ಪುರಿಶ್ರೀ ಜಗನ್ನಾಥ ದೇವಾಲಯವು ಭಾರತದ ಪೂರ್ವ ಕರಾವಳಿಯ ಒಡಿಶಾ ರಾಜ್ಯದ ಪುರಿಯಲ್ಲಿ ವಿಷ್ಣುವಿನ ಒಂದು ರೂಪವಾದ ಜಗನ್ನಾಥನಿಗೆ ಸಮರ್ಪಿತವಾದ ಪ್ರಮುಖ ಹಿಂದೂ ದೇವಾಲಯವಾಗಿದೆ. ಪ್ರಸ್ತುತ ದೇವಾಲಯವನ್ನು 10 ನೇ ಶತಮಾನದಿಂದ ಹಿಂದಿನ ದೇವಾಲಯದ ಸ್ಥಳದಲ್ಲಿ ಪುನರ್ನಿರ್ಮಿಸಲಾಯಿತು ಮತ್ತು ಪೂರ್ವ ಗಂಗಾ ರಾಜವಂಶದ ಮೊದಲನೆಯ ರಾಜ ಅನಂತವರ್ಮನ್ ಚೋಡಗಂಗ ದೇವನಿಂದ ಪ್ರಾರಂಭಿಸಲಾಯಿತು. [೧]

 • ಪುರಿ ದೇವಾಲಯವು ವಾರ್ಷಿಕ ರಥಯಾತ್ರೆ ಅಥವಾ ರಥ ಉತ್ಸವಕ್ಕೆ ಹೆಸರುವಾಸಿಯಾಗಿದೆ, ಇದರಲ್ಲಿ ಮೂರು ಪ್ರಮುಖ ದೇವತೆಗಳನ್ನು ಬೃಹತ್ ಮತ್ತು ವಿಸ್ತಾರವಾಗಿ ಅಲಂಕರಿಸಿದ ದೇವಾಲಯದ ರಥಗಳ ಮೇಲೆ ಎಳೆಯಲಾಗುತ್ತದೆ. ಇವು "ಜಗ್ಗರ್‌ನಾಟ್" ಎಂಬ ಇಂಗ್ಲಿಷ್ ಪದಕ್ಕೆ ತಮ್ಮ ಹೆಸರನ್ನು ನೀಡಿವೆ. ಹೆಚ್ಚಿನ ಹಿಂದೂ ದೇವಾಲಯಗಳಲ್ಲಿ ಕಂಡುಬರುವ ಕಲ್ಲು ಮತ್ತು ಲೋಹದ ಪ್ರತಿಮೆಗಳಿಗಿಂತ ಭಿನ್ನವಾಗಿ, ಜಗನ್ನಾಥನ ಮೂರ್ತಿಯು ಮರದಿಂದ ಮಾಡಲ್ಪಟ್ಟಿದೆ ಮತ್ತು ಪ್ರತಿ ಹನ್ನೆರಡು ಅಥವಾ ಹತ್ತೊಂಬತ್ತು ವರ್ಷಗಳಿಗೊಮ್ಮೆ ಶಾಸ್ತ್ರೋಕ್ತವಾದ ಆಚರಣೆಯಿಂದ ನಿಖರವಾದ ಪ್ರತಿಕೃತಿಯಿಂದ ಬದಲಾಯಿಸಲಾಗುತ್ತದೆ. ಇದು ಚಾರ್‍ಧಾಮ್‍ನಲ್ಲಿ ಒಂದಾಗಿದೆ. [೨]
 • ಈ ವಿಧ್ಯುಕ್ತ ಸಂಪ್ರದಾಯದ ಹಿಂದಿನ ಕಾರಣ ರಹಸ್ಯವಾದದ್ದು "ನವಕಲೆವರ" ('ಹೊಸ ದೇಹ' ಅಥವಾ 'ಹೊಸ ಸಾಕಾರ'), ಸಮಾರಂಭದಲ್ಲಿ ಆಚರಣೆಗಳನ್ನು ಜಟಿಲ ಸೆಟ್ ಮರದ ಪ್ರತಿಮೆಗಳು ನವೀಕರಣವಾದದ್ದು. ದೇವಾಲಯವು ಅದರ ವಾರ್ಷಿಕ ರಥ ಯಾತ್ರೆ, ಅಥವಾ ರಥೋತ್ಸವಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯವು ವೈಷ್ಣವ ಸಂಪ್ರದಾಯಗಳಿಗೆ ಮತ್ತು ದೇವಾಲಯಕ್ಕೆ ಸಂಬಂಧಿಸಿದ ಸಂತ ರಮಾನಂದರಿಗೆ ಪವಿತ್ರವಾದದ್ದು. ಜಗನ್ನಾಥ ದೇವರನ್ನು ವಿಷ್ಣು ಅಥವಾ ನಾರಾಯಣನ ಅಥವಾ ಕೃಷ್ಣ ಎಮದು ಪೂಜಿಸಲಾಗುತ್ತದೆ. ವಿಷ್ನುವಿನ ಮಹಿಮೆಗಳಾಗಿ ಬಲಭದ್ರ(ಬಲರಾಮ),ಮತ್ತು ಸುಭದ್ರೆ ಮತ್ತು ಜಗನ್ನಾಥ ವಿಷ್ಣು ಎಂದು ಆರಾಧಿಸಲಾಗುತ್ತದೆ.
ಪುರಿ ಜಗನ್ನಾಥ ಟೆಂಪಲ್, ಪುರಿ, ಒಡಿಶಾ, ಇಂಡಿಯಾ, ಏಷ್ಯಾ
ಪುರಿಯ ಜಗನ್ನಾಥ ದೇವಾಲಯದ ಸಿಂಹ ದ್ವಾರ
 • ಮಧ್ವಾಚಾರ್ಯರು ಸೇರಿದಂತೆ ಹೆಸರಾಂತ ಅಚಾರ್ಯರೆಲ್ಲಾ ಈ ಕ್ಷೇತ್ರಕ್ಕೆ ಭೇಟಿ ನಿಡುತಿದ್ದರು ಎಂದು ತಿಳಿದುಬಂದಿದೆ. ಆದಿ ಶಂಕರ ಇಲ್ಲಿ ತನ್ನ ಗೋವರ್ಧನ ಮಠ ಸ್ಥಾಪಿಸಿದರು. ಗುರು ನಾನಕ್, ಕಬೀರ್, ತುಲಸಿದಾಸರು, ರಾಮಾನುಜಾಚಾರ್ಯರು, ಮತ್ತು ನಿಂರ್ಬಕಚಾರ್ಯರು ಈ ಸ್ಥಳಕ್ಕೆ ಭೇಟಿ ನಿಡುತಿದ್ದರೆಂಭ ಸಾಕ್ಷ್ಯಾಧಾರಗಳಿವೆ.ಗೌಡಿಯಾದ ವೈಷ್ಣವ ಶ್ರೀ ಚೈತನ್ಯ ಮಹಾಪ್ರಭು ಇಲ್ಲೆ ೨೪ ವರ್ಷಗಳ ಕಾಲ ತಂಗಿ,ಹರೇ ಕೃಷ್ಣ ಮಂತ್ರವನ್ನು ಪಠಿಸುವ ಮೂಲಕ ದೇವರ ಪ್ರೀತಿಯನ್ನು ಗಳಿಸಬಹುದೆಂಬುದನ್ನು ಸಾರುತ್ತಿದರು.
 • ಪವಿತ್ರ ದೇವಾಲಯಗಳೆಂದು ಪ್ರಸಿದ್ದಗೊಂಡ ರಾಮೇಶ್ವರಂ, ಬದರಿನಾಥ, ಪುರಿ ಮತ್ತು ದ್ವಾರಕಾ ದೇವಾಲಯಗಳ ಪೈಕಿ ಜಗನ್ನಾಥ ದೇವಾಲಯವು ಒಂದು.ದೊಡ್ಡ ದೇವಾಲಯದ ಸಂಕೀರ್ಣ ೪೦೦೦೦೦ ಚದರ ಅಡಿ (೩೭೦೦೦ ಮೀ ೨) ನಷ್ಟು ಪ್ರದೇಶವನ್ನು ಒಳಗೊಂಡಿದೆ.ದೇವಾಲಯ ಎಲ್ಲಾ ದಿಕ್ಕುಗಳಲ್ಲಿ ೪ ಪ್ರವೇಶಗಳನ್ನು ಹೊಂದಿದೆ.ದೇವಾಲಯವು ಬೆಳ್ಳಗೆ ೫ ಗಂಟೆಯಿಂದ ಮಧ್ಯರಾತ್ರಿ ೧೨ರವರಗೆ ತೆರೆದಿರುತ್ತದೆ.

ದೇವತೆಗಳು

ಬದಲಾಯಿಸಿ
 • 'ಜಗನ್ನಾಥ(ಕೃಷ್ಣ), ಬಲಭದ್ರ(ಬಲರಾಮ) ಮತ್ತು ಸುಭದ್ರಾ' ಇವು ದೇವಾಲಯದಲ್ಲಿ ಪೂಜಿಸುವ ಮೂವರು ದೇವತೆಗಳು. ಅಣ್ಣ ಬಲರಾಮ, ತಂಗಿ ಸುಭದ್ರೆಯೊಡನೆ ಜಗನ್ನಾಥ ಈ ಮೂರು ದೇವರುಗಳ ಪ್ರತಿಮೆಗಳು ದೇವಾಲಯದ ಒಳ ಗರ್ಭಗುಡಿಯಲ್ಲಿ ಇವೆ, ಇದನ್ನು ದಾರು ಎಂದು ಕರೆಯಲ್ಪಡುವ ಪವಿತ್ರ ಬೇವಿನ ಮರದ ತುಂಡುಗಳಿಂದ ಕೆತ್ತಲಾಗಿದೆ, ಇದನ್ನು ರತ್ನಖಚಿತ ಆಸನದ ಅಥವಾ ರತ್ನವೇದಿ ಮೇಲೆ ಕೂರಿಸಲಾಗುತ್ತದೆ, ಜೊತೆಗೆ ಸುದರ್ಶನ ಚಕ್ರ, ಮದನ್‌ಮೋಹನ್, ಶ್ರೀದೇವಿ ಮತ್ತು ವಿಶ್ವಾಧತ್ರಿ ಪ್ರತಿಮೆಗಳಿವೆ. ಋತುವಿಗೆ ಅನುಗುಣವಾಗಿ ದೇವತೆಗಳನ್ನು ವಿವಿಧ ಬಟ್ಟೆ ಮತ್ತು ಆಭರಣಗಳಿಂದ ಅಲಂಕರಿಸಲಾಗುವುದು.[೩][೪]
 • ಪುರಿಯ ಜಗನ್ನಾಥ ಒರಿಯಾ ಜನರ ಆರಾಧ್ಯ ದೈವ ಮತ್ತು ಅವರ ಆತ್ಮ ಬಂಧು. ಅಲ್ಲಿ ಜಗನ್ನಾಥ (ಕೃಷ್ಣ- ವಿಷ್ಣು) ತನ್ನ ಪತ್ನಿ ಲಕ್ಷ್ಮಿಯೊಡನೆ ಅಲ್ಲ, ಅದರ ಬದಲಿಗೆ ಅಣ್ಣ ಬಲರಾಮ, ಮತ್ತು ತನ್ನ ತಂಗಿ ಸುಭದ್ರೆಯೊಡನೆ ಪ್ರತಿಷ್ಠಾಪಿತನಾಗಿದ್ದಾನೆ. ಇವರ ಪ್ರತಿಮೆ ಮರದಿಂದ ಮಾಡಿದ್ದು; ಇವು ಕಿವಿ- ಕಾಲಿಲ್ಲದ, ಕಣ್ಣಿನ ಜಾಗದಲ್ಲಿ ದೊಡ್ಡ ವರ್ತುಲ ಮತ್ತು ಮುರಿದ ಕೈಗಳ ಮೂರ್ತಿಗಳು. ಆದರೆ, ಜನರಿಗೆ ಕರೆದಾಗ ಕಾಲಿಲ್ಲದಿದ್ದರೂ ಓಡಿಬರುವ, ಕಿವಿಯಿಲ್ಲದಿದ್ದರೂ ಆಲಿಸುವ, ಮುರಿದ ಕೈಯಿಂದಲೇ ಅಭಯ ನೀಡುವ, ಆರಾಧ್ಯ ದೈವ. ಜಗನ್ನಾಥನೆಂದರೆ ಭಕ್ತರಿಗೆ ಬಹಳ ಭಕ್ತಿ ಮತ್ತು ಪ್ರೀತಿ. [೫]
 • ಈ ದೇವಾಲಯವು ರಾಮೇಶ್ವರ, ಬದ್ರಿನಾಥ್, ಪುರಿ ಮತ್ತು ದ್ವಾರಕಾಗಳನ್ನು ಒಳಗೊಂಡಿರುವ ಪವಿತ್ರ ವೈಷ್ಣವ ಹಿಂದೂ ಚಾರ್ ಧಾಮ್ (ನಾಲ್ಕು ದೈವಿಕ ತಾಣಗಳು) ತಾಣಗಳಲ್ಲಿ ಒಂದಾಗಿದೆ.
 • ದೇವತೆಗಳ ಸುಂದರ ಚಿತ್ರ:[೧] Archived 2020-06-14 ವೇಬ್ಯಾಕ್ ಮೆಷಿನ್ ನಲ್ಲಿ.
 
ಜಗನ್ನಾಥ ಮಂದಿರದಲ್ಲಿ ತಾಯಿ ಮತ್ತು ಮಗು ಪ್ರತಿಮೆ

ದೇವತೆಗಳ ರಹಸ್ಯ ಬಂಧನ

ಬದಲಾಯಿಸಿ
 • ಬೇಸಿಗೆಯಲ್ಲಿ ಮೂರೂ ದೇವರಿಗೆ ತಣ್ಣೀರು ಸ್ನಾನ, ಮಾವಿಹಣ್ಣಿನ ನೇವೇದ್ಯ ಮಾಡುವರು. ಮಾನವರಿಗೆ ಬರುವಂತೆ ಈ ಸ್ನಾನದಿಂದ ಮೂರು ದೇವತೆಗಳಿಗೂ ತೀವ್ರವಾದ ಜ್ವರ, ನೆಗಡಿ ಬರುತ್ತದೆ ಎಂಬುದು ಜನರ ನಂಬಿಕೆ. ಹೀಗಾಗಿ ಜ್ವರ ಮತ್ತು ನೆಗಡಿ ಇರುವ ಮೂವರು ದೇವರನ್ನು, ಜನರಿಂದ ಹದಿನೈದು ದಿನಗಳ ಮಟ್ಟಿಗೆ ರಹಸ್ಯ ಸ್ಥಾನದಲ್ಲಿ ದೂರವಿರಿಸುತ್ತಾರೆ. ಆ ಸಮಯದಲ್ಲಿ ಜನರಿಗೆ ದೇವರ ದರ್ಶನವಿಲ್ಲ.
 • ಜನಜಂಗುಳಿಯಿರುವ ದೇಗುಲದಿಂದ ದೇವರನ್ನು ದೂರ ಕರೆದೊಯ್ದು "ಅಜ್ಞಾತವಾದ ಅನಾಸಾರ(ರಹಸ್ಯ) ಗೃಹದಲ್ಲಿ" ಪ್ರತ್ಯೇಕವಾಗಿ ಇಡಲಾಗುತ್ತದೆ. ಈ ಕೋಣೆಗೆ ನಿಗದಿತ ಪೂಜಾರಿಗಳಿಗೆ ಮಾತ್ರ ಪ್ರವೇಶವಿರುತ್ತದೆ. ಅಲ್ಲದೇ, ದೇಗುಲದ ವೈದ್ಯರು ಈ "ದೇವ ರೋಗಿಗಳ" ಶುಶ್ರೂಷೆ ಮಾಡುತ್ತಾನೆ.
 • ದೇವರ ಆಹಾರದ ವಿಷಯದಲ್ಲಿ ವೈದ್ಯರು ಬಹಳ ಕಟ್ಟುನಿಟ್ಟಾದ ಪಥ್ಯ ಮಾಡಿಸುವರು. ಬೇಯಿಸಿದ, ಕರಿದ ಆಹಾರವನ್ನು (ಅನ್ನ, ಮಸಾಲೆ , ಸಿಹಿ, ಹುಳಿ) ದೇವರಿಗೆ ಈ ಸಮಯದಲ್ಲಿ ನೈವೇದ್ಯಕ್ಕೆ ಇಡುವುದಿಲ್ಲ. ಅದರ ಬದಲು ನೀರು, ಗೊತ್ತಾದ ಹಣ್ಣುಗಳು ಮತ್ತು ಕಾಳು ಮೆಣಸು, ಲವಂಗ, ಸೋಂಪಿನ ಕಷಾಯ ಮಾತ್ರ ನೇವೇದ್ಯಮಾಡುವರು. ಎಳ್ಳೆಣ್ಣೆಗೆ ಶ್ರೀಗಂಧ, ಕರ್ಪೂರ, ಕೇತಕಿ-ಮಲ್ಲಿಗೆ ಹೂವು ಮತ್ತು ಔಷಧೀಯ ನಾರು- ಬೇರು ಸೇರಿಸಿ ‘ಫುಲುರಿ ತೇಲ’ ಎಂಬ ಮುಲಾಮನ್ನು ದೇವರಿಗೆ ಲೇಪಿಸಲಾಗುತ್ತದೆ. (ವೈಜ್ಞಾನಿಕವಾಗಿ ಇದು ಮರದ ಮೂರ್ತಿಗಳನ್ನು ಕೀಟಗಳಿಂದ ರಕ್ಷಿಸುತ್ತದೆ.) ಈ ಬಗೆಯ ಪಥ್ಯ ಮತ್ತು ಲೇಪನದ ನಂತರ ಕೊನೆಯಲ್ಲಿ ದೇವರ ಸಂಪೂರ್ಣ ಚೇತರಿಕೆಗೆ ನೆರವಾಗಲು ಔಷಧೀಯ ‘ದಶಮುಲಮೋದಕ’ಗಳನ್ನು ರಾಜವೈದ್ಯರು ನೀಡುತ್ತಾರೆ.
 • ಈ ಹದಿನೈದು ದಿನಗಳ "ಅನಾಸಾರದ" ನಂತರ ಆಷಾಢ ಅಮಾವಾಸ್ಯೆ ಕಳೆದಮೇಲೆ ಮೂವರೂ ದೇವರುಗಳು ಆರೋಗ್ಯವಂತರಾಗಿ ಮರಳಿ ಪುರಿಗೆ ಬರುತ್ತಾರೆ. ಆಗ ಭಕ್ತಾದಿಗಳಿಗೆ ‘ನವಜೌಬನ್’ ದರ್ಶನದ ಭಾಗ್ಯ! ಅಲ್ಲಿಯವರೆಗೆ ಪುರಿಯ ದೇವಸ್ಥಾನದಲ್ಲಿ ಪಟದ ಚಿತ್ರಗಳನ್ನು ಇಟ್ಟು ಪೂಜಿಸಲಾಗುತ್ತದೆ. ನೂರಾರು ವರ್ಷಗಳಿಂದ ನಡೆದು ಬಂದಿದೆ. ಈ ಸಂಪ್ರದಾಯವನ್ನು ಚಾಚೂತಪ್ಪದೇ ಒರಿಯಾ ಜನರು ನಂಬುತ್ತಾರೆ ಮತ್ತು ಪಾಲಿಸುತ್ತಾರೆ.[೬]

ದೇವಾಲಯದ ನಿರ್ಮಾಣದ ಇತಿಹಾಸ

ಬದಲಾಯಿಸಿ
 • ಕ್ರಿ.ಶ 12 ನೇ ಶತಮಾನದಲ್ಲಿ ಗಂಗಾ ರಾಜವಂಶದ ರಾಜ ಅನಂತವರ್ಮನ್ ಚೋಡಗಂಗ ಈ ದೇವಾಲಯವನ್ನು ನಿರ್ಮಿಸಿದನು, ಅವನ ವಂಶಸ್ಥ ನರಸಿಂಹದೇವ II ರ ಕೆಂಡುಪಟ್ನ ತಾಮ್ರ ಫಲಕದ ಶಾಸನವು ಸೂಚಿಸಿದಂತೆ. ಅನಂತವರ್ಮನ್ ಮೂಲತಃ ಶೈವನಾಗಿದ್ದನು ಮತ್ತು ಕ್ರಿ.ಶ 1112 ರಲ್ಲಿ ಉತ್ಕಲಾ ಪ್ರದೇಶವನ್ನು (ದೇವಾಲಯವು ಇದೆ) ವಶಪಡಿಸಿಕೊಂಡ ನಂತರ ಸ್ವಲ್ಪ ಸಮಯದ ನಂತರ ವೈಷ್ಣವನಾದನು. 1134–1135 ಸಿಇ ಶಾಸನವೊಂದು ದೇವಾಲಯಕ್ಕೆ ನೀಡಿದ ದೇಣಿಗೆಯನ್ನು ದಾಖಲಿಸುತ್ತದೆ. ಆದ್ದರಿಂದ, ದೇವಾಲಯದ ನಿರ್ಮಾಣವು ಕ್ರಿ.ಶ 1112 ರ ನಂತರ ಪ್ರಾರಂಭವಾಗಿರಬೇಕು.
 • ದೇವಾಲಯದ ವೃತ್ತಾಂತಗಳಲ್ಲಿನ ಒಂದು ಕಥೆಯ ಪ್ರಕಾರ, ಇದನ್ನು 'ಅನಂಗಭಿಮಾ-ದೇವಾನ II' ನು ಸ್ಥಾಪಿಸಿದರನು: ವಿಭಿನ್ನ ವೃತ್ತಾಂತಗಳು ನಿರ್ಮಾಣದ ವರ್ಷವನ್ನು 1196, 1197, 1205, 1216, ಅಥವಾ 1226 ಎಂದು ಉಲ್ಲೇಖಿಸುತ್ತವೆ. ಆಗ ದೇವಾಲಯದ ನಿರ್ಮಾಣ ಪೂರ್ಣಗೊಂಡಿದೆ ಅಥವಾ ಅನಂತವರ್ಮನ ಮಗ ಅನಂಗಭಿಮಾ ಆಳ್ವಿಕೆಯಲ್ಲಿ ದೇವಾಲಯವನ್ನು ನವೀಕರಿಸಲಾಗಿದೆ ಎಂದು ಇದು ಸೂಚಿಸುತ್ತದೆ. ಗಂಗಾ ರಾಜವಂಶ ಮತ್ತು ಸೂರ್ಯವಂಶಿ (ಗಜಪತಿ) ರಾಜವಂಶವನ್ನು ಒಳಗೊಂಡಂತೆ ನಂತರದ ರಾಜರ ಆಳ್ವಿಕೆಯಲ್ಲಿ ದೇವಾಲಯ ಸಂಕೀರ್ಣವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಯಿತು. [೭]

ಸ್ಥಳಪುರಾಣ

ಬದಲಾಯಿಸಿ

ದೇವಾಲಯ ಮೂಲದ ದಂತಕಥೆ

ಬದಲಾಯಿಸಿ
 • ದಂತಕಥೆಯ ಪ್ರಕಾರ, ಮೊದಲ ಜಗನ್ನಾಥ ದೇವಾಲಯದ ನಿರ್ಮಾಣವನ್ನು ಭರತ ಮತ್ತು ಸುನಂದನ ಮಗ ರಾಜ ಇಂದ್ರದ್ಯುಮ್ನ ಮತ್ತು ಮಹಾಭಾರತ ಮತ್ತು ಪುರಾಣಗಳಲ್ಲಿ ಉಲ್ಲೇಖಿಸಲಾದ ಮಾಳವ ರಾಜನು ನಿರ್ಮಿಸಿದನು. [10]
 • ಸ್ಕಂದ-ಪುರಾಣ, ಬ್ರಹ್ಮ ಪುರಾಣ ಮತ್ತು ಇತರ ಪುರಾಣಗಳಲ್ಲಿ ಮತ್ತು ನಂತರದ ಓಡಿಯಾ ಕೃತಿಗಳಲ್ಲಿ ಕಂಡುಬರುವ ಪೌರಾಣಿಕ ವೃತ್ತಾಂತವು, ಭಗವಾನ್ ಜಗನ್ನಾಥನನ್ನು ಮೂಲತಃ ಭಗವಾನ್ ನೀಲಾ ಮಾಧವ ಎಂದು ಪೂಜಿಸಲಾಗಿದ್ದು, ವಿಶ್ವವಾಸು ಎಂಬ ಸಾವರ್ ರಾಜನು (ಬುಡಕಟ್ಟು ಮುಖ್ಯಸ್ಥ) ದೇವತೆಯನ್ನು ಪೂಜಿಸುವ ಬಗ್ಗೆ ಕೇಳಿದ ರಾಜ ಇಂದ್ರದ್ಯುಮ್ನನು ದೇವಿಯನ್ನು ಪತ್ತೆ ಹಚ್ಚಲು ವಿದ್ಯಾಪತಿ ಎಂಬ ಬ್ರಾಹ್ಮಣ ಪುರೋಹಿತನನ್ನು ಕಳುಹಿಸಿದನು. ವಿಶ್ವಾವಸು ದಟ್ಟ ಕಾಡಿನಲ್ಲಿ ರಹಸ್ಯವಾಗಿ ಜಗನ್ನಾಥನನ್ನು ಪೂಜಿಸುತ್ತಿದ್ದನು. ವಿದ್ಯಾಪತಿ ತನ್ನ ಅತ್ಯುತ್ತಮ ಪ್ರಯತ್ನ ಮಾಡಿದರೂ ಸ್ಥಳವನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಆದರೆ ಕೊನೆಗೆ ಅವನು ವಿಶ್ವವಾಸುವಿನ ಮಗಳು ಲಲಿತಾಳನ್ನು ಮದುವೆಯಾಗಲು ಯಶಸ್ವಿಯಾದರು. ಅಳಿಯ ವಿದ್ಯಾಪತಿಯ ಪುನರಾವರ್ತಿತ ಕೋರಿಕೆಯ ಮೇರೆಗೆ ವಿಶ್ವಾವಸು ತನ್ನ ಅಳಿಯನನ್ನು ಕಣ್ನಿಗೆ ಬಟ್ಟೆಕಟ್ಟಿ ದಾರಿಕಾಣದಂತೆ ಗುಹೆಯೊಂದಕ್ಕೆ ಕರೆದೊಯ್ದು ಭಗವಾನ್ ನೀಲಾ ಮಾಧಾಬನನ್ನು ಪೂಜಿಸುತ್ತಿದ್ದ ಸ್ಥಳಕ್ಕೆ ಕರೆದೊಯ್ದನು.
 • ವಿದ್ಯಾಪತಿ ಬಹಳ ಬುದ್ಧಿವಂತ. ಅವನು ಅಲ್ಲಿಗೆ ಹೋಗುವಾಗ ಸಾಸಿವೆ ಬೀಜಗಳನ್ನು ದಾರಿಯಲ್ಲಿ ನೆಲದ ಮೇಲೆ ಬೀಳಿಸಿದ್ದನು. ಕೆಲವು ದಿನಗಳ ನಂತರ ಬೀಜಗಳು ಮೊಳಕೆಯೊಡೆದವು, ನಂತರ ಗುಹೆಯನ್ನು ಕಂಡುಹಿಡಿಯಲು ಅವನಿಗೆ ಸಾಧ್ಯವಾಯಿತು. ಅವನ ಮಾತು ಕೇಳಿದ ರಾಜ ಇಂದ್ರದ್ಯುಮ್ನನು ದೇವತೆಯನ್ನು ನೋಡಲು ಮತ್ತು ಪೂಜಿಸಲು ತೀರ್ಥಯಾತ್ರೆಯಲ್ಲಿ ತಕ್ಷಣ ಓಡ್ರಾ ದೇಶಕ್ಕೆ (ಒಡಿಶಾ) ತೆರಳಿದನು. ಆದರೆ ದೇವತೆ ಕಣ್ಮರೆಯಾಯಿತು. ರಾಜನು ನಿರಾಶೆಗೊಂಡನು. ದೇವತೆಯನ್ನು ಮರಳಿನಲ್ಲಿ ಮರೆಮಾಡಲಾಗಿತ್ತು. ದೇವತೆಯ ದರ್ಶನವಿಲ್ಲದೆ ಹಿಂದಿರುಗಬಾರದೆಂದು ರಾಜನು ದೃಢವಾಗಿ ನಿಶ್ಚಯಿಸಿದನು ಮತ್ತು ನೀಲ ಪರ್ವತದಲ್ಲಿ ಸಾಯುವವರೆಗೆ ಉಪವಾಸವನ್ನು ಆಚರಿಸಿದನು, ಆಗ ಒಂದು ಆಕಾಶವಾಣಿಯು 'ನೀನು ಅವನನ್ನು ನೋಡಬಲ್ಲೆ' ಎಂದು ಕೂಗಿತು. ನಂತರ ರಾಜನು ಅಶ್ವಮೇದ ಯಜ್ಞವನ್ನು ಮಾಡಿ ವಿಷ್ಣುವಿಗೆ ಭವ್ಯವಾದ ದೇವಾಲಯವನ್ನು ನಿರ್ಮಿಸಿದನು. ನಾರದರು ತಂದ ಶ್ರೀ ನರಸಿಂಹ ಮೂರ್ತಿಯನ್ನು ದೇವಸ್ಥಾನದಲ್ಲಿ ಸ್ಥಾಪಿಸಲಾಯಿತು. ನಿದ್ರೆಯ ಸಮಯದಲ್ಲಿ ರಾಜನಿಗೆ ಭಗವಾನ್ ಜಗನ್ನಾಥನ ದರ್ಶನವಿತ್ತು. ಕಡಲತೀರದ ಪರಿಮಳಯುಕ್ತ ಮರವನ್ನು ಸ್ವೀಕರಿಸಲು ಮತ್ತು ಅದರಿಂದ ವಿಗ್ರಹಗಳನ್ನು ತಯಾರಿಸಲು ಆಕಾಶವಾಣಿಯ ಧ್ವನಿಯೊಂದು ಅವನಿಗೆ ನಿರ್ದೇಶನ ನೀಡಿತು. ಅದರಂತೆ ರಾಜನು ದೈವಿಕ ಮರದ ಮರದಿಂದ ಮಾಡಿದ ಭಗವಾನ್ ಜಗನ್ನಾಥ, ಬಾಲಭದ್ರ, ಸುಭದ್ರಾ ಮತ್ತು ಸುದರ್ಶನ ಚಕ್ರವನ್ನು ಪಡೆದುಕೊಂಡು ದೇವಾಲಯದಲ್ಲಿ ಸ್ಥಾಪಿಸಿದನು.[೮]

ಭಗವಾನ್ ಬ್ರಹ್ಮನಿಗೆ ಇಂದ್ರದ್ಯುಮ್ನನ ಪ್ರಾರ್ಥನೆ

ಬದಲಾಯಿಸಿ
 • ರಾಜ ಇಂದ್ರದ್ಯುಮ್ನನು ಜಗನ್ನಾಥನಿಗೆ ವಿಶ್ವದ ಅತಿ ಎತ್ತರದ ಸ್ಮಾರಕವನ್ನು ನಿರ್ಮಿಸಿದನು. ಅದು 1,000 ಮೊಳ ಎತ್ತರವಾಗಿತ್ತು. ಅವನು ವಿಶ್ವ ಸೃಷ್ಟಿಕರ್ತ ಭಗವಾನ್ ಬ್ರಹ್ಮನನ್ನು ದೇವಾಲಯ ಮತ್ತು ಮೂರ್ತಿಗಳನ್ನು ಪವಿತ್ರಗೊಳಿಸಲು ಪಾರ್ಥಿಸಿದನು. ಈ ಉದ್ದೇಶಕ್ಕಾಗಿ ಬ್ರಹ್ಮನು ಸ್ವರ್ಗದಿಂದ ಬಂದನು. ದೇವಾಲಯವನ್ನು ನೋಡಿದಾಗ ಅವನಿಗೆ ಅಪಾರ ಸಂತೋಷವಾಯಿತು. ವಿಷ್ಣುವಿಗೆ ಅತ್ಯಂತ ಸುಂದರವಾದ ದೇವಾಲಯವನ್ನು ನಿರ್ಮಿಸಿದ್ದಕ್ಕಾಗಿ ಅವನಿಗೆ (ಬ್ರಹ್ಮ) ಯಾವ ರೀತಿಯಲ್ಲಿ ರಾಜನ ಆಸೆಯನ್ನು ಈಡೇರಿಸಬಹುದು ಎಂದು ಬ್ರಹ್ಮ ಇಂದ್ರದ್ಯುಮ್ನನನ್ನು ಕೇಳಿದನು. ಮಡಿಸಿದ ಕೈಗಳಿಂದ, ಇಂದ್ರದ್ಯುಮ್ನ, "ನನ್ನ ಪ್ರಭು, ನೀವು ನಿಜವಾಗಿಯೂ ನನ್ನ ಬಗ್ಗೆ ಸಂತಸಪಟ್ಟರೆ, ದಯೆಯಿಂದ ನನ್ನನ್ನು ಒಂದು ವಿಷಯದಿಂದ ಆಶೀರ್ವದಿಸಿರಿ, ಮತ್ತು ನಾನು ಸಮಸ್ಯೆಯಿಲ್ಲದವನಾಗಿರಬೇಕು ಮತ್ತು ನನ್ನ ಕುಟುಂಬದ ಕೊನೆಯ ಸದಸ್ಯನಾಗಿರಬೇಕು" ಎಂದು ಹೇಳಿದರು. ಅವನ ನಂತರ ಯಾರಾದರೂ ಜೀವಂತವಾಗಿ ಉಳಿದಿದ್ದರೆ, ಅವರು ದೇವಾಲಯದ ಮುಖ್ಯಸ್ಥರಾಗಿ ಮಾತ್ರ ಹೆಮ್ಮೆ ಪಡುವವರಾಗಬೇಕು ಮತ್ತು ಸಮಾಜಿಕ ಕೆಲಸ ಮಾಡುವವರಾಗಬಾರು.[೯]

ದೇವಾಲಯದ ಮೂಲದ ಸುತ್ತಲಿನ ದಂತಕಥೆ

ಬದಲಾಯಿಸಿ
 • ಭಗವಾನ್ ಜಗನ್ನಾಥ ದೇವಾಲಯದ ಉಗಮಕ್ಕೆ ಸಂಬಂಧಿಸಿದ ಸಾಂಪ್ರದಾಯಿಕ ಕಥೆ ಏನೆಂದರೆ, ತ್ರೇತಾಯುಗದ ಕೊನೆಯಲ್ಲಿ ಜಗನ್ನಾಥನ (ವಿಷ್ಣುವಿನ ದೇವ ರೂಪ) ಮೂಲ ಚಿತ್ರವು ಆಲದ ಮರದ ಬಳಿ, ಕಡಲತೀರದ ಬಳಿ ಇಂದ್ರನೀಲ ಮಣಿ ಅಥವಾ ನೀಲಿಹರಳಿನ ರೂಪದಲ್ಲಿ ವ್ಯಕ್ತವಾಗಿತ್ತು. ಅದು ತ್ವರಿತವಾಗಿ ಮೋಕ್ಷವನ್ನು ನೀಡುವಷ್ಟು ಪ್ರಕಾಶಮಾನವಾಗಿತ್ತು. ಆದ್ದರಿಂದ ದೇವ ಧರ್ಮನು ಅಥವಾ ಯಮಧರ್ಮನು ಅದನ್ನು ಭೂಮಿಯ ಅಡಿಯಲ್ಲಿ ಮರೆಮಾಡಲು ಬಯಸಿದನು ಮತ್ತು ಯಶಸ್ವಿಯಾದನು. ದ್ವಾಪರ ಯುಗದಲ್ಲಿ ಮಾಲ್ವಾದ ರಾಜ ಇಂದ್ರದ್ಯುಮ್ನನು ಆ ಅದ್ಭುತ ನೀಲವನ್ನು ಕಂಡುಹಿಡಿಯಲು ಬಯಸಿದನು; ಹಾಗೆ ಮಾಡಲು ಮತ್ತು ಅವನು ತನ್ನು ಗುರಿಯನ್ನು ಪಡೆಯಲು ಕಠಿಣ ತಪಸ್ಸು ಮಾಡಿದನು. ನಂತರ ವಿಷ್ಣುವು ಪ್ರ್ಯಕ್ಷನಾಗಿ ಅವನಿಗೆ ಪುರಿ ಸಮುದ್ರ ತೀರಕ್ಕೆ ಹೋಗಿ ಅಲ್ಲಿ ತೇಲುವ ಮರದ ಕಾಂಡವನ್ನು ಹುಡುಕುವಂತೆ ಮತ್ತು ಅದರಿಂದ ಒಂದು ಮೂರ್ತಿಯನ್ನು ಮಾಡಲು ಸೂಚಿಸಿದನು.
 • ರಾಜನು ಮರದ ತುಂಡನ್ನು ಕಂಡುಕೊಂಡನು. ಅವನು ಒಂದು ಯಜ್ಞವನ್ನು ಮಾಡಿದನು, ಆ ಯಜ್ಞದಿಂದ ನೃಸಿಂಹನು ದೇವನು ಕಾಣಿಸಿಕೊಂಡನು ಮತ್ತು ಅವನು ನಾರಾಯಣನ ನಾಲ್ಕು ವಿಭಾಗವಾಗಿ ವಿಸ್ತರಿಸಬೇಕೆಂದು ಸೂಚಿಸಿದನು, ಅಂದರೆ ಪರಮಾತ್ಮನು ವಾಸುದೇವನಾಗಿ, ಅವನ ವ್ಯೂಹವು ಸಂಕರ್ಷಣನಾಗಿ, ಯೋಗಮಾಯೆಯನ್ನು ಸುಭದ್ರಾಳಂತೆ, ಮತ್ತು ಅವನ ವೈಭವವನ್ನು(ಆಯುಧ) ಸುದರ್ಶನವಾಗಿ ವಿಸ್ತರಿಸಿ ಮೂರ್ತಿಗಳನ್ನು ಮಾಡಲು ಸೂಚಿಸಿದನು. ವಿಶ್ವಕರ್ಮನು ಕುಶಲಕರ್ಮಿಯ ರೂಪದಲ್ಲಿ ಕಾಣಿಸಿಕೊಂಡರು ಮತ್ತು ಆ ಮರದಿಂದ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ಅವರ ಮೂರ್ತಿಗಳನ್ನು ಸಿದ್ಧಪಡಿಸಿದರು. [೧೦]

ಮತ್ತೊಂದು ಕಥೆ

ಬದಲಾಯಿಸಿ
 • ಪುರಿ ಸಮುದ್ರ ತೀರದಲ್ಲಿ ಆಮರದ ತುಂಡು ಪ್ರಕಾಶದೊಂದಿಗೆ ಸಮುದ್ರದಲ್ಲಿ ತೇಲುತ್ತಿರುವುದನ್ನು ನಾರದನು ಕಂಡಾಗ, ಅವನು ರಾಜನಿಗೆ ಅದರಿಂದ ಮೂರು ವಿಗ್ರಹಗಳನ್ನು ತಯಾರಿಸಿ ದೇವಾಲಯದ ಮಂಟಪದಲ್ಲಿ ಇಡುವಂತೆ ಹೇಳಿದನು. ವಿಗ್ರಹಗಳನ್ನು ನಿರ್ಮಿಸಲು ಭವ್ಯವಾದ ದೇವಾಲಯವನ್ನು ನಿರ್ಮಿಸಲು ದೇವತೆಗಳ ವಾಸ್ತುಶಿಲ್ಪಿ ವಿಶ್ವಕರ್ಮನನ್ನು ಇಂದ್ರದ್ಯುಮ್ನನು ಕರೆಸಿದನು. ವಿಷ್ಣುವು ಸ್ವತಃ ಕಮ್ಮಾರನ (ಮರಗೆಲಸದ ಬಡಗಿ)ವೇಷದಲ್ಲಿ ಬಂದು ವಿಗ್ರಹಗಳನ್ನು ತಯಾರಿಸಲು ಒಪ್ಪಿದನು. ಆದರೆ ಅವನು ತನ್ನ ಮೂರ್ತಿಗಳನ್ನು ಮಾಡುವ ಕೆಲಸ ಮುಗಿಯುವವರೆಗೂ ಆತನನ್ನು ಯಾರೂ ದೇವಾಲಯದಲ್ಲಿ ಪ್ರವೇಶಿಸಿ ಕೆಲಸಕ್ಕೆ ಭಂಗತರಬಾರದು ಎಂಬ ನಿಯಮ ವಿಧಿಸಿದನು.
 • ಆದರೆ ಎರಡು ವಾರಗಳ ನಂತರ, ರಾಣಿ ತುಂಬಾ ಆತಂಕಕ್ಕೊಳಗಾದಳು. ದೇವಾಲಯದಿಂದ ಯಾವುದೇ ಶಬ್ದ ಬರದ ಕಾರಣ ಅವಳು ಬಡಗಿ ಸತ್ತಿದ್ದಾನೆ ಎಂದು ಭಾವಿಸಿದಳು. ಆದ್ದರಿಂದ, ಅವಳು ದೇವಾಲಯದ ಬಾಗಿಲು ತೆರೆಯುವಂತೆ ರಾಜನನ್ನು ವಿನಂತಿಸಿದಳು. ಹೀಗಾಗಿ, ಅವರು 'ಬಡಗಿಯನ್ನು (ವಿಷ್ಣುವನ್ನು) ಕೆಲಸದಲ್ಲಿ ತೊಡಗಿರುವನೋ ಇಲ್ಲವೋ, ಏನಾದನೋ' ಎಂದು ನೋಡಲು ಹೋದರು. ಅವರು ಕೆಲಸದ ಮಧ್ಯೆ ಮಾತಿಗೆ ತಪ್ಪಿ ಬಂದುದರಿಂದ ವಿಷ್ಣುದೇವನು ಮೂರ್ತಿಯ ಕೆಲಸವನ್ನು ಅಪೂರ್ಣವಾಗಿ ಬಿಟ್ಟು ಹೋದನು.. ವಿಗ್ರಹಗಳ ಕೈಗಳ ಹಸ್ತಗಳೇ ಇರಲಿಲ್ಲ. ಆದರೆ ದೈವಿಕ ಧ್ವನಿಯೊಂದು ಇಂದ್ರದ್ಯುಮ್ನನಿಗೆ ದೇವಾಲಯದಲ್ಲಿ ಆ ಮೂರ್ತಿಗಳನ್ನು ಸ್ಥಾಪಿಸುವಂತೆ ಹೇಳಿತು. ವಿಗ್ರಹವು ಕೈಗಳಿಲ್ಲದಿದ್ದರೂ, ಅದು ಪ್ರಪಂಚವನ್ನು ಗಮನಿಸಬಹುದು ಮತ್ತು ಅದರ ಅಧಿಪತಿಯಾಗಬಹುದು ಎಂದು ವ್ಯಾಪಕವಾಗಿ ನಂಬಲಾಗಿದೆ. ಹೀಗೆ ಮೂರ್ತಿ ಸಾಂಕೇತಿಕವಾಗಿದೆ. [೧೧]

ದೇವಾಲಯದ ಮೇಲೆ ಆಕ್ರಮಣಗಳು ಮತ್ತು ಅಪವಿತ್ರಗೊಳಿಸುವಿಕೆ

ಬದಲಾಯಿಸಿ
 • ಪುರಿಯ ಜಗನ್ನಾಥ ದೇವಾಲಯವನ್ನು ಹದಿನೆಂಟು ಬಾರಿ ಆಕ್ರಮಿಸಿ ಲೂಟಿ ಮಾಡಲಾಗಿದೆ ಎಂದು ದೇವಾಲಯದ ವಾರ್ಷಿಕೋತ್ಸವಗಳು, ಮಾದಲ ಪಂಜಿ ದಾಖಲೆಗಳು ಹೇಳುತ್ತವೆ. 1692 ರಲ್ಲಿ, ಮೊಘಲ್ ಚಕ್ರವರ್ತಿ ಔರಂಗಜೇಬ್‍ನು ದೇವಾಲಯವನ್ನು ತಾನು ಮತ್ತೆ ತೆರೆಯಲು ಬಯಸುವವರೆಗೂ ಅದನ್ನು ಮುಚ್ಚುವಂತೆ ಆದೇಶಿಸಿದನು, ಇಲ್ಲದಿದ್ದರೆ ಅದನ್ನು ನೆಲಸಮ ಮಾಡಲಾಗುವುದು ಎಂದನು. ಈ ಕೆಲಸವನ್ನು ನಿರ್ವಹಿಸಲು ಬಂದ ಸ್ಥಳೀಯ ಮೊಘಲ್ ಅಧಿಕಾರಿಗಳನ್ನು ಸ್ಥಳೀಯರು ನಾಶಮಾಡದಂತೆ ಕೋರಿದರು ಮತ್ತು ದೇವಾಲಯವನ್ನು ಮುಚ್ಚಲಾಯಿತು. 1707 ರಲ್ಲಿ ಔರಂಗಜೇಬನ ಮರಣದ ನಂತರವೇ ಅದನ್ನು ಪುನಃ ತೆರೆಯಲಾಯಿತು[೧೨]

ಜಾತ್ರೆ

ಬದಲಾಯಿಸಿ
 • ಜಗನ್ನಾಥ ತ್ರಿಮೂರ್ತಿಗಳನ್ನು ಸಾಮಾನ್ಯವಾಗಿ ಪುರಿಯಲ್ಲಿರುವ ದೇವಾಲಯದ ಗರ್ಭಗೃಹದಲ್ಲಿ ಪೂಜಿಸಲಾಗುತ್ತದೆ. ಆದರೆ ಒಮ್ಮೆ ಆಷಾಢಮಾಸದಲ್ಲಿ (ಒರಿಸ್ಸಾದ ಮಳೆಗಾಲ, ಸಾಮಾನ್ಯವಾಗಿ ಜೂನ್ ಅಥವಾ ಜುಲೈ ತಿಂಗಳಲ್ಲಿ ಬೀಳುತ್ತದೆ), ಅವುಗಳನ್ನು ಬಡಾ ದಂಡ ಎಂದು ಪುರಿಯ ಕರೆಯುವ ಮುಖ್ಯ ಬೀದಿಯಲ್ಲಿ ರಥದ ಯಾತ್ರೆ ನೆಡೆದು 3 ಕಿ.ಮೀ. ದೂರದ ಶ್ರೀ ಗುಂಡಿಚಾ ದೇವಸ್ಥಾನಕ್ಕೆ ಬೃಹತ್ ರಥಗಳಲ್ಲಿ ಪ್ರಯಾಣಿಸಿ, ಸಾರ್ವಜನಿಕರಿಗೆ ದರ್ಶನ (ಪವಿತ್ರ ನೋಟ) ಹೊಂದಲು ಅನುವು ಮಾಡಿಕೊಡುತ್ತದೆ. ಈ ಹಬ್ಬವನ್ನು ರಥಯಾತ್ರೆ ಎಂದು ಕರೆಯಲಾಗುತ್ತದೆ, ಇದರರ್ಥ ರಥಗಳ ಪ್ರಯಾಣ (ಯಾತ್ರೆ). ರಥಗಳು ಬೃಹತ್ ಚಕ್ರದ ಮರದ ರಚನೆಗಳಾಗಿವೆ, ಇವುಗಳನ್ನು ಪ್ರತಿವರ್ಷ ಹೊಸದಾಗಿ ನಿರ್ಮಿಸಲಾಗುತ್ತದೆ ಮತ್ತು ಅವಯಗಳನ್ನು ಭಕ್ತರು ಎಳೆಯುತ್ತಾರೆ. ಜಗನ್ನಾಥನ ರಥವು ಸರಿಸುಮಾರು 45 ಅಡಿ ಎತ್ತರ ಮತ್ತು 35 ಚದರಅಡಿಯ ನಿರ್ಮಾನ. ಅದರ ನಿರ್ಮಾಣಕ್ಕೆ ಸುಮಾರು 2 ತಿಂಗಳು ತೆಗೆದುಕೊಳ್ಳುತ್ತದೆ. ಪುರಿಯ ಕಲಾವಿದರು ಮತ್ತು ವರ್ಣಚಿತ್ರಕಾರರು ರಥಗಳನ್ನು ಅಲಂಕರಿಸುತ್ತಾರೆ ಮತ್ತು ಚಕ್ರದ ಮೇಲೆ ಹೂವಿನ ದಳಗಳು ಮತ್ತು ಇತರ ವಿನ್ಯಾಸಗಳನ್ನು ಚಿತ್ರಿಸುತ್ತಾರೆ, ಮರದಿಂದ ಕೆತ್ತಿದ ರಥ ಮತ್ತು ಕುದುರೆಗಳು ಮತ್ತು ಸಿಂಹಾಸನದ ಹಿಂಭಾಗದ ಗೋಡೆಯ ಮೇಲೆ ತಲೆಕೆಳಗಾದ ಕಮಲಗಳನ್ನು ರಚಿಸುವರು. ರಥಯಾತ್ರೆಯಲ್ಲಿ ಎಳೆದ ಜಗನ್ನಾಥನ ಬೃಹತ್ ರಥಗಳು ಜಗ್ಗರ್‌ನೌಟ್ (ಒಂದು ದೊಡ್ಡದು, ಶಕ್ತಿಯುತ ಮತ್ತು ಅಗಾಧ ಶಕ್ತಿ.)ಎಂಬ ಇಂಗ್ಲಿಷ್ ಪದದ ವ್ಯುತ್ಪತ್ತಿಯ ಮೂಲವಾಗಿದೆ. ರಥ-ಯಾತ್ರೆಯನ್ನು ಶ್ರೀ ಗುಂಡಿಚ ಯಾತ್ರೆ ಎಂದೂ ಕರೆಯುತ್ತಾರೆ.[೧೩]

2020 ರ ರಥಯಾತ್ರೆಗೆ ‘ಸುಪ್ರೀಂ’ ತಡೆ

ಬದಲಾಯಿಸಿ
 • ‘ಕೋವಿಡ್‌-19 ವ್ಯಾಪಿಸಿರುವ ಇಂತಹ ಸಂದರ್ಭದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರುವುದಕ್ಕೆ ಅವಕಾಶ ನೀಡಿದರೆ ಜಗನ್ನಾಥ ದೇವರು ಸಹ ನಮ್ಮನ್ನು ಕ್ಷಮಿಸುವುದಿಲ್ಲ’ ಎಂದು ಹೇಳಿ, 2020ರ ಪುರಿ ಜಾತ್ರೆಗೆ ಸುಪ್ರೀಂಕೋರ್ಟ್‍ ಮುಖ್ಯನ್ಯಾಯಮೂರ್ತಿ ಬೊಬಡೆ ಜಾತ್ರೆಗೆ ತಡೆ ನೀಡಿದರು. ಈ 2020 ವರ್ಷದ ರಥಯಾತ್ರೆಯನ್ನು ರದ್ದುಪಡಿಸಬೇಕು ಇಲ್ಲವೇ ಮುಂದೂಡುವಂತೆ ನಿರ್ದೇಶನ ನೀಡುವಂತೆ ಕೋರಿ ಸ್ವಯಂ ಸೇವಾ ಸಂಸ್ಥೆಯೊಂದು ಸುಪ್ರೀಂಕೋರ್ಟ್‌ಗೆ ಪಿಐಎಲ್‌ ಸಲ್ಲಿಸಿತ್ತು[೧೪]
 • ಹಿಂದಿನಜಾತ್ರೆ[೨] Archived 2020-06-26 ವೇಬ್ಯಾಕ್ ಮೆಷಿನ್ ನಲ್ಲಿ.

‘ಸುಪ್ರೀಂ’ ತಡೆಗೆ ತೆರವು; ರಥಯಾತ್ರೆಗೆ ಷರತ್ತುಬದ್ಧ ಅನುಮತಿ

ಬದಲಾಯಿಸಿ

ಕೊರೊನಾವೈರಸ್ ಸೋಂಕು ಹರಡುವಿಕೆಯ ನಡುವೆಯೂ ಜಗತ್ಪ್ರಸಿದ್ಧವಾಗಿರುವ ಒಡಿಶಾದ ಪುರಿ ಜಗನ್ನಾಥ ರಥಯಾತ್ರೆ ನಡೆಸುವುದಕ್ಕೆ 2020 ಜೂನ್.22ರಂದು ಸುಪ್ರೀಂಕೋರ್ಟ್ ಷರತ್ತುಬದ್ಧ ಅನುಮತಿ ನೀಡಿತು. ಪುರಿಯ ಜಗನ್ನಾಥ ಮಂದಿರದಲ್ಲಿ ಮಾತ್ರ ರಥ ಯಾತ್ರೆ ನಡೆಸಲು ಅನುಮತಿ ನೀಡಿರುವ ಸುಪ್ರೀಂಕೋರ್ಟ್, ರಾಜ್ಯದ ಬೇರೆಲ್ಲೂ ರಥಯಾತ್ರೆ ನಡೆಸುವಂತಿಲ್ಲ ಎಂದು ಆದೇಶಿಸಿತು.

 • ಷರತ್ತು: ರಥಯಾತ್ರೆಯ ಸಂದರ್ಭದಲ್ಲಿ 500ಕ್ಕಿಂತ ಹೆಚ್ಚು ಭಕ್ತರಿಗೆ ಅವಕಾಶ ನೀಡುವಂತಿಲ್ಲ. ಎರಡು ರಥಯಾತ್ರೆಯ ಮಧ್ಯೆ ಕನಿಷ್ಠ 1 ಗಂಟೆ ಅಂತರ ಇರಬೇಕು. ರಥ ಎಳೆಯಲು ಬರುವ ಪ್ರತಿಯೊಬ್ಬ ಭಕ್ತರಿಗೂ ಕೊರೊನಾವೈರಸ್ ಪರೀಕ್ಷೆ ನಡೆಸಿರಬೇಕು. ಸಾಮಾಜಿಕ ಅಂತರ ಪಾಲನೆಯಾಗುವುದು ಕಡ್ಡಾಯ ಎಂದು ಕೋರ್ಟ್ ತಿಳಿಸಿತು. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೋಬ್ಡೆ ನೇತೃತ್ವದ ತ್ರಿಸದಸ್ಯ ಪೀಠ ಈ ತೀರ್ಪು ನೀಡಿತು.: [೧೫] ಸ್ನಾನ ಯಾತ್ರೆಯು ಪೂರ್ಣ ಹುಣ್ಣಿಮೆಯ ದಿನ ಪ್ರತಿವರ್ಷವೂ ನಡೆಯುತ್ತದೆ. .[೧೬]
 • ಇದರ ಹಿಂದೆಯೇ, ಜಗನ್ನಾಥ ಸಂಸ್ಕೃತಿ ಜನ ಜಾಗರಣ ಮಂಚ್‌ ಸೇರಿದಂತೆ ಹಲವರು ಆದೇಶದ ಮಾರ್ಪಾಡು ಕೋರಿ ಅರ್ಜಿ ಸಲ್ಲಿಸಿದ್ದರು. ರಥಯಾತ್ರೆಯು 10 ರಿಂದ 12 ದಿನ ನಡೆಯಲಿದ್ದು, ಜೂನ್‌ 23ರಿಂದ ಜುಲೈ 1ರವರೆಗೆ ನಡೆಸಲು ನಿಗದಿಯಾಗಿತ್ತು. ಅಫ್ತಾಬ್‌ ಹೊಸೆನ್‌ ಎಂಬವರು ಅರ್ಜಿ ಸಲ್ಲಿಸಿ, ‘ಸಂಪ್ರದಾಯದ ಅನುಸಾರ ಜಗನ್ನಾಥ ಯಾತ್ರೆ ನಡೆಯಬೇಕು. ಪ್ರತಿ ವರ್ಷ ಇದು ನಡೆಯಲಿದೆ. ಒಂದು ವರ್ಷ ನಿಲ್ಲಿಸಿದರೆ, ಮುಂದಿನ 12 ವರ್ಷ ಇದನ್ನು ನಡೆಸಲಾಗದು’ ಎಂದು ಪ್ರತಿಪಾದಿಸಿದ್ದರು. 1736ರಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ವಾರ್ಷಿಕ ಪುರಿ ಜಗನ್ನಾಥ ಯಾತ್ರೆಯ ಸಂಪ್ರದಾಯ [೧೭]

ಜಾತ್ರೆಯ ನೋಟ

ಬದಲಾಯಿಸಿ
 
ರಥಯಾತ್ರೆ ಪುರಿ07-11027

ಜಗನ್ನಾಥನ ಸ್ನಾನಯಾತ್ರೆ

ಬದಲಾಯಿಸಿ

ಹೊರಸಂಪರ್ಕ

ಬದಲಾಯಿಸಿ

ಉಲ್ಲೇಖನಗಳು

ಬದಲಾಯಿಸಿ
 1. [Cesarone, Bernard (2012). "Bernard Cesarone: Pata-chitras of Odisha". asianart.com. Retrieved 2 July 2012. This temple was built in approximately 1135-1150 by Codaganga, a king of the Eastern Ganga dynasty]
 2. [ Nugteren, Albertina (2010). "Weaving Nature Into Myth: Continuing Narratives Of Wood, Trees, And Forests In The Ritual Fabric Around The God Jagannath In Puri".]
 3. Deities in Lord Jagannath Temple
 4. Juggernaut of Puri
 5. ಜಗನ್ನಾಥನ ಗೃಹಬಂಧನ!;ಡಾ.ಕೆ.ಎಸ್.ಚೈತ್ರಾ Updated: 14 ಜೂನ್ 2020,
 6. [೫]
 7. Suryanarayan Das 2010, "Lord Jagannath:
 8. Amalananda Ghosh (December 1990). An Encyclopaedia of Indian Archaeology
 9. "Sri Jagannath Puri Dham Information - Jagannath".ಅಂತರ್ಜಾಲ
 10. Jagannath Temple at Puri
 11. Jagannath Temple at Puri
 12. [ Dash, Abhimanyu (July 2011). "Invasions on the Temple of Lord Jagannath, Puri" (PDF). Orissa Review: 82–89. Archived from the original (PDF) on 14 July 2014. Retrieved 4 July 2014.]
 13. ["Festivals of Lord Sri Jagannath". nilachakra.org. 2010. Archived from the original on 22 October 2012.]
 14. ರಥಯಾತ್ರೆಗೆ ‘ಸುಪ್ರೀಂ’ ತಡೆ;ಪಿಟಿಐ Updated: 18 ಜೂನ್ 2020,[ಶಾಶ್ವತವಾಗಿ ಮಡಿದ ಕೊಂಡಿ]
 15. ಒಡಿಶಾದ ಪುರಿ ಜಗನ್ನಾಥ ರಥಯಾತ್ರೆಯಲ್ಲಿ 500 ಭಕ್ತರಿಗಷ್ಟೇ ಅವಕಾಶ! By Rajashekhar Myageri | Updated: Tuesday, June 23, 2020,
 16. https://kannada.oneindia.com/news/bhubaneswar/jagannath-rath-yatra-2020-193866.htmlarticlecontent-pf159897-193866.html?utm_source=/news/bhubaneswar/jagannath-rath-yatra-2020-193866.html&utm_medium=search_page&utm_campaign=elastic_search ಜಗನ್ನಾಥ ರಥ ಯಾತ್ರೆ 2020: ದೇವಸ್ನಾನ ಪೂರ್ಣಿಮೆಯ ವಿಶೇಷತೆಯೇನು? June 5, 2020
 17. ಪುರಿ ಜಗನ್ನಾಥ ಯಾತ್ರೆ: ಆದೇಶ ಮಾರ್ಪಾಡು? ಪಿಟಿಐ Updated: 22 ಜೂನ್ 2020