಳನ್ನು ಮಾಡಿದರೂ ಅವುಗಳ ಉಲ್ಲೇಖ ಎಲ್ಲೂ ಇರುತ್ತಿರಲಿಲ್ಲ. ಇದನ್ನು ಲಿಂಗಾಧಾರಿತ ತಾರತಮ್ಯತೆ (ಸೆಕ್ಸಿಸಂ)[] ಎಂದು ಕರೆಯಲಾಗುತ್ತದೆ. ಇಂತಹ ಅವೈಜ್ಞಾನಿಕ ಪದ್ಧತಿಯನ್ನು ದೂರಮಾಡಲು ಇಂದಿನ ವಿಜ್ಞಾನಿಗಳು ಶ್ರಮಿಸುತಿದ್ದಾರೆ.

ಮಾನಸಿಕ ಒತ್ತಡ

ಬದಲಾಯಿಸಿ

ಒಂದು ವಸ್ತುವಿನ ಮೇಲೆ ಬಹಳ ಭಾರ ಹೇರಿದರೆ ಅದುಬಾಗುತ್ತದೆ ಇಲ್ಲವೆ ಮುರಿಯುತ್ತದೆ. ಇದನ್ನೇ ಸ್ಟ್ರೆಸ್ ಎನ್ನಲಾಗುತ್ತದೆ. ಅದೇ ರೀತಿ ಅತಿ ಆಯಾಸ, ಅತಿ ಶೀತ, ಉಷ್ಣ, ನೋವು, ಹಸಿವು ಇವುಗಳು ದೇಹದ ಮೇಲೆ ಒತ್ತಡ ಹೇರುತ್ತವೆ. ಭಯ, ಆತಂಕ, ಅಪಮಾನ, ವಿಷಾದ, ದುಃಖ, ಹತಾಶೆ, ಆಘಾತ ಇವುಗಳು ಮನಸ್ಸಿನ ಮೇಲೆ ಬಹಳ ಒತ್ತಡ ಹಾಕುತ್ತವೆ. ಅತಿ ಒತ್ತಡ ದೇಹ-ಮನಸ್ಸುಗಳನ್ನು ನೋಯಿಸಿ ತೊಂದರೆಗೆ ಕಾರಣವಗುತ್ತದೆ. ಒಂದು ಘಟನೆ ಒತ್ತಡವಾಗಿ ಪರಿಗಣಿಸುವುದು-

  1. ಸಮಸ್ಯೆ ಅಥವಾ ಚಿಂತೆ ಉಂಟುಮಾಡುವ ವಿಷಯ ಬಹಳ ಕಾಲ ಉಳಿದುಕೊಳ್ಳುವುದು.
  2. ವ್ಯಕ್ತಿಗೆ ಈ ಸಮಸ್ಯೆ ತನ್ನಿಂದ ಪರಿಹರಿಸಲಾಗುವುದಿಲ್ಲ ಎನ್ನಿಸುವುದು.
  3. ಪರಿಸ್ಥಿತಿಯನ್ನು ನಿಯಂತ್ರಿಸಲಾಗುವುದಿಲ್ಲ ಎಂಬ ಅಸಹಾಯಕ ಭಾವನೆ.
  4. ಕೆಲವು ವ್ಯಕ್ತಿತ್ವದೋಷಗಳು, ಉದಾಹರಣೆಗೆ: 'ಟೈಪ್ ಎ' ವ್ಯಕ್ತಿತ್ವ, ಅಪಕ್ವ, ಬಾಲಿಶ ವ್ಯಕ್ತಿತ್ವ).
  5. ಒತ್ತಡದ ಪರಿಸ್ಥಿತಿಯನ್ನು ನಿವಾರಿಸಲು ಸರಿಯಾದ ಉಪಾಯಗಳನ್ನು ಬಳಸದಿರುವುದು.
  6. ವ್ಯಕ್ತಿಗೆ ಸಾಮಾಜಿಕ ಸಹಕಾರ, ಬೆಂಬಲ ಇಲ್ಲದಿರುವುದು.

ಹ್ಯಾನ್ಸ್ ಸೆಲ್ಯೆ ಎಂಬ ಸಂಶೋಧಕ ಒತ್ತಡಕ್ಕೆ ಜೇವಿ ತೋರುವ ಪ್ರತಿಕ್ರಿಯೆಯನ್ನು ಅಭ್ಯಸಿಸಿದ್ದಾರೆ. ಇವರ ಪ್ರಕಾರ ಯಾವುದೇ ಅಪಾಯದ ಸೂಚನೆ ಕಂಡಾಗ ವ್ಯಕ್ತಿ 'ಎಚ್ಚರಿಕೆಯ' ಲಕ್ಷಣಗಳನ್ನು ತೋರಿತ್ತಾನೆ. ನಂತರ ತನ್ನ ಎಲ್ಲಾ ಸಾಮರ್ಥ್ಯ ಬಳಸಿ ಒತ್ತಡಕಾರಕವನ್ನು ಎದುರಿಸಲು ಪ್ರಯತ್ನಿಸುತ್ತಾನೆ. ಒತ್ತಡ ಅತಿಯಾಗಿದ್ದು, ವ್ಯಕ್ತಿ ದುರ್ಬಲನಾಗಿದ್ದರೆ, ಅಸಹಾಯಕನಾಗಿ ನಿತ್ರಾಣನಾಗುತ್ತಾನೆ. ಹೀಗೆ ಎಚ್ಚರಿಕೆ, ಪ್ರತಿಭಟನೆ ಮತ್ತು ನಿತ್ರಾಣಗಳ ಕ್ರಮಾನುಗತಿಯನ್ನು ಸೆಲ್ಯೆ 'ಸಾಮಾನ್ಯ ಸಂಯೋಜನ ಲಕ್ಷಣ ಸಮೂಹ' ಎಂದು ಕರೆಯಲಾಗುತ್ತೆ.

ಮಾನಸಿಕ ಒತ್ತಡದ ಪರಿಣಾಮಗಳು:

  1. ದೈಹಿಕ ಪರಿಣಾಮಗಳು: ರಕ್ತದೊತ್ತಡ, ಅಲ್ಸರ್, ಅಸ್ತಮಾ, ಅಲರ್ಜಿಗಳು, ಮೈಗ್ರೇನ್, ಹೃದಯಾಘಾತ, ಮಿದುಳಿನ ರಕ್ತಸ್ರಾವ ಮತ್ತು ಚರ್ಮರೋಗಗಳಿಗೆ ಒತ್ತಡ ಕಾರಣವಾಗಿದೆ. ಒತ್ತಡದಿಂದ ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ. ಸದಾ ದಣಿವು, ನಿರಾಸಕ್ತಿ, ಹಸಿವಿಲ್ಲದಿರುವುದು, ನಿದ್ರೆ ಬಾರದಿರುವುದು ಇವೆಲ್ಲಾ ಒತ್ತಡದ ಪರಿಣಾಮಗಳು. ಇತ್ತೀಚೆಗಿನ ಸಂಶೋಧನೆಗಳು ಕ್ಯಾನ್ಸರ್ ರೋಗದಲ್ಲಿ ಮಾನಸಿಕ ಒತ್ತಡದ ಪಾತ್ರವನ್ನು ಗುರುತಿಸಿವೆ.
  2. ಮಾನಸಿಕ ಪರಿಣಾಮಗಳು: ಆತಂಕ, ಕಳವಳ, ಬೇಸರ, ಚಿಂತೆ, ಅಸಹನೆ, ಸಿಡಿಮಿಡಿಗೊಳ್ಳೂವಿಕೆ, ಭಾವನೆಗಳನ್ನು ನಿಯಂತ್ರಿಸಲು ಆಗದಿರುವುದು- ಇವೆಲ್ಲಾ ಮನಸ್ಸಿನ ಒತ್ತಡದಿಂದ ಕುಗ್ಗಿದೆ ಎಂದು ಸಾರುತ್ತವೆ. ಆತ್ಮಹತ್ಯೆ, ಖಿನ್ನತೆ ಮತ್ತು ಇತರ ಮನೋವಿಕೃತಿಗಳು ಕಾಣಿಸಿಕೊಳ್ಳ ಸಾಧ್ಯತೆಯೂ ಉಂಟು.
  3. ವರ್ತನೆಯ ಏರಿಪೇರು: ಒತ್ತಡ ಹೆಚ್ಚಾದಾಗ ವ್ಯಕ್ತಿಯ ಕಾರ್ಯದಕ್ಷತೆ ಕಡಿಮೆಯಾಗುತ್ತದೆ. ಕೆಲಸದಲ್ಲಿ ತಪ್ಪುಗಳು ಮಾಡುವುದು, ಮುಂಗೋಪ, ಜಗಳಗಂಟಿತನ, ಆಕ್ರಮಣಕಾರಿ ವರ್ತನೆ ಕಾಣಿಸಿಕೊಳ್ಳುತ್ತವೆ. ಇವುಗಳಿಂದ ಪಾರಾಗಲು, ಮದ್ಯ ಮಾದಕವಸ್ತುಗಳಿಗೆ ಶರಣಾಗುವವರೂ ಉಂಟು. ನಿರುದ್ಯೋಗ, ಬಡತನ ಮುಂತಾದ ಒತ್ತಡಕ್ಕೆ ಗುರಿಯಾದ ಜನರಲ್ಲಿ ಹಿಂಸಾತ್ಮಕ ವರ್ತನೆ ಹೆಚ್ಚಾಗುವುದು ಕಂಡುಬಂದಿದೆ.

ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸಲು ತಂತ್ರಗಳನ್ನು ಕಲಿಯ ಬೇಕಾಗುತ್ತದೆ. ಅಗತ್ಯವಿದ್ದಲ್ಲಿ ಮನೋವಿಜ್ಞಾನಿಗಳ ಸಹಾಯ ಪಡೆಯಬೇಕು.

ಮನೋಚಿಕಿತ್ಸೆಗಳು

ಬದಲಾಯಿಸಿ

ಅನೇಕ ಕಾರಣಗಳಿಂದ ಮಾನಸಿಕ ತೊಂದರೆಗಳು ಉಂಟಾಗುತ್ತವೆ. ಆತಂಕ, ಖಿನ್ನತೆ, ವಿಚಿತ್ರ ಅನುಭವಗಳು ವ್ಯಕ್ತಿಯ ದೈನಂದಿನ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತದೆ. ಅವರ ಮನಸ್ಸು ಅಶಾಂತವಾಗುವುದಲ್ಲದೆ, ಬೇರೆಯವರ ಜೊತೆ ಹೊಂದಾಣಿಕೆ ಕೆಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ವ್ಯಕ್ತಿಗೆ ಮನೋಚಿಕಿತ್ಸಕರ ಸಹಾಯ ಬೇಕಾಗುತ್ತದೆ. ಮನೋಚಿಕಿತ್ಸೆ ಎಂದರೆ 'ಅಪಸಾಮಾನ್ಯ ವರ್ತನೆಗಳನ್ನು ಬದಲಿಸಲು, ವಿಕೃತಗೊಂಡ ಆಲೋಚನೆಗಳು ಮತ್ತು ಪ್ರತ್ಯಕ್ಷಣಗಳನ್ನು ಸರಿಪಡಿಸಲು, ಆಂತರಿಕ ಘರ್ಷಣೆಗಳನ್ನು ನಿವಾರಿಸಲು, ಮಾನವ ಸಂಬಂಧಗಳನ್ನು ಉತ್ತಮಪಡಿಸಲು ಕೈಗೊಳ್ಳುವ ವ್ಯವಸ್ಥಿತ ಪ್ರಯತ್ನ'. ಶಾಸ್ತ್ರೀಯ ಮನೋವಿಶ್ಲೇಷಣೆ ಮತ್ತು ಅದನ್ನು ಹೋಲುವ ಚಿಕಿತ್ಸಾ ಕ್ರಮಗಳನ್ನು "ಪುನಃರಚನಾತ್ಮಕ" ಮಾನಸಿಕ ಚಿಕಿತ್ಸೆ ಎನ್ನುತ್ತಾರೆ. ವ್ಯಕ್ತಿಯ ಸುಪ್ತ ಚೇತನವನ್ನು ಹೊರಗೆಳೆದು, ಮಾನಸಿಕ ಘರ್ಷಣೆಗೆ ಕಾರಣಗಳನ್ನು ಅರಿತು, ಒಳನೋಟದ ಸಹಾಯದಿಂದ ವ್ಯಕ್ತಿತ್ವವನ್ನು ಪುನಃರಚಿಸುವುದು ಈ ಚಿಕಿತ್ಸೆಯ ಉದ್ದೇಶ. ಹೀಗೆ ವ್ಯಕ್ತಿತ್ವದ ಆಯಾಮಗಳ ಒಳನೋಟ ಒದಗಿಸುವ ಚಿಕಿತ್ಸೆಗೆ ಎರಡು-ಮೂರು ವರ್ಷಗಳು ಬೇಕಾಗುತ್ತದೆ. ಗುಂಪು ಅಥವಾ ಸಾಮೂಹಿಕ ಚಿಕಿತ್ಸೆಯಲ್ಲಿ, ಚಿಕಿತ್ಸಕರ ನೇತೃತ್ವದಲ್ಲಿ ಸಮಸ್ಯೆ ಇರುವ ಅನೇಕರು ಒಟ್ಟಿಗೇ ಸೇರುತ್ತಾರೆ. ಇಲ್ಲಿ ಸಹಾಯಾರ್ಥಿಗಳು ಪರಸ್ಪರ ಕಲೆತು ವಿಚಾರ ವಿನಿಮಯ ನಡೆಸುತ್ತಾರೆ, ತಮ್ಮ ಮಾನಸಿಕ ತೊಂದರೆಗಳನ್ನು ಚರ್ಚಿಸುತ್ತಾರೆ. ಬೇರೆಯವರಿಗೂ ತಮ್ಮಂತೆ ಸಮಸ್ಯೆಗಳಿವೆ ಎನ್ನುವ ಅರಿವು, ಪರಸ್ಪರ ಸಹಾಯ, ಸಮಸ್ಯಾ ಪರಿಹಾರಕ್ಕೆ ಒದಗುವ ವಿವಿಧ ಬಗೆಯ ಯೋಚನೆಗಳು - ವ್ಯಕ್ತಿ ಗುಣಹೊಂದಲು ನೇರವಾಗುತ್ತವೆ. ಮಾನಸಿಕ ತೊಂದರೆ ಇಲ್ಲದಿರುವವರೂ ತಮ್ಮ ವ್ಯಕ್ತಿತ್ವವನ್ನು ಉತ್ತಮಪಡಿಸಿಕೊಳ್ಳಲು ಗುಂಪುಗಳನ್ನು ಬಳಸಿಕೊಳ್ಳುತ್ತಾರೆ. ಈ ಗುಂಪುಗಳಲ್ಲಿ ಜನ ತಮ್ಮ ಸಂವೇದನಾ ಶೀಲತೆ, ಹೊಂದಾಣಿಕೆ, ಸಮರ್ಥತೆಯನ್ನು ಉತ್ತಮಪಡಿಸಿಕೊಳ್ಳಲು ಭಾಗವಹಿಸುತ್ತಾರೆ. ಸಮ್ಮೋಹನ, ಮನರಂಜನೆ, ವೃತ್ತಿ ಚಿಕಿತ್ಸೆ ಪರಾಮರ್ಶನ, ನಿರ್ದೇಶಿತ ಸೂಚನೆ, ಭಾವ ವಿರೇಚನ, ಕಲಾ ಚಿಕಿತ್ಸೆ, ಧ್ಯಾನ, ಒಳ್ಳೆಯ ಸಾಹಿತ್ಯ ಹಾಗೂ ಸ್ಪೂರ್ತಿದಾಯಕ ಓದುವ ವಸ್ತುಗಳನ್ನು ಒದಗಿಸುವುದು, ಸಂಗೀತ ಮುಂತಾದವುಗಳನ್ನು ಮಾನಸಿಕ ಚಿಕಿತ್ಸೆಯಲ್ಲಿ ಅನುಷಂಗಿಕ ವಿಧಾನಗಳಂತೆ ಉಪಯೋಗಿಸಲಾಗುತ್ತದೆ.

  1. https://en.wikipedia.org/wiki/Psychology
  2. https://en.wikipedia.org/wiki/Wilhelm_Wundt
  3. https://en.wikipedia.org/wiki/William_James
  4. https://en.wikipedia.org/wiki/John_Watson_(philosopher)
  5. https://en.wikipedia.org/wiki/Adolf_Hitler
  6. https://en.wikipedia.org/wiki/Sexism