ಕತ್ತಿ

(ಖಡ್ಗ ಇಂದ ಪುನರ್ನಿರ್ದೇಶಿತ)

ಕತ್ತಿ ಚಾಕು ಅಥವಾ ಬಾಕಿಗಿಂತ ಉದ್ದವಾಗಿರುವ ಸಿಗಿಯಲು ಅಥವಾ ಇರಿಯಲು ಉದ್ದೇಶಿತವಾಗಿರುವ ಅಲಗಿರುವ ಒಂದು ಆಯುಧ. ಈ ಪದದ ನಿಖರ ವ್ಯಾಖ್ಯಾನ ಪರಿಗಣನೆಯಲ್ಲಿರುವ ಐತಿಹಾಸಿಕ ಯುಗ ಅಥವಾ ಭೌಗೋಳಿಕ ಪ್ರದೇಶದೊಂದಿಗೆ ಬದಲಾಗುತ್ತದೆ. ಕತ್ತಿಯು ಹಿಡಿಗೆ ಕೂಡಿಸಲಾದ ಉದ್ದನೆಯ ಅಲಗನ್ನು ಹೊಂದಿರುತ್ತದೆ. ಅಲಗು ನೇರವಾಗಿ ಅಥವಾ ಬಾಗಿರಬಹುದು. ಇರಿಯುವ ಕತ್ತಿಗಳು ಅಲಗಿನ ಮೇಲೆ ಚೂಪಾದ ತುದಿಯನ್ನು ಹೊಂದಿರುತ್ತವೆ, ಮತ್ತು ನೇರವಾಗಿರುತ್ತವೆ; ಸಿಗಿಯುವ ಕತ್ತಿಗಳು ಅಲಗಿನ ಒಂದು ಅಥವಾ ಎರಡೂ ಪಾರ್ಶ್ವಗಳ ಮೇಲೆ ತೀಕ್ಷ್ಣವಾದ ಕತ್ತರಿಸುವ ಅಂಚನ್ನು ಹೊಂದಿರುತ್ತವೆ, ಮತ್ತು ವಕ್ರವಾಗಿರುವ ಸಾಧ್ಯತೆ ಹೆಚ್ಚು. ಅನೇಕ ಕತ್ತಿಗಳನ್ನು ಇರಿಯುವುದು ಮತ್ತು ಸಿಗಿಯುವುದು ಎರಡಕ್ಕೂ ವಿನ್ಯಾಸಗೊಳಿಸಲಾಗಿರುತ್ತದೆ.

ಸ್ವಿಸ್ ಉದ್ದಕತ್ತಿ, ೧೫ನೇ ಅಥವಾ ೧೬ನೇ ಶತಮಾನ

ಐತಿಹಾಸಿಕವಾಗಿ, ಕತ್ತಿಯು ಕಂಚಿನ ಯುಗದಲ್ಲಿ ಬಾಕಿನಿಂದ ವಿಕಸನಗೊಂಡಿತು; ಅತ್ಯಂತ ಮುಂಚಿನ ಮಾದರಿಗಳು ಸುಮಾರು ಕ್ರಿ.ಪೂ. ೧೬೦೦ ಕ್ಕೆ ಸೇರಿದ್ದೆಂದು ಕಾಲನಿರ್ದೇಶ ಮಾಡಲಾಗಿದೆ. ನಂತರದ ಕಬ್ಬಿಣ ಯುಗದ ಕತ್ತಿಯು ಸಾಕಷ್ಟು ಗಿಡ್ಡವಾಗಿ ಉಳಿದಿತ್ತು ಮತ್ತು ಅಡ್ಡತಡೆಯನ್ನು ಹೊಂದಿರಲಿಲ್ಲ. ನಂತರದ ರೋಮನ್ ಸೇನೆಯಲ್ಲಿ ಅಭಿವೃದ್ಧಿಗೊಂಡ ಸ್ಪಾಥಾ ಮಧ್ಯಯುಗದ ಐರೋಪ್ಯ ಕತ್ತಿಯ ಪೂರ್ವಾಧಿಕಾರಿಯಾಯಿತು, ಮತ್ತು ಕೇವಲ ಮಧ್ಯಯುಗದ ಕೊನೆಯ ಭಾಗದಲ್ಲಿ ಅಡ್ಡತಡೆಯಿರುವ ಶಸ್ತ್ರವಾಗಿ ಬಳಸಲ್ಪಡುವ ಶ್ರೇಷ್ಠ ಕತ್ತಿಯಾಗಿ ಅಭಿವೃದ್ಧಿಗೊಂಡಿತು.

ಕತ್ತಿಯ ಬಳಕೆಯನ್ನು ಖಡ್ಗ ಕೌಶಲ ಅಥವಾ (ಆಧುನಿಕ ಸಂದರ್ಭದಲ್ಲಿ) ಕತ್ತಿವರಸೆ ಎಂದು ಕರೆಯಲಾಗುತ್ತದೆ. ಆಧುನಿಕ ಕಾಲದ ಪೂರ್ವಾರ್ಧದಲ್ಲಿ, ಪಾಶ್ಚಾತ್ಯ ಕತ್ತಿ ವಿನ್ಯಾಸ ಸ್ಥೂಲವಾಗಿ ಎರಡು ರೂಪಗಳಲ್ಲಿ ದಾರಿ ಹಿಡಿಯಿತು, ಇರಿಯುವ ಕತ್ತಿಗಳು ಮತ್ತು ಬಾಗುಕತ್ತಿಗಳು.

ದಕ್ಷಿಣ ಏಷ್ಯಾದಲ್ಲಿ ಲಭ್ಯವಿರುವ ಕಂಚಿನ ಯುಗದ ಅತ್ಯಂತ ಮುಂಚಿನ ತಾಮ್ರದ ಕತ್ತಿಗಳನ್ನು ಹರಪ್ಪಾದ ತಾಣಗಳಲ್ಲಿ ಪರಿಶೋಧಿಸಲಾಯಿತು, ಮತ್ತು ಕ್ರಿ.ಪೂ. ೨೩೦೦ರಷ್ಟು ಹಿಂದಕ್ಕೆ ಸೇರಿದ್ದೆಂದು ಕಾಲನಿರ್ದೇಶ ಮಾಡಲಾಗಿದೆ. ಗಂಗಾ-ಜಮುನಾ ಪ್ರದೇಶದಾದ್ಯಂತ ಪುರಾತತ್ವ ಶೋಧನೆಗಳಲ್ಲಿ ಕತ್ತಿಗಳನ್ನು ಕಂಡುಹಿಡಿಯಲಾಗಿದೆ. ಇವು ಕಂಚಿನದ್ದು ಅಥವಾ ಹೆಚ್ಚು ಸಾಮಾನ್ಯವಾಗಿ ತಾಮ್ರದ್ದಾಗಿವೆ.[] ವೈವಿಧ್ಯಮಯ ಮಾದರಿಗಳನ್ನು ಫ಼ತೇಹ್‍ಗಢ್‍ನಲ್ಲಿ ಪರಿಶೋಧಿಸಲಾಗಿದೆ. ಇಲ್ಲಿ ಹಲವಾರು ವಿಧದ ಹಿಡಿಗಳಿರುವ ಕತ್ತಿಗಳು ದೊರಕಿವೆ.

ಖಂಡ ಎರಡು ಅಂಚುಗಳಿರುವ ನೇರವಾದ ಕತ್ತಿ. ಇದನ್ನು ಹಲವುವೇಳೆ ಧಾರ್ಮಿಕ ಪ್ರತಿಮಾಶಾಸ್ತ್ರ, ನಾಟಕ ಮತ್ತು ಕಲೆಯಲ್ಲಿ ಚಿತ್ರಿಸಲ್ಪಟ್ಟಿವೆ ಮತ್ತು ಭಾರತದ ಪ್ರಾಚೀನ ಇತಿಹಾಸವನ್ನು ಚಿತ್ರಿಸುತ್ತವೆ. ಕೆಲವು ಸಮುದಾಯಗಳು ಈ ಆಯುಧವನ್ನು ಶಿವನ ಸಂಕೇತವಾಗಿ ಪೂಜಿಸುತ್ತವೆ. ಭಾರತೀಯ ಉಪಖಂಡದಲ್ಲಿ ಸಮರಕಲೆಗಳಲ್ಲಿ ಇದು ಒಂದು ಸಾಮಾನ್ಯ ಆಯುಧವಾಗಿದೆ. ಖಂಡ ಹಲವುವೇಳೆ ಹಿಂದೂ, ಬೌದ್ಧ ಮತ್ತು ಸಿಖ್ ಧರ್ಮಗ್ರಂಥಗಳು ಮತ್ತು ಕಲೆಯಲ್ಲಿ ಕಾಣಿಸಿಕೊಳ್ಳುತ್ತದೆ.[]

ಉಲ್ಲೇಖಗಳು

ಬದಲಾಯಿಸಿ
  1. Allchin, pp. 111–114
  2. Teece, Geoff. Sikhism. Black Rabbit Books. p. 18. ISBN 1583404694.
"https://kn.wikipedia.org/w/index.php?title=ಕತ್ತಿ&oldid=803333" ಇಂದ ಪಡೆಯಲ್ಪಟ್ಟಿದೆ