ಕಮಲ

(ತಾವರೆ ಇಂದ ಪುನರ್ನಿರ್ದೇಶಿತ)
Nelumbo nucifera
Scientific classification e
Unrecognized taxon (fix): Nelumbo
ಪ್ರಜಾತಿ:
N. nucifera
Binomial name
Nelumbo nucifera
Synonyms
  • Nelumbium speciosum Willd.
  • Nelumbo komarovii Grossh.
  • Nymphaea nelumbo

ಕಮಲ (ನೀಲಂಬೊ ನೂಸಿಫೆರಾ) ನೀಲಂಬೊನೇಸಿಯಿ ಕುಟುಂಬದಲ್ಲಿನ ಜಲವಾಸಿ ಸಸ್ಯದ ಎರಡು ಪ್ರಜಾತಿಗಳಲ್ಲಿ ಒಂದು. ಹಿಂದಿನ ಹೆಸರುಗಳಾದ ನೀಲಂಬಿಯಮ್ ಸ್ಪೀಸಿಯೋಸಮ್ (ವಿಲ್ಡೆನೌ) ಮತ್ತು ನಿಂಫೆಯಾ ನೀಲಂಬೊ ಎಂದು ವರ್ಗೀಕರಿಸಲಾಗಿರುವ ಈ ಪ್ರಜಾತಿಯ ಪ್ರಸಕ್ತವಾಗಿ ಗುರುತಿಸಲ್ಪಟ್ಟಿರುವ ಹೆಸರು ಲಿನೀಯಸ್‍ನ ದ್ವಿಪದ ನಾಮ ನೀಲಂಬೊ ನೂಸಿಫೆರಾ (ಗ್ಯಾಟ್ನರ್). ಈ ಸಸ್ಯವು ಒಂದು ಜಲವಾಸಿ ಬಹುವಾರ್ಷಿಕ ಸಸ್ಯವಾಗಿದೆ. ತಾವರೆ ಇದರ ಪರ್ಯಾಯ ನಾಮ. ಬಹಳ ಸುಂದರವಾದ ವಿವಿಧ ಬಣ್ಣಗಳ ಹೂ ಬಿಡುವ ಈ ಸಸ್ಯ ಭಾರತೀಯರಿಗೆ ಪವಿತ್ರವೆನಿಸಿದೆ. ಭಾರತದ ಎಲ್ಲ ಪ್ರದೇಶಗಳಲ್ಲೂ ಕೆರೆ, ಕೊಳ ಮುಂತಾದುವುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಉದ್ಯಾನಗಳ ಕೃತಕ ಸರೋವರಗಳಲ್ಲಿ ಅಲಂಕಾರಕ್ಕಾಗಿ ಬೆಳೆಸುವರು. ಆದ್ದರಿಂದಲೇ ಬಹು ಹಿಂದಿನಿಂದಲೂ ಕವಿಗಳು ಸರೋವರವನ್ನು ಕಮಲಾಕರ, ಅಬ್ಜಿಷಂಡ ಎಂದೇ ವರ್ಣಿಸುತ್ತ ಬಂದಿದ್ದಾರೆ.

ಲಕ್ಷಣಗಳು

ಬದಲಾಯಿಸಿ
 
Bud of Nelumbo nucifera
 
Blooming Nelumbo nucifera

ಸಸ್ಯದ ಬುಡದಲ್ಲಿ ವಿಪುಲವಾಗಿ ಕವಲೊಡೆದ ಪ್ರಕಂದ (ರೈóಜೋ಼ಮ್) ಉಂಟು.; ಇದರ ಕವಲುಗಳು ಎಲ್ಲ ದಿಕ್ಕಿಗೂ ಬೆಳೆದು 30'-40' ಅಗಲಕ್ಕೆ ಹರಡುತ್ತವೆ. ಕವಲುಗಳಿಂದ ಹಲವಾರು ದೊಡ್ಡ ಎಲೆಗಳು ಹುಟ್ಟುತ್ತವೆ. ಸಾಮಾನ್ಯವಾಗಿ ಎಲೆಗಳೆಲ್ಲ ನೀರಿನಿಂದ ಮೇಲಕ್ಕೆ ಹೊರಟಿರುತ್ತವೆ. ಒಂದೊಂದು ಎಲೆಯೂ ತುಂಬ ಅಗಲ (60-90 ಸೆಂ.ವ್ಯಾಸವುಳ್ಳದ್ದು) ಮತ್ತು ವೃತ್ತಾಕಾರ. ತಟ್ಟೆಯಂತೆ ಹರಡಿದ ಎಲೆಯ ಅಲಗಿನ ತಳಭಾಗದಲ್ಲಿ ಮಧ್ಯ ಭಾಗಕ್ಕೆ ಅಂಟಿಕೊಂಡಿರುವ ಉದ್ದನೆಯ ತೊಟ್ಟಿದೆ. ಅಲಗಿನ ಬಣ್ಣ ಮಾಸಲು ಹಸಿರು; ಅಂಚು ನಯ,ಹೂ ದೊಡ್ಡದು, ಬಿಳಿ ಅಥವಾ ಗುಲಾಬಿ ಬಣ್ಣದ್ದು, ಅದಕ್ಕೆ ನವುರಾದ ಸುವಾಸನೆಯಿದೆ. ಹೂವಿನಲ್ಲಿ ಬಟ್ಟಲಿನಾಕಾರದ ಪುಷ್ಪ ಪೀಠವೂ ಅದರ ಸುತ್ತ ಅನಿರ್ದಿಷ್ಟ ಮತ್ತು ಹೆಚ್ಚು ಸಂಖ್ಯೆಯ ಹೂದಳಗಳೂ ಇವೆ. ಪುಷ್ಪಪೀಠದಲ್ಲಿ ಅನೇಕ ಅಂಡಕೋಶಗಳು ಅಡಗಿದ್ದು ಅವುಗಳ ಶಲಾಕಾಗ್ರ ಮಾತ್ರ ಪೀಠದ ಸಮತಳದ ಮೇಲೆ ಕಾಣಿಸುತ್ತವೆ. ದಳಗಳಿಗೂ ಪೀಠದ ಸಮತಳಕ್ಕೂ ನಡುವೆ ಅಸಂಖ್ಯಾತವಾದ ಕೇಸರಗಳು ಜೋಡಿಸಿಕೊಂಡಿವೆ. ಒಂದೊಂದು ಅಂಡಕೋಶದಲ್ಲಿ ಒಂದೊಂದೇ ಅಂಡಕವಿದೆ. ಗರ್ಭಾಂಕುರವಾದನಂತರ ಅಂಡಕೋಶಗಳು ಎಕೀನ್ ಮಾದರಿಯ ಫಲಗಳಾಗುತ್ತವೆ. ಕಮಲವನ್ನು ಅದರ ಪ್ರಕಂದದ ತುಂಡುಗಳಿಂದ ವೃದ್ಧಿ ಮಾಡುತ್ತಾರೆ; ಬೀಜಗಳಿಂದಲೂ ವೃದ್ಧಿ ಮಾಡಬಹುದು. ಸಾಧಾರಣವಾಗಿ ಪ್ರಕಂದವನ್ನು ಕೊಟ್ಟಿಗೆ ಗೊಬ್ಬರ ಮತ್ತು ಮಣ್ಣು ತುಂಬಿದ ಮಕರಿ, ಕುಂಡ ಅಥವಾ ಯಾವುದಾದರೂ ಪಾತ್ರೆಯಲ್ಲಿ ನೆಟ್ಟು, ಕಾಂಡವನ್ನು,ಪ್ರಕಂದದ ತುದಿ ನೀರಿನ ಮಟ್ಟಕ್ಕಿಂತ ಸ್ವಲ್ಪ ಮೇಲಿರುವಂತೆ, ಸರೋವರ ಅಥವಾ ಕಲ್ಯಾಣಿಗಳಲ್ಲಿ ಇಡುತ್ತಾರೆ. ನೀರಿನ ಮಟ್ಟ ಜಾಸ್ತಿ ಇದ್ದಲ್ಲಿ ಕೆಳಗೆ ಇಟ್ಟಿಗೆಗಳನ್ನು ಇಟ್ಟು ಅವುಗಳ ಮೇಲೆ ಕುಂಡವನ್ನಿಡುತ್ತಾರೆ. ಸಸಿ ಬೆಳೆದಂತೆಲ್ಲ ಕುಂಡವನ್ನು ಕೆಳಗಿಳಿಸುತ್ತ ಹೋಗುತ್ತಾರೆ.ನೇರವಾಗಿ ಸರೋವರದಲ್ಲೇ ಕಮಲವನ್ನು ಬೆಳೆಸಬೇಕಾದರೆ, ಸರೋವರದ ತಳಕ್ಕೆ ಒಂದು ಅಡಿ ಆಳದಷ್ಟು ಮಣ್ಣು ಮತ್ತು ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರವನ್ನು ಹರಡಿ ಕಮಲದ ಪ್ರಕಂದದ ತುಂಡುಗಳನ್ನು ನಾಟಿ ಮಾಡುತ್ತಾರೆ. ಅನಂತರ ಅವುಗಳ ತುದಿ ನೀರಿನ ಮಟ್ಟಕ್ಕಿಂತ ಕೊಂಚ ಮೇಲಕ್ಕಿರುವಂತೆ ನೀರನ್ನು ಹಾಯಿಸುತ್ತಾರೆ. ಸಸಿ ಬೆಳೆದಂತೆಲ್ಲ ನೀರಿನ ಮಟ್ಟವನ್ನು ಹೆಚ್ಚಿಸುತ್ತ ಹೋಗುತ್ತಾರೆ. ಹೀಗೆ 6-8 ವಾರಗಳಲ್ಲಿ ಸರೋವರದ ತುಂಬ ಕಮಲ ಹರಡಿಕೊಳ್ಳುತ್ತದೆ.

ಸಂಸ್ಕೃತಿಯಲ್ಲಿ

ಬದಲಾಯಿಸಿ
 
Hindu goddess Lakshmi holding and standing on a lotus.
 
Vishnu holding the lotus, also sitting on it and wearing a lotus-bud crown.

ಕಮಲ ಭಾರತೀಯ ಸಂಸ್ಕೃತಿ ಸಾಹಿತ್ಯಗಳಲ್ಲಿ ಹಾಸು ಹೊಕ್ಕಾಗಿ ಹೆಣೆದುಕೊಂಡು ಬಂದಿರುವ ಪವಿತ್ರ ಪುಷ್ಪ. ವೇದಗಳಲ್ಲೂ ಪ್ರಾಚೀನ ಸಂಸ್ಕೃತ ಕೃತಿಗಳಲ್ಲೂ ಇದರ ಉಲ್ಲೇಖಗಳಿವೆ. ಇದನ್ನು ಲಕ್ಷ್ಮಿಯ ಆವಾಸಸ್ಥಾನವೆನ್ನಲಾಗಿದೆ. ಅಗಲವಾಗಿ ಸುಂದರವಾಗಿರುವ ಮುಖವನ್ನು ಕಮಲಕ್ಕೆ ಹೋಲಿಸಿರುವುದೂ ಉಂಟು. ಕಮಲವನ್ನು ಮನ್ಮಥನ ಐದು ಬಾಣಗಳಲ್ಲಿ ಒಂದು ಎನ್ನಲಾಗಿದೆ.[]

ಉಪಯೋಗಗಳು

ಬದಲಾಯಿಸಿ

ಕಮಲ ಸೌಂದರ್ಯಕ್ಕಾಗಿ ಮಾತ್ರವಲ್ಲದೆ ಆಹಾರ ವಸ್ತುವಾಗಿಯೂ ಹೆಸರಾಗಿದೆ. ಇದರ ಪ್ರಕಂದದಲ್ಲಿ ಯಥೇಚ್ಛವಾಗಿ ಪಿಷ್ಠ ಸಂಗ್ರಹವಾಗಿರುವುದರಿಂದ ತರಕಾರಿಯಾಗಿಯೂ ಉಪ್ಪಿನಕಾಯಿಗೂ ಇದನ್ನು ಉಪಯೋಗಿಸುತ್ತಾರೆ. ಇದರಲ್ಲಿ ಶೇ. 2.70 ಪ್ರೋಟೀನು, ಶೇ.9.25 ಪಿಷ್ಠ, ಶೇ.0.11 ಕೊಬ್ಬು, ಶೇ.1.56 ಸಕ್ಕರೆಯ ಭಾಗ ಇದೆಯೆಂದು ತಿಳಿದುಬಂದಿದೆ. ಅಲ್ಲದೆ ಬಿ ಮತ್ತು ಸಿ ಜೀವಾತುಗಳು ಕೂಡ ಇವೆ. ಕಮಲದ ಕಾಯಿಗಳನ್ನು ಹುರಿದು ಅಥವಾ ಹುರಿಯದೆಯೇ ತಿನ್ನುವುದುಂಟು. ಎಳೆಯ ಎಲೆಗಳು, ಕಾಂಡ (ದಂಟು) ಮತ್ತು ಹೂಗಳನ್ನೂ ತರಕಾರಿಯಾಗಿ ಬಳಸುವ ರೂಢಿಯಿದೆ. ಎಲೆಗಳು ಅಗಲವಾಗಿರುವುದರಿಂದ ಊಟದ ಎಲೆಯಾಗಿ ಬಳಸುತ್ತಾರೆ. ಒಂದು ಕಾಲದಲ್ಲಿ ಕಮಲದ ಹೂಗಳಿಂದ ಒಂದು ಬಗೆಯ ಸುಗಂಧ ದ್ರವ್ಯವನ್ನು ತಯಾರಿಸುತ್ತಿದ್ದರು. ಹೂಗಳಿಂದ ಬರುವ ಜೇನು ಶಕ್ತಿವರ್ಧಕವೆನ್ನುತ್ತಾರೆ. ಅಲ್ಲದೆ ಅದನ್ನು ಕಣ್ಣಿನ ಕೆಲವು ರೋಗಗಳಿಗೆ ನಿವಾರಕವಾಗಿ ಉಪಯೋಗಿಸುತ್ತಾರೆ. ಪ್ರಕಂದಗಳಿಂದ ಒಂದು ಬಗೆಯ ಹಿಟ್ಟನ್ನು ತಯಾರಿಸಬಹುದು. ಶಕ್ತಿವರ್ಧಕವೆಂದು ಹೆಸರಾಗಿರುವ ಇದನ್ನು ಅತಿಸಾರ, ಆಮಶಂಕೆಗಳಿಂದ ಬಳಲುವ ಮಕ್ಕಳಿಗೆ ಆಹಾರವಾಗಿ ಕೊಡುತ್ತಾರೆ. ಪ್ರಕಂದಗಳಿಂದ ಒಂದು ರೀತಿಯ ಲೇಪವನ್ನು ತಯಾರಿಸಿ ಗಜಕರ್ಣ ಮತ್ತಿತರ ಚರ್ಮರೋಗಗಳಿಗೆ ಬಳಸುತ್ತಾರೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
  • "Lotus Symbol in Vietnamese Culture". Archived from the original on 2015-05-30. Retrieved 2015-05-18.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಉಲ್ಲೇಖಗಳು

ಬದಲಾಯಿಸಿ
  1. https://mytempleapp.com/ka/%E0%B2%A4%E0%B2%BE%E0%B2%AF%E0%B2%BF-%E0%B2%B2%E0%B2%95%E0%B3%8D%E0%B2%B7%E0%B3%8D%E0%B2%AE%E0%B3%80-%E0%B2%A6%E0%B3%87%E0%B2%B5%E0%B2%BF%E0%B2%AF-%E0%B2%B8%E0%B2%82%E0%B2%AA%E0%B3%8D%E0%B2%B0/
"https://kn.wikipedia.org/w/index.php?title=ಕಮಲ&oldid=1088449" ಇಂದ ಪಡೆಯಲ್ಪಟ್ಟಿದೆ