ಚತುರ್ಮುಖ ಬಸದಿ, ಕಾರ್ಕಳ

ಕಾರ್ಕಳದಲ್ಲಿರುವ ಪುರಾತನ ಸ್ಮಾರಕಗಳಲ್ಲಿ ಚರ್ತುರ್ಮುಖ ಬಸದಿಯೂ ಒಂದು.[] ಜೈನ ಸಾಂತರ ಅರಸುವಂಶದ ಪಾಂಡ್ಯದೇವ ಮತ್ತು ಇಮ್ಮಡಿ ಭೈರವರಾಯರ ಆಡಳಿತದ ಅವಧಿಯಲ್ಲಿ ಈ ಜೈನ ಬಸದಿ ಕಟ್ಟಲ್ಪಟ್ಟಿತು. ಸಂಪೂರ್ಣವಾಗಿ ಕಲ್ಲಿನಿಂದ ಕಟ್ಟಿರುವುದು ಈ ಬಸದಿಯ ವಿಶೇಷತೆಯಾಗಿದೆ. ಚತುರ್ಮುಖ ಬಸದಿ ಕಾರ್ಕಳದ ೧೬ ನೇ ಶತಮಾನದ ಜೈನ ದೇವಾಲಯವಾಗಿದ್ದು, ಭತ್ತದ ಗದ್ದೆಗಳ ಮಧ್ಯದಲ್ಲಿ ಎತ್ತರದ ಮೈದಾನದಲ್ಲಿದೆ. ಕಾರ್ಕಳವು ಕರಾವಳಿ ಕರ್ನಾಟಕದ ಉಡುಪಿ ಜಿಲ್ಲೆಯ ಒಂದು ತಾಲ್ಲೂಕು ಪ್ರಧಾನ ಕಚೇರಿ ಮತ್ತು ಪಟ್ಟಣವಾಗಿದೆ. []

ಚತುರ್ಮುಖ ಬಸದಿ

ಕಾರ್ಕಳ

ಬದಲಾಯಿಸಿ

ಕಾರ್ಕಳವು ಜೈನಕಾಶಿ ಎಂದೇ ಖ್ಯಾತಿ ಪಡೆದಿದ್ದು ಇಲ್ಲಿ ಜೈನಧರ್ಮೀಯರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಸುಮಾರು ೧೮ ಜೈನ ಬಸದಿಗಳು ಕಾರ್ಕಳದಲ್ಲಿವೆ. ಅವುಗಳಲ್ಲಿ ಚತುರ್ಮುಖ ಬಸದಿಯು ತನ್ನ ವಾಸ್ತುಶಿಲ್ಪದ ಹಿರಿಮೆಯಿಂದಾಗಿ ಪ್ರಸಿದ್ಧಿ ಪಡೆದಿದೆ. ಕಾರ್ಕಳ ತಾಲೂಕಿನಲ್ಲಿ ಹಿಂದೂ - ಕ್ರೈಸ್ತ - ಮುಸಲ್ಮಾನ - ಜೈನ ಧರ್ಮಗಳು ಪಾಲಿಸಲ್ಪಡುತ್ತವೆ. ಕಾರ್ಕಳದ ಅನಂತಪದ್ಮನಾಭ ದೇವಸ್ಥಾನ, ಪಡುತಿರುಪತಿ ಎಂದೇ ಖ್ಯಾತವಾದ ವೆಂಕಟರಮಣ ದೇವಸ್ಥಾನ ಕಾರ್ಕಳ ಪೇಟೆಯ ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಪ್ರಮುಖವಾದವು. ಕಾರ್ಕಳದ ಅತ್ತೂರಿನ ಚರ್ಚ್ (ಇಗರ್ಜಿ) ಸುತ್ತಮುತ್ತಲಿನ ಜಿಲ್ಲೆಗಳಲ್ಲಿಯೇ ಕ್ರೈಸ್ತರಲ್ಲಿ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದೆ.

ವಾಸ್ತುಶಿಲ್ಪ

ಬದಲಾಯಿಸಿ

ಬಸದಿಯ ವಾಸ್ತುಶಿಲ್ಪವು ವಿಜಯನಗರ ಶೈಲಿಯನ್ನು ಹೋಲುತ್ತದೆ.[] ಬಸದಿಯು ಒಂದು ಗರ್ಭಗೃಹವನ್ನು ಹೊಂದಿದ್ದು, ಈ ಗರ್ಭಗೃಹವನ್ನು ನಾಲ್ಕು ದಿಕ್ಕುಗಳಿಂದಲೂ ಪ್ರವೇಶಿಸಲು, ನಾಲ್ಕು ದ್ವಾರಗಳನ್ನು ನಿರ್ಮಿಸಲಾಗಿದೆ. ಗರ್ಭಗೃಹದಲ್ಲಿ ನಾಲ್ಕು ದಿಕ್ಕುಗಳಲ್ಲಿ ಕಾಯೋತ್ಸರ್ಗ ಭಂಗಿಯಲ್ಲಿರುವ ಅರನಾಥ, ಮಲ್ಲಿನಾಥ ಮತ್ತು ಮುನಿಸುವೃತ ತೀರ್ಥಂಕರರ ಕರಿಕಲ್ಲಿನ ಮೂರ್ತಿಗಳನ್ನೂ ಹಾಗೂ ಪ್ರವೇಶದ ದಿಕ್ಕಿನಲ್ಲಿ ಪದ್ಮಾವತಿ ದೇವಿಯ ವಿಗ್ರಹವನ್ನು ಹೊಂದಿದೆ. ಈ ಬಸದಿಯಲ್ಲಿ ಒಳಗಡೆ ಹಾಗೂ ಹೊರಗಡೆ ಒಟ್ಟು ೧೦೮ ಕಂಬಗಳಿದ್ದು, ಪ್ರವೇಶ ದ್ವಾರದ ನಾಲ್ಕು ಬದಿಗಳಲ್ಲೂ ಶಿಲೆಯ ಕಂಬಗಳನ್ನು ಕಾಣಬಹುದು. ಈ ಕಂಬಗಳು ಸರಾಸರಿ ೧೮ ಅಡಿ ಎತ್ತರವಾಗಿವೆ. ಇತರ ಪುರಾತನ ದೇವಸ್ಥಾನಗಳಲ್ಲಿ ಕಾಣಸಿಗುವಂತೆ ಇಲ್ಲಿಯೂ ಕಂಬಗಳ ಮೇಲೆ ಶಿಲಾಕೃತಿ ಹಾಗೂ ಶಾಸನಗಳ ಕೆತ್ತನೆಗಳನ್ನು ಕಾಣಬಹುದು. ಕೆತ್ತನೆಗಳ ವಿಚಾರದಲ್ಲಿ ಚರ್ತುರ್ಮುಖ ಬಸದಿಯು ಸಾಧಾರಣವಾಗಿದ್ದರೂ, ಶಿಲಾ ವಾಸ್ತುಶಿಲ್ಪಕ್ಕೆ ಪ್ರಸಿದ್ಧವಾಗಿದೆ. ಇಲ್ಲಿನ ಪ್ರತಿಯೊಂದು ಕಂಬವೂ ಏಕಶಿಲಾ ಆಕೃತಿಗಳಾಗಿವೆ. ಚರ್ತುರ್ಮುಖ ಬಸದಿಯ ಚಾವಣಿಯ ಒಳಮೈ ಗ್ರೆನೈಟ್ ಕಲ್ಲಿನಿಂದ ನಿರ್ಮಿಸಲ್ಪಟ್ಟಿದೆ. ಬಸದಿಗೆ ಹೋಗುವ ದಾರಿ ೫೮ ಮೆಟ್ಟಿಲುಗಳನ್ನು ಹೊಂದಿದೆ.[] ಬಸದಿಯ ಗೋಡೆಗಳಲ್ಲಿ ದೇವತೆಗಳ ಕೆತ್ತನೆಗಳು ಮತ್ತು ಕಲ್ಲಿನ ಮುಚ್ಚಿಗೆಯಲ್ಲಿ ಚಿತ್ತಾರಗಳಿವೆ.[]

 

ಇತಿಹಾಸ

ಬದಲಾಯಿಸಿ

ಚತುರ್ಮುಖ ಬಸದಿಯ ನಿರ್ಮಾಣ ೧೪೩೨ನೇ ಇಸವಿಯಲ್ಲಿ, ಸಾಂತರ ಅರಸುಮನೆತನಕ್ಕೆ ಸೇರಿದ ವೀರ ಪಾಂಡ್ಯದೇವನ ಆಡಳಿತದಡಿ ಪ್ರಾರಂಭವಾಗಿ, ೧೫೮೬ರಲ್ಲಿ ಇಮ್ಮಡಿ ಭೈರವ ರಾಜನ ಆಡಳಿತದಡಿ ಪೂರ್ಣಗೊಂಡಿತು. [] ಕಾರ್ಕಳಬಾಹುಬಲಿಯ ಏಕಶಿಲಾ ಮೂರ್ತಿಗೆ ಎದುರುಗೊಂಡು ಈ ಬಸದಿಯನ್ನು ನಿರ್ಮಿಸಲಾಗಿದೆ. ಬಸದಿಯಲ್ಲಿನ ಶಿಲಾಶಾಸನದಲ್ಲಿ ಬರೆದಿರುವಂತೆ, ಈ ಬಸದಿಯನ್ನು ತ್ರಿಭುವನ ತಿಲಕ ಚೂಡಾಮಣಿ ಬಸದಿ ಎಂದೂ ರತ್ನತ್ರಯ ಧಾಮ ಎಂದೂ ಕರೆಯಲಾಗುತ್ತದೆ[]

ಭಾರತದ ಪುರಾತತ್ವ ಇಲಾಖೆಯು ದೇಶದ ಅತೀ ಪುರಾತನ ಹಾಗೂ ಸಂರಕ್ಷಿತ ಸ್ಮಾರಕಗಳಲ್ಲಿ ಚರ್ತುರ್ಮುಖ ಬಸದಿಯೂ ಒಂದು ಎಂದು ಗುರುತಿಸಿದೆ.

ಮಾರ್ಗಸೂಚಿ

ಬದಲಾಯಿಸಿ
 

ಚತುರ್ಮುಖ ಬಸದಿ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೨ ರವರೆಗೆ ಮತ್ತು ಸಂಜೆ ೪ ರಿಂದ ೫.೩೦ ರವರೆಗೆ ತೆರೆದಿರುತ್ತದೆ. ಕಾರ್ಕಳ ತಾಲೂಕು ಮಂಗಳೂರು ಮಹಾನಗರದಿಂದ ೫೨ ಕಿಲೋಮೀಟರ್ ದೂರದಲ್ಲಿದ್ದು, ಉಡುಪಿಯಿಂದ ೩೮ ಕಿಲೋಮೀಟರ್ ದೂರದಲ್ಲಿದೆ. ಉಡುಪಿ ಹಾಗೂ ಮಂಗಳೂರಿನಲ್ಲಿ ರೈಲ್ವೆ ನಿಲ್ದಾಣವಿದ್ದು ಮತ್ತು ಮಂಗಳೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಭಾರತದ ಇತರ ನಗರದಿಂದ ಅಥವಾ ವಿದೇಶದಿಂದ ವಿಮಾನದ ಮೂಲಕ ಮಂಗಳೂರಿಗೆ ಬಂದು ಅಲ್ಲಿಂದ ರಸ್ತೆ ಸಾರಿಗೆಯ ಮೂಲಕ ಕಾರ್ಕಳವನ್ನು ತಲುಪಬಹುದು. ಇನ್ನು ರಾಜ್ಯದ ಎಲ್ಲಾ ಪ್ರಮುಖ ನಗರಗಳೊಂದಿಗೆ ಕಾರ್ಕಳವು ಹೆದ್ದಾರಿಯ ಮೂಲಕ ಸಾರಿಗೆ ಸಂಪರ್ಕವನ್ನು ಹೊಂದಿದೆ.

ಉಲ್ಲೇಖಗಳು

ಬದಲಾಯಿಸಿ