ಸಿದ್ದಿ ಜನಾಂಗ ಬದಲಾಯಿಸಿ

ಕರ್ನಾಟಕದ ಸಿದ್ದಿಗಳು ಈ ರಾಜ್ಯದಲ್ಲಿ ವಾಸವಾಗಿರುವ ಸಿದ್ದಿ ಎಂಬ ಬುಡಕಟ್ಟಿಗೆ ಸೇರಿದವರು. ಇವರು ಆಗ್ನೇಯ ಆಫ್ರಿಕಾ ಖಂಡದ ಬಂಟು ಜನಾಂಗಕ್ಕೆ ಸೇರಿದವರು ಎಂಬ ವಿಷಯವನ್ನು ಮಾನವಶಾಸ್ತ್ರಜ್ಞರು ಈಗಾಗಲೇ ದೃಢೀಕರಿಸಿದ್ದಾರೆ. ಭಾರತ ದೇಶಕ್ಕೆ ಬಂದಿದ್ದ ಪೋರ್ಚುಗೀಸರು ತಮ್ಮ ಕಾರ್ಯಾನುಕೂಲಕ್ಕಾಗಿ ಈ ಜನಾಂಗದವರನ್ನು ಆಫ್ರಿಕಾ ಖಂಡದಿಂದ ಇಲ್ಲಿಗೆ ಗುಲಾಮರನ್ನಾಗಿ ಸಾಗಿಸಿದ್ದರು. ಆ ಕಾರಣದಿಂದಾಗಿ ಭಾರತದಲ್ಲಿ ಇಂದು ಐವತ್ತು ಸಾವಿರ ಸಿದ್ದಿ ಜನರನ್ನು ನಾವು ಕಾಣಬಹುದು. ಅದರಲ್ಲೂ ಕರ್ನಾಟಕ ರಾಜ್ಯದಲ್ಲಿ ಕೆಲವು ಮಂದಿ ಬೀಡು ಬಿಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಎಲ್ಲಾಪುರ, ಹಳಿಯಾಳ್, ಅಂಕೋಲ, ಮುಂಡ್ಗೋಡ್ ಮತ್ತು ಸಿರಸಿ ತಾಲೂಕುಗಳಲ್ಲಿ, ಬೆಳಗಾವಿ ಜಿಲ್ಲೆಯ ಖಾನಪುರದಲ್ಲಿ ಮತ್ತು ಧಾರವಾಡ ಜಿಲ್ಲೆಯ ಕಲ್ಘಟ್ಕಿಯಲ್ಲಿ ಸಿದ್ದಿ ಬುಡಕಟ್ಟು ಜನಾಂಗದವರನ್ನು ಕಾಣಬಹುದು. ಈ ಜನಾಂಗದ ಹಲವಾರು ಮಂದಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಅನಂತರ ಪಾಕಿಸ್ತಾನಕ್ಕೆ ವಲಸೆ ಹೋಗಿ, ಸಿಂಧ್‍ನ ಕರಾಚಿಯಲ್ಲಿ ನೆಲೆ ಕಂಡರು.

ವ್ಯುತ್ಪತ್ತಿ ಬದಲಾಯಿಸಿ

ಸಿದ್ದಿ ಎಂಬ ಹೆಸರಿನ ಹಿಂದೆ ಅನೇಕ ಕಾಲ್ಪನಿಕ ಕಥೆಗಳಿವೆ. ಒಂದು ವಿಶ್ಲೇಷಣೆಯ ಪ್ರಕಾರ- ಉತ್ತರ ಆಫ್ರಿಕಾದಲ್ಲಿ ಗೌರವ ಸೂಚಕವಾಗಿ ಉಪಯೋಗಿಸುವ ಪದ ಸಿದ್ದಿ. ಇದು ಭಾರತದಲ್ಲಿ ಮತ್ತು ಪಾಕಿಸ್ತಾನದಲ್ಲಿ ವಾಡಿಕೆಯಲ್ಲಿರುವ 'ಸಾಹೇಬ್ ' ಪದಕ್ಕೆ ಸಮಾನವಾಗಿದೆ ಎಂದು ಹೇಳಲಾಗಿದೆ. ಎರಡನೆಯ ವಿಶ್ಲೇಷಣೆಯ ಪ್ರಕಾರ-ಅರಬರು, ಈ ಸಿದ್ದಿ ಬುಡುಕಟ್ಟಿಗೆ ಸೇರಿದ ಜನರನ್ನು ಭಾರತಕ್ಕೆ ಕರೆದೊಯ್ದರು. ಈ ಅರಬರು 'ಸಯ್ಯಿದ್' ಎಂಬ ಹೆಸರನ್ನು ಹೊಂದಿದ್ದರು. ಹಾಗಾಗಿ ಈ ಜನಾಂಗಕ್ಕೆ ಸಿದ್ದಿ ಎಂಬ ಹೆಸರು ಬಂತು ಎಂಬುದು ಪ್ರಚಲಿತದಲ್ಲಿದೆ. ಸಿದ್ದಿ ಎಂಬ ಜನಾಂಗಕ್ಕಿರುವ ಮತ್ತೊಂದು ಹೆಸರು 'ಹಬ್ಷಿ'. ಈ ಶಬ್ದವೂ ಕೂಡ ಅರಬಿಕ್ ಭಾಷೆಯ ಮೂಲವನ್ನು ಹೊಂದಿದೆ ಎಂದು ಹೇಳಲಾಗಿದೆ.

ಸಿದ್ದಿ ಹುಡುಗಿ

ಇತಿಹಾಸ ಬದಲಾಯಿಸಿ

ಹಿಂದೆಯೆ ಹೇಳಿರುವ ಪ್ರಕಾರ ಈ ಜನಾಂಗದವರನ್ನು ಪೋರ್ಚುಗೀಸರು ಭಾರತಕ್ಕೆ ಹದಿನಾರು-ಹತ್ತೊಂಬತ್ತನೆಯ ಶತಮಾನದಲ್ಲಿ ಗುಲಾಮರನ್ನಾಗಿ ಕರೆದುಕೊಂಡು ಬಂದರು. ಭಾರತ ಸರ್ಕಾರ ಪೋರ್ಚುಗೀಸರ ವಿರುದ್ಧ ಗೋವಾ ಪ್ರದೇಶಕ್ಕಾಗಿ ಹೋರಾಡುತ್ತಿರುವಾಗ, ಅನೇಕ ಸಿದ್ದಿಯರು ಪೋರ್ಚುಗೀಸರ ಕಬ್ಬಿಣದ ಮುಷ್ಠಿಯಿಂದ ತಪ್ಪಿಸಿಕೊಂಡು ಕರ್ನಾಟಕಕ್ಕೆ ಬಂದು ಸೇರಿಕೊಂಡರು. ಇವರಲ್ಲಿ ಅನೇಕ ಮಂದಿ ಹೇಳುವ ಪ್ರಕಾರ ತಾವು ಪೋರ್ಚುಗೀಸರ ಅಡಿಯಲ್ಲಿ ಗುಲಾಮರಾಗಿದ್ದು, ಅವರ ದಬ್ಬಾಳಿಕೆಗೆ ಗುರಿಯಾಗಿದ್ದರು.

ಭಾಷೆ ಬದಲಾಯಿಸಿ

ಸಿದ್ದಿ ಬುಡುಕಟ್ಟಿನವರು ಪ್ರಮುಖವಾಗಿ ಕನ್ನಡ ಭಾಷೆಯನ್ನು ಮಾತನಾಡುತ್ತಾರೆ. ಕೆಲವರು ಕೊಂಕಣಿ ಮತ್ತು ಮರಾಠಿ ಭಾಷೆಗಳನ್ನು ಮಾತನಾಡುತ್ತಾರೆ .

ಉದ್ಯೋಗ ಬದಲಾಯಿಸಿ

ಇಂದು ಕಾಣಬಹುದಾದ ಸಿದ್ದಿಯರು ಮುಖ್ಯವಾಗಿ ವ್ಯವಸಾಯವನ್ನು, ಕೂಲಿಯನ್ನು ಮತ್ತು ಕೆಲವರು ಮನೆ ಆಳುಗಳಾಗಿ ಕೆಲಸ ಮಾಡುವುದು ಸರ್ವೇಸಾಮಾನ್ಯವಾಗಿದೆ. ಗೋವಾದಿಂದ ಕರ್ನಾಟಕಕ್ಕೆ ವಲಸೆ ಬಂದ ಮೊದಲ ಸಿದ್ದಿ ಜನಾಂಗವು, ಉತ್ತರ ಕನ್ನಡ ಜಿಲ್ಲೆಯ ಕಾಡುಗಳನ್ನು ತಮ್ಮ ವಾಸಸ್ಥಾನವಾಗಿ ಪರಿವರ್ತಿಸಿಕೊಂಡು, ಅದೇ ಸ್ಥಳದಲ್ಲಿ ವ್ಯವಸಾಯವನ್ನು ಮಾಡತೊಡಗಿದರು. ಎಲ್ಲಾಪುರದ ಸಿದ್ದಿಗಳು ಇದಕ್ಕೆ ಉದಾಹರಣೆಯಾಗಿದ್ದಾರೆ.

ಸಿದ್ದಿ ಜನಾಂಗದ ರೈತ

ಧರ್ಮ ಬದಲಾಯಿಸಿ

ಕರ್ನಾಟಕದಲ್ಲಿರುವ ಸಿದ್ದಿಯರು ಹಿಂದು, ಕ್ರೈಸ್ತ, ಇಸ್ಲಾಮ್ ಧರ್ಮಕ್ಕೂ ಸೇರಿದವರಾಗಿದ್ದಾರೆ. ಹಳಿಯಲ್ ತಾಲೂಕಿನಲ್ಲಿ ಕ್ರೈಸ್ತ ಮತ್ತು ಇಸ್ಲಾಮ್ ಧರ್ಮವನ್ನು ಪಾಲಿಸುವ ಸಿದ್ದಿಯರನ್ನು ಕಂಡರೆ, ಎಲ್ಲಾಪುರ ಮತ್ತು ಅಂಕೋಲದಲ್ಲಿ ಹಿಂದು ಧರ್ಮದವರನ್ನು ಕಾಣಬಹುದು. ಸಿದ್ದಿಯರಲ್ಲಿ ಎದ್ದು ಕಾಣುವ ಒಂದು ವಿಶೇಷತೆ ಎಂದರೆ, ಇವರಲ್ಲಿ ಬೇರೆ ಬೇರೆ ಮತದವರು ಇದ್ದರೂ ಕೂಡ, ಮದುವೆ ಮಾಡುವಾಗ ಧರ್ಮಗಳನ್ನು ಪರಿಗಣಿಸುವುದಿಲ್ಲ. ಸಿದ್ದಿಯರು ಯಾವ ಮತ ಭೇದವಿಲ್ಲದೆ ಮಾಡುವ ಪೂಜೆ ಹಿರಿಯರ ಪೂಜೆ. ಇದು ತಾವು ತಮ್ಮ ಪೂರ್ವಜರನ್ನು ನೆನಸಿ ಮಾಡುವ ಪೂಜೆ. ಈಗಾಗಲೇ ಮರಣವನ್ನು ಹೊಂದ್ದಿದ್ದರೂ ಸಹ ಅವರು ತಮ್ಮ ಬಳಿಯೇ ಇದ್ಧಾರೆ ಎಂದು ಭಾವಿಸಿ ಮಾಡುವ ಪೂಜೆ ಇದು. ಕುಟುಂಬದಲ್ಲಿ ನಡೆಯುವ ಪ್ರತಿಯೊಂದು ವಿಷಯವೂ ಅವರಿಗೆ ತಿಳಿದಿರುತ್ತದೆಯೆಂದು ಭಾವಿಸಿ ಮದುವೆ, ಹುಟ್ಟು, ಸಾವು ಮತ್ತು ಇತರೆ ಮುಖ್ಯ ಘಟನೆಗಳಲ್ಲಿ ಅವರನ್ನು ನೆನೆಯಲಾಗುತ್ತದೆ. ಇದು ಮರಣ ಹೊಂದಿರುವ ಜೀವಿಗಳಿಗೆ ನಮಸ್ಕಾರವನ್ನು ಅರ್ಪಿಸುವ ರೀತಿ. ಅವರ ತಂದೆ-ತಾಯಂದಿರೇ ಮರಣವನ್ನು ಹೊಂದಿದ್ದಲ್ಲಿ, ಅವರಿಗೂ ಸಹ ಧನ್ಯವಾದಗಳನ್ನು ಅರ್ಪಿಸುವ ಪ್ರತೀಕ- ಹಿರಿಯರ ಪೂಜೆ. ತಮ್ಮನ್ನು ವರ್ಷಾನುಗಟ್ಟಲೆ ಸಾಕಿ ಸಲಹಿದವರಿಗೆ ಒಂದು ಸಣ್ಣ ಕಾಣಿಕೆಯಿದು. ಈ ಒಂದು ಸಂದರ್ಭದಲ್ಲಿ ಎಲ್ಲಾ ಸಂಬಂಧಿಕರೂ ನೆರೆಯುವುದು ಕಡ್ಡಾಯ. ಇದರಿಂದ ಸಂಬಂಧಗಳು ಬೆಳೆಯುತ್ತವೆ ಎಂಬ ನಂಬಿಕೆ ಈ ಜನಾಂಗದವರದ್ದು. ಹಿರಿಯರ ಪೂಜೆ ವರ್ಷಕ್ಕೆ ಎರಡು ಬಾರಿ ನಡೆಸುವುದು ವಾಡಿಕೆ. ಈ ಪೂಜೆಯನ್ನು ಮನೆಯ ಹಿರಿಯ ಅಥವ ಯಜಮಾನನ ಕೈಯಿಂದ ನಡೆಯುತ್ತದೆ. ಸಾಮಾನ್ಯವಾಗಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಮತ್ತು ಹೋಳಿ ಹಬ್ಬದ ಸಮಯದಲ್ಲಿ ಹಿರಿಯರ ಪೂಜೆ ಮಾಡಲಾಗುತ್ತದೆ. ಇದು ಆವಷ್ಯಕವಾಗಿ ಪೂರ್ವಜರ ತಿಥಿ ಎಂದು ನಡೆಯಬೇಕಿಲ್ಲ. ಹಿರಿಯರು ತೀರಿಕೊಂಡ ಮೊದಲ ವರ್ಷವನ್ನು ಮಾತ್ರ ಇವರು ಪರಿಗಣಿಸುತ್ತಾರೆ. ಹಿಂದು ಸಿದ್ದಿಯರಲ್ಲಿ ತಿಥಿಯನ್ನು ಸುದೀರ್ಘವಾದ ಆಚರಣೆಗಳೊಂದಿಗೆ ಮಾಡಲಾಗುತ್ತದೆ. ಅದೇ ಕ್ರೈಸ್ತ ಮತ್ತು ಇಸ್ಲಾಮ್ ಧರ್ಮದವರಲ್ಲಿ ಈ ಪದ್ಧತಿಯಿಲ್ಲ.

ಸಿದ್ದಿ ಮಹಿಳೆ

ಜನಸಂಖ್ಯೆ ಬದಲಾಯಿಸಿ

ಭಾರತ ದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಗಳಲ್ಲಿ ಸಿದ್ದಿಯರನ್ನು ಕಾಣಬಹುದಾದ ರಾಜ್ಯ ಕರ್ನಾಟಕ. ಇತ್ತೀಚಿನ ಗಣನೆಯ ಪ್ರಕಾರ, ಕರ್ನಾಟಕದಲ್ಲಿ ಸುಮಾರು ೩೭೦೦ ಸಿದ್ದಿ ಕುಟುಂಬಗಳು ವಾಸವಾಗಿವೆ ಎಂದರೆ, ಸುಮಾರು ೧೮೦೦೦ ಜನರನ್ನು ಕಾಣಬಹುದು. ಗುಜರಾತಿನಲ್ಲಿ ೧೦೦೦೦ ಮತ್ತು ಹೈದರಾಬಾದಿನಲ್ಲಿ ೧೨೦೦೦ ಜನರಿದ್ದಾರೆ. ಕೆಲವರು ಲಕ್ನೋ , ದೆಹಲಿ ಮತ್ತು ಕಲ್ಕತ್ತಾದಲ್ಲಿ ಕೂಡ ಬೀಡು ಬಿಟ್ಟಿದ್ದಾರೆ. ೧೦೦೦ಕ್ಕಿಂತ ಕಡಿಮೆ ಸಿದ್ದಿಯರು ಶ್ರೀಲಂಕಾದಲ್ಲಿ ಇದ್ದಾರೆ.


ಸಾಮಾಜಿಕ ಸ್ಥಿತಿ ಮತ್ತು ಪುನರ್ವಸತಿ ಬದಲಾಯಿಸಿ

ಭಾರತದಲ್ಲಿ ಮತ್ತು ಪಾಕಿಸ್ತಾನದಲ್ಲಿ ಸಿದ್ದಿ ಜನಾಂಗದ ಸ್ಥಿತಿ ಕರುಣಾಜನಕವಾಗಿದೆ. ಕರ್ನಾಟಕದಲ್ಲೂ ಸಹ ಇವರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ನಿರ್ಲಕ್ಷಿಸಲಾಗಿದೆ. ೧೯೮೪ರಲ್ಲಿ, ನಮ್ಮ ರಾಜ್ಯದ ದಾಂಡೇಲಿಯಲ್ಲಿರುವ ಗ್ರಾಮೀಣ ಕಲ್ಯಾಣ ಸಮಿತಿಯವರು ಕರ್ನಾಟಕ ಸಿದ್ದಿ ಅಭಿವೃದ್ಧಿ ಸಂಘವನ್ನು ಪ್ರಾರಂಭಿಸಿದರು. ಈ ಸಂಘದ ಮೂಲಕ ಸಿದ್ದಿ ಜನರನ್ನು ಒಟ್ಟುಗೂಡಿಸುವ ಮತ್ತು ಅವರಿಗೆ ಉದ್ಯೋಗದ ಸದವಕಾಶ ನೀಡುವ ಮಹತ್ಕಾರ್ಯ ನಡೆಯುತ್ತಿದೆ. ಮ್ಯಾಗಸೇಸೆ ಪ್ರಶಸ್ತಿಯ ಪುರಸ್ಕೃತರಾಗಿರುವ ವಿ. ಸುಬ್ಬಣ್ಣನವರೂ ಸಹ ಈ ಕೆಲಸದಲ್ಲಿ ಭಾಗಿಯಾಗಿರುವರು. ೮ ಜನವರಿ ೨೦೦೩ರಲ್ಲಿ ಕೇಂದ್ರ ಸರ್ಕಾರ ಸಿದ್ದಿ ಜನಾಂಗವನ್ನು ಪರಿಶಿಷ್ಟ ಬುಡಕಟ್ಟು ಪಟ್ಟಿಯಲ್ಲಿ ಪರಿಗಣಿಸಿತು. ಇದರಿಂದಾಗಿ ಈ ಜನಾಂಗ ಇಂದು ಸಂವಿಧಾನದ ಪ್ರಕಾರ ಶಕ್ತರಾಗಿದ್ದಾರೆ. ನಿರಾಶ್ರಿತ ಸಿದ್ದಿಯರಿಗೆ ವಸತಿ ಯೋಜನೆ, ಉದ್ಯೋಗಾವಕಾಶ, ಶಿಕ್ಷಣ, ವಿದ್ಯುತ್‌ಶಕ್ತಿ, ಆಸ್ಪತ್ರೆಗಳು, ರಸ್ತೆಗಳು ಮುಂತಾದ ಸೌಲಭ್ಯಗಳನ್ನು ನೀಡುವ ಕಾರ್ಯ ಸರ್ಕಾರ ಕೈಗೊಂಡಿದೆ. ಇದರ ಅಡಿಯಲ್ಲಿ ಪ್ರತಿಯೊಂದು ಸಿದ್ದಿ ಕುಟುಂಬಕ್ಕೆ ತಲಾ ಎರಡು ಎಕರೆ ಜಮೀನನ್ನು ಅಥವಾ ಭೂಮಿಯನ್ನು ನೀಡಲಾಗುತ್ತಿದೆ. ಇತ್ತೀಚೆಗೆ, ಯು.ಎನ್.ಓ(UNO) ಸಂಘದ ಯುನೆಸ್ಕೊ(UNESCO) ಸಮಿತಿ ಈ ಬುಡುಕಟ್ಟಿನವರ ಪುನರ್ವಸತಿ ಕಾರ್ಯವನ್ನು ಮಾಡಲು ಮುಂದಾಗಿದೆ. ಇದಕ್ಕಾಗಿಯೇ ಹಣದ ಸಹಾಯವನ್ನೂ ಸಹ ನೀಡುತ್ತಿದೆ.

ಉಲ್ಲೇಖಗಳು ಬದಲಾಯಿಸಿ

ಬಾಹ್ಯ ಸಂಪರ್ಕಗಳು ಬದಲಾಯಿಸಿ