ಬೊಮ್ಮಲಮ್ಮಗುಟ್ಟ
ತೆಲಂಗಾಣ ರಾಜ್ಯದ ಜಿಲ್ಲಾಕೇಂದ್ರ ಕರೀಮ್ ನಗರ ಕ್ಕೆ ೨೨ ಕಿಲೊಮೀಟರು ದೂರದಲ್ಲಿರುವ ಗಂಗಾಧರಂ ಮಂಡಲಕ್ಕೆ ಸೇರಿದ ಕುರಿಕ್ಯಾಲ ಗ್ರಾಮದ ಅಂಚಿನಲ್ಲಿ ಸುಮಾರು ಇನ್ನೂರು ಅಡಿಗಳ ಎತ್ತರದ ಬೊಮ್ಮಲಮ್ಮಗುಟ್ಟ ಎಂಬ ಗುಡ್ಡವಿದೆ. ಅದು ಹತ್ತನೇ ಶತಮಾನದಲ್ಲಿ ವೃಷಭಗಿರಿ ಎಂದು ಪ್ರಸಿದ್ಧವಾಗಿತ್ತು. ದೂರದಿಂದ ಎತ್ತಿನ ರೂಪದಲ್ಲಿ ಕಾಣುವ ಈ ಗುಡ್ಡ ಕನ್ನಡ, ತೆಲುಗು ಸಾಹಿತ್ಯಚರಿತ್ರೆಗಳಲ್ಲಿ ಬಹುಮುಖ್ಯ ಸ್ಥಾನ ಪಡೆದಿದೆ.[೧]
ಚಕ್ರೇಶ್ವರಿ
ಬದಲಾಯಿಸಿಗುಡ್ಡದ ಮೇಲೆ ೪೦ ಅಡಿ ಎತ್ತರ ೨೫ ಅಡಿ ಅಗಲದ ದೊಡ್ಡ ಬಂಡೆ ಇದೆ. ಈ ಬಂಡೆಯ ಮೇಲೆ ಜೈನ ದೇವತೆ ಚಕ್ರೇಶ್ವರಿಯನ್ನು ಕಂಡರಿಸಲಾಗಿದೆ. ಅದರ ಮೇಲುಗಡೆ ಜೈನರ ಆದಿತೀರ್ಥಂಕರನಾದ ವೃಷಭನಾಥನ ಹಾಗೂ ಕೊನೆಯ ತೀರ್ಥಂಕರನಾದ ಮಹಾವೀರನ ವಿಗ್ರಹಗಳನ್ನೂ ಆಕರ್ಷಣೀಯವಾಗಿ ಕೆತ್ತಲಾಗಿದೆ. ಎಂಟು ಕೈಗಳ ಚಕ್ರೇಶ್ವರೀದೇವಿಯು ವಿವಿಧ ಆಯುಧಗಳು, ಆಭರಣಗಳೊಂದಿಗೆ ಗರುಡವಾಹನದ ಮೇಲೆ ನೆಲೆಸಿದ್ದಾಳೆ. ಅವಳ ಇಕ್ಕೆಲಗಳಲ್ಲಿ ತಲಾ ಮೂವರು ಜೈನ ದಿಗಂಬರರಿದ್ದಾರೆ. ಚಕ್ರೇಶ್ವರಿಯ ಎರಡೂ ಭುಜಗಳ ಬಳಿ ಆಕೆಯ ಸೇವಕಿಯರಂತೆ ಕಾಣುವ ಸ್ತ್ರೀ ಆಕೃತಿಗಳಿವೆ. ಚಕ್ರೇಶ್ವರಿಯನ್ನೂ ಆಕೆಯ ಅಕ್ಕಪಕ್ಕದಲ್ಲಿನ ಇತರ ಮಾನವಾಕೃತಿಗಳನ್ನೂ ಕಂಡ ತೆಲುಗು ಜನಪದರು ಆಕೆಯನ್ನು ಬೊಮ್ಮಲಮ್ಮ (ಗೊಂಬೆಗಳ ಅಮ್ಮ) ಎಂದು ಕರೆದಿದ್ದಾರೆ. ಈಚೀಚೆಗೆ ಆಕೆಯನ್ನು ಸೀತಮ್ಮ ಎಂದೂ ಕರೆಯಲಾಗುತ್ತಿದೆ.
ಚಾಲುಕ್ಯರು
ಬದಲಾಯಿಸಿವೇಮುಲವಾಡ ಚಾಲುಕ್ಯರು ಕ್ರಿ.ಶ. ೭೫೦ ರಿಂದ ಕ್ರಿ.ಶ. ೯೭೩ ವರೆಗೆ ಅಂದರೆ ಸುಮಾರು ಎರಡು ಶತಮಾನಗಳ ಕಾಲ ಮೊದಲು ಬೋದನ್ ಅನ್ನು ಆನಂತರ ವೇಮುಲವಾಡವನ್ನು ರಾಜಧಾನಿಯಾಗಿ ಮಾಡಿಕೊಂಡು ’ಸಪಾದಲಕ್ಷ’ ರಾಜ್ಯವನ್ನು (ಇಂದಿನ ನಿಜಾಮಾಬಾದ್, ಕರೀಂನಗರ ಜಿಲ್ಲೆಗಳ ಪ್ರಾಂತ್ಯವನ್ನು) ಆಳುತ್ತಿದ್ದರು. ಇವರು ರಾಷ್ಟ್ರಕೂಟರ ಸಾಮಂತರು. ಇವರಲ್ಲಿ ರಾಜನೀತಿಜ್ಞನೂ, ವಿದ್ಯಾವಿಶಾರದನೂ, ಕವಿಪಂಡಿತಪೋಷಕನೂ ಆಗಿದ್ದ ಅರಿಕೇಸರಿ II, ಕ್ರಿ.ಶ.೯೩೦ರಿಂದ ೯೫೫ರವರೆಗೆ ವೇಮುಲವಾಡ ರಾಜಧಾನಿಯಿಂದ ಆಳುತ್ತಿದ್ದ. ಈತನ ಆಸ್ಥಾನದಲ್ಲಿದ್ದ ಮಹಾಕವಿ ಪಂಪನು ಕನ್ನಡದ ಆದಿಕವಿ. ಪಂಪನು ರಚಿಸಿದ ವಿಕ್ರಮಾರ್ಜುನ ವಿಜಯ ಹಾಗೂ ಆದಿಪುರಾಣ(ವೃಷಭನಾಥಚರಿತೆ)ಗಳು ಕನ್ನಡದ ಪ್ರಸಿದ್ಧ ಕಾವ್ಯಗಳು. ಪಂಪನ ಕಾವ್ಯಕೃಷಿಯನ್ನು ಮೆಚ್ಚಿ ಅರಿಕೇಸರಿಯು ಪಂಪನಿಗೆ ’ಕವಿತಾಗುಣಾರ್ಣವ’ ಎಂಬ ಬಿರುದಿನಿಂದ ಸನ್ಮಾನಿಸಿ ’ಧರ್ಮಪುರ’ ಎಂಬ ಗ್ರಾಮವನ್ನು ಉಂಬಳಿಯಾಗಿ ಕೊಡುತ್ತಾನೆ. ಈ ಧರ್ಮಪುರಕ್ಕೆ ಉತ್ತರ ದಿಕ್ಕಿನಲ್ಲಿರುವುದೇ ಬೊಮ್ಮಲಮ್ಮಗುಟ್ಟ.
ಜಿನವಲ್ಲಭ
ಬದಲಾಯಿಸಿಈ ಪಂಪನ ತಮ್ಮನೇ ಜಿನವಲ್ಲಭ. ಜೈನಮತಾಭಿವೃದ್ಧಿಗಾಗಿ ವಿಶೇಷ ಕೃಷಿ ನಡೆಸಿದ ಈ ಜಿನವಲ್ಲಭ ಬೊಮ್ಮಲಮ್ಮಗುಡ್ಡದ ಮೇಲಿನ ಬಂಡೆಯಲ್ಲಿ ಹದಿನಾಲ್ಕು ಅಡಿಗಳ ವಿಸ್ತಾರದಲ್ಲಿ ಉಬ್ಬುಶಿಲ್ಪಗಳನ್ನೂ ಅದರ ತಳಭಾಗದಲ್ಲಿ ಕನ್ನಡ ತೆಲುಗು ಸಂಸ್ಕೃತ ನುಡಿಗಳಲ್ಲಿ ಶಾಸನವನ್ನೂ ಕೆತ್ತಿಸಿದ್ದಾನೆ. ಆ ಕಲ್ಬರಹದಲ್ಲಿ ಓಂ ನಮಃ ಸಿದ್ದೇಭ್ಯ ಎಂದು ಶುರುವಾಗುವ ದೀರ್ಘ ಕನ್ನಡ ಗದ್ಯದೊಂದಿಗೆ ಮೂರು ಸಂಸ್ಕೃತ ವೃತ್ತಗಳೂ, ಆರು ಕನ್ನಡ ವೃತ್ತಗಳೂ, ಮೂರು ತೆಲುಗು ಕಂದಪದ್ಯಗಳೂ ಕೊನೆಯಲ್ಲಿ ಕನ್ನಡ ವಚನಗಳೂ ಇವೆ. ಸಂಸ್ಕೃತ ವೃತ್ತಗಳಲ್ಲಿ ಜಿನವಲ್ಲಭನು ತಾನು ’ವಾಚಕಾಭರಣ’ ಎಂಬ ಬಿರುದಿನಿಂದ ಕೀರ್ತಿತನಾಗಿದ್ದೇನೆಂದು ಹೇಳಿಕೊಳ್ಳುತ್ತಾನೆ.
ಅಮೂಲ್ಯ ಶಾಸನ
ಬದಲಾಯಿಸಿಗಂಗಾಧರಂ ಶಾಸನ ಎಂದೇ ಪ್ರಸಿದ್ಧವಾಗಿರುವ ಈ ಶಾಸನದಲ್ಲಿನ ಕನ್ನಡ ಪಠ್ಯದಲ್ಲಿ ಪಂಪನ ಕುರಿತಾದ ಎಷ್ಟೋ ವಿವರಗಳು ದಾಖಲಾಗಿವೆ. ಈ ಶಾಸನ ದೊರೆಯುವವರೆಗೆ ಪಂಪನ ತಾಯ್ತಂದೆಯರು ಹಾಗೂ ಹುಟ್ಟೂರುಗಳ ಕುರಿತಂತೆ ಮಾಹಿತಿ ಏನೂ ಇರಲಿಲ್ಲವಾಗಿ ಗಂಗಾಧರಂ ಶಾಸನ ಕನ್ನಡ ಸಾಹಿತ್ಯಚರಿತ್ರೆಯ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿದೆ. ಅದೇ ರೀತಿ ತೆಲುಗು ಕಂದ ಪದ್ಯಗಳೂ ಸಹಾ ತೆಲುಗಿನ ಸಾಹಿತ್ಯಚರಿತ್ರೆಯ ದೃಷ್ಟಿಯಿಂದ ಅತ್ಯಂತ ಪ್ರಮುಖ ಸ್ಥಾನ ಪಡೆಯುತ್ತವೆ. ಇದುವರೆಗೆ ನನ್ನಯ (ಕ್ರಿ.ಶ.೧೦೫೧) ಕವಿಯನ್ನೇ ತೆಲುಗಿನ ಆದಿಕವಿ ಎಂದು ಭಾವಿಸಲಾಗಿತ್ತು. ಆದರೆ ನನ್ನಯನಿಗಿಂತ ಮೊದಲೇ ಬರೆಯಲಾಗಿರುವ ಈ ತೆಲುಗು ಕಂದಪದ್ಯಗಳ ಮೂಲಕ ತೆಲುಗಿನ ಪ್ರಾಚೀನತೆ ಕ್ರಿ.ಶ. ೯೪೫ರಷ್ಟು ಹಿಂದಕ್ಕೆ ಹೋಗುತ್ತದೆ. ಇದರ ಆಧಾರದಿಂದ ಇದೀಗ ತೆಲುಗಿಗೆ ಶಾಸ್ತ್ರೀಯಭಾಷೆ ಸ್ಥಾನ ಪ್ರಾಪ್ತವಾಗಿರುವುದನ್ನು ಇಲ್ಲಿ ಸ್ಮರಿಸಬಹುದು.
ಪ್ರಾಚೀನ ತೆಲುಗು ಕಂದ
ಬದಲಾಯಿಸಿತೆಲುಗು ಕಂದ ಪದ್ಯಗಳು ಈ ರೀತಿ ಇವೆ:
- ಜಿನಭವನಮುನೆತ್ತಿಂಚುಟ
- ಜಿನಪೂಜಲ್ ಸೇಯುಚುನ್ನ ಜಿನಮುನುಲಕು ನ|
- ತ್ತಿನಯುನ್ನ ದಾನಮೀವುಟ
- ಜಿನವಲ್ಲಭು ಬೋಲಗಲರೆ ಜಿನಧರ್ಮಪರುಲ್||
- ದಿನಕರು ಸರಿ ವೆಲ್ಗುದಮನಿ
- ಜಿನವಲ್ಲಭು ನೊಟ್ಟು ನೆತ್ತು ಜಿತಕವಿನನಕುನ್|
- ಮನುಜುಲ್ ಗಲರೇ ಧಾತ್ರಿನ್
- ವಿನುತಿಚ್ಚುದನನಿಯವೃತ್ತ ವಿಭುದ ಕವೀಂದ್ರುಲ್||
- ಒಕ್ಕೊಕ್ಕ ಗುಣಮು ಕಲ್ಗುದು
- ರೊಕ್ಕಟಗಾ ಕೊಕ್ಕಲಕ್ಕಲೇರೆವ್ವರಿಕಿನ್|
- ಲೆಕ್ಕಿಂಪ ನೊಕ್ಕ ಲಕ್ಕಕು
- ಮಿಕ್ಕಿಲಿ ಗುಣಪಕ್ಷಪಾತಿ ಗುಣಮಣಿ ಗಣಮುಲ್||
“ಜಿನಭವನಗಳನ್ನು ಕಟ್ಟಿಸುವಲ್ಲಿ, ಜಿನಸಾಧುಗಳನ್ನು ಪೂಜಿಸುವಲ್ಲಿ, ಜಿನಮುನಿಗಳಿಗೆ ಇಷ್ಟವಾದ ದಾನ ಕೊಡುವಲ್ಲಿ ಇತರ ಜೈನರಾರೂ ಜಿನವಲ್ಲಭನಿಗೆ ಹೋಲಿಕೆಯಾಗರು. ಸೂರ್ಯ ಸಮಾನವಾಗಿ ಬೆಳಗುವರು. ಜಿನವಲ್ಲಭನಿಗೆ ಸರಿದೂಗುವ ಬೇರೆ ಕವಿಗಳಾರೂ ಇಲ್ಲ. ಒಬ್ಬೊಬ್ಬರಿಗೆ ಒಂದೊಂದು ಸುಗುಣ ಇರುತ್ತೆ. ಆಲೋಚಿಸಿ ನೋಡಿದರೆ ಜಿನವಲ್ಲಭನೇ ಗುಣಮಣಿ. ಮೇಲಾಗಿ ಆತನು ಗುಣಪಕ್ಷಪಾತಿ” [೨][೩]ಎಂಬುದು ಈ ಕಂದಪದ್ಯಗಳ ಅರ್ಥ. ಇಷ್ಟಲ್ಲದೆ ಜಿನವಲ್ಲಭನು ’ತ್ರಿಭುವನತಿಲಕ’ ಎಂಬ ಜೈನಬಸದಿ, ’ಮದನವಿಲಾಸ’ ಎಂಬ ತೋಟವನ್ನು ಆ ಗುಡ್ಡದ ಮೇಲೆ ನಿರ್ಮಿಸಿ ತಪ್ಪಲಿನಲ್ಲಿ ’ಕವಿತಾಗುಣಾರ್ಣವ’ ಎಂಬ ಕೆರೆಯನ್ನು ಕಟ್ಟಿಸುತ್ತಾನೆ. ಆದರೆ ಇಂದು ಧರ್ಮಪುರ, ಮದನವಿಲಾಸ ಮತ್ತು ತ್ರಿಭುವನತಿಲಕಗಳು ಮಾಯವಾಗಿವೆ. ಕವಿತಾಗುಣಾರ್ಣವ ಕೆರೆಯು ಗುರುತೇ ಸಿಗದಷ್ಟು ಒಣಗಿದೆ.
ಬೊಮ್ಮಲಮ್ಮ ಗುಡ್ಡದ ಶಾಸನ ಮತ್ತು ಇತರ ಉಬ್ಬುಶಿಲ್ಪಗಳು ದೂರದಿಂದಲೇ ಸ್ಥೂಲನೋಟಕ್ಕೆ ಸಿಗುವುದಾದರೂ ಹತ್ತಿರದಿಂದ ನೋಡಲನುವಾಗುವಂತೆ ಅದರ ಮುಂದಿನ ಚಾಚುಬಂಡೆಯಲ್ಲಿ ಕಮಲದ ಹೂವಿನ ಮೇಲೆ ಪಾದಗಳಿರುವಂತೆ ಕೆತ್ತಲಾಗಿದೆ. ಯಾರೋ ದುರಾತ್ಮರು ಆ ಪಾದಗಳ ಕೆಳಗೆ ನಿಧಿ ಇರಬಹುದೆಂದು ಭಾವಿಸಿ ಅವುಗಳನ್ನು ನಾಶ ಮಾಡಿದ್ದಾರೆ. ಇಂತಹ ಚರಿತ್ರಾರ್ಹವಾದ ಈ ತಾಣವನ್ನು ಕೆಲ ವರ್ಷಗಳ ಹಿಂದೆ ಕಲ್ಲು ಗಣಿಗಾರಿಕೆಗೆ ಒಪ್ಪಿಸಲಾಗಿತ್ತು. ಸ್ಥಳೀಯರು ಮತ್ತು ತೆಲುಗು ಸಾಹಿತ್ಯವೇತ್ತರು ದನಿಯೆತ್ತಿದ ಕಾರಣ ಗಣಿಗಾರಿಕೆ ಸಧ್ಯಕ್ಕೆ ನಿಂತಿದೆ. ಅಂದಿನ ವೃಷಭಾದ್ರಿಯೇ ಇಂದಿನ ಬೊಮ್ಮಲಮ್ಮ ಗುಟ್ಟ (ಗೊಂಬೆಗಳ ಅಮ್ಮನ ಗುಡ್ಡ). ಚಕ್ರೇಶ್ವರಿ (ಸೀತಮ್ಮ) ಯ ಕೆಳಗೆ ಬೆಲೆ ಕಟ್ಟಲಾಗದ ಪ್ರಾಚೀನ ಶಾಸನವಿದೆ.
ಹೊರಗಿನ ಸಂಪರ್ಕಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ