ಶ್ರೀಧರ ಸ್ವಾಮಿಗಳು

(ಶ್ರೀಧರ ಸ್ವಾಮಿ ಇಂದ ಪುನರ್ನಿರ್ದೇಶಿತ)

ಶ್ರೀಧರ ಸ್ವಾಮಿಗಳು (ದೇವನಾಗರಿ: श्रीधर स्वामी,) (೧೯೦೮–೧೯೭೩) ಒಬ್ಬ ಪ್ರಮುಖ ಮರಾಠಿ-ಕನ್ನಡ ಸಂತರು ಮತ್ತು ಹಿಂದೂ ಧರ್ಮದ ಪ್ರವರ್ತಕರು. ಶ್ರೀಧರ ಸ್ವಾಮಿಗಳು ಹಿಂದೂ ದೇವತೆ ರಾಮನ ಭಕ್ತರು ಮತ್ತು ಸಮರ್ಥ ರಾಮದಾಸರ ಶಿಷ್ಯರೂ ಆಗಿದ್ದರು.

ಶ್ರೀಧರ ಸ್ವಾಮೀಜಿ
ಜನನ೭ ಡಿಸೆಂಬರ್ ೧೯೦೮
ಲಾಡ್ ಚಿಂಚೋಳಿ,ಕರ್ನಾಟಕ,ಭಾರತ
ಮರಣ೧೯ ಎಪ್ರಿಲ್ ೧೯೭೩
ವರದಹಳ್ಳಿ, ಸಾಗರ, ಶಿವಮೊಗ್ಗ, ಕರ್ನಾಟಕ
ಗೌರವಗಳುಸಂತ, ಸದ್ಗುರು
ಗುರುಸಮರ್ಥ ರಾಮದಾಸರು
ತತ್ವಶಾಸ್ತ್ರಸನಾತನ ದರ್ಮ
ಪ್ರಮುಖ ಕೃತಿಗಳುಸ್ವಾತ್ಮ ನಿರೂಪಣಂ, ಮೋಕ್ಷ ಸಂದೇಶ
Map

ಆರಂಭಿಕ ಜೀವನ

ಬದಲಾಯಿಸಿ

ಮಹಾರಾಷ್ಟ್ರ ರಾಜ್ಯದ ನಾಂದೇಡ್ ಜಿಲ್ಲೆಗೆ ಒಳಪಡುವ ದೇಗಲೂರಿನಲ್ಲಿ ’ಪತಕೀ’ ಎಂಬ ಅಡ್ಡ ಹೆಸರಿನ ಮನೆತನವಿತ್ತು. ಋಗ್ವೇದಿ ಆಶ್ವಲಾಯನ ಶಾಖೆಯ ದೇಶಸ್ಥ ಬ್ರಾಹ್ಮಣರ ಆಚಾರ ನಿಷ್ಠ, ಭಕ್ತಿಪರಾಯಣವಾದ ಈ ತೇಜಸ್ವೀ ಕುಲದಲ್ಲಿ ಶ್ರೀನಾರಾಯಣ ರಾಯರು ಮತ್ತು ಕಮಲಾಬಾಯಿ ಎಂಬ ಆದರ್ಶ ದಂಪತಿಗಳಿದ್ದರು. ಇವರೇ ಶ್ರೀ ಶ್ರೀಧರ ಸ್ವಾಮಿಗಳವರನ್ನು ಪುತ್ರ ರೂಪದಿಂದ ಪಡೆದ ಭಾಗ್ಯಶಾಲಿಗಳು. ಇವರಿಗೆ ೨ ಗಂಡು, ೧ ಹೆಣ್ಣು ಮಕ್ಕಳಿದ್ದರೂ ಇವರೆಲ್ಲಾ ಅಲ್ಪಾಯುಷಿಗಳೆಂದು, ಗಾಣಗಾಪುರಕ್ಕೆ ಹೋಗಿ ಶ್ರೀ ದತ್ತ ಗುರುವಿನ ಸೇವಾ, ಅನುಷ್ಠಾನ, ತಪವನ್ನಾಚರಿಸಿದರೆ ನಿಮಗೊಬ್ಬ ಕುಲೋದ್ಧಾರಕ ಪುತ್ರನಾಗುವ ಯೋಗವಿದೆ ಎಂದು ಕುಲಪುರೋಹಿತರು ಇವರ ಜನ್ಮಕುಂಡಲಿಯನ್ನು ನೋಡಿ ಹೇಳಿದರು. ಅಂತೆಯೇ ಈ ದಂಪತಿಗಳು ಗಾಣಗಾಪುರಕ್ಕೆ ತೆರಳಿ ಉಗ್ರ ತಪಸ್ಸನ್ನಾಚರಿಸಲಾಗಿ, ಶ್ರೀ ದತ್ತನ ಸಾಕ್ಷಾತ್ಕಾರವಾಯಿತು. ನಿಮಗೆ ಒಬ್ಬ ನಿವೃತ್ತಿ ಮಾರ್ಗದ ಕುಲೋದ್ಧಾರಕ ಮಾತ್ರವಲ್ಲದೆ ವಿಶ್ವೋದ್ಧಾರಕ ತೇಜಸ್ವೀ ಪುತ್ರನಾಗುವನು ಎಂದು ವರವನ್ನಿತ್ತು ಶ್ರೀ ದತ್ತನು ಅಂತರ್ಧಾನನಾದನು. ಇದರಂತೆಯೇ ಗರ್ಭವತಿಯಾದ ಕಮಲಾಬಾಯಿಯವರನ್ನು ಇವರ ತಾಯಿಯು ತನ್ನ ಇನ್ನೊಂದು ಮಗಳ ಮನೆಯಾದ ಲಾಡ್ ಚಿಂಚೋಳಿಗೆ ಕರೆದೊಯ್ದರು. ಇದು ಕರ್ನಾಟಕ ಪ್ರಾಂತ್ಯದ ಗುಲ್ಬರ್ಗಾ ಜಿಲ್ಲೆಯಲ್ಲಿ ಗಾಣಗಾಪುರದಿಂದ ಸುಮಾರು ೨೫ ಕಿ.ಮೀ. ದೂರದಲ್ಲಿದೆ. ಇಲ್ಲಿಯೇ ಶಕೆ ೧೮೩೦ (ಡಿಸೆಂಬರ್ ೫, ೧೯೦೮) ರಲ್ಲಿ ಮಾರ್ಗಶೀರ್ಷ ಪೌರ್ಣಿಮೆಯಂದು ದತ್ತ ಜನ್ಮದ ವೇಳೆಯಲ್ಲಿಯೆ ಸಾಕ್ಷಾತ್ ಪರಬ್ರಹ್ಮ ಸ್ವರೂಪಿ ಶ್ರೀ ಶ್ರೀಧರರು ಜನ್ಮತಾಳಿದರು. ಶ್ರೀಧರ ಸ್ವಾಮಿಗಳು ೩ ವರ್ಷದವರಾಗಿದ್ದಾಗಲೇ ತಮ್ಮ ತಂದೆಯವರನ್ನು ಕಳೆದುಕೊಂಡರು. ನಂತರ ಅವರ ತಾಯಿ ಮತ್ತು ಸಹೋದರ ತ್ರ್ಯಂಬಕ ಕುಟುಂಬದ ಜವಾಬ್ದಾರಿ ವಹಿಸಿಕೊಂಡರು. ಶ್ರೀಧರರನ್ನು ಪ್ರಾಥಮಿಕ ಶಿಕ್ಷಣಕ್ಕಾಗಿ ಹೈದರಾಬಾದಿನ ಶಾಲೆಯೊಂದಕ್ಕೆ ಸೇರಿಸಲಾಯಿತು. ಬಾಲ್ಯದಿಂದಲೇ ಅವರು ಅಧ್ಯಾತ್ಮದ ಬಗ್ಗೆ ಒಲವು ಹೊಂದಿದ್ದರು. ಶ್ರೀ ಶ್ರೀಧರರಿಗೆ ಬಾಲ್ಯದಲ್ಲಿಯೇ ಹರಿಕಥಾ, ಕೀರ್ತನೆ, ಸತ್ಸಂಗ ಪುರಾಣ ಪ್ರವಚನಗಳಲ್ಲಿ ತುಂಬ ಅಭಿರುಚಿಯೂ ಮತ್ತು ಸನಾತನ ಧರ್ಮದಲ್ಲಿ ಅಚಲವಾದ ಶ್ರದ್ಧಾ, ಭಕ್ತಿ, ನಿಷ್ಠೆಗಳಿದ್ದವು. ಮುಖ ಕಮಲದಲ್ಲಿ ಅಖಂಡರಾಮನಾಮವಿತ್ತು. ಅವರ ಬಾಲ್ಯದ ಘಟನೆಯೊಂದು ಹೀಗಿದೆ: ಅವರು ಒಮ್ಮೆ ಅನಾರೋಗ್ಯಕ್ಕೊಳಗಾಗಿದ್ದರು ಮತ್ತು ಬಹಳ ದಿನ ಶಾಲೆಯನ್ನು ತಪ್ಪಿಸಿಕೊಂಡಿದ್ದರು. ಹೀಗಾಗಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಬಹುದೆಂದು ಹೆದರಿದ್ದರು. ಆಗ ಅವರ ತಾಯಿ ಅವರಿಗೆ ಸತತವಾಗಿ ರಾಮ ನಾಮ ಜಪಿಸಬೇಕೆಂದೂ ರಾಮ ಅವರ ಪರೀಕ್ಷೆಗಳನ್ನು ಸುಗಮಗೊಳಿಸುವನೆಂದೂ ಹೇಳಿದರು. ಅವರು ಶ್ರದ್ಧೆಯಿಂದ ಅದನ್ನು ಮಾಡಲಾರಂಭಿಸಿದರು; ಎಷ್ಟರ ಮಟ್ಟಿಗೆ ಎಂದರೆ ಅವರು ಸದಾ ಕಾಲ ರಾಮನಾಮವನ್ನೇ ಜಪಿಸುತ್ತಾ ಓದಲೇ ಇಲ್ಲ. ಪರೀಕ್ಷೆಯ ದಿನ ಅವರು ಏನನ್ನೂ ಓದದೆ ಹೋದರು ಮತ್ತು ಎಲ್ಲರಿಗೂ ಆಶ್ಚರ್ಯವಾಗುವಂತೆ ಎಲ್ಲ ಪ್ರಶ್ನೆಗಳಿಗೂ ಚೆನ್ನಾಗಿ ಉತ್ತರ ಬರೆದು ಮೊದಲಿಗರಾಗಿ ಉತ್ತೀರ್ಣರಾದರು. ಶ್ರೀಧರರು ಕೇವಲ ೧೦ ವರ್ಷದವರಿದ್ದಾಗ ಅವರ ಅಣ್ಣ ತೀರಿಕೊಂಡರು. ಅವರ ತಾಯಿ ಕೂಡ ಈ ಆಘಾತ ಮತ್ತು ದೀರ್ಘ ಕಾಯಿಲೆಯಿಂದ ಬಳಲಿ, ಕೆಲವೇ ಸಮಯದಲ್ಲಿ ತೀರಿಕೊಂಡರು. ಆಕೆಯ ಸಾವಿನ ನಂತರ ಶ್ರೀಧರರು ಗುಲ್ಬರ್ಗಾಕ್ಕೆ ಹೋಗಿ ಅವರ ಚಿಕ್ಕಮ್ಮನ ಜೊತೆ ಉಳಿದುಕೊಂಡು ನೂತನ ವಿದ್ಯಾಲಯದಲ್ಲಿ ತಮ್ಮ ವಿದ್ಯಾಭ್ಯಾಸ ಮುಂದುವರೆಸಿದರು. ಗುಲ್ಬರ್ಗಾದಲ್ಲಿ ಕೆಲವು ವರ್ಷಗಳನ್ನು ಕಳೆದ ನಂತರ, ಅವರು ಪುಣೆಗೆ ಹೋಗಿ ಕೆಲವು ಸಮಯಗಳ ಕಾಲ ಅನಾಥ ವಿದ್ಯಾರ್ಥಿ ಗೃಹ ಎಂಬ ಒಂದು ಅನಾಥಾಶ್ರಮದಲ್ಲಿ ಉಳಿದುಕೊಂಡರು. ಇಲ್ಲಿ ಅವರ ಆಧ್ಯಾತ್ಮಿಕ ಜ್ಞಾನ ಸಂಪಾದನೆಯ ಆಸಕ್ತಿ ಬೆಳೆಯಿತು. ಈ ನಶ್ವರ ವಿದ್ಯೆಯ ವೇಳೆಯನ್ನು ಶಾಶ್ವತವಾದ ಆಧ್ಯಾತ್ಮ ವಿದ್ಯೆಗಾಗಿ ವಿನಿಯೋಗಿಸಿದರೆ ಆದಷ್ಟು ಜಾಗ್ರತೆ ಆತ್ಮಸಾಕ್ಷಾತ್ಕಾರವಾಗಿ ಲೋಕದ ಉದ್ಧಾರಕ್ಕೂ ಪೂರ್ಣ ಸಾಮರ್ಥ್ಯ ಬರುವುದೆಂದು ನಿರ್ಧರಿಸಿ ಶ್ರೀ ಪಳ್ನಿಟ್ಕರ್ ಅವರ ಸಲಹೆಯ ಮೇರೆಗೆ ಅಧ್ಯಾತ್ಮ ಜ್ಞಾನ ಸಂಪಾದನೆಗಾಗಿ ಶ್ರೀ ಸಮರ್ಥ ರಾಮದಾಸರು ಸುಮಾರು ಮುನ್ನೂರು ವರ್ಷಗಳ ಹಿಂದೆ ವಾಸವಾಗಿದ್ದ ಸಜ್ಜನಗಡ ಎಂಬ ಸ್ಥಳಕ್ಕೆ ಹೊರಟರು.

ಆಧ್ಯಾತ್ಮಿಕ ಬೆಳವಣಿಗೆ

ಬದಲಾಯಿಸಿ

ಮುಂದಿನ ಮೂರು ವರ್ಷಗಳ ಕಾಲ, ಶ್ರೀಧರ ಸ್ವಾಮಿಗಳು ತಮ್ಮನ್ನು ತಾವು ಕಠಿಣ ಧ್ಯಾನ ಮತ್ತು ಸಜ್ಜನಗಡದಲ್ಲಿನ ಸಮರ್ಥ ರಾಮದಾಸರ ಮಠವನ್ನು ಬೆಳೆಸುವಲ್ಲಿ ತೊಡಗಿಸಿಕೊಂಡರು. ಸಜ್ಜನಗಡಕ್ಕೆ ಬಂದ ಒಂದೂವರೆ ವರ್ಷಗಳ ನಂತರ ಸಮರ್ಥ ರಾಮದಾಸರು ಸ್ವತಃ ಶ್ರೀಧರ ಸ್ವಾಮಿಗಳನ್ನು ಆಶೀರ್ವದಿಸಿದರು. ನಂತರ, ಶ್ರೀ ಸಮರ್ಥರು ಅವರನ್ನು ದಕ್ಷಿಣದ ಕಡೆ ಕರ್ನಾಟಕಕ್ಕೆ ಹೋಗಿ ಸನಾತನ ವೈದಿಕ ಧರ್ಮದ ನಿಜವಾದ ಸಂದೇಶಗಳನ್ನು ಹರಡಲು ನಿರ್ದೇಶಿಸಿದರು.

ಧಾರ್ಮಿಕ ಔನ್ನತ್ಯಕ್ಕಾಗಿ ಭಾರತ ಪ್ರವಾಸ

ಬದಲಾಯಿಸಿ

ಮುಂದಿನ ಹನ್ನೆರಡು ವರ್ಷಗಳ ಕಾಲ ಶ್ರೀಧರ ಸ್ವಾಮಿಗಳು ದಕ್ಷಿಣ ಭಾರತದ ಹೆಚ್ಚಿನ ಭಾಗಗಳನ್ನು ಬರಿಗಾಲಿನಲ್ಲಿ ಸಂಚರಿಸಿದರು. ಅವರು ದೇವಸ್ಥಾನಗಳು ಮತ್ತು ಮಠಗಳಲ್ಲಿ ಉಳಿದುಕೊಂಡು ಸನಾತನ ವೈದಿಕ ಧರ್ಮ ಮತ್ತು ಧಾರ್ಮಿಕ ಔನ್ನತ್ಯಕ್ಕಾಗಿ ಪ್ರವಚನಗಳನ್ನು ನೀಡಲಾರಂಭಿಸಿದರು. ಪ್ರವಾಸದ ವೇಳೆಗಳಲ್ಲಿ ಅವರು ಹಲವು ಹಿಂದೂ ಧರ್ಮದ ಮುಖಂಡರು ಮತ್ತು ಸಂತರ ಪರಿಚಯ ಪಡೆದುಕೊಂಡರು. ಇವುಗಳಲ್ಲಿ ಪ್ರಮುಖವಾದುದು ಶೀಗೇಹಳ್ಳಿಯ ಶಿವಾನಂದ ಸ್ವಾಮಿಗಳ ಜೊತೆಗಿನ ಪರಿಚಯ. ಅವರು ವಿವೇಕಾನಂದ ಬಂಡೆಯನ್ನೂ ಭೇಟಿ ಮಾಡಿ ಅಲ್ಲಿ ಧ್ಯಾನ ಮಾಡಿದರು. ೧೯೪೨ರಲ್ಲಿ ಶ್ರೀಧರ ಸ್ವಾಮಿಗಳು ಸಂನ್ಯಾಸ ಸ್ವೀಕರಿಸಿದರು ಮತ್ತು ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯ ಭಗವಾನ್ ಶ್ರೀಧರ ಸ್ವಾಮಿಗಳು ಎಂಬ ಹೆಸರು ಪಡೆದರು. ಇದರ ನಂತರ ೧೯೬೭ರವರೆಗೆ ಅವರು ವ್ಯಾಪಕವಾಗಿ ಭಾರತದಾದ್ಯಂತ ಸಂಚರಿಸಿದರು ಮತ್ತು ತಮ್ಮ ಪ್ರವಚನಗಳು, ಬರಹಗಳು ಮತ್ತು ಆಧ್ಯಾತ್ಮಿಕ ಪ್ರವರ್ತನಗಳ ಮೂಲಕ ವೇದಗಳ ತಿರುಳಿನ ಸಂದೇಶಗಳನ್ನು ಸಾಮಾನ್ಯ ಜನರಿಗೆ ತಿಳಿಸಿದರು. ಹೀಗೆ ಸಂಚರಿಸುತ್ತಿರುವಾಗ ಒಮ್ಮೆ ಸಾಗರದ ಸಮೀಪದ ವರದಪುರ (ವರದಹಳ್ಳಿ) ಕ್ಷೇತ್ರಕ್ಕೆ ಶ್ರೀಗಳವರ ಆಗಮನವಾಯಿತು. ಪರಮಪವಿತ್ರ ಏಕಾಂತ, ನಿತಾಂತ, ರಮಣೀಯವಾಗಿರುವ ಈ ಸ್ಥಳದಲ್ಲಿ ಒಂದು ಕುಟೀರ ನಿರ್ಮಾಣವಾಗಿ ಶ್ರೀಗಳವರ ಚಾತುರ್ಮಾಸ್ಯ ಪ್ರಾರಂಭವಾಯಿತು. ಅನೇಕ ದಿವಸಗಳಿಂದ ತಮ್ಮ ಧ್ಯೇಯ ಮತ್ತು ಕಾರ್ಯಕ್ಕೆ ಅನುಕೂಲವಾದ ಸ್ವತಂತ್ರ ಸ್ಥಳದ ನಿರೀಕ್ಷಣೆಯಲ್ಲಿದ್ದ ಶ್ರೀಗಳವರಿಗೆ ಏನು ಕಂಡು ಬಂತೋ ಅವರೇ ಬಲ್ಲರು. ಇದೇ ೧೯೬೭ರ ಚಾತುರ್ಮಾಸದಲ್ಲಿ ವಿಜಯದಶಮಿಯ ಶುಭ ಮುಹೂರ್ತದಲ್ಲಿ ಧರ್ಮದ್ವಜದ ಸ್ಥಾಪನೆ ಮಾಡಿ ಈ ಆಶ್ರಮಕ್ಕೆ ಶ್ರೀಧರಾಶ್ರಮ ಎಂದು ನಾಮಕರಣ ಮಾಡಿದರು. ಇಲ್ಲಿ ಅನೇಕ ಧರ್ಮ ಕಾರ್ಯಗಳನ್ನು ನೆರವೇರಿಸಿದರು. ತದನಂತರ ೧೯ ಏಪ್ರಿಲ್ ೧೯೭೩ರಲ್ಲಿ ಮಹಾಸಮಾಧಿ ಹೊಂದುವವರೆಗೆ ಅವರು ಹೆಚ್ಚಿನ ಭಾಗ ಒಂಟಿಯಾಗಿದ್ದುಕೊಂಡು ಧ್ಯಾನಸ್ಥರಾಗಿದ್ದರು.

ಬರಹಗಳು - ವೇದಗಳ ಸಂದೇಶಗಳ ಹರಡುವಿಕೆ

ಬದಲಾಯಿಸಿ

ಶ್ರೀಧರ ಸ್ವಾಮಿಗಳು ಮರಾಠಿ, ಸಂಸ್ಕೃತ, ಕನ್ನಡ, ಹಿಂದಿ ಮತ್ತು ಆಂಗ್ಲದಲ್ಲಿ ಪ್ರತಿಭಾನ್ವಿತ ಬರಹಗಾರರಾಗಿದ್ದರು. ತಮ್ಮ ವ್ಯಾಪಕ ಪ್ರವಾಸದುದ್ದಕ್ಕೂ ಅವರು ಸ್ವಲ್ಪ ಸಮಯವನ್ನು ಧಾರ್ಮಿಕ ಬರಹಗಳಿಗಾಗಿ ವಿನಿಯೋಗಿಸಿದರು. ಸಂಕೀರ್ಣವಾದ ವೇದಗಳ ಸೂಕ್ಷ್ಮ ತತ್ವಬೋಧಗಳನ್ನು ಸಾಮಾನ್ಯ ಜನರಿಗೆ ಮನನವಾಗುವ ರೀತಿಯಲ್ಲಿ ಸರಳಗೊಳಿಸುವುದು ಅವರ ಮುಖ್ಯ ಉದ್ದೇಶವಾಗಿತ್ತು. ಅವರು ಮರಾಠಿ, ಕನ್ನಡ ಮತ್ತು ಆಂಗ್ಲದಲ್ಲಿ ಇಪ್ಪತ್ತಕ್ಕಿಂತ ಹೆಚ್ಚು ಪುಸ್ತಕಗಳನ್ನು ಬರೆದರು.

ಉಲ್ಲೇಖಗಳು

ಬದಲಾಯಿಸಿ


ಸದ್ಗುರು ಭಗವಾನ್ ಶ್ರೀ ಶ್ರೀಧರ ಚರಿತ್ರೆ

ಪ್ರಕಾಶಕರು ಶ್ರೀ ಶ್ರೀಧರ ಸೇವಾ ಮಹಾಮಂಡಲ(ರಿ.) ಶ್ರೀ ಶ್ರೀಧರಾಶ್ರಮ-ಶ್ರೀಕ್ಷೇತ್ರ ವರದಪುರ ಯಡಜಿಗಳೇಮನೆ ಅಂಚೆ, ಸಾಗರ ತಾ, ಶಿವಮೊಗ್ಗ, 577401

ಬಾಹ್ಯ ಕೊಂಡಿಗಳು

ಬದಲಾಯಿಸಿ

ಟೆಂಪ್ಲೇಟು:Hinduism footer small