ದೇವಗಿರಿಯ ಯಾದವರು ಎಂದೇ ಹೆಸರಾಗಿರುವ ಸೇವುಣರು ಉತ್ತರ ಕರ್ನಾಟಕ, ಮಹಾರಾಷ್ಟ್ರಗಳನ್ನೊಳಗೊಂಡ ಪ್ರದೇಶವನ್ನು ಆಳಿದ ಕನ್ನಡ ರಾಜಮನೆತನ. ರಾಷ್ಟ್ರಕೂಟರ ಸರದಾರರಾಗಿಯೂ, ಮುಂದೆ ಹೊಯ್ಸಳರಂತೆಯೆ ಕಲ್ಯಾಣದ ಚಾಲುಕ್ಯ ದೊರೆಗಳ ಸಾಮಂತರಾಗಿಯೂ ಇದ್ದರು. ಚಾಲುಕ್ಯ ಸಾಮ್ರಾಜ್ಯ ಅವನತಿಯ ಹಾದಿ ಹಿಡಿದಂತೆ ಪ್ರಾಬಲ್ಯಕ್ಕೆ ಏರಿದರು. ಐದನೆಯ ಭಿಲ್ಲಮ ಕಲ್ಯಾಣವನ್ನು ವಶಪಡಿಸಿಕೊಂಡು ತಾನು ಸ್ವತಂತ್ರನೆಂದು ಘೋಷಿಸಿಕೊಂಡ. ದೇವಗಿರಿಯ ಅಭೇದ್ಯ ಕೋಟೆಯನ್ನು ನಿರ್ಮಿಸಿ ರಾಜಧಾನಿಯನ್ನು ಅಲ್ಲಿಗೆ ಸ್ಥಳಾಂತರಿಸಿದ. ಸೇಉಣರು ಹೊಯ್ಸಳರೊಂದಿಗೆ ಅನೇಕ ಯುದ್ದಗಳನ್ನು ನಡೆಸೆದರು. ಕೃಷ್ಣಾ-ತುಂಗಭದ್ರಾ

ನದಿ ಮಧ್ಯಪ್ರದೇಶ ಒಬ್ಬರಿಂದೊಬ್ಬರಿಗೆ ಕೈ ಬದಲಾಯಿಸುತ್ತಿತ್ತು. ನಂತರ ಒಂದು ಮಾದರಿಯ ಒಪ್ಪಂದ ಏರ್ಪಟ್ಟು, ಸೇವುಣರು ತುಂಗಭದ್ರೆಯ ಉತ್ತರಕ್ಕೂ, ಹೊಯ್ಸಳರು ದಕ್ಷಿಣಕ್ಕೂ ತಮ್ಮ ಪ್ರಭಾವ ಪ್ರಾಬಲ್ಯಗಳನ್ನು ವಿಸ್ತರಿಸಿದರು. ಒಂದು ಕಾಲದಲ್ಲಿ ಸೇವುಣ ರಾಜ್ಯ ನರ್ಮದೆಯವರೆಗೆ ಹಬ್ಬಿತ್ತು. ಮುಂದೆ ದೆಹಲಿಯ ಸುಲ್ತಾನ ಅಲ್ಲಾಉದ್ದೀನ್‌ ಖಿಲ್ಜಿ ದೇವಗಿರಿಯನ್ನು ಗೆದ್ದು ತನ್ನ ರಾಜ್ಯಕ್ಕೆ ಸೇರಿಸಿಕೊಂಡಾಗ ಸೇವುಣರ ರಾಜ್ಯ ಕೊನೆಗಂಡಿತು. ಛತ್ರಪತಿ ಶಿವಾಜಿಯ ತಾಯಿ ಜೀಜಾಬಾಯಿಯ ತವರು ಮನೆತನ ದೇವಗಿರಿಯ ರಾಜವಂಶಕ್ಕೆ ಸೇರಿದ್ದು.

ಸಾಂಸ್ಕೃತಿಕವಾಗಿ ಸೇವುಣರು ಕಲ್ಯಾಣದ ಚಾಲುಕ್ಯರ ಸಂಪ್ರದಾಯವನ್ನು ಮುಂದುವರೆಸಿರದರು. ಗಣಿತಜ್ಞ ಭಾಸ್ಕರಾಚಾರ್ಯ, ಭಾರತೀಯ ಸಂಗೀತಶಾಸ್ತ್ರದ ಪ್ರಮಾಣ ಗ್ರಂಥ "ಸಂಗೀತ ರತ್ನಾಕರ"ವನ್ನು ರಚಿಸಿದ ಶಾರ್ಙ್ಗದೇವ ಸೇವುಣರ ಕಾಲದವರು.

ರಾಜವಂಶದ ಹೆಸರು

ಬದಲಾಯಿಸಿ

ಸೇವುಣ ರಾಜರನ್ನು “ದೇವಗಿರಿಯ ಯಾದವರು” ಎಂದೂ ಕರೆಯುವುದುಂಟು. ಮಹಾರಾಷ್ಟ್ರದ ವಿಶಾಲ ಭಾಗದಲ್ಲಿ ಆಳಿದ್ದರಿಂದ ಅವರನ್ನು “ಮರಾಠರು” ಎಂದೂ ಕರೆಯಲಾಗುತ್ತದೆ. ಆದರೆ ಈ ರಾಜವಂಶದ ಸರಿಯಾದ ಹೆಸರು ಸೇಉಣ ಅಥವಾ ಸೇವುಣ[2]. ಇವರದೇ ಶಾಸನಗಳಲ್ಲಾಗಲೀ ಅಥವಾ ಅವರ ಸಮಕಾಲೀನ ರಾಜ್ಯಗಳಾಗಿದ್ದ ಹೊಯ್ಸಳ, ಕಾಕತೀಯ ಅಥವಾ ಪಶ್ಚಿಮ ಚಾಲುಕ್ಯರ ಶಾಸನಗಳಲ್ಲಾಗಲೀ ಈ ರಾಜವಂಶವನ್ನು ಸೇಉಣರೆಂದೇ ಸಂಬೋಧಿಸಲಾಗಿದೆ.[3]. ಈ ಹೆಸರಿನ ಮೂಲ ಬಹುಶಃ ಈ ವಂಶದ ಎರಡನೆಯ ರಾಜ ಸೇಉಣಚಂದ್ರನಿಂದ ಬಂದಿರಬಹುದೆಂದು ಊಹೆಯಿದೆ

ಈ ವಂಶದ ಮೂಲದ ಬಗ್ಯೆ ವಿದ್ವಾಂಸರಲ್ಲಿ ಅನೇಕ ಅಭಿಪ್ರಾಯಗಳಿದ್ದರೂ ಸೇವುಣರು ಕನ್ನಡಿಗರೆಂಬುದಕ್ಕೆ ಬಲವಾದ ಆಧಾರಗಳಿವೆ..

ಕರ್ನಾಟಕದವರು

ಬದಲಾಯಿಸಿ

ಡಾ.ಸಿ.ಎಮ್.ಕುಲಕರ್ಣಿ[14], ಕಾಲಿನ್ ಮಸೀಕಾ, ಡಾ. ಶ್ರೀನಿವಾಸ ರಿತ್ತಿ ಮೊದಲಾದ ಸಂಶೋಧಕರು, ಸೇವುಣರು ಮೂಲತಃ ಕನ್ನಡಿಗರಾಗಿದ್ದರು ಎಂದು ಪ್ರತಿಪಾದಿಸುತ್ತಾರೆ. ಭಾಷಾಶಾಸ್ತ್ರಜ್ಞ ಕಾಲಿನ್ ಮಸೀಕಾರ ಪ್ರಕಾರ ಸೇವುಣರು ಕನ್ನಡ ಭಾಷಿಕರಾಗಿದ್ದು , ತಮ್ಮ ಶಾಸನಗಳಲ್ಲಿ ಸಂಸ್ಕೃತದೊಂದಿಗೆ ಕನ್ನಡವನ್ನೂ ಬಳಸಿದ್ದಾರೆ. ಆದರೆ, ಮುಂದೆ ಮುಸ್ಲಿಮರ ಆಕ್ರಮಣದ ಕಾಲದಲ್ಲಿ , ಅವರು ಮರಾಠಿ ಭಾಷೆಗೆ ಪ್ರೋತ್ಸಾಹ ನೀಡಲು ಪ್ರಾರಂಭಿಸಿದ್ದು , ಅವರ ಶಾಸಗಳಲ್ಲಿ ಮರಾಠಿ ಸಾಲುಗಳು ಮತ್ತು ನುಡಿಗಟ್ಟುಗಳು ಕಾಣಬರಲು ತೊಡಗುತ್ತವೆ.[15]. ಡಾ.ಶ್ರೀನಿವಾಸ ರಿತ್ತಿಯವರ ಪ್ರಕಾರ , ಸೇವುಣರು ಮೂಲತಃ ಕನ್ನಡಿಗರಾಗಿದ್ದು , ದಖ್ಖನಿನಲ್ಲಿ ಆಗಿನ ರಾಜಕೀಯ ಪರಿಸ್ಥಿತಿಯಿಂದ ಅವರು ಉತ್ತರಕ್ಕೆ ವಲಸೆ ಹೋಗಿರಬಹುದು. [16]

ಅನೇಕ ಸೇವುಣ ರಾಜರುಗಳ ಹೆಸರು ಅಥವಾ ಬಿರುದು ಕನ್ನಡ ಮೂಲದವಾಗಿವೆ. ಉದಾಹರಣೆಗೆ ಧಡಿಯಪ್ಪ, ಭಿಲ್ಲಮ, ರಾಜುಗಿ, ವಾಸುಗಿ. ಕಲಿಯ ಬಲ್ಲಾಳ ಇತ್ಯಾದಿ. ಇನ್ನೂ ಕೆಲ ರಾಜರ ಸಿಂಘಣ , ಮಲ್ಲುಗಿ ಎಂಬ ಹೆಸರುಗಳು ದಕ್ಷಿಣ ಕಲಚೂರ್ಯರ ಹೆಸರುಗಳನ್ನು ಹೋಲುತ್ತವೆ. ದಾಖಲೆಗಳ ಪ್ರಕಾರ ಸೇವೂಣರ ಮೊದಲ ರಾಜರುಗಳಲ್ಲಿ ಒಬ್ಬನಾದ ಎರಡನೆಯ ಸೇವುಣಚಂದ್ರನು , ಸೆಲ್ಲವಿದೇಗ ಎಂಬ ಕನ್ನಡ ಬಿರುದಾಂಕಿತನಾಗಿದ್ದನು.

ತಮ್ಮ ರಾಜ್ಯಭಾರದ ಅವಧಿಯುದ್ದಕ್ಕೂ , ಸೇವುಣರು, ಕನ್ನಡ ರಾಜವಂಶಗಳೊಂದಿಗೆ ನಿಕಟ ಲಗ್ನಸಂಬಂಧವನ್ನು ಇಟ್ಟುಕೊಂಡಿರುವುದು ಕಂಡುಬರುತ್ತದೆ. [3]. ಎರಡನೆಯ ಭಿಲ್ಲಮನು ರಾಷ್ಟ್ರಕೂಟ ವಂಶದ ಲಚ್ಚಿಯವ್ವೆಯನ್ನು ಮದುವೆಯಾಗಿದ್ದನು. ರಾಷ್ಟ್ರಕೂಟರ ಸೇನಾಧಿಕಾರಿ ದೋರಪ್ಪನ ಮಗಳು ವಡ್ಡಿಯವ್ವೆಯನ್ನು ವಡ್ಡಿಗನು ವರಿಸಿದ್ದನು. ವೇಸುಗಿ ಮತ್ತು ಮೂರನೆಯ ಭಿಲ್ಲಮನ ಹೆಂಡತಿಯರು ಚಾಲುಕ್ಯ ವಂಶದ ರಾಜಕುಮಾರಿಯರಾಗಿದ್ದರು.

ಸೇವುಣರ ರಕ್ತಸಂಬಂಧಿಗಳಾಗಿದ್ದ ಅವರ ಅನೇಕ ದಂಡನಾಯಕರು ಕನ್ನಡ ಭಾಷಿಕರಾಗಿದ್ದರು. ಸೇವುಣರ ಮಾಸವಾಡಿಯು ಇಂದಿನ ಧಾರವಾಡ ಪ್ರದೇಶದಲ್ಲಿತ್ತು. ಡಾ. ಎ.ವಿ. ನರಸಿಂಹಮೂರ್ತಿಯವರ ಪ್ರಕಾರ, ಮಾನ್ಯಖೇಟ (ಇಂದಿನ ಮಾಳಖೇಡ) ದಿಂದ ಆಳುತ್ತಿದ್ದ ರಾಷ್ಟ್ರಕೂಟರ ಆಳ್ವಿಕೆಯ ಉತ್ತರಾರ್ಧದಲ್ಲಿ , ಸೇವುಣ ದಂಡನಾಯಕರುಗಳನ್ನು ನಾಸಿಕ ಪ್ರದೇಶದಲ್ಲಿ ಆಡಳಿತ ನಡೆಸಲು ಕರ್ನಾಟಕದಿಂದ ಕಳುಹಿಸಲಾಯಿತು. [4].

ಅಷ್ಟೇ ಅಲ್ಲ, ಸೇವುಣರ ರಾಜ್ಯದ ಐನೂರಕ್ಕೂ ಹೆಚ್ಚು ಶಿಲಾಶಾಸನಗಳು ಕರ್ನಾಟಕದಲ್ಲಿ ಪತ್ತೆಯಾಗಿವೆ. ಇವುಗಳಲ್ಲಿ ಎರಡನೆಯ ಭಿಲ್ಲಮನ ಕಾಲದ ಶಾಸನ ಅತ್ಯಂತ ಹಳೆಯದಾಗಿದ್ದು, ಈ ಬಹುತೇಕ ಶಾಸನ ಭಾಷೆ ಕನ್ನಡವಾಗಿದೆ. ಇನ್ನೂ ಅನೇಕ ಶಾಸನಗಳ ಭಾಷೆ ದೇವನಾಗರಿ ಲಿಪಿಯಲ್ಲಿ ಬರೆದ ಕನ್ನಡವಾಗಿದೆ[3]. ಸೇವುಣರ ಮೊದಮೊದಲ ನಾಣ್ಯಗಳಲ್ಲಿ ಕನ್ನಡ ಲಾಂಛನಗಳಿವೆ. ಇವೆಲ್ಲವುಗಳ ಆಧಾರದ ಮೇಲೆ, ಡಾ. ಓ.ಪಿ.ವರ್ಮಾ ಮೊದಲಾದ ವಿದ್ವಾಂಸರು, ಸೇವುಣರ ರಾಜ್ಯದಲ್ಲಿ , ಮರಾಠಿ ಮತ್ತು ಸಂಸ್ಕೃತದೊಂದಿಗೆ ಕನ್ನಡವೂ ರಾಜಭಾಷೆಯಾಗಿರುವುದು ಖಂಡಿತ ಎಂಬ ನಿರ್ಧಾರಕ್ಕೆ ಬರುತ್ತಾರೆ. [17].

ಉತ್ತರ ಭಾರತ

ಬದಲಾಯಿಸಿ

ಸ್ವತಃ ಸೇವುಣರು ತಮ್ಮನ್ನು ಉತ್ತರ ಭಾರತದ ಚಾಂದ್ರವಂಶಿ ಯಾದವ ಕುಲದವರು ಎಂದು ಕರೆದುಕೊಂಡಿದ್ದಾರೆ[5][6]. ಹೇಮಾದ್ರಿ ಬರೆದ ಸಂಸ್ಕೃತ ಗ್ರಂಥ ವ್ರತಖಂಡದ 21ನೆಯ ಪದ್ಯದಲ್ಲಿ , ಸೇವುಣರು ಮೂಲತಃ ಮಥುರೆಯವರಾಗಿದ್ದು ನಂತರ ದ್ವಾರಕೆಗೆ ಬಂದರು ಎಂದು ಉಲ್ಲೇಖಿಸಲಾಗಿದೆ. ಹೇಮಾದ್ರಿಯು ಅವರನ್ನು ಕೃಷ್ಣಕುಲೋತ್ಪನ್ನ , ಅರ್ಥಾತ್ ಕೃಷ್ಣನ ವಂಶಸ್ಥರು ಎಂದು ಕರೆದಿದ್ದಾನೆ[7]. ಇತರ ಕೆಲ ಶಾಸನಗಳು ಅವರನ್ನು ದ್ವಾರಾವತೀಪುರಾವರಾಧೀಶ್ವರರು (ದ್ವಾರಕೆಯ ಒಡೆಯರು) ಎಂದು ಉಲ್ಲೇಖಿಸಿವೆ.

ಸೇವುಣರು ಉತ್ತರ ಭಾರತದಿಂದ ಬಂದವರು ಎಂಬ ವಾದವನ್ನು ಡಾ. ಕೋಲಾರ್ಕರ್ ಮೊದಲಾದ ಅನೇಕ ಆಧುನಿಕ ಸಂಶೋಧಕರು ಸಮರ್ಥಿಸುತ್ತಾರೆ[8].

ಪ್ರೊ. ಜಾರ್ಜ್ ಮೊರೇಸ್ [9], ವಿ.ಕೆ.ರಾಜವಾಡೆ, ಸಿ.ವಿ.ವೈದ್ಯ, ಡಾ. ಎ.ಎಸ್. ಅಲ್ಟೇಕರ್ , ಡಾ.ಬಿ.ಆರ್.ಭಂಡಾರ್ಕರ್ ಮತ್ತು ಜೆ. ಡಂಕನ್ ಎಮ್. ಡೆರ್ರೆಟ್ [4], ಮೊದಲಾದ ವಿದ್ವಾಂಸರು,ಸೇವುಣರು ಮರಾಠಾ ಮೂಲದವರಾಗಿದ್ದರು ಎಂದು ಅಭಿಪ್ರಾಯಪಡುತ್ತಾರೆ. ಸೇವುಣರು ಮರಾಠಿ ಭಾಷೆಯ ಪ್ರೋತ್ಸಾಹಕರಾಗಿದ್ದರು[10]. ಈ ನಾ ಯಕರಾಜ್ಯವು ಮೊಟ್ಟಮೊದಲ ಮರಾಠಾ ಸಾಮ್ರಾಜ್ಯ ಎಂದು ದಿಗಂಬರ ಬಾಲಕೃಷ್ಣ ಮೊಕಾಶಿಯವರು ಅನುಮೋದಿಸುತ್ತಾರೆ[11]. ತಮ್ಮ ಪುಸ್ತಕ ಮಧ್ಯಯುಗೀಯ ಭಾರತ (Medieval India)ದಲ್ಲಿ , ಸಿ.ವಿ.ವೈದ್ಯ, ನಿಸ್ಸಂದೇಹವಾಗಿಯೂ ಶುದ್ಧ ಮರಾಠಿ ಕ್ಷತ್ರಿಯವಂಶದವರು ಎನ್ನುತ್ತಾರೆ.

ನಾಸಿಕದ ಹತ್ತಿರದ ಅಂಜನೇರಿ ಎಂಬಲ್ಲಿ ದೊರಕಿದ ಶಿಲಾಶಾಸನದ ಪ್ರಕಾರ ಯಾದವ ವಂಶದ ಒಂದು ಕಿರು ಶಾಖೆಯು ಅಂಜನೇರಿಯನ್ನು ಮುಖ್ಯ ನಗರವಾಗಿಟ್ಟುಕೊಂಡು , ಸಣ್ಣ ಪ್ರದೇಶವನ್ನು ಆಳುತ್ತಿತ್ತು.. ಇದೇ ಶಾಸನವು, ಈ ಯಾದವ ವಂಶದ ಸೇವುಣದೇವ ಎಂಬ ರಾಜನು ತನ್ನನ್ನು ಮಹಾಸಾಮಂತ ಎಂದು ಕರೆದುಕೊಂಡಿದ್ದಾಗಿಯೂ, ಜೈನ ದೇವಾಲವೊಂದಕ್ಕೆ ದತ್ತಿ ಬಿಟ್ಟದ್ದಾಗಿಯೂ ಹೇಳುತ್ತದೆ. [12]..ಡಾ. ಓ.ಪಿ.ವರ್ಮಾ ಮೊದಲಾದ ವಿದ್ವಾಂಸರ ಪ್ರಕಾರ ಯಾದವರು ಮರಾಠಿ ಭಾಷಿಕರಾಗಿದ್ದು , ಇವರ ಕಾಲವು ಮರಾಠಿ ಇತಿಹಾಸದಲ್ಲಿ ಮಹತ್ವದ ಕಾಲವಾಗಿದೆ. [13].

ಶಿವಾಜಿಯ ತಾಯಿ ಜೀಜಾಬಾಯಿಯು ಯಾದವ ವಂಶಸ್ತರು ಎಂದು ಕರೆದುಕೊಳ್ಳುತ್ತಿದ್ದ ಸಿಂದಖೇಡ ರಾಜರ ಜಾಧವ ಕುಲಕ್ಕೆ ಸೇರಿದವಳಾಗಿದ್ದಳು.

ಇತಿಹಾಸ

ಬದಲಾಯಿಸಿ

ಸಾಮಂತರಾಗಿ

ಬದಲಾಯಿಸಿ

ರಾಷ್ಟ್ರಕೂಟರ ಹಾಗೂ ನಂತರ ಪಶ್ಚಿಮ ಚಾಲುಕ್ಯರ ಸಾಮಂತರಾಗಿದ್ದ[2] ಸೇವುಣರ ರಾಜವಂಶ ಜಾರಿಗೆ ಬಂದದ್ದು ಸುಬಾಹುವಿನ ಮಗ ಧೃತಪ್ರಹಾರನ ಕಾಲದಲ್ಲಿ.. ವ್ರತಖಂಡ ಗ್ರಂಥದ ಪ್ರಕಾರ ಈ ರಾಜ್ಯದ ರಾಜಧಾನಿ ಶ್ರೀನಗರವಾಗಿತ್ತು. ಆದರೆ, ಇನ್ನೊಂದು ಶಿಲಾಶಾಸನದ ಪ್ರಕಾರ ರಾಜಧಾನಿಯು, ಚಂದ್ರಾದಿತ್ಯ ಪುರವಾಗಿತ್ತು ( ಇದು ಇಂದಿನ ನಾಸಿಕ ಜಿಲ್ಲೆಯ ಚಾಂದೋರು) [12]. ಸೇವುಣರಿಗೆ ಆ ಹೆಸರು ಬಂದದ್ದು ಧೃತಪ್ರಹಾರನ ಮಗ ಸೇವುಣಚಂದ್ರನಿಂದ. ಅವನ ರಾಜ್ಯ ಮೂಲತಃ ಸೇವುಣದೇಶ ವೆಂಬ ಪ್ರದೇಶ ( ಇಂದಿನ ಮಹಾರಾಷ್ಟ್ರದ ಖಾಂದೇಶ್ ಭಾಗ) ವಾಗಿತ್ತು. ನಂತರದ ರಾಜ ಎರಡನೆಯ ಭಿಲ್ಲಮನು , ಪರಮಾರರ ದೊರೆ ಮುಂಜ ವಿರುದ್ಧದ ಕದನದಲ್ಲಿ ಮೂರನೆಯ ತೈಲಪನಿಗೆ ನೆರವು ನೀಡಿದನು. ಎರಡನೆಯ ಸೇವುಣಚಂದ್ರನು ಆರನೆಯ ವಿಕ್ರಮಾದಿತ್ಯನಿಗೆ ಸಿಂಹಾಸನವನ್ನು ದಕ್ಕಿಸಿಕೊಳ್ಳಲು ಸಹಾಯ ಮಾಡಿದನು.

ಸೇವುಣ ನಾಯಕ‌ ರಾಜಪರಂಪರೆ

ಬದಲಾಯಿಸಿ

ಸೇವುಣ ರಾಜರುಗಳಲ್ಲಿ ಸಿಂಧನ, ಕೃಷ್ಣದೇವ, ಮಹಾದೇವ ಮತ್ತು ರಾಮದೇವ ಇವರುಗಳನ್ನು ಸಮರ್ಥ ರಾಜರೆಂದು ಪರಿಗಣಿಸಲಾಗಿದೆ. [8]

ಕಲ್ಯಾಣಿ ಚಾಲುಕ್ಯರ ಸರದಾರರಾಗಿ

ಬದಲಾಯಿಸಿ
  • ಧೃತಪ್ರಹಾರ
  • ಸೇವುಣಚಂದ್ರ ಕ್ರಿ.ಶ. 850-874
  • ಧಡಿಯಪ್ಪ ಕ್ರಿ.ಶ. 874-900
  • ಭಿಲ್ಲಮ ಕ್ರಿ.ಶ. 900-925
  • ವಡುಗಿ (ವಡ್ಡಿಗ) ಕ್ರಿ.ಶ. 950-974
  • ಇಮ್ಮಡಿ ಧಡಿಯಪ್ಪ ಕ್ರಿ.ಶ. 974-975
  • ಇಮ್ಮಡಿ ಭಿಲ್ಲಮ ಕ್ರಿ.ಶ. 975-1005 (ಕಲ್ಯಾಣಿ ಚಾಲುಕ್ಯರ ದೊರೆ ಎರಡನೆಯ ತೈಲಪನಿಗೆ ಪರಮಾರರ ರಾಜ ಮುಂಜನ ವಿರುಧ್ದ ಯುದ್ಧದಲ್ಲಿ ನೆರವು ನೀಡಿದವನು)
  • ವೇಸುಗಿ ಕ್ರಿ.ಶ.1005-1020
  • ಮುಮ್ಮಡಿ ಭಿಲ್ಲಮ ಕ್ರಿ.ಶ. 1020-1055 (ನಾಸಿಕದ ಹತ್ತಿರದ ಸಿನ್ನರಿನಲ್ಲಿ ಆಳುತ್ತಿದ್ದವನು. ಪರಮಾರರ ವಿರುದ್ಧ ಚಾಲುಕ್ಯರ ಸೋಮೇಶ್ವರನಿಗೆ ನೆರವು ನೀಡಿದವನು)
  • ಇಮ್ಮಡಿ ವೇಸುಗಿ ಕ್ರಿ.ಶ. 1055-1068
  • ಮುಮ್ಮಡಿ ಭಿಲ್ಲಮ ಕ್ರಿ.ಶ. 1068
  • ಇಮ್ಮಡಿ ಸೇವುಣಚಂದ್ರ ಕ್ರಿ.ಶ. 1068-1085 (ಪ್ರಜಾದಂಗೆಯನ್ನು ಹತ್ತಿಕ್ಕಿ, ನಾಲ್ಕನೆಯ ಭಿಲ್ಲಮನನ್ನು ಸೋಲಿಸಿ ದೊರೆಯಾದವನು)
  • ಐರಾಮದೇವ ಕ್ರಿ.ಶ. 1085-1115
  • ಸಿಂಘಣ ಕ್ರಿ.ಶ.1115-1145
  • ಮಲ್ಲುಗಿ ಕ್ರಿ.ಶ. 1145-1150 (1173 ರ ವರೆಗೆ ಯಾದವೀ ಕಲಹದ ಅವಧಿ)
  • ಅಮರಗಾಂಗೇಯ ಕ್ರಿ.ಶ.1150-1160
  • ಗೋವಿಂದರಾಜ ಕ್ರಿ.ಶ. 1160
  • ಇಮ್ಮಡಿ ಅಮರ ಮಲ್ಲುಗಿ ಕ್ರಿ.ಶ.1160-1165
  • ಕಲಿಯ ಬಲ್ಲಾಳ ಕ್ರಿ.ಶ. 1165-1173

ಸ್ವತಂತ್ರ ರಾಜರಾಗಿ

ಬದಲಾಯಿಸಿ
  • ಐದನೆಯ ಭಿಲ್ಲಮ ಕ್ರಿ.ಶ. 1173-1192
  • ಜೈತುಗಿ ಕ್ರಿ.ಶ. 1192-1200
  • ಇಮ್ಮಡಿ ಸಿಂಘಣ ಕ್ರಿ.ಶ.1200-1247
  • ಕನ್ನರ ಕ್ರಿ.ಶ. 1247-1261
  • ಮಹಾದೇವ ಕ್ರಿ.ಶ. 1261-1271
  • ಅಮನ ಕ್ರಿ.ಶ. 1271
  • ರಾಮಚಂದ್ರ ಕ್ರಿ.ಶ. 1271-1312

ಖಿಲ್ಜಿ ಸಾಮ್ರಾಜ್ಯದ ಅಧೀನರಾಜರಾಗಿ

ಬದಲಾಯಿಸಿ
  • ಮುಮ್ಮಡಿ ಸಿಂಘಣ ಕ್ರಿ.ಶ. 1312-1313
  • ಹರಪಾಲದೇವ ಕ್ರಿ.ಶ. 1313-1318
  • ಮುಮ್ಮಡಿ ಮಲ್ಲುಗಿ ಕ್ರಿ.ಶ.1318-1334

ಬಾಹ್ಯ ಸ೦ಪರ್ಕಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
"https://kn.wikipedia.org/w/index.php?title=ಸೇವುಣ&oldid=1247596" ಇಂದ ಪಡೆಯಲ್ಪಟ್ಟಿದೆ