ಮುಖಮಲ್ ಹೆಗ್ಗಣ ಎನ್ಸೆಕ್ಟಿವೊರ ಗಣದ ಟಾಲ್ಪಿಡೀ ಕುಟುಂಬಕ್ಕೆ ಸೇರಿದ ಹಲವಾರು ಬಗೆಯ ಕೀಟಾಹಾರಿ ಸ್ತನಿಗಳಿಗೆ ಅನ್ವಯವಾಗುವ ಹೆಸರು (ಮೋಲ್). ಸುಮಾರು 12 ವಿವಿಧ ಜಾತಿಗಳಿದ್ದು ಇವು ಯೂರೋಪ್, ಏಷ್ಯ ಹಾಗೂ ಉತ್ತರ ಅಮೆರಿಕಗಳಲ್ಲಿ ಕಾಣದೊರೆಯುತ್ತವೆ.[]

ಯೂರೋಪಿನ ಮುಖಮಲ್ ಹೆಗ್ಗಣ

ಅನೇಕ ಬಗೆಯ ಮುಖಮಲ್ ಹೆಗ್ಗಣಗಳಿಗೆ ಒಂದು ತೆರನ ಕಟುವಾಸನೆ ಇರುವುದರಿಂದ ಇವಕ್ಕೆ ಶತ್ರಗಳ ಕಾಟ ಕಡಿಮೆ.

ದೇಹ ಲಕ್ಷಣಗಳು

ಬದಲಾಯಿಸಿ

ಮುಖಮಲ್ ಹೆಗ್ಗಣಗಳು ನೆಲವನ್ನು ಕೊರೆದು ಬಿಲಗಳನ್ನು ರಚಿಸಿಕೊಂಡು ಜೀವಿಸುವಂಥ ಪ್ರಾಣಿಗಳು. ಇವುಗಳ ದೇಹದ ಉದ್ದ 65-220 ಮಿಮೀ. ಜೊತೆಗೆ 15-85 ಮಿಮೀ ಉದ್ದದ ಬಾಲವುಂಟು. ದೇಹದ ಮಾಟ ಉರುಳೆಯಂತಿದೆ. ಮೂತಿ ಉದ್ದವಾದ ಕೊಳವೆಯಂತಿದ್ದು ತುಂಬ ಗಡುಸಾಗಿಯೂ ರೋಮರಹಿತವಾಗಿಯೂ ಇದೆ. ಉತ್ತರ ಅಮೆರಿಕ ನಿವಾಸಿಯಾದ ಕಾಂಡಿಲ್ಯೂರ ಎಂಬ ಜಾತಿಯ ಹೆಗ್ಗಣದ ಮೂಗು ಮಾಂಸಲವಾದ 22 ನಳಿಕೆಗಳಾಗಿ ವಿಭಾಗಗೊಂಡಿದ್ದು ನಕ್ಷತ್ರದಾಕಾರದಲ್ಲಿ ಹರಡಿದೆ. ಇದರಿಂದ ಈ ಪ್ರಾಣಿಗೆ ನಕ್ಷತ್ರ ಮೂಗಿನ ಮುಖಮಲ್ ಹೆಗ್ಗಣ ಎಂಬ ಹೆಸರು ಬಂದಿದೆ. ಎಲ್ಲ ಹೆಗ್ಗಣಗಳಲ್ಲೂ ಕಣ್ಣು ತುಂಬ ಕಿರಿದಾಗಿದ್ದು ತುಪ್ಪುಳಿನಲ್ಲಿ ಇಲ್ಲವೆ ಚರ್ಮದ ಮಡಿಕೆಯಲ್ಲಿ ಹುದುಗಿರುತ್ತದೆ. ದೃಷ್ಟಿ ತುಂಬ ಮಂದವಾಗಿದೆ. ಹೊರಕಿವಿಗಳಿಲ್ಲ. ಕತ್ತು ಮೋಟು. ಕಾಲುಗಳು ಚಿಕ್ಕವು. ಪಾದಗಳಲ್ಲಿ ತಲಾ ಐದು ಬೆರಳುಗಳುಂಟು. ಮೈಮೇಲೆ ನಯವಾದ ತುಪ್ಪಳು ಇದೆ.[]

ಕೊರೆಯುವ ಬಿಲ ಅಥವಾ ಸುರಂಗಗಳು

ಬದಲಾಯಿಸಿ

ಮುಖಮಲ್ ಹೆಗ್ಗಣಗಳು ಎರಡು ತೆರನ ಬಿಲಗಳನ್ನು ಅಥವಾ ಸುರಂಗಗಳನ್ನು ಕೊರೆಯುತ್ತವೆ: ಒಂದು ಬಗೆಯವು ಹೆಚ್ಚು ಆಳವಿಲ್ಲದ ಸುರಂಗಗಳಾಗಿದ್ದು ಲಘ ವಿಶ್ರಾಂತಿಗೆ ಹಾಗೂ ಆಹಾರ ಸೇವನೆಗೆ ಬಳಕೆಯಾಗುತ್ತವೆ. ಇನ್ನೊಂದು ಬಗೆಯವು ಆಳವಾದ ಸುರಂಗಗಳು. ಇವುಗಳ ದ್ವಾರದ ಬಳಿ ಸಂಗ್ರಹಗೊಳ್ಳುವ ಮಣ್ಣಿನ ಗುಪ್ಪೆಗಳಿಂದ (ಮೋಲ್ ಹಿಲ್ಸ್) ಇವನ್ನು ಗುರುತಿಸಬಹುದು. ಮುಖಮಲ್ ಹೆಗ್ಗಣಗಳು ಬಿಲ ತೋಡುವುದರಲ್ಲಿ ಬಲು ನಿಷ್ಣಾತವಾಗಿವೆ. ಎಂಥ ಗಟ್ಟಿ ನೆಲವಾದರೂ ಚೂಪು ಉಗುರುಗಳಿಂದ ಕೊರೆಯುತ್ತ, ತಮ್ಮ ಮೂತಿಯ ಸಹಾಯದಿಂದ ಮಣ್ಣನ್ನು ಎತ್ತಿ ಎಸೆಯುತ್ತ, ಕೆಲವೇ ಸೆಕೆಂಡುಗಳಲ್ಲಿ ಆಳವಾದ ಬಿಲವನ್ನು ರಚಿಸಬಲ್ಲವು. ಕಣ್ಣು ಚುರುಕಾಗಿಲ್ಲದಿದ್ದರೂ ನೆಲದ ಕಂಪನಗಳ ಗ್ರಹಣದ ಮೂಲಕ ತಮಗೆ ಬೇಕಾದ ದಿಕ್ಕಿನಲ್ಲಿ, ರೀತಿಯಲ್ಲಿ ಸುರಂಗಗಳನ್ನು ನಿರ್ಮಿಸುವುವು.

ಸಾಮಾಜಿಕ ಸ್ವರೂಪ

ಬದಲಾಯಿಸಿ

ಸಾಮಾನ್ಯವಾಗಿ ಇವು ಒಂಟೊಂಟಿಯಾಗಿಯೇ ಜೀವಿಸುವುದಾರೂ ಕೆಲವೊಮ್ಮೆ ಹಲವಾರು ಮುಖಮಲ್ ಹೆಗ್ಗಣಗಳು ಒಂದೇ ಸುರಂಗಜಾಲವನ್ನು ರಚಿಸಿಕೊಂಡು ಬದುಕುವುದಿದೆ. ಹಗಲಿನಲ್ಲಿ ಎಂತೊ ರಾತ್ರಿ ವೇಳೆಯಲ್ಲೂ ಚಟುವಟಿಕೆಯಿಂದ ಇರುತ್ತವೆ.

ಇವುಗಳ ಪ್ರಧಾನ ಆಹಾರ ಕೀಟಗಳು ಹಾಗೂ ಮಣ್ಣು ಹುಳುಗಳು. ಕೆಲವೊಮ್ಮೆ ಬೇರೆ ತೆರನ ಸಣ್ಣ ಗಾತ್ರದ ಅಕಶೇರುಕ ಪ್ರಾಣಿಗಳನ್ನು ತಿನ್ನುವುದಿದೆ.[][] ಕೆಲವು ಜಾತಿಯವು ಸಸ್ಯಜನ್ಯ ಆಹಾರವನ್ನು ಸೇವಿಸುವುವು.

ಸಂತಾನೋತ್ಪತ್ತಿ

ಬದಲಾಯಿಸಿ

ವರ್ಷಕ್ಕೆ ಒಂದು ಇಲ್ಲವೆ ಎರಡು ಸೂಲಿನಲ್ಲಿ ಮರಿ ಹಾಕುವುವು. ಒಂದು ಸೂಲಿಗೆ 1-7 ಮರಿಗಳು.[] ಗರ್ಭಾವಸ್ಧೆಯ ಅವಧಿ 28-42 ದಿನಗಳು.

ಮುಖ್ಯವಾದ ಮುಖಮಲ್ ಹೆಗ್ಗಣಗಳು

ಬದಲಾಯಿಸಿ

ಮುಖಮಲ್ ಹೆಗ್ಗಣಗಳ ಪೈಕಿ ಮುಖ್ಯವಾದವು ಇಂತಿವೆ: ಡೆಸ್ಮಾನ ಮಾಸ್ಕೇಟ (ರಷ್ಯದ ಡೆಸ್ಮನ್), ಟಾಲ್ಪ ಇನ್ಸುಲಾರಿಸ್ (ಫಾರ್ಮೋಸದ ಮುಖಮಲ್ ಹೆಗ್ಗಣ), ಟಾಲ್ಪ ಯೂರೊಪಿಯ, ಯೂರೋಟ್ರೈಕಸ್ ಟಾಲ್ಪಾಯ್ಡಿಸ್, ಸ್ಕಪಾನಸ್ ಒರೇರಿಯಸ್, ಸ್ಕಾಲೋಪಸ್ ಅಕ್ವಾಟಿಕಸ್, ಕಾಂಡಿಲ್ಯೂರ ಕ್ರಿಸ್ಟೇಟಸ್, ಭಾರತದ ಪೂರ್ವ ಹಿಮಾಲಯ, ಅಸ್ಸಾಮ್, ಖಾಸಿಯ ಮತ್ತು ನಾಗಾಪರ್ವತ ಪ್ರದೇಶಗಳಲ್ಲಿ ಟಾಲ್ಪ ಮೈಕ್ರೂರ ಎಂಬ ಬಗೆ ಕಾಣದೊರೆಯುತ್ತದೆ. ಇನ್ಸೆಕ್ಟಿವೊರ ಗಣದ ಕ್ರೈಸೊಕ್ಲೋರಿಡೀ ಕುಟುಂಬದ ಪ್ರಾಣಿಗಳಿಗೂ ಮುಖಮಲ್ ಹೆಗ್ಗಣ ಎಂಬ ಹೆಸರೇ ಇದೆ.

ಉಲ್ಲೇಖಗಳು

ಬದಲಾಯಿಸಿ
  1. Campbell, Kevin. "Mole Distribution Maps". University of Manitoba. Archived from the original on 24 March 2010. Retrieved 11 March 2010.
  2. Kott, Ondřej; Sumbera, Radim; Nemec, Pavel (2010). Iwaniuirst, Andrew (ed.). "Light Perception in Two Strictly Subterranean Rodents: Life in the Dark or Blue?". PLOS ONE. 5 (7): e11810. Bibcode:2010PLoSO...511810K. doi:10.1371/journal.pone.0011810. PMC 2911378. PMID 20676369.
  3. Arlton, A.V. (1936). "An Ecological Study of the Mole". Journal of Mammalogy. 17 (4): 349–371. doi:10.2307/1374401. JSTOR 1374401.
  4. Streitberger, Merle (2016). Ants and Moles as Ecosystem Engineers: The Role of Small-scale Disturbance for Biodiversity in Central European Grasslands. Osnabrück.{{cite book}}: CS1 maint: location missing publisher (link)
  5. "Moles their biology and control". Icwdm.org. Archived from the original on 27 September 2013. Retrieved 12 July 2013.


ಹೊರಗಿನ ಕೊಂಡಿಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: