ಬಹುವ್ರೀಹಿ ಸಮಾಸ
ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಸ್ತ ಪದವಾದಾಗ ಬೇರೊಂದು ಪದದ (ಅನ್ಯ ಪದದ) ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಬಹುವ್ರೀಹಿ ಎಂಬ ಹೆಸರು.
ಹಣೆಗಣ್ಣ , ಮುಕ್ಕಣ್ಣ , ನಿಡುಮೂಗ - ಈ ಪದಗಳನ್ನು ಬಿಡಿಸಿ ಬರೆದರೆ ,
- ಹಣೆಯಲ್ಲಿ + ಕಣ್ಣು ಉಳ್ಳವನು ಯಾರೋ ಅವನು - ಹಣೆಗಣ್ಣ (ಶಿವ)
- ಮೂರು + ಕಣ್ಣು ಉಳ್ಳವನು ಯಾರೋ ಅವನು - ಮುಕ್ಕಣ್ಣ (ಶಿವ)
- ನಿಡಿದು + ಮೂಗನ್ನು ಉಳ್ಳವನು ಯಾರೋ ಅವನು - ನಿಡುಮೂಗ
ಹಣೆಯಲ್ಲಿ + ಕಣ್ಣು ಉಳ್ಳವ - ಈ ಎರಡೂ ಪದಗಳ ಅರ್ಥ ಇಲ್ಲಿ ಮುಖ್ಯವಲ್ಲ . ಈ ಎರಡೂ ಪದಗಳ ಅರ್ಥದಿಂದ ಹೊಳೆಯುವ ಅನ್ಯ ಪದ ಶಿವ ಮುಖ್ಯ. ಇಲ್ಲಿ ಮೂರನೆಯ (ಅನ್ಯ ಪದ) ಪದದ ಅರ್ಥವೇ ಪ್ರಮುಖವಾಗಿ ಗೋಚರಿಸುತ್ತದೆ.
ಮೂರು ಕಣ್ಣು ಉಳ್ಳವ - ಅಂದರೆ ಶಿವ ಎಂಬ ಅರ್ಥ ಮುಖ್ಯ.. ಶಿವನಿಗೆ ಮೂರನೆಯ - ಜ್ಞಾನ ಚಕ್ಷು ಇರುವುದೆಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅನ್ತೆಯೇ ಹಣೆಗಣ್ಣ ಎಂಬ ಪದ.
ಹೀಗೆ ಸಮಾಸದಲ್ಲಿರುವ ಪದಗಳ ಅರ್ಥಕ್ಕೆ ಪ್ರಾಧಾನ್ಯತೆಯೇ ಇಲ್ಲದೆ ಅನ್ಯವಾದ ಬೇರೊಂದು ಪದವು ಇಲ್ಲಿ ಪ್ರಧಾನವಾಗಿ ಬರುತ್ತದೆ.
ಬಹುವ್ರೀಹಿ ಸಮಾಸದ ವಿಧಗಳು
ಬದಲಾಯಿಸಿ- ಪೂರ್ವದ ಹಾಗೂ ಉತ್ತರದ ಪದಗಳೆರಡೂ ಸಮಾನ ವಿಭಕ್ತಿಗಳಿಂದ ಕೂಡಿದ್ದರೆ ಅವನ್ನು ಸಮಾನಾಧಿಕರಣ ಬಹುವ್ರೀಹಿ ಎಂದು ಹೆಸರು.
- ಪೂರ್ವದ ಹಾಗೂ ಉತ್ತರದ ಪದಗಳೆರಡೂ ಭಿನ್ನ ಭಿನ್ನ ವಿಭಕ್ತಿಗಳಿಂದ ಕೂಡಿದ್ದರೆ ಅವನ್ನು ವ್ಯಧಿಕರಣ ಬಹುವ್ರೀಹಿ ಎಂದು ಹೆಸರು. (ವಿ+ಅಧಿಕರಣ = ವ್ಯಧಿಕರಣ - ವಿಗತವಾದ ಅಧಿಕರಣ)
- ಕನ್ನಡ - ಕನ್ನಡ ಪದಗಳು
- ಮೂರು ಕಣ್ಣು ಉಳ್ಳವ - ಮುಕ್ಕಣ್ಣ (ಸಮಾನಾಧಿಕರಣ ಬಹುವ್ರೀಹಿ) (ಮೂರು, ನಾಲ್ಕು - ಈ ರೀತಿ ಸಂಖ್ಯಾ ವಾಚಕ ಪದವಿದ್ದರೂ ಇವು ದ್ವಿಗು ಸಮಾಸಕ್ಕೆ ಉದಾಹರಣೆಯಾಗುವುದಿಲ್ಲ . ಏಕೆಂದರೆ ಈ ಪದಕ್ಕೆ ವಿಶೇಷವಾದ ಅರ್ಥವಿದೆ )
- ನಾಲ್ಕು ಮೊಗ ಉಳ್ಳವ - ನಾಲ್ಮೊಗ (ಸಮಾನಾಧಿಕರಣ ಬಹುವ್ರೀಹಿ) (ಮುಖ - ತತ್ಸಮ : ಮೊಗ - ತದ್ಭವ)
- ಕೆಂಪು ಕಣ್ಣು ಉಳ್ಳವ - ಕೆಂಗಣ್ಣ (ಸಮಾನಾಧಿಕರಣ ಬಹುವ್ರೀಹಿ)
- ಡೊಂಕು ಕಾಲು ಉಳ್ಳವ - ಡೊಂಕುಗಾಲ (ಸಮಾನಾಧಿಕರಣ ಬಹುವ್ರೀಹಿ)
- ಕಡುದಾದ ಚಾಗ ಮಾಡುವವನು - ಕಡುಚಾಗಿ (ಸಮಾನಾಧಿಕರಣ ಬಹುವ್ರೀಹಿ) (ತ್ಯಾಗ - ತತ್ಸಮ : ಚಾಗ - ತದ್ಭವ) (ಕಡು = ವಿಶೇಷವಾಗಿ)
- ಹಣೆಯಲ್ಲಿ ಕಣ್ಣು ಉಳ್ಳವ - ಹಣೆಗಣ್ಣ (ವ್ಯಧಿಕರಣ ಬಹುವ್ರೀಹಿ)
- ಕಿಚ್ಚು ಕಣ್ಣಿನಲ್ಲಿ ಆವಂಗೋ ಅವನು - ಕಿಚ್ಚುಗಣ್ಣ (ವ್ಯಧಿಕರಣ ಬಹುವ್ರೀಹಿ)
- ಸಂಸ್ಕೃತ - ಸಂಸ್ಕೃತ ಪದಗಳು
- ಇಕ್ಷುವನ್ನು ಕೋದಂಡವಾಗಿ ಉಳ್ಳವನು - ಇಕ್ಷುಕೋದಂಡ (ಸಮಾನಾಧಿಕರಣ ಬಹುವ್ರೀಹಿ)
- ಚಕ್ರವು ಪಾಣಿಯಲ್ಲಿ ಆವಂಗೋ ಅವನು - ಚಕ್ರಪಾಣಿ (ವ್ಯಧಿಕರಣ ಬಹುವ್ರೀಹಿ)
- ಫಾಲದಲ್ಲಿ ನೇತ್ರವನ್ನು ಉಳ್ಳವನು - ಫಾಲನೇತ್ರ (ವ್ಯಧಿಕರಣ ಬಹುವ್ರೀಹಿ)