ಚಾರಿತ್ರ್ಯ ಶಿಕ್ಷಣ
ಚಾರಿತ್ರ್ಯ ಶಿಕ್ಷಣ- ವ್ಯಕ್ತಿಯ ಚಾರಿತ್ರ್ಯವನ್ನು ಸರಿಯಾದ ಮಾರ್ಗದಲ್ಲಿ ಬೆಳೆಸಲು ಕೊಡುವ ಶಿಕ್ಷಣವನ್ನು ಈ ಹೆಸರಿನಿಂದ ಕರೆಯಲಾಗಿದೆ (ಕ್ಯಾರೆಕ್ಟರ್ ಎಜುಕೇಷನ್). ಚಾರಿತ್ರ್ಯವೆಂದರೆ ವ್ಯಕ್ತಿಯ ಗುಣ, ಶೀಲ, ನೀತಿ, ನಡೆವಳಿಕೆ, ಸ್ವಭಾವ, ಮನೋಧರ್ಮ ಇವೇ ಮೊದಲಾದ ಅಂಶಗಳನ್ನು ಒಳಗೊಂಡ ಅವನ ಇಡೀ ವ್ಯಕ್ತಿತ್ವ. ವ್ಯಕ್ತಿಯಲ್ಲಿ ಸಚ್ಚಾರಿತ್ರ್ಯವನ್ನು ರೂಪಿಸಿ ಬೆಳೆಸುವುದು ಶಿಕ್ಷಣದ ಮುಖ್ಯ ಉದ್ದೇಶಗಳಲ್ಲಿ ಒಂದು ಎಂದು ಎಲ್ಲ ಶಿಕ್ಷಣ ತಜ್ಞರ ಖಚಿತ ಅಭಿಪ್ರಾಯ. ಇಂಥ ಶಿಕ್ಷಣ ಮಕ್ಕಳಿಗೆ ಬಾಲ್ಯದಿಂದಲೇ ದೊರಕುವುದು ಅಗತ್ಯ.[೧]
ಶಿಕ್ಷಣದ ಗುರಿ
ಬದಲಾಯಿಸಿಮಕ್ಕಳನ್ನು ಶೀಲವಂತರನ್ನಾಗಿ ಬೆಳೆಸುವುದು ಶಿಕ್ಷಣದ ಮುಖ್ಯ ಗುರಿಗಳಲ್ಲಿ ಒಂದೆಂಬುದನ್ನು ಪ್ರಾಚೀನ ಶಿಕ್ಷಣ ಪದ್ಧತಿಗಳಲ್ಲೂ ಕಾಣುತ್ತೇವೆ. ಭರತಖಂಡದಂತೆ ಇತರ ಪ್ರಾಚೀನ ನಾಗರಿಕ ರಾಷ್ಟ್ರಗಳ ಶಿಕ್ಷಣ ಪದ್ಧತಿಗಳಲ್ಲೂ ಗುಣಶೀಲಗಳನ್ನು ರೂಪಿಸುವ ಧ್ಯೇಯಕ್ಕೆ ಪ್ರಾಧಾನ್ಯವಿತ್ತು. ಪ್ರಾಚೀನ ಗ್ರೀಸ್ ದೇಶದ ನಗರ ರಾಜ್ಯಗಳಾದ ಆಥೆನ್ಸ್ ಮತ್ತು ಸ್ಪಾರ್ಟ, ರೋಮ್ ಚಕ್ರಾಧಿಪತ್ಯ, ಪ್ರಾಚೀನ ಚೀನ ಮತ್ತು ಇಂಗ್ಲೆಂಡ್ ದೇಶದ ಪಬ್ಲಿಕ್ ಸ್ಕೂಲ್ ಪದ್ಧತಿ-ಇವು ಶೀಲ ನಿರೂಪಣೆಗೆ ಮಹತ್ವ ನೀಡಿದ್ದುವು. ಆಥೆನ್ಸ್ ಮತ್ತು ಸ್ಪಾರ್ಟಗಳು ಕೇವಲ ನಗರ ರಾಜ್ಯಗಳಾಗಿಯೇ ಇದ್ದ ಕಾಲದಲ್ಲಿ ದೈಹಿಕ ಮತ್ತು ಸೈನಿಕ ಶಿಕ್ಷಣಕ್ಕೇ ಪ್ರಾಮುಖ್ಯ ಕೊಡಲಾಗಿತ್ತು. ಆದರೆ ಅಲ್ಲಿ ಸಾಮ್ರಾಜ್ಯ ಏರ್ಪಟ್ಟಂತೆ ಅವುಗಳ ಶಿಕ್ಷಣ ಪದ್ಧತಿಗಳಲ್ಲಿ ಶೀಲ ಚಾರಿತ್ರ್ಯಗಳಿಗೆ ಆದ್ಯಸ್ಥಾನ ದೊರೆಯಿತು. ರಾಷ್ಟ್ರ ವಿಶಾಲವಾದಂತೆ ಅದರ ಆಡಳಿತ ನಿರ್ವಹಣ ಕಾರ್ಯ ಸಂಕೀರ್ಣವೂ ಕ್ಲಿಷ್ಟವೂ ಆಯಿತು. ಅದನ್ನು ಸಮರ್ಥವಾಗಿ ನಿರ್ವಹಿಸಲು ಶೀಲವಂತರೂ ಸಚ್ಚಾರಿತ್ರ್ಯ ಪಡೆದವರೂ ಬೇಕಾಯಿತು. ಇದರಿಂದ ಶಿಕ್ಷಣ ಪದ್ಧತಿಯಲ್ಲಿ ಇದಕ್ಕೆ ಪ್ರಾಮುಖ್ಯ ಬಂತು. ಪ್ಲೇಟೋವಿನ ರಿಪಬ್ಲಿಕ್‍ನಲ್ಲಿ ಇದನ್ನು ಸ್ಪಷ್ಟವಾಗಿ ಕಾಣಬಹುದು. ರೋಮನ್ ಚಕ್ರಾಧಿಪತ್ಯ ವಿಶಾಲಗೊಂಡಂತೆ ಅದರ ಶಿಕ್ಷಣ ಪದ್ಧತಿಯೂ ಇದೇ ಧಾಟಿಯನ್ನು ಅನುಸರಿಸಿತು. ಚೀನದ ತತ್ತ್ವಜ್ಞಾನಿ ಕಾನ್‍ಫ್ಯೂಷಸ್ ತನ್ನ ತತ್ತ್ವಶಾಸ್ತ್ರದಲ್ಲಿ ಸಚ್ಚಾರಿತ್ರ್ಯಕ್ಕೇ ಬಹು ಮುಖ್ಯ ಸ್ಥಾನ ಕೊಟ್ಟಿದ್ದಾನೆ. ಜ್ಞಾನಿಯಾದವ ಸಚ್ಚಾರಿತ್ರ್ಯವುಳ್ಳವನೂ ಆಗಿರುತ್ತಾನೆ-ಎಂದು ಅವನು ಭಾವಿಸಿ, ಅಂಥವರು ಮಾತ್ರ ರಾಜ್ಯಸೂತ್ರಗಳನ್ನು ನಡೆಸಲು ದಕ್ಷರು ಎಂದಿದ್ದಾನೆ. ಇಂಗ್ಲೆಂಡಿನಲ್ಲಿ ಪಬ್ಲಿಕ್ ಸ್ಕೂಲ್ ಪದ್ಧತಿ ಪ್ರಸಿದ್ಧಿಗೆ ಬಂದುದು ಅದು ಮಕ್ಕಳಿಗೆ ಕಲಿಸಿಕೊಡುತ್ತಿದ್ದ ಗ್ರೀಕ್ ಲ್ಯಾಟಿನ್ ಭಾಷೆಗಳಿಗಿಂತ ಹೆಚ್ಚಾಗಿ, ಅದು ಕಲಿಸುತ್ತಿದ್ದ ಶಿಸ್ತು ಸಂಯಮ, ಮುಖಂಡತ್ವ ಮೊದಲಾದ ಚಾರಿತ್ರ್ಯ ರೂಪಣೆಯ ವಿಧಾನಗಳಿಂದ.[೨]
ಗುರುಕುಲ ಶಿಕ್ಷಣ
ಬದಲಾಯಿಸಿಭಾರತದಲ್ಲಿ ಪ್ರಚಾರದಲ್ಲಿದ್ದ ಪ್ರಾಚೀನ ಗುರುಕುಲ ಪದ್ಧತಿ ಶಿಕ್ಷಣದಲ್ಲಿ ಗುಣಶೀಲ ರೂಪಣೆಗೆ ಕೊಡುತ್ತಿದ್ದ ಮಹತ್ವದಿಂದ ಪ್ರಸಿದ್ಧಿಗೆ ಬಂತು. ಶಿಷ್ಯ ಗುರುವಿನ ಜೊತೆಯಲ್ಲಿ ದೈನಂದಿನ ಜೀವನದಲ್ಲಿ ಭಾಗವಹಿಸಬೇಕು. ಗುರುವಿನಿಂದ ನೇರವಾಗಿ ಸದ್ಗುಣಗಳನ್ನು ಕಲಿಯಬೇಕು. ನೀತಿವಂತನಾಗಬೇಕು, ಧೈರ್ಯ, ಸ್ಥೈರ್ಯ, ತ್ಯಾಗ, ಔದಾರ್ಯ ಮೊದಲಾದ ಉದಾತ್ತ ಗುಣಗಳನ್ನು ಅಭ್ಯಸಿಸಬೇಕು, ಗುರುಸೇವೆ ಮಾಡಿ ದೈಹಿಕ ತಪದಿಂದ ತನ್ನ ಮನಸ್ಸನ್ನು ಸ್ವಚ್ಛಗೊಳಿಸಬೇಕು, ದೇವತಾರಾಧನೆ ಮೊದಲಾದ ಪವಿತ್ರ ವ್ರತಗಳಿಂದ ಆತ್ಮವನ್ನು ಶುದ್ಧ ಮಾಡಿಕೊಳ್ಳಬೇಕು. ಇದೇ ಬ್ರಹ್ಮಚರ್ಯ ವ್ರತ. ಇದು ಗುರುಕುಲ (ನೋಡಿ- ಗುರುಕುಲ) ಪದ್ಧತಿಯ ಮುಖ್ಯಲಕ್ಷಣ. ಮಹರ್ಷಿಗಳೂ ರಾಜಮಹಾರಾಜರೂ ತಮ್ಮ ಮಕ್ಕಳನ್ನು ಗುರುಕುಲಗಳಿಗೆ ಕಳುಹಿಸಿ ವಿದ್ಯೆ ಕೊಡಿಸುತ್ತಿದ್ದರು. ಶ್ರೀಕೃಷ್ಣ ಭಗವಾನ್ ತನ್ನ ಬಾಲ್ಯವನ್ನು ಸಾಂದೀಪ ಋಷಿಗಳ ಗುರುಕುಲದಲ್ಲಿ ಕಳೆದನಲ್ಲವೆ. ವಿದ್ಯಾಕಾಂಕ್ಷಿಗಳಾದ ಬಡಮಕ್ಕಳಿಗೂ ವಿದ್ಯೆ ಕಲಿಯುವ ಅರ್ಹತೆಯಿದ್ದರೆ ಸಾಕು, ಗುರುಕುಲಕ್ಕೆ ಪ್ರವೇಶ ದೊರೆಯುತ್ತಿತ್ತು. ಇದಕ್ಕೆ ಕುಚೇಲನೇ ಸಾಕ್ಷಿ. ಗುರುಕುಲದಿಂದ ವಿದ್ಯೆ ಮುಗಿಸಿ ಹೊರಬಂದ ವ್ಯಕ್ತಿ ಪೂರ್ಣ ಮನುಷ್ಯನಾಗಿ ಗೃಹಸ್ಥನಾಗಿ, ಸಮಾಜಸೇವೆ ಮಾಡಲು ಪೂರ್ಣ ಅರ್ಹತೆ ಪಡೆದವನೆಂದು ಪರಿಗಣಿಸಲಾಗುತ್ತಿತ್ತು. ಗುರುಕುಲ ಪದ್ಧತಿ ಈಗ ಕಣ್ಮರೆಯಾದಂತೆ ಕಂಡರೂ ಅದು ಹೊಸ ಯುಗದಲ್ಲಿ, ಹೊಸ ರೂಪವನ್ನು ತಾಳಿ ಇಂದಿನ ಕಾಲದೇಶಗಳಿಗೆ ಹೊಂದಿಕೊಂಡು ಮಹಾತ್ಮ ಗಾಂಧಿಯವರು ರೂಪಿಸಿದ ಜೀವನ ಶಿಕ್ಷಣ ಅಥವಾ ಮೂಲಶಿಕ್ಷಣ ಮತ್ತು ಗ್ರಾಮೀಣ ವಿಶ್ವವಿದ್ಯಾಲಯ ಶಿಕ್ಷಣ ಇತ್ಯಾದಿ ರೂಪದಲ್ಲಿ ಪುನರುಜ್ಜೀವ ಪಡೆದು ಉಳಿದುಕೊಂಡು ಬಂದಿದೆ. [೩]
ಚಾರಿತ್ರ್ಯದ ಲಕ್ಷಣಗಳು
ಬದಲಾಯಿಸಿವ್ಯಕ್ತಿಯ ಚಾರಿತ್ರ್ಯದಲ್ಲಿ ಮುಖ್ಯವಾಗಿ ೧. ಜೈವಿಕ ಮತ್ತು ಅನುವಂಶೀಯ ಲಕ್ಷಣಗಳು. ೨. ಸನ್ನಿವೇಶ ಪ್ರಭಾವದಿಂದ ಮೂಡಿದ ಲಕ್ಷಣಗಳು. ೩. ಸಾಮಾಜಿಕ, ನೈತಿಕ ಹಾಗೂ ಸಾಂಸ್ಕøತಿಕ ಲಕ್ಷಣಗಳು ಪಾತ್ರವಹಿಸುತ್ತವೆ.
ಜೈವಿಕ ಮತ್ತು ಅನುವಂಶೀಯ ಲಕ್ಷಣ
ಬದಲಾಯಿಸಿಜೈವಿಕ ಮತ್ತು ಅನುವಂಶೀಯ ಲಕ್ಷಣಗಳಲ್ಲಿ ವ್ಯಕ್ತಿಯ ದೇಹದಾಡ್ರ್ಯ, ದೇಹಾರೋಗ್ಯ, ವಂಶಪಾರಂಪರ್ಯವಾಗಿ ಬಂದ ಗುಣಗಳು ಸೇರಿದೆ. ವ್ಯಕ್ತಿ ಚಿಕ್ಕಂದಿನಿಂದ ಬೆಳೆದು ಬಂದ ಪ್ರಾಕೃತಿಕ ಮತ್ತು ಮಾನವೀಯ ಸನ್ನಿವೇಶಗಳ ಪ್ರಭಾವದಿಂದ ಬೆಳೆದುಬಂದ ಗುಣಲಕ್ಷಣಗಳು ಎರಡನೆಯ ಗುಂಪಿನವು. ತನ್ನ ಸುತ್ತಮುತ್ತಲಿರುವ ವ್ಯಕ್ತಿಗಳೊಡನೆ ವ್ಯವಹರಿಸುವ ರೀತಿನೀತಿಗಳು, ಇತರರ ಮೇಲೆ ತನ್ನ ಪ್ರಭಾವವನ್ನು ಬೀರಬಲ್ಲ ಶಕ್ತಿಸಾಮಥ್ರ್ಯಗಳು, ಇತರರಿಂದ ತಾನು ಕಲಿತು ಪ್ರಭಾವಿತನಾಗುವಂತೆ ಮಾಡುವ ಗುಣವಿಶೇಷಗಳು, ಸಾಮಾಜಿಕ ಪ್ರಜ್ಞೆ, ಇತರರಿಗೆ ಮಾರ್ಗದರ್ಶನ ಮಾಡಬಲ್ಲ ನಾಯಕತನದ ಲಕ್ಷಣಗಳು, ನಾಯಕನಿಗೆ ನಿಷ್ಠೆಯಿಂದ ನಡೆದುಕೊಳ್ಳುವ ಗುಣಗಳು, ವ್ಯಕ್ತಿಯಲ್ಲಿ ಕಂಡುಬರುವ ನೀತಿ ಶೀಲ, ನ್ಯಾಯ, ಧರ್ಮಬುದ್ಧಿ, ನಿಸ್ಸ್ವಾರ್ಥಭಾವನೆ ಸಮಾಜದಿಂದ ಪಡೆದುಕೊಂಡ ಮತಾಚರಣೆ, ಪೂಜಾವಿಧಿ, ಸಾಹಿತ್ಯ, ಕಲೆ, ಸಂಗೀತ ಮೊದಲಾದವುಗಳ ಅರಿವು-ಇವೆಲ್ಲ ಮೂರನೆಯ ಗುಂಪಿನ ಲಕ್ಷಣಗಳು. ಈ ವಿಭಜನೆಯಿಂದ ಚಾರಿತ್ರ್ಯವೆಂಬುದು ವ್ಯಕ್ತಿಯಲ್ಲಿ ಕಂಡುಬರುವ ಒಂದು ಸರಳವಾದ ಗುಣಲಕ್ಷಣವಲ್ಲ, ಅದು ಸಂಕೀರ್ಣವೂ ಸಮಗ್ರವೂ ಆದ ಪೂರ್ಣ ವ್ಯಕ್ತಿತ್ವ ಎಂದಾಯಿತು. ತಂದೆ ತಾತ ಮುತ್ತಾತಂದಿರಿಂದ ಬಂದ ಅನುವಂಶೀಯ ಶಕ್ತಿ ಮತ್ತು ಗುಣಸ್ವಭಾವಗಳೂ ವ್ಯಕ್ತಿ ಬೆಳೆದು ಬಂದ ಸನ್ನಿವೇಶ ಅಥವಾ ವಾತಾವರಣದಿಂದ ದೊರೆತ ಗುಣಲಕ್ಷಣಗಳೂ ಸುತ್ತಮುತ್ತಲ ಸಮಾಜ ಮತ್ತು ಸಂಸ್ಕೃತಿಯ ಪ್ರಭಾವದಿಂದ ಬಂದ ಸಂಪ್ರದಾಯ, ಅಭ್ಯಾಸ, ನಂಬಿಕೆ, ಮನೋಧರ್ಮಗಳೂ ಒಂದರೊಡನೊಂದು ಸಮ್ಮಿಳಿತವಾಗಿ ಫಲಿತವಾದದ್ದು.
ಸನ್ನಿವೇಶ ಪ್ರಭಾವದಿಂದ ಮೂಡಿದ ಲಕ್ಷಣ
ಬದಲಾಯಿಸಿಒಬ್ಬ ವ್ಯಕ್ತಿಯ ಚಾರಿತ್ರ್ಯ ಆತನ ಶಕ್ತಿ, ಸಾಮಥ್ರ್ಯ, ಆರೋಗ್ಯ ಮುಂತಾದ ದೈಹಿಕ ಸ್ವರೂಪವನ್ನು ಅವಲಂಬಿಸಿರುವುದಾದರೂ ಮುಖ್ಯವಾಗಿ ಅದು ಅವನ ಮಾನಸಿಕ ವ್ಯಾಪಾರಗಳಿಗೂ ಆಧ್ಯಾತ್ಮ ಪರಿಪಾಕಕ್ಕೂ ಸಂಬಂಧಿಸಿದೆ. ಅವನ ಮಾತು, ಚಿಂತನೆ, ನಡತೆ, ಆಸೆ ಆಕಾಂಕ್ಷೆ, ಆದರ್ಶ, ಸಾಧನೆ, ಸಿದ್ಧಿಗಳಿಂದ ಅವನ ಚಾರಿತ್ರ್ಯವನ್ನು ನಿರ್ಧರಿಸಿ ತಿಳಿಯಬೇಕಾಗುತ್ತದೆ. ಇತರರು ಆತನ ವಿಷಯದಲ್ಲಿ ಪಡೆದಿರುವ ಭಾವನೆ, ಇಟ್ಟಿರುವ ನಂಬಿಕೆಗಳು ಅವನ ಚಾರಿತ್ರ್ಯವನ್ನು ಸೂಚಿಸುತ್ತವೆ. ಒಬ್ಬ ವ್ಯಕ್ತಿಯ ಚಾರಿತ್ರ್ಯವನ್ನು ಆ ವ್ಯಕ್ತಿಯಲ್ಲಿ ಒಂದು ಕಾಲದಲ್ಲಿ, ಒಂದು ಸನ್ನಿವೇಶದಲ್ಲಿ ಕಂಡುಬಂದ ಪ್ರತಿಕ್ರಿಯೆಯಿಂದ ನಿರ್ಧರಿಸುವುದು ನ್ಯಾಯವಲ್ಲ. ಆತನಲ್ಲಿ ಬಾಲ್ಯದಿಂದಲೂ ಕಂಡುಬಂದು ವಿಕಾಸಗೊಂಡು ರೂಪುಗೊಳ್ಳುತ್ತಿರುವ ವ್ಯಕ್ತಿತ್ವದ ಧಾಟಿಯಿಂದ ಆತನ ಚಾರಿತ್ರ್ಯವನ್ನು ನಿರ್ಧರಿಸಬೇಕಾಗುತ್ತದೆ. ವ್ಯಕ್ತಿಗಳನ್ನು ಅವರವರ ಚಾರಿತ್ರ್ಯದ ದೃಷ್ಟಿಯಿಂದ ಸಜ್ಜನರು ದುರ್ಜನರು ಎಂದು ವಿಂಗಡಿಸುವ ಪರಿಪಾಟ ಸಾಮಾನ್ಯರಲ್ಲಿ ಕಂಡುಬರುತ್ತದೆ. ಅಲ್ಲದೆ ಧೀರೋದಾತ್ತ-ಖಳ, ಶಾಂತ-ಕೋಪಿ, ಕಲಹಪ್ರಿಯ-ಸೌಹಾರ್ದಯುತ, ಕರುಣಿ-ಕ್ರೂರಿ ಆತುರಗಾರ-ನಿಧಾನಿ, ವಿನಯಸಂಪನ್ನ-ಒರಟ, ಉದಾರಿ-ಜಿಪುಣ ಮೊದಲಾದ ಮಾತುಗಳಿಂದ ವ್ಯಕ್ತಿಯ ಚಾರಿತ್ರ್ಯವನ್ನು ವರ್ಣಿಸಲು, ವ್ಯಕ್ತಿಗಳನ್ನು ವಿಂಗಡಿಸಲು ನಾವು ಪ್ರಯತ್ನಿಸುತ್ತೇವೆ. ಆಧುನಿಕ ಮನಶ್ಶಾಸ್ತ್ರದ ದೃಷ್ಟಿಯಿಂದ ಈ ಬಗೆಯ ವರ್ಣನೆ ವಿಂಗಡಣೆಗಳು ಸಾಧುವಲ್ಲ. ಏಕೆಂದರೆ ಒಂದು ಸಂದರ್ಭದಲ್ಲಿ, ಒಂದು ಸನ್ನಿವೇಶದಲ್ಲಿ, ಅಥವಾ ಒಬ್ಬನ ದೃಷ್ಟಿಯಲ್ಲಿ ಖಳನಾಗಿ ಕಂಡುಬಂದ ವ್ಯಕ್ತಿ ಇನ್ನೊಂದು ಸನ್ನಿವೇಶದಲ್ಲಿ, ಇನ್ನೊಬ್ಬನ ದೃಷ್ಟಿಯಲ್ಲಿ ಧೀರೋದಾತ್ತನಾಗಿ ಕಾಣಬಹುದು. ಆದುದರಿಂದ ಶಿಕ್ಷಣಕ್ಷೇತ್ರದಲ್ಲಿ ವಿದ್ಯಾರ್ಥಿಗಳನ್ನು ಎಂಥ ವ್ಯಕ್ತಿಗಳನ್ನಾಗಿ ತಯಾರುಮಾಡಬೇಕೆಂದು ಯೋಚಿಸುವ ಬದಲು ವ್ಯಕ್ತಿಗಳಲ್ಲಿ ಯಾವ ಯಾವ ಸದ್ಗುಣ ಮತ್ತು ಮನೋಧರ್ಮಗಳನ್ನು ಮೂಡಿಸಿ ರೂಪಿಸಬೇಕೆಂದು ವಿವೇಚಿಸುವುದು ಸೂಕ್ತ.
ಸಾಮಾಜಿಕ, ನೈತಿಕ ಹಾಗೂ ಸಾಂಸ್ಕøತಿಕ ಲಕ್ಷಣ
ಬದಲಾಯಿಸಿಸಚ್ಚಾರಿತ್ರ್ಯವೆಂಬುದು ಮಾನವರೆಲ್ಲರಿಗೂ ಒಂದೇ, ಅದು ಜಾತಿ, ಕುಲ, ವಂಶ, ಪಂಗಡ, ದೇಶಕಾಲಗಳಿಂದ ವ್ಯತ್ಯಾಸವಾಗುವಂಥದಲ್ಲ, ನಿಜ. ಆದರೆ ಶಿಕ್ಷಣದಲ್ಲಿ ಸಚ್ಚಾರಿತ್ರ್ಯವನ್ನು ಮೂಡಿಸಿ ರೂಪಿಸುವಲ್ಲಿ ಎಲ್ಲ ರಾಷ್ಟ್ರಗಳೂ ಎಲ್ಲ ಮಾನವಪಂಗಡಗಳೂ ಒಂದೇ ಬಗೆಯ ಕಾರ್ಯಕ್ರಮವನ್ನಾಗಲಿ, ಗುರಿಯನ್ನಾಗಲಿ ಇಟ್ಟುಕೊಳ್ಳುವುದು ಸಾಧ್ಯವಲ್ಲ. ಒಂದು ರಾಷ್ಟ್ರ ಒಂದು ಕಾಲದಲ್ಲಿ ಯುದ್ಧ ಪ್ರವೃತ್ತಿಯ ಚಾರಿತ್ರ್ಯವನ್ನು ಪ್ರಜೆಗಳಲ್ಲಿ ಮೂಡಿಸುವುದು ರಾಷ್ಟ್ರದ ಹಿತದೃಷ್ಟಿಯಿಂದ ಅನಿವಾರ್ಯವೆಂದು ತೋರಿದರೆ ಇನ್ನೊಂದು ರಾಷ್ಟ್ರಕ್ಕೆ ಇಲ್ಲವೆ ಇನ್ನೊಂದು ಕಾಲದಲ್ಲಿ ಶಾಂತಪ್ರಿಯತೆಯನ್ನು ಮೂಡಿಸುವುದು ಅವಶ್ಯಕವೆಂದು ತೋರಬಹುದು. ಆದ್ದರಿಂದ ಭಾರತದಲ್ಲಿ ಪ್ರಕೃತ ಪರಿಸ್ಥಿತಿಯಲ್ಲಿ ಯಾವ ಯಾವ ಆದರ್ಶಗಳನ್ನು ಗಮನದಲ್ಲಿಟ್ಟುಕೊಂಡು ಚಾರಿತ್ರ್ಯ ಶಿಕ್ಷಣವನ್ನು ರೂಪಿಸಬೇಕಾಗುತ್ತದೆಯೆಂಬುದನ್ನು ಇಲ್ಲಿ ವಿವೇಚಿಸಬೇಕಾಗಿದೆ.
ಭಾರತ ದೇಶ ಆದಿಯಿಂದಲೂ ಕೆಲವು ಆದರ್ಶಗಳನ್ನು, ಜೀವನ ಮೌಲ್ಯಗಳನ್ನು, ದೃಷ್ಟಿಯಲ್ಲಿಟ್ಟುಕೊಂಡು ಎಷ್ಟೇ ಸಂಕಷ್ಟಗಳು ಒದಗಿದರೂ ಅವನ್ನು ಕೈಬಿಡದೆ ಪಾಲಿಸಿಕೊಂಡು ಬಂದಿದೆ. ಆ ಆದರ್ಶಗಳ ಶಕ್ತಿಯಿಂದಲೇ ಅದು ಹೊರಗಡೆಯಿಂದ ಬಂದ ಸೈನಿಕ, ರಾಜಕೀಯ, ಮತೀಯ ದಾಳಿ ಮತ್ತು ವಿಪತ್ತುಗಳನ್ನು ಎದುರಿಸಿ ಬಲಗೊಂಡು ಇನ್ನೂ ಭಾರತೀಯವಾಗಿಯೇ ಉಳಿದು ಬಂದಿದೆ. ಆ ಆದರ್ಶ, ಜೀವನ ಮೌಲ್ಯ, ತತ್ತ್ವ ಹೀಗಿವೆ.
ಜೀವನದ ತತ್ತ್ವ
ಬದಲಾಯಿಸಿ೧.ಸತ್ಯ
ಬದಲಾಯಿಸಿಸತ್ಯಮೇವ ಜಯತೇ, ನಾನೃತಂ. ಇದು ಭಾರತೀಯರ ಮೂಲ ಮಂತ್ರ. ಸತ್ಯವೆಂದರೆ, ಸುಳ್ಳು ಹೇಳದಿರುವುದು ಮಾತ್ರವಲ್ಲ, ತನಗೂ ತಾನಿರುವ ಸಮಾಜಕ್ಕೂ ಶ್ರೇಯಸ್ಸಾಗುವಂತೆ ನಡೆದುಕೊಳ್ಳುವುದು, ನುಡಿಯುವುದು ಸತ್ಯ ಮಾರ್ಗ, ಸತ್ಯವೇ ಧರ್ಮ, ಧರ್ಮ ಬಹುಜನ ಹಿತಾಕಾಂಕ್ಷಿ. ಸತ್ಯಮಾರ್ಗದಲ್ಲಿ ನಡೆಯಬೇಕೆಂಬ ಛಲ, ಹಂಬಲ, ನಿಷ್ಠೆ ವಿದ್ಯಾರ್ಥಿಗಳಲ್ಲಿ ಮೊಳೆಯಬೇಕು.
೨. ಅಹಿಂಸೆ
ಬದಲಾಯಿಸಿದೈಹಿಕವಾಗಿಯಾಗಲೀ ಮಾನಸಿಕವಾಗಿಯಾಗಲೀ ಇತರರಿಗೆ ನೋವನ್ನುಂಟುಮಾಡದಿರುವುದು ಅಹಿಂಸೆ. ಅಹಿಂಸಾ ಪರಮೋ ಧರ್ಮ: ಎಂಬುದು ಭಾರತೀಯರ ಜಪ. ಅಹಿಂಸೆ ಎಂದರೆ ಬಲಪ್ರಯೋಗವನ್ನು ಎಂಥ ಸಂದರ್ಭದಲ್ಲಿಯೂ ಆಚರಿಸಕೂಡದೆಂಬುದಲ್ಲ. ಬಲಪ್ರಯೋಗದಿಂದ ಹಿಂಸೆಯಾಗಬಾರದು, ಇಲ್ಲ ಅನಿವಾರ್ಯ ಸಂದರ್ಭದಲ್ಲಿ ಹಿಂಸೆ ಆದಷ್ಟು ಕಡಿಮೆಯಾಗಬೇಕು, ಎಂಬುದು ಅಹಿಂಸೆಯ ಉದ್ದೇಶವಾಗಿರಬೇಕು. ಸತ್ಯವನ್ನು ಸಾಧಿಸುವಲ್ಲಿ ಅಹಿಂಸಾ ಮಾರ್ಗಗಳನ್ನು ಅವಲಂಬಿಸುವ ಪ್ರವೃತ್ತಿ ಮಕ್ಕಳಲ್ಲಿ ಬೆಳೆದುಬರಬೇಕು.
೩. ಸಹಕಾರ
ಬದಲಾಯಿಸಿಇತರರೊಡನೆ ಸ್ನೇಹಸೌಹಾರ್ದಗಳಿಂದ ಜೊತೆಗೂಡಿ ಕೆಲಸ ಮಾಡಿ ಸಹಬಾಳುವೆ ನಡೆಸುವ ತಂತ್ರಗಳನ್ನು ಮಕ್ಕಳು ಕಲಿಯಬೇಕು. ಅಭ್ಯಸಿಸಬೇಕು. ಇತರರ ಮೇಲೆ ಸ್ಪರ್ಧೆ ಹೂಡಿ ಅವರನ್ನು ಸೋಲಿಸಿ ತುಳಿದು ತಾನು ಗೆದ್ದು ಉನ್ನತಿ ಪಡೆಯಬೇಕೆಂಬುದು ಆದಿಮಾನವನ ಆದರ್ಶ, ಇಂದಿನ ನಾಗರಿಕ ಯುಗದಲ್ಲಿ ಸಹಕಾರದಿಂದ ಬಾಳುವುದು ಅತ್ಯಾವಶ್ಯಕ. ಇಲ್ಲದಿದ್ದರೆ ಮಾನವ ಕುಲವೇ ವಿನಾಶ ಹೊಂದಬಹುದು. ಈ ಸಹಕಾರ ತತ್ತ್ವ ಈಗ ಅಂತರರಾಷ್ಟ್ರೀಯವಾಗಿ ವಿಕಾಸಗೊಳ್ಳುತ್ತಿದೆ.
೪. ರಾಷ್ಟ್ರೀಯ ಭಾವೈಕ್ಯ
ಬದಲಾಯಿಸಿಒಂದು ರಾಷ್ಟ್ರ ಉಳಿಯಬೇಕಾದರೆ, ಪ್ರಗತಿ ಹೊಂದಬೇಕಾದರೆ ಪ್ರಜೆಗಳಲ್ಲಿ ತಾವೆಲ್ಲರೂ ಒಂದು, ಒಂದು ತಾಯ ಮಕ್ಕಳು ಎಂಬ ಭಾವನೆ ಬೆಳೆದು ಬರಬೇಕು. ಭಾಷೆ, ಆಹಾರ, ವಿಹಾರ, ಉಡುಪು, ಮತಧರ್ಮ —ಇವುಗಳಲ್ಲಿ ಎಷ್ಟೇ ವೈವಿಧ್ಯವಿದ್ದರೂ ತಾವೆಲ್ಲರೂ ಒಂದು ರಾಷ್ಟ್ರದವರು ಎಂಬ ಭಾವನೆ ಬೆಳೆಯಬೇಕಾದುದು ಅನಿವಾರ್ಯ. ಈ ಭಾವನೆ ಬೆಳೆಯದಿದ್ದುದರಿಂದಲೇ ಹಿಂದಿನ ಶತಮಾನಗಳಲ್ಲಿ ಭಾರತೀಯರು ಪರದಾಳಿಗಳಿಗೆ ಸಿಕ್ಕಿ ಪರದಾಸ್ಯಕ್ಕೆ ಒಳಗಾಗಿ ಬಹು ಕಷ್ಟಪಡಬೇಕಾಯಿತು. ಆ ನ್ಯೂನತೆಯನ್ನು ಈಗ ಸರಿಪಡಿಸಿಕೊಂಡು, ಒಗ್ಗಟ್ಟಿನಿಂದ ಪ್ರಗತಿಪಥದಲ್ಲಿ ಮುಂದುವರಿಯಬೇಕಾಗಿದೆ.
೫. ಅಂತರಾಷ್ಟ್ರೀಯ ಮನೋದೃಷ್ಟಿ
ಬದಲಾಯಿಸಿರಾಷ್ಟ್ರೀಯ ಭಾವೈಕ್ಯತೆ ರಾಷ್ಟ್ರದ ಉನ್ನತಿಗೆ ಹೇಗೆ ಮುಖ್ಯವೋ ಹಾಗೆಯೇ ಮಾನವಕುಲದ ಉಳಿವಿಗೆ ಅಂತರರಾಷ್ಟ್ರೀಯ ಭಾವನೆ ಬಹು ಮುಖ್ಯ. ಇದನ್ನು ಅರಿತಂತೆ ಈಗೀಗ ಅಂತರರಾಷ್ಟ್ರೀಯ ಸಂಘಸಂಸ್ಥೆಗಳೂ ವ್ಯಾಪಾರ ವ್ಯವಹಾರಗಳೂ ಸಹಕಾರ ಸೌಹಾರ್ದಗಳೂ ಪ್ರಪಂಚದಲ್ಲಿ ಬಲಗೊಳ್ಳುತ್ತಿವೆ. ಈ ವಿಶಾಲದೃಷ್ಟಿ ವಿದ್ಯಾರ್ಥಿಗಳಲ್ಲಿ ಮೂಡಿ ಅವರು ಪ್ರಬುದ್ಧರಾದ ಮೇಲೆ ಇಡೀ ಮಾನವಕುಲಕ್ಕೇ ಹಿತವಾಗುವ ಕಾರ್ಯಗಳಲ್ಲಿ ಪಾಲ್ಗೊಳ್ಳುವಂತೆ ನಮ್ಮ ಶಿಕ್ಷಣ ಅವರಿಗೆ ಶಕ್ತಿ ನೀಡಬೇಕಾಗಿದೆ.
೬. ದೇವರಲ್ಲಿ ನಂಬಿಕೆ
ಬದಲಾಯಿಸಿಪರಾತ್ಪರ ವಸ್ತುವಿನಲ್ಲಿ, ಪರಮಾತ್ಮನಲ್ಲಿ ನಂಬಿಕೆ ಇಟ್ಟು ಭಕ್ತಿಪ್ರೇರಿತರಾಗಿ ಪೂಜಾವಿಧಿಗಳಲ್ಲಿ ತೊಡಗುವುದು ಭಾರತೀಯರಲ್ಲಿ ಬೆಳೆದು ಬಂದ ಒಂದು ಸಂಪ್ರದಾಯ. ಇದು ಶುದ್ಧಚಾರಿತ್ರ್ಯಕ್ಕೆ ಸತ್ತ್ವವನ್ನು ಕೊಡುವುದು. ಆದರೆ ಇದು ಸಂಕುಚಿತವಾದ ಮತೀಯ ಕರ್ಮಗಳಲ್ಲಿ ಅಂಧ್ರಶ್ರದ್ಧೆಯಾಗಿ ಪರಿಣಮಿಸದೆ ವಿಚಾರಪೂರಿತವಾದ ಅಂತರಾತ್ಮ ಪ್ರಜ್ಞೆಯಾಗಿ ಬೆಳೆಯುವುದು ವ್ಯಕ್ತಿಯ ಚಾರಿತ್ರ್ಯಕ್ಕೆ ತೀರ ಅವಶ್ಯಕ, ಶಿಕ್ಷಣ ವಿದ್ಯಾರ್ಥಿಗಳಲ್ಲಿ ಇಂಥ ಅಂತರಾತ್ಮ ಪ್ರಜ್ಞೆಯನ್ನು ಪ್ರಚೋದಿಸುವಂತಾಗಬೇಕು. ಇಂದಿನ ನಮ್ಮ ಶಿಕ್ಷಣ ಪದ್ಧತಿಯಲ್ಲಿ ಶೀಲನಿರೂಪಣೆಗೆ ಗಮನ ಕೊಡುತ್ತಿದೆಯಾದರೂ ಅದೇ ಶಿಕ್ಷಣದ ಏಕೈಕ ಗುರಿಯಾಗಲು ಸಾಧ್ಯವಿಲ್ಲ. ಶಿಕ್ಷಣದ ಉದ್ದೇಶ ಯಾವುದೇ ಆಗಿರಲಿ ಅದರ ತಳಹದಿಯಾಗಿ ಚಾರಿತ್ರ್ಯಶಿಕ್ಷಣ ಇರಲು ಸಾಧ್ಯ. ಈ ಕಾರಣದಿಂದ ಶಿಕ್ಷಣದ ಜವಾಬ್ದಾರಿ ಏಕಮುಖವಾಗಬಾರದು, ಬಹುಮುಖವಾಗಬೇಕು
ಶಿಕ್ಷಣದ ಮೊದಲನೆ ಹಂತ
ಬದಲಾಯಿಸಿಶೈಶವದ (ಆರು ವರ್ಷ ವಯಸ್ಸಿನ ಪೂರ್ವದ) ಶಿಕ್ಷಣದಲ್ಲಿ ಮಕ್ಕಳ ಅನಿರ್ಬಂಧಿತ ಚಟುವಟಿಕೆಗಳಿಗೆ ಪ್ರಾಧಾನ್ಯವಿದೆ. ಸಹನೆ, ತ್ಯಾಗ, ಸೇವೆ, ವಿನಯಪರತೆ, ಸಹ ಬಾಳುವೆ ಮೊದಲಾದ ಸುಗುಣಸೌಶೀಲ್ಯಗಳು ಶೈಶವದಿಂದಲೇ ಮೂಡಿ ಬೆಳೆಯಲು ಅನುಕೂಲಿಸುವಂತೆ ಶಿಶುವಿಹಾರ ತನ್ನ ಭೌತಿಕ ಮತ್ತು ಸಾಮಾಜಿಕ ಸನ್ನಿವೇಶ ವಾತಾವರಣಗಳನ್ನು ಕಲ್ಪಿಸಿಕೊಡುತ್ತದೆ. ಈ ಸನ್ನಿವೇಶದಲ್ಲಿ, ಸಮವಯಸ್ಕರ ಮಧ್ಯದಲ್ಲಿ, ಅಲ್ಲಿ ನಡೆಯುವ ಚಟುವಟಿಕೆಗಳ ಸಂತೋಷ ಸಂಭ್ರಮಗಳಲ್ಲಿ ಮಕ್ಕಳು ವಿನಯಪರವಾದ ಮತ್ತು ಸಹನೆ ಸೇವಾಭಾವನೆಗಳಿಂದ ಕೂಡಿದ ಪ್ರತಿಕ್ರಿಯೆಯನ್ನು ತೋರುವರು. ಆಟಿಕೆಗಳನ್ನು ಉಪಯೋಗಿಸುವಲ್ಲಿ ತಮಗಿರುವಷ್ಟೇ ಅಧಿಕಾರ, ಹಕ್ಕುಗಳು ಇತರ ಮಕ್ಕಳಿಗೂ ಇವೆಯೆಂಬುದನ್ನು ಸ್ವಾಭಾವಿಕವಾಗಿ ಅರಿತುಕೊಂಡು ತಾವೂ ಅವನ್ನು ಉಪಯೋಗಿಸಿ ಇತರರೂ ಉಪಯೋಗಿಸಲು ಅವಕಾಶ ಕೊಡುವ ಅಭ್ಯಾಸ ಮಾಡಿಸಬೇಕು. ಇದರಿಂದ ಸಹಬಾಳುವೆಯ ಸರಳ ಪಾಠವೂ ಸೂಕ್ಷ್ಮವಾದ ಸಮಾಜಪ್ರಜ್ಞೆಯೂ ದೊರೆತಂತಾಗುವುದು.
ಶಿಕ್ಷಣದ ಎರಡನೆಯ ಹಂತ
ಬದಲಾಯಿಸಿಇನ್ನು ಪ್ರಾಥಮಿಕ ಶಿಕ್ಷಣದ ಮಟ್ಟದಲ್ಲಿ ಎಂದರೆ ವಯಸ್ಸು ೬-೧೨ರ ಮಟ್ಟದಲ್ಲಿ ಮಕ್ಕಳು ಓದುಬರಹ ಕಲಿಯುವರು. ಸರಳವಾದ ಸಮಾಜ ಪರಿಚಯ, ವಿಜ್ಞಾನದ ವಿಷಯಗಳು, ಸರಳ ಲೆಕ್ಕಾಚಾರಗಳು-ಇವನ್ನು ಅಭ್ಯಾಸ ಮಾಡುವರು. ಇವು ತರಗತಿಯಲ್ಲಿ ಏರ್ಪಡಿಸಲಾಗುವ ಕಾರ್ಯಕ್ರಮಗಳು, ಅವಕಾಶ ದೊರೆತ ಸಂದರ್ಭಗಳಲ್ಲಿ ಮಕ್ಕಳ ಪೂರ್ಣ ವ್ಯಕ್ತಿತ್ವದ ವಿಕಾಸಕ್ಕೆ ನೀತಿಯುತವಾದ ನಿಯಮ ನಡೆವಳಿಕೆಗಳಿಗೆ ಗಮನ ಕೊಡಲಾಗುತ್ತದೆ. ಸಮಾಜ ಪರಿಚಯ ಪಾಠದಲ್ಲಿ ಉದಾತ್ತ ವ್ಯಕ್ತಿಗಳ, ಮಹಾಪುರುಷರ ಜೀವನಕ್ಕೆ ಸಂಬಂಧಪಟ್ಟ ಕಥೆಗಳನ್ನು ಅದರಲ್ಲಿಯೂ ಅವರು ಬಾಲಕರಾಗಿದ್ದಾಗಿನ ಕಥೆಗಳನ್ನು ಸೇರಿಸಲಾಗಿದೆ ವಿಜ್ಞಾನಪಾಠದಲ್ಲಿ ಪ್ರಸಿದ್ಧ ವಿಜ್ಞಾನಿಗಳ ಕತೆ, ಅವರ ಸಾಹಸ, ಅವರು ಪಟ್ಟ ಶ್ರಮ, ಅದರಿಂದ ಮಾನವ ಸಮಾಜಕ್ಕಾದ ಲಾಭ ಮೊದಲಾದ ವಿಷಯಗಳು ಮಕ್ಕಳಿಗೆ ಸ್ಫೂರ್ತಿದಾಯಕವೆನಿಸುವುವು. ಓದುಬರೆಹದ ಪಾಠದಲ್ಲಿಯೂ ಇಂಥ ಸ್ಫೂರ್ತಿದಾಯಕ ಪಠ್ಯ ವಸ್ತುಗಳೂ ಸೇರಿರುತ್ತವೆ. ಇದರಿಂದ ಮಕ್ಕಳಿಗೆ ಆದರ್ಶಗುಣಗಳ ಮೂರ್ತ ಸ್ವರೂಪದ ಪರಿಚಯವಾದಂತಾಗಿ ಅವುಗಳಿಂದ ಪ್ರೇರಿತರಾಗಿ ಮಹಾಪುರಷರ ಸುಗುಣಗಳನ್ನು ತಾವೂ ದೈನಂದಿನ ನಡೆವಳಿಗಳಲ್ಲಿ ಅನುಕರಿಸುವರು. ಈ ವಯೋಮಟ್ಟದಲ್ಲಿ ಮಕ್ಕಳು ನಾಯಕಪೂಜೆಯ ಮನೋಭಾವವನ್ನು ಪಡೆದಿರುವರು. ಈ ಕಾರಣದಿಂದ ಉದಾತ್ತ ಪುರಷರ ಸ್ಫೂರ್ತಿದಾಯಕ ಪರಿಚಯ ಅವರ ವ್ಯಕ್ತಿತ್ವದಲ್ಲಿ ಸೌಶೀಲ್ಯಾದಿ ಸದ್ಗುಣಗಳನ್ನು ವಿಕಾಸಗೊಳಿಸುವುದು.
ಶಿಕ್ಷಣದ ಮೂರನೆಯ ಹಂತ
ಬದಲಾಯಿಸಿಶಿಕ್ಷಣದ ಮೂರನೆಯ ಹಂತದಲ್ಲಿ, ಎಂದರೆ ಪ್ರೌಢಶಾಲಾ ಮಟ್ಟದಲ್ಲಿ, ವಿದ್ಯಾರ್ಥಿಗಳು ತಾವು ಹಿಂದಿನ ವರ್ಷಗಳಲ್ಲಿ ಪಡೆದ ಭಾವಾನುರಾಗಪ್ರೇರಿತ ಜ್ಞಾನ ಕೌಶಲ್ಯಗಳನ್ನು ಬುದ್ಧಿ ಪೂರ್ವಕವಾಗಿ, ನಿಷ್ಕøಷ್ಟವಾಗಿ, ನಿಖರವಾಗಿ, ಹೆಚ್ಚು ವೈಶಾಲ್ಯದಿಂದ ಒಂದು ಸ್ಪಷ್ಟ ಚೌಕಟ್ಟಿನಲ್ಲಿ ಕಲಿಯುವರು. ಇದರಿಂದ ಅವರ ಜ್ಞಾನಕೌಶಲಗಳಿಗೆ ಒಂದು ನಿರ್ದಿಷ್ಟ ಗುರಿ ಮತ್ತು ಅರ್ಥ ಅವಶ್ಯಕತೆಗಳನ್ನು ಅವರು ಮನಗಾಣುವರು. ಅವರು ಸ್ವಾಭಾವಿಕವಾಗಿ ಅಭ್ಯಾಸ ಮಾಡಿದ ಗುಣಶೀಲಗಳಿಗೆ ಒಂದು ಅರ್ಥ ಹೊಳೆದು, ಅವುಗಳಿಂದ ತನಗೂ ತನ್ನ ಸುತ್ತಮುತ್ತಲಿನವರಿಗೂ ಹಿತವಾಗುವುದೆಂಬುದು ಮನವರಿಕೆಯಾಗುವುದು. ಆದ್ದರಿಂದ ಅವರು ಕಲಿಯುವ ಪಾಠಗಳ ನೀತಿ ಬೋಧೆಯನ್ನು ಅಮೂರ್ತವಾಗಿ ಪ್ರಸ್ತಾಪಿಸಿ ಅವುಗಳ ಕಡೆಗೆ ವಿದ್ಯಾರ್ಥಿಗಳ ಗಮನವನ್ನು ಸೆಳೆಯುವ ಪ್ರಯತ್ನ ಮಾಡಲಾಗುವುದು. ಇದರಿಂದ ಅವರು ಸದ್ಗುಣಗಳನ್ನು ಮನಃಪೂರ್ವಕವಾಗಿಯೇ ಮುಂದುವರಿಸಿಕೊಂಡು ಸತ್ತ್ವಪೂರ್ಣವಾಗಿ ಬೆಳೆಸಿಕೊಂಡು ಬರಲು ಪ್ರೇರಣೆ ದೊರೆಯುವುದು. ಈ ಹಂತದಲ್ಲಿ ವ್ಯಕ್ತಿ ತನ್ನ ನೆರೆಹೊರೆ, ಊರುಕೇರಿಗಳ ವಿಷಯವನ್ನಷ್ಟೇ ಅಲ್ಲದೆ ತನ್ನ ದೇಶ, ನೆರೆಹೊರೆ ದೇಶಗಳ ಅರಿವನ್ನೂ ಪಡೆಯುತ್ತಾನೆ.[೪]
ಶಿಕ್ಷಣದ ನಾಲ್ಕನೆಯ ಹಂತ
ಬದಲಾಯಿಸಿಶಿಕ್ಷಣದ ನಾಲ್ಕನೆಯ ಹಂತದಲ್ಲಿ, ಎಂದರೆ ಉನ್ನತ ಶಿಕ್ಷಣದ ಹಂತದಲ್ಲಿ, ಜ್ಞಾನ ಕೌಶಲಗಳು ತಾತ್ತ್ವಿಕ ಮತ್ತು ತಾರ್ಕಿಕ ರೂಪವನ್ನು ತಾಳುವವು. ಈಗ ವಿದ್ಯಾರ್ಥಿಯ ಅರಿವು ವಿಶಾಲವ್ಯಾಪ್ತಿಯನ್ನು ಪಡೆಯುವುದು. ತಾನು ಪಡೆದ ಜ್ಞಾನಕೌಶಲಾದಿ ಗುಣಶೀಲಗಳು ಸಂಕುಚಿತವಾದುವಲ್ಲ, ಮಾನವ ಕುಲಕ್ಕೇ ಸಾಮಾನ್ಯವಾದ ವಿಷಯಗಳು ಎಂಬುದು ಅರಿವಾಗುವುದು, ಅಲ್ಲದೆ ಈ ಭೂಮಿಯು ಮಾತ್ರವೇ ಮಾನವನ ಕಾರ್ಯ ಕ್ಷೇತ್ರವಲ್ಲ, ಈ ಭೂಮಿಯನ್ನು ಮೀರಿ ಅನಂತ ಆಕಾಶದಲ್ಲಿ ಸಂಚರಿಸುತ್ತಿರುವ ಗ್ರಹ ತಾರಾ ಜ್ಯೋತಿಪುಂಜಗಳೂ ತನ್ನ ಜ್ಞಾನಸಾಧನೆ ಸಿದ್ಧಿಗಳ ಗುರಿಯಾಗಬೇಕು ಎಂಬುದು ಅರಿವಾಗುವುದು. ಪಂಚೇಂದ್ರಿಯಗಳಿಗೂ ಮೀರಿದ, ಮನಸ್ಸು ನೇರವಾಗಿ ಅರಿತು ಅನುಭವಿಸಬಹುದಾದ ಅನುಭವಗಳು, ಎಂದರೆ ಅಧ್ಯಾತ್ಮದ ಜ್ಞಾನಸಾಧನೆಗಳೂ ತನ್ನ ಪೂರ್ಣ ಜೀವನದ ಅಂಶಗಳೆಂಬುದು ವಿದ್ಯಾರ್ಥಿಯ ಮನೋದಿಗಂತದಲ್ಲಿ ಹೊಳೆಯುವುದು. ಈ ಚಿಂತನೆ, ಭಾವನೆ, ಪ್ರೇರಣೆಗಳಿಂದ ಅವನ ವ್ಯಕ್ತಿತ್ವ ಪೂರ್ಣ ವಿಕಾಸಗೊಳ್ಳುತ್ತ ಬರುವುದು. ಸೌಶೀಲ್ಯ, ಸಚ್ಚಾರಿತ್ರ್ಯಗಳು ಅವನ ವ್ಯಕ್ತಿತ್ವದ ಅವಿಭಾಜ್ಯ ಮೂಲಭೂತ ಅಂಶಗಳಾಗುವುವು. ಉನ್ನತಶಿಕ್ಷಣ ವಿದ್ಯಾರ್ಥಿಗಳಲ್ಲಿ ಈ ಮನೋದೃಷ್ಟಿಯನ್ನು ರೂಪಿಸಲು ಪ್ರಯತ್ನಿಸಬೇಕು.[೫]
ಶಿಕ್ಷಣದ ಲಕ್ಷಣ
ಬದಲಾಯಿಸಿಚಾರಿತ್ರ್ಯ ಶಿಕ್ಷಣ ಪದ್ಧತಿಯಲ್ಲಿ ಹಾಸುಹೊಕ್ಕಾಗಿ ನಡೆಯಬೇಕು. ಇದರಲ್ಲಿ ಶಿಕ್ಷಕರ ಪಾತ್ರ ಹಿರಿದಾದುದೆಂದು ಬೇರೆ ಹೇಳಬೇಕಾಗಿಲ್ಲ. ಗುಣಶೀಲಗಳನ್ನು ವಿದ್ಯಾರ್ಥಿಗಳು ಪಠ್ಯವಸ್ತು ಮತ್ತು ಶಾಲಾ ಕಾರ್ಯಕ್ರಮಗಳಿಂದ ಗ್ರಹಿಸಿ ಕಲಿಯುವುದಕ್ಕಿಂತ ಹೆಚ್ಚಾಗಿ ಆ ಪಠ್ಯವಸ್ತುಗಳನ್ನು ಬೋಧಿಸುವ ಶಿಕ್ಷಕರ ವ್ಯಕ್ತಿತ್ವ ವರ್ಚಸ್ಸುಗಳ ಆದರ್ಶದಿಂದ ಕಲಿಯುವರು. ಆದ್ದರಿಂದ ಚಾರಿತ್ರ್ಯಶಿಕ್ಷಣದಲ್ಲಿ ಗುರುವಿನ ಪಾತ್ರ ಅತಿಮುಖ್ಯವಾದುದು. ಗುರುವಿನಂತೆ ಶಿಷ್ಯ. ಅಷ್ಟೇ ಅಲ್ಲ. ಸುತ್ತಣ ಸಮಾಜ ಮತ್ತು ಸ್ವಂತ ಮನೆಯ ವಾತಾವರಣಗಳು, ದೇಶದ ರಾಜಕೀಯ ಮುಖಂಡರ ಧೋರಣೆಗಳು-ಇವೂ ಮಕ್ಕಳ ಮನಸ್ಸಿನ ಮೇಲೆ ವಿಶೇಷ ಪ್ರಭಾವವನ್ನು ಬೀರುತ್ತವಾಗಿ, ಒಟ್ಟು ಪರಿಸರ ನಿರ್ಮಲವಾಗಿ, ಆದರ್ಶರೂಪದ್ದಾಗಿ ಇರಬೇಕಾಗುತ್ತದೆ. ಲೋಕವೆಲ್ಲ ಕೆಟ್ಟಿರುವಾಗ ತರುಣ ಜನಾಂಗ ಶೀಲವಂತರಾಗಿರಲು ಸಾಧ್ಯವಾಗದು. ಮಕ್ಕಳ ಆದರ್ಶ ಇಡೀ ಸಮಾಜದಲ್ಲಿ ಕಾಣುವಂತಿರಬೇಕಾದದ್ದು ತೀರ ಅಗತ್ಯ. (ಎಂ.ಆರ್.ಆರ್.ಎ.)[೬]
ಉಲ್ಲೇಖ
ಬದಲಾಯಿಸಿ- ↑ https://kannada.careerindia.com/news/swami-vivekananda-on-education-and-system-001387.html
- ↑ https://encyclopedia2.thefreedictionary.com/Historical+Education
- ↑ https://www.nyhistory.org/education?gclid=Cj0KCQiAgebwBRDnARIsAE3eZjQB7YDAMfoxwZbyR8OJOR-lrSPr65q29D9hvNuNXvOAoJUSbVCgTSkaAoqsEALw_wcB
- ↑ https://www.smilefoundationindia.org/mission-education/?gclid=Cj0KCQiAgebwBRDnARIsAE3eZjRgBYPAmG-CehjhpJDAED2rI5EjawsFykCzX0jQJCpudeIVbC0RNCQaAq3KEALw_wcB
- ↑ https://www.wallacefoundation.org/promos2/pages/federal-policy-research.aspx?gclid=Cj0KCQiAgebwBRDnARIsAE3eZjTe8Hg-BrDxMccFw4Qh0KknBZD0_aDWtQPTKH8nnu_5OmVRkwJD9WcaAsvfEALw_wcB&ef_id=Cj0KCQiAgebwBRDnARIsAE3eZjTe8Hg-BrDxMccFw4Qh0KknBZD0_aDWtQPTKH8nnu_5OmVRkwJD9WcaAsvfEALw_wcB:G:s
- ↑ https://plan-international.org/quality-education?gclid=Cj0KCQiAgebwBRDnARIsAE3eZjRdDpdsoE0m_qRl5p03_GzYevWgg0grxtqj_9fKJw5yUqFS79CgzOQaAnCbEALw_wcB