ಲಗಾನ್ (ಅನುವಾದ: ತೆರಿಗೆ) ಭಾರೀ ಬಂಡವಾಳದ ೨೦೦೧ರ ಒಂದು ಹಿಂದಿ ಕ್ರೀಡಾಪ್ರಧಾನ ಚಲನಚಿತ್ರ. ಇದನ್ನು ಆಶುತೋಷ್ ಗೋವಾರೀಕರ್ ಬರೆದು ನಿರ್ದೇಶಿಸಿದ್ದಾರೆ. ಇದನ್ನು ಆಮಿರ್ ಖಾನ್‌ ನಿರ್ಮಿಸಿದ್ದಾರೆ. ಮುಖ್ಯಪಾತ್ರಗಳಲ್ಲಿ ಆಮಿರ್ ಖಾನ್ ಮತ್ತು ನವನಟಿ ಗ್ರೇಸಿ ಸಿಂಗ್ ನಟಿಸಿದ್ದಾರೆ. ಬ್ರಿಟಿಷ್ ನಟರಾದ ರೇಚಲ್ ಶೆಲಿ ಮತ್ತು ಪೌಲ್ ಬ್ಲ್ಯಾಕ್‍ಥಾರ್ನ್ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಆಗ ಅಭೂತಪೂರ್ವವಾಗಿದ್ದ ₹೨೫೦ million ಮಿಲಿಯನ್ ಬಂಡವಾಳದಲ್ಲಿ[೩] ತಯಾರಾದ ಈ ಚಲನಚಿತ್ರವು ಆಮಿರ್ ಖಾನ್ ಪ್ರೊಡಕ್ಷನ್ಸ್‌ನ ಮೊದಲ ಯೋಜನೆಯಾಗಿತ್ತು. ಈ ಚಿತ್ರವನ್ನು ಭುಜ್ ಹತ್ತಿರದ ಹಳ್ಳಿಗಳಲ್ಲಿ ಚಿತ್ರೀಕರಿಸಲಾಗಿತ್ತು.[೪]

ಲಗಾನ್
ಚಿತ್ರಮಂದಿರ ಬಿಡುಗಡೆಯ ಪೋಸ್ಟರ್
ನಿರ್ದೇಶನಆಶುತೋಷ್ ಗೋವಾರೀಕರ್
ನಿರ್ಮಾಪಕಆಮಿರ್ ಖಾನ್
ಲೇಖಕಕೆ. ಪಿ. ಸಕ್ಸೇನಾ
(ಹಿಂದಿ ಸಂಭಾಷಣೆ)
ಆಶುತೋಷ್ ಗೋವಾರೀಕರ್
(ಇಂಗ್ಲಿಷ್ ಸಂಭಾಷಣೆ)
ಚಿತ್ರಕಥೆಆಶುತೋಷ್ ಗೋವಾರೀಕರ್
ಸಂಜಯ್ ದಾಯ್ಮಾ
ಕಥೆಆಶುತೋಷ್ ಗೋವಾರೀಕರ್
ಸಂಭಾಷಣೆಅಮಿತಾಭ್ ಬಚ್ಚನ್
ಪಾತ್ರವರ್ಗ
  • ಆಮಿರ್ ಖಾನ್
  • ಗ್ರೇಸಿ ಸಿಂಗ್
  • ರೇಚಲ್ ಶೆಲಿ
  • ಪೌಲ್ ಬ್ಲ್ಯಾಕ್‍ಥಾರ್ನ್
ಸಂಗೀತಎ. ಆರ್. ರೆಹಮಾನ್
ಛಾಯಾಗ್ರಹಣಅನಿಲ್ ಮೆಹ್ತಾ
ಸಂಕಲನಬಲ್ಲು ಸಲೂಜಾ
ಸ್ಟುಡಿಯೋಆಮಿರ್ ಖಾನ್ ಪ್ರೊಡಕ್ಷನ್ಸ್
ವಿತರಕರುಸೋನಿ ಪಿಕ್ಚರ್ಸ್ ನೆಟ್‌ವರ್ಕ್
ಜ಼ೀ ನೆಟ್ವರ್ಕ್
ಬಿಡುಗಡೆಯಾಗಿದ್ದು
  • 15 ಜೂನ್ 2001 (2001-06-15)
ಅವಧಿ224 ನಿಮಿಷಗಳು[೧]
ದೇಶಭಾರತ
ಭಾಷೆಹಿಂದಿ
ಬಂಡವಾಳ24 ಕೋಟಿ[೨]
ಬಾಕ್ಸ್ ಆಫೀಸ್ಅಂದಾಜು 60 ಕೋಟಿ 6 ಲಕ್ಷ

ಚಿತ್ರವು ಭಾರತದ ವಸಾಹತುಶಾಹಿ ಬ್ರಿಟಿಷ್ ರಾಜ್‍ನ ವಿಕ್ಟೋರಿಯನ್ ಅವಧಿಯ ಹಿನ್ನೆಲೆ ಹೊಂದಿದೆ. ಕಥೆಯು ಒಂದು ಚಿಕ್ಕ ಹಳ್ಳಿಯ ಬಗ್ಗೆ ಆಗಿದ್ದು ಇದರ ನಿವಾಸಿಗಳು ಹೆಚ್ಚಿನ ತೆರಿಗೆಗಳಿಂದ ಪೀಡಿತರಾಗಿದ್ದಾಗ, ಒಬ್ಬ ಅಹಂಕಾರಿ ಅಧಿಕಾರಿಯು ತೆರಿಗೆಗಳನ್ನು ತಪ್ಪಿಸಲು ಪಣವಾಗಿ ಅವರಿಗೆ ಕ್ರಿಕೆಟ್ ಆಟವಾಡುವ ಸವಾಲೊಡ್ಡುತ್ತಾನೆ. ಇದರಿಂದ ಆ ಜನರು ಒಂದು ಅಸಾಧಾರಣ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಕಥೆಯು ಈ ಪರಿಸ್ಥಿತಿಯ ಸುತ್ತ ತಿರುಗುತ್ತದೆ. ಹಳ್ಳಿಯವರು ಈ ವಿದೇಶಿ ಆಟವನ್ನು ಕಲಿಯುವ ಪ್ರಯಾಸದ ಕಾರ್ಯವನ್ನು ಎದುರಿಸುತ್ತಾರೆ ಮತ್ತು ತಮ್ಮ ಹಳಿಯ ಹಣೆಬರಹವನ್ನು ಬದಲಾಯಿಸುವ ಫಲಿತಾಂಶಕ್ಕಾಗಿ ಆಡುವ ಸಂದರ್ಭ ಏರ್ಪಡುತ್ತದೆ.

ಲಗಾನ್ ವಿಮರ್ಶಾತ್ಮಕ ಮೆಚ್ಚುಗೆಯನ್ನು ಮತ್ತು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳನ್ನು, ಜೊತೆಗೆ ಅನೇಕ ಭಾರತೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆಯಿತು. ಮದರ್ ಇಂಡಿಯಾ (೧೯೫೭) ಮತ್ತು ಸಲಾಮ್ ಬಾಂಬೆ! (೧೯೮೮) ನಂತರ, ಇದು ಅಕಾಡೆಮಿ ಅತ್ಯುತ್ತಮ ವಿದೇಶಿ ಭಾಷೆಯ ಚಲನಚಿತ್ರ ಪ್ರಶಸ್ತಿಗಾಗಿ ನಾಮನಿರ್ದೇಶಿತವಾದ ಮೂರನೇ ಭಾರತೀಯ ಚಲನಚಿತ್ರವೆನಿಸಿಕೊಂಡಿತು.

ಕಥಾವಸ್ತು ಬದಲಾಯಿಸಿ

ಚಂಪಾನೇರ್ ಎಂಬ ಸಣ್ಣ ಪಟ್ಟಣದಲ್ಲಿ, ಬ್ರಿಟಿಷ್ ಆಳ್ವಿಕೆಯ ಪರಾಕಾಷ್ಠೆಯ ಕಾಲದಲ್ಲಿ ೧೮೯೩ರಲ್ಲಿ, ಚಂಪಾನೇರ್ ಕಂಟೋನ್ಮೆಂಟ್‌ನ ಆಜ್ಞಾಧಿಕಾರಿ ಕ್ಯಾಪ್ಟನ್ ಆ್ಯಂಡ್ರ್ಯೂ ರಸೆಲ್ (ಪಾಲ್ ಬ್ಲ್ಯಾಕ್‍ಥಾರ್ನ್) ಸ್ಥಳೀಯ ಗ್ರಾಮಗಳ ಜನರ ಮೇಲೆ ಹೆಚ್ಚಿನ ತೆರಿಗೆಗಳನ್ನು ವಿಧಿಸಿರುತ್ತಾನೆ. ದೀರ್ಘಕಾಲದ ಕ್ಷಾಮದಿಂದ ಉಂಟಾದ ನಷ್ಟಗಳ ಕಾರಣ ಅವರಿಗೆ ಪಾವತಿಸುವುದು ಸಾಧ್ಯವಾಗಿರುವುದಿಲ್ಲ. ಭುವನ್‍ನ (ಆಮಿರ್ ಖಾನ್) ನೇತೃತ್ವದಲ್ಲಿ ಗ್ರಾಮಸ್ಥರು ಸಹಾಯ ಕೇಳಲು ರಾಜಾ ಪೂರಣ್ ಸಿಂಗ್‍ನನ್ನು (ಕುಲ್‍ಭೂಷಣ್ ಖರ್ಬಂದಾ) ಭೇಟಿಯಾಗುತ್ತಾರೆ. ಅರಮನೆಯ ಹತ್ತಿರ, ಅವರು ಒಂದು ಕ್ರಿಕೆಟ್ ಪಂದ್ಯವನ್ನು ನೋಡುತ್ತಾರೆ. ಭುವನ್ ಆಟವನ್ನು ಗೇಲಿ ಮಾಡುತ್ತಾನೆ ಮತ್ತು ಅವರನ್ನು ಅವಮಾನಿಸುವ ಒಬ್ಬ ಬ್ರಿಟಿಷ್ ಅಧಿಕಾರಿಯೊಂದಿಗೆ ವಾದಕ್ಕಿಳಿಯುತ್ತಾನೆ. ಭುವನ್‍ನನ್ನು ಆ ಕ್ಷಣದಿಂದಲೇ ದ್ವೇಷಿಸಲು ಆರಂಭಿಸಿದ ರಸೆಲ್, ಗ್ರಾಮಸ್ಥರು ತನ್ನ ಕಡೆಯವರನ್ನು ಒಂದು ಕ್ರಿಕೆಟ್ ಪಂದ್ಯದಲ್ಲಿ ಸೋಲಿಸಿದರೆ ಇಡೀ ಪ್ರಾಂತ್ಯದ ತೆರಿಗೆಗಳನ್ನು ರದ್ದುಮಾಡುವುದಾಗಿ ಪ್ರಸ್ತಾಪಿಸುತ್ತಾನೆ. ಗ್ರಾಮಸ್ಥರು ಸೋತರೆ, ಅವರು ತಮ್ಮ ಈಗಿನ ತೆರಿಗೆಗಿಂತ ಮೂರು ಪಟ್ಟು ಪಾವತಿಸಬೇಕಾಗಿರುತ್ತದೆ. ಗ್ರಾಮಸ್ಥರ ಅಸಮ್ಮತಿಯ ಹೊರತಾಗಿಯೂ, ಪ್ರಾಂತ್ಯದಲ್ಲಿನ ಗ್ರಾಮಸ್ಥರ ಪರವಾಗಿ ಈ ಪಣವನ್ನು ಸ್ವೀಕರಿಸುತ್ತಾನೆ.

ಭುವನ್ ಪಂದ್ಯಕ್ಕಾಗಿ ಗ್ರಾಮಸ್ಥರನ್ನು ಸಿದ್ಧಪಡಿಸಲು ಆರಂಭಿಸುತ್ತಾನೆ. ಆರಂಭದಲ್ಲಿ ಅವನಿಗೆ ತಂಡಕ್ಕೆ ಸೇರಲು ಇಚ್ಛಿಸುವ ಮೂರೇ ಜನರು ಸಿಗುತ್ತಾರೆ, ಟೀಪು, ಬಾಘಾ ಮತ್ತು ಗುರನ್. ಅವನಿಗೆ ಅವನ ಪ್ರಯತ್ನಗಳಲ್ಲಿ ರಸೆಲ್‍ನ ಸೋದರಿ ಎಲಿಜ಼ಬೆತ್ (ರೇಚಲ್ ಶೆಲಿ) ನೆರವಾಗುತ್ತಾಳೆ. ಅವಳ ಸೋದರನು ಗ್ರಾಮಸ್ಥರನ್ನು ಕೀಳಾಗಿ ಕಂಡನು ಎಂದು ಅವಳಿಗೆ ಅನಿಸಿರುತ್ತದೆ. ಅಂತಿಮವಾಗಿ, ಗೋಲಿ ಮತ್ತು ಈಶ್ವರ್ ಕಾಕಾ ಭುವನ್‍ನ ತಂಡವನ್ನು ಸೇರುತ್ತಾರೆ. ಅವಳು ಅವರಿಗೆ ಆಟದ ನಿಯಮಗಳನ್ನು ಕಲಿಸುತ್ತಾ ಭುವನ್‍ನನ್ನು ಪ್ರೀತಿಸತೊಡಗುತ್ತಾಳೆ. ತಾನೂ ಭುವನ್‍ನನ್ನು ಪ್ರೀತಿಸುತ್ತಿರುವ ಗೌರಿಗೆ (ಗ್ರೇಸಿ ಸಿಂಗ್) ಇದು ದುಃಖ ತರಿಸುತ್ತದೆ. ಎಲಿಜ಼ಬೆತ್ ಮತ್ತು ರಾಮ್ ಸಿಂಗ್ ಹೊರಟ ಮೇಲೆ, ಭುವನ್ ಮತ್ತು ಗ್ರಾಮಸ್ಥರು ಅಭ್ಯಾಸ ಆರಂಭಿಸುತ್ತಾರೆ. ಗುರನ್ ಗೋಲಿಯ ಕಡೆಗೆ ಚೆಂಡನ್ನು ಎಸೆದಾಗ ಅದು ಆಕಸ್ಮಿಕವಾಗಿ ಅವನ ಹಣೆಗೆ ಬಡಿಯುತ್ತದೆ. ಗೋಲಿ ಚೆಂಡನ್ನು ವಾಪಸ್ ಗೋಲಿ ಕಡೆಗೆ ಎಸೆಯುತ್ತಾನೆ. ಅದು ಅವನನ್ನು ತಪ್ಪಿ ಮುಂದೆ ಸಾಗಿ ಭೂರಾನ ಕೋಳಿಗಳ ಮೇಲೆ ಬೀಳುತ್ತದೆ. ಯಾರು ಚೆಂಡು ಎಸೆದರೆಂದು ಭೂರಾ ಬೆದರಿಸಿ ಕೇಳುತ್ತಾನೆ. ಗೋಲಿ ಎಸೆದನು ಎಂದು ಟೀಪು ಉತ್ತರಿಸುತ್ತಾನೆ. ಇದನ್ನು ಕೇಳಿ ಭೂರಾ ಗೋಲಿಯೊಂದಿಗೆ ಜಗಳವಾಡಲು ಆರಂಭಿಸಿ ದೊಡ್ಡ ಕಲ್ಲನ್ನು ಅವನತ್ತ ಎಸೆಯಲು ಪ್ರಯತ್ನಿಸುತ್ತಾನೆ. ಗೋಲಿ ತನ್ನ ಕವಣೆ ಗೋಲನ್ನು ತೆಗೆಯುತ್ತಾನೆ. ಈಶ್ವರ್ ಜಗಳಾಟವನ್ನು ಮುಗಿಸಲು ಪ್ರಯತ್ನಿಸುತ್ತಿರುವಾಗ ಭುವನ್ ಭೂರಾನನ್ನು ಕರೆದು ಅವನತ್ತ ಚೆಂಡನ್ನು ಎಸೆಯುತ್ತಾನೆ. ಅವನು ಅದನ್ನು ಹಿಡಿಯುತ್ತಾನೆ. ನಂತರ ಭುವನ್ ಭೂರಾನಿಂದ ಚೆಂಡನ್ನು ಪಡೆದು ಮತ್ತೊಮ್ಮೆ ಅವನತ್ತ ಎಸೆಯುತ್ತಾನೆ. ಮತ್ತೊಮ್ಮೆ ಭೂರಾ ಅದನ್ನು ಹಿಡಿಯುತ್ತಾನೆ. ಅವರು ತನ್ನ ಕೋಳಿಗಳನ್ನು ನೋಡಿಕೊಳ್ಳುತ್ತೇವೆಂದು ಮಾತುಕೊಟ್ಟರೆ ತಾನು ಕ್ರಿಕೆಟ್ ತಂಡವನ್ನು ಸೇರಿಕೊಳ್ಳುವೆ ಎಂದು ಭೂರಾ ಹೇಳುತ್ತಾನೆ. ಈ ನಡುವೆ, ಕಂಟೋನ್ಮೆಂಟ್‍ನಲ್ಲಿ ಕ್ಯಾಪ್ಟನ್ ರಸೆಲ್ ಕರ್ನಲ್ ಜೆ.ಆರ್. ಬೋಯರ್‌ನ ಕಚೇರಿಗೆ ಹಾಜರಾಗುತ್ತಾನೆ. ಚಂಪಾನೇರ್‌ನ ಗ್ರಾಮಸ್ಥರು ರಸೆಲ್‍ನನ್ನು ಕ್ರಿಕೆಟ್ ಆಟದಲ್ಲಿ ಸೋಲಿಸಿದರೆ ಅವರ ತೆರಿಗೆಯನ್ನು ರದ್ದುಮಾಡುವುದಾಗಿ ರಸೆಲ್ ಒಪ್ಪಿದ್ದಾನೆ ಎಂದು ಬೋಯರ್ ತಿಳಿದುಕೊಳ್ಳುತ್ತಾನೆ. ಇದನ್ನು ಕೇಳಿ, ಬೋಯರ್, ಮೇಜರ್ ಕಾಟನ್ ಮತ್ತು ಮೇಜರ್ ವಾರನ್ ಸಿಟ್ಟಾಗುತ್ತಾರೆ. ಬೋಯರ್ ರಸೆಲ್‍ನ ಸರಿಯಲ್ಲದ ಹುಚ್ಚಾಟಿಕೆಯನ್ನು ಸರಿಮಾಡಲು ನಿರ್ಧರಿಸಿ, ಅವನು ಗೆದ್ದರೆ ಅವನು ಸ್ವಲ್ಪದರಲ್ಲಿ ತಪ್ಪಿಸಿಕೊಳ್ಳುವನು, ಆದರೆ ಸೋತರೆ ಅವನು ಚಂಪಾನೇರ್ ಮತ್ತು ಇಡೀ ಪ್ರಾಂತ್ಯದ ತೆರಿಗೆಗಳನ್ನು ತನ್ನ ಸ್ವಂತ ಜೇಬಿನಿಂದ ಭರಿಸಬೇಕು ಮತ್ತು ಅವನನ್ನು ಮಧ್ಯ ಆಫ಼್ರಿಕಾಗೆ ಕಳಿಸಲಾಗುವುದೆಂದು ಹೇಳುತ್ತಾನೆ. ರಸೆಲ್ ಒಪ್ಪಿಕೊಂಡು ಹೊರಡುತ್ತಾನೆ. ಅವನು ಕಂಟೊನ್ಮೆಂಟ್‍ಗೆ ಹಿಂದಿರುಗಿ ಲೆಫ಼್ಟಿನೆಂಟ್ ವೆಸನ್ ಮೇಲೆ ಸಿಟ್ಟಾಗುತ್ತಾನೆ. ಏನು ವಿಷಯವೆಂದು ಸ್ಮಿತ್ ಕೇಳಿದಾಗ ಬ್ರಿಟಿಷ್ ಸಾಮ್ರಾಜ್ಯವು ಸಾಹಸದ ಕೆಚ್ಚನ್ನು ಕಳೆದುಕೊಂಡಿದೆ ಎಂದು ರಸೆಲ್ ಸಾಧಿಸುತ್ತಾನೆ. ರಸೆಲ್‍ನ ಕುದುರೆಯ ಲಾಳಕ್ಕೆ ಮೊಳೆ ಹೊಡೆಯುತ್ತಿರುವ ಅರ್ಜನ್, ಲಗಾನ್ ಜೊತೆಗೆ ಸ್ವಲ್ಪ ಮೋಜು ಮತ್ತು ಆಟದಿಂದ ಸಮಸ್ಯೆ ಏನು ಎಂದು ರಸೆಲ್ ಹೇಳುತ್ತಿರುವುದನ್ನು ಕೇಳುತ್ತಾನೆ. ಅವನು ಕುದುರೆಯ ಲಾಳಕ್ಕೆ ಮೊಳೆಯನ್ನು ಸುತ್ತಿಗೆಯಿಂದ ಬಡಿದಾಗ ಕುದುರೆಯು ಕಿರುಚಿಕೊಳ್ಳುತ್ತದೆ. ರಸೆಲ್ ಅರ್ಜನ್‍ಗೆ ಚಾಟಿಯಿಂದ ಹೊಡೆದು ಒದೆಯುತ್ತಾನೆ. ನಂತರ ಅರ್ಜನ್‍ನನ್ನು ನೆಟ್ಟದೃಷ್ಟಿಯಿಂದ ನೋಡಿ, ನೀವೆಲ್ಲ ಗುಲಾಮರು ನಮ್ಮ ಬೂಟುಗಳ ಕೆಳಗೆ ತುಳಿಯಲ್ಪಡುವಿರಿ ಎಂದು ಹೇಳುತ್ತಾನೆ. ಅಂಗಾಲು ಎಷ್ಟೇ ದಪ್ಪವಿದ್ದರೂ ಮೊಳೆಯು ಚುಚ್ಚುವುದು ಎಂದು ಅರ್ಜನ್ ವಾಪಸ್ ಹೇಳುತ್ತಾನೆ. ಅರ್ಜನ್‍ನನ್ನು ದೂರ ಕಳಿಸಬೇಕೆಂದು ರಸೆಲ್ ಆದೇಶಿಸುತ್ತಾನೆ. ಅರ್ಜನ್ ಭುವನ್ ಬಳಿ ಹೋಗಿ ತಂಡವನ್ನು ಸೇರಿಕೊಳ್ಳುತ್ತಾನೆ. ಅದೇ ದಿನ ನಂತರ, ಇಸ್ಮಾಯಿಲ್ ಕೂಡ ತಂಡವನ್ನು ಸೇರಿಕೊಳ್ಳುತ್ತಾನೆ. ಆ ರಾತ್ರಿ, ಎಲ್ಲ ಗ್ರಾಮಸ್ಥರು ಮತ್ತು ಎಲಿಜ಼ಬೆತ್ ಕೃಷ್ಣನ ಜನ್ಮದಿನವನ್ನು ಆಚರಿಸುತ್ತಾರೆ. ಭುವನ್ ಮತ್ತು ಗೌರಿ ಇತರ ಗ್ರಾಮಸ್ಥರೊಂದಿಗೆ ಹರ್ಷದಿಂದ ಕುಣಿದು ಕೃಷ್ಣ ಮತ್ತು ರಾಧೆಯ ಪಾತ್ರಗಳನ್ನು ವಹಿಸುತ್ತಾರೆ. ಗೌರಿಯ ಪಕ್ಕದಲ್ಲಿದ್ದ ಎಲಿಜ಼ಬೆತ್ ಭುವನ್‍ನನ್ನು ಪ್ರೀತಿಸುತ್ತಿದ್ದರೂ ಅದರ ಬಗ್ಗೆ ಸ್ನೇಹಪರವಾಗಿ ಪ್ರತಿಕ್ರಿಯಿಸಿ ಗೌರಿಯ ಕುಣಿತವನ್ನು ಅಭಿನಂದಿಸುತ್ತಾಳೆ. ಭುವನ್ ಗೌರಿಯ ಭಾವನೆಗಳಿಗೆ ಸ್ಪಂದಿಸಿದ ನಂತರ, ಮರಕಡಿಯುವವನಾದ ಲಾಖಾ (ಯಶ್‍ಪಾಲ್ ಶರ್ಮಾ) ಭುವನ್‍ ಮೇಲೆ ಅಸೂಯೆಗೊಂಡು ರಸೆಲ್‍ನ ಗೂಢಚಾರಿಯಾಗುತ್ತಾನೆ. ಲಾಖಾ ಗ್ರಾಮಸ್ಥರ ತಂಡವನ್ನು ಸೇರಿ ಯಾವುದೇ ರೀತಿಯ ಕೊಡುಗೆ ನೀಡಬಾರದೆಂದು ಅವನು ಆದೇಶಿಸುತ್ತಾನೆ. ಒಬ್ಬ ಆಟಗಾರನು ಕಡಿಮೆಯಿದ್ದ ಕಾರಣ, ಸ್ಪಿನ್ ಬೌಲಿಂಗ್ ಮಾಡಬಲ್ಲ ಒಬ್ಬ ಅಸ್ಪೃಶ್ಯನಾದ ಕಚರಾನನ್ನು (ಆದಿತ್ಯ ಲಾಖಿಯಾ) ಆಹ್ವಾನಿಸುತ್ತಾನೆ. ದಲಿತರ ವಿರುದ್ಧ ದೀರ್ಘಕಾಲದ ಪೂರ್ವಗ್ರಹದಿಂದ ಒಗ್ಗಿಹೋಗಿರುವ ಗ್ರಾಮಸ್ಥರು ಕಚರಾ ತಂಡವನ್ನು ಸೇರಿದರೆ ತಾವು ಆಡಲು ನಿರಾಕರಿಸುತ್ತಾರೆ. ಭುವನ್ ಗ್ರಾಮಸ್ಥರನ್ನು ಖಂಡಿಸಿ ಕಚರಾನನ್ನು ಸ್ವೀಕರಿಸುವಂತೆ ಅವರ ಮನವೊಲಿಸುತ್ತಾನೆ.

ಮೊದಲ ದಿನದಂದು, ರಸೆಲ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು, ಬ್ರಿಟಿಷ್ ಅಧಿಕಾರಿಗಳಿಗೆ ಒಳ್ಳೆಯ ಆರಂಭವನ್ನು ನೀಡುತ್ತಾನೆ. ಭುವನ್ ಬೌಲ್ ಮಾಡಲು ಕಚರಾನನ್ನು ತಂದಾಗ ಕಚರಾ ಹೇಗೊ ಚೆಂಡನ್ನು ಸ್ಪಿನ್ ಮಾಡುವ ತನ್ನ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾನೆಂದು ಅರಿತುಕೊಳ್ಳುತ್ತಾನೆ — ಹೊಸ ಕ್ರಿಕೆಟ್ ಚೆಂಡುಗಳು ಸವೆದಿರುವ ಚೆಂಡುಗಳಷ್ಟು ಸ್ಪಿನ್ ಆಗುವುದಿಲ್ಲ (ತಂಡವು ಹಳೆ ಚೆಂಡುಗಳಿಂದ ಅಭ್ಯಾಸ ಮಾಡುತ್ತಿತ್ತು). ಜೊತೆಗೆ, ರಸೆಲ್‍ನೊಂದಿಗಿನ ತನ್ನ ಒಪ್ಪಂದದಂತೆ, ಲಾಖಾ ಹಲವು ಕ್ಯಾಚ್‍ಗಳನ್ನು ಉದ್ದೇಶಪೂರ್ವಕವಾಗಿ ಬಿಡುತ್ತಾನೆ. ನಂತರ ಆ ಸಂಜೆ, ಲಾಖಾ ರಸೆಲ್‍ನನ್ನು ಭೇಟಿಯಾಗುವುದನ್ನು ಎಲಿಜ಼ಬೆತ್ ಗಮನಿಸಿ ತಕ್ಷಣ ಭುವನ್‍ನಿಗೆ ಲಾಖಾನ ಮೋಸದ ಬಗ್ಗೆ ತಿಳಿಸುತ್ತಾಳೆ. ಗ್ರಾಮಸ್ಥರು ಅವನನ್ನು ಸಾಯಿಸಲು ಬಿಡುವ ಬದಲು, ಭುವನ್ ಲಾಖಾಗೆ ಸನ್ಮಾರ್ಗಕ್ಕೆ ಬರುವ ಅವಕಾಶ ನೀಡುತ್ತಾನೆ.

ಮರುದಿನ, ಲಾಖಾ ಕೆಳಬಿದ್ದು ಒಂದು ಕೈಯಲ್ಲಿ ಕ್ಯಾಚ್ ಹಿಡಿಯುವ ಮೂಲಕ ವಿಮೋಚನೆ ಮಾಡಿಕೊಳ್ಳುತ್ತಾನೆ. ಆದರೆ ಬ್ರಿಟಿಷರು ಊಟದ ವಿರಾಮದವರೆಗೆ ಕೇವಲ ಮೂರು ವಿಕೆಟ್ ಕಳೆದುಕೊಂಡು ೨೯೫ ರನ್ ಗಳಿಸಿರುತ್ತಾರೆ. ಕಚರಾನನ್ನು ಸವೆದಿರುವ ಚೆಂಡಿನಿಂದ ಬೌಲ್ ಮಾಡಲು ವಾಪಸ್ ಕರೆತಂದಾಗ ಅವನು ಹ್ಯಾಟ್ರಿಕ್ ಗಳಿಸಿ ಬ್ರಿಟಿಷ್ ಬ್ಯಾಟಿಂಗ್ ಪಕ್ಷದ ಪತನವನ್ನು ಉಂಟುಮಾಡುತ್ತಾನೆ. ಬ್ರಿಟಿಷರು ೩೨೨ ರನ್‍ಗಳಿಗೆ ಆಲ್ ಔಟಾದ ನಂತರ ಗ್ರಾಮಸ್ಥರು ತಮ್ಮ ಇನಿಂಗ್ಸ್‌ನ್ನು ಪ್ರಾರಂಭಿಸುತ್ತಾರೆ. ಭುವನ್ ಮತ್ತು ಮೊದಲು ಬ್ರಿಟಿಷ್ ಸಿಪಾಯಿಯಾಗಿದ್ದಾಗ ಕ್ರಿಕೆಟ್ ಆಡಿದ್ದ ಸಿಖ್‍ನಾದ ದೇವಾ (ಪ್ರದೀಪ್ ರಾವತ್) ತಮ್ಮ ತಂಡಕ್ಕೆ ಒಳ್ಳೆ ಆರಂಭವನ್ನು ಒದಗಿಸಿಕೊಡುತ್ತಾರೆ. ಭುವನ್‍ನ ಒಂದು ನೇರ ಹೊಡೆತವು ಬೌಲರ್‌ನ ಕೈಯಿಂದ ಬಡಿದು ಚಿಮ್ಮಿ ನಾನ್ ಸ್ಟ್ರೈಕರ್‌ನ ತುದಿಯ ಸ್ಟಂಪ್‌ಗಳಿಗೆ ಬಡಿದಾಗ ಕ್ರೀಸ್ ಹೊರಗೆ ಬಂದಿದ್ದ ದೇವಾ ಔಟಾಗಿ ತನ್ನ ಅರ್ಧಶತಕವನ್ನು ತಪ್ಪಿಸಿಕೊಳ್ಳುತ್ತಾನೆ. ಮುಂದೆ ಅರ್ಜನ್ ಬಂದು ಮೊದಲ ಎರಡು ಬಾಲ್‍ಗಳಲ್ಲಿ ಚೆನ್ನಾಗಿ ಆರಂಭಿಸುತ್ತಾನೆ. ನಂತರ ಸ್ಮಿತ್ ಅವನೆಡೆ ನಡೆದು, "ನಿನಗೆ ತಿನ್ನಲು ಒಂದು ತುತ್ತೂ ಇರುವುದಿಲ್ಲ. ಧರಿಸಲು ಒಂದು ತುಂಡು ಬಟ್ಟೆಯೂ ಇರುವುದಿಲ್ಲ" ಎಂದು ಹೇಳಿ ಬೆದರಿಸುತ್ತಾನೆ. ಇದು ಅವನನ್ನು ಮತ್ತಷ್ಟು ಬಲಶಾಲಿಯಾಗಿ ಮಾಡಿ ಹೆಚ್ಚು ಬಿರುಸಾಗಿ ಆಡುವಂತೆ ಮಾಡುತ್ತದೆ. ಸ್ಮಿತ್‍ನ ಬೆದರಿಕೆಯ ಮಾತುಗಳು ಅವನ ತಲೆಯಲ್ಲಿ ಪ್ರತಿಧ್ವನಿಸಿದಾಗ ಅವನು ಬಾಲ್‍ನ್ನು ಮೈದಾನದ ಮತ್ತಷ್ಟು ಹೊರಗೆ ಹೊಡೆಯುತ್ತಾನೆ. ನಂತರ ರಸೆಲ್‍ನ ಕಂಟೋನ್ಮೆಂಟ್‍ನಲ್ಲಿನ ಭಯದ ಮಾತುಗಳು ಅವನ ತಲೆಯಲ್ಲಿ ಪ್ರತಿಧ್ವನಿಸಿದಾಗ ಅವನು ಬಾಲ್‍ನ್ನು ಜೋರಾಗಿ ಹೊಡೆಯುತ್ತಾನೆ ಆದರೆ ನಾರ್ತ್ ಕ್ಯಾಚ್ ಹಿಡಿಯುತ್ತಾನೆ. ಲಾಖಾ ಬ್ಯಾಟ್ ಮಾಡಲು ಬಂದಾಗ, ಒಂದು ಬೌನ್ಸರ್ ಅವನ ತಲೆಗೆ ಬಡಿಯುತ್ತದೆ ಮತ್ತು ಅವನು ಸ್ಟಂಪ್‍ಗಳ ಮೇಲೆ ಬೀಳುತ್ತಾನೆ. ಬಾಘಾ ಬಂದು ಮೊದಲು ಎರಡು ಬಾಲ್‍ಗಳನ್ನು ಹೊಡೆಯುತ್ತಾನೆ ಆದರೆ ಮೂರನೇ ಹಾಗೂ ಅಂತಿಮ ಬಾಲ್‍ನ್ನು ತಪ್ಪುತ್ತಾನೆ. ಇಸ್ಮಾಯಿಲ್ ಕಾಲಿಗೆ ಚೆಂಡು ಬಡೆದು ಅವನು ಗಾಯಗೊಂಡು ನಿವೃತ್ತನಾಗುತ್ತಾನೆ. ಈಶ್ವರ್ ಇಸ್ಮಾಯಿಲ್‍ನ ಸ್ಥಳ ತುಂಬಲು ಪ್ರಯತ್ನಿಸುತ್ತಾನೆ. ಆದರೆ ಬಾಲ್ ಅವನ ಕೈಯಿಂದ ಬ್ಯಾಟ್‍ನ್ನು ಬೀಳಿಸುತ್ತದೆ. ಸ್ಮಿತ್ ಮತ್ತು ಬರ್ಟನ್ "ಹೌಸ್ ದ್ಯಾಟ್" ಎಂದು ಕೂಗುತ್ತಾರೆ. ಆದರೆ ಅಂಪೈರ್ ಇಲ್ಲ ಎಂದು ತಲೆಯಾಡಿಸುತ್ತಾನೆ. ಗ್ರಾಮಸ್ಥರ ತಂಡವು ದಿನದಂತ್ಯಕ್ಕೆ ಆರು ವಿಕೆಟ್ ಕಳೆದುಕೊಂಡು ಬೇಕಾದ ಮೂರನೇ ಒಂದು ಪಾಲಿನಷ್ಟು ರನ್‍ಗಳನ್ನು ಮಾತ್ರ ಗಳಿಸಿರುತ್ತದೆ. ಹತಾಶೆಯಲ್ಲಿ, ಗ್ರಾಮಸ್ಥರು ಯಶಸ್ಸಿಗಾಗಿ ಪ್ರಾರ್ಥಿಸುತ್ತಾರೆ.

ಮೂರನೇ ಹಾಗೂ ಅಂತಿಮ ದಿನದಂದು, ಭುವನ್ ತನ್ನ ಶತಕ ಗಳಿಸುತ್ತಾನೆ ಆದರೆ ಉಳಿದ ಬಹುತೇಕ ವಿಕೆಟ್‌ಗಳು ಹೋಗಿರುತ್ತವೆ. ಇಸ್ಮಾಯಿಲ್ ರನರ್‌ನ ಸಹಾಯದಿಂದ ಬ್ಯಾಟ್ ಮಾಡಲು ಮರಳುತ್ತಾನೆ ಮತ್ತು ಅರ್ಧಶತಕ ಗಳಿಸುತ್ತಾನೆ ಮತ್ತು ಗುರಿಯನ್ನು ೧೮ ಬಾಲ್‍ಗಳಿಂದ ೩೦ ರನ್‌ಗಳಿಗೆ ಇಳಿಸುತ್ತಾನೆ. ಆಟವು ಕೊನೆಯ ಓವರ್‌ಗೆ ಬರುತ್ತದೆ. ಕಚರಾ ಸ್ಟ್ರೈಕ್‍ನಲ್ಲಿರುತ್ತಾನೆ. ಒಂದು ಬಾಲ್ ಉಳಿದು ತಂಡಕ್ಕೆ ಐದು ರನ್ ಬೇಕಿದ್ದಾಗ, ಕಚರಾ ಬಾಲ್‍ನ್ನು ಸ್ವಲ್ಪ ದೂರ ಹೊಡೆದು ಒಂದು ರನ್ ಗಳಿಸುತ್ತಾನೆ. ಆದರೆ ಅಂಪೈರ್ ನೋಬಾಲ್ ಎಂದು ಸಂಜ್ಞೆಮಾಡುತ್ತಾನೆ. ಭುವನ್ ಬ್ಯಾಟ್ ಮಾಡಲು ಮರಳಿ ಬಾಲ್‍ನ್ನು ಗಾಳಿಯಲ್ಲಿ ಎತ್ತರಕ್ಕೆ ಬೌಂಡರಿ ಕಡೆಗೆ ಹೊಡೆಯುತ್ತಾನೆ. ರಸೆಲ್ ಹಿಂದೆ ಓಡಿ ಅದನ್ನು ಹಿಡಿಯುತ್ತಾನೆ, ಮತ್ತು ತನ್ನ ತಂಡವು ಗೆದ್ದಿತು ಎಂದು ನಂಬುತ್ತಾನೆ. ಆದರೆ ತಾನು ಚೆಂಡನ್ನು ಬೌಂಡರಿ ಗೆರೆಯ ಮೇಲೆ ಹಿಡಿದಿದ್ದೇನೆಂದು ಅವನಿಗೆ ಅರಿವಾಗುತ್ತದೆ. ಹೀಗೆ ಆರು ರನ್ ಬಂದು ಭುವನ್‍ನ ತಂಡವು ಜಯಿಸುತ್ತದೆ. ವಿಜಯವನ್ನು ಸಂಭ್ರಮಿಸುತ್ತಿದ್ದಂತೆ, ಬಿರುಗಾಳಿ ಮಳೆ ಬಂದು ಬರಗಾಲ ಮುಗಿಯುತ್ತದೆ.

ಬ್ರಿಟಿಷ್ ತಂಡದ ಸೋಲು ಕಂಟೋನ್ಮೆಂ‌ಟ್‍ನ ವಿಸರ್ಜನೆಗೆ ಕಾರಣವಾಗುತ್ತದೆ. ಜೊತೆಗೆ, ಇಡೀ ಪ್ರಾಂತ್ಯದ ತೆರಿಗೆಯನ್ನು ರಸೆಲ್‍ನಿಂದ ಬಲವಂತದಿಂದ ಕೀಳಿಸಿ ಅವನನ್ನು ಮಧ್ಯ ಆಫ಼್ರಿಕಾಗೆ ವರ್ಗಾಯಿಸಲಾಗುತ್ತದೆ. ಭುವನ್ ಗೌರಿಯನ್ನು ಪ್ರೀತಿಸುತ್ತಾನೆಂದು ಅರಿವಾದ ಬಳಿಕ ಎಲಿಜ಼ಬೆತ್ ಲಂಡನ್‍ಗೆ ಹಿಂದಿರುಗುತ್ತಾಳೆ. ಅವಳ ಹೃದಯ ಒಡೆದು ತನ್ನ ಉಳಿದ ಜೀವನವನ್ನು ಅವಿವಾಹಿತೆಯಾಗಿ ಕಳೆಯುತ್ತಾಳೆ. ಕಡೆನುಡಿಯಲ್ಲಿ ಭುವನ್ ಮತ್ತು ಗೌರಿ ಮದುವೆಯಾಗುತ್ತಾರೆಂದು ಬಹಿರಂಗಪಡಿಸಲಾಗುತ್ತದೆ. ಆದರೆ ಈ ಐತಿಹಾಸಿಕ ವಿಜಯದ ಹೊರತಾಗಿಯೂ, ಭುವನ್‍ನ ಹೆಸರು ಇತಿಹಾಸದ ಪುಟಗಳಲ್ಲಿ ಕಣ್ಮರೆಯಾಗುತ್ತದೆ.

ಪಾತ್ರವರ್ಗ ಬದಲಾಯಿಸಿ

  • ಭುವನ್ ಆಗಿ ಆಮಿರ್ ಖಾನ್. ಆಶುತೋಷ್ ಮೊದಲು ಭುವನ್‍ನ ಪಾತ್ರಕ್ಕಾಗಿ ಇತರ ನಟರನ್ನು ಪರಿಗಣಿಸಿದರು. ಆದರೆ ನಂತರ ಈ ಯೋಜನೆಯೊಂದಿಗೆ ಆಮಿರ್‌ರನ್ನು ಸಮೀಪಿಸಲಾಯಿತು.[೫]
  • ಗೌರಿ ಆಗಿ ಗ್ರೇಸಿ ಸಿಂಗ್. ಚಿತ್ರದಲ್ಲಿ ನಟಿಸಲು ಹಲವು ನಟಿಯರು ಪ್ರಸ್ತಾಪಿಸಿದ್ದರು, ಆದರೆ ಆಮಿರ್‌ರಿಗೆ ಕಥೆಯಲ್ಲಿರುವ ಪಾತ್ರದ ವಿವರಕ್ಕೆ ಸರಿಹೊಂದುವ ನಟಿ ಬೇಕಿತ್ತು. ಹಲವು ನಟಿಯರನ್ನು ಪರಿಗಣಿಸಿದ ನಂತರ, ಆಶುತೋಷ್ ಗ್ರೇಸಿ ಸಿಂಗ್‍ರನ್ನು ಆಯ್ಕೆಮಾಡಿದರು ಏಕೆಂದರೆ ಅವರು ಒಳ್ಳೆ ನಟಿ ಹಾಗೂ ನರ್ತಕಿ ಮತ್ತು ವೈಜಯಂತಿಮಾಲಾರನ್ನು ಹೋಲುತ್ತಾರೆಂದು ಅವರಿಗೆ ಮನವರಿಕೆಯಾಯಿತು. ಹೊಸಬರಾದ ಸಿಂಗ್ ತಮ್ಮ ಎಲ್ಲ ಸಮಯವನ್ನು ಚಿತ್ರಕ್ಕೆ ಮೀಸಲಿಟ್ಟರು.[೬]
  • ಎಲಿಜ಼ಬೆತ್ ರಸೆಲ್ ಆಗಿ ರೇಚಲ್ ಶೆಲಿ
  • ಕ್ಯಾಪ್ಟನ್ ಆ್ಯಂಡ್ರ್ಯೂ ರಸೆಲ್ ಆಗಿ ಪೌಲ್ ಬ್ಲ್ಯಾಕ್‍ಥಾರ್ನ್. ಚಿತ್ರದಲ್ಲಿ ಒಟ್ಟಾರೆಯಾಗಿ ೧೫ ವಿದೇಶಿ ನಟರಿದ್ದರು.[೭]
  • ಯಶೋದಮಾ ಆಗಿ ಸುಹಾಸಿನಿ ಮುಲೆ
  • ರಾಜಾ ಪೂರಣ್ ಸಿಂಗ್ ಆಗಿ ಕುಲ್‍ಭೂಷಣ್ ಖರ್ಬಂದಾ
  • ಮುಖಿಯಾ ಜಿ ಆಗಿ ರಾಜೇಂದ್ರ ಗುಪ್ತಾ
  • ಭೂರಾ ಆಗಿ ರಘುಬೀರ್ ಯಾದವ್
  • ಗುರನ್ ಆಗಿ ರಾಜೇಶ್ ವಿವೇಕ್. ಕ್ರಿಕೆಟ್ ಬಗೆಗಿನ ಅವರ ಪ್ರೀತಿ ಅವರಿಗೆ ಈ ಪಾತ್ರದಲ್ಲಿ ನೆರವಾಯಿತು.[೮]
  • ಇಸ್ಮಾಯಿಲ್ ಆಗಿ ರಾಜ್ ಜ಼ುಟ್ಷಿ.
  • ದೇವಾ ಸಿಂಗ್ ಸೋಧಿ ಆಗಿ ಪ್ರದೀಪ್ ರಾವತ್.
  • ಅರ್ಜನ್ ಆಗಿ ಅಖಿಲೇಂದ್ರ ಮಿಶ್ರಾ.
  • ಗೋಲಿ ಆಗಿ ದಯಾ ಶಂಕರ್ ಪಾಂಡೆ
  • ಈಶ್ವರ್ ಆಗಿ ಶ್ರೀವಲ್ಲಭ್ ವ್ಯಾಸ್
  • ಲಾಖಾ ಆಗಿ ಯಶ್‍ಪಾಲ್ ಶರ್ಮಾ
  • ಬಾಘಾ ಆಗಿ ಅಮೀನ್ ಹಾಜಿ
  • ಕಚರಾ ಆಗಿ ಆದಿತ್ಯ ಲಾಖಿಯಾ
  • ರಾಮ್ ಸಿಂಗ್ ಆಗಿ ಜಾವೇದ್ ಖಾನ್
  • ಶಂಭು ಕಾಕಾ ಆಗಿ ಎ. ಕೆ. ಹಂಗಲ್
  • ಕರ್ನಲ್ ಬೋಯರ್ ಆಗಿ ಜಾನ್ ರೋವ್
  • ಮೇಜರ್ ವಾರನ್ ಆಗಿ ಡೇವಿಡ್ ಗ್ಯಾಂಟ್
  • ಕ್ಯಾಪ್ಟನ್ ರಾಬರ್ಟ್ಸ್ ಆಗಿ ಥೋರ್ ಹಾಲಾಂಡ್
  • ಮೇಜರ್ ಕಾಟನ್ ಆಗಿ ಜೆರೆಮಿ ಚೈಲ್ಡ್

ತಯಾರಿಕೆ ಬದಲಾಯಿಸಿ

ಉಗಮ ಬದಲಾಯಿಸಿ

ಲಗಾನ್ ೧೯೫೭ರ ದಿಲೀಪ್ ಕುಮಾರ್ ನಟಿಸಿದ ಭಾರತೀಯ ಚಲನಚಿತ್ರ ನಯಾ ದೌರ್‌ನಿಂದ ಸ್ಫೂರ್ತಿಪಡೆಯಿತು.[೯][೧೦]

ವಿವರವಾದ ಕಥೆಯನ್ನು ಕೇಳಿದ ಬಳಿಕ ಆಮಿರ್ ಚಿತ್ರದಲ್ಲಿ ಭಾಗವಹಿಸಲು ಒಪ್ಪಿಕೊಂಡರು. ಆದರೆ ಖಾನ್ ಒಪ್ಪಿಕೊಂಡ ನಂತರವೂ, ನಿರ್ಮಾಪಕರನ್ನು ಹುಡುಕುವುದು ಕಷ್ಟವಾಯಿತು. ಆಸಕ್ತಿ ತೋರಿದ ನಿರ್ಮಾಪಕರು ಬಂಡವಾಳ ಕಡಿತ ಮತ್ತು ಕಥೆಯಲ್ಲಿ ಮಾರ್ಪಾಡನ್ನು ಬಯಸಿದರು. ಅಂತಿಮವಾಗಿ, ಆಮಿರ್ ಚಿತ್ರವನ್ನು ನಿರ್ಮಿಸಲು ಒಪ್ಪಿಕೊಂಡರು.[೧೧]

ಚಿತ್ರದ ಭಾವನಾತ್ಮಕ ಹಾಗೂ ರಾಷ್ಟ್ರಭಕ್ತಿಯ ಕಥೆಯನ್ನು ಇಷ್ಟಪಟ್ಟ ನಂತರ ಝಾಮು ಸುಗಂಧ್ ಸಹ ನಿರ್ಮಾಪಕರಾಗಿದ್ದರು.[೧೨][೧೩]

ಪೂರ್ವ-ತಯಾರಿಕೆ ಬದಲಾಯಿಸಿ

ಆಶುತೋಷ್ ಕಲಾ ನಿರ್ದೇಶಕರಾದ ನಿತಿನ್ ದೇಸಾಯಿಯೊಂದಿಗೆ ವ್ಯಾಪಕ ಸ್ಥಳ ಅನ್ವೇಷಣೆಗಾಗಿ ಭಾರತದಾದ್ಯಂತ ತಿರುಗಾಡಿದರು. ಹಲವು ಸ್ಥಳಗಳನ್ನು ನೋಡಿದ ಮೇಲೆ ಅಂತಿಮವಾಗಿ ಗುಜರಾತ್‍ನ ಭುಜ್‍ನ ಹತ್ತಿರದ ಒಂದು ಪ್ರಾಚೀನ ಹಳ್ಳಿಯನ್ನು ಆಯ್ಕೆಮಾಡಲಾಯಿತು. ಇಲ್ಲೇ ಚಿತ್ರವನ್ನು ಪ್ರಧಾನವಾಗಿ ಚಿತ್ರೀಕರಿಸಲಾಯಿತು.[೧೪]

ಕಥೆಗೆ ಶುಷ್ಕ ಸ್ಥಳ ಬೇಕಾಗಿತ್ತು: ಹಲವಾರು ವರ್ಷ ಮಳೆಯಾಗಿರದ ಕೃಷಿ ಗ್ರಾಮ ಬೇಕಾಗಿತ್ತು. ೧೮೯೦ರ ಕಾಲವನ್ನು ಚಿತ್ರಸಲು ಚಿತ್ರತಂಡಕ್ಕೆ ವಿದ್ಯುತ್ ಸಂಪರ್ಕ, ಸಂಪರ್ಕ ಸಾಧನಗಳು ಮತ್ತು ಮೋಟಾರು ವಾಹನಗಳಿಲ್ಲದ ಹಳ್ಳಿ ಬೇಕಾಗಿತ್ತು.[೧೫] ಈ ಹಳ್ಳಿಯ ಹೆಸರು ಕುನರಿಯಾ ಎಂದಾಗಿತ್ತು. ಲಗಾನ್ನ ಚಿತ್ರೀಕರಣದ ವೇಳೆ, ಅಲ್ಲಿ ಸ್ವಲ್ಪವೂ ಮಳೆಯಾಗಲಿಲ್ಲ. ವಿಶಿಷ್ಟ ಹಳೆ ಕಚ್ ಪಾಳ್ಯವನ್ನು ಚಿತ್ರತಂಡವು ಆಗಮಿಸುವ ಮೊದಲು ಸ್ಥಳೀಯ ಜನರು ನಿರ್ಮಿಸಿದರು.[೧೪] ೨೦೦೧ರ ಗುಜರಾತ್‍ ಭೂಕಂಪವಾದ ಬಳಿಕ ಚಿತ್ರತಂಡವು ₹250,000 ರಷ್ಟು ಧನಸಹಾಯ ನೀಡಿತು.[೧೬]

ಆ ಕಾಲದಲ್ಲಿ ಮಾತನಾಡಲಾಗುತ್ತಿದ್ದ ಭಾಷೆಯ ಭಾವನೆಯನ್ನು ಕೊಡಲು ಹಿಂದಿಯ ಒಂದು ಪ್ರಾಂತಭಾಷೆಯಾದ ಅವಧಿ ಭಾಷೆಯನ್ನು ಚಿತ್ರದ ಭಾಷೆಯಾಗಿ ಆಯ್ದುಕೊಳ್ಳಲಾಯಿತು. ಆದರೆ ಭಾಷೆಯನ್ನು ತಿಳಿಯಾಗಿಸಿದ್ದರಿಂದ ಆಧುನಿಕ ಪ್ರೇಕ್ಷಕರು ಅರ್ಥಮಾಡಿಕೊಂಡರು.[೬] ಹಿಂದಿ ಬರಹಗಾರ ಕೆ. ಪಿ. ಸಕ್ಸೇನಾ ಸಂಭಾಷಣೆಗಳನ್ನು ಬರೆದರು.[೧೭]

ಭಾನು ಅಥಯ್ಯ ಚಿತ್ರದ ವಸ್ತ್ರ ವಿನ್ಯಾಸಕಿಯಾಗಿದ್ದರು. ಅನೇಕ ಜನ ಹೆಚ್ಚಳ ನಟರಿದ್ದಿದರಿಂದ, ಅವರಿಗೆ ಸಾಕಾಗುವಷ್ಟು ವಸ್ತ್ರಗಳನ್ನು ತಯಾರಿಸುವುದು ಕಷ್ಟವಾಯಿತು. ಪಾತ್ರಗಳಿಗೆ ನೈಜತೆ ಕೊಡಲು ಅವರು ಬಹಳ ಸಮಯ ಸಂಶೋಧನೆಯಲ್ಲಿ ಕಳೆದರು.[೧೭]

ಚಿತ್ರೀಕರಣ ಬದಲಾಯಿಸಿ

ನಿರ್ಮಾಣ ಸಮಸ್ಯೆಗಳಿಗೆ ಹತ್ತು ತಿಂಗಳು ಮತ್ತು ತಮ್ಮ ಪಾತ್ರಕ್ಕಾಗಿ ಎರಡು ತಿಂಗಳು ಸೇರಿದಂತೆ ಒಂದು ವರ್ಷದ ಪೂರ್ವಯೋಜನೆಯು ಆಮಿರ್‌ರನ್ನು ಸುಸ್ತಾಗಿಸಿತು. ಚಿತ್ರತಂಡದಲ್ಲಿ ಸುಮಾರು ೩೦೦ ಜನರು ಇದ್ದರು. ಭುಜ್‍ನಲ್ಲಿ ಆರಾಮದಾಯಕ ಹೋಟೆಲ್‍ಗಳ ಕೊರತೆಯ ಕಾರಣ ಹೊಸದಾಗಿ ನಿರ್ಮಿತವಾದ ಅಪಾರ್ಟ್‌ಮಂಟ್‍ನ್ನು ಬಾಡಿಗೆಗೆ ಪಡೆದು ಅದನ್ನು ಚಿತ್ರತಂಡಕ್ಕಾಗಿ ಸಂಪೂರ್ಣವಾಗಿ ಸಜ್ಜುಗೊಳಿಸಲಾಯಿತು. ಚಿತ್ರದಲ್ಲಿ ಚಿತ್ರಿತವಾದ ಬಹುತೇಕ ೧೯ನೇ ಶತಮಾನದ ಉಪಕರಣಗಳು ಮತ್ತು ಪರಿಕರಗಳನ್ನು ಚಿತ್ರತಂಡಕ್ಕೆ ಸ್ಥಳೀಯ ಗ್ರಾಮಸ್ಥರು ನೀಡಿದರು. ಆ ದಿನ ಮತ್ತು ಕಾಲದಲ್ಲಿ ಬಳಸಲಾದ ಸಂಗೀತ ವಾದ್ಯಗಳನ್ನು ಸಂಗ್ರಹಿಸಲು ನಂತರ ದೇಶದ ವಿವಿಧ ಭಾಗಗಳಿಗೆ ಪ್ರಯಾಣ ಬೆಳೆಸಲಾಯಿತು.

ಚಿತ್ರೀಕರಣದ ವೇಳೆ, ಆಶುತೋಷ್‍ಗೆ ಅನಾರೋಗ್ಯವಾಗಿ ೩೦ ದಿನ ವಿಶ್ರಾಂತಿ ತೆಗೆದುಕೊಂಡರು. ಈ ಅವಧಿಯಲ್ಲಿ, ಅವರು ಮಾನಿಟರ್ ಪಕ್ಕ ಹಾಸಿಗೆಯಲ್ಲಿ ಮಲಗಿ ತಮ್ಮ ಕೆಲಸವನ್ನು ಮುಂದುವರೆಸಿದರು.[೧೮]

ಚಿತ್ರೀಕರಣವು ಜನವರಿಯಲ್ಲಿ ಆರಂಭವಾಗಿ ಜೂನ್ ಮಧ್ಯದಲ್ಲಿ ಮುಗಿಯಿತು. ಉಷ್ಣಾಂಶ ೦ ದಿಂದ ೫೦° ಸೆ ವರೆಗೆ ವ್ಯಾಪಿಸಿತು.[೧೯][೨೦] ನಟರು ಆಗಾಗ್ಗೆ ದ್ರವ ಸೇವನೆ ಮಾಡಬೇಕಾಗಿತ್ತು ಮತ್ತು ನೆರಳಿನಲ್ಲಿ ಕೂಡಬೇಕಾಗಿತ್ತು.[೮][೨೧]

ಬಿಡುಗಡೆ ಬದಲಾಯಿಸಿ

ವಿಶ್ವಾದ್ಯಂತ ಬಿಡುಗಡೆಯ ಮೊದಲು, ಭುಜ್‍ನ ಸ್ಥಳೀಯರಿಗೆ ಚಿತ್ರವನ್ನು ತೋರಿಸಲಾಗುವುದು ಎಂಬ ಮಾತನ್ನು ಆಮಿರ್ ಖಾನ್ ಉಳಿಸಿಕೊಂಡರು.[೨೨] ಇದು ಚೈನಾದಲ್ಲಿ ರಾಷ್ಟ್ರವ್ಯಾಪಿ ಬಿಡುಗಡೆ ಹೊಂದಿದ್ದ ಮೊದಲ ಭಾರತೀಯ ಚಲನಚಿತ್ರವಾಗಿತ್ತು[೨೩] ಮತ್ತು ಇದರ ಡಬ್ ಮಾಡಿದ ಆವೃತ್ತಿಯನ್ನು ಇಟಲಿಯಲ್ಲಿ ಬಿಡುಗಡೆ ಮಾಡಲಾಯಿತು.[೨೪]

ಈ ಚಿತ್ರವು ನೆಟ್‍ಫ್ಲಿಕ್ಸ್‌ನಲ್ಲಿ ಲಭ್ಯವಿದೆ.[೨೫]

ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಬದಲಾಯಿಸಿ

ಬಾಕ್ಸ್ ಆಫ಼ಿಸ್ ಬದಲಾಯಿಸಿ

ಆರಂಭದಲ್ಲಿ ಈ ಚಿತ್ರವು ೨೦೦೧ರಲ್ಲಿ ವಿಶ್ವಾದ್ಯಂತ ₹659.7 ಮಿಲಿಯನ್‍ನಷ್ಟು ಗಳಿಸಿತು. ಇದು ೨೦೦೧ರ ಮೂರನೇ ಅತ್ಯಂತ ಹೆಚ್ಚು ಹಣ ಗಳಿಸಿದ ಚಿತ್ರವಾಗಿತ್ತು.[೨೬]

ವಿಮರ್ಶಾತ್ಮಕ ಪ್ರತಿಕ್ರಿಯೆ ಬದಲಾಯಿಸಿ

ಲಗಾನ್ ಬಹಳ ವಿಮರ್ಶಾತ್ಮಕ ಪ್ರಶಂಸೆಯನ್ನು ಪಡೆಯಿತು.

ಚಿತ್ರವನ್ನು ಚೈನಾದಲ್ಲೂ ಚೆನ್ನಾಗಿ ಸ್ವೀಕರಿಸಲಾಯಿತು. ಇದರ ಸಾಮ್ರಾಜ್ಯಶಾಹಿ ವಿರೋಧಿ ವಿಷಯಗಳು ಚೈನೀಸ್ ಪ್ರೇಕ್ಷಕರಲ್ಲಿ ಅನುರಣಿಸಿತು.[೨೭]

ಪ್ರಶಸ್ತಿಗಳು ಬದಲಾಯಿಸಿ

ಅಕಾಡೆಮಿ ಪ್ರಶಸ್ತಿಗಳಿಗಾಗಿ ಪ್ರಚಾರವನ್ನು ಸೃಷ್ಟಿಸಲು ಆಮಿರ್ ಖಾನ್ ಮತ್ತು ಗೋವಾರೀಕರ್ ಲಾಸ್ ಏಂಜಲೀಸ್‍ಗೆ ಹೋದರು.

೧೨ ಫ಼ೆಬ್ರುವರಿ ೨೦೦೨ರಂದು, ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನ ಸಮಾರಂಭದಲ್ಲಿ ಲಗಾನ್‍ ಅತ್ಯುತ್ತಮ ವಿದೇಶಿ ಭಾಷೆಯ ಚಿತ್ರವಾಗಿ ನಾಮನಿರ್ದೇಶನಗೊಂಡಿತು.[೨೮] ನಾಮನಿರ್ದೇಶನದ ನಂತರ ವಿಶ್ವದ ಹಲವಾರು ಭಾಗಗಳಿಂದ ಪ್ರತಿಕ್ರಿಯೆಗಳು ಬಂದವು. ಭಾರತದಲ್ಲಿ ನಾಮನಿರ್ದೇಶನವನ್ನು ಕೊಂಡಾಡಲಾಯಿತು. ಗೆಲುವು ಭಾರತೀಯ ಚಲನಚಿತ್ರೋದ್ಯಮಕ್ಕೆ ಭಾರೀ ಪ್ರೋತ್ಸಾಹ ನೀಡುವುದು[೨೯] ಮತ್ತು ಆಮಿರ್ ಖಾನ್‍ಗೆ ಭಾರತ ರತ್ನ ಹಾಗೂ ಲಗಾನ್‍ಗೆ ರಾಷ್ಟ್ರಚಿತ್ರದ ಸ್ಥಾನಮಾನ ತರುವುದು ಎಂದು ಪತ್ರಿಕಾ ವರದಿಗಳು ಬಂದವು.[೩೦]

ಆದರೆ ಲಗಾನ್‍ಗೆ ಪ್ರಶಸ್ತಿ ಬರದಿದ್ದಾಗ ಭಾರತದಲ್ಲಿ ನಿರಾಶೆ ಮೂಡಿತು.

ಎಂಟು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು,[೩೧] ಒಂಭತ್ತು ಫಿಲ್ಮ್ ಫೇರ್ ಪ್ರಶಸ್ತಿಗಳು, ಒಂಭತ್ತು ಸ್ಕ್ರೀನ್ ಪ್ರಶಸ್ತಿಗಳು[೩೨] ಮತ್ತು ಹತ್ತು ಐಫ಼ಾ ಪ್ರಶಸ್ತಿಗಳು[೩೩] ಸೇರಿದಂತೆ ಈ ಚಲನಚಿತ್ರವು ಅನೇಕ ರಾಷ್ಟ್ರಪ್ರಶಸ್ತಿಗಳನ್ನು ಗೆದ್ದಿತು. ಈ ಪ್ರಮುಖ ಪ್ರಶಸ್ತಿಗಳ ಜೊತೆಗೆ, ಇದು ಇತರ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಮಾರಂಭಗಳಲ್ಲಿಯೂ ಪ್ರಶಸ್ತಿಗಳನ್ನು ಗೆದ್ದಿತು.

ಧ್ವನಿವಾಹಿನಿ ಬದಲಾಯಿಸಿ

ಬಹಳ ಪ್ರಶಂಸಿಸಲಾದ ಈ ಚಿತ್ರದ ಧ್ವನಿವಾಹಿನಿಯನ್ನು ಎ. ಆರ್. ರಹಮಾನ್‌ ಸಂಯೋಜಿಸಿದರು. ಜಾವೇದ್ ಅಕ್ತರ್ ಹಾಡುಗಳಿಗೆ ಸಾಹಿತ್ಯ ಬರೆದರು. ಈ ಚಿತ್ರದಲ್ಲಿ ಆರು ಹಾಡುಗಳು ಮತ್ತು ಎರಡು ವಾದ್ಯ ತುಣುಕಗಳಿವೆ. ಧ್ವನಿವಾಹಿನಿಯನ್ನು ಸೃಷ್ಟಿಸಲು ರೆಹಮಾನ್ ಹಲವು ಸಂಗೀತ ಶೈಲಿಗಳು ಮತ್ತು ಪ್ರಕಾರಗಳನ್ನು ಒಂದುಗೂಡಿಸಿದರು.

ಬಿಡುಗಡೆಯಾದ ನಂತರ, ಧ್ವನಿವಾಹಿನಿಯು ಬಹಳ ಜನಪ್ರಿಯವಾಯಿತು. ಇದು ಬಹಳ ವಿಮರ್ಶಾತ್ಮಕ ಪ್ರಶಂಸೆಯನ್ನೂ ಪಡೆಯಿತು, ಮತ್ತು ಅನೇಕ ವಿಮರ್ಶಕರು ಇದು ರೆಹಮಾನ್‍ರ ಮೇರುಕೃತಿ ಎಂದು ಹೇಳಿದರು. ಇದನ್ನು ರೆಹಮಾನ್‍ರ ಅತಿ ಶ್ರೇಷ್ಠ ಹಾಗೂ ಅತ್ಯಂತ ಯಶಸ್ವಿ ಕೃತಿಗಳಲ್ಲಿ ಒಂದು ಎಂದು ವರ್ಣಿಸಲಾಗಿದೆ. ಚಿತ್ರದ ಸೊಗಸಾದ ಹಿನ್ನೆಲೆ ಸಂಗೀತವೂ ಬಹಳ ವಿಮರ್ಶಾತ್ಮಕ ಪ್ರಶಂಸೆಯನ್ನು ಪಡೆಯಿತು ಮತ್ತು ಚಿತ್ರದ ಯಶಸ್ಸಿಗೆ ಬಹಳವಾಗಿ ಕೊಡುಗೆ ನೀಡಿತು ಎಂದು ಹೇಳಲಾಗಿದೆ.

ಸಂ.ಹಾಡುಗಾಯಕ(ರು)ಸಮಯ
1."ಘನನ್ ಘನನ್"ಉದಿತ್ ನಾರಾಯಣ್, ಸುಖ್‍ವಿಂದರ್ ಸಿಂಗ್, ಅಲ್ಕಾ ಯಾಗ್ನಿಕ್, ಶಂಕರ್ ಮಹಾದೇವನ್, ಶಾನ್, ಸಂಗಡಿಗರು6:11
2."ಮಿತ್ವಾ"ಉದಿತ್ ನಾರಾಯಣ್, ಸುಖ್‍ವಿಂದರ್ ಸಿಂಗ್, ಅಲ್ಕಾ ಯಾಗ್ನಿಕ್, ಶ್ರೀನಿವಾಸ್6:47
3."ರಾಧಾ ಕೆಯ್ಸೆ ನ ಜಲೆ"ಆಶಾ ಭೋಸ್ಲೆ, ಉದಿತ್ ನಾರಾಯಣ್, ವೈಶಾಲಿ ಸಾಮಂತ್, ಸಂಗಡಿಗರು5:34
4."ಓ ರಿ ಛೋರಿ"ಉದಿತ್ ನಾರಾಯಣ್, ಅಲ್ಕಾ ಯಾಗ್ನಿಕ್, ವಸುಂಧರಾ ದಾಸ್5:59
5."ಚಲೆ ಚಲೋ"ಎ. ಆರ್. ರೆಹಮಾನ್, ಶ್ರೀನಿವಾಸ್, ಸಂಗಡಿಗರು6:40
6."ವಾಲ್ಟ್ಝ್ ಫ಼ಾರ್ ಅ ರೋಮ್ಯಾನ್ಸ್" (ವಾದ್ಯಸಂಗೀತ) 2:29
7."ಓ ಪಾಲನ್‍ಹಾರೆ"ಲತಾ ಮಂಗೇಶ್ಕರ್, ಸಾಧನಾ ಸರ್ಗಮ್, ಉದಿತ್ ನಾರಾಯಣ್ ಮತ್ತು ಸಂಗಡಿಗರು5:19
8."ಲಗಾನ್..... ವನ್ಸ್ ಅಪಾನ್ ಅ ಟೈಮ್ ಇನ್ ಇಂಡಿಯಾ"ಅನುರಾಧಾ ಶ್ರೀರಾಮ್, ಸಂಗಡಿಗರು
ವಾದ್ಯಗಳ ಏರ್ಪಾಟು ಆರ್. ಪ್ರಸನ್ನ
4:12
ಒಟ್ಟು ಸಮಯ:41:58

ಗೃಹ ಮಾಧ್ಯಮ ಬದಲಾಯಿಸಿ

ಎರಡು ಡಿವಿಡಿ ಬಿಡುಗಡೆಗಳಾದವು. ೨೭ ಮೇ ೨೦೦೨ರಲ್ಲಿ ಸೀಮಿತ ಪ್ರದೇಶಗಳಲ್ಲಿ ೨-ಡಿವಿಡಿ ಸಮೂಹದ ಮೊದಲನೇ ಬಿಡುಗಡೆಯಾಯಿತು.

ಎರಡನೆಯದನ್ನು ವಾರ್ಷಿಕೋತ್ಸವ ಆವೃತ್ತಿಯಾಗಿ ಮೂರು ಮುದ್ರಿಕೆಗಳ ಡಿವಿಡಿಯಾಗಿ ಚಿತ್ರಮಂದಿರ ಬಿಡುಗಡೆಯ ಆರು ವರ್ಷಗಳ ನಂತರ ಬಿಡುಗಡೆ ಮಾಡಲಾಯಿತು. ಬಿಡುಗಡೆಯ ನಂತರ, ಇದು ಭಾರತದಲ್ಲಿ ಅತ್ಯಂತ ಹೆಚ್ಚು ಮಾರಾಟವಾದ ಡಿವಿಡಿ ಎನಿಸಿಕೊಂಡು ಶೋಲೆಯನ್ನು (೧೯೭೫) ಹಿಂದಿಕ್ಕಿತು.[೩೪]

ಮಾರಾಟ ಸರಕುಗಳು ಬದಲಾಯಿಸಿ

ಲಗಾನ್: ದ ಸ್ಟೋರಿ ಎಂಬ ವಿನೋದ ಚಿತ್ರಾವಳಿ ಪುಸ್ತಕ, ಜೊತೆಗೆ ಎರಡು ಬಣ್ಣಹಚ್ಚುವ ಪುಸ್ತಕಗಳು, ಮಾಸ್ಕ್ ಬುಕ್ ಮತ್ತು ಕ್ರಿಕೆಟ್ ಮಣೆ ಆಟವನ್ನು ವಾಣಿಜ್ಯ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.

ಮಾರ್ಚ್ ೨೦೦೨ರಲ್ಲಿ, ದ ಸ್ಪಿರಿಟ್ ಆಫ಼್ ಲಗಾನ್ - ದಿ ಎಕ್ಸ್‌ಟ್ರಾಆರ್ಡಿನರಿ ಸ್ಟೋರಿ ಆಫ಼್ ದ ಕ್ರಿಯೇಟರ್ಸ್ ಆಫ಼್ ಅ ಕ್ಲಾಸಿಕ್ ಎಂಬ ಶೀರ್ಷಿಕೆಯ ಪುಸ್ತಕವನ್ನು ಪ್ರಕಟಿಸಲಾಯಿತು. ಇದು ಚಲನಚಿತ್ರದ ತಯಾರಿಕೆಯನ್ನು ಒಳಗೊಂಡಿತ್ತು, ಮತ್ತು ಪರಿಕಲ್ಪನೆಯಿಂದ ಬಿಡುಗಡೆಯವರೆಗೆ ಚಿತ್ರವನ್ನು ಅಭಿವೃದ್ಧಿಪಡಿಸುವಾಗ ಚಿತ್ರತಂಡ ಎದುರಿಸಿದ ಹಿನ್ನಡೆಗಳು ಮತ್ತು ಅಡೆತಡೆಗಳನ್ನು ವಿವರವಾಗಿ ವರ್ಣಿಸಿತ್ತು.[೩೫]

ಉಲ್ಲೇಖಗಳು ಬದಲಾಯಿಸಿ

  1. "Lagaan (PG)". British Board of Film Classification. Archived from the original on 1 January 2014. Retrieved 11 February 2013.
  2. "Aamir Khan causes traffic jam". The Tribune. 1 June 2001. Archived from the original on 20 January 2008. Retrieved 20 January 2008.
  3. "Historical Exchange Rates Tool & Forex History Data (47 INR per USD)". OFX. 2001. Archived from the original on 19 June 2018. Retrieved 22 April 2018.
  4. "15 Years of 'Lagaan': 20 Lesser Known Facts About the Film". CNN-News18 (in ಇಂಗ್ಲಿಷ್). 15 June 2016.
  5. Khubchandani, Lata (27 August 2001). "I approached Shah Rukh and Abhishek for Lagaan". Rediff.com. Archived from the original on 26 May 2005. Retrieved 28 December 2007.
  6. ೬.೦ ೬.೧ "Many top heroines had offered to work in this film". Rediff.com. 21 February 2000. Archived from the original on 24 May 2005. Retrieved 28 December 2007.
  7. Pandya, Haresh (14 February 2000). "Where time stands still..." Rediff.com. Archived from the original on 11 November 2007. Retrieved 28 December 2007.
  8. ೮.೦ ೮.೧ "Guran, the fortune teller: The Ten Samurai". Rediff.com. Archived from the original on 26 August 2004. Retrieved 29 December 2007.
  9. "I'm not aware if Big B & SRK have copied me". Filmfare (in ಇಂಗ್ಲಿಷ್). 30 April 2013.
  10. South Asian Cinema (in ಇಂಗ್ಲಿಷ್). South Asian Cinema Foundation. 2001. p. 86.
  11. Nandy, Pritish (17 July 2001). "The Ashutosh Gowariker interview". Rediff.com. Archived from the original on 26 May 2005. Retrieved 28 December 2007.
  12. Kulkarni, Ronjita. "I'm sure Lagaan will win the Oscar". Rediff.com. Archived from the original on 7 June 2011. Retrieved 29 December 2007.
  13. "Lagaan producer Jhamu Sughand passes away". ದಿ ಟೈಮ್ಸ್ ಆಫ್‌ ಇಂಡಿಯಾ. May 27, 2008. Archived from the original on 26 December 2014. Retrieved 2016-01-02.
  14. ೧೪.೦ ೧೪.೧ Malani, Gaurav (18 June 2007). "Chale Chalo – Review". oneindia.in. Archived from the original on 28 February 2014. Retrieved 6 November 2009.
  15. Pandya, Haresh (21 February 2000). "A true actor can play any role". Rediff.com. Archived from the original on 11 November 2007. Retrieved 28 December 2007.
  16. Das, Ronjita (3 February 2001). "One contribution isn't enough". Rediff. Archived from the original on 11 November 2007. Retrieved 12 January 2008.
  17. ೧೭.೦ ೧೭.೧ Verma, Sukanya (1 June 2001). "Lagaan: A ready reckoner". Rediff.com. Archived from the original on 3 November 2004. Retrieved 28 December 2007.
  18. Koppar, Arati. "Gracy Singh: Interview". The Times of India. Archived from the original on 3 August 2001. Retrieved 28 December 2007.
  19. "Ismail, the potter: The Ten Samurai". Rediff.com. Archived from the original on 27 August 2004. Retrieved 29 December 2007.
  20. "Bagha, the mute: The Ten Samurai". Rediff.com. Archived from the original on 13 September 2005. Retrieved 29 December 2007.
  21. "Deva, the Sikh from the neighboring village: The Ten Samurai". Rediff.com. Archived from the original on 25 August 2004. Retrieved 29 December 2007.
  22. "Aamir Khan screens 'Lagaan' at Bhuj". The Tribune. 13 June 2001. Archived from the original on 28 January 2008. Retrieved 12 January 2008.
  23. "Lagaan released in China". The Tribune. Press Trust of India. 20 November 2002. Archived from the original on 27 December 2007. Retrieved 12 January 2008.
  24. Jha, Subhash K (13 August 2001). "Lagaan wins top honours at Swiss film festival". Rediff. Archived from the original on 2 November 2004. Retrieved 13 January 2008.
  25. "Lagaan". Netflix. Retrieved 3 September 2019.
  26. "Top Worldwide Grossers 2001". Box Office India. Retrieved 7 November 2017.
  27. Aneja, Atul (10 February 2018). "Uncle Aamir's charm offensive on millennials". ದಿ ಹಿಂದೂ (in Indian English).
  28. "Rings lords over Oscar with 13 nominations". CNN. 12 February 2002. Archived from the original on 2 February 2008. Retrieved 20 January 2008.
  29. Murari, Timeri N. (15 February 2002). "Lagaan lives on". Business Line. Archived from the original on 10 August 2011. Retrieved 20 January 2008.
  30. Gangadhar, V. (23 February 2002). "Lagaan's ultimate test". The Tribune. Archived from the original on 18 January 2008. Retrieved 20 January 2008.
  31. "South takes the lion's share; Lagaan wins 8 national awards". ದಿ ಹಿಂದೂ. 27 July 2002. Archived from the original on 16 January 2008. Retrieved 13 January 2008.
  32. "Lagaan walks away with eight Filmfare awards". Apunkachoice.com. 17 February 2002. Archived from the original on 21 January 2008. Retrieved 13 January 2008.
  33. "Lagaan scoops Bollywood awards". BBC News. 6 April 2002. Archived from the original on 23 November 2008. Retrieved 13 January 2008.
  34. "Lagaan beats Sholay in DVD sales". The Financial Express. 21 July 2007. Archived from the original on 19 January 2008. Retrieved 13 January 2008.
  35. Bhatkal, Satyajit (March 2002). The Spirit of Lagaan. Mumbai: Popular Prakshan. p. 243. ISBN 81-7991-003-2.

ಹೆಚ್ಚಿನ ಓದಿಗೆ ಬದಲಾಯಿಸಿ

  • Bhatkal, Satyajit (March 2002). The spirit of Lagaan. Mumbai: Popular Prakshan. pp. 243.  ISBN 81-7991-003-2.

ಬಾಹ್ಯ ಸಂಪರ್ಕಗಳು ಬದಲಾಯಿಸಿ