ಏಕದೇವತಾವಾದ ಜಗತ್ಕಾರಣನಾದ ಈಶ್ವರನೊಬ್ಬನೇ ದೇವನೆಂದು ಪ್ರತಿಪಾದಿಸುವ ತತ್ತ್ವ (ಮಾನೊಥೀಯಿಸಂ). ಮಾನವ ತನ್ನನ್ನು ಮೀರಿದ ಅದ್ಭುತ ಶಕ್ತಿಯನ್ನು ಮೊದಮೊದಲು ಬೇರೆ ಬೇರೆ ರೂಪಗಳಲ್ಲಿ ಕಂಡು ಅವನ್ನು ಆರಾಧಿಸತೊಡಗಿದಾಗ ಬಹುದೇವತಾತತ್ತ್ವ ರೂಪತಾಳಿ ಕ್ರಮೇಣ ದೇವತೆಗಳಿಗೆಲ್ಲ ಒಡೆಯ ಒಬ್ಬನೇ ಎಂಬ ಭಾವನೆ ಬೆಳೆಯಿತೆಂದು ಹೇಳಬಹುದು.

Krishna displays his Vishvarupa (universal form) to Arjuna on the battlefield of Kurukshetra.

ಐತಿಹಾಸಿಕ ದೃಷ್ಟಿಕೋನ

ಬದಲಾಯಿಸಿ

ಐತಿಹಾಸಿಕ ದೃಷ್ಟಿಯಿಂದ ಪರಿಶೀಲಿಸಿದರೆ, ಮುಖ್ಯವಾದ ಮತಧರ್ಮಗಳೆಲ್ಲವೂ ಬಹುದೇವತಾತತ್ವವನ್ನು ನಿರಾಕರಿಸಿ ಏಕದೇವತಾತತ್ತ್ವದಿಂದ ಪ್ರಾಮುಖ್ಯಕ್ಕೆ ಬಂದಿವೆ ಎನ್ನಬಹುದು. ಮತಧರ್ಮದ ವಿಕಾಸದ ಮೊದಲನೆಯ ಘಟ್ಟದಲ್ಲಿ ಪ್ರಕೃತಿಯ ಶಕ್ತಿಗಳನ್ನು ಆರಾಧಿಸುವುದು ಪ್ರಾಚೀನ ಅನಾಗರಿಕ ಜನಗಳಲ್ಲಿ ಸಾಧಾರಣವಾಗಿತ್ತು. ಮೊದಮೊದಲು ಮಾನವನಿಗೆ ಅರಿವಾದ ಶಕ್ತಿಗಳು ಸೂರ್ಯ, ಚಂದ್ರ,ಅಗ್ನಿ, ಹರಿಯುವ ಪ್ರವಾಹ, ಮಳೆ ಸುರಿಸುವ ಆಕಾಶ-ಇತ್ಯಾದಿಗಳು. ಜೀವನದ ಮೇಲೆ ಅತ್ಯಂತ ಪರಿಣಾಮಕಾರಿಯಾಗಿ ಪ್ರಭಾವವನ್ನು ಬೀರಿದ ಈ ಶಕ್ತಿಗಳಿಗೆ ಹೆಸರುಗಳನ್ನು ಕೊಟ್ಟು ದೇವತೆಗಳೆಂದು ಕರೆಯಲಾಯಿತು. ಪ್ರಕೃತಿಪೂಜೆ, ಜೀವನಕ್ಕೆ ಸಹಾಯಕವಾಗಿರುವ ಪ್ರಾಣಿಗಳ ಪೂಜೆ, ಕಣ್ಮರೆಯಾದ ಹಿರಿಯರ (ಪಿತೃ)ಪೂಜೆ ಇವು ಆಚರಣೆಯಲ್ಲಿದ್ದುವು. ಯುದ್ಧಗಳಲ್ಲಿ ಗೆಲುವು-ಸೋಲುಗಳು ದೇವತೆಗಳಿಂದ ಉಂಟಾಗುತ್ತವೆ ಎಂಬ ನಂಬಿಕೆಯೂ ಉಂಟಾಯಿತು. ಪ್ರಾಚೀನ ಸಂಸ್ಕೃತಿಗಳಲ್ಲಿ (ಉದಾಹರಣೆಗೆ ಗ್ರೀಕರಲ್ಲಿ ಮತ್ತು ಆರ್ಯರಲ್ಲಿ) ಇಂಥ ಬಹುದೇವತಾ ಪೂಜೆಯನ್ನು ಕಾಣಬಹುದು.

ಏಕದೇವತಾವಾದದ ಉಗಮ

ಬದಲಾಯಿಸಿ

ಬಹುದೇವತಾತತ್ತ್ವ ಕ್ರಮೇಣ ಏಕದೇವತಾತತ್ತ್ವದ ಕಡೆಗೆ ಸಾಗಿದ ಕಾರಣಗಳನ್ನು ಮಾನವಶಾಸ್ತ್ರಜ್ಞರು ಸಂಶೋಧಿಸಿದ್ದಾರೆ. ಚಿಕ್ಕ ಪುಟ್ಟ ಗುಂಪುಗಳನ್ನು ಕಟ್ಟಿಕೊಂಡು ಅಲೆದಾಡುತ್ತಿದ್ದ ಮಾನವ ನದಿ ಬಯಲುಗಳಲ್ಲಿ ಕ್ರಮೇಣ ದೇಶಗಳನ್ನು ಕಟ್ಟಿಕೊಂಡು ಅವನ ಬುದ್ಧಿ ವಿಕಾಸವಾಗಲು ಅವಕಾಶವಾಯಿತು. ಅವನ ದೃಷ್ಟಿ ವಿಶಾಲವಾಯಿತು. ಚಿಕ್ಕ ಗುಂಪಿನ ದೇವತೆಗಳು ಒಂದೇ ನಾಗರಿಕತೆಯಲ್ಲಿ ಸೇರಿ ಹೋದರು. ಅವರನ್ನು ತಾರತಮ್ಯ ಭಾವನೆಯಿಂದ ಕಂಡು ಅವರಲ್ಲಿ ಒಂದು ಅಂತಸ್ತಿನ ವ್ಯವಸ್ಥೆಯನ್ನು ಮಾಡಲಾಯಿತು. ಒಬ್ಬನೇ ಒಡೆಯನನ್ನು ಇತರ ದೇವತೆಗಳು ಅನುಸರಿಸಬೇಕು ಎಂಬ ಭಾವನೆ ಉದಯವಾಯಿತು. ಎಲ್ಲರಿಗಿಂತ ಹಿರಿಯ ದೇವತೆಯ ಭಾವನೆಯೇ ಸರ್ವೇಶ್ವರನ ಭಾವನೆಯ ವಿಕಾಸಕ್ಕೆ ಅಂದರೆ ಏಕದೇವತಾತತ್ತ್ವಕ್ಕೆ ಪ್ರಧಾನ ಕಾರಣವಾಯಿತು.

ಯುದ್ಧದಲ್ಲಿ ಜಯಿಸಿದವರ ದೇವತೆಗಳಿಗೆ ಸೋತವರ ದೇವತೆಗಳು ಅಧೀನರಾದಂತೆ ಭಾವಿಸಲಾಯಿತು. ಕುಟುಂಬ ದೇವತೆಗಿಂತ ದೇಶದ ದೇವತೆಗಳಿಗೆ ಹೆಚ್ಚು ಪ್ರಾಧಾನ್ಯ ಕೊಡಲಾಯಿತು. ಕುಟುಂಬ ಜೀವನದ ಭಾವನೆಯಿಂದ ದಂಪತಿ ದೇವತೆಗಳ ಕಲ್ಪನೆಯಾಯಿತು. ಪತಿ ದೇವತೆಗೆ ಹೆಚ್ಚು ಪ್ರಾಧಾನ್ಯ ಬಂತು. ಭೂಮಿ ದೇವತೆಗಳಿಗಿಂತ ಆಕಾಶ ದೇವತೆಗಳಿಗೆ ಹೆಚ್ಚು ಶಕ್ತಿ ಇದೆ ಎಂದು ಭಾವಿಸಲಾಯಿತು. ಹೀಗೆ ಶಕ್ತಿಯ ತಾರತಮ್ಯ ಭಾವನೆಯಿಂದ ಸರ್ವೇಶ್ವರನ ಭಾವನೆ ಬೆಳೆಯುತ್ತಾ ಬಂತು. ಸೃಷ್ಟಿಯಲ್ಲಿನ ಋತು ನಿಯಮ, ಕಾಲ ನಿಯಮಗಳನ್ನು ಗುರುತಿಸಿದ ಮೇಲೆ ಸೃಷ್ಟಿಕರ್ತನೊಬ್ಬನಿರಬೇಕೆಂಬ ಕಲ್ಪನೆ ಉದಯಿಸಿತು. ಇವಕ್ಕೆಲ್ಲಾ ಒಡೆಯನಾದವ ಸೃಷ್ಟಿಪಾಲಕನೂ ಆಗಿರಬೇಕು ಎಂಬ ಭಾವನೆಯಿಂದ ಅವನ ಪೂಜೆಗೆ ಹೆಚ್ಚು ಪ್ರೋತ್ಸಾಹ ದೊರಕಿತು.

 
The Trinity is the belief in Christianity that God is one God in essence but three persons: God the Father, God the Son (Jesus), and God the Holy Spirit

ಮಾನವನ ಜನನ ಮರಣಗಳ ಸಮಸ್ಯೆಯಿಂದ ಇಹ, ಪರಲೋಕಗಳ ಕಲ್ಪನೆ, ಅವುಗಳ ಅಧಿಕಾರಿಯ ಭಾವನೆ, ತಲೆದೋರಿತು. ಜ್ವರ, ರುಜಿನ, ಮರಣಾದಿ ನೋವುಗಳಿಂದ ಪಾರಾಗುವ ಬಗೆಯೇನು ಎಂದು ಮಾನವ ಚಿಂತಿಸತೊಡಗಿ ತನ್ನ ಮೊರೆಯನ್ನು ಕೇಳಿ ಶಾಂತಿಯನ್ನು ಕೊಡುವ ಸರ್ವೇಶ್ವರನೊಬ್ಬನಿರಲೇಬೇಕೆಂದು ಹೃದಯಾಂತರಾಳದಲ್ಲಿ ಕಂಡುಕೊಂಡ. ಈ ಪ್ರಕಾರ ಮತಧರ್ಮಗಳ ಉದಯವಾಯಿತು. ಯೆಹೂದೀ,ಕ್ರೈಸ್ತ, ಮಹಮ್ಮದೀಯ ಮುಂತಾದ ಧರ್ಮಗಳು ರೂಪತಾಳಿದುವು. ಮಾನವರೆಲ್ಲರು ಭಗವಂತನ ಮಕ್ಕಳೆಂಬ ಭಾವನೆಯನ್ನು ಪ್ರಚಾರ ಮಾಡಿದುವು.

ಭಾರತದಲ್ಲಿ

ಬದಲಾಯಿಸಿ

ಭಾರತದಲ್ಲೂ ಬಹು ದೇವತಾತತ್ತ್ವಕ್ಕೆ ವೇದಗಳ ಕಾಲದಿಂದೀಚೆಗೆ ಮನ್ನಣೆ ಕಡಿಮೆಯಾಗುತ್ತಾ ಬಂದು ಏಕದೇವತಾತತ್ತ್ವ ಹರಡಿದೆ. ಉಪನಿಷತ್ತುಗಳು ಪರಬ್ರಹ್ಮನೊಬ್ಬನ ಸ್ವರೂಪವನ್ನೇ ವಿಸ್ತಾರವಾಗಿ ಚರ್ಚಿಸಿವೆ. ವೇದಗಳಲ್ಲಿ ಇಂದ್ರಾದಿ ದೇವತೆಗಳಿಗೆ ಮನ್ನಣೆ ಇಲ್ಲ. ಉಪನಿಷತ್ತುಗಳಿಂದ ಏಕತ್ವವಾದವನ್ನೂ ದ್ವೈತ, ವಿಶಿಷ್ಟಾದ್ವೈತಗಳ ಏಕದೇವತಾ ತತ್ತ್ವವನ್ನೂ ಮತಾಚಾರ್ಯರು ಹೊರಗೆಡಹಿದ್ದಾರೆ. ವಿಷ್ಣು ಸರ್ವೋತ್ತಮತ್ವವನ್ನೂ ಶಿವ ಸರ್ವೋತ್ತಮತ್ವವನ್ನೂ ಸಾರುವ, ವೈಷ್ಣವ ಮತ್ತು ಶೈವ ಸಂಪ್ರದಾಯಗಳು ಭಾರತದಲ್ಲಿ ಹರಡಿವೆ. ಜೀವಾತ್ಮರೆಲ್ಲರೂ ಪರಬ್ರಹ್ಮನಿಂದಲೇ ಸೃಷ್ಟಿಸಲ್ಪಟ್ಟು ಅವನಿಂದಲೇ ಮುಕ್ತರಾಗುವರೆಂದು ಹೇಳುವ ಹಿಂದೂ ಧರ್ಮದಲ್ಲಿ ಬಹುದೇವತಾತತ್ತ್ವವಿದೆಯೆಂದು ಹೇಳುವುದು ತಪ್ಪು. ಅವತಾರಗಳನ್ನು ಕೂಡ ವಿಷ್ಣುವಿನ ಅಥವಾ ಈಶ್ವರನ ಅಂಶಗಳ ವ್ಯಕ್ತರೂಪಗಳೆಂದು ಹೇಳುವುದರಿಂದ ಎಷ್ಟೋ ದೇವತೆಗಳನ್ನು ಪುಜಿಸಿದರೂ ಹಿಂದೂ ಧರ್ಮ ಏಕದೇವತಾತತ್ತ್ವವನ್ನೇ ಪ್ರತಿಪಾದಿಸುತ್ತದೆ.

ಇಸ್ಲಾಂ ಧರ್ಮದಲ್ಲಿ ಏಕೇಶ್ವರವಾದ

ಬದಲಾಯಿಸಿ
 
Arabic calligraphy reading "Allah, may his glory be glorified"

ಇಸ್ಲಾಂ ಧರ್ಮದ ಪ್ರಮುಖ ವಿಶ್ವಾಸಗಳಲ್ಲಿ ಏಕೇಶ್ವರವಾದವು ಒಂದು. ಅದನ್ನು ಏಕದೇವತ್ವ ಕಲ್ಪನೆ ಎಂದೂ ಸಹ ಕರೆಯಲಾಗುತ್ತದೆ. 'ಲಾ ಇಲಾಹ ಇಲ್ಲಲ್ಲಾಹ್, ಮುಹಮ್ಮದುರ್ ರಸೂಲುಲ್ಲಾಹ್' ಎನ್ನುವುದು ಈ ವಿಶ್ವಾಸದ ತಳಹದಿ. ಅಂದರೆ 'ಅಲ್ಲಾಹ್'ನಲ್ಲದೇ ಬೇರೊಬ್ಬ ದೇವನಿಲ್ಲ, ಮುಹಮ್ಮದ್ (ಸ) ರವರು ಅಲ್ಲಾಹನ ಸಂದೇಶವಾಹಕರಾಗಿದ್ದಾರೆ ಎಂದರ್ಥ. ಇಸ್ಲಾಂ ಧರ್ಮದ ಪ್ರಕಾರ ಸರ್ವ ಲೋಕದ ಸೃಷ್ಟಿಕರ್ತ ಅಲ್ಲಾಹ್ ಮಾತ್ರ. ಹಾಗಾಗಿ ಅವನಿಗಲ್ಲದೇ ಮಾನವರ ಆರಾಧನೆ, ದಾಸ್ಯ, ಭಕ್ತಿಗಳು ಈ ಲೋಕದಲ್ಲಿರುವ ಯಾವುದೇ ನದಿ, ಸಾಗರ, ಪೃಕೃತಿಗಳಿಗಾಗಲಿ ಅಥವ ಪ್ರಾಣಿ, ಮನುಷ್ಯರಿಗಾಗಲಿ ಸಲ್ಲತಕ್ಕದ್ದಲ್ಲ. ಮಾನವರ ಪಾಲಿನ ದೇವನೆಂದು ಅವನನ್ನಲ್ಲದೇ ಬೇರಾರನ್ನು ಕರೆದು ಪ್ರಾರ್ಥಿಸುವುದು, ಬೇಡುವುದು ಮಹಾಪಾಪವಾಗಿದೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: