ಸದಸ್ಯ:Bickykurian/sandbox
ಸಸ್ಯಅಂಗಾಂಶ
ಅಂಗಾಂಶ
ಬದಲಾಯಿಸಿದೇಹದಲ್ಲಿರುವ ಜೀವಕೋಶಗಳ[೧] ಸಂಖ್ಯೆಯ ಆಧಾರದ ಮೇಲೆ ಜೀವಿಗಳನ್ನು ಏಕಕೋಶೀಯ ಹಾಗೂ ಬಹುಕೋಶೀಯ ಎಂದು ವರ್ಗೀಕರಿಸಲಾಗಿದೆ. ಅಮೀಬಾ, ಪ್ಯಾರಮೀಸಿಯಂ ಮುಂತಾದ ಏಕಕೋಶ ಜೀವಿಗಳಲ್ಲಿ, ದೇಹದ ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ಒಂದೇ ಒಂದು ಜೀವಕೋಶವಾಗಿದೆ. ಆದರೆ, ಬಹುಕೋಶೀಯ ಸಸ್ಯ ಮತ್ತು ಪ್ರಾಣಿಗಳ ರಚನೆಯು ಹೆಚ್ಚು ಸಂಕೀರ್ಣವಾಗಿದೆ. ಇವುಗಳಲ್ಲಿ, ನಿರ್ದಿಷ್ಟವಾದ ಕೆಲಸವನ್ನು ನಿರ್ವಹಿಸುವ ಸಲುವಾಗಿ ವಿಶಿಷ್ಟ ಜೀವಕೋಶಗಳ ಗುಂಪುಗಳಿವೆ. ಒಂದು ನಿರ್ದಿಷ್ಟ ಮೂಲದಿಂದ ಬಂದ, ಒಂದೇ ರೀತಿಯ ರಚನೆ ಹಾಗೂ ಕಾರ್ಯಗಳನ್ನು ಮಾಡುವ ಜೀವಕೋಶಗಳ ಗುಂಪಿಗೆ ಅಂಗಾಂಶ ಎಂದು ಹೆಸರು. ಅಂಗಾಂಶಗಳು ತಮ್ಮ ರಚನೆಯಲ್ಲಿ ಹೆಚ್ಚಿನ ವೈವಿಧ್ಯವನ್ನು ತೋರುತ್ತವೆ. ವಿಶೇಷವಾಗಿ ಕೋಶದ ಆಕಾರ, ಕೋಶಭಿತ್ತಿಯ ಮಂದತ್ವ ಹಾಗೂ ಇನ್ನಿತರ ಲಕ್ಷಣಗಳಲ್ಲ್ಲಿ ಈ ಭಿನ್ನತೆ ಇದೆ. ಪ್ರತಿಯೊಂದು ಅಂಗಾಂಶವು ಒಂದು ನಿರ್ದಿಷ್ಟಕಾರ್ಯವನ್ನು ನಿರ್ವಹಿಸುತ್ತದೆ. ನಿರ್ದಿಷ್ಟಕಾರ್ಯವನ್ನು ನಿರ್ವಹಿಸಲು ಜೊತೆಗೂಡುವ ಅಂಗಾಂಶಗಳ ಗುಂಪಿಗೆ ಅಂಗ(organ) ಎಂದು ಹೆಸರು. ನಿರ್ದಿಷ್ಟ ಕಾರ್ಯಗಳನ್ನು ನಿರ್ವಹಿಸುವ ಅಂಗಗಳ ಗುಂಪಿಗೆ ಅಂಗ ವ್ಯವಸ್ಥೆ(organ system) ಎಂದು ಹೆಸರು.ಅಂಗಾಂಶಗಳ ಅಧ್ಯಯನವನ್ನು ಮಾಡುವ ಜೀವಶಾಸ್ತ್ರದ ಶಾಖೆಗೆ ಅಂಗಾಂಶಶಾಸ್ತ್ರ(histology) ಎಂದು ಹೆಸರು. ಸಸ್ಯಗಳಲ್ಲಿ ಕೇವಲ ಅಂಗಾಂಶ ಮಟ್ಟದ ವ್ಯವಸ್ಥೆ ಕಂಡುಬರುತ್ತದೆ. ಅವುಗಳಲ್ಲಿ ಅಂಗಗಳು ಮತ್ತು ಅಂಗವ್ಯವಸ್ಥೆ ಇರುವುದಿಲ್ಲ.
ಸಸ್ಯ ಅಂಗಾಂಶಗಳು
ಬದಲಾಯಿಸಿಆವೃತ ಬೀಜ ಸಸ್ಯಗಳಲ್ಲಿ ಬೆಳವಣಿಗೆ, ಹೀರಿಕೆ, ದ್ಯುತಿ ಸಂಕ್ಲೇಷಣೆ, ರಕ್ಷಣೆ ಹಾಗೂ ನೀರು ಮತ್ತು ಪೋಷಕಾಂಶಗಳ ಸಾಗಾಣಿಕೆ ಮುಂತಾದ ವಿವಿಧ ಕಾರ್ಯಗಳನ್ನು ನಿರ್ವಹಿಸಲು ವಿವಿಧ ಬಗೆಯ ಅಂಗಾಂಶಗಳಿವೆ. ಕಾರ್ಯದ ಆಧಾರದ ಮೇಲೆ ಸಸ್ಯ ಅಂಗಾಂಶಗಳನ್ನು ವರ್ಧನ ಅಂಗಾಂಶ (meristematic tissue) ಹಾಗೂ ಶಾಶ್ವತ ಅಂಗಾಂಶಗಳು(permanent tissue) ಎಂದು ವರ್ಗೀಕರಿಸಲಾಗಿದೆ. ಸಸ್ಯಗಳು ಜೀವಿತಾವಧಿಯ ಕೊನೆಯವರೆಗೆ ಬೆಳೆಯುತ್ತಿರುತ್ತವೆ ಎಂಬುದು ತಿಳಿದ ಸಂಗತಿ. ಇದಕ್ಕೆ ಕಾರಣ, ಬೆಳವಣಿಗೆಗಾಗಿಯೇ ಇರುವ ವರ್ಧನ ಅಂಗಾಂಶ.ವರ್ಧನ ಅಂಗಾಂಶ ನಿರಂತರವಾಗಿ ವಿಭಜನೆಯಾಗುತ್ತಿರುವ ಭ್ರೂಣಕೋಶಗಳಿಂದ ಕೂಡಿದೆ. ಇದಕ್ಕೆ ಬೆಳವಣಿಗೆಯ ಅಂಗಾಂಶ ಎಂಬ ಹೆಸರೂ ಇದೆ. ಇದು ಬೇರಿನ ತುದಿ, ಕಾಂಡದ ತುದಿ, ಮೊಗ್ಗು ಮುಂತಾದ ಬೆಳೆಯುತ್ತಿರುವ ಸಸ್ಯದ ಭಾಗಗಳಲ್ಲಿ ಕಂಡುಬರುತ್ತದೆ. ಎರಡು ರೀತಿಯ ವರ್ಧನ ಅಂಗಾಂಶಗಳನ್ನು ಗುರುತಿಸಬಹುದು. ಅವುಗಳೆಂದರೆ, ತುದಿ ವರ್ಧನ ಅಂಗಾಂಶ(apical) ಹಾಗೂ ಪಾರ್ಶ್ವ ವರ್ಧನ(lateral) ಅಂಗಾಂಶ. ತುದಿ ವರ್ಧನ ಅಂಗಾಂಶವು ಕಾಂಡದ ತುದಿಯಲ್ಲಿ ಸಕ್ರಿಯವಾಗಿದ್ದು, ಸಸ್ಯದ ಎತ್ತರ ಹೆಚ್ಚುವುದಕ್ಕೆ ಕಾರಣವಾಗಿದೆ. ಪಾರ್ಶ್ವ ವರ್ಧನ ಅಂಗಾಂಶವು ಸಸ್ಯದ ಸುತ್ತಳತೆಯ ಹೆಚ್ಚಳಕ್ಕೆ ಕಾರಣವಾಗಿದೆ. ವರ್ಧನ ಅಂಗಾಂಶದ ಜೀವಕೋಶಗಳು ಈ ಕೆಳಗಿನ ಲಕ್ಷಣಗಳನ್ನು ತೋರುತ್ತವೆ.
- ಕೋಶ ಭಿತ್ತಿಯು ತೆಳುವಾಗಿದೆ
- ಜೀವಕೋಶಗಳು ನಿರಂತರ ವಿಭಜನೆಯಿಂದಾಗಿ ಬೆಳವಣಿಗೆಗೆ ಕಾರಣವಾಗುತ್ತವೆ.
- ಜೀವಕೋಶಗಳು ಒತ್ತೊತ್ತಾಗಿ ಜೋಡಣೆಯಾಗಿದ್ದು, ನಡುವೆ ಅಂತರ್ ಕೋಶೀಯ ಅವಕಾಶಗಳಿರುವುದಿಲ್ಲ.
- ದೊಡ್ಡ ಕೋಶಕೇಂದ್ರವಿರುತ್ತದೆ. ಆದರೆ ಪ್ಲಾಸ್ಟಿಡ್ ಗಳಿರುವುದಿಲ್ಲ.
- ಕೋಶಾವಕಾಶಗಳು ಚಿಕ್ಕದಿರಬಹುದು ಅಥವಾ ಇಲ್ಲದಿರಬಹುದು.
ವರ್ಧನ ಅಂಗಾಂಶದ ಜೀವಕೋಶಗಳು ಬೇರು ಹಾಗೂ ಕಾಂಡದಲ್ಲಿರುವ ನಾಳಕೂರ್ಚಗಳಲ್ಲಿಯೂ(vascular bundles) ಕಂಡು ಬರುತ್ತವೆ[೨]. ಅಲ್ಲಿ ಅವು ನಾಳಕೂರ್ಚಗಳ ಬೆಳವಣಿಗೆಗೆ ಕಾರಣವಗುತ್ತವೆ. ಈ ಜೀವಕೋಶಗಳು ಎಲೆಗಳ ಮಧ್ಯೆ ಗೆಣ್ಣುಗಳಲ್ಲಿಯೂ ಇರುತ್ತವೆ. ಅಲ್ಲಿ ಕಾಂಡ ಶಾಖೆಯೊಡೆಯಲು ನೆರವಾಗುತ್ತವೆ. ಎಲ್ಲಾ ಶಾಶ್ವತ ಅಂಗಾಂಶಗಳೂ ವರ್ಧನ ಅಂಗಾಂಶಗಳಿಂದಲೇ ಉತ್ಪತ್ತಿಯಾಗುತ್ತವೆ.
ಶಾಶ್ವತ ಅಂಗಾಂಶಗಳು
ಬದಲಾಯಿಸಿಈ ಅಂಗಾಂಶಗಳು ಪ್ರೌಡಜೀವಕೋಶಗಳಿಂದ ಉಂಟಾಗಿವೆ. ಜೀವಕೋಶಗಳ ಕೋಶ ಭಿತ್ತಿಯು ಸೆಲ್ಯುಲೋಸ್ ನಿಂದ ಕೂಡಿದೆ. ಜೊತೆಗೆ ಹೆಮಿಸೆಲ್ಯುಲೋಸ್, ಪೆಕ್ಟಿನ್ ಹಾಗೂ ಲಿಗ್ನಿನ್ ಎಂಬ ವಸ್ತುಗಳೂ ಇರಬಹುದು. ಪ್ಲಾಸ್ಟಿಡ್ ಗಳು ಮತ್ತಿತರೆ ಕಣದ ಅಂಗಗಳು ಅಭಿವೃದ್ಧಿಯಾದ ಸ್ಥಿತಿಯಲ್ಲಿರುತ್ತವೆ. ಕೋಶಾವಕಾಶಗಳು ದೊಡ್ಡದಾಗಿದ್ದು , ಪ್ರಮುಖವಾಗಿರುತ್ತವೆ. ಪ್ರೌಢ ಹಂತದಲ್ಲಿ ಕೋಶಕೇಂದ್ರ ಇರಬಹುದು, ಇಲ್ಲದೆಯೂ ಇರಬಹುದು. ಶಾಶ್ವತ ಅಂಗಾಂಶಗಳನ್ನು ಎರಡು ಪ್ರಮುಖ ಗುಂಪುಗಳಲ್ಲಿ ಗುರುತಿಸಬಹುದು. ಅವುಗಳೆಂದರೆ, ಸರಳ ಶಾಶ್ವತ ಅಂಗಾಂಶಗಳು ಮತ್ತು ಸಂಕೀರ್ಣ ಶಾಶ್ವತ ಅಂಗಾಂಶಗಳು. ಸರಳ ಶಾಶ್ವತ ಅಂಗಾಂಶಗಳು: ಸರಳ ಶಾಶ್ವತ ಅಂಗಾಂಶಗಳಲ್ಲಿ ಎಲ್ಲ ಜೀವಕೋಶಗಳು ಒಂದೇ ರೀತಿಯಲ್ಲಿದ್ದು, ಒಂದೇ ರೀತಿಯ ಕಾರ್ಯವನ್ನು ನಿರ್ವಹಿಸುತ್ತವೆ. ಸಸ್ಯ ದೇಹದ ಬಹುಭಾಗವನ್ನು ಆಕ್ರಮಿಸುವ ಈ ಅಂಗಾಂಶಗಳು ಸಂಗ್ರಹ, ಆಧಾರ ಮುಂತಾದ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತವೆ. ಮೂರು ಬಗೆಯ ಸರಳ ಶಾಶ್ವತ ಅಂಗಾಂಶಗಳನ್ನು ಗುರುತಿಸಬಹುದು. ಅವುಗಳೆಂದರೆ:
- ಪೇರಂಕೈಮ
- ಕೋಲಂಕೈಮ
- ಸ್ಕ್ಲೀರಂಕೈಮ.
ಪೇರಂಕೈಮ | |
---|---|
ಪೇರಂಕೈಮ
ಬದಲಾಯಿಸಿನೀವು ಸಸ್ಯದ ಹೂವುಗಳಲ್ಲಿ ಮತ್ತು ಎಲೆಗಳಲ್ಲಿ ಮೃದುತ್ವವನ್ನು ಗಮನಿಸಿರಬಹುದು. ಇದಕ್ಕೆ ಕಾರಣ ಪೇರಂಕೈಮ ಅಂಗಾಂಶ. ಈ ಅಂಗಾಂಶವು ಸಸ್ಯದ ಬೇರು, ಕಾಂಡ, ಎಲೆ, ಹೂವು, ಹಣ್ಣು ಹಾಗೂ ಬೀಜದ ಮೆದುವಾದ ಭಾಗಗಳಲ್ಲಿ ಕಂಡು ಬರುತ್ತದೆ. ಪೇರಂಕೈಮ ಅಂಗಾಂಶವು ತೆಳುವಾದ ಭಿತ್ತಿಯನ್ನು ಹೊಂದಿರುವ ಜೀವಂತ ಕೋಶಗಳಿಂದ ಕೂಡಿದೆ. ಜೀವಕೋಶಗಳು ವಿಭಜನೆಯ ಸಾಮರ್ಥ್ಯವನ್ನು ಉಳಿಸಿಕೊಂಡಿವೆ. ಪೇರಂಕೈಮ ಜೀವಕೋಶಗಳು ದುಂಡಾಗಿ, ನೀಳವಾಗಿ, ಬಹುಭುಜಾಕೃತಿಯಲ್ಲಿ ಇಲ್ಲವೆ ಆಕಾರ ರಹಿತವಾಗಿ ಕಾಣಬಹುದು. ಅನೇಕ ಕಡೆ ಜೀವಕೋಶಗಳು ಸಡಿಲವಾಗಿ ಜೋಡಣೆಗೊಂಡಿದ್ದು, ಆಹಾರ ಪದಾರ್ಥಗಳನ್ನು ಸಂಗ್ರಹಿಸಿಟ್ಟುಕೊಂಡಿರುತ್ತದೆ.ಪೇರಂಕೈಮ ಜೀವಕೋಶಗಳಲ್ಲಿ ಕ್ಲೋರೋಪ್ಲಾಸ್ಟ್ಸ್ ಗಳು ಕಂಡು ಬಂದಲ್ಲಿ, ಅದಕ್ಕೆ ಕ್ಲೋರಂಕೈಮ(chlorenchyma)ಎಂದು ಹೆಸರು. ಇದು, ದ್ಯುತಿಸಂಶ್ಲೇಷಣೆಯಲ್ಲಿ ಪಾಲ್ಗೊಳ್ಳುತ್ತದೆ. ತಾವರೆ, ಪಿಸ್ಟಿಯಾ ಮುಂತಾದ ಜಲ ಸಸ್ಯಗಳಲ್ಲಿ ಎಲೆಗಳು ನೀರಿನ ಮೇಲೆ ತೇಲಾಡಲು ಕಾರಣವೇನೆಂದರೆ ಪೇರಂಕೈಮ ಜೀವಕೋಶಗಳು ತುಂಬಾ ಸಡಿಲವಾಗಿ ಜೋಡಣೆಗೊಂಡಿದ್ದು, ಅಂತರ್ ಕೋಶಾವಕಾಶಗಳಲ್ಲಿ ಗಾಳಿ ತುಂಬಿಕೊಂಡಿದೆ. ಇದಕ್ಕೆ ಏರಂಕೈಮ(aerenchyama) ಎಂದು ಹೆಸರು.
ಕೋಲಂಕೈಮ | |
---|---|
ಕೋಲಂಕೈಮ
ಬದಲಾಯಿಸಿಕೋಲಂಕೈಮ ವಿಭಜನೆಯ ಸಾಮರ್ಥ್ಯವನ್ನು ಹೊಂದಿರುವ ಜೀವಂತ ಕೋಶಗಳುಳ್ಳ ಅಂಗಾಂಶ. ಜೀವಕೋಶಗಳು ಒತ್ತೊತ್ತಾಗಿ ಜೋಡಣೆಗೊಂಡಿದ್ದು, ಅಂತರ್ ಕೋಶೀಯ ಅವಕಾಶಗಳಿರುವುದಿಲ್ಲ. ಜೀವಕೋಶಗಳು ಪರಸ್ಪರ ಸೇರುವ ಜಾಗಗಳಲ್ಲಿ ಕೋಶಭಿತ್ತಿಯು ದಪ್ಪವಾಗಿರುತ್ತದೆ. ಕೋಶಭಿತ್ತಿಯಲ್ಲಿ ಹೆಮಿಸೆಲ್ಯುಲೋಸ್ ಅಥವಾ ಪೆಕ್ಟಿನ್ ಕಂಡು ಬರುತ್ತದೆ. ಕೋಲಂಕೈಮ ಸಾಮಾನ್ಯವಾಗಿ ಹೂವಿನತೊಟ್ಟು ಹಾಗೂ ಎಲೆತೊಟ್ಟುಗಳಲ್ಲಿ ಕಂಡು ಬರುತ್ತದೆ.
ಸ್ಕ್ಲೀರಂಕೈಮ | |
---|---|
ಸ್ಕ್ಲೀರಂಕೈಮ
ಬದಲಾಯಿಸಿತೆಂಗಿನ ಕಾಯಿಯನ್ನು ಗಮನಿಸಿ. ಅದರಚಿಪ್ಪು ಸ್ಕ್ಲೀರೆಂಕೈಮ ಎಂಬ ವಿಶಿಷ್ಟ ಸರಳ ಅಂಗಾಂಶದಿಂದಾಗಿದೆ. ಇದು ಪ್ರೌಢ ಹಂತದಲ್ಲ್ಲಿ ನಿರ್ಜೀವವಾಗಿರುವ ನೀಳವಾದ ಜೀವಕೋಶಗಳಿಂದ ಕೂಡಿದೆ. ಪ್ರೌಢತೆಗಳಿಸಿಕೊಳ್ಳುವ ಹಂತದಲ್ಲಿ ಜೀವಕೋಶಗಳ ಸೈಟೋಪ್ಲಾಸಂ ಹಾಗು ಕೋಶಕೇಂದ್ರ ಕ್ರಮೇಣ ಲಿಗ್ನಿನ್ ಎಂಬ ವಸ್ತುವಿನಿಂದ ಪಲ್ಲಟಗೊಳ್ಳುತ್ತದೆ.ಸ್ಕ್ಲೀರಂಕೈಮ ನಾರು ಕೋಶ ಮತ್ತು ಸ್ಕ್ಲೇರೈಡ್ ಗಳೆಂಬ ಎರಡು ಬಗೆಯ ಜೀವಕೋಶಗಳನ್ನು ಗಮನಿಸಬಹುದು. ನಾರು ಕೋಶಗಳಲ್ಲಿ ನಮ್ಯತೆ ಹಾಗೂ ಸ್ಥಿತಿಸ್ಥಾಪಕತ್ವದ ಸಾಮರ್ಥ್ಯ ಇರುವುದರಿಂದ ಇವುಗಳನ್ನು ಗೋಣಿಚೀಲ ಮತ್ತು ಹಗ್ಗ ತಯಾರಿಸುವ ಕೈಗಾರಿಕೆಗಳಲ್ಲಿ ಬಳಸುತ್ತಾರೆ. ಗುಂಪುಗುಂಪಾಗಿ ಕಾಣುವ ಗಟ್ಟಿಕೋಶಗಳಿಗೆ ಸ್ಕ್ಲೇರೈಡ್ ಗಳು ಎಂದು ಹೆಸರು. ಇವುಗಳಲ್ಲಿ ಲಿಗ್ನಿನ್ ಪ್ರಮಾಣ, ನಾರು ಕೋಶಗಳಿಗಿಂತ ಹೆಚ್ಚಿದೆ. ಹೀಗಾಗಿ, ಇವುಗಳಿಗೆ ಕಲ್ಲುಕೋಶಗಳು ಎಂಬ ಹೆಸರಿದೆ. ಇವು ಚೌಕಾಕಾರ, ಸ್ತಂಭಾಕಾರ, ಮೂಳೆಯಂತೆ ಅಥವಾ ನಕ್ಷತ್ರದ ಆಕಾರದಲ್ಲೂ ಇರಬಹುದು. ಇವು ಸಾಮಾನ್ಯವಾಗಿ ಹಣ್ಣು ಮತ್ತು ಬೀಜದ ಕವಚಗಳಲ್ಲಿ ಕಂಡುಬರುತ್ತವೆ.
ಸಂಕೀರ್ಣ ಶಾಶ್ವತ ಅಂಗಾಂಶಗಳು
ಬದಲಾಯಿಸಿಸಂಕೀರ್ಣ ಶಾಶ್ವತ ಅಂಗಾಂಶಗಳಲ್ಲಿ ಜೀವಂತ ಹಾಗೂ ನಿರ್ಜೀವ ಕೋಶಗಳೆರಡೂ ಕಂಡುಬರುತ್ತವೆ. ಬಗೆಬಗೆಯ ಜೀವಕೋಶಗಳಿದ್ದು, ಅವು ಒತ್ತೊತ್ತಾಗಿ ಜೋಡಣೆಗೊಂಡಿವೆ. ಎರಡು ಬಗೆಯ ಸಂಕೀರ್ಣ ಶಾಶ್ವತ ಅಂಗಾಂಶಗಳಿವೆ. ಅವುಗಳೆಂದರೆ, ನೀರು ಸಾಗಾಣಿಕೆ ಮಾಡುವ ಕ್ಸೈಲಮ್ ಹಾಗೂ ಆಹಾರ ಸಾಗಾಣಿಕೆ ಮಾಡುವ ಪ್ಲೋಯಂ ಅಂಗಾಂಶಗಳು. ಇವುಗಳಿಗೆ ಸಾಗಾಣಿಕಾ ಅಂಗಾಂಶಗಳು ಎಂಬ ಹೆಸರೂ ಇದೆ.
ಕ್ಸೈಲಮ್ | |
---|---|
ಕ್ಸೈಲಮ್
ಬದಲಾಯಿಸಿಕ್ಸೈಲಮ್ ಬೇರಿನಿಂದ ಹೀರಲ್ಪಟ್ಟ ನೀರು ಮತ್ತು ಖನಿಜಾಂಶಗಳನ್ನು ಸಸ್ಯದ ಎಲ್ಲ ಭಾಗಗಳಿಗೆ ವಿಶೇಷವಾಗಿ ಎಲೆಗಳಿಗೆ ಸಾಗಿಸುವ ಅಂಗಾಂಶ. ಹೀಗಾಗಿ, ಇದನ್ನು ನೀರು ಸಾಗಾಣಿಕಾ ಅಂಗಾಂಶ ಎಂದು ಕರೆಯಲಾಗುತ್ತದೆ. ಜೊತೆಗೆ ಸಸ್ಯದ ವಿವಿಧ ಭಾಗಗಳಿಗೆ ಯಾಂತ್ರಿಕ ಆಧಾರವನ್ನು ಒದಗಿಸುತದೆ. ಇದರಿಂದಾಗಿಯೇ, ಮರದ ಶಾಖೆಗಳನ್ನು ಮುರಿಯುವುದು ಅಷ್ಟು ಸುಲಭವಲ್ಲ. ಕ್ಸೈಲಂ ಅಂಗಾಂಶವು ಕ್ಸೈಲಂ ಪೇರಂಕೈಮ, ಕ್ಸೈಲಂ ನಾರು, ಕ್ಸೈಲಂ ನಳಿಕೆಗಳು ಹಾಗೂ ಟ್ರೆಕೀಡ್ ಗಳು ಎಂಬ ನಾಲ್ಕು ಘಟಕಗಳಿಂದ ಕೂಡಿದೆ. ಟ್ರೇಕಿಡ್ಗಳು ಗಿಡ್ಡವಾದ ರಚನೆಗಳಾಗಿದ್ದು ಎಲೆಯ ತುದಿಗಳಲ್ಲಿ ಕಂಡುಬರುತ್ತವೆ.
ಫ್ಲೋಯಂ | |
---|---|
ಫ್ಲೋಯಂ
ಬದಲಾಯಿಸಿಫ್ಲೋಯಂ ಅಂಗಾಂಶವು ಸಸ್ಯದ ವಿವಿಧ ಭಾಗಗಳಿಗೆ ಆಹಾರ ಸಾಗಾಣಿಕೆ ಮಾಡುವ ಅಂಗಾಂಶ. ಇದರಲ್ಲಿ ಜರಡಿ ನಾಳಗಳು, ಸಂಗಾತಿಕೋಶಗಳು, ಫ್ಲೋಯಂ ನಾರು ಹಾಗೂ ಫ್ಲೋಯಂ ಪೇರಂಕೈಮ ಎಂಬ ನಾಲ್ಕು ಬಗೆಯ ಘಟಕಗಳಿವೆ. ಜರಡಿ ನಾಳಗಳು ಆಹಾರ ಸಾಗಾಣಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅವು ಒಂದರ ಮೇಲೊಂದು ಜೋಡಣೆಗೊಂಡಿರುವ ನೀಳ ಜೀವಕೋಶಗಳಿಂದ ಕೂಡಿವೆ. ಜೀವಕೋಶಗಳ ನಡುವೆ ಅನೇಕ ಸೂಕ್ಷ್ಮ ರಂಧ್ರಗಳಿರುವ ತಟ್ಟೆಯಾಕಾರದ ರಚನೆಯಿದ್ದು, ಇದಕ್ಕೆ ಜರಡಿತಟ್ಟೆ(sieve plate) ಎಂದು ಹೆಸರು. ಈ ತಟ್ಟೆಯ ರಂಧ್ರದ ಮೂಲಕ ಆಹಾರದ ಸಾಗಾಣಿಕೆ ಆಗುತ್ತದೆ. ಜರಡಿನಾಳಗಳ ಜೊತೆಯಾಗಿಯೇ ಕಂಡುಬರುವ ವಿಶಿಷ್ಟ ಜೀವಕೋಶಗಳಿಗೆ ಸಂಗಾತಿ ಕೋಶಗಳು ಎಂದು ಹೆಸರು. ಈ ಜೀವಂತ ಕೋಶಗಳು, ಆಹಾರದ ಸಾಗಾಣಿಕೆಯನ್ನು ನಿಯಂತ್ರಿಸುತ್ತವೆ ಎಂದು ನಂಬಲಾಗಿದೆ.
ಹೊರಚರ್ಮಾಂಗಾಂಶ
ಬದಲಾಯಿಸಿಸಸ್ಯದ ವಿವಿಧ ಭಾಗಗಳಾದ ಕಾಂಡ, ಎಲೆ,ಹೂವು, ಹಣ್ಣು, ಬೀಜ ಮತ್ತು ಬೇರುಗಳ ಅತ್ಯಂತ ಹೊರ ಹೊದಿಕೆಯು, ಒಂದು ರಕ್ಷಣಾತ್ಮಕ ಅಂಗಾಂಶದಿಂದ ಉಂಟಾಗಿದೆ. ಇದಕ್ಕೆ ಹೊರಚರ್ಮ ಅಂಗಾಂಶ ಎಂದು ಹೆಸರು. ಇದನ್ನು ಸಾಮಾನ್ಯವಾಗಿ ಸಸ್ಯದೇಹದ ಚರ್ಮ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಜೀವಂತವಾಗಿರುವ ಹೊರಚರ್ಮವು(epidermis) ಒಂದು ಪದರದ ಪೇರಂಕೈಮ ಜೀವಕೋಶಗಳಿಂದ ಕೂಡಿದೆ.ಎಳೆಯ ಸಸ್ಯಗಳಲ್ಲಿ ಹಾಗೂ ಮೃದು ಕಾಂಡದ ಪ್ರೌಢಸಸ್ಯಗಳಲ್ಲಿ, ಇದು ಅತ್ಯಂತ ಹೊರಗಿನ ರಕ್ಷಣಾತ್ಮಕ ಅಂಗಾಂಶ. ಗಟ್ಟಿ ಕಾಂಡದ ಸಸ್ಯಗಳಲ್ಲಿ ಹೊರಚರ್ಮವು ಪಲ್ಲಟಗೊಂಡು ಅನೇಕ ಪದರಗಳ ನಿರ್ಜೀವ ಜೀವಕೋಶಗಳ ಹೊದಿಕೆ ಕಂಡುಬರುತ್ತದೆ.ಸಸ್ಯದಲ್ಲು ಹೊರಚರ್ಮ ಅಂಗಾಂಶವಿರುವ ಸ್ಥಾನವನ್ನು ಅವಲಂಬಿಸಿ ವಿವಿಧ ಕಾರ್ಯಗಳನ್ನು ಗುರುತಿಸಬಹುದು.
- ಮಣ್ಣಿನಿಂದ ಮೇಲೆ ಹೊರಚರ್ಮವು ಹೆಚ್ಚಿನ ಪ್ರಮಾಣದ ಬಾಷ್ವವಿಸರ್ಜನೆಯನ್ನು ತಡೆಯುವ ಮೂಲಕ ಸಸ್ಯ ಒಣಗದಂತೆ ನೋಡಿಕೊಳ್ಳುತ್ತದೆ. ಐವಿ ಬಳ್ಳೀ ಕೋಸು, ಬಾಳೆ ಮುಂತಾದ ಅನೇಕ ಸಸ್ಯಗಳಲ್ಲಿ ನೀರಿನ ನಷ್ಟ ತಡೆಯಲು ಹೊರಪೊರೆ (cuticle) ಎಂಬ ಮೇಣದ ಹೊದಿಕೆಯನ್ನು ಸ್ರವಿಸುತ್ತದೆ.
- ಬೇರಿನ ಹೊರಚರ್ಮದಲ್ಲಿ ಇದಕ್ಕಾಗಿಯೇ ಬೇರಿನ ಕೂದಲುಗಳು(root hair) ಬೆಳೆಯುತ್ತವೆ.
- ಎಲೆ ಮತ್ತು ಮೃದು ಕಾಂಡಗಳಲ್ಲಿ ಹೊರಚರ್ಮದಲ್ಲಿ ಪ್ತ್ರರಂಧ್ರಗಳು (stomata) ಎಂಬ ಸೂಕ್ಷ್ಮರಂಧ್ರಗಳು ಕಂಡು ಬರುತ್ತವೆ. ಇವುಗಳ ಮೂಲಕ ಆಕ್ಸಿಜನ್(ಆಮ್ಲಜನಕ), ಇಂಗಾಲದ ಡೈಆಕ್ಸೈಡ್ ಮತ್ತು ತೇವಾಂಶ ಸಾಗಾಣಿಕೆಯಾಗುತ್ತದೆ.