ಸದಸ್ಯರ ಚರ್ಚೆಪುಟ:Nishitha Nag M.V/ನನ್ನ ಪ್ರಯೋಗಪುಟ
ರಾಷ್ಟ್ರೀಯ ಆದಾಯ
ಅರ್ಥಶಾಸ್ತ್ರದಲ್ಲಿ ರಾಷ್ಟ್ರೀಯ ಆದಾಯಕ್ಕೆ ವಿಶೇಷ ಸ್ಥಾನವಿದೆ.ಅದು ಒಂದು ರಾಷ್ಟ್ರದ ಜನರ ಜೀವನ ಮಟ್ಟ,ಅಭಿವೃದ್ಧಿಯ ಹಂತ,ಆದಾಯ ವಿತರಣೆ,ಆರ್ಥಿಕ ಮುನ್ನಡೆಯ ಪಥ ಮುಂತಾದ ಅಂಶಗಳ ಮೇಲೆ ಬೆಳಕು ಬೀರುತ್ತದೆ.ಆರ್ಥಿಕ ವ್ಯವಸ್ಥೆಯ ಸ್ಥಿತಿಯನ್ನು ತಿಳಿದುಕೊಳ್ಳಲು ಆ ರಾಷ್ಟ್ರದ ರಾಷ್ಟ್ರೀಯ ಆದಾಯವನ್ನು ನೋಡಬೇಕಾಗುತ್ತದೆ.ಆರ್ಥಿಕ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿರುವ ರೀತಿ ನೀತಿಗಳು,ಅದು ಬೆಳೆಯುತ್ತಿರುವ ವಿಧಾನ ಹಾಗು ಅದು ಚಲಿಸುತ್ತಿರುವ ದಿಕ್ಕು ದಿಸೆಗಳು ರಾಷ್ಟ್ರೀಯ ಆದಾಯದಿಂದ ತಿಳಿಯುತ್ತದೆ.ಈ ಕಾರಣದಿಂದಾಗಿ ಜಗತ್ತಿನ ಎಲ್ಲ ರಾಷ್ಟ್ರಗಳು ಇಂದು ರಾಷ್ಟ್ರೀಯ ಆದಾಯದ ಮಾಪನಕ್ಕೆ ವಿಶೇಷ ಮಹತ್ವ ನೀಡಿವೆ.ರಾಷ್ಟ್ರೀಯ ಆದಾಯವನ್ನು ರಾಷ್ಟ್ರೀಯ ಉತ್ಪನ್ನ ಹಾಗು ರಾಷ್ಟ್ರೀಯ ಭಾಜ್ಯಾಂಶ ಎಂದು ಕರೆಯುವುದು ರೂಢಿಯಲ್ಲಿದೆ.
ರಾಷ್ಟ್ರೀಯ ಆದಾಯ ಪರಿಭಾವನೆಯು ಅರ್ಥಶಾಸ್ತ್ರದಲ್ಲಿ ಒಳಪಡುವ ವಿಚಾರವಾಗಿದ್ದು, ೧೯೩೦ಕ್ಕೆ ಮುಂಚೆ ಈ ಪರಿಭಾವನೆಯ ಅಧ್ಯಯನಕ್ಕೆ ಅಷ್ಟೊಂದು ಮಹತ್ವವಿರಲಿಲ್ಲ.೧೯೨೯-೧೯೩೨ ನಡುವೆ ಸಂಭವಿಸಿದ ವಿಶ್ವದ ಮಹಾ ಆರ್ಥಿಕ ಮುಗ್ಗಟ್ಟಿನ ತರುವಾಯ ರಾಷ್ಟ್ರೀಯ ಆದಾಯ ಪರಿಭಾವನೆಗೆ ಮಹತ್ವ ದೊರೆಯಿತು.ಇಪ್ಪತ್ತನೇ ಶತಮಾನದ ಪ್ರಸಿದ್ದ ಅರ್ಥಶಾಸ್ತ್ರಜ್ಞರಾದ ಜೆ.ಎಂ.ಕೀನ್ಸ್
ಅವರು ೧೯೩೬ರಲ್ಲಿ ಪ್ರಕಟಿಸಿದ "ಜನರಲ್ ಥಿಯರಿ" ಎಂಬ ಗ್ರಂಥವು ಈ ಪರಿಭಾವನೆಗೆ ವಿಶೇಷ ಪ್ರಾಶಸ್ತ್ಯವನ್ನು ಕಲ್ಪಿಸಿಕೊಟ್ಟಿತು.ಇಂದು ರಾಷ್ಟ್ರೀಯ ಆದಾಯ ಪರಿಭಾವನೆಗೆ ಸಂಬಂಧಿಸಿದ ಸಾಹಿತ್ಯ ಮತ್ತು ಚರ್ಚೆಗೆ ಅರ್ಥಶಾಸ್ತ್ರದಲ್ಲಿ ವಿಶೇಷವಾದ ಸ್ಥಾನವಿದೆ.
ರಾಷ್ಟ್ರೀಯ ಆದಾಯದ ಅರ್ಥ
ಬದಲಾಯಿಸಿರಾಷ್ಟ್ರೀಯ ಆದಾಯಕ್ಕೆ ಸಂಬಂಧಿಸಿದಂತೆ ಒಂದು ನಿಖರವಾದ ಅರ್ಥವನ್ನು ನೀಡುವುದು ಕಷ್ಟ,ವಿವಿಧ ಅರ್ಥಶಾಸ್ತ್ರಜ್ಞರು ತಮ್ಮದೆ ಆದ ರೀತಿಯಲ್ಲಿ ವ್ಯಾಖ್ಯಾನಿಸಲು ಪ್ರಯತ್ನಿಸಿದ್ದಾರೆ.ಅವುಗಳಲ್ಲಿ ಪ್ರಮುಖವಾದುವು; ಡಾ.ಆಲ್ಫ್ರೆಡ್ ಮಾರ್ಷಲ್[೧] ರ ಪ್ರಕಾರ, "ಒಂದು ರಾಷ್ಟ್ರದ ಶ್ರಮಶಕ್ತಿ ಮತ್ತು ಬಂಡವಾಳ ಅಲ್ಲಿನ ನೈಸರ್ಗಿಕ ಸಂಪತ್ತಿನ ಮೇಲೆ ಸಕ್ರೀಯವಾಗಿ ವರ್ತಿಸಿ ಒಂದು ವರ್ಷದಲ್ಲಿ ಉತ್ಪಾದಿಸುವ ನಿರ್ದಿಷ್ಟ ಪ್ರಮಾಣದ ನಿವ್ವಳ ಭೌತಿಕ ಸರಕುಗಳು ಮತ್ತು ಎಲ್ಲಾ ವಿಧದ ಸೇವೆಗಳೇ ರಾಷ್ಟ್ರೀಯ ಆದಾಯ." ನಿವ್ವಳ ರಾಷ್ಟ್ರೀಯ ಆದಾಯವು ಒಟ್ಟು ರಾಷ್ಟ್ರೀಯ ಆದಾಯಕಿಂತ ಭಿನ್ನವಾಗಿರುತ್ತದೆ.ಒಟ್ಟು ರಾಷ್ಟ್ರೀಯ ಆದಾಯದಲ್ಲಿ ಯಂತ್ರೋಪಕರಣಗಳು ಮತ್ತು ಬಂಡವಾಳ ಸರಕುಗಳ ಸವಕಳಿ ವೆಚ್ಚವನ್ನು ಕಳೆದರೆ ನಿವ್ವಳ ರಾಷ್ಟ್ರೀಯ ಆದಾಯ ದೊರೆಯುತ್ತದೆ. ಪ್ರೋ.ಇರ್ವಿಂಗ್ ಫಿಷರ್[೨] ರ ಪ್ರಕಾರ, "ಭೌತಿಕ ಅಥವಾ ಮಾನವೀಯ ಪರಿಸರದಿಂದ ಅಂತಿಮ ಅನುಭೋಗಿಗಳು ಪಡೆಯುವ ಸೇವೆಗಳೇ ರಾಷ್ಟ್ರೀಯ ಆದಾಯ".ಮಾರ್ಷಲ್ ಮತ್ತು ಪಿಗೌರವರು ರಾಷ್ಟ್ರೀಯ ಆದಾಯವನ್ನು ಉತ್ಪಾದನೆಯ ಮಾನದಂಡದಲ್ಲಿ ವಿವರಿಸಿದ್ದಾರೆ. ಆದರೆ ಫಿಷರ್ ರವರು ಬಳಕೆಯ ಮಾನದಂಡದಲ್ಲಿ ರಾಷ್ಟ್ರೀಯ ಆದಾಯವನ್ನು ವಿವರಿಸಿದ್ದಾರೆ. ರಾಷ್ಟ್ರೀಯ ಆದಾಯ ಸಮಿತಿಯ ಪ್ರಕಾರ, "ರಾಷ್ಟ್ರೀಯ ಆದಾಯವು ಒಂದು ನಿರ್ಧಿಷ್ಟ ಅವಧಿಯಲ್ಲಿ ಉತ್ಪಾದನೆಯಾಗಿದ್ದು, ದ್ವಿಗಣನೆ ಇಲ್ಲದೆ ಎಣಿಕೆ ಮಾಡಿದ ಸರಕು ಮತ್ತು ಸೇವೆಗಳ ಗಾತ್ರವನ್ನು ಸೂಚಿಸುತ್ತದೆ."
ರಾಷ್ಟ್ರೀಯ ಆದಾಯದ ವಿವಿಧ ಪರಿಭಾವನೆಗಳು
ಬದಲಾಯಿಸಿರಾಷ್ಟ್ರೀಯ ಆದಾಯದದಲ್ಲಿ ವಿವಿಧ ಪರಿಭಾವನೆಗಳಿವೆ.ಅವುಗಳನ್ನು ವಿವರವಾಗಿ ಪರಿಗಣಿಸಿದಾಗ ರಾಷ್ಟ್ರೀಯ ಆದಾಯದ ಸಮಗ್ರ ಸ್ವರೂಪ ಅರ್ಥವಾಗುತ್ತದೆ.ಅವುಗಳೇನೆಂದರೆ:
- ಒಟ್ಟು ರಾಷ್ಟ್ರೀಯ ಉತ್ಪನ್ನ:ಒಟ್ಟು ರಾಷ್ಟ್ರೀಯ ಉತ್ಪನ್ನವು ಒಂದು ದೇಶದಲ್ಲಿ ಒಂದು ತಿಳಿದ ವರ್ಷದಲ್ಲಿ ಉತ್ಪಾದಿಸಲಾದ ಎಲ್ಲ ಅಂತಿಮ ಬಳಕೆಯ ಸರಕು ಮತ್ತು ಸೇವೆಗಳ ಒಟ್ಟು ಮಾರುಕಟ್ಟೆ ಮೌಲ್ಯವನ್ನು ಪ್ರತಿನಿಧಿಸುತ್ತದೆ.ಒಟ್ಟು ರಾಷ್ಟ್ರೀಯ ಉತ್ಪನ್ನವನ್ನು ಈ ಸೂತ್ರದಿಂದ ವ್ಯಕ್ತಪಡಿಸಬಹುದು.
ಒಟ್ಟು ರಾಷ್ಟ್ರೀಯ ಉತ್ಪನ್ನವನ್ನು[೩] ಅಂದಾಜು ಮಾಡುವಾಗ ಕೆಲವು ಅಂಶಗಳನ್ನು ಅನುಸರಿಸಬೇಕು.ಆವುಗಳೇನೆಂದರೆ ಕೇವಲ ಅಂತಿಮ ಸರಕುಗಳನ್ನು ಮಾತ್ರ ಪರಿಗಣಿಸಬೇಕು,ಮಧ್ಯವರ್ತಿ ಸರಕುಗಳನ್ನು ಪರಿಗಣಿಸಿದರೇ ದ್ವಿಗಣನೆಯಾಗುತ್ತದೆ ಆದ್ದರಿಂದ ಅವುಗಳನ್ನು ಪರಿಗಣಿಸಬಾರದು,ಒಟ್ಟು ರಾಷ್ಟ್ರೀಯ ಉತ್ಪನ್ನ ಒಂದು ಹಣರೂಪಿ ಮಾಪನವಾಗಿದೆ,ಉಚಿತ ಸರಕು ಮತ್ತು ಸೇವೆಗಳನ್ನು ಪರಿಗಣಿಸಬಾರದು ಏಕೆಂದರೆ ಅವುಗಳಿಂದ ಸರಿಯಾದ ಮಾರುಕಟ್ಟೆ ಬೆಲೆಯನ್ನು ಅಂದಾಜು ಮಾಡುವುದು ಕಷ್ಟವಾಗುತ್ತದೆ,ಕೇವಲ ಆ ವರ್ಷದಲ್ಲಿ ಉತ್ಪಾದನೆಯಾದ ಸರುಕುಗಳನ್ನು ಮಾತ್ರ ಪರಿಗಣಿಸಬೇಕು,ಅಕ್ರಮ ಸರಕುಗಳ ಆದಾಯವನ್ನು ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ಸೇರಿಸಬಾರದು.ಒಟ್ಟು ರಾಷ್ಟ್ರೀಯ ಉತ್ಪನ್ನವನ್ನು ೩ ವಿಧಾನದಲ್ಲಿ ಮಾಪನ ಮಾಡಲಾಗುತ್ತದೆ.[೪]
- ಆದಾಯ ವಿಧಾನ:ಆದಾಯ ವಿಧಾನದಲ್ಲಿ ಒಟ್ಟು ರಾಷ್ಟ್ರೀಯ ಉತ್ಪನ್ನವನ್ನು ವಿವಿಧ ಉತ್ಪಾದನಾಂಗಗಳು ಉತ್ಪಾದನೆಯಲ್ಲಿ ಗಳಿಸುವ ಪ್ರತಿಫಲವನ್ನು ಲೆಖ್ಖಹಾಕುವ ಮೂಲಕ ಅಂದಾಜು ಮಾಡಲಾಗುತ್ತದೆ.ಒಟ್ಟು ರಾಷ್ಟ್ರೀಯ ಉತ್ಪನ್ನವನ್ನು ಲೆಕ್ಕ ಹಾಕುವಾಗ ಕೂಲಿ ಮತ್ತು ವೇತನೆ,ಬಡ್ಡಿ,ಗೇಣಿ,ಲಾಭ,ನೇರ ತೆರಿಗೆ,ಪರೋಕ್ಷ ತೆರಿಗೆ,ಬಂಡವಾಳ ಸರಕುಗಳ ಸವಕಳಿ ವೆಚ್ಚ,ವಿದೇಶದಿಂದ ಗಳಿಸಿದ ನಿವ್ವಳ ಆದಾಯಗಳನ್ನು ಸೇರ್ಪಡೆಗೊಳಿಸುವುದರ ಮೂಲಕ ಅಂದಾಜು ಮಾಡಲಾಗುತ್ತದೆ. ಆದಾಯ=ಕೂಲಿ+ಗೇಣಿ+ಬಡ್ಡಿ+ಲಾಭ+ನಿವ್ವಳ ವಿದೇಶಿ ಗಳಿಕೆ
- ಖರ್ಚಿನ ವಿಧಾನ:ಒಂದು ತಿಳಿದ ವರ್ಷದಲ್ಲಿ ಸರಕು ಮತ್ತು ಸೇವೆಗಳ ಮೇಲೆ ಮಾಡಲಾದ ವೆಚ್ಚದ ಮೊತ್ತವೆ ಒಟ್ಟು ರಾಷ್ಟ್ರೀಯ ಉತ್ಪನ್ನವಾಗುತ್ತದೆ.ಒಟ್ಟು ರಾಷ್ಟ್ರೀಯ ಉತ್ಪನ್ನವನ್ನು ಲೆಕ್ಕ ಹಾಕುವಾಗ ಅನುಭೋಗದ ಮೇಲಿನ ವೆಚ್ಚ,ಬಂಡವಾಳ,ಸರ್ಕಾರದ ವೆಚ್ಚ,ನಿವ್ವಳ ರಫ್ತು,ನಿವ್ವಳ ವಿದೇಶಿ ಹೂಟೆಗಳನ್ನು ಸೇರ್ಪಡೆಗೊಳಿಸುವುದರ ಮೂಲಕ ಅಂದಾಜು ಮಾಡಲಾಗುತ್ತದೆ. ಆದಾಯ=ಅನುಭೋಗದ ವೆಚ್ಚ+ಹೂಡಿಕೆ ವೆಚ್ಚ+ಸರ್ಕಾರದ ವೆಚ್ಚ+ನಿವ್ವಳ ವಿದೇಶಿ ಗಳಿಕೆ.
- ಮೌಲ್ಯ ಸೇರಿಸುವ ವಿಧಾನ:ಮೌಲ್ಯ ಸೇರಿಸುವ ವಿಧಾನದಲ್ಲಿ ಒಂದು ತಿಳಿದ ವರ್ಷದಲ್ಲಿ ಉತ್ಪಾದಿಸಲಾದ ಎಲ್ಲ ಅಂತಿಮ ಹಂತದ ಸರಕು ಮತ್ತು ಸೇವೆಗಳ ಮಾರುಕಟ್ಟೆ ಮೌಲ್ಯವನ್ನು ಪ್ರಸ್ತುತ ಬೆಲೆಯಲ್ಲಿ ಲೆಕ್ಕ ಹಾಕಲಾಗುತ್ತದೆ.ರಾಷ್ಟ್ರದ ಒಂದು ತಿಳಿದ ವರ್ಷದಲ್ಲಿ ಉತ್ಪಾದಿಸುವ ಒಟ್ಟು ಉತ್ಪನ್ನ ಅಥವಾ ಆದಾಯವೆಷ್ಟು ಎಂಬುದನ್ನು ಈ ವಿಧಾನದಿಂದ ತಿಳಿಯಬಹುದು. ಆದಾಯ=ನಿವ್ವಳ ರಾಷ್ಟ್ರೀಯ ಉತ್ಪನ್ನ+ಸಹಾಯಧನ-ಪರೋಕ್ಷ ತೆರಿಗೆ+ನಿವ್ವಳ ವಿದೇಶಿ ಗಳಿಕೆ.
ಒಟ್ಟು ರಾಷ್ಟ್ರೀಯ ಉತ್ಪನ್ನ[೫] ದಾಖಲೆಗಳ ಅನುಸಾರವಾಗಿ ೨೦೧೯ರ ಸಾಲಿನ ಪಟ್ಟಿ | ||
ಶ್ರೇಣಿ | ರಾಷ್ಟ್ರ | ಜಿಡಿಪಿ (ದಶಲಕ್ಷಗಳಷ್ಟು $ಗಳಲ್ಲಿ) |
---|---|---|
ವಿಶ್ವ | ೮೮,೦೮೧.೧೩ ಶತಕೋಟಿ [೬] | |
೧ | ಅಮೇರಿಕ ಸಂಯುಕ್ತ ಸಂಸ್ಥಾನ | ೨೧,೪೧೦,೨೩೦ |
೨ | ಚೀನಾ | ೧೫,೫೪೩,೭೧೦ |
೩ | Japan | ೫,೩೬೨,೨೨೦ |
೪ | Germany | ೪,೪೧೬,೮೦೦ |
೫ | India | ೩,೧೫೫,೨೩೦ |
೬ | France | ೩,೦೬೦,೦೭೦ |
೭ | ಯುನೈಟೆಡ್ ಕಿಂಗ್ಡಂ | ೩,೦೨೨,೫೮೦ |
೮ | ಇಟಲಿ | ೨,೨೬೧,೪೬೦ |
೯ | Brazil | ೨,೨೫೬,೮೫೦ |
೧೦ | ಕೆನಡಾ | ೧,೯೦೮,೫೩೦ |
- ನಿವ್ವಳ ರಾಷ್ಟ್ರೀಯ ಉತ್ಪನ್ನ:ನಿವ್ವಳ ರಾಷ್ಟ್ರೀಯ ಉತ್ಪನ್ನ[೭] ಎಂದರೆ ಒಂದು ದೇಶದಲ್ಲಿ ಒಂದು ತಿಳಿದ ವರ್ಷದಲ್ಲಿ ಉತ್ಪಾದಿಸಲಾದ ನಿವ್ವಳ ಉತ್ಪಾದನೆಯ ಮಾರುಕಟ್ಟೆಯ ಮೌಲ್ಯ.ಅಂದರೆ ಒಂದು ರಾಷ್ಟ್ರದ ಒಟ್ಟು ರಾಷ್ಟ್ರೀಯ ಉತ್ಪನ್ನದಿಂದ ಸವಕಳಿ ವೆಚ್ಚವನ್ನು ಕಳೆದರೆ ನಿವ್ವಳ ರಾಷ್ಟ್ರೀಯ ಉತ್ಪನ್ನ ದೊರೆಯುತ್ತದೆ.ಆದ್ದರಿಂದ ನಿವ್ವಳ ರಾಷ್ಟ್ರೀಯ ಉತ್ಪನ್ನವು ಸರಕು ಮತ್ತು ಸೇವೆಗಳ ನಿವ್ವಳ ಮಾರುಕಟ್ಟೆಯ ಮೌಲ್ಯವಾಗಿದೆ.ನಿವ್ವಳ ರಾಷ್ಟ್ರೀಯ ಉತ್ಪನ್ನವನ್ನು ಈ ಸೂತ್ರದಿಂದ ವ್ಯಕ್ತಪಡಿಸಬಹುದು.
ಕಾಲ ಬದಲಾದಂತೆ ಉತ್ಪಾದನೆಗೆ ಬಳಸಿದ ಅನೇಕ ಯಂತ್ರಗಳು,ಸ್ಥಾವರಗಳು ಮತ್ತು ಬಂಡವಾಳ ಸರಕುಗಳು ಸವೆದು ಹೋಗುವ ಅಥವಾ ಹಾಳಾಗುವ ಗುಣ ಹೊಂದಿರುತ್ತವೆ.ಹೀಗೆ ಆದ ಯಂತ್ರಗಳನ್ನು ಬದಲಾಯಿಸಬೇಕಾಗುತ್ತದೆ ಅಥವಾ ದುರಸ್ತಿ ಮಾಡಬೇಕಾಗುತ್ತದೆ,ಅದನ್ನು ಸರಿಪಡಿಸಲು ಮಾಡುವ ವೆಚ್ಚವನ್ನು ಸವಕಳಿ ವೆಚ್ಚ ಅಥವಾ ಬದಲಿಕೆ ವೆಚ್ಚ ಎನ್ನುತ್ತಾರೆ.ನಿವ್ವಳ ರಾಷ್ಟ್ರೀಯ ಉತ್ಪನ್ನದಿಂದ ಸರಕುಗಳ ಪ್ರಸ್ತುತ ಬೆಲೆಯನ್ನು ಅಂದಾಜು ಮಾಡಬಹುದು,ಅಂದರೆ ಇದು ಒಂದು ರಾಷ್ಟ್ರದ ಆರ್ಥಿಕಾಭಿವೃದ್ದಿಯ ಸ್ಪಷ್ಟ ಚಿತ್ರಣ ನೀಡುತ್ತದೆ.ಈ ಪರಿಭಾವನೆಯನಲ್ಲಿ ಒಂದು ಮುಖ್ಯ ನ್ಯೂನತೆಯಿದೆ.ಅದೆಂದರೆ ಬಂಡವಾಳ ಸರಕುಗಳ ಸವಕಳಿ ವೆಚ್ಚವನ್ನು ನಿಖರವಾಗಿ ಅಂದಾಜು ಮಾಡುವುದು ಕಷ್ಟ ಸಾಧ್ಯದ ವಿಚಾರವಾಗಿದೆ.
- ರಾಷ್ಟ್ರೀಯ ಆದಾಯ(ಉತ್ಪಾದನಾಂಗ ಬೆಲೆಯಲ್ಲಿ):ಎಲ್ಲ ಉತ್ಪಾದನಾಂಗಗಳು ಗಳಿಸುವ ಪ್ರತಿಫಲದ ಒಟ್ಟು ಮೊತ್ತವನ್ನು ರಾಷ್ಟ್ರೀಯ ಆದಾಯ ಎನ್ನಲಾಗುತ್ತದೆ.ರಾಷ್ಟ್ರೀಯ ಆದಾಯ ಎಂಬುದು ಒಂದು ತಿಳಿದ ವರ್ಷದಲ್ಲಿ ಎಲ್ಲಾ ಉತ್ಪಾದನಾಂಗಗಳು ಗಳಿಸುವ ಒಟ್ಟು ಪ್ರತಿಫಲವಾಗಿದೆ.ರಾಷ್ಟ್ರೀಯ ಆದಾಯವನ್ನು ಈ ಸೂತ್ರದಿಂದ ವ್ಯಕ್ತಪಡಿಸಬಹುದು.
ಉದ್ಯಾಮ ಸಂಸ್ಥೆಗಳು ಉತ್ಪಾದಿಸುವ ಸರಕು ಮತ್ತು ಸೇವೆಗಳ ಮೇಲೆ ಸರ್ಕಾರಕ್ಕೆ ಪರೋಕ್ಷ ತೆರಿಗೆಯನ್ನು ಕಟ್ಟಬೇಕಾಗುತ್ತದೆ,ಆದ್ದರಿಂದ ಸರ್ಕಾರಕ್ಕೆ ಪರೋಕ್ಷ ತೆರಿಗೆಗಳ ರೂಪದಲ್ಲಿ ಕಟ್ಟಲಾದ ಆದಾಯ ಉತ್ಪಾದನಾಂಗಗಳಿಗೆ ಪ್ರತಿಫಲದ ರೂಪದಲ್ಲಿ ಲಭ್ಯವಾಗುವುದಿಲ್ಲ.ಈ ಕಾರಣದಿಂದಾಗಿ ನಿವ್ವಳ ರಾಷ್ಟ್ರೀಯ ಉತ್ಪನ್ನದಿಂದ ಪರೋಕ್ಷ ತೆರಿಗೆಗಳುನ್ನು ಕಳೆಯಬೇಕು.ಅದೇ ರೀತಿ ಸರ್ಕಾರ ಕೆಲವೊಮ್ಮೆ ಸಹಾಯಧನವನ್ನು ನೀಡುತ್ತದೆ,ಆದ್ದರಿಂದ ಸಹಾಯಧನವನ್ನು ಸೇರಿಸುತ್ತಾರೆ.
- ವೈಯಕ್ತಿಕ ಆದಾಯ:ಒಂದು ವರ್ಷದಲ್ಲಿ ಒಂದು ರಾಷ್ಟ್ರದ ಎಲ್ಲಾ ವ್ಯಕ್ತಿಗಳು ಪಡೆಯುವ ಆದಾಯದ ಒಟ್ಟು ಮೊತ್ತವೇ ವೈಯಕ್ತಿಕ ಆದಾಯ.ರಾಷ್ಟ್ರೀಯ ಆದಾಯದಿಂದ ಕೆಲವು ಅಂಶಗಳನ್ನು ಕಳೆದರೆ ವೈಯಕ್ತಿಕ ಆದಾಯ ಲಭ್ಯವಾಗುತ್ತದೆ.ಏಕೆಂದರೆ ಉತ್ಪಾದನಾಂಗಗಳು ತಮ್ಮ ಸೇವೆಗಳಿಗೆ ಪ್ರತಿಫಲದ ರೂಪದಲ್ಲಿ ಗಳಿಸುವ ಆದಾಯದ ಪೂರ್ಣ ಮೊತ್ತವು ಅವುಗಳಿಗೆ ಲಭ್ಯವಾಗುವುದಿಲ್ಲ.ಇದೇ ಸಂದರ್ಭದಲ್ಲಿ ಸರ್ಕಾರದಿಂದ ಜನರಿಗೆ ನೀಡುವ ವೃದ್ಧಾಪ್ಯ ವೇತನ,ಅಂಗವಿಕಲ ವೇತನ,ಮುಂತಾದ ವರ್ಗಾವಣೆ ಕೊಡುಗೆಗಳು ಜನರು ತಾವು ಸ್ವತಃ ಗಳಿಸದಿದ್ದರು ಅವು ಅವರಿಗೆ ಆದಾಯದ ರೂಪದಲ್ಲಿ ಲಭ್ಯವಾಗುತ್ತದೆ.ಆದ್ದರಿಂದ ಅದನ್ನು ರಾಷ್ಟ್ರೀಯ ಆದಾಯಕ್ಕೆ ಸೇರಿಸುತ್ತಾರೆ.ವೈಯಕ್ತಿಕ ಆದಾಯವನ್ನು ಈ ಸೂತ್ರದಿಂದ ವ್ಯಕ್ತಪಡಿಸಬಹುದು.
ವೈಯಕ್ತಿಕ ಆದಾಯವು ಜನರ ಕೊಳ್ಳುವ ಶಕ್ತಿ ಮತ್ತು ತೆರಿಗೆ ಸಾಮರ್ಥ್ಯವನ್ನು ಅಂದಾಜಿಸಲು ಬಹು ಉಪಯುಕ್ತವಾಗಿದೆ.ಇದರಿಂದ ಜನರ ಸಾಮಾಜಿಕ ಯೋಗಕ್ಷೇಮದ ಮಟ್ಟವನ್ನು ಸಹ ತಿಳಿಯಬಹುದು.
- ವಿನಿಯೋಗಿಸ ಬಹುದಾದ ಆದಾಯ:ಜನರು ಗಳಿಸಿದ ಆದಾಯದ ಒಂದು ಭಾಗ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಹೋಗುತ್ತದೆ.ವೈಯಕ್ತಿಕ ಆದಾಯದಿಂದ ಸರ್ಕಾರಕ್ಕೆ ನೀಡಬೇಕಾದ ನೇರ ತೆರಿಗೆಗಳನ್ನು ಕಳೆದಾಗ ವಿನಿಯೋಗಿಸ ಬಹುದಾದ ಆದಾಯ ಲಭ್ಯವಾಗುತ್ತದೆ.ವಿನಿಯೋಗಿಸ ಬಹುದಾದ ಆದಾಯವನ್ನು ಈ ಸೂತ್ರದಿಂದ ವ್ಯಕ್ತಪಡಿಸಬಹುದು.
ಜನರು ಸಂಪೂರ್ಣವಾಗಿ ತಮ್ಮ ಆದಾಯವನ್ನು ವೆಚ್ಚ ಮಾಡುವ ಸಂಭವ ಬಹಳ ಕಡಿಮೆ.ಆವರು ತಮ್ಮ ಬಳಿ ಲಭ್ಯವಿರುವ ಆದಾಯದಲ್ಲಿ ಕೆಲಭಾಗವನ್ನು ವ್ಯಯ ಮಾಡಿ ಉಳಿದ ಆದಾಯವನ್ನು ಉಳಿತಾಯ ಮಾಡುತ್ತಾರೆ.ಅ ವಿನಿಯೋಗಿಸ ಬಹುದಾದ ಆದಾಯವನ್ನು ಈ ಸೂತ್ರದಿಂದ ವ್ಯಕ್ತಪಡಿಸಬಹುದು.
ಈ ವಿನಿಯೋಗಿಸ ಬಹುದಾದ ಆದಾಯದಿಂದ ನಾವು ನೇರ ತೆರಿಗೆಗಳ ಭಾರ ಅಥವಾ ಹೊರೆಯನ್ನು ತಿಳಿದುಕೊಳ್ಳಬಹುದು.
- ತಲಾದಾಯ:ಒಂದು ರಾಷ್ಟ್ರದ ಪ್ರತಿಯೊಬ್ಬ ವ್ಯಕ್ತಿಯ ಒಂದು ವರ್ಷದ ಸರಾಸರಿ ಆದಾಯವನ್ನು ತಲಾದಾಯ[೮] ಎನ್ನಲಾಗುತ್ತದೆ.ರಾಷ್ಟ್ರೀಯ ಆದಾಯವನ್ನು ಒಟ್ಟು ಜನಸಂಖ್ಯೆಯಿಂದ ಭಾಗಿಸಿದಾಗ ತಲಾದಾಯ ಲಭ್ಯವಾಗುತ್ತದೆ.ತಲಾದಾಯವನ್ನು ಈ ಸೂತ್ರದಿಂದ ವ್ಯಕ್ತಪಡಿಸಬಹುದು.
ತಲಾದಾಯವು ಒಂದು ರಾಷ್ಟ್ರದ ಪ್ರಗತಿಯ ನೈಜ ಚಿತ್ರಣವನ್ನು ನೀಡುತ್ತದೆ,ಸಾಮಾನ್ಯವಾಗಿ ತಲಾದಾಯ ಹೆಚ್ಚಿದಾಗ ಜನರ ಜೀವನ ಮಟ್ಟವೂ[೯] ಹೆಚ್ಚುತ್ತದೆ.ತಲಾದಾಯದಿಂದ ನಾವು ವಿವಿಧ ರಾಷ್ಟ್ರಗಳ ಜೀವನ ಮಟ್ಟವನ್ನು ಹೋಲಿಸಬಹುದು.
ಆದಾಯದ ಆವರ್ತಕ ಪ್ರವಹನ
ಬದಲಾಯಿಸಿಆದಾಯದ ಆವರ್ತಕ ಪ್ರವಹನ[೧೦] ಪರಿಭಾವನೆಗೆ ರಾಷ್ಟ್ರೀಯ ಆದಾಯ ವಿಶ್ಲೇಷಣೆಯಲ್ಲಿ ಮಹತ್ವದ ಸ್ಥಾನವಿದೆ.ಮೊದಲನೆಯದಾಗಿ ಆದಾಯದ ಆವರ್ತಕ ಪ್ರವಹನವನ್ನು ೧೯೩೩ ರಲ್ಲಿ ಫ್ರಾಂಕ್ ನೈಟ್ ರವರು ನೀಡಿದರು.ಆದಾಯದ ಆವರ್ತಕ ಪ್ರವಹನ ಎಂಬುದು ಆರ್ಥಿಕ ವ್ಯವಸ್ಥೆಯೊಂದರ ರಾಷ್ಟ್ರೀಯ ಆದಾಯ ಹಾಗು ವೆಚ್ಚಗಳು ಕಾಲಾನಂತರದಲ್ಲಿ ನಿರಂತರವಾಗಿ ವರ್ತುಲಾಕಾರದ ರೀತಿಯಲ್ಲಿ ಪ್ರವಹಿಸುವ ಪ್ರಕ್ರಿಯೆಯಾಗಿದೆ.ರಾಷ್ಟ್ರದ ಆದಾಯವು ಒಬ್ಬರಿಂದ ಇನ್ನೊಬ್ಬರಿಗೆ ಪ್ರವಹಿಸುತ್ತಲೆ ಇರುತ್ತದೆ.ಒಬ್ಬ ವ್ಯಕ್ತಿಯ ಆದಾಯ ಇನ್ನೊಬ್ಬ ವ್ಯಕ್ತಿಗೆ ಖರ್ಚಾಗಿರುತ್ತದೆ,ಅದೇ ರೀತೆ ಒಬ್ಬ ವ್ಯಕ್ತಿಯ ಖರ್ಚು ಇನ್ನೊಬ್ಬ ವ್ಯಕ್ತಿಗೆ ಆದಾಯವಾಗುತ್ತದೆ.ಆರ್ಥಿಕ ವ್ಯವಸ್ಥೆಯೊಂದು ಹೇಗೆ ಕಾರ್ಯಾನಿರ್ವಹಿಸುತ್ತಿದೆ ಎಂದು ತಿಳಿದುಕೊಳ್ಳುವಲ್ಲಿ ಈ ಪರಿಭಾವನೆ ಅನೇಕ ರೀತಿಯಲ್ಲಿ ನೆರೆವಾಗುತ್ತದೆ.ಮುಕ್ತ ಆರ್ಥಿಕ ವ್ಯವಸ್ಥೆಯೊಂದರಲ್ಲಿ ಕುಟುಂಬಗಳು,ಉದ್ಯಮ ಸಂಸ್ಥೆಗಳು,ಸರ್ಕಾರ ಮತ್ತ ವಿದೇಶಿ ವಲಯಗಳು ಪರಸ್ಪರ ಸಂಪರ್ಕದಲ್ಲಿರುತ್ತವೆ.ಇದರಿಂದಾಗಿ ಆರ್ಥಿಕ ಚಟುವಟಿಕೆಗಳು ನಿರಂತರವಾಗಿ ಸಾಗುವುದು ಸಾಧ್ಯವಾಗುತ್ತದೆ.
ದ್ವಿವಲಯ ಆರ್ಥಿಕತೆಯಲ್ಲಿ ಆದಾಯದ ಆವರ್ತಕ ಪ್ರವಹನ
ಬದಲಾಯಿಸಿದ್ವಿವಲಯ ಆರ್ಥಿಕತೆಯಲ್ಲಿ ಕೇವಲ ಕುಟಂಬ ಮತ್ತು ಉದ್ಯಮಸಂಸ್ಥೆಗಳ ವಲಯಗಳಿರುತ್ತವೆ.ಕುಟಂಬಗಳ ವಲಯವು ಭೂಮಿ,ಶ್ರಮ ಮತ್ತು ಬಂಡವಾಳದಂತಹ ಉತ್ಪಾದನಾಂಗಗಳನ್ನು ಉದ್ಯಮ ವಲಯಕ್ಕೆ ಮಾರುವುದರ ಮೂಲಕ ಆದಾಯ ಗಳಿಸುತ್ತದೆ.ಉದ್ಯಮ ವಲಯವು ಆ ಉತ್ಪಾದನಾಂಗಗಳನ್ನು ಬಳಸಿ ಸರಕುಗಳನ್ನು ಉತ್ಪಾದಿಸಿ ಕುಟಂಬಗಳಿಗೆ ಅಥವಾ ಅನುಭೋಗಿಗಳಿಗೆ ಮಾರಾಟ ಮಾಡುತ್ತದೆ.ಈ ರೀತಿ ಆದಾಯ ಮತ್ತು ವೆಚ್ಚಗಳು ಆವರ್ತಕ ಸ್ವರೂಪದಲ್ಲಿ ಪ್ರವಹನವಾಗುತ್ತವೆ.ಕೆಲವೊಮ್ಮೆ ಕುಟುಂಬಗಳು ತಾವು ಗಳಿಸುವ ಆದಾಯದಲ್ಲಿ ಕೆಲಭಾಗವನ್ನು ಉಳಿತಾಯ ಮಾಡುತ್ತವೆ.ಈ ಉಳಿತಾಯವನ್ನು ರಾಷ್ಟ್ರೀಯ ಆದಾಯದ ಸೋರಿಕೆ ಎಂದು ಕರೆಯುತ್ತರೆ.ಹೀಗೆ ಸೋರಿಕೆಯಾದ ಆದಾಯವನ್ನು ಉದ್ಯಮ ಸಂಸ್ಥೆಗಳು ಬಂಡವಾಳ ಪೇಟೆಯ ಸಂಸ್ಥೆಗಳಿಂದ ಸಾಲರೂಪದಲ್ಲಿ ಹೂಡಿಕೆಯನ್ನು ಪಡೆಯುತ್ತಾರೆ,ಹೀಗೆ ಹೂಡಿಕೆಯ ರೂಪದಲ್ಲಿ ಒಳಹರಿವಾದರೆ ಉಳಿತಾಯ ಮತ್ತು ಹೂಡಿಕೆಗಳು ಪರಸ್ಪರ ಸಮಗೊಂಡು ಆದಾಯದ ಆವರ್ತಕ ಪ್ರವಹನ ಪುನಃ ನಿರಂತರವಾಗಿ ಸಾಗುವುದು ಸಾಧ್ಯವಾಗುತ್ತದೆ.
ಮೂರುವಲಯದ ಆರ್ಥಿಕತೆಯಲ್ಲಿ ಆದಾಯದ ಆವರ್ತಕ ಪ್ರವಹನ
ಬದಲಾಯಿಸಿಮೂರುವಲಯದ ಆರ್ಥಿಕತೆಯಲ್ಲಿ ಕುಟಂಬ,ಉದ್ಯಮಸಂಸ್ಥೆ ಮತ್ತು ಸರ್ಕಾರದ ವಲಯಗಳಿರುತ್ತವೆ.ಇಲ್ಲಿನ ಪ್ರವಹನ ಕುಟಂಬ ಮತ್ತು ಉದ್ಯಮಸಂಸ್ಥೆಗಳಿಂದ ಸರ್ಕಾರಕ್ಕೆ ತೆರಿಗೆಯ ರೂಪದಲ್ಲಿರುತ್ತದೆ.ಸರ್ಕಾರಕ್ಕೆ ಆದಾಯವು ತೆರಿಗೆ,ಸಹಾಯ ಧನ,ಕುಟಂಬ ಮತ್ತು ಉದ್ಯಮಸಂಸ್ಥೆಗಳ ಕೊಂಡುಕೊಂಡ ಸರಕುಗಳಿಂದ ಬರುತ್ತವೆ.
ನಾಲ್ಕು ವಲಯದ ಆರ್ಥಿಕತೆಯಲ್ಲಿ ಆದಾಯದ ಆವರ್ತಕ ಪ್ರವಹನ
ಬದಲಾಯಿಸಿನಾಲ್ಕು ವಲಯದ ಆರ್ಥಿಕತೆಯಲ್ಲಿ ಕುಟಂಬ,ಉದ್ಯಮಸಂಸ್ಥೆ,ಸರ್ಕಾರ ಮತ್ತು ವಿದೇಶಿ ವಲಯಗಳಿರುತ್ತವೆ.ವಿದೇಶಿ ವಲಯವು ವಿದೇಶಿ ವ್ಯಾಪಾರ ಹಾಗು ಬಂಡವಾಳಗಳ ಪ್ರವಹನವನ್ನು ಒಳಗೊಂಡಿದೆ.ವಿದೇಶಿ ವಲಯದಿಂದ ಒಂದು ಮುಚ್ಚಿದ ಅರ್ಥವ್ಯವಸ್ಥೆಯು ಮುಕ್ತ ಅರ್ಥವ್ಯವಸ್ಥೆಗೆ ಬದಲಾಗುತ್ತದೆ. ಈ ರೀತಿ ಆದಾಯ ಮತ್ತು ವೆಚ್ಚಗಳು ಆವರ್ತಕ ಸ್ವರೂಪದಲ್ಲಿ ಪ್ರವಹನವಾಗುತ್ತವೆ.ಈ ಆವರ್ತಕ ಪ್ರವಹನವು ಆರ್ಥಿಕ ವ್ಯವಸ್ಥೆಯ ಸಂಪೂರ್ಣ ಚಿತ್ರಣವನ್ನು ನೀಡುತ್ತದೆ.ಇದರಿಂದ ನಾವು ಆರ್ಥಿಕ ಸ್ಥಿತಿ-ಗತಿಯನ್ನು ಸುಲಭವಾಗಿ ತಿಳಿಯಬಹುದು.
ರಾಷ್ಟ್ರೀಯ ಆದಾಯ ಮಾಪನದ ತೊಡಕುಗಳು
ಬದಲಾಯಿಸಿರಾಷ್ಟ್ರೀಯ ಆದಾಯದ ಮಾಪನ ಅಷ್ಟೊಂದು ಸುಲಭವಾದುದಲ್ಲ.ಅದರ ಮಾಪನದಲ್ಲಿ ಹಲವಾರು ತೊಡಕುಗಳಿವೆ.ಅವುಗಳಲ್ಲಿ ಮುಖ್ಯವಾದುವು:
- ಅನಕ್ಷರತೆಯಿಂದಾಗಿ ಜನರು ರಾಷ್ಟ್ರೀಯ ಆದಾಯ ಮಾಪನದ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳುವುದಿಲ್ಲ.ಆದ್ದರಿಂದ ಅನಕ್ಷರಸ್ಥರು ಜಾಸ್ತಿಯಿರುವ ದೇಶದಲ್ಲಿ ರಾಷ್ಟ್ರೀಯ ಆದಾಯವನ್ನು ಮಾಪನೆ ಮಾಡುವುದು ತುಂಬಾ ಕಷ್ಟ.
- ರಾಷ್ಟ್ರೀಯ ಆದಾಯವನ್ನು ಸಮರ್ಪಕವಾಗಿ ಲೆಕ್ಕಾಚಾರ ಹಾಕಬೇಕೆಂದರೆ ಸರಿಯಾದ ಅಂಕಿ ಅಂಶಗಳು ಲಭ್ಯವಿರಬೇಕಾಗುತ್ತದೆ.ಅದು ಇಲ್ಲದೆ ಹೋದಲ್ಲಿ ಆದಾಯದ ಸಮರ್ಪಕ ಅಂದಾಜು ಸಾಧ್ಯಾವಾಗುವುದಿಲ್ಲ.
- ನಿವ್ವಳ ರಾಷ್ಟ್ರೀಯ ಉತ್ಪನ್ನವನ್ನು ಮಾಪನ ಮಾಡುವಾಗ ಬಂಡವಾಳ ಸರಕುಗಳ ಸವಕಳಿ ವೆಚ್ಚವನ್ನು ಸೇರಿಸಿಕೊಳ್ಳಬಾರದು.ಆದರೆ ಸವಕಳಿ ವೆಚ್ಚವನ್ನು ಸರಿಯಾದ ರೀತಿಯಲ್ಲಿ ಅಂದಾಜು ಮಾಡಿ ತಿಳಿಯುವುದೇ ತ್ರಾಸದಾಯಕವಾದುದು.
- ಹಿಂದುಳಿದ ರಾಷ್ಟ್ರದಲ್ಲಿ ಜನರು ವೃತ್ತಿಯಲ್ಲಿ ನೈಪುಣ್ಯತೆ ಸಾಧಿಸುವುದಿಲ್ಲ,ಅವರು ವಿವಿಧ ವೃತ್ತಿಗಳಲ್ಲಿ ಭಾಗವಹಿಸಿ ಆದಾಯ ಪಡೆಯುತ್ತಿರುತ್ತಾರೆ.ಇದರಿಂದ ಆದಾಯವನ್ನು ಮಾಪನೆ ಮಾಡುವುದು ತುಂಬಾ ಕಷ್ಟ.
- ರಾಷ್ಟ್ರೀಯ ಆದಾಯವನ್ನು ಮಾಪನ ಮಾಡುವಾಗ ಯಾವ ಬಗೆಯ ಸರಕುಗಳನ್ನು ಪರಿಗಣಿಸಬೇಕು ಎಂಬ ಜಿಜ್ಞಾಸೆ ಹಾಗೇ ಉಳಿದಿದೆ.ಅನೇಕ ರೀತಿಯ ಸರಕುಗಳು ಇರುವ ಕಾರಣದಿಂದ ಯಾವುದನ್ನು ಅಂತಿಮ ಸರಕು ಎಂದು ಪರಿಗಣಿಸುವುದು ಸಮಸ್ಯೆಯಾಗಿದೆ.
- ಉತ್ಪಾದಕರು ತಮ್ಮ ಸ್ವಂತ ಅನುಭೋಗಕ್ಕಾಗಿ ಸರಕುಗಳನ್ನು ಬಳಸಿಕೊಂಡರೆ, ಆ ಸರಕುಗಳು ಮಾರುಕಟ್ಟೆಯನ್ನು ಪ್ರವೇಶಿಸುವುದಿಲ್ಲ,ಆಗ ಅವುಗಳ ಮೌಲ್ಯ ನಿರ್ಧಾರ ಕಷ್ಟವಾಗುತ್ತದೆ.
- ಕಾನೂನುಬಾಹಿರ ಹಾಗು ಅನೀತಿಯ ಚಟುವಟಿಕೆಗಳ ಮೂಲಕ ಗಳಿಸಿದ ಆದಾಯವನ್ನು ಸೇರಿಸಿಕೊಳ್ಳಲಾಗುವುದಿಲ್ಲ.
ಹೀಗೆ ರಾಷ್ಟ್ರೀಯ ಆದಾಯದ ಮಾಪನದಲ್ಲಿ ಅನೇಕ ತೊಡಕುಗಳು ಎದುರಾಗುತ್ತವೆ.ಇವುಗಳನ್ನು ನಿಬಾಯಿಸಿ ನಿಖರವಾದ ಅಂಕಿ ಅಂಶಗಳೊಂದಿಗೆ ಅದನ್ನು ಮಾಪನ ಮಾಡುವುದು ಕಷ್ಟಸಾಧ್ಯದ ವಿಚಾರವೇ ಸರಿ.
ರಾಷ್ಟ್ರೀಯ ಆದಾಯದ ಮಹತ್ವ
ಬದಲಾಯಿಸಿಒಂದು ರಾಷ್ಟ್ರದ ಆರ್ಥಿಕತೆಯಲ್ಲಿ ರಾಷ್ಟ್ರೀಯ ಆದಾಯದ ಅಂಕಿ ಅಂಶಗಳು ಬಹಳ ಪ್ರಾಮುಖ್ಯತೆ ಪಡೆದಿವೆ.ಈ ಅಂಕಿ ಅಂಶಗಳಿಂದ ಲಭ್ಯವಾಗುವ ಪ್ರಯೋಜನೆಗಳೆಂದರೆ:
- ರಾಷ್ಟ್ರೀಯ ಆದಾಯದ ಅಂಕಿ ಅಂಶಗಳಿಂದ ಒಂದು ರಾಷ್ಟ್ರದ ಬೆಳವಣಿಗೆ ಹಾಗು ಆರ್ಥಿಕತೆಯನ್ನು ತಿಳಿಯಬಹುದು.
- ರಾಷ್ಟ್ರೀಯ ಆದಾಯದ ಮತ್ತು ತಲಾದಾಯ ಅಂಕಿ ಅಂಶಗಳು ಒಂದು ರಾಷ್ಟ್ರದ ಜನರ ಜೀವನ ಮಟ್ಟದ ಸ್ಪಷ್ಟ ಚಿತ್ರಣ ನೀಡುತ್ತದೆ.
- ರಾಷ್ಟ್ರೀಯ ಆದಾಯದ ಮತ್ತು ತಲಾದಾಯ ಅಂಕಿ ಅಂಶಗಳು ರಾಷ್ಟ್ರೀಯ ಆದಾಯದ ಹಂಚಿಕೆಯ ವಿಚಾರದ ಮೇಲೆ ಬೆಳಕು ಬೀರುತ್ತವೆ.
- ರಾಷ್ಟ್ರೀಯ ಆದಾಯದ ಅಂಕಿ ಅಂಶಗಳು ಆರ್ಥಿಕ ಧೋರಣೆಗಳ ನಿರ್ಮಾಣ, ಯೋಜನೆಗಳ ಅನುಷ್ಠಾನಕ್ಕೆ ತುಂಬಾ ಅವಶ್ಯಕ.
- ಈ ಅಂಕಿ ಅಂಶಗಳಿಂದ ವಿವಿಧ ದೇಶಗಳ ಪ್ರಗತಿಯ ದರ ಮತ್ತು ಅಲ್ಲಿನ ಜನರ ಜೀವನ ಮಟ್ಟವನ್ನು ಹೋಲಿಸಿ ನೋಡುವುದು ಸಾಧ್ಯವಾಗುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ https://en.wikipedia.org/wiki/Alfred_Marshall
- ↑ https://en.wikipedia.org/wiki/Irving_Fisher
- ↑ https://en.wikipedia.org/wiki/Gross_national_income
- ↑ http://www.economicsdiscussion.net/national-income/measure/methods-for-measuring-national-income-3-methods-economics/25917
- ↑ http://worldpopulationreview.com/countries/countries-by-gdp/
- ↑ "GDP for the world".
- ↑ https://en.wikipedia.org/wiki/Net_national_income
- ↑ https://en.wikipedia.org/wiki/Per_capita_income
- ↑ https://en.wikipedia.org/wiki/Standard_of_living
- ↑ https://en.wikipedia.org/wiki/Circular_flow_of_income