ಬುಡಕಟ್ಟು ಎಂದರೆ ನಿರ್ದಿಷ್ಟ ಪ್ರದೇಶದಲ್ಲಿ ನೆಲಸಿದ್ದು ನಿರ್ದಿಷ್ಟ ಭಾಷೆ ಮಾತಾಡುವ ಒಬ್ಬ ಮೂಲ ಪುರುಷ, ಒಂದು ಅಧಿದೈವ, ಒಬ್ಬ ಸರ್ವಾನುಮತದ ಮುಖ್ಯಸ್ಥನನ್ನು ಹೊಂದಿರುವ, ಏಕಪ್ರಕಾರವಾದ ನೈಸರ್ಗಿಕ ಕಾಯಿದೆ ಕಟ್ಟಳೆ ಅನುಸರಿಸುವ ಮತ್ತು ಸಮಾನ ಸಂಸ್ಕೃತಿ ಹಾಗೂ ಸುಸಂಘಟಿತ ಸಾಮಾಜಿಕ ವ್ಯವಸ್ಥೆಯನ್ನು ರೂಢಿಸಿಕೊಂಡಿರುವ ಸಾಮಾಜಿಕ ಗುಂಪು. ಅಂದರೆ ಒಂದು ಸಣ್ಣ, ಸ್ವತಂತ್ರ ಮತ್ತು ಅನ್ಯೋನ್ಯವಾಗಿ ಒಂದುಗೂಡುವ ಜನರ ಸಮೂಹ; ರಕ್ತಸಂಬಂಧದ ಎಳೆಯ ಮೂಲಕ ಸಾಮಾಜಿಕ ಮತ್ತು ಸಾಂಸ್ಕ್ರತಿಕ ಅಂಶಗಳಿಂದ ಬಂಧಿತವಾಗಿರುತ್ತದೆ. ಅದರ ರಾಜಕೀಯ ವ್ಯವಸ್ಥೆ ವ್ಯಾಪಕವಾದ ತಳಹದಿಯ ಮೇಲೆ ಪುರಾತನ ಪ್ರಜಾಪ್ರಭುತ್ವ ಕ್ರಮವನ್ನಾಧರಿಸಿದೆ (ಕ್ರೋಬರ್).

ಮಜುಂದಾರ್ ಅವರ ಜಾತಿ ಕುರಿತ ವ್ಯಾಖ್ಯೆ ಬುಡಕಟ್ಟಿಗೂ ಅನ್ವಯಿಸುತ್ತದೆ. ಒಂದೇ ಹೆಸರು, ಒಂದೇ ಭಾಷೆ, ಒಂದೇ ಭೂ ಪ್ರದೇಶದಲ್ಲಿ ವಾಸಿಸುವ ಸಗೋತ್ರ ಸಂಬಂಧದ ಜನರ ಗುಂಪೇ ಜಾತಿ ಎಂದು ಅವರು ಹೇಳಿದ್ದಾರೆ. ಬುಡಕಟ್ಟು ಜಾತಿಯಿಂದ ಹೇಗೆ ಭಿನ್ನವಾಗುತ್ತದೆ ಎಂಬುದನ್ನು ವಿವರಿಸುವಾಗ ಬುಡಕಟ್ಟು ಆಂಗಿಕವಾದ ಏಕತೆಯನ್ನು ಹೊಂದಿರುವಂಥದು. ಅಲ್ಲಿ ಶ್ರೇಣೀಕರಣ ಪದ್ಧತಿ ಇರುವುದಿಲ್ಲ ಎಂದಿದ್ದಾರೆ. ಸಿನ್ಹಾ ಪ್ರಕಾರ ಬುಡಕಟ್ಟು ಆರ್ಥಿಕ ರಾಜಕೀಯ ಮತ್ತು ಇತರ ಸಾಮಾಜಿಕ ಸಂಬಂಧಗಳ ಮುನ್ನೆಲೆಯಲ್ಲಿ ಇತರ ಸಂಸ್ಕøತಿ ಸಮೂಹಗಳಿಂದ ಬೇರೆಯಾಗಿ ನಿಲ್ಲುತ್ತದೆ. ಅದು ಗುಂಪಿನೊಳಗಿನ ಪ್ರತ್ಯೇಕತಾ ಭಾವನೆಗಳನ್ನು ಬಲವಾಗಿ ಪ್ರೋತ್ಸಾಹಿಸುತ್ತದೆ. ಇದಕ್ಕೆ ಪರ್ಯಾಯವಾಗಿ ಜಾತಿ ವಿಶಿಷ್ಟ ರೀತಿಯಲ್ಲಿ ಸಂಬಂಧ ಹೊಂದುತ್ತವೆ; ವಿಜಾತಿಯ ಗುಂಪಾಗಿದ್ದು ವಿವಿಧ ಸ್ಥರಗಳನ್ನು ಹೊಂದಿರುತ್ತದೆ. ಜಾತಿವ್ಯವಸ್ಥೆಯಲ್ಲಿ ಬರುವ ಸಮಾಜದ ಅತ್ಯಂತ ಕೆಳಸ್ಥರದ ದುರ್ಬಲರು ಗ್ರಾಮೀಣ ಮತ್ತು ನಗರ ಜೀವನದಿಂದ ದೂರವಿದ್ದು ಇನ್ನೂ ಬುಡಕಟ್ಟು ಜೀವನವನ್ನೇ ಬದುಕುತ್ತಿದ್ದಾರೆ. ಅಂಥವರನ್ನು ರೈಸ್ಲೆ ಮತ್ತು ಗೈಟ್ ಅವರು ಬುಡಕಟ್ಟು ಜಾತಿ (ಟ್ರೈಬಲ್ ಕಾಸ್ಟ್) ಎಂದು ಕರೆದಿದ್ದಾರೆ. ತಮ್ಮ ಮೂಲ ಹೆಸರು, ವೈಶಿಷ್ಟ್ಯಪೂರ್ಣ ಸಂಪ್ರದಾಯಗಳನ್ನು ಉಳಿಸಿಕೊಂಡು ಸರ್ವಚೇತನ ಆರಾಧನಾ ಪದ್ಧತಿಯನ್ನು ತುಸು ಮಾರ್ಪಡಿಸಿಕೊಂಡು ಶುದ್ಧ ಸಂಪ್ರದಾಯಸ್ಥ ಸಮೂಹದ ಸೃಷ್ಟಿಗೆ ಕಾರಣರಾಗುವ ಜನರು. ಉದಾಹರಣೆಗೆ ಚೌರಿ, ಬಗಡಿ, ಲೋಹರ್, ಕವೋರಾ, ತಿಯಾರ್ ಮತ್ತಿತರರು.

ಬುಡಕಟ್ಟು ಎಂಬ ಪದ ಆದಿವಾಸಿ ಅಲೆಮಾರಿ ಗುಂಪುಗಳಿಗೆ ಮಾತ್ರ ಅನ್ವಯವಾಗುವಂಥದಲ್ಲ. ಅನೇಕ ಸಂಪ್ರದಾಯಸ್ಥ ಸಮಾಜಗಳು ಕೂಡ ಬುಡಕಟ್ಟಿನ ಸ್ವರೂಪ ಹೊಂದಿವೆ. ಆಫ್ಘಾನಿಸ್ಥಾನದ ಹಜರ ಮಂಗೋಲರಲ್ಲಿ ಗ್ರಾಮೀಣ ಬೇಸಾಯಗಾರರು ಮತ್ತು ಪಶುಸಂಗೋಪಕರು ಎಂಬ ಬುಡಕಟ್ಟುಗಳಿವೆ. ಪೂರ್ವ ಆಫ್ರಿಕಾದ ಬಗಾಂಡದಲ್ಲಿಯ, ಮಧ್ಯ ಆಫ್ರಿಕಾದ ರಾಜ್ಯ ರುವಾಂಡದಲ್ಲಿಯ ಹಾಗೂ ಪಶ್ಚಿಮ ಆಫ್ರಿಕಾದ ನ್ಯೂಪ್ ರಾಜ್ಯದಲ್ಲಿಯ ಜನ ಬೇರೆ ಬೇರೆ ಬುಡಕಟ್ಟು ವರ್ಗಗಳಿಗೆ ಸೇರಿದವರಾಗಿದ್ದಾರೆ. ಇರಾನಿನ ಹಜಾರ ಬುಡಕಟ್ಟಿನ ಜನರೆಲ್ಲ ಒಂದೇ ಭಾಷೆಯನ್ನು ಮಾತನಾಡುತ್ತಿದ್ದು ರಕ್ತ ಸಂಬಂಧದ ಎಳೆಯಿಂದ ಬಂಧಿತರಾಗಿದ್ದಾರೆ. ಅವರಿಗೆ ಒಬ್ಬ ನಾಯಕನಿದ್ದಾನೆ. ಪ್ರಾಚೀನ ಜರ್ಮನರನ್ನು ಬುಡಕಟ್ಟು ಜನರೆಂದೇ ಪರಿಗಣಿಸಲಾಗಿದೆ. 13ನೆಯ ಶತಮಾನದಲ್ಲಿ ಇಂಗ್ಲಿಷರು ಬುಡಕಟ್ಟು ಜೀವನವನ್ನು ಮಾರ್ಪಡಿಸಿಕೊಂಡ ಮೇಲೆ ವೆಲ್ಷರು ಭಾಗಶಃ ಬುಡಕಟ್ಟು ಜನರಾಗಿದ್ದಾರೆ. ಸ್ಟಾಟರ್ ಬಹಳಕಾಲದ ತನಕ ಬುಡಕಟ್ಟು ಸಂಸ್ಕøತಿಯನ್ನು ಉಳಿಸಿಕೊಂಡಿದ್ದರು. ಯೂರೊಪ್ ನೆಲಸುನಾಡಾಗುವುದಕ್ಕೆ ಮೊದಲು ಉತ್ತರ ಅಮೆರಿಕೆಯಲ್ಲಿ ಬಹುಪಾಲು ಜನ ಬುಡಕಟ್ಟು ಜನರೇ ಆಗಿದ್ದರು. ಇಸ್ರೇಲಿಗಳಲ್ಲಿ ಹನ್ನೆರಡು ಬುಡಕಟ್ಟು ಗಳಿವೆ. ಪ್ರಾಚೀನ ಗ್ರೀಕರಲ್ಲೂ ಅನೇಕ ಬುಡಕಟ್ಟುಗಳಿದ್ದುವು. ಅಮೆರಿಕನ್ ಇಂಡಿಯನ್ನರನ್ನು ಇಂದಿಗೂ ಬುಡಕಟ್ಟು ಜನ ಎಂದೇ ಗುರುತಿಸಲಾಗುತ್ತಿದೆ. ಆಫ್ರಿಕಾದ ಸಂಸ್ಕøತಿ ಸಂಪೂರ್ಣವಾಗಿ ಬುಡಕಟ್ಟು ಸಂಸ್ಕøತಿಯೇ ಆಗಿದೆ. ಬದಲಾದ ಜೀವನ ಮೌಲ್ಯ, ಕೈಗಾರಿಕೀಕರಣ, ನಗರೀಕರಣದ ಪ್ರಭಾವದಿಂದಾಗಿ ಬುಡಕಟ್ಟು ಸಮಾಜಗಳು ಜಾತಿಗಳಾಗಿ ಪರಿವರ್ತನೆಗೊಳ್ಳುತ್ತಿವೆ.

ಭಾರತೀಯ ಬುಡಕಟ್ಟುಗಳು

ಬದಲಾಯಿಸಿ

ಸಾಂಸ್ಕøತಿಕವಾಗಿ ಭಾರತೀಯ ಬುಡಕಟ್ಟುಗಳು ವಿಶಿಷ್ಟ ಗುಣವುಳ್ಳವು. ಭಾರತದಲ್ಲಿ ಇಂದಿಗೂ ಆಹಾರ ಸಂಗ್ರಹಣ ಹಂತದಲ್ಲೇ ಬದುಕು ನಡೆಸುತ್ತಿರುವ ಅನೇಕ ಬುಡಕಟ್ಟು ಜನರಿದ್ದಾರೆ. ಅವರು ನಗರ ಬದುಕಿಗೆ ದೂರವಿದ್ದು ಸರಳ ಸಾಮಾಜಿಕ ವ್ಯವಸ್ಥೆ ಹೊಂದಿದ್ದಾರೆ. (ಅಂಡಮಾನ್ ದ್ವೀಪನಿವಾಸಿಗಳು ಕಾಡಾರರು) ಅಂಡಮಾನ್ ದ್ವೀಪವಾಸಿಗಳು ಉತ್ತಮ ನೆಲೆ ದೊರಕಿಸಿಕೊಳ್ಳುವುದಕ್ಕಾಗಿ ಒಳ್ಳೆಯ ಆಹಾರ ಪಡೆಯುವುದಕ್ಕಾಗಿ ಸ್ಥಳದಿಂದ ಸ್ಥಳಕ್ಕೆ ಅಲೆದಾಡುತ್ತಾರೆ. ಆದರೆ ಈ ಸಂಚಾರ ಗೊತ್ತಾದ ಗಡಿರೇಖೆಯೊಳಗೇ ನಡೆಯುತ್ತದೆ. ಕೆಲವು ಬುಡಕಟ್ಟುಗಳು ಹುಲ್ಲುಗಾವಲು ಜೀವನ ನಡೆಸುತ್ತಿದೆ. ನಾಗರಿಕತೆಯ ಸ್ಪರ್ಶವೇ ಇಲ್ಲದಿರುವ ಸಂಕೀರ್ಣ ಮಾದರಿಯ ಸಾಮಾಜಿಕ ವ್ಯವಸ್ಥೆ ಹೊಂದಿದ ಜನ ಇವರು (ತೋಡರು). ಗುಡ್ಡ ಬೆಟ್ಟಗಳಲ್ಲಿ ವಾಸಿಸುತ್ತಿದ್ದು ಸ್ಥಳಾಂತರ ಕೃಷಿಕ್ರಮ ಉಳಿಸಿಕೊಂಡಿರುವ, ಪ್ರಗತಿಪರ ಸಾಮಾಜಿಕ ವ್ಯವಸ್ಥೆ ಹೊಂದಿರುವ ಬುಡಕಟ್ಟುಗಳೂ ಇವೆ (ಖಾಸಿ ನಾಗ). ಕೆಲವು ಬುಡಕಟ್ಟುಗಳು ಕೃಷಿಯನ್ನೇ ಪ್ರಧಾನ ವೃತ್ತಿಯಾಗಿ ಅವಲಂಬಿಸಿದ್ದು ಹೆಚ್ಚು ಅಭಿವೃದ್ಧಿಪರವಾದ ಸಾಮಾಜಿಕ ವ್ಯವಸ್ಥೆ ಹೊಂದಿದ್ದು ನಾಗರಿಕ ಜೀವನದಿಂದ ಪ್ರಭಾವಿತವಾಗಿವೆ (ಗೋಂಡ್, ಭಿಲ್, ಸಂತಾಲ್, ಒರಾಓ).

ವೈವಿಧ್ಯದಲ್ಲಿ ಏಕತೆ ಭಾರತೀಯ ಸಂಸ್ಕøತಿಯ ವೈಶಿಷ್ಟ್ಯ. ಇಲ್ಲಿಯ ಬುಡಕಟ್ಟುಗಳು ಭಾರತದ ವಿವಿಧ ಭಾಗಗಳಲ್ಲಿ ಚದುರಿದಂತೆ ನೆಲಸಿದ್ದರೂ ಇವುಗಳ ಸಾಮಾಜಿಕ ಮತ್ತು ಸಾಂಸ್ಕøತಿಕ ಜೀವನದಲ್ಲಿ ಗುರುತಿಸಬಹುದಾದ ಹಲವಾರು ಸಾಮ್ಯಗಳಿವೆ. ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಭಿನ್ನತೆ ಪಡೆದಿರುವ ಬುಡಕಟ್ಟು ಜನರು ಬೇರೆ ಬೇರೆ ದೈವಗಳಿಗೆ ನಡೆದುಕೊಳ್ಳುತ್ತಾರೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: