ಕಾಳಹಸ್ತಿ ಆಂಧ್ರಪ್ರದೇಶಚಿತ್ತೂರು ಜಿಲ್ಲೆಯಲ್ಲಿ ಸುವರ್ಣಮುಖಿ ನದೀತೀರದಲ್ಲಿರುವ ಪ್ರಮುಖ ಶೈವ ಯಾತ್ರಾಸ್ಥಳ. ದಕ್ಷಿಣ ಕೈಲಾಸವೆಂದು ಪ್ರಸಿದ್ಧವಾಗಿದೆ. ಇದರ ಬಳಿಯಲ್ಲಿರುವ ಬೆಟ್ಟಕ್ಕೆ ಕೈಲಾಸಗಿರಿಯೆಂದು ಹೆಸರು.

ಶ್ರೀಕಾಳಹಸ್ತಿ
శ్రీకాళహస్తి
Kalahasti
Srikalahasti aerial view
Srikalahasti aerial view
Countryಭಾರತ
Stateಆಂಧ್ರ ಪ್ರದೇಶ
DistrictChittoor
MandalSrikalahasti
Area
 • Total೨೪.೫೦ km (೯.೪೬ sq mi)
Population
 (2011)[]
 • Total೮೦,೦೫೬
 • Density೩,೩೦೦/km (೮,೫೦೦/sq mi)
Languages
 • Officialತೆಲುಗು
Time zoneUTC+5:30 (IST)
Websitesrikalahastimunicipality.org

ಭೌಗೋಳಿಕ

ಬದಲಾಯಿಸಿ

ನಾಯಿಡುಪೇಟ-ತಿರುಪತಿ ರೈಲುಮಾರ್ಗದಲ್ಲಿ ನಾಯಿಡುಪೇಟೆದಿಂದ ಹದಿನೆಂಟು ಮೈಲಿಗಳ ದೂರದಲ್ಲಿದೆ. ರೇಣಿಗುಂಟ-ಗೂಡೂರು ರೈಲುದಾರಿಯ ನಿಲ್ದಾಣಗಳಲ್ಲಿ ಕಾಳಹಸ್ತಿಯೂ ಒಂದು.

ದೇವಾಲಯಗಳು

ಬದಲಾಯಿಸಿ

ಇಲ್ಲಿಯ ಕಾಳಹಸ್ತೀಶ್ವರ ಹಾಗೂ ಜ್ಞಾನ ಪ್ರಸನ್ನಾಂಬಿಕೆ ದೇವಾಲಯಗಳು ಪ್ರಾಚೀನವೂ ಪ್ರಸಿದ್ಧವೂ ಆಗಿವೆ. ಇಲ್ಲಿರುವ ಪಂಚಲಿಂಗಗಳಲ್ಲಿ ಮುಖ್ಯವಾದ್ದು ವಾಯುಲಿಂಗ. ಸಹಸ್ರಾರು ಭಕ್ತರು ಶಿವರಾತ್ರಿಯ ಕಾಲದಲ್ಲಿ ಇಲ್ಲಿ ಸೇರಿ 10 ದಿನಗಳ ಕಾಲ ವಿಜೃಂಭಣೆಯಿಂದ ಉತ್ಸವವನ್ನು ಆಚರಿಸುತ್ತಾರೆ. ಪಲ್ಲವ, ಚೋಳ ಮತ್ತು ವಿಜಯನಗರ ರಾಜರು ಈ ದೇವಾಲಯಕ್ಕೆ ಅನೇಕ ಸವಲತ್ತುಗಳನ್ನು ಒದಗಿಸಿದ್ದರು.

ಐತಿಹ್ಯ

ಬದಲಾಯಿಸಿ

ಕಾಳಹಸ್ತಿಗೆ ಸಂಬಂಧಿಸಿದ ಪ್ರಾಚೀನ ಐತಿಹಾಸಿಕ ದಾಖಲೆಗಳು ಹೆಚ್ಚಾಗಿ ದೊರಕಿಲ್ಲ. ಸ್ಥಳಪುರಾಣದಲ್ಲೂ ಹಲವು ಶೈವಪುರಾಣಗಳಲ್ಲೂ ಕಾಳಹಸ್ತಿಗೆ ಸಂಬಂಧಿಸಿದ ಅನೇಕ ಐತಿಹ್ಯಗಳುಂಟು. ಅಲೌಕಿಕ ಘಟನೆಗಳ ನಿರೂಪಣೆಗಳೇ ಇವುಗಳಲ್ಲಿ ಹೆಚ್ಚು. ಇವುಗಳ ಪ್ರಕಾರ ಕಾಳಹಸ್ತಿಯ ಶಿವಲಿಂಗ ಬ್ರಹ್ಮದೇವನಿಂದ ಸ್ಥಾಪಿತವಾಯಿತು. ಕಾಳಹಸ್ತಿ ಎಂಬ ಹೆಸರಿಗೆ ಸಂಬಂಧಿಸಿದಂತೆ ಕೆಲವು ವಿವರಣೆಗಳಿವೆ.

ಶ್ರೀಕಾಳಹಸ್ತಿ ಎಂಬ ಹೆಸರಿನ ಶ್ರೀ ಎಂಬುದು ಜೇಡರಹುಳುವಿಗೂ ಕಾಳ ಎಂಬುದು ಕಾಳಸರ್ಪಕ್ಕೂ ಹಸ್ತಿ ಎಂಬುದು ಆನೆಗೂ ಸಂಕೇತಗಳೆಂದು ತಿಳಿಸಿ ಅವಕ್ಕೆ ಸಂಬಂಧಿಸಿದಂತೆ ಒಂದೊಂದು ಐತಿಹ್ಯವನ್ನು ನಿರೂಪಿಸಲಾಗಿದೆ.ಒಂದು ಜೇಡರ ಹುಳು ಲಿಂಗದ ಸುತ್ತಲೂ ಬಲೆ ಹೆಣೆದು ಲಿಂಗವನ್ನು ಪೂಜಿಸಿತೆಂದೂ ಒಂದು ಕಾಳಸರ್ಪ ಲಿಂಗದ ಮೇಲೆ ರತ್ನಗಳನಿಟ್ಟು ಪೂಜಿಸಿತೆಂದೂ ಆನೆ ತನ್ನ ಸೊಂಡಲಲ್ಲಿ ನೀರು ತಂದು ಅಭಿಷೇಕ ಮಾಡಿ ಪತ್ರಪುಷ್ಪಗಳಿಂದ ಪೂಜಿಸಿತೆಂದೂ ಆ ಮೂರೂ ಪ್ರಾಣಿಗಳು ತಮ್ಮ ಭಕ್ತಿ ಮತ್ತು ಸೇವೆಗಳಿಂದ ಮೋಕ್ಷ ಪಡೆದುವೆಂದೂ ಸ್ಥಳಪುರಾಣ ತಿಳಿಸುತ್ತದೆ.

ಹೆಚ್ಚು ಜನಜನಿತವಾಗಿರುವ ಮತ್ತೊಂದು ಐತಿಹ್ಯ ಬೇಡರ ಕಣ್ಣಪ್ಪನಿಗೆ ಸಂಬಂಧಿಸಿದ್ದು. ಪೆರಿಯ ಪುರಾಣದ ಪ್ರಕಾರ ಬೇಡರ ಕಣ್ಣಪ್ಪ ಕಾಳಹಸ್ತೀಶ್ವರನ ಪರಮಭಕ್ತ. ತಾನು ಕೊಂದ ಪ್ರಾಣಿಗಳ ಹಸಿ ಮಾಂಸವನ್ನು ದೇವರಿಗೆ ನೈವೇದ್ಯ ಮಾಡುತ್ತಿದ್ದ. ಬಾಯಲ್ಲಿ ನೀರನ್ನು ತುಂಬಿ ತಂದು ಶಿವಲಿಂಗಕ್ಕೆ ಅಭಿಷೇಕ ಮಾಡುತ್ತದ್ದ. ಶಿವಗೋಚರನೆಂಬ ಪೂಜಾರಿ ಒಮ್ಮೆ ಲಿಂಗದ ಮುಂದೆ ಮಾಂಸದ ಚೂರುಗಳನ್ನು ಕಂಡು ತಲ್ಲಣಿಸಿ, ವೈದಿಕ ಸಂಪ್ರದಾಯದಂತೆ ಪ್ರಾಯಶ್ಚಿತ್ತ ಮಾಡಿಕೊಂಡು ಲಿಂಗವನ್ನು ಶುದ್ಧಿ ಮಾಡಿ ಪೂಜಿಸಿದ. ಆದರೆ ಮರುದಿನವೂ ಮಾಂಸದ ಚೂರುಗಳಿದ್ದವು. ಈ ದೃಷ್ಕøತ್ಯದ ಮೂಲವನ್ನು ತಿಳಿಯುವ ಸಲುವಾಗಿ ಪೂಜಾರಿ ದೇವಾಲಯದಲ್ಲಿ ಅಡಗಿ ಕುಳಿತ. ಅದೇ ಸಮಯದಲ್ಲಿ ಶಿವನಿಗೂ ಕಣ್ಣಪ್ಪನನ್ನು ಪರೀಕ್ಷಿಸುವ ಇಚ್ಛೆಯಾಯಿತು. ಪೂಜಾಕಾಲದಲ್ಲಿ ಶಿವಲಿಂಗದ ಕಣ್ಣಿನಿಂದ ನೀರು ಸುರಿಯುತ್ತಿದ್ದುದನ್ನು ಕಂಡ ಕಣ್ಣಪ್ಪ ದೇವರ ಬಾಧೆಯನ್ನು ಪರಿಹರಿಸಲು ತನ್ನ ಕಣ್ಣನ್ನೇ ಕಿತ್ತು ದೇವರಿಗೆ ಅರ್ಪಿಸಿದ. ಆದರೆ ಮತ್ತೊಂದು ಕಣ್ಣಲ್ಲಿ ಸಹ ನೀರು ಸುರಿಯುತ್ತಿದ್ದುದನ್ನು ಕಂಡ ಕಣ್ಣಪ್ಪ ತನ್ನ ಇನ್ನೊಂದು ಕಣ್ಣನ್ನೂ ಅರ್ಪಿಸಿದ. ಸಂಪ್ರೀತನಾದ ಶಿವ ಕಣ್ಣಪ್ಪನಿಗೆ ಮತ್ತು ಅಲ್ಲಿ ಉಪಸ್ಥಿತನಾಗಿದ್ದ ಪೂಜಾರಿಗೆ ಮೋಕ್ಷ ನೀಡಿದನೆಂದು ಪೆರಿಯ ಪುರಾಣ ತಿಳಿಸುತ್ತದೆ. ಕಣ್ಣಪ್ಪ ಅರುವತ್ತುಮೂರು ಶೈವ ಪುರಾತನರಲ್ಲೊಬ್ಬ. ದೇವಾಲಯದಲ್ಲಿ ಇಂದಿಗೂ ಕಣ್ಣಪ್ಪನ ವಿಗ್ರಹವೊಂದಿದೆ.

ಸ್ಥಳ ಪುರಾಣ

ಬದಲಾಯಿಸಿ

ಕಾಳಹಸ್ತಿಯ ಸ್ಥಳಮಾಹಾತ್ಮ್ಯವೂ ತೆಲುಗು ಕವಿ ಧೂರ್ಜಟಿಯ ಶ್ರೀಕಾಳಹಸ್ತಿ ಶತಕಗಳೂ ಇಂಥ ಅನೇಕ ಐತಿಹ್ಯಗಳನ್ನು ತಿಳಿಸುತ್ತವೆ. ಸುಪ್ರಸಿದ್ಧ ತಮಿಳು ಶೈವಸಂತರಾದ ಸಂಬಂಧರ್, ಅಪ್ಪರ್, ಸುಂದರಮೂರ್ತಿ ಮುಂತಾದವರು ಈ ದೇವಾಲಯಕ್ಕೆ ಆಗಮಿಸಿದ್ದುದಾಗಿ ತಿಳಿದುಬರುತ್ತದೆ. ಶಂಕರಾಚಾರ್ಯ ಮತ್ತು ತಮಿಳು ಕವಿ ನಕ್ಕೀರರ್ ಇಲ್ಲಿಗೆ ಭೇಟಿ ಕೊಟ್ಟು ಶಿವಪೂಜೆ ಮಾಡಿದರೆಂದು ಹೇಳಲಾಗಿದೆ. ರಾಮಾನುಜಾಚಾರ್ಯರ ತಮ್ಮ (ಚಿಕ್ಕಮ್ಮನ ಮಗ) ಗೋವಿಂದ ತನ್ನ ಗುರುಗಳಾದ ಯಾದವಪ್ರಕಾಶರ ಜೊತೆಯಲ್ಲಿ ಯಾತ್ರೆ ಹೋಗಿದ್ದ ಕಾಲದಲ್ಲಿ ಕಾಶಿಯ ಬಳಿ ಗಂಗೆಯಲ್ಲಿ ಮೀಯುತ್ತಿದ್ದಾಗ ಅವನ ಅಂಗೈಯಲ್ಲಿ ಶಿವಲಿಂಗ ಪ್ರತ್ಯಕ್ಷವಾಯಿತೆಂದೂ ಅದರೊಂದಿಗೆ ಆತ ಕಾಳಹಸ್ತಿಗೆ ಹೋಗಿ ನೆಲಸಿದನೆಂದೂ ಮುಂದೆ ರಾಮಾನುಜರು ಸಂನ್ಯಾಸ ಸ್ವೀಕಾರಮಾಡಿ ಧರ್ಮಪ್ರಚಾರ ಕಾರ್ಯದಲ್ಲಿ ತೊಡಗಿದಾಗ ಶಿವನ ಅಪ್ಪಣೆ ಪಡೆದು ತನ್ನ ಸೋದರಮಾವ ಶ್ರೀಶೈಲಪೂರ್ಣರೊಂದಿಗೆ ತಿರುಪತಿಯಲ್ಲಿ ವಾಸವಾಗಿದ್ದು ಅನಂತರ ರಾಮಾನುಜರನ್ನು ಸೇರಿದನೆಂದೂ ಒಂದು ಐತಿಹ್ಯವುಂಟು.

ಇತಿಹಾಸ

ಬದಲಾಯಿಸಿ
 
Srikalahasti Gopuram

ಕಾಳಹಸ್ತಿ ಪ್ರದೇಶ ಸಾತವಾಹನ, ಪಲ್ಲವ, ಚೋಳ ಮತ್ತು ವಿಜಯನಗರ ಸಾಮ್ರಾಜ್ಯಗಳ ಭಾಗವಾಗಿತ್ತು. ಸಾತವಾಹನರ ಆಳ್ವಿಕೆಯ ಕಾಲದಲ್ಲಿ ಬಹುಶಃ ಇಲ್ಲಿ ಮರಮುಟ್ಟುಗಳಿಂದ ಚಿಕ್ಕ ಗುಡಿಯೊಂದನ್ನು ನಿಲ್ಲಿಸಿ, ಲಿಂಗವನ್ನು ಸ್ಥಾಪಿಸಿದ್ದಿರಬಹುದೆಂದು ಊಹಿಸಲಾಗಿದೆ. ಅನಂತರ ಕಾಳಹಸ್ತಿ ತೊಂಡಮಂಡಲದ ಪಲ್ಲವರ ಅಧೀನಕ್ಕೆ ಬಂತು. ವಾಸ್ತು ಮತ್ತು ಶಿಲ್ಪಶೈಲಿಯ ಆಧಾರದ ಮೇಲೆ ಪಲ್ಲವರ ಕಾಲದಲ್ಲಿ ಪ್ರಥಮವಾಗಿ ಶಿಲೆಯಿಂದ ಈ ದೇವಾಲಯದ ಕೆಲವು ಭಾಗಗಳು ನಿರ್ಮಿತವಾಗಿರಬಹುದು. ಪಂಚಮುಖ ದೇವಾಲಯ ಹಾಗೂ ಶಿವ ಮತ್ತಿತರ ವಿಗ್ರಹಗಳಿಗೂ ಮಹಾಬಲಿಪುರಂ ದೇವಾಲಯಗಳು ಮತ್ತು ವಿಗ್ರಹಗಳಿಗೂ ಹೆಚ್ಚು ಹೋಲಿಕೆ ಕಂಡುಬರುತ್ತದೆ. ಆದರೂ ಪಲ್ಲವರ ಕಾಲದ ಶಾಸನಗಳು ಇಲ್ಲಿ ದೊರೆತಿಲ್ಲ.

ಚೋಳರ ಕಾಲದಲ್ಲಿ ಕಾಳಹಸ್ತಿ ಪ್ರಸಿದ್ಧವಾದ ಯಾತ್ರಾಸ್ಥಳವಾಗಿತ್ತೆಂದು ಅನೇಕ ಶಾಸನಗಳಿಂದ ತಿಳಿದು ಬರುತ್ತದೆ. ಒಂದನೆಯ ಕುಲೋತ್ತುಂಗ ಚೋಳನ ಕಾಲದಲ್ಲಿ ಇಲ್ಲಿಯ ಶಿವಾಲಯ ವಿಸ್ತಾರಗೊಂಡಿತು. ಅಲ್ಲದೆ ಅನೇಕ ಚಿಕ್ಕ ದೇವಾಲಯಗಳೂ ನಿರ್ಮಾಣವಾದುವು. ಧನಿಕರಾದ ಭಕ್ತರು ಇಲ್ಲಿ ಮಠಗಳನ್ನು ಕಟ್ಟಿಸಿಕೊಟ್ಟುದಲ್ಲದೆ, ಯೋಗಿಗಳಿಗೆ ಹಾಗೂ ಯಾತ್ರಾರ್ಥಿಗಳಿಗೆ ಅನ್ನ ವಸತಿಗಳ ಏರ್ಪಾಟು ಮಾಡಿದರು. ಚೋಳರ ಕಾಲದಲ್ಲಿ ಯಾದವರಾಯ ನರಸಿಂಹದೇವ ಕಾಳಹಸ್ತಿಯ ದೇವಾಲಯಕ್ಕೆ ವಿಶೇಷ ಕೊಡುಗೆಯಿತ್ತುದಾಗಿ ತಿಳಿದು ಬರುತ್ತದೆ. ವಿಜಯನಗರದ ಕೃಷ್ಣದೇವರಾಯನ ಕಾಲದಲ್ಲಿ ಕಾಳಹಸ್ತಿಯ ದೇವಾಲಯ ವಿಶೇಷವಾಗಿ ಅಭಿವೃದ್ಧಿ ಹೊಂದಿತು. ಈತ ದೇವಾಲಯದ ಭವ್ಯವಾದ ಹಾಗೂ ಇಂದಿಗೂ ಪ್ರಸಿದ್ಧವಾಗಿರುವ ಗಾಳಿ ಗೋಪುರವನ್ನೂ ನೂರ್ಕಾಲು ಮಂಟಪವನ್ನೂ 1516ರಲ್ಲಿ ಕಟ್ಟಿಸಿದ. ಅವನ ಅನಂತರ ಆಳಿದ ಅಚ್ಯುತರಾಯನ ಪಟ್ಟಾಭಿಷೇಕ ಇಲ್ಲಿ ನಡೆಯಿತೆಂದು ತಿಳಿದುಬರುತ್ತದೆ. ಅಚ್ಯುತರಾಯನ ಹೆಸರಿನ ಮಂಟಪವೊಂದನ್ನು ಅವನೇ ಕಟ್ಟಿಸಿದನೆಂದು ತೋರುತ್ತದೆ.

  1. "Srikalahasthi Municipality". Commissioner & Director of Municipal Administration. Municipal Administration and Urban Development Department, Govt. of Andhra Pradesh. Retrieved 19 August 2014.
  2. "Census 2011". The Registrar General & Census Commissioner, India. Retrieved 1 September 2014.


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: