ಚಿನ್ನಿ ದಾಂಡು ಅಥವಾ ಗಿಲ್ಲಿ ದಾಂಡು ಅಥವಾ ಹಾಣೆ ಗೆಂಡೆ ಅಥವಾ ಚಿನ್ನಿ ಕೋಲು ಒಂದು ಜನಪ್ರಿಯ ಗ್ರಾಮೀಣ ಆಟ. ಇದರಲ್ಲಿ ಮರದ ಕೋಲಿನಿಂದ ಮಾಡಿದ ಒಂದು ಚಿಕ್ಕ ಚಿನ್ನಿ ಅಥವಾ ಗಿಲ್ಲಿ ಅಥವಾ ಹಾಣೆ ಮತ್ತು ಸ್ವಲ್ಪ ದೊಡ್ಡದಾದ ಒಂದು ದಾಂಡು ಅಥವಾ ಕೋಲು ಇವುಗಳ ಸಹಾಯದಿಂದ ಆಡಲಾಗುತ್ತದೆ. ಇದನ್ನು ವೈಯಕ್ತಿಕವಾಗಿ ಅಥವಾ ತಂಡಗಳಾಗಿ ಆಡಬಹುದು. ಇದು ಭಾರತೀಯ ಉಪಖಂಡದಿಂದ ಹುಟ್ಟಿದ ಕ್ರೀಡೆಯಾಗಿದ್ದು, ದಕ್ಷಿಣ ಏಷ್ಯಾದಾದ್ಯಂತದ ಗ್ರಾಮೀಣ ಪ್ರದೇಶಗಳು ಮತ್ತು ಸಣ್ಣ ಪಟ್ಟಣಗಳಲ್ಲಿ ಹಾಗೂ ಕಾಂಬೋಡಿಯಾ, ಟರ್ಕಿ, ದಕ್ಷಿಣ ಆಫ್ರಿಕಾ, ಇಟಲಿ, ಪೋಲ್ಯಾಂಡ್ ಮತ್ತು ಕ್ಯೂಬಾದಂತಹ ಕೆಲವು ಕೆರಿಬಿಯನ್ ದ್ವೀಪಗಳಲ್ಲಿ ಆಡಲಾಗುತ್ತದೆ. ಆಟವನ್ನು ಎರಡು ಕೋಲುಗಳಿಂದ ಆಡಲಾಗುತ್ತದೆ: ದೊಡ್ಡದಾದ ದಂಡ (ನೇಪಾಳಿ ದಂಡಿ, / दांडू - ಮರಾಠಿ ಮತ್ತು ಕನ್ನಡದಲ್ಲಿ ದಂಡು), ಇದನ್ನು ಸಣ್ಣದನ್ನು ಹೊಡೆಯಲು ಬಳಸಲಾಗುತ್ತದೆ, ಗಿಲ್ಲಿ (ನೇಪಾಳಿಯ ಬಿಯೋ, ವಿಟಿ / विटी - ಮರಾಠಿಯಲ್ಲಿ ಮತ್ತು ಚಿನ್ನಿ - ಕನ್ನಡದಲ್ಲಿ). ಚೆಂಡಿನ ಬದಲು ಸಣ್ಣ ಟಾರ್ಗೆಟ್ ಸ್ಟಿಕ್ ಅನ್ನು ಬಳಸುವುದನ್ನು ಹೊರತುಪಡಿಸಿ, ಇದು ಕ್ರಿಕೆಟ್ ಮತ್ತು ಬೇಸ್‌ಬಾಲ್ ನಂತಹ ಬ್ಯಾಟ್ ಮತ್ತು ಬಾಲ್ ಆಟಗಳಿಗೆ ಅನೇಕ ಹೋಲಿಕೆಗಳನ್ನು ಹೊಂದಿದೆ.[೧]
ಇದು ಒಂದು ಪ್ರಾಚೀನ ಕ್ರೀಡೆಯಾಗಿದ್ದು, ಬಹುಶಃ ೨೫೦೦ ವರ್ಷಗಳ ಹಿಂದಿನ ಮೂಲವನ್ನು ಹೊಂದಿದೆ.[೨]

ಎಡಬದಿಯ ಆಟಗಾರ ದಾಂಡಿನಿಂದ ಚಿನ್ನಿಯನ್ನು ಹೊಡೆಯಲು ಅನುವಾಗುತ್ತಿದ್ದಾನೆ

ವ್ಯವಸ್ಥೆ/ಸಲಕರಣೆಗಳು ಬದಲಾಯಿಸಿ

  • ಆಡಲು ಸಾಕಷ್ಟು ಜಾಗ.[೩]
  • ಸುಮಾರು ಒಂದು ಗೇಣು ಉದ್ದದ ನೆಲದ ಮೇಲೆ ಕೊರೆದ ಒಂದು ಗುಂಡಿ / ಕುಳಿ / ಉಳ್ಳ.
  • ಗುಂಡಿಯಷ್ಟೇ ಉದ್ದವಾದ ಮರದ ಕೋಲಿನಿಂದ ಮಾಡಿದ ಚಿನ್ನಿ / ಹಾಣೆ / ಗಿಲ್ಲಿ. ಇದರ ಎರಡೂ ಬದಿ ಚೂಪಾಗಿರಬೇಕು.
  • ಚಿನ್ನಿಗಿಂತ ಕನಿಷ್ಠ ಎರಡೂವರೆ-ಮೂರು ಪಟ್ಟು ಉದ್ದವಾದ, ಮರದ ಕೋಲಿನಿಂದ ಮಾಡಿದ ನೇರವಾದ ದಾಂಡು.[೪]

ಆಟದ ನಿಯಮಗಳು ಬದಲಾಯಿಸಿ

  • ಆಟಗಾರನು ಗುಂಡಿಯ ಮೇಲೆ ಅಡ್ಡವಾಗಿ ಚಿನ್ನಿಯನ್ನು ಇಡಬೇಕು.
  • ಎದುರು ತಂಡದ ಆಟಗಾರರು ಸನ್ನದ್ಧರಾಗಿರುವುದನ್ನು ತಿಳಿಯಲು ಹೋ ಎಂದು ಕೂಗುವ ರೂಢಿಯಿದೆ.
  • ಎದುರು ತಂಡದವರು ಹೋ ಎಂದು ಉತ್ತರಿಸಿದ ಮೇಲೆ ಚಿನ್ನಿಯ ಕೆಳಭಾಗದಲ್ಲಿ ದಾಂಡನ್ನಿಟ್ಟು ಚಿನ್ನಿಯನ್ನು ಆದಷ್ಟು ದೂರ ಚಿಮ್ಮಬೇಕು.
    • ನೆಲಕ್ಕೆ ಬೀಳುವ ಮೊದಲು ಅದನ್ನು ಎದುರು ತಂಡದ ಆಟಗಾರರು ಹಿಡಿಯಬಹುದು. ಹೀಗೆ ಹಿಡಿದರೆ ಆಟಗಾರ ತನ್ನ ಪಾಳಿ ಕಳೆದುಕೊಂಡಂತೆ.
  • ಎದುರು ತಂಡದವರಿಗೆ ಅದನ್ನು ಹಿಡಿಯಲಾಗದಿದ್ದರೆ ದಾಂಡನ್ನು ಗುಂಡಿಯಿಂದ ಒಂದು ದಾಂಡಿನಷ್ಟು ದೂರ ಹಿಂದೆ ಇಡಬೇಕು.
  • ಎದುರು ತಂಡದ ಯಾವುದಾದರೂ (ಅಥವಾ ಚಿನ್ನಿ ಬಿದ್ದ ಸ್ಥಳಕ್ಕೆ ಹತ್ತಿರವಿದ್ದ) ಆಟಗಾರ ಅದಕ್ಕೆ ಚಿನ್ನಿ ಬಿದ್ದ ಸ್ಥಳದಿಂದ ಹೊಡೆಯಬೇಕು.
    • ಚಿನ್ನಿ ದಾಂಡಿಗೆ ಮುಟ್ಟಿದರೆ ಆಟಗಾರ ತನ್ನ ಪಾಳಿಯನ್ನು ಕಳೆದುಕೊಂಡಂತೆ.
    • ಚಿನ್ನಿ ಗುಂಡಿಯ ಒಳಗೆ ಬಿದ್ದರೆ ಕೂಡ ಆಟಗಾರ ತನ್ನ ಪಾಳಿಯನ್ನು ಕಳೆದುಕೊಂಡಂತೆ.
    • ಚಿನ್ನಿ ಗುಂಡಿಯಿಂದ ಒಂದು ಚಿನ್ನಿಯಷ್ಟು ದೂರದಲ್ಲಿ ಬಿದ್ದರೆ ಆಟಗಾರ ಎಡಗೈಯಲ್ಲಿ ಆಟ ಮುಂದುವರೆಸಬೇಕು.
  • ಆಟಗಾರನು ಚಿನ್ನಿಯನ್ನು ದಾಂಡಿನಿಂದ ಮೇಲಕ್ಕೆ ಚಿಮ್ಮಿಸಿ ಚಿನ್ನಿ ಗಾಳಿಯಲ್ಲಿರುವಾಗ ಅದಕ್ಕೆ ಹೊಡೆಯಬೇಕು. ಗಾಳಿಯಲ್ಲಿರುವಾಗ ಎಷ್ಟು ಸಲ ಬೇಕಾದರೂ ಹೊಡೆಯಬಹುದು.
    • ಹೀಗೆ ಮೇಲೆ ಚಿಮ್ಮಿಸಿದಾಗ ಎದುರು ತಂಡದ ಆಟಗಾರರು ಚಿನ್ನಿಯನ್ನು ಹಿಡಿದರೆ ಆಟಗಾರ ತನ್ನ ಪಾಳಿ ಕಳೆದುಕೊಂಡಂತೆ.
    • ಮೂರು ಬಾರಿ ಚಿನ್ನಿಯನ್ನು ಹೀಗೆ ಹೊಡೆಯಲಾಗದಿದ್ದರೆ ಆಟಗಾರ ಪಾಳಿ ಕಳೆದುಕೊಂಡಂತೆ.
    • ಚಿನ್ನಿಯನ್ನು ಎರಡಕ್ಕಿಂತ ಹೆಚ್ಚು ಬಾರಿ ಹೊಡೆದರೆ ಗಿಲ್ಲಿ ಎಂದು ಕರೆಯಲಾಗುತ್ತದೆ. (ಎರಡು ಬಾರಿ ಹೊಡೆದರೆ ಒಂದು ಗಿಲ್ಲಿ, ಮೂರು ಬಾರಿ ಹೊಡೆದರೆ ಎರಡು ಗಿಲ್ಲಿ.. ಹೀಗೆ. ಸ್ಥಳದಿಂದ ಸ್ಥಳಕ್ಕೆ ಈ ನಿಯಮ ಬದಲಾಗಬಹುದು)
  • ಚಿನ್ನಿ ಬಿದ್ದ ಸ್ಥಳದಿಂದ ಗುಂಡಿಯವರೆಗಿನ ದೂರವನ್ನು ಆಟಗಾರ ಊಹಿಸಬೇಕು.
    • ಗಿಲ್ಲಿ ಆಗಿದ್ದರೆ ಚಿನ್ನಿಯಿಂದ ಅಳೆಯಬೇಕು. ಎಷ್ಟು ಬಾರಿ ಗಿಲ್ಲಿಯಾಗಿದೆಯೋ ಅಷ್ಟರಿಂದ ಅಂಕಗಳನ್ನು ಗುಣಿಸಬೇಕು.
    • ಗಿಲ್ಲಿ ಆಗಿಲ್ಲದಿದ್ದರೆ ದಾಂಡಿನಿಂದ ಅಳೆಯಬೇಕು.
    • ಊಹಿಸಿದ್ದಕ್ಕಿಂತ ಕಡಿಮೆ ದೂರವಿದ್ದರೆ ಆಟಗಾರ ಪಾಳಿ ಕಳೆದುಕೊಂಡಂತೆ.
  • ಸರಿಯಾಗಿ ಊಹಿಸಿದರೆ ಆಟಗಾರ ಅಥವಾ ಅವನ ತಂಡಕ್ಕೆ ಅಷ್ಟು ಅಂಕಗಳು ದೊರೆತಂತೆ.
  • ಮೊದಲೇ ನಿರ್ಧರಿಸಿದ ಅಂಕವನ್ನು ತಲುಪುವವರೆಗೆ, ಅಥವಾ ಯಾರು/ಯಾವ ತಂಡ ಹೆಚ್ಚು ಅಂಕ ಗಳಿಸಿರುತ್ತದೆಯೋ ಆ ಆಟಗಾರ / ತಂಡ ಗೆದ್ದಂತೆ.[೫][೬][೭]

ಗ್ಯಾಲರಿ ಬದಲಾಯಿಸಿ

ಉಲ್ಲೇಖ ಬದಲಾಯಿಸಿ

  1. "Gilli danda". Indian Traditional Games (in ಇಂಗ್ಲಿಷ್). Retrieved 22 March 2020.
  2. Sharma, Avinash (30 September 2019). "Kabaddi to Gilli Danda to Kho Kho: Traditional games played in India". https://www.mykhel.com (in ಇಂಗ್ಲಿಷ್). Retrieved 21 March 2020. {{cite web}}: External link in |website= (help)
  3. "Gilli Danda". D'Source. 16 November 2015. Retrieved 21 March 2020.
  4. https://www.flickr.com/photos/ayashok-s_d40/15979313622
  5. "ಆರ್ಕೈವ್ ನಕಲು". Archived from the original on 2020-03-22. Retrieved 2020-03-22.
  6. https://www.sportzcraazy.com/gilli-danda-game/
  7. http://www.dsource.in/resource/indian-games/outdoor-games/gilli-danda