ಕಾಸೆ ಕುಣಿತ ಬದಲಾಯಿಸಿ

ಮುನ್ನುಡಿ ಬದಲಾಯಿಸಿ

ದಕ್ಷಿಣ ಕರ್ನಾಟಕದಲ್ಲಿ 'ಕಾಸೆಕುಣಿತ' ಎಂದು ಕರೆಯಲಾಗುವ ಕಲೆಯನ್ನೇ ಉತ್ತರ ಕರ್ನಾಟಕದ ಕಡೆ 'ಪುರವಂತಿಕೆ' ಎಂದೂ ಕರೆಯುತ್ತಾರೆ ಎಂಬ ಅಭಿಪ್ರಾಯವಿದೆ. ಹಲಗೆ ಕುಣಿತ, ಲಿಂಗದ ಬೀರನ ಕುಣಿತ, ಕಟಕಿ ಹೇಳುವುದು ಇತ್ಯಾದಿ ಅಂಕಿತಗಳು ಇದಕ್ಕೆ ಪರ್ಯಾಯವಾದವು. ಕಾಸೆ ಕುಣಿತಕ್ಕೂ 'ವೀರಗಾಸೆ'ಯಲ್ಲಿ ಹೇಳುವ ಕಥೆಹಿನ್ನಲೆಯೇ ಇದ್ದರೂ ವೇಷಭೂಷಣಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ.

ವೇಷ ಭೂಷಣ ಬದಲಾಯಿಸಿ

ಕಲಾವಿದರು ಕೆಂಪು ಕಾಸೆ ಪಂಚೆ, ಕೆಂಪು ಜುಬ್ಬ, ತಲೆಗೆ ಕೆಂಪು ಚೌಕಗಳನ್ನು ಧರಿಸಿರುತ್ತಾರೆ. ಹಿಂದಲೆಗೆ ಚೌಲಿ, ಬಲಗೈಗೆ ಖಡ್ಗ ಹಾಗೂ ಎಡಗೈಯಲ್ಲಿ ಎದೆಗೆ ಹೊಂದಿಕೊಂಡಂತೆ ಮಹಾರುದ್ರಪ್ರತಿಮೆ ಇರುವ ಹಲಗೆಯನ್ನು ಧರಿಸಿರುತ್ತಾರೆ. ಮುಖಕ್ಕೆ ಕೆಂಪು ಬಣ್ಣ, ನಡುವಿಗೆ ಹಿತ್ತಾಳೆ ಅಥವಾ ಬೆಳ್ಳಿಗಗ್ಗರ, ಕಾಲಿಗೆ ಗೆಜ್ಜೆ- ಇವರ ತೊಡುಗೆಗಳು.

ಆಚರಣೆ ಬದಲಾಯಿಸಿ

ಶಿವರಾತ್ರಿ, ನವರಾತ್ರಿ ಕಾರ್ತಿಕ ಹಬ್ಬ ಹರಿದಿನಗಳಲ್ಲಿ ಮದುವೆ, ದೇವರ ಉತ್ಸವ, ಗೃಹಪ್ರವೇಶ ಮೊದಲಾದ ಸಂದರ್ಭಗಳಲ್ಲಿ ಈ ಆಚರಣೆ ನಡೆಯುತ್ತದೆ. ತಮಟೆ, ನಗಾರಿ, ತಾರಸಿ, ಪಕ್ಕ ವಾದ್ಯ ಮೊದಲಾದ ವಾದ್ಯ ವಿಶೇಷಗಳು ಇದಕ್ಕೆ ಹಿಮ್ಮೇಳ. ಸಾಮಾನ್ಯವಾಗಿ ಯಾವುದಾದರೂ ಹೊಳೆಬದಿಯಿಂದ ಕಾಸೆ ಕಟ್ಟುವ ವ್ಯಕ್ತಿಯನ್ನು ಹಿಮ್ಮೇಳದೊಂದಿಗೆ ಕರೆತರುತ್ತಾರೆ. ಹೊಳೆ ಇಲ್ಲದಂತಹ ಸಂದರ್ಭಗಳಲ್ಲಿ ಸಮೀಪಗುಡಿಯಿಂದಲೂ ಕರೆತರಬಹುದು. ಹೀಗೆ ಕರೆದು ತರುವಾಗ ಹೆಣ್ಣುಮಕ್ಕಳು ಗಡಿಗೆಗಳಲ್ಲಿ ನೀರು (ಗಂಗಾ) ತರುತ್ತಾರೆ. ಇದಕ್ಕೆ ದೇವರು ತರುವುದು ಎನ್ನಲಾಗುತ್ತದೆ. ನಡೆದು ತರುವ ದಾರಿಯಲ್ಲಿ ಮೈಲಿಗೆಯಾಗಬಾರದೆಂದು ಅಗಸನಿಂದ ಮಡಿ ಮಾಡಿದ ಬಟ್ಟೆಗಳನ್ನು ಹಾಸುತ್ತಾರೆ. ಇದು 'ನಡೆಮಡಿ'. ಈ ಒದ್ದೆ ಬಟ್ಟೆಯನ್ನು 'ಹಡದಿ' ಎಂದು ಕರೆಯಲಾಗುತ್ತದೆ. ಹೀಗೆ ಬರುವಾಗ ದೇವಾಲಯದ ಮುಂದೆ ವಾದ್ಯಗಳ ಸಹಿತ ಕಾಸೆ ಕುಣಿತ ನಡೆಯುತ್ತದೆ. ಕುಣಿತ ಮುಗಿದ ಮೇಲೆ ನಡುನಡುವೆ 'ಕಟಕಿ' ಅಥವಾ 'ಖಡ್ಗ' ಹೇಳುತ್ತಾರೆ. ಸಾಮಾನ್ಯವಾಗಿ, ಈ ಕಟಕಿಗಳು ದಕ್ಷಬ್ರಹ್ಮನ ಸಂಹಾರ, ಸೃಷ್ಠಿಲಯಗಳಿಗೆ ಸಂಬಂಧಿಸಿದ ಕಥೆಗಳು, ಹಾಗೂ ಪುಣ್ಯಕಥೆಗಳಾಗಿರುತ್ತದೆ. ಹೀಗೆ ಕಟಕಿ ಹೇಳುತ್ತಿರಬೇಕಾದರೆ ನಡುನಡುವೆ ಅವರಲ್ಲೇ ಒಬ್ಬ 'ಉಳ್ಳತ್' ಎನ್ನುತ್ತಿರುತ್ತಾನೆ. ಕಾಸೆ ಕುಣಿತದವರು ವೀರಾವೇಷದಿಂದ ಕುಣಿಯುತ್ತಿರುವಾಗ ಅವರ ಕೋಪವನ್ನು ಉಪಶಮನ ಮಾಡಲು ಆಗಾಗ ತೆಂಗಿನಕಾಯಿಯನ್ನು ಒಡೆಯಲಾಗುತ್ತದೆ. ಇದನ್ನು 'ಈಡುಗಾಯಿ' ಎಂದು ಕರೆಯುತ್ತಾರೆ.

ಉಲ್ಲೇಖ ಬದಲಾಯಿಸಿ

  1. ಪ್ರೋ, ಹಿ.ಚಿ.ಬೋರಲಿಂಗಯ್ಯ. ಕರ್ನಾಟಕ ಜನಪದ ಕಲೆಗಳ ಕೋಶ. ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪುಟ ಸಂಖ್ಯೆ: ೭೩.