ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೪೦

ಸೋಮನಾಥಪುರದಲ್ಲಿ ಹೊಯ್ಸಳ ಶಿಲ್ಪಕಲೆ

ಹೊಯ್ಸಳ ವಂಶ ಸುಮಾರು ಕ್ರಿ.ಶ. ೧೦೦೦ ದಿಂದ ಕ್ರಿ.ಶ. ೧೩೪೬ ರ ವರೆಗೆ ದಕ್ಷಿಣ ಭಾರತದ ಕೆಲ ಭಾಗಗಳನ್ನು ಆಳಿದ ರಾಜವಂಶ. ಹೊಯ್ಸಳ ಸಾಮ್ರಾಜ್ಯದ ರಾಜಧಾನಿ ದ್ವಾರಸಮುದ್ರ (ಇಂದಿನ ಹಳೇಬೀಡು), ಹಾಸನ ಜಿಲ್ಲೆಯಲ್ಲಿದೆ. ಜಾನಪದ ನಂಬಿಕೆಯಂತೆ, ಹೊಯ್ಸಳ ಎಂಬ ಹೆಸರು ಈ ವಂಶದ ಸಂಸ್ಥಾಪಕ ಸಳನಿಂದ ವ್ಯುತ್ಪತ್ತಿಯಾದದ್ದು. ಚಾರಿತ್ರಿಕವಾಗಿ ಈ ಸಂಸ್ಥಾಪಕನ ಹೆಸರು ನೃಪಕಾಮ ಎಂದು ಊಹಿಸಲಾಗಿದೆ. ಹೊಯ್ಸಳ ಸಾಮ್ರಾಜ್ಯವನ್ನು ವಿಸ್ತರಿಸಿದ ಅರಸರಲ್ಲಿ ಮೊದಲಿಗ ವಿನಯಾದಿತ್ಯ (ಆಡಳಿತ: ೧೦೪೭-೧೦೯೮). ಹೊಯ್ಸಳ ಸಾಮ್ರಾಜ್ಯದ ಅತ್ಯಂತ ಪ್ರಸಿದ್ಧ ಅರಸು ಬಿಟ್ಟಿಗ. ಈತನ ನಂತರದ ಹೆಸರು ವಿಷ್ಣುವರ್ಧನ (ಆಡಳಿತ: ಸು ೧೧೧೦-೧೧೪೨). ವಿಷ್ಣುವರ್ಧನನ ಆಡಳಿತದ ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯ ಇಂದಿನ ಕರ್ನಾಟಕ ರಾಜ್ಯದ ಬಲಿಷ್ಠ ಸಾಮ್ರಾಜ್ಯವಾದದ್ದಲ್ಲದೆ ಪಕ್ಕದ ರಾಜ್ಯಗಳಲ್ಲಿಯೂ ವಿಸ್ತರಿಸಿತು. ವಿಷ್ಣುವರ್ಧನನ ಕಾಲದಲ್ಲಿ ಕಲೆ ಮತ್ತು ಶಿಲ್ಪಕಲೆಗೆ ಬಹಳ ಪ್ರೋತ್ಸಾಹ ನೀಡಲಾಯಿತು. ಈತನ ರಾಣಿ ಶಾಂತಲೆ ಪ್ರಸಿದ್ಧ ಭರತನಾಟ್ಯ ನರ್ತಕಿ ಮತ್ತು ಶಿಲ್ಪಕಲೆಯಲ್ಲಿ ಆಸಕ್ತಿಯಿದ್ದವಳೆಂದು ಹೆಸರಾಗಿದ್ದಾಳೆ. ಈ ಕಾಲದಲ್ಲಿಯೇ ಹೊಯ್ಸಳ ಶಿಲ್ಪಕಲೆಯ ಅತ್ಯುನ್ನತ ಉದಾಹರಣೆಗಳು ಮೂಡಿಬಂದವು. ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯವನ್ನು ಕಟ್ಟಲು ೮೬ ವರ್ಷಗಳು ಬೇಕಾದವು! ಹಾಗೆಯೇ ಬೇಲೂರಿನ ಚನ್ನಕೇಶವ ದೇವಸ್ಥಾನ ೧೦೩ ವರ್ಷಗಳ ಪರಿಶ್ರಮದ ಫಲ. ಹೊಯ್ಸಳ ಶಿಲ್ಪಕಲೆ ದ್ರಾವಿಡ ಶೈಲಿ ಮತ್ತು ಆರ್ಯ ಶೈಲಿಗಳೆರಡರ ಗುಣಗಳನ್ನೂ ತನ್ನದಾಗಿಸಿಕೊಂಡಿದೆ. ಹೊಯ್ಸಳ ದೇವಾಲಯಗಳಲ್ಲಿ ಸಹಸ್ರಾರು ಸುಂದರ ಕೆತ್ತನೆಗಳನ್ನು ಕಾಣಬಹುದು. ಸುಂದರ ನರ್ತಿಸುವ ಶಿಲಾಬಾಲಿಕೆಯರಿಂದ ಕೂಡಿದ ಈ ದೇವಾಲಯಗಳು ಹೊಯ್ಸಳ ಸಾಮ್ರಾಜ್ಯ ಬಿಟ್ಟು ಹೋದ ಮುಖ್ಯ ಸಂಪ್ರದಾಯ.