ದಿಲೀಪ್ ಕುಮಾರ್ (ಚಿತ್ರ ನಟ)
ದಿಲೀಪ್ ಕುಮಾರ್ (೧೧ ಡಿಸೆಂಬರ್ ೧೯೨೨ - ೦೭ ಜುಲೈ, ೨೦೨೧) ಹಿಂದಿ ಚಲನಚಿತ್ರ ರಂಗದ ಅಭಿನೇತೃ. ತಮ್ಮ ಕಾಲದ ಶ್ರೇಷ್ಠ ನಟರಲ್ಲಿ ಒಬ್ಬರೆಂದು ಅವರನ್ನು ಪರಿಗಣಿಸಲಾಗುತ್ತದೆ. ೧೯೪೪ರಿಂದ ೧೯೯೬ರವರೆಗೆ ಸುಮಾರು ೬೨ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಶೋಕರಸ ಪ್ರಧಾನ ಭೂಮಿಕೆಗಳಲ್ಲಿ ಪ್ರಸಿದ್ಧರಾದ ಕಾರಣ ಅವರನ್ನು ದುರಂತ ನಾಯಕನೆಂದೂ ಕರೆಯುತ್ತಾರೆ. ಅನೇಕ ಪ್ರಶಸ್ತಿಗಳಿಂದ ಮಾನಿತರಾದ ಇವರು ಭಾರತೀಯ ಚಲನಚಿತ್ರ ರಂಗದ ಸರ್ವೋಚ್ಚ ಸನ್ಮಾನವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರೂ ಆಗಿದ್ದಾರೆ. ಅವರು ಭಾರತದ ರಾಜ್ಯಸಭೆಯ ಸದಸ್ಯರೂ ಆಗಿದ್ದರು.
'ದಿಲೀಪ್ ಕುಮಾರ್ | |
---|---|
ಜನನ | ಮೊಹಮ್ಮದ್ ಯೂಸುಫ್ ಖಾನ್ ಡಿಸೆಂಬರ್ ೧೧, ೧೯೨೨ |
ಮರಣ | ಮುಂಬಯಿನ ಹಿಂದೂಜಾ ಆಸ್ಪತ್ರೆ. ವಯಸ್ಸು : ೯೮. ಜುಲೈ,೦೭, ೨೦೨೧ |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ(ಗಳು) | ಚಲನಚಿತ್ರ ನಟ ನಿರ್ಮಾಪಕ ರಾಜಕಾರಣಿ |
ಸಕ್ರಿಯ ವರ್ಷಗಳು | ೧೯೪೪ – ೧೯೯೮ |
ಸಂಗಾತಿ(s) | ಸಾಯಿರಾ ಬಾನು (೧೯೬೬ - present) Asmaa (೧೯೮೨ - present) |
ಜನನ ಮತ್ತು ಬಾಲ್ಯ
ಬದಲಾಯಿಸಿದಿಲೀಪ್ ಕುಮಾರರ ಹುಟ್ಟು ಹೆಸರು ಮಹಮ್ಮದ್ ಯೂಸುಫ್ ಖಾನ್. ಈಗ ಪಾಕಿಸ್ತಾನದಲ್ಲಿರುವ ಪೇಶಾವರದ ಕಿಸ್ಸಾ ಖ್ವಾನಿ ಬಜಾರಿನ ಮೊಹಲ್ಲಾ ಖುದಾದಾದದಲ್ಲಿ ಇವರು ೧೧ ಡಿಸೆಂಬರ್ ೧೯೨೨ರಂದು ಜನಿಸಿದರು. ಆರು ಮಂದಿ ಗಂಡು ಮಕ್ಕಳ ಹಾಗೂ ಆರು ಮಂದಿ ಹೆಣ್ಣು ಮಕ್ಕಳ ದೊಡ್ಡ ಕುಟುಂಬ ಇವರದಾಗಿತ್ತು. ತಂದೆ ಲಾಲಾ ಘುಲಾಮ್ ಸರ್ವಾರ್ ಹಣ್ಣಿನ ಬೆಳೆಗಾರರೂ ವ್ಯಾಪಾರಿಯೂ ಆಗಿದ್ದರು. ಪೇಶಾವರದಲ್ಲೂ, ಮಹಾರಾಷ್ಟ್ರದ ನಾಶಿಕದ ಬಳಿಯ ದೇವಲಾಲಿ ಎಂಬಲ್ಲೂ ಹಣ್ಣಿನ ತೋಟಗಳಿದ್ದವು. ೧೯೩೦ರ ದಶಕದಲ್ಲಿ ಅವರ ಕುಟುಂಬ ಮುಂಬಯಿಗೆ ಬಂದು ನೆಲೆಸಿತು. ಹದಿಹರೆಯದ ಯುವಕ ಯೂಸುಫ್ ಖಾನ್ ಪುಣೆಯಲ್ಲಿ ಕ್ಯಾಂಟೀನ್ ಉದ್ಯವದಲ್ಲಿ ತೊಡಗಿ, ಜತೆಯಲ್ಲೇ ಒಣಹಣ್ಣುಗಳ ಸರಬರಾಜಿನ ವ್ಯಾಪಾರವನ್ನಾರಂಭಿಸಿದರು.
ಚಲನಚಿತ್ರ ರಂಗ ಪ್ರವೇಶ
ಬದಲಾಯಿಸಿಅಂದಿನ ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಪಕರೂ ಬಾಂಬೇ ಟಾಕೀಸ್ ಸ್ಟೂಡಿಯೊ ಮಾಲಿಕರೂ ಆಗಿದ್ದ ಹಿಮಾಂಶು ರಾಯ್ ಅವರ ಪತ್ನಿ ದೇವಿಕಾ ರಾಣಿಯವರು ಹಿಂದಿ ಚಿತ್ರ ರಂಗವನ್ನು ಪ್ರವೇಶಿಸಲು ಯೂಸುಫ್ ಖಾನರಿಗೆ ಸಹಾಯ ಮಾಡಿದರು. ೧೯೪೪ರಲ್ಲಿ ಭಗವತೀ ಚರಣ ವರ್ಮಾರವರು ತಮ್ಮ ಜ್ವಾರ್ ಭಾಟಾ ಚಿತ್ರದ ನಾಯಕನ ಪಾತ್ರವನ್ನಿತ್ತು ದಿಲೀಪ್ ಕುಮಾರ್ ಎಂದು ಹೆಸರಿಟ್ಟರು. ಅಮಿಯಾ ಚಕ್ರವರ್ತಿಯವರ ನಿರ್ದೇಶನದ ಈ ಚಿತ್ರದ ಪಾತ್ರವರ್ಗದಲ್ಲಿ ಮೃದುಲಾ, ಶಮೀಮ್, ಆಗಾ, ಕೆ ಎನ್ ಸಿಂಘ್, ಮುಮ್ತಾಜ್ ಅಲಿ, ಮೊದಲಾದವರಿದ್ದ ಈ ಚಿತ್ರದ ಸಂಗೀತ ನಿರ್ದೇಶಕರು ಅನಿಲ್ ಬಿಸ್ವಾಸ್ ಆಗಿದ್ದರು. ಆದರೂ ಚಿತ್ರ ಅಷ್ಟೇನೂ ಜನಪ್ರಿಯವಾಗಲಿಲ್ಲ.
ದುರಂತ ನಾಯಕ
ಬದಲಾಯಿಸಿ೧೯೪೭ರಲ್ಲಿ ಬಿಡುಗಡೆಯಾದ ಜುಗ್ನು ಚಿತ್ರ ಜಯಪ್ರದವಾಯಿತು. ಬಳಿಕ ಅಂದಾಜ್ (೧೯೪೯), ದೀದಾರ್ (೧೯೫೧), ಆನ್ (೧೯೫೨), ಅಮರ್ (೧೯೫೪), ಆಜಾದ್ (೧೯೫೫), ದೇವದಾಸ್ (೧೯೫೫), ಮುಸಾಫಿರ್ (೧೯೫೭), ಮಧುಮತಿ (೧೯೫೮) ಮತ್ತು ಮುಘಲ್ ಎ ಆಜಮ್ (೧೯೬೦) ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಗೆಲುವನ್ನು ಪಡೆಯಿತಲ್ಲದೆ, ದಿಲೀಪ್ ಕುಮಾರರೂ ಚಿತ್ರರಂಗದಲ್ಲಿ ಅಮೋಘ ಖ್ಯಾತಿಯನ್ನು ಪಡೆದರು. ಅಂದಾಜ್ , ದೀದಾರ್ , ಅಮರ್ , ದೇವದಾಸ್, ಮಧುಮತಿ, ಇತ್ಯಾದಿ ಚಿತ್ರಗಳು ಶೋಕರಸಭರಿತ ಚಿತ್ರಗಳಾಗಿದ್ದು, ದಿಲೀಪ್ ಕುಮಾರರು ದುರಂತ ನಾಯಕನೆಂಬ ಬಿರುದನ್ನು ಪಡೆದರು.
ಭಾರತದ ಮುಘಲ್ ಇತಿಹಾಸದಿಂದಾಯ್ದ ಕತೆಯಿರುವ ಮುಘಲ್ ಎ ಆಜಮ್ ಆಗಿನ ಕಾಲದ ಶ್ರೀಮಂತ ಚಿತ್ರವಾಗಿದ್ದು, ಭಾರೀ ಜಯಗಳಿಸಿತ್ತು. ಉತ್ತರಾರ್ಧ ವರ್ಣದಲ್ಲಿದ್ದು ಕಪ್ಪು-ಬಿಳುಪಿನ ಈ ಚಿತ್ರ ೨೦೦೮ರಲ್ಲಿ ಕಂಪ್ಯೂಟರ್ ಸಹಾಯದಿಂದ ವರ್ಣರಂಜಿತಗೊಂಡು ಪ್ರದರ್ಶನಗೊಂಡಾಗ ಮತ್ತೆ ಆಗಿನಷ್ಟೇ ಜನಮೆಚ್ಚುಗೆಯನ್ನು ಪಡೆಯಿತು. ೧೯೬೧ರಲ್ಲಿ ಬಿಡುಗಡೆಯಾದ ಗಂಗಾ ಜಮುನಾ ದಿಲೀಪ್ ಕುಮಾರರ ಮೊದಲ ಪೂರ್ಣ ವರ್ಣ ಚಿತ್ರ. ಇದು ಅವರ ಸ್ವಂತ ನಿರ್ಮಾಣದ ಚಿತ್ರವೂ ಆಗಿತ್ತು. ಇದರಲ್ಲಿ ಅವರ ನಿಜ ಜೀವನದ ತಮ್ಮ ನಾಸಿರ್ ಖಾನ್ ತಮ್ಮನಾಗಿಯೇ ಅಭಿನಯಿಸಿದ್ದಾರೆ.
೧೯೭೬ರವರೆಗೆ ಹಲವಾರು ಜನಪ್ರಿಯ ಚಿತ್ರಗಳಲ್ಲಿ ಅಭಿನಯಿಸಿದ ಬಳಿಕ ೧೯೮೧ರವರೆಗೆ ಚಿತ್ರರಂಗದಿಂದ ದೂರವಿದ್ದರು. ಆ ನಂತರ ಪೋಷಕ ಪಾತ್ರಗಳಲ್ಲಿ ಅಭಿನಯಿಸಲಾರಂಭಿಸಿದರು. ಕ್ರಾಂತಿ (೧೯೮೧), ಶಕ್ತಿ (೧೯೮೨), ವಿಧಾತಾ (೧೯೮೨), ಮಶಾಲ್ (೧೯೮೪), ಕರ್ಮ (೧೯೮೬), ಸೌದಾಗರ್ (೧೯೯೧), ಇತ್ಯಾದಿ ಚಿತ್ರಗಳೂ ಜನಪ್ರಿಯವಾದವು. ಅವರ ಕೊನೆಯ ಚಿತ್ರ ಕಿಲಾ (೧೯೯೬) ಅಷ್ಟೇನೂ ಜನ ಮೆಚ್ಚುಗೆಯನ್ನು ಪಡೆಯಲಿಲ್ಲ.
ವೈಯಕ್ತಿಕ ಜೀವನ
ಬದಲಾಯಿಸಿ೧೯೬೬ರಲ್ಲಿ ಅಂದಿನ ಚಿತ್ರರಂಗದ ಸುಂದರಿ ಸಾಯಿರಾ ಬಾನುವನ್ನು ಮದುವೆಯಾದಾಗ ದಿಲೀಪ್ ಕುಮಾರರ ವಯಸ್ಸು ೪೪ ಹಾಗೂ ಸಾಯಿರಾ ಬಾನುವಿನ ವಯಸ್ಸು ೨೨. ೧೯೮೦ರಲ್ಲಿ ಆಸ್ಮಾ ಜತೆ ಎರಡನೆ ಮದುವೆಯಾದರೂ ಅದು ಬಹು ಬೇಗನೇ ವಿಚ್ಛೇದನಗೊಂಡಿತು. ಉನ್ನತ ದರ್ಜೆಯ ಉರ್ದುವಿನಲ್ಲಿ ಮೆದುವಾಗಿ ಮಾತಾಡುವ ದಿಲೀಪ್ ಕುಮಾರ್ ಸುಸಂಸ್ಕೃತ ವ್ಯಕ್ತಿ. ಎಲ್ಲರೊಡನೆಯೂ ಅತ್ಯಂತ ಗೌರವದಿಂದ ವರ್ತಿಸುವ ಅಚ್ಚುಕಟ್ಟಾದ ಪೋಷಾಕಿನಲ್ಲಿ ಕಾಣಿಸಿಕೊಳ್ಳುವ ನಾಗರಿಕ.
ಪ್ರಶಸ್ತಿಗಳು
ಬದಲಾಯಿಸಿಶ್ರೇಷ್ಠ ಅಭಿನಯಕ್ಕೆ ಎಂಟು ಬಾರಿ ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಪಡೆದ ದಿಲೀಪ್ ಕುಮಾರರಿಗೆ ಫಿಲ್ಮ್ ಫೇರ್ ಲೈಫ್ ಟೈಮ್ ಅಚೀವ್‌ಮೆಂಟ್ ಪ್ರಶಸ್ತಿಯನ್ನು ೧೯೯೩ರಲ್ಲಿ ನೀಡಲಾಯಿತು. ೧೯೯೪ರಲ್ಲಿ ದಾದಾ ಸಾಹೆಬ್ ಪ್ರಶಸ್ತಿಯನ್ನು ಭಾರತ ಸರ್ಕಾರ ಇತ್ತು ಸನ್ಮಾನಿಸಿತು. ೧೯೯೧ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು.
ಪಾಕಿಸ್ತಾನ ಸರ್ಕಾರವು ೧೯೯೭ರಲ್ಲಿ ನಿಶಾನ್ ಎ ಇಮ್ತಿಯಾಜ್ ಪ್ರಸ್ತಿಯನ್ನಿತ್ತು ಗೌರವಿಸಿತು. ಅದೇ ವರ್ಷ ಎನ್.ಟಿ.ಆರ್.ರಾಷ್ಟ್ರೀಯ ಪುರಸ್ಕಾರವೂ ಲಭಿಸಿತು. ೨೦೦೯ರಲ್ಲಿ ಸಿ ಎನ್ ಎನ್-ಐ ಬಿ ಎನ್ ಇಂಡಿಯನ್ ಆಫ್ ದ ಯಿಯರ್ ಪುರಸ್ಕಾರವನ್ನು ಗಳಿಸಿದರು. ೧೯೮೦ರಲ್ಲಿ ಮುಂಬಯಿಯ ಶರೀಫ್ ಪದವಿಯನ್ನೀಯಲಾಯಿತು. ರಾಜ್ಯ ಸಭೆಯ ಸದಸ್ಯರೂ ಆಗಿದ್ದರು. ಇವರಿಗೆ ೨೦೧೫ರಲ್ಲಿ ಭಾರತ ಸರಕಾರವು ಪದ್ಮವಿಭೂಷಣಪ್ರಶಸ್ತಿಯನ್ನು ಘೋಷಿಸಿದೆ.
ನಿಧನ
ಬದಲಾಯಿಸಿದಿಲೀಪ್ ಕುಮಾರ್ ರವರು ದೀರ್ಘಕಾಲದಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, 'ಮುಂಬಯಿನ ಹಿಂದೂಜಾ ಆಸ್ಪತ್ರೆ'ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ೭ ಜುಲೈ, ೨೦೨೧ ರಂದು ತಮ್ಮ ೯೮ ನೆಯ ವಯಸ್ಸಿನಲ್ಲಿ ನಿಧನರಾದರು.[೩],[೪]
ಉಲ್ಲೇಖಗಳು
ಬದಲಾಯಿಸಿ- ↑ ಉಲ್ಲೇಖ ದೋಷ: Invalid
<ref>
tag; no text was provided for refs namedBritannica
- ↑ ಉಲ್ಲೇಖ ದೋಷ: Invalid
<ref>
tag; no text was provided for refs namedEkbal
- ↑ Dilip Kumar dies at the age of 98, family announces with 'profound grief, hindustantimes.com,JUL 07, 2021
- ↑ Dilip Kumar Funeral: Legendary Actor Buried at Juhu Kabristan; Bollywood Pays Tributes, Entertainment Bureau Wed, 7 July 2021