ಬಹಾ'ಇ ಧರ್ಮ (ಆಂಗ್ಲ: Bahá'í ) ೧೯ನೇ ಶತಮಾನದಲ್ಲಿ ಪರ್ಶಿಯಾದಲ್ಲಿ ಬಹಾಉಲ್ಲಾ ಅವರಿಂದ ಸ್ಥಾಪಿಸಲಾದ ಒಂದು ಏಕೀಶ್ವರವಾದಿ ಧರ್ಮ. ಪ್ರಪಂಚದಲ್ಲಿ ಸುಮಾರು ೫-೬ ಮಿಲಿಯನ್ ಜನರು ಈ ಧರ್ಮದ ಪಾಲಕರೆಂದು ಅಂದಾಜಿಸಲಾಗಿದೆ.

ಇಸ್ರೇಲ್ಹೈಫ ನಗರದಲ್ಲಿ ಬಹಾ'ಇ ಧರ್ಮದ ಮುಖ್ಯ ಕಛೇರಿ

೧೮೪೪ ರಲ್ಲಿ ಪ್ರಾರಂಭವಾದ ಬಹಾಯಿ ಧರ್ಮವು ಸ್ವತಂತ್ರವಾದ ವಿಶ್ವ ಧರ್ಮವಾಗಿದೆ. ಬಹಾಉಲ್ಲಾರವರು, ಅಂದರೆ ದೇವರ ಜ್ಯೋತಿ ವಿಶ್ವಧರ್ಮಗಳ ಹೊಸ ಅಧ್ಯಾಯದ ಲೇಖಕರಾಗಿರುವರು.

ಬಹಾಉಲ್ಲಾರವರು ೧೮೧೭ನೇ ನವೆಂಬರ್ ೧೨ ರಂದು ಪರ್ಷಿಯಾ ದೇಶದ ಪ್ರಸಿದ್ಧ ಕುಟುಂಬವೊಂದರಲ್ಲಿ ಜನಿಸಿದರು. ದೇವರು ಒಬ್ಬನೇ, ಧಾರ್ಮಿಕ ಸತ್ಯವು ಅನಿರ್ಬಂಧಿತವಾಗಿರದಿದ್ದರೂ ಪೂರಕವಾಗಿದೆ, ಮಾನವನ ಆಧ್ಯಾತ್ಮಿಕ ವಿಕಾಸಕ್ಕೆ ಮಾರ್ಗದರ್ಶನ ನೀಡುವ ದಿವ್ಯ ಬೋಧನೆಗಳನ್ನೊಳಗೊಂಡ ಧರ್ಮವು ಪ್ರಗತಿಶೀಲವಾಗಿದೆ ಎಂಬುದನ್ನು ಜಗತ್ತಿಗೆ ಘೋಷಿಸಲು ಅವರು ತನ್ನ ಭೋಗ ಜೀವನವನ್ನು ತ್ಯಾಗ ಮಾಡಿದರು. "ಮಾನವ ಜನಾಂಗ ಒಂದು ಹಾಗೂ ಇಡೀ ಪೃಥ್ವಿಯೇ ಒಂದು ರಾಷ್ಟ್ರ ಮತ್ತು ಮಾನವ ಜನಾಂಗ ಅದರ ಪ್ರಜೆಗಳು" ಎಂದು ಅವರು ಘೋಷಿಸಿದರು.

ತಾನು ಭಗವಂತನ ಸಂದೇಶವಾಹಕ ಎಂಬುದು ೧೮೫೩ ರಲ್ಲಿ ಅವರಿಗೆ ಪ್ರಪ್ರಥಮವಾಗಿ ತಿಳಿದುಬಂದಿತು. ಅವರು ಇರಾಕಿನ ಬಾಗ್ದಾದಿಗೆ ಗಡೀಪಾರಾಗಿ ಹೋದ ೧೦ ವರ್ಷಗಳ ಬಳಿಕ ಪ್ರಪಂಚದ ಎಲ್ಲಾ ಧರ್ಮಗಳೂ ಭವಿಷ್ಯ ನುಡಿದ ಧರ್ಮ - ಭರವಸಿಗ ತಾನೇ ಎಂದು ಸಾರ್ವಜನಿಕವಾಗಿ ಘೋಷಿಸಿದರು. ಇಸ್ತಾಂಬುಲ್‍ನ ಕಾನ್‍ಸ್ಟಂಟಿನೋಪಲ್ ಮತ್ತು ಅಡ್ರಿಯೋನೋಪಲ್‍ಗೆ ಗಡೀಪಾರಾಗಿ ಹೋದ ಅವರು ಕೊನೆಯದಾಗಿ ೧೮೬೮ರಲ್ಲಿ ಕ್ರೈಸ್ತರ ಪವಿತ್ರ ಸ್ಥಳವಾದ ಕಾರಾಗೃಹ ನಗರ ಆಕ್ಕಾ ಎಂಬಲ್ಲಿಗೆ ಗಡೀಪಾರಾದರು.

ಸುಮಾರು ೪೦ ವರ್ಷಗಳ ಗಡೀಪಾರು ಶಿಕ್ಷೆ, ಸೆರೆಮನೆವಾಸ ಮತ್ತು ಕಷ್ಟ-ಸಂಕಷ್ಟಗಳ ಬಳಿಕ ಬಹಾಉಲ್ಲಾರವರು ೧೮೯೨ರಲ್ಲಿ ಸ್ವರ್ಗಸ್ಥರಾದರು.

ಬಹಾಉಲ್ಲಾರವರ ಬರವಣಿಗೆಗಳು ಮಾನವ ಪೂರೈಕೆಯ ತೀರ ವ್ಯಕ್ತಿಗತವಾದ ವಿಷಯದಿಂದ ಹಿಡಿದು ಗಹನ ಗಂಭೀರವಾದ ವಿಷಯಗಳುಳ್ಳ ಸಾವಿರಾರು ಶಾಸನ (ಪತ್ರಗಳು) ಗಳನ್ನೊಳಗೊಂಡಿವೆ. ಆಧುನಿಕ ಸಮಾಜದ ಅಗತ್ಯ ಮತ್ತು ಅವಶ್ಯಕತೆಗಳನ್ನು ಕೇಂದ್ರೀಕರಿಸಿರುವ ಬಹಾಉಲ್ಲಾರವರ ಬೋಧನೆಗಳು ವಿವಿಧ ಜನಾಂಗ, ರಾಷ್ಟ್ರ ಮತ್ತು ಧರ್ಮಗಳನ್ನು ಒಂದೇ ಮಾನವ ಪರಿವಾರದಂತಾಗಿಸುವಂತೆ ಒಂದುಗೂಡಿಸುವ ಹಾಗೂ ಶಾಶ್ವತ ವಿಶ್ವ ಶಾಂತಿಯ ಸಾಧನೆಯ ಉದ್ದೇಶವನ್ನಿಟ್ಟುಕೊಂಡಿದೆ.

ಇಂದು ಜಗತ್ತಿನ ೩೪೦ಕ್ಕೂ ಮಿಕ್ಕಿ ರಾಷ್ಟ್ರಗಳು, ಆಶ್ರಿತ ದೇಶಗಳು, ಸಂಸ್ಥಾನಗಳು, ದ್ವೀಪಗಳನ್ನೊಳಗೊಂಡ ೧,೧೧,೦೦೦ ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಬಹಾಯಿಗಳು ವಾಸಿಸುತ್ತಿದ್ದಾರೆ.

ಬಹಾಯಿ ಪವಿತ್ರ ಬರವಣಿಗೆಗಳನ್ನು ಜಗತ್ತಿನ ೭೦೦ ಕ್ಕಿಂತಲೂ ಹೆಚ್ಚಿನ ಭಾಷೆಗಳು ಮತ್ತು ಪ್ರಾಂತೀಯ ಭಾಷೆಗಳಿಗೆ ಭಾಷಾಂತರಿಸಲಾಗಿದೆ.

ಭಾರತದಲ್ಲಿ ಬಹಾಯಿ ಧರ್ಮ:

ಬದಲಾಯಿಸಿ

ಭಾರತಕ್ಕೆ ಬಹಾಯಿ ಧರ್ಮವು ೧೮೭೨ರಲ್ಲಿ ಬಂದಿತು. ಇಂದು ಭಾರತದ ೩೫೦೦ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಬಹಾಯಿಗಳು ವಾಸಿಸುತ್ತಿದ್ದು, ಸುಮಾರು ೧೦,೦೦೦ ಬಹಾಯಿ ಅಧ್ಯಾತ್ಮಿಕ ಸಭೆಗಳಿವೆ. ಭಾರತದ ಬಹಾಯಿ ಸಮುದಾಯವು ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿ ಕಾರ್ಯದಲ್ಲಿ ಉತ್ತಮ ಯೋಜನೆಗಳನ್ನು ಹಮ್ಮಿಕೊಂಡಿವೆ.