ಚೆರ್ನೊಬಿಲ್ ದುರಂತ
ಚೆರ್ನೊಬಿಲ್ ದುರಂತವು ಯುಕ್ರೇನ್‌ನ ಪ್ರಿಪ್ಯಟ್ ನಗರದ ಸಮೀಪದ ಚೆರ್ನೊಬಿಲ್ ಅಣು ಸ್ಥಾವರದಲ್ಲಿ ಏಪ್ರಿಲ್ ೨೬, ೧೯೮೬ರಂದು ಉಂಟಾದ ಸ್ಪೋಟ ಮತ್ತದರ ಪರಿಣಾಮವಾಗಿ ಹರಡಿದ ವಿಕಿರಣದಿಂದ ಉಂಟಾದ ಸಾವು-ನೋವು-ನಷ್ಟಗಳನ್ನು ಒಳಗೊಳ್ಳುತ್ತದೆ. ಈ ದುರಂತವು ಅಣುಶಕ್ತಿಯ ಇತಿಹಾಸದಲ್ಲಿ ಅತ್ಯಂತ ಭೀಕರವಾದುದು. ಇದರಿಂದ ಹರಡಿದ ವಿಕಿರಣಾತ್ಮಕ ಪದಾರ್ಥವು ಅಂದಿನ ಇಡೀ ಸೊವಿಯಟ್ ಒಕ್ಕೂಟ ಮತ್ತು ಯುರೋಪ್ ಅಲ್ಲದೆ ಉತ್ತರ ಅಮೇರಿಕದ ಪೂರ್ವಕ್ಕೂ ತಲುಪಿತ್ತು. ಯುಕ್ರೇನ್, ರಷ್ಯಾ ಮತ್ತು ಬೆಲಾರಸ್ ಪ್ರದೇಶಗಳು ತೀವ್ರವಾಗಿ ಕಲುಷಿತಗೊಂಡು ಸುಮಾರು ೩೩೬,೦೦೦ ಜನರ ಪುನರ್ವಸತಿಯನ್ನು ಕೈಗೊಳ್ಳಬೇಕಾಯಿತು.
ಅಂತರರಾಷ್ಟ್ರೀಯ ಅಣುಶಕ್ತಿ ಪ್ರಾಧಿಕಾರದ (IAEA) ಪ್ರಕಾರ ಈ ದುರಂತದ ನೇರ ಪರಿಣಾಮವಾಗಿ ಉಂಟಾದ ಸಾವುಗಳು ೫೬. ಆದರೆ ವಿಕಿರಣದ ಪರಿಣಾಮಗಳು ಅನೇಕ ವರ್ಷಗಳ ನಂತರ ತಲೆದೋರುವುದರಿಂದ ದುರಂತದ ಸಂಪೂರ್ಣ ಪರಿಣಾಮಗಳನ್ನು ನೇರವಾಗಿ ಅಳೆಯಲಾಗುವುದಿಲ್ಲ. ಈಗ ಸ್ವತಂತ್ರ ರಾಷ್ಟ್ರಗಳಾಗಿರುವ ರಷ್ಯಾ, ಯುಕ್ರೇನ್ ಮತ್ತು ಬೆಲಾರಸ್‍ಗಳು ಇನ್ನೂ ಈ ದುರಂತದ ಬೆಲೆಗಳನ್ನು ತೆರುತ್ತಿವೆ.
ಅಣುಸ್ಥಾವರ
ಬದಲಾಯಿಸಿವಿ.ಐ. ಲೆನಿನ್ ಸ್ಮಾರಕ ಚೆರ್ನೊಬಿಲ್ ಅಣುಶಕ್ತಿ ಕೇಂದ್ರ ವು (ಚೆರ್ನೊಬಿಲ್ ನಗರದ ಉತ್ತರಕ್ಕೆ ೧೮ ಕಿ.ಮಿ. ದೂರದಲ್ಲಿದೆ. ಈ ಕೇಂದ್ರದಲ್ಲಿ ೧ ಗಿಗಾವಾಟ್ನಷ್ಟು ಶಕ್ತಿಯನ್ನು ಉತ್ಪಾದಿಸಬಲ್ಲ ನಾಲ್ಕು ಸ್ಥಾವರಗಳಿದ್ದವು. ಈ ಸ್ಥಾವರಗಳು ಸೊವಿಯೆಟ್ ಒಕ್ಕೂಟದಲ್ಲಿ ಜನಪ್ರಿಯವಾಗಿದ್ದ ಆರ್ ಬಿ ಎಮ್ ಕೆ ಮಾದರಿಯವಾಗಿದ್ದವು. ಈ ಕೇಂದ್ರವು ಅಂದಿನ ಯುಕ್ರೇನ್ ಪ್ರದೇಶದ ೧೦% ವಿದ್ಯುತ್ಚಕ್ತಿಯನ್ನು ಪೂರೈಸುತ್ತಿತ್ತು. ೧೯೭೦ರ ದಶಕದಲ್ಲಿ ಇದರ ನಿರ್ಮಾಣ ಪ್ರಾರಂಭವಾಗಿ ೧೯೭೭ರಲ್ಲಿ ಮೊದಲ ಸ್ಥಾವರ ಉದ್ಘಾಟನೆಗೊಂಡಿತು. ೧೯೮೩ರಲ್ಲಿ ನಾಲ್ಕನೇ ಹಾಗು ಕೊನೆಯ ಸ್ಥಾವರ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಇದೇ ರೀತಿಯ ೫ನೇ ಹಾಗು ೬ನೇ ಸ್ಥಾವರಗಳು ಅಪಘಾತದ ಸಮಯದಲ್ಲಿ ನಿರ್ಮಾಣಗೊಳ್ಳುತ್ತಿದ್ದವು.
)ಅಪಘಾತ
ಬದಲಾಯಿಸಿ೧೯೮೬ರ ಏಪ್ರಿಲ್ ೨೬ರ ಶನಿವಾರದಂದು ಬೆಳಗ್ಗೆ ೧:೨೩:೫೮ಕ್ಕೆ ನಾಲ್ಕನೇ ಸ್ಥಾವರದಲ್ಲಿ ಬೃಹತ್ ಆವಿಯ ಸ್ಪೋಟವಾಯಿತು. ಇದರಿಂದ ಉಂಟಾದ ಬೆಂಕಿಯ ಪರಿಣಾಮವಾಗಿ ಇತರ ಸ್ಪೋಟಗಳು ಉಂಟಾಗಿ ಸ್ಥಾವರದ ತಿರುಳಿನ ಪರಮಾಣು ಪ್ರಕ್ರಿಯೆಯು ಹತೋಟಿಯಿಂದ ಕೈತಪ್ಪಿತು (Nuclear meltdown). ಪರಮಾಣು ಪ್ರಕ್ರಿಯೆಯ ವಿಷದಾಯಕ ಉತ್ಪನ್ನಗಳು ಬೆಂಕಿ ಹಾಗು ಸ್ಪೋಟಗಳಿಂದ ಬಹಳ ದೂರದವರೆಗೆ ಪಸರಿತವಾದವು.
ಕಾರಣಗಳು
ಬದಲಾಯಿಸಿಅಪಘಾತಕ್ಕೆ ಅಧಿಕೃತವಾಗಿ ಎರಡು ಕಾರಣಗಳನ್ನು ನೀಡಲಾಗಿದೆ. ಆಗಸ್ಟ್ ೧೯೮೬ರಲ್ಲಿ ಪ್ರಕಟಿತ ಮೊದಲ ವರದಿಯ ಪ್ರಕಾರ ಸ್ಥಾವರದ ಮೇಲ್ವಿಚಾರಕರ ತಪ್ಪುಗಳು ಇದಕ್ಕೆ ಕಾರಣವೆಂದು ಹೇಳಲಾಯಿತು. ಭೌತವಿಜ್ಞಾನಿ ವಲೇರಿ ಲೆಗಸೊವ್ನ ಮಂದಾಡಳಿತದಲ್ಲಿನ ಆಯೋಗವು ೧೯೯೧ರಲ್ಲಿ ಪ್ರಕಟಿಸಿದ ವರದಿಯ ಪ್ರಕಾರ ಚೆರ್ನೊಬಿಲ್‍ನಲ್ಲಿ ಅಳವಡಿತ ಆರ್ ಬಿ ಎಮ್ ಕೆ ಮಾದರಿಯ ಸ್ಥಾವರಗಳಲ್ಲಿನ ವಿನ್ಯಾಸದ ದೋಷಗಳೇ ಕಾರಣವೆಂದು ಹೇಳಲಾಯಿತು. ಐ ಎ ಇ ಎ ಕೂಡ ೧೯೮೬ರಲ್ಲಿ ನಿರ್ವಾಹಕರ ದೋಷವೆಂದು ಪ್ರಕಟಿಸಿ, ಮುಂದೆ ೧೯೯೩ರಲ್ಲಿ ಸ್ಥಾವರದ ದೋಷವೇ ಕಾರಣವೆಂದು ತನ್ನ ನಿಲುವನ್ನು ಬದಲಾಯಿಸಿತು.
ಈ ಎಲ್ಲಾ ವರದಿಗಳು ಪ್ರಮುಖವಾಗಿ ಈ ಕೆಳಗಿನ ಅಂಶಗಳನ್ನು ಬೆಳಕಿಗೆ ತಂದವು:
- ಆರ್ ಬಿ ಎಮ್ ಕೆ ಮಾದರಿ ಅಣುಸ್ಥಾವರದ ದೋಷಗಳು:
- ಸ್ಥಾವರದ ತಿರುಳನ್ನು ತಂಪಾಗಿಸಲು ಗ್ರಾಫೈಟ್ ಮತ್ತು ನೀರನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಇವು ತಂಪಾಗಿಸುವುದಲ್ಲದೆ ಪರಮಾಣು ಪ್ರಕ್ರಿಯೆಗೆ ಕಾರಣೀಭೂತವಾಗುವ ನ್ಯುಟ್ರಾನ್ ಗಳನ್ನು ನಿಧಾನಿಸುತ್ತವೆ ಕೂಡ. ಆದರೆ ನೀರು ಆವಿಯಾದರೆ ಈ ರೀತಿ ನಿಧಾನಿಸುವುದಿಲ್ಲ. ಈ ಅಣುಸ್ಥಾವರದಲ್ಲಿ ನೀರಿನ ಚಲನೆಗೆ ಹಾಕಿದ್ದ ಕೊಳವೆಗಳು ಸರಿಯಾದ ರೀತಿಯಲ್ಲಿರಲಿಲ್ಲ. ಆದ್ದರಿಂದ ಕೆಲವೊಮ್ಮೆ ಆವಿಯ ಉತ್ಪತ್ತಿಯಾಗಿ ಪ್ರಕ್ರಿಯೆಯನ್ನು ತಡೆಯುವುದರಲ್ಲಿ ಉಪಯೋಗಕ್ಕೆ ಬರುತ್ತಿರಲಿಲ್ಲ.
- ಪ್ರಕ್ರಿಯೆಯ ವೇಗವನ್ನು ನಿಯಂತ್ರಿಸಲು ಬಳಸಲಾಗುತ್ತಿದ್ದ ಗ್ರಾಫೈಟ್ ಕೋಲುಗಳ ವಿನ್ಯಾಸದಲ್ಲಿ ದೋಷಗಳಿದ್ದಿದ್ದರಿಂದ ಅವು ಕೆಲವೊಮ್ಮೆ ಪ್ರಕ್ರಿಯೆಯನ್ನು ನಿಧಾನಿಸುವ ಬದಲು ಇನ್ನೂ ವೇಗವಾಗಿ ಚಲಿಸುವಂತೆ ಮಾಡುತ್ತಿದ್ದವು.
- ಸ್ಥಾವರ ಬೃಹತ್ ಆಗಿದ್ದರಿಂದ ಹಣ ಉಳಿತಾಯ ಮಾಡಲು ಅದರ ಸುತ್ತ ರಕ್ಷಣಾ ಕವಚವನ್ನು ಪೂರ್ಣವಾಗಿ ಕಟ್ಟಿರಲಿಲ್ಲ. ಆದ್ದರಿಂದ ಅಪಘಾತದ ನಂತರ ವಿಕಿರಣ ಪದಾರ್ಥಗಳು ಸುಲಭವಾಗಿ ಹರಡಿದವು.
- ನಿರ್ವಾಹಕರ ದೋಷಗಳು:
- ಸ್ಥಾವರದ ನಿರ್ವಾಹಕರಲ್ಲಿ ಯಾರಿಗೂ ಮುಂಚೆ ಈ ರೀತಿಯ ಸ್ಥಾವರಗಳಲ್ಲಿ ಕೆಲಸ ಮಾಡಿದ ಅನುಭವವಿರಲಿಲ್ಲ. ಅಲ್ಲದೆ ಸರಿಯಾದ ತರಬೇತಿಯನ್ನೂ ಪಡೆದಿರಲಿಲ್ಲ. ಅಪಘಾತದ ಸಮಯದಲ್ಲಿ ಅವರು ಅನೇಕ ನಿಯಮಿತ ಸುರಕ್ಷ ಮುಂಜಾಗ್ರತೆ ಕ್ರಮಗಳನ್ನು ಅವರು ಜಾರಿಗೆ ತಂದಿರಲಿಲ್ಲ.
ದುರಂತದ ಸಂಭವ
ಬದಲಾಯಿಸಿಏಪ್ರಿಲ್ ೨೫ರಂದು ನಾಲ್ಕನೇ ಸ್ಥಾವರವನ್ನು ಸಾಧಾರಣ ದುರಸ್ತಿಗಾಗಿ ನಿಲ್ಲಿಸಲು ನಿರ್ಧರಿಸಲಾಗಿತ್ತು. ಈ ನಿಲುಗಡೆಯ ಸಮಯದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಬೇಕಾಗುವ ಸುರಕ್ಷಾ ವ್ಯವಸ್ಥೆಗಳ ಪರೀಕ್ಷೆಯೊಂದನ್ನು ಮಾಡಲು ಯೋಜಿಸಲಾಗಿತ್ತು. ಸ್ಥಾವರದ ಒಳಭಾಗವನ್ನು ತಂಪು ಮಾಡಲು ಹರಿಸುವ ನೀರಿನ ವ್ಯವಸ್ಥೆಯು ಬಾಹ್ಯ ವಿದ್ಯುತ್ಛಕ್ತಿಯಿಂದ ಚಲಿಸುತ್ತಿತ್ತು. ಈ ಬಾಹ್ಯ ವಿದ್ಯುತ್ ನಿಂತರೆ, ಕೆಲವು ಕಾಲ ಸ್ಥಾವರದ ಸ್ವಂತ ತರ್ಬೀನು ಈ ಕೆಲಸವನ್ನು ಮಾಡುತ್ತದೆಯೇ ಎಂದು ಕಂಡುಹಿಡಿಯುವುದೇ ಈ ಪರೀಕ್ಷೆಯ ಉದ್ದೇಶವಾಗಿತ್ತು.
ಅನಿಶ್ಚಿತವಾಗಿ ಅಂದು ಅದೇ ಪ್ರದೇಶದ ಬೇರೆ ವಿದ್ಯುತ್ಛಕ್ತಿ ಕೇಂದ್ರವೊಂದು ವಿಫಲವಾದುದರಿಂದ ದಿನವೇಳೆಯಲ್ಲಿ ಪ್ರಾರಂಭವಾದ ಈ ಈ ಪರೀಕ್ಷೆಯನ್ನು ಮಧ್ಯದಲ್ಲಿಯೇ ನಿಲ್ಲಿಸಿ, ಉಳಿದ ಭಾಗವನ್ನು ರಾತ್ರಿಗೆ ಮುಂದೂಡಲಾಯಿತು. ರಾತ್ರಿ ಪಾಳೆಯಲ್ಲಿದ್ದ ಕೆಲವೇ ಜನರ ಮೇಲೆ ಈ ಹೊಣೆ ಬಿದ್ದಿತು.
ಅಣುಸ್ಥಾವರದಲ್ಲಿ ಸ್ಪೋಟ
ಬದಲಾಯಿಸಿಪರೀಕ್ಷೆಯು ಅರ್ಧದಲ್ಲಿ ತಡೆಯಲಾಗಿತ್ತೆಂಬ ಸಂಗತಿ ತಿಳಿಯದೆ ರಾತ್ರಿ ಪಾಳೆಯವರು ಸ್ಥಾವರವನ್ನು ನಿಲುಗಡೆ ಮಾಡಲು ಪ್ರಾರಂಭಿಸಿದರು. ಮುಂಚೆ ಅರ್ಧಕ್ಕೆ ಈ ಕೆಲಸ ನಿಲ್ಲಿಸಿದ್ದರಿಂದ ನಿಲುಗಡೆ ಪ್ರಕ್ರಿಯೆಯು ನಿಯಮಿತ ವೇಗಕ್ಕಿಂತ ಹೆಚ್ಚು ಬೇಗನೆಯೇ ಕಡಿಮೆ ಶಕ್ತಿ ಉತ್ಪಾದನೆ ಮಟ್ಟವನ್ನು ತಲುಪತೊಡಗಿತು. ಇದನ್ನು ತಡೆಗಟ್ಟಲು ಪ್ರಕ್ರಿಯೆಯನ್ನು ನಿಯಂತ್ರಿಸುವ ಗ್ರಾಫೈಟ್ ಕೋಲುಗಳನ್ನು ಸುರಕ್ಷಿತ ಮಟ್ಟಕಿಂತ ಮೇಲಕ್ಕೆ ಹಿಂತೆಗೆಯಲಾಯಿತು. ಪುನಃ ಹೆಚ್ಚು ಶಕ್ತಿ ಉತ್ಪಾದನೆ ಮಟ್ಟವನ್ನು ತಲುಪಿದಾಗ ಪರೀಕ್ಷೆಯನ್ನು ಪ್ರಾರಂಭಿಸಲಾಯಿತು.
ಪರೀಕ್ಷೆಯೆ ಅಂಗವಾಗಿ ತುರ್ಬೀನಿನಿಂದ ನಡೆಯುತ್ತಿದ್ದ ನೀರಿನ ಪಂಪ್‍ಗಳನ್ನು ಪ್ರಾರಂಭಿಸಲಾಯಿತು. ಈಗ ಹರಿಯಲಾರಂಭಿಸಿದ ನೀರು ಬೇಗನೆ ಆವಿಯಾಗ ತೊಡಗಿತು. ಹೀಗಾಗಿ ಅದು ಪ್ರಕ್ರಿಯೆಯನ್ನು ನಿಲ್ಲಿಸಲು ನಿಷ್ಪ್ರಯೋಜಕವಾಯಿತು. ಪರಮಾಣು ಪ್ರಕ್ರಿಯೆ ಮತ್ತೆ ಹೆಚ್ಚಾಗತೊಡಗಿತು. ಬೆಳಗ್ಗೆ ೧:೨೩:೪೦ಕ್ಕೆ ಪ್ರಕ್ರಿಯೆಯನ್ನು ನಿಲ್ಲಿಸಲು ಹಿಂತೆಗೆದಿದ್ದ ಗ್ರಾಫೈಟ್ ಕೋಲುಗಳನ್ನು ಮತ್ತೆ ಇಳಿಸಲಾಯಿತು. ಆದರೆ ಮುಂಚೆ ವಿವರಿಸಿದಂತೆ ಈ ಕೋಲುಗಳ ವಿನ್ಯಾಸದಲ್ಲಿ ದೋಷವಿದ್ದಿದ್ದರಿಂದ ಅವು ಪ್ರಾರಂಭದಲ್ಲಿ ಪ್ರಕ್ರಿಯೆಯನ್ನು ನಿಲ್ಲಿಸುವ ಬದಲು ಇನ್ನೂ ಹೆಚ್ಚು ವೇಗದಲ್ಲಿ ಚಲಿಸುವಂತೆ ಮಾಡಿದವು. ಈ ಹತೋಟಿ ತಪ್ಪಿದ ಪ್ರಕ್ರಿಯೆಯು ಅಗಾಧವಾದ ಶಕ್ತಿಯನ್ನು ಉತ್ಪಾದಿಸತೊಡಗಿತು. ಈ ಬಿಸಿಗೆ ಕೋಲುಗಳಲ್ಲಿ ಬಿರುಕು ಬಂದು ಅವನ್ನು ಪೂರ್ತಿ ಒಳಕ್ಕೆ ಇಳಿಸಲೂ ಆಗಲಿಲ್ಲ. ಆವಿಯ ಒತ್ತಡ ಬಹುಬೇಗನ ಹೆಚ್ಚಾಗಿ ಆವಿಯನ್ನು ಒಯ್ಯುತ್ತಿದ್ದ ಕೊಳವೆಗಳು ವಿಸ್ಪೋಟಗೊಂಡವು. ಈ ವಿಸ್ಪೋಟವು ಸ್ಥಾವರದ ಮೇಲ್ಛಾವಣಿಯಲ್ಲಿ ಒಂದು ದೊಡ್ಡ ರಂಧ್ರವನ್ನು ಸೃಷ್ಟಿಸಿತು. ಇದರಿಂದ ಒಳಹೊಕ್ಕ ಆಮ್ಲಜನಕದಿಂದ ಬಿಸಿಯಾಗಿದ್ದ ಗ್ರಾಫೈಟ್ ಕೋಲುಗಳು ಬೆಂಕಿ ಹತ್ತಿಕೊಂಡವು. ಈ ಬೆಂಕಿಯಿಂದ ವಿಕಿರಣಾತ್ಮಕ ಪದಾರ್ಥಗಳ ಪಸರಿಕೆಯಾಗತೊಡಗಿತು.
ನಿಯಂತ್ರಣಕ್ಕೆ ಪ್ರಯತ್ನಗಳು
ಬದಲಾಯಿಸಿಸ್ಥಳೀಯ ಅಧಿಕಾರಿಗಳ ಬಳಿ ಸರಿಯಾದ ಉಪಕರಣಗಳಿಲ್ಲದ ಕಾರಣದಿಂದ ಸ್ಪೋಟದ ಪರಿಣಾಮಗಳು ಉಲ್ಬಣಗೊಂಡಿತು. ಸ್ಥಾವರದ ಬಳಿ ಅಂದಾಜಿತ ವಿಕಿರಣದ ಮಟ್ಟ ಸುಮಾರು ಗಂಟೆಗೆ ೨೦,೦೦೦ ರೊಣ್ಟ್‍ಜೆನ್ಗಳಷ್ಟಾಗಿತ್ತು. ೫ ಗಂಟೆಗಳಲ್ಲಿ ೫೦೦ ರೊಣ್ಟ್‍ಜನ್ ಮರಣಕಾರಕ ಮಟ್ಟವಾದುದರಿಂದ ಹಲವು ಸುರಕ್ಷರಹಿತ ಕೆಲಸಗಾರರು, ಈ ಮಟ್ಟದಷ್ಟು ವಿಕಿರಣವನ್ನು ಕೆಲವೇ ನಿಮಿಷಗಳಲ್ಲಿ ಪಡೆದರು. ಮಟ್ಟವನ್ನು ಅಳೆಯುವ ಮಾಪನಯಂತ್ರಗಳಲ್ಲಿನ ನಮೂದಿತ ಪ್ರಮಾಣಗಳಿಗಿಂತ ಇದು ಹೆಚ್ಚಾಗಿದ್ದರಿಂದ ಕೆಲಸಗಾರರಿಗೆ ಈ ವಿಷಯ ತಿಳಿಯಲಿಲ್ಲ. ಸ್ಥಾವರದ ಮುಖ್ಯಸ್ಥ ಅಲೆಕ್ಸಾಂಡರ್ ಅಕಿಮೊವ್, ಈ ಮಾಪನಗಳಿಂದ ಪ್ರಸಂಗದ ತೀವ್ರತೆಯನ್ನು ಅರಿಯದೆ ಸ್ಥಾವರದೊಳಗೆ ನೀರನ್ನು ತುಂಬುವ ಕೆಲಸವನ್ನು ಬೆಳಗಿನಜಾವದವರೆಗೆ ನಿರ್ವಹಿಸಿದ. ಕೆಲಸಗಾರರು ಯಾರೂ ಸುರಕ್ಷೆ ಕವಚ ಧರಿಸದಿದ್ದರಿಂದ ಸುಮಾರು ಎಲ್ಲರೂ ಮುಂದಿನ ಮೂರು ವಾರಗಳಲ್ಲಿ ಮೃತಪಟ್ಟರು.
ಹತ್ತಿದ್ದ ಬೆಂಕಿಯನ್ನು ಆರಿಸಲು ಸ್ಥಳೀಯ ಅಗ್ನಿಪಡೆಯೂ ಬಂದಿತು. ಅವರಿಗೆ ಬೆಂಕಿಯ ಕಾರಣ ಸ್ಥಾವರದ ಸ್ಫೋಟವೆಂದು ತಿಳಿಸಲಾಗಲಿಲ್ಲದಿದ್ದರಿಂದ ಅವರೂ ಕವಚಗಳನ್ನು ಧರಿಸದೆ ಕೆಲಸ ಮಾಡಿ ಹೆಚ್ಚು ವಿಕಿರಣವನ್ನು ಪಡೆದರು.[೧] ಸುತ್ತಲಿನ ಬೆಂಕಿಯನ್ನು ಸುಮಾರು ಬೆಳಗ್ಗೆ ೫ ಗಂಟೆಯ ಹೊತ್ತಿಗೆ ಆರಿಸಲಾಯಿತು. ನಾಲ್ಕನೇ ಸ್ಥಾವರದ ಒಳಗಿನ ಬೆಂಕಿಯು ಆರದಿದ್ದರಿಂದ ಹೆಲಕಾಪ್ಟರ್‍ಗಳನ್ನು ಉಪಯೋಗಿಸಿ ಮರಳು, ಸೀಸ, ಬೋರಾನ್ ಮುಂತಾದ ಪದಾರ್ಥಗಳನ್ನು ಚಿಮುಕಿಸಿ ಆರಿಸಬೇಕಾಯಿತು.
ದುರಂತದ ತೀವ್ರತೆಯನ್ನು ಅಂದಾಜಿಸಲು ನೇಮಕಗೊಂಡ ಸರ್ಕಾರಿ ತಂಡವು ಚೆರ್ನೊಬಿಲ್‍ಗೆ ಏಪ್ರಿಲ್ ೨೬ರ ರಾತ್ರಿ ತಲುಪಿತು. ಆ ಹೊತ್ತಿಗಾಗಲೆ ಇಬ್ಬರು ಮೃತಪಟ್ಟು ೫೨ ಜನರು ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದರು. ದುರಂತದ ತೀವ್ರತೆಯನ್ನು ತಿಳಿದ ತಂಡವು ಇಡೀ ಪ್ರಿಪ್ಯಾಟ್ ನಗರವನ್ನು ತೆರವು ಮಾಡಲು ಜನರಿಗೆ ಆದೇಶಿಸಿದರು. ವಿಕಿರಣ ದೂಷಿತ ಪದಾರ್ಥಗಳನ್ನು ಜನರು ಓಯ್ಯದಂತೆ ಮಾಡಲು ಈ ತೆರವು ಕೇವಲ ಮೂರು ದಿನದವರೆಗೆ ಎಂದು ಘೋಷಿಸಲಾಯಿತು. ಏಪ್ರಿಲ್ ೨೭ರ ಮಧ್ಯಾನ್ನಕ್ಕೆ ಜನರ ತೆರವು ಪ್ರಾರಂಭವಾಯಿತು.
ಇತ್ತ ಸ್ಥಾವರದೊಳಗೆ ತಾಪ ಹೆಚ್ಚಾದಂತೆ, ತಳದ ಕಾಂಕ್ರೀಟು ಕರಗಿ ಲಾವಾರಸದಂತೆ ಹರಿಯಲಾರಂಭಿಸಿತು. ಹೆಲಿಕಾಪ್ಟರ್‍ಗಳಿಂದ ಹಾಕಲ್ಪಟ್ಟ ಪದಾರ್ಥಗಳು ಕುಲುಮೆಗೆ ಉರುವಲನ್ನು ಹಾಕಿದಂತಾಯಿತು. ಬೆಂಕಿಯನ್ನು ಆರಿಸಲು ವಿಫಲ ಪ್ರಯತ್ನವಾಗಿ ಹಾಕಿದ್ದ ನೀರು ಸ್ಥಾವರದ ಕೆಳಗೆ ಸೋರಿ ಸಂಗ್ರಹಿತವಾಗಿತ್ತು. ಕರಗಿದ ಕಾಂಕ್ರೀಟು ಈ ನೀರನ್ನು ಸಂಪರ್ಕಿಸಿದರೆ ಇನ್ನೂ ದೊಡ್ಡ ವಿಸ್ಫೋಟವಾಗುವ ಸಂಭವವಿತ್ತು. ಇದನ್ನು ತಪ್ಪಿಸಲು ಮೂರುಜನರ ತಂಡವೊಂದು ಸಾಹಸದಿಂದ ನೀರನ್ನು ಹೊರಬಿಟ್ಟರು.[೨]
ವಿಕಿರಣಾತ್ಮಕ ಪದಾರ್ಥವು ಇನ್ನೂ ಸ್ಥಾವರದ ಒಳಗೆ ಹೇರಳವಾಗಿತ್ತು. ಇದನ್ನು ಮುಚ್ಚಲು ಮುಂದಿನ ವಾರಗಳಲ್ಲ ಸುಮಾರು ೫೦೦೦ ಟನ್ಗಳಷ್ಟು ಮರಳು, ಸೀಸ ಮತ್ತು ಬೋರಿಕ್ ಆಮ್ಲವನ್ನು ಅದರ ಮೇಲೆ ಹಾಕಲಾಯಿತು. ನಂತರ ಈ ಸ್ಥಾವರದ ಸುತ್ತಲು ಒಂದು ದೊಡ್ಡ ಕಾಂಕ್ರೀಟ್ ಗೋರಿಯ ನಿರ್ಮಾಣ ಪ್ರಾರಂಭವಾಯಿತು. ಡಿಸೆಂಬರ್ ೧೯೮೬ರ ಹೊತ್ತಿಗೆ ಈ ಗೋರಿಯ ನಿರ್ಮಾಣ ಮುಕ್ತಾಯವಾಯಿತು.
ದುರಂತದ ಪರಿಣಾಮಗಳು
ಬದಲಾಯಿಸಿಪಸರಿತ ವಿಕಿರಣಾತ್ಮಕ ಪದಾರ್ಥದ ಸುಮಾರು ೬೦% ಬೆಲಾರಸ್ ಪ್ರದೇಶದಲ್ಲಿ ಬಿದ್ದಿತು.[೩] ವಿಕಿರಣದ ಮಲಿನ ವಾಯುಗುಣದ ಪ್ರಭಾವ ಒಯ್ದಂತೆ ಹರಡಿತು. ಸ್ಫೋಟದ ಪ್ರಭಾವವನ್ನು ನಿಯಂತ್ರಿಸುವಲ್ಲಿ ಕಾರ್ಯ ನಿರ್ವಹಿಸಿದವರಲ್ಲಿ ಸುಮಾರು ೨೦೦ ಜನರು ಆಸ್ಪತ್ರೆಗೆ ದಾಖಲಾಗಬೇಕಾಯಿತು. ಅದರಲ್ಲಿ ೩೧ ಜನ ಸಾವನ್ನಪ್ಪಿದರು. ಪ್ರಿಪ್ಯಟ್‌ನಲ್ಲಿ ೫೦,೦೦೦ ಜನರನ್ನು ಒಳಗೊಂಡಂತೆ ಸುತ್ತಮುತ್ತಲಿನ ಪ್ರದೇಶಗಳಿಂದ ಸುಮಾರು ೧೩೫,೦೦೦ ಜನರನ್ನು ಪುನರ್ವಸತಿಗೆ ಸ್ಥಳಾಂತರಿಸಬೇಕಾಯಿತು.
ವಿಸ್ಫೋಟದ ಪರಿಣಾಮವಾಗಿ ಉದ್ಭವವಾದ ವಿಕಿರಣಾತ್ಮಕ ಕಣಗಳ ಮೋಡವು ರಷ್ಯಾ, ಬೆಲಾರಸ್, ಯುಕ್ರೇನ್‍ಗಳಲ್ಲದೇ ಕ್ರಮೇಣ ಯುನೈಟೆಡ್ ಕಿಂಗ್‍ಡಮ್ ಸಹಿತ ಇಡೀ ಯುರೋಪ್ ಖಂಡದಲ್ಲಿ ಹರಡಿತು.[೪] ಹೊರ ಜಗತ್ತಿಗೆ ಮೊದಲ ಬಾರಿಗೆ ಈ ಪ್ರಕರಣ ಬೆಳಕಿಗೆ ಬಂದಿದ್ದು ಏಪ್ರಿಲ್ ೨೭ರಂದು. ಚೆರ್ನೊಬಿಲ್‍ನಿಂದ ಸುಮಾರು ೧,೧೦೦ ಕಿ.ಮಿ. ದೂರದಲ್ಲಿ ಸ್ವೀಡನ್ನ ಅಣುಶಕ್ತಿ ಕೇಂದ್ರವೊಂದರಲ್ಲಿ ಅಂದು ವಿಕಿರಣ ಮಟ್ಟ ಹೆಚ್ಚಗಿದ್ದು ಗಮನಕ್ಕೆ ಬಂದಿತು. ತಮ್ಮ ಕೇಂದ್ರದಿಂದ ಇದು ಉತ್ಪತ್ತಿಯಾಗುತ್ತಿಲ್ಲವೆಂದು ಖಾತ್ರಿ ಮಾಡಿಕೊಂಡ ನಂತರ ಇದರ ಮೂಲವು ಪಶ್ವಿಮ ಸೋವಿಯೆಟ್ ಒಕ್ಕೂಟವೆಂದು ಕಂಡುಹಿಡಿದರು.
ನೈಸರ್ಗಿಕ ಪರಿಣಾಮಗಳು
ಬದಲಾಯಿಸಿಅಣುಸ್ಥಾವರದ ಹತ್ತಿರದ ಪ್ರಿಪ್ಯಟ್ ನದಿಯು ಯುರೋಪಿನ ಅತಿ ದೊಡ್ಡ ನದಿ ಜಾಲಗಳಲ್ಲಿ ಒಂದಾದ ದ್ನೀಪರ್ ನದಿಯನ್ನು ಸೇರುತ್ತಿದ್ದರಿಂದ ನದಿನೀರು ವಿಕಿರಣ ಪದಾರ್ಥಗಳಿಂದ ಕಲುಷಿತಗೊಂಡು ಹಲವೆಡೆ ಹರಡಿತು.[೫] ಯುಕ್ರೇನ್‍ನ ಹಲವೆಡೆ ಕುಡಿಯುವ ನೀರಿನಲ್ಲಿನ ವಿಕಿರಣದ ಮಟ್ಟ ನಿಯಮಿತವಾದದಕ್ಕಿಂತ ಹೆಚ್ಚಾಗಿ, ನೀರಿನ ಅಭಾವವುಂಟಾಯಿತು. ವಿಕಿರಣವು ನದಿಯಲ್ಲಿನ ಮೀನುಗಳಲ್ಲೂ ಕ್ರೂಢಿಕರಣಗೊಂಡು ಅವು ಅಹಾರವಾಗಿ ಉಪಯೋಗಿಸಲು ಅನರ್ಹವಾದವು. [೬]
ವಿಕಿರಣದ ಪದಾರ್ಥಗಳನ್ನು ಭೂಮಿಯ ಮೇಲ್ಮಯೈ ಮಣ್ಣು ಹೆಚ್ಚಾಗಿ ಹೀರಿದ್ದರಿಂದ ಭೂಜಲಕ್ಕೆ ಇದು ಹೆಚ್ಚಾಗಿ ತಲುಪಲಿಲ್ಲ. ಕೇವಲ ಸ್ಥಾವರ ಅತೀ ಸಮೀಪದ ಪ್ರದೇಶದಲ್ಲಿ ಮಾತ್ರ ಈ ತೊಂದರೆ ಕಂಡುಬಂದಿತು.
ದುರಂತದ ನಂತರ ಸ್ಥಾವರದ ಸುತ್ತಲಿನ ಸುಮಾರು ನಾಲ್ಕು ಚದುರ ಕಿಲೊಮೀಟರ್ಗಳಷ್ಟು ಜಾಗದ ಪೈನ್ ಮರಗಳೆಲ್ಲ ಒಣಗಿ ಕೆಂಪಾದವು. ಈ ಪ್ರದೇಶದ ಪ್ರಾಣಿಗಳು ಕೂಡ ಸಾವನ್ನಪ್ಪಿದವು, ಇಲ್ಲವೆ ಬಂಜೆಯಾದವು. ಇದರ ಹೊರಗಿನ ಪ್ರದೇಶದ ಹಲವು ಪ್ರಾಣಿಗಳಲ್ಲಿ ಥೈರಾಯ್ಡ್ ಗ್ರಂಥಿಯ ದೋಷಗಳು ಹೆಚ್ಚಾಗಿ ಕಂಡುಬಂದವು. ಆದರೆ ಮುಂದಿನ ತಲೆಮಾರುಗಳ ಪ್ರಾಣಿಗಳ ಮೇಲೆ ಹೆಚ್ಚು ಪರಿಣಾಮವಾಗಲಿಲ್ಲ. ಪ್ರಸಕ್ತ ದಿನಗಳಲ್ಲಿ ಇದೇ ಪ್ರದೇಶದಲ್ಲಿ ಮಾನವನ ಅಡಚಣೆಗಳಿಲ್ಲದಿರುವುದರಿಂದ ವನ್ಯಮೃಗಗಳು ಬಹಳ ಹೆಚ್ಚಾಗಿ, ಬೆಲಾರಸ್ ಈ ಪ್ರದೇಶವನ್ನು ನೈಸರ್ಗಿಕ ತಾಣವಾಗಿ ಘೋಷಿಸಿದೆ.
ಮಾನವನ ಆರೋಗ್ಯದ ಮೇಲಿನ ಪರಿಣಾಮಗಳು
ಬದಲಾಯಿಸಿಆರೋಗ್ಯದ ಮೇಲಿನ ಪರಿಣಾಮಗಳನ್ನು ಸಂಶೋಧಿಸಿದ ಹಲವು ವರದಿಗಳು ಬೇರೆ ಬೇರೆ ನಿರ್ಣಯಗಳಿಗೆ ಬಂದಿವೆ. ಈ ವರದಿಗಳಲ್ಲಿ ಮುಖ್ಯವಾದವುಗಳು ಚೆರ್ನೊಬಿಲ್ ಫೋರಮ್ ವರದಿ, ಟಾರ್ಚ್ ವರದಿ, ಗ್ರೀನ್‍ಪೀಸ್ ವರದಿ, ಮತ್ತು ಏಪ್ರಿಲ್ ೨೦೦೬ರ "ಅಣುಸಮರದ ವಿರುದ್ಧ ಅಂತರರಾಷ್ಟ್ರೀಯ ವೈದ್ಯರು" ಸಂಘಟನೆಯ ವರದಿ.
ಮೊದಲು ಹೊರಬಂದ ಚೆರ್ನೊಬಿಲ್ ಫೋರಮ್ ವರದಿ ಅಪಘಾತದ ನೇರ ಸಾವುಗಳನ್ನು ಒಟ್ಟು ೪,೦೦೦ [೭] ಮತ್ತು ವಿಕಿರಣಕ್ಕೆ ಈಡಾದ ೬.೯ ಮಿಲಿಯನ್ ಸೋವಿಯೆಟ್ ನಾಗರೀಕರಲ್ಲಿ ಮುಂದೆ ಕ್ಯಾನ್ಸರ್ನಿಂದ ಉಂಟಾಗುವ ಸಾವುಗಳು ೯,೦೦೦[೮] ಎಂದು ಅಂದಾಜಿಸಿತು. ಇದನ್ನು ವಿರೋಧಿಸಿದ "ದಿ ಅದರ್ ರಿಪೋರ್ಟ್ ಆನ್ ಚೆರ್ನೊಬಿಲ್" (ಟಾರ್ಚ್) ವರದಿಯು ೩೦,೦೦೦ದಿಂದ ೬೦,೦೦೦ ಜನರು ಮುಂದೆ ಕ್ಯಾನ್ಸರ್‍ನಿಂದ ಸಾವನ್ನಪ್ಪುತ್ತರೆ ಎಂದು ಅಂದಾಜಿಸಿತು.[೪] ಇದರ ನಂತರದ ಗ್ರೀನ್‍ಪೀಸ್ ಸಂಸ್ಥೆಯು ತನ್ನ ವರದಿಯಲ್ಲಿ "ಇತ್ತೀಚಿನ ಅಂಕಿಅಂಶಗಳ ಪ್ರಕಾರ ಬೆಲಾರಸ್, ಯುಕ್ರೇನ್ ಮತ್ತು ರಷ್ಯಾಗಳಲ್ಲಿ ೧೯೯೦ರಿಂದ ೨೦೦೪ರ ಒಳಗೆ ಈ ದುರಂತದಿಂದ ಉಂಟಾದ ಸಾವುಗಳು ೨೦೦,೦೦೦" ಎಂದು ಘೋಷಿಸಿತು. ೨೦೦೬ರ ವೈದ್ಯರ ಸಂಘಟನೆಯ ವರದಿಯು ಇಲ್ಲಿಯವರೆಗೆ ಥೈರಾಯ್ಡ್ನ ಕ್ಯಾನ್ಸರ್ ೧೦,೦೦೦ ಜನರಿಗೆ ಈ ದುರಂತದಿಂದ ಆಗಿದ್ದು ಮುಂದೆ ಇದೇ ರೋಗವು ಇನ್ನೂ ೫೦,೦೦೦ ಜನರಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಅಭಿಪ್ರಾಯಿಸಿತು.[೯]
ದುರಂತದ ನಂತರ ಚೆರ್ನೊಬಿಲ್
ಬದಲಾಯಿಸಿದುರಂತದ ನಂತರ ನಾಲ್ಕನೇ ಸ್ಥಾವರದ ಸುತ್ತಲೂ ಕಾಂಕ್ರೀಟಿನ ರಕ್ಷಣಾಕವಚವನ್ನು ಕಟ್ಟಲಾಯಿತು. ಆದರೆ ಯುಕ್ರೇನ್‍ನಲ್ಲಿ ವಿದ್ಯುತ್ಚಕ್ತಿಯ ಅಭಾವವಿದ್ದುದ್ದರಿಂದ ಉಳಿದ ಎರಡು ಸ್ಥಾವರಗಳನ್ನು ಕಾರ್ಯಗತವಾಗಿ ಇಡಲಾಯಿತು. ೧೯೯೧ರಲ್ಲಿ ಎರಡನೇ ಸ್ಥಾವರದಲ್ಲಿ ಬೆಂಕಿ ಶುರವಾದುದ್ದರಿಂದ ಅದನ್ನು ನಿಲ್ಲಿಸಲಾಯಿತು. ೧೯೯೬ರಲ್ಲಿ ಮೊದಲನೇ ಸ್ಥಾವರವನ್ನು ಮತ್ತು ೨೦೦೦ದಲ್ಲಿ ಮೂರನೇ ಹಾಗು ಕೊನೆಯ ಸ್ಥಾವರವನ್ನು ಮುಚ್ಚಲಾಯಿತು.
ದುರಂತದ ನಂತರ ಅವಸರವಾಗಿ ಕಟ್ಟಲ್ಪಟ್ಟ ಕವಚವು ಇಂದು ನಿಧಾನವಾಗಿ ಹದಗೆಡುತ್ತಿದೆ. ಸ್ಥಾವರದಲ್ಲಿ ಇನ್ನೂ ಅಂದಾಜಿತ ೧೮೦ ಟನ್ ಅಣು ಇಂಧನ ಉಳಿದಿದೆ. ಕವಚದ ಒಳಗೆ ನೀರು ಸೋರಿರುವುದರಿಂದ, ಹೆಚ್ಚು ಧೂಳು ತುಂಬಿರುವುದರಿಂದ ಕವಚದ ಕಾಂಕ್ರೀಟ್ ಮತ್ತು ಸ್ಟೀಲು ಹಾಳಾಗುತ್ತಿವೆ. ಈ ಕವಚ ಕುಸಿದರೆ ಒಳಗಿರುವ ಅಂದಾಜಿತ ೪ ಟನ್ ವಿಕಿರಣಾತ್ಮಕ ಧೂಳು ಬಹಳ ಬೇಗ ಪಸರಿಸಬಹುದು.
ಈ ರೀತಿ ಆಗದಂತೆ ತಡೆಯಲು ೧೯೯೭ರ ಜೀ ೮ ಸಮ್ಮೇಳನದಲ್ಲಿ ಹೊಸ ರಕ್ಷಣಾಕವಚವನ್ನು ನಿರ್ಮಿಸಲು ನಿರ್ಧರಿಸಲಾಯಿತು. ೨೦೦೬ರ ಅಂದಾಜಿನಂತೆ ೧.೨ ಬಿಲಿಯ $ಗಳಷ್ಟು ವೆಚ್ಚದಲ್ಲಿ ಈ ಕವಚವು ನಿರ್ಮಾಣಗೊಳ್ಳುತ್ತಿದೆ. ಅರ್ಧಗೋಲಾಕಾರದ ಈ ಕವಚವನ್ನು ಚೆರ್ನೊಬಿಲ್‍ನಿಂದ ಹೊರಗಡೆ ಕಟ್ಟಿ ಈಗಿರುವ ಕವಚದ ಮೇಲೆ ಅದನ್ನು ಇಡಲಾಗುವುದು. ೨೦೦೮ರಲ್ಲಿ ಸಮಾಪ್ತಿಗೊಳ್ಳಬೇಕಾಗಿರುವ ೧೦೦ಮೀ ಅಗಲ ಮತ್ತು ೧೫೦ಮೀ ಉದ್ದದ ಈ ಹೊಸ ಕವಚ, ಚಲಿಸಬಲ್ಲ ಅತ್ಯಂತ ದೊಡ್ಡ ಮಾನವ ನಿರ್ಮಿತ ರಚನೆಯಾಗಲಿದೆ.
ಜನಮನದಲ್ಲಿ ಚೆರ್ನೊಬಿಲ್
ಬದಲಾಯಿಸಿಅಂದಿನ ಸೋವಿಯಟ್ ಒಕ್ಕೂಟ ಹೊರ ಜಗತ್ತಿಗೆ ರಹಸ್ಯಮಯವಾಗಿದ್ದರಿಂದ ದುರಂತದ ಬಗ್ಗೆ ಸರಿಯಾದ ಮಾಹಿತಿಯಿಲ್ಲದೆ ಹೊರ ಜಗತ್ತಿಗೆ ಈ ದುರಂತ ಬಹಳ ಭಯೋತ್ಪಾದಕವಾಗಿತ್ತು. ಈ ಘಟನೆಯಿಂದ ಸೋವಿಯೆಟ್ ಒಕ್ಕೂಟದ ಒಳಗಲ್ಲದೆ, ಇಡೀ ಪ್ರಪಂಚದಲ್ಲಿ ಅಣು ಸ್ಥಾವರಗಳ ಮತ್ತು ಆಣು ಶಕ್ತಿಯ ಸುರಕ್ಷತೆಯ ಬಗ್ಗೆ ಜನರಲ್ಲಿ ಭಯ ಉಂಟಾಯಿತು. ವಿಕಿರಣ ಹಾಗು ಅದರ ಪರಿಣಾಮಗಳ ಬಗ್ಗೆಯೂ ಜನರು ಜಾಗೃತರಾದರು.
ಸುಮಾರು ೭ ಮಿಲಿಯ ಜನರನ್ನು ತಟ್ಟಿದ ಈ ದುರಂತದ ವಿಕಿರಣದ ಪರಿಣಾಮ ಇಂದಿಗೂ ಹಲವರು ಅನುಭವಿಸುತ್ತಿದ್ದಾರೆ.
ಟಿಪ್ಪಣಿಗಳು ಮತ್ತು ಮೂಲಗಳು
ಬದಲಾಯಿಸಿ- ↑ National Geographic. (2004) Meltdown in Chernobyl [Video].
- ↑ The Worst Accident in the World: Chernobyl: The End of the Nuclear Dream, 1986, p178, by Nigel Hawkes et al., IBSN0330297430
- ↑ "Geographical location and extent of radioactive contamination". Swiss Agency for Development and Cooperation. Archived from the original on 2007-06-30. Retrieved 2007-03-19.
{{cite web}}
: Cite has empty unknown parameter:|1=
(help) (quoting the "Committee on the Problems of the Consequences of the Catastrophe at the Chernobyl NPP: 15 Years after Chernobyl Disaster", Minsk, 2001, p. 5/6 ff., and the "Chernobyl Interinform Agency, Kiev und", and "Chernobyl Committee: MailTable of official data on the reactor accident") - ↑ ೪.೦ ೪.೧ "TORCH report executive summary" (PDF). European Greens and UK scientists Ian Fairlie PhD and David Sumner. April 2006. Archived from the original (PDF) on 2006-06-21. Retrieved 2006-04-21. (page 3) ಉಲ್ಲೇಖ ದೋಷ: Invalid
<ref>
tag; name "TORCH" defined multiple times with different content - ↑ Chernobyl: Catastrophe and Consequences, Springer, Berlin ISBN 3-540-23866-2
- ↑ Kryshev, I.I., Radioactive contamination of aquatic ecosystems following the Chernobyl accident. Journal of Environmental Radioactivity, 1995. 27: p. 207-219
- ↑ "IAEA Report". In Focus: Chernobyl. Archived from the original on 2006-03-27. Retrieved 2006-03-29.
- ↑ "Special Report: Counting the dead". Nature. 2006-04-19. Retrieved 2006-04-21.
{{cite news}}
: Check date values in:|date=
(help) - ↑ "20 years after Chernobyl – The ongoing health effects". IPPNW. April , 2006. Archived from the original on 2012-06-29. Retrieved 2006-04-24.
{{cite web}}
: Check date values in:|date=
(help)