ರಾಜಾರಾನಿ ದೇವಾಲಯ

ಭುವನೇಶ್ವರದಲ್ಲಿರುವ ಹಿಂದೂ ದೇವಾಲಯ

ರಾಜಾರಾನಿ ದೇವಾಲಯವು 11 ನೇ ಶತಮಾನದ ಹಿಂದೂ ದೇವಾಲಯವಾಗಿದ್ದು, ಭಾರತದ ಒಡಿಶಾ ರಾಜ್ಯದ ರಾಜಧಾನಿ ಭುವನೇಶ್ವರದಲ್ಲಿದೆ.

ರಾಜಾರಾನಿ ದೇವಾಲಯ

ಅವಲೋಕನ ಬದಲಾಯಿಸಿ

ಈ ದೇವಾಲಯ ಮೂಲತಃ ಇಂದ್ರೇಶ್ವರ ಎಂದು ಪರಿಚಿತವಾಗಿತ್ತು ಎಂದು ನಂಬಲಾಗಿದೆ. ದೇವಾಲಯದಲ್ಲಿ ಮಹಿಳೆಯರು ಮತ್ತು ದಂಪತಿಗಳ ಕಾಮಪ್ರಚೋದಕ ಕೆತ್ತನೆಗಳಿಂದಾಗಿ ಇದನ್ನು ಸ್ಥಳೀಯವಾಗಿ "ಪ್ರೇಮ ದೇವಾಲಯ" ಎಂದು ಕರೆಯಲಾಗುತ್ತದೆ. ರಾಜಾರಾನಿ ದೇವಾಲಯವನ್ನು ಪಂಚರಥ ಶೈಲಿಯಲ್ಲಿ ಎರಡು ರಚನೆಗಳೊಂದಿಗೆ ಎತ್ತರದ ವೇದಿಕೆಯಲ್ಲಿ ನಿರ್ಮಿಸಲಾಗಿದೆ: ವಿಮಾನ (ಪವಿತ್ರ ಸ್ಥಳ) ಎಂದು ಕರೆಯಲ್ಪಡುವ ಕೇಂದ್ರ ಗುಡಿಯು 18 m (59 ft) ಎತ್ತರವಿರುವ ಅದರ ಛಾವಣಿಯ ಮೇಲೆ ಬಡಾವನ್ನು (ವಕ್ರರೇಖೀಯ ಶಿಖರ) ಹೊಂದಿದೆ, ಮತ್ತು ಪಿರಮಿಡ್ ಛಾವಣಿಯಿರುವ ಜಗಮೋಹನ ಎಂಬ ವೀಕ್ಷಣಾ ಸಭಾಂಗಣವನ್ನು ಹೊಂದಿದೆ. ಈ ದೇವಾಲಯವನ್ನು ಸ್ಥಳೀಯವಾಗಿ "ರಾಜಾರಾನಿ" ಎಂದು ಕರೆಯಲ್ಪಡುವ ಮಂಕಾದ ಕೆಂಪು ಮತ್ತು ಹಳದಿ ಮರಳುಗಲ್ಲಿನಿಂದ ನಿರ್ಮಿಸಲಾಗಿದೆ. ಗರ್ಭಗುಡಿಯೊಳಗೆ ಯಾವುದೇ ವಿಗ್ರಹಗಳಿಲ್ಲ. ಆದ್ದರಿಂದ ಇದು ಹಿಂದೂ ಧರ್ಮದ ಯಾವುದೇ ನಿರ್ದಿಷ್ಟ ಪಂಥದೊಂದಿಗೆ ಸಂಬಂಧ ಹೊಂದಿಲ್ಲ ಆದರೆ ಮಾಡಗಳ ಆಧಾರದ ಮೇಲೆ ವಿಶಾಲವಾಗಿ ಶೈವಪಂಥೀಯ ಎಂದು ಇದನ್ನು ವರ್ಗೀಕರಿಸಲಾಗಿದೆ.

ಇತಿಹಾಸ ಬದಲಾಯಿಸಿ

ಶಿಲ್ಪೀಯ ವಾಸ್ತುಕಲಾ ಶೈಲಿಯನ್ನು ಆಧರಿಸಿ, ದೇವಾಲಯವು 11 ನೇ ಶತಮಾನದ ಮಧ್ಯಭಾಗದ್ದೆಂದು ಕಾಲನಿರ್ಧಾರ ಮಾಡಲಾಗಿದೆ.[೧] ಬ್ರೌನ್ ದೇವಾಲಯವನ್ನು ಅನಂತ ವಾಸುದೇವ್ ದೇವಾಲಯದ ಜೊತೆಗೆ 11 ನೇ-12 ನೇ ಶತಮಾನದಲ್ಲಿ ಇರಿಸುತ್ತಾರೆ. ಒರಿಸ್ಸಾ ದೇವಾಲಯಗಳ ಮತ್ತೊಂದು ಸಮೀಕ್ಷೆಯನ್ನು 1953ರಲ್ಲಿ ನಡೆಸಿದ ಎಸ್.ಕೆ.ಸರಸ್ವತಿ ಇದೇ ಕಾಲವನ್ನು ನೀಡಿದರು.[೨] ಒಡಿಶಾ ದೇವಾಲಯಗಳ ಸಮಗ್ರ ವಿಶ್ಲೇಷಣೆ ಮಾಡಿದ ಪಾಣಿಗ್ರಾಹಿ, ಲಿಂಗರಾಜ ದೇವಾಲಯ ಮತ್ತು ಮುಕ್ತೇಶ್ವರ ದೇವಾಲಯದ ನಡುವಿನ ಅನಿರ್ದಿಷ್ಟ ದಿನಾಂಕವನ್ನು ಇದಕ್ಕೆ ನೀಡುತ್ತಾರೆ.[೩][೪] ದೇವಾಲಯದ ನಿರ್ಮಾಣವು ಸುಮಾರು 1105 ರಲ್ಲಿ ಪ್ರಾರಂಭವಾಯಿತು ಎಂದು ಫರ್ಗುಸನ್ ನಂಬುತ್ತಾರೆ. ಲಿಂಗರಾಜ ದೇವಾಲಯದ ಸಮಯದಲ್ಲಿಯೇ ಈ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ಜಾರ್ಜ್ ಮಿಶೆಲ್ ನಂಬುತ್ತಾರೆ.[೫] ರಾಜಾರಾನಿ ದೇವಾಲಯವು ಸರಿಸುಮಾರು ಪುರಿಯ ಜಗನ್ನಾಥ ದೇವಾಲಯದ ಅವಧಿಗೆ ಸೇರಿದೆ. ಮಧ್ಯ ಭಾರತದ ಇತರ ದೇವಾಲಯಗಳ ವಾಸ್ತುಕಲೆಯು ಈ ದೇವಾಲಯದಿಂದ ಹುಟ್ಟಿಕೊಂಡಿತು. ಈ ವರ್ಗದಲ್ಲಿ ಗಮನಾರ್ಹವಾದವುಗಳೆಂದರೆ ಖಜುರಾಹೊ ದೇವಾಲಯಗಳು ಮತ್ತು ಕಡವಾದಲ್ಲಿನ ತೋಟೇಶ್ವರ ಮಹಾದೇವ ದೇವಾಲಯ.[೬] ಶೈಲಿಯನ್ನು ಆಧರಿಸಿ ಈ ಅವಧಿಯಲ್ಲಿ ಮಧ್ಯ ಭಾರತದಿಂದ ಒಡಿಶಾಗೆ ವಲಸೆ ಬಂದ ಸೋಮವಂಶಿ ರಾಜರು ಈ ದೇವಾಲಯವನ್ನು ನಿರ್ಮಿಸಿರಬಹುದು ಎಂದು ವಿದ್ವಾಂಸರು ನಂಬುತ್ತಾರೆ.[೭] ರಾಜಾರಾನಿ ದೇವಸ್ಥಾನವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣೆಯು (ASI) ಪ್ರವೇಶ ಚೀಟಿಯುಳ್ಳ ಸ್ಮಾರಕವಾಗಿ ನಿರ್ವಹಿಸುತ್ತದೆ.[೧][೮]

ವಾಸ್ತುಕಲೆ ಬದಲಾಯಿಸಿ

 
ರಾಜಾರಾನಿ ದೇವಸ್ಥಾನದ ನಕಾಸೆ, ತುಲನಾತ್ಮಕ ಅಳತೆ 50 ಅಡಿಗೆ 1 ಇಂಚು

ಒಡಿಶಾದ ದೇವಾಲಯಗಳು ಎರಡು ಭಾಗಗಳನ್ನು ಹೊಂದಿವೆ ಅವುಗಳೆಂದರೆ ಪವಿತ್ರ ಸ್ಥಳ (ವಿಮಾನ) ಮತ್ತು ಇನ್ನೊಂದು ಯಾತ್ರಿಕರು ಅದನ್ನು ವೀಕ್ಷಿಸುವ ಸ್ಥಳ (ಜಗಮೋಹನ ಎಂದು ಕರೆಯಲ್ಪಡುತ್ತದೆ). ಭುವನೇಶ್ವರದಲ್ಲಿನ ಕೆಲವು ಹಳೆಯ ದೇವಾಲಯಗಳಲ್ಲಿ ಕಂಡುಬರುವಂತೆ ಆರಂಭಿಕ ವಿಮಾನವುಳ್ಳ ದೇವಾಲಯಗಳು ಜಗಮೋಹನವಿಲ್ಲದೆ ಇದ್ದವು. ಆದರೆ ನಂತರದ ದೇವಾಲಯಗಳು ಎರಡು ಹೆಚ್ಚುವರಿ ರಚನೆಗಳನ್ನು ಹೊಂದಿದ್ದವು ಅವುಗಳೆಂದರೆ ನಟ-ಮಂಡಪ (ಉತ್ಸವದ ಸಭಾಂಗಣ) ಮತ್ತು ಭೋಗ-ಮಂಡಪ (ಅರ್ಪಣೆಗಳ ಸಭಾಂಗಣ). ವಿಮಾನದ ನಕಾಸೆ ಚೌಕವಾಗಿದೆ ಮತ್ತು ಗೋಡೆಗಳು ಮುಂಚಾಚಿಕೊಂಡಿರುವ ಭಾಗಗಳಿಂದ ವೈವಿಧ್ಯಮಯವಾಗಿವೆ (ರಥಗಳು ಅಥವಾ ಪಗಗಳು ಎಂದು ಕರೆಯಲ್ಪಡುತ್ತವೆ).[೯] ಆಮಲಕ (ಮಸ್ತಕ ಎಂದೂ ಕರೆಯಲ್ಪಡುತ್ತದೆ) ಎಂಬ ಅಂಚಿನ ಮೇಲೆ ಏಣುಗೆರೆಗಳನ್ನು ಹೊಂದಿರುವ ಕಲ್ಲಿನ ಚಕ್ರವನ್ನು ದೇವಾಲಯದ ಬಡಾದ (ಗೋಪುರ) ಮೇಲೆ ಇರಿಸಲಾಗಿದೆ. ರಾಜಾರಾನಿ ದೇವಾಲಯವು ಎತ್ತರದ ವೇದಿಕೆಯ ಮೇಲೆ ನಿಂತಿದೆ. ಈ ದೇವಾಲಯವನ್ನು ಸ್ಥಳೀಯವಾಗಿ "ರಾಜಾರಾನಿ" ಎಂದು ಕರೆಯಲ್ಪಡುವ ಮಂದ ಕೆಂಪು ಮತ್ತು ಹಳದಿ ಮರಳುಗಲ್ಲಿನಿಂದ ನಿರ್ಮಿಸಲಾಗಿದೆ.[೭]

ವಿಮಾನ ಬದಲಾಯಿಸಿ

ಇದು 18 ಮೀ ಎತ್ತರದ ವಕ್ರರೇಖೀಯ ಮೇಲ್ನಿರ್ಮಾಣವಿರುವ (ರೇಖಾ ಶಿಖರ) ಪಂಚರಥ ನಕಾಸೆಯನ್ನು ಹೊಂದಿದೆ. ವಿಮಾನವು (ಗೋಪುರ) ಇಮ್ಮಡಿ ಕಲಶದಂತಹ ಘಟಕಗಳನ್ನು ಹೊಂದಿರುವ ಚಿಕಣಿ ಗೋಪುರಗಳ ಸಮೂಹದಿಂದ ಸುತ್ತುವರಿಯಲ್ಪಟ್ಟಿದೆ ಮತ್ತು ದುಂಡಾಗಿ ಕಾಣುತ್ತದೆ. ಇದು ಭುವನೇಶ್ವರದಲ್ಲಿರುವ ಇತರ ದೇವಾಲಯಗಳಿಗಿಂತ ಭಿನ್ನವಾಗಿದೆ ಆದರೆ ಖಜುರಾಹೊ ದೇವಾಲಯಗಳ ಗೋಪುರಗಳಂತಿದೆ. ದೇವಾಲಯವು ಮೂರು ಕಾರಣೆಗಳಿರುವ ಪಾಯದ ಮೇಲೆ ನಿಂತಿದೆ. ಸಾಮಾನ್ಯವಾಗಿ ಇತರ ದೇವಾಲಯಗಳಲ್ಲಿ ಕಂಡುಬರುವ ಮೂರು ವಿಭಾಗಗಳ ಬದಲಿಗೆ ಬಡಾ ಐದು ವಿಭಾಗಗಳನ್ನು ಹೊಂದಿದೆ. ನೆಲಮಾಳಿಗೆಯಿಂದ ವಿಮಾನವು 17.98 metres (59.0 ft) ಏರುತ್ತದೆ.[೭] ವಿಮಾನ ದ ಅಳತೆ 10.25 ft (3.12 m) * 10.25 ft (3.12 m) ಒಳಗಿನಿಂದ, 31 ft (9.4 m) * 29 ft (8.8 m) ಹೊರಗಿನಿಂದ.[೧೦] ಇದರ ಶಿಖರವು ಗೋಪುರದ ಅಡ್ಡಪಟ್ಟಿಯಿಂದ ಹೊರಹೊಮ್ಮುವ ಸಣ್ಣಗೋಪುರಗಳ ಸಮೂಹಗಳಿಂದ ಅಲಂಕರಿಸಲ್ಪಟ್ಟಿದೆ (ಗೋಪುರದ ಪ್ರತಿಕೃತಿ). ದೇವಾಲಯವು ಪಂಚಾಂಗ ಬಡಾ ಅಥವಾ ಐದು ವಿಭಾಗಗಳನ್ನು ಹೊಂದಿದೆ, ಅವುಗಳೆಂದರೆ, ಪಭಾಗ, ತಲಜಂಘ, ಬಂಧನ, ಉಪರಾಜಂಘ ಮತ್ತು ಬರಂಡ . ಪಭಾಗ ಎಂದು ಕರೆಯಲ್ಪಡುವ ಅತಿ ಕೆಳಗಿನ ವಿಭಾಗವು ಐದು ಅಲಂಕಾರಿಕ ಕಾರಣೆಗಳನ್ನು ಹೊಂದಿದೆ, ಅವುಗಳೆಂದರೆ, ಖುರ, ಕುಂಭ, ಪಟ್ಟ, ಕಾಣಿ ಮತ್ತು ಬಸಂತ. ದೇವಾಲಯದ ಮೇಲ್ವಿನ್ಯಾಸವು (ಗಂಡಿ) ಹಲವಾರು ಚಿಕಣಿ ಗೋಪುರಗಳನ್ನು ಹೊಂದಿದೆ (ಅಂಗಶಿಖರಗಳು). ಮೇಲ್ವಿನ್ಯಾಸವನ್ನು ಆಮಲಕ ಎಂದು ಕರೆಯಲ್ಪಡುವ ಅರೆಗೊಳವಿಗಳುಳ್ಳ ಬಿಲ್ಲೆಯಾಕಾರದ ವಾಸ್ತುಕಲಾ ತುಣುಕಿನಿಂದ ಕಿರೀಟವನ್ನು ಮಾಡಲಾಗಿದೆ ಮತ್ತು ಕಿರೀಟದ ಅಂತಿಮ ರೂಪವಾಗಿ ಹೂದಾನಿ (ಕಳಶ) ಅದರ ಮೇಲೆ ಬರುತ್ತದೆ.[೧][೧೧][೧೨]

ಜಗಮೋಹನ ಬದಲಾಯಿಸಿ

 
ಜಗಮೋಹನದ ಮುಂಭಾಗದ ಭಾಗವು ಬಾಗಿಲುವಾಡದ ನಿಂತಿರುವ ಭಾಗಗಳಲ್ಲಿ ನಾಗಿನ್‌ಗಳು ಮತ್ತು ಕಾವಲು ದೇವತೆಗಳನ್ನು ಚಿತ್ರಿಸುತ್ತದೆ, ಹಿನ್ನೆಲೆಯಲ್ಲಿ ವಿಮಾನವಿದೆ.

ಜಗಮೋಹನವು (ಮುಖಮಂಟಪ) ಒಂದು ಪಿರಮಿಡ್ ರಚನೆಯನ್ನು ಪ್ರದರ್ಶಿಸಿದರೂ, ತನ್ನದೇ ಆದ ಸಂಪೂರ್ಣ ರಚನೆಯ ಸ್ಥಾನಮಾನವನ್ನು ಇನ್ನೂ ತೆಗೆದುಕೊಳ್ಳಬೇಕಾಗಿದೆ. 1903 ರಲ್ಲಿ ಇದು ಅವಶೇಷಗಳಾಗಿ ಕುಸಿದಾಗ ಇದನ್ನು ದುರಸ್ತಿ ಮಾಡಲಾಯಿತು. ಜಗಮೋಹನದ ಅಳತೆ ಒಳಗಿನಿಂದ 17.83 ft (5.43 m) * 17.83 ft (5.43 m) ಮತ್ತು ಹೊರಗಿನಿಂದ 36 ft (11 m) * 36 ft (11 m).[೧೦] ಅಂತಸ್ತುಗಳುಳ್ಳ (ಪಿಢಾ) ಜಗಮೋಹನ ಮತ್ತು ಒಳಭಾಗವು ಸರಳವಾಗಿದೆ, ಪ್ರಾಯಶಃ ಇದನ್ನು ಅಪೂರ್ಣವಾಗಿ ಬಿಡಲಾಗಿದೆ. ಹಿಂದಿನ ದೇವಾಲಯಗಳಲ್ಲಿ ಇದ್ದ ಆಯತಾಕಾರದ ನಕ್ಷೆಗಳಿಗೆ ಹೋಲಿಸಿದರೆ ಜಗಮೋಹನದ ನಕ್ಷೆಯು ಚೌಕವಾಗಿದೆ.[೧]

ಶಿಲ್ಪಗಳು ಬದಲಾಯಿಸಿ

 
ಗಣೇಶನಿಗೆ ಸಮರ್ಪಿತವಾದ ಕುಹರ.

ಮುಕ್ತೇಶ್ವರ ದೇವಾಲಯದ ಶಿಲ್ಪಗಳಲ್ಲಿ ಇಲ್ಲದ ಗಹನತೆಯನ್ನು ಇಲ್ಲಿನ ಶಿಲ್ಪಗಳು ಹೊಂದಿವೆ.[೧೧] ಸ್ವಲ್ಪ ಮುಂದೆ ಚಾಚಿಕೊಂಡಿರುವ ಪ್ರವೇಶದ್ವಾರವು ಎಡಭಾಗದಲ್ಲಿ ನಾಗನಿಂದ ಸುತ್ತುವರಿದ ದುಂಡಗಿನ ದಪ್ಪ ಕಂಬಗಳಿಂದ ಸುತ್ತುವರಿಯಲ್ಪಟ್ಟಿದೆ. ಅಷ್ಟದಿಕ್ಪಾಲಕರು ದೇವಾಲಯದ ಬುಡದಿಂದ ಎಂಟು ದಿಕ್ಕುಗಳಲ್ಲಿ ಪ್ರದಕ್ಷಿಣಾಕಾರವಾಗಿ ಮುಖಮಂಟಪ ಮತ್ತು ಡ್ಯೂಲ್ ಸುತ್ತಲೂ ಹೆಬ್ಬಾಗಿಲಿನಿಂದ ಪ್ರಾರಂಭವಾಗಿ ತೋರಣ (ಪ್ರವೇಶದ್ವಾರ) ದಲ್ಲಿ ಕೊನೆಗೊಳ್ಳುವವರೆಗೆ ಮುಂದೆ ಚಾಚಿಕೊಂಡಿದ್ದಾರೆ.[೧೧] ಇತರ ಪ್ರಸಿದ್ಧ ಶಿಲ್ಪಗಳೆಂದರೆ ನಾಗ-ನಾಗಿ ಸ್ತಂಭ, ಪ್ರವೇಶ ದ್ವಾರದ ಬಾಗಿಲುವಾಡದ ಭಾಗಗಳ ಮೇಲೆ ಶೈವ ದ್ವಾರಪಾಲರು ಮತ್ತು ಪ್ರವೇಶದ್ವಾರದ ಉತ್ತರಂಗದ ಮೇಲೆ ಲಕುಲೀಸ. ಇದರ ಮೇಲೆ ನವಗ್ರಹಗಳ ಒತ್ತು ಜಂತಿಯಿದೆ. ಸಂರಕ್ಷಿಸಲ್ಪಟ್ಟ ದೇವಾಲಯದ ಅತ್ಯುತ್ತಮ ಶಿಲ್ಪಗಳೆಂದರೆ ಕನಿಕಾದ ಮಧ್ಯದ ಮುಂಭಾಗದ ಮೇಲೆ ನಿಂತಿರುವ ಅಷ್ಟದಿಕ್ಪಾಲರು. ಇವು ಅರೆ ಪಾರದರ್ಶಕ ವಸ್ತ್ರಗಳನ್ನು ಧರಿಸಿರುವಂತೆ ಬಡಾಜಂಘಾ ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ವರುಣನ ವಿಗ್ರಹವು ಅಖಂಡವಾಗಿದೆ ಮತ್ತು ಅದರ ದೇಹದ ಅಲಂಕರಣ, ಕೇಶಾಲಂಕಾರ ಮತ್ತು ಮುಖಭಾವಕ್ಕೆ ಪ್ರಸಿದ್ಧವಾಗಿದೆ. ಶಿವ, ನಟರಾಜ ಮತ್ತು ಪಾರ್ವತಿಯರ ವಿವಾಹದ ದೃಶ್ಯಗಳು ದೇವಾಲಯದಲ್ಲಿ ಇರುವ ಭಕ್ತಗಣ ಹೊಂದಿರುವ ವಿಗ್ರಹಗಳಾಗಿವೆ. ಗರ್ಭಗುಡಿಯ ಗೋಡೆಗಳನ್ನು ಅಲಂಕರಿಸುವ ಎತ್ತರದ, ತೆಳ್ಳಗಿನ, ಅತ್ಯಾಧುನಿಕ ನಾಯಿಕಾಗಳನ್ನು ವಿವಿಧ ಪಾತ್ರಗಳಲ್ಲಿ ಮತ್ತು ಮನಃಸ್ಥಿತಿಗಳಲ್ಲಿ ಪ್ರಣಯಾಸಕ್ತ ಚೇಷ್ಟೆ ಮಾಡುತ್ತಿರುವಂತೆ ಚಿತ್ರಿಸಲಾಗಿದೆ. ಅವರು ಕೃಶನಾದ ತಪಸ್ವಿಯಿಂದ ತಲೆ ತಿರುಗಿಸುತ್ತಿರುವುದು, ತನ್ನ ಮಗುವನ್ನು ಮುದ್ದಿಸುತ್ತಿರುವುದು, ಮರದ ಕೊಂಬೆಯನ್ನು ಹಿಡಿದಿಕೊಂಡಿರುವುದು, ತನ್ನ ಶೌಚಾಲಯಕ್ಕೆ ಹೋಗುತ್ತಿರುವುದು, ಕನ್ನಡಿಯಲ್ಲಿ ನೋಡುತ್ತಿರುವುದು, ತನ್ನ ಕಾಲುಂಗುರವನ್ನು ತೆಗೆಯುತ್ತಿರುವುದು, ತನ್ನ ಮುದ್ದಿನ ಹಕ್ಕಿಯನ್ನು ಮುದ್ದಿಸುತ್ತಿರುವುದು ಮತ್ತು ವಾದ್ಯ ನುಡಿಸುತ್ತಿರುವಂತಹ ಕಾರ್ಯಗಳಲ್ಲಿ ತೊಡಗಿದ್ದಾರೆ. ಉಪರಾಜಾಂಘದ ಮುಂದೆ ಚಾಚಿಕೊಂಡಿರುವ ಭಾಗಗಳ ಮೇಲೆ ಎತ್ತರದ ಉಬ್ಬುಗಳಲ್ಲಿ ಕೆತ್ತಲಾದ ಕಾಮಪ್ರಚೋದಕ (ಮಿಥುನ) ಆಕೃತಿಗಳೂ ಇವೆ. ಇತರ ಅಲಂಕಾರಿಕ ಲಕ್ಷಣಗಳನ್ನು ವ್ಯಾಲ, ಜಾಗೃತ ಮತ್ತು ಗಜಕ್ರಾಂತದ ಆಕಾರದಲ್ಲಿ ಕೆತ್ತಲಾಗಿದೆ. ಸುರುಳಿ ವಿನ್ಯಾಸಗಳು ಎಲೆಗಳು, ಬಳ್ಳಿಗಳು ಮತ್ತು ವನಲತೆ ಬಗೆಯವು. ಪ್ರತಿಯೊಂದೂ ಯಾವುದೇ ಕಾಂಡ ಅಥವಾ ಬಳ್ಳಿಯಿಂದ ಮುಕ್ತವಾದ ಸೊಂಪಾದ ಎಲೆಗಳನ್ನು ಹೊಂದಿವೆ.[೧] ಇದು ಹಿಂದೂ ದೇವಾಲಯವಾಗಿದೆ.

ಧಾರ್ಮಿಕ ಮಹತ್ವ ಬದಲಾಯಿಸಿ

 
ಗರ್ಭಗುಡಿಯ ಗೋಡೆಗಳ ಮೇಲಿನ ಒಂದು ಶಿಲ್ಪ

ದೇವಾಲಯದ ಖುರಪೃಷ್ಠವನ್ನು (ಮೇಲಿನ ಸ್ತಂಭ) ದಳಗಳಿರುವ ಕಮಲದಂತೆ ಕೆತ್ತಲಾಗಿದೆ. ದೇವಾಲಯವು ಪ್ರಾಯಶಃ ವಿಷ್ಣುವಿಗೆ ಸಮರ್ಪಿತವಾಗಿದೆ ಎಂದು ಗಾಂಗುಲಿ ವರ್ಣಿಸಿದರು. ಭುವನೇಶ್ವರದಲ್ಲಿರುವ ಹೆಚ್ಚಿನ ಶಿವ ದೇವಾಲಯಗಳ ಹೆಸರುಗಳು "ಈಶ್ವರ" ದೊಂದಿಗೆ ಕೊನೆಗೊಳ್ಳುತ್ತವೆ - ಪರಶುರಾಮೇಶ್ವರ, ಬ್ರಹ್ಮೇಶ್ವರ ಮತ್ತು ಮಿತ್ರೇಶ್ವರ ಇತ್ಯಾದಿ. ಆದರೆ ರಾಜಾರಾನಿ ದೇವಸ್ಥಾನವು ಒಂದು ವಿಶಿಷ್ಟವಾದ ಹೆಸರನ್ನು ಹೊಂದಿದೆ ಮತ್ತು ಗರ್ಭಗುಡಿಯೊಳಗೆ ಯಾವುದೇ ದೇವತೆಯ ಮೂರ್ತಿಗಳನ್ನು ಹೊಂದಿಲ್ಲ. ಶೈವ ದ್ವಾರಪಾಲಕರ ಉಪಸ್ಥಿತಿಯಂತಹ ಶೈವ ಮೂಲವನ್ನು ಸೂಚಿಸುವ ದೇವಾಲಯದ ಕೆಲವು ವೈಶಿಷ್ಟ್ಯಗಳಿವೆ, ಪ್ರಚಂಡ ಹಾಗೂ ಚಂಡ, ಜಟಾಮುಖವಿರುವ ದ್ವಾರಪಾಲ ಮತ್ತು ತಲೆಬುರುಡೆಗಳ ಹಾರ ಹಾಗೂ ಹಾವು. ಏಕಮ್ರ ಪುರಾಣದ ಆಧಾರದ ಮೇಲೆ, ಈ ದೇವಾಲಯವನ್ನು ಮೂಲತಃ ಇಂದ್ರೇಶ್ವರ ಎಂದು ಕರೆಯಲಾಗುತ್ತಿತ್ತು ಮತ್ತು ಇದನ್ನು ಸಿದ್ಧೇಶ್ವರ ದೇವಾಲಯದ ಪೂರ್ವಕ್ಕೆ ನೆಲೆಗೊಳಿಸಲಾಗಿತ್ತು ಎಂದು ಕೆ.ಸಿ. ಪಾಣಿಗ್ರಾಹಿ ನಂಬುತ್ತಾರೆ.[೭] ತನ್ನ ಶಿಷ್ಯರೊಂದಿಗೆ ಶೈವ ಪಂಥದ ಪಾಶುಪಥ ಪಂಥದ ಸ್ಥಾಪಕನಾದ ಲಕುಲೀಶನ ವಿಗ್ರಹವು ಯೋಗಮುದ್ರದೊಂದಿಗೆ ಕುಳಿತಿರುವ ಭಂಗಿಯಲ್ಲಿ, ಜಗಮೋಹನದ ಉತ್ತರಂಗದಲ್ಲಿ ಕಂಡುಬರುತ್ತದೆ. ಲಕುಲೀಶನ ವಿಗ್ರಹಗಳ ಎರಡೂ ಬದಿಯಲ್ಲಿ ಎಂಟು ಗಡ್ಡವುಳ್ಳ ಯತಿಗಳ ವಿಗ್ರಹಗಳನ್ನು ಜೋಡಿಸಲಾಗಿದೆ. ಮುಖ್ಯ ದೇವಾಲಯದ ಮುಂಭಾಗದಲ್ಲಿ ಮೂರು ಫಲಕಗಳಿದ್ದು, ಇವು ಶಿವನು ತನ್ನ ಪತ್ನಿ ಪಾರ್ವತಿಯ ಜೊತೆಗೆ ಸಂಗೀತ ವಾದ್ಯಗಳನ್ನು ನುಡಿಸುತ್ತಿರುವ ಪರಿಚಾರಕರೊಂದಿಗೆ ನೃತ್ಯ ಮಾಡುತ್ತಿರುವ ವಿಗ್ರಹಗಳನ್ನು ತೋರಿಸುತ್ತವೆ. ಶಿವ ಮತ್ತು ಪಾರ್ವತಿಯರ ವಿವಾಹವನ್ನು ಚಿತ್ರಿಸುವ ಕೆತ್ತನೆಯು ಪಶ್ಚಿಮ ಭಾಗದಲ್ಲಿದೆ ಕೇಂದ್ರ ಕುಹರದ ಕೆಳಗೆ.[೧೩] ಪ್ರವೇಶದ್ವಾರದಲ್ಲಿ ನಾಗ ಮತ್ತು ನಾಗಿಣಿಯ ಉಪಸ್ಥಿತಿಯು ದೇವಾಲಯದೊಂದಿಗೆ ರಾಜ ಮತ್ತು ರಾಣಿಯರು ಸಂಬಂಧಹೊಂದಿದ್ದಾರೆ ಎಂಬ ಸ್ಥಳೀಯ ನಂಬಿಕೆಗೆ ಕಾರಣವಾಯಿತು. ಇದು ರಾಜಾರಾನಿ ಎಂಬ ಹೆಸರಿಗೆ ಕಾರಣವಾಯಿತು. ಆದರೆ ಈ ನಂಬಿಕೆಯನ್ನು ಇತಿಹಾಸಕಾರರು ಸ್ವೀಕರಿಸುವುದಿಲ್ಲ.[೭]

ಟಿಪ್ಪಣಿಗಳು ಬದಲಾಯಿಸಿ

  1. ೧.೦ ೧.೧ ೧.೨ ೧.೩ ೧.೪ "Rajarani Temple, Bhubaneswar". Archaeological Survey of India. Retrieved 2013-03-17.
  2. Smith 1994, p. 8
  3. Smith 1994, p. 15
  4. Smith 1994, p. 10
  5. Michell, George (1977). The Hindu Temple: An Introduction to Its Meaning and Forms. University of Chicago Press. p. 114. ISBN 9780226532301.
  6. Ghosh 1950, p. 26
  7. ೭.೦ ೭.೧ ೭.೨ ೭.೩ ೭.೪ Parida, A.N. (1999). Early Temples of Orissa (1st ed.). New Delhi: Commonwealth Publishers. pp. 97–101. ISBN 81-7169-519-1.
  8. Smith 1994, p. 123
  9. Ghosh 1950, pp. 21-22
  10. ೧೦.೦ ೧೦.೧ Ghosh 1950, p. 74
  11. ೧೧.೦ ೧೧.೧ ೧೧.೨ Jāvīd, ʻAlī; Javeed, Tabassum (2008). World Heritage Monuments. Algora Publishing. pp. 192–194. ISBN 9780875864846.
  12. Allen, Margaret Prosser (1991). Ornament in Indian Architecture. Associated University Press Inc. p. 207. ISBN 0-87413-399-8.
  13. Anand, Swami P.; Swami Parmeshwaranand (2004). Encyclopaedia of the Śaivism. New Delhi: Sarup & Sons. pp. 244–245. ISBN 81-7625-427-4.

ಉಲ್ಲೇಖಗಳು ಬದಲಾಯಿಸಿ

 

ಹೊರಗಿನ ಕೊಂಡಿಗಳು ಬದಲಾಯಿಸಿ

https://www.lingaraj-temple.com/rajarani-temple/ Archived 2019-06-04 ವೇಬ್ಯಾಕ್ ಮೆಷಿನ್ ನಲ್ಲಿ.