ಘನ ಆನಂದ (ಸು. 1673 - 1760)[] ವ್ರಜಭಾಷೆಯ ಖ್ಯಾತ ಕವಿಗಳಲ್ಲಿ ಒಬ್ಬ. ಈತನನ್ನು ಆನಂಧ ಘನ ಎಂದೂ ಕರೆಯಲಾಗಿದೆ.[] ಈತ ಇದ್ದ ಕಾಲ ಯಾವುದೆಂದು ಸರಿಸುಮಾರಾಗಿ ಊಹಿಸಿದ್ದಾರಾದರೂ ಈತ ಯಾವಾಗ, ಎಲ್ಲಿ ಹುಟ್ಟಿದ, ಎಲ್ಲಿ ಬೆಳೆದ ಎಂಬ ವಿಷಯಗಳು ಖಚಿತವಾಗಿಲ್ಲ. ರೀತಿಕಾಲದ ಸಾಂಪ್ರದಾಯಿಕ ಶೃಂಗಾರಿಕ ರಚನೆಗಳಿಗಿಂತ ಭಿನ್ನವಾದ ವಿಶಿಷ್ಟ ಕೃತಿಗಳನ್ನು ರಚಿಸಿ ಹಿಂದೀ ಕಾವ್ಯ ಸಾಹಿತ್ಯಕ್ಕೆ ಹೊಸ ಮುಖವೊಂದನ್ನು ಜೋಡಿಸಿದ ಕವಿ ಪ್ರಮುಖರಲ್ಲಿ ಘನ ಆನಂದನಿಗೆ ಅಗ್ರಪಂಕ್ತಿ ಸಲ್ಲುತ್ತದೆ.

ಈತನಲ್ಲಿ ಅಸಾಧಾರಣ ಸಾಹಿತ್ಯ ಮತ್ತು ಸಂಗೀತ ಪ್ರತಿಭೆಗಳು ಸಂಗಮಗೊಂಡಿದ್ದವು. ದೆಹಲಿಯ ಬಾದಷಾಹನಾಗಿದ್ದ ಮೊಹಮದ್ ಷಾಹ ರಂಗೀಲೆಯ ಆಸ್ಥಾನದಲ್ಲಿ ಈತನಿಗೆ ತುಂಬ ಗೌರವದ ಸ್ಥಾನ ದೊರೆತಿತ್ತು. ಸಂಗೀತ ಸಂಬಂಧವಾದ ಈತನ ಪ್ರಸಿದ್ಧಿಯನ್ನು ಅರಿತ ಬಾದಷಾಹ ತನ್ನೆದುರು ಹಾಡುವಂತೆ ಸೂಚಿಸಿದಾಗ ನೆಪಗಳನ್ನೊಡ್ಡಿ ಈತ ತಪ್ಪಿಸಿಕೊಳ್ಳುತ್ತಿದ್ದ. ಈತ ಸುಜಾನ್ ಎಂಬ ನರ್ತಕಿಯಲ್ಲಿ ಆಸಕ್ತನಾಗಿದ್ದಾನೆಂದೂ ಆಕೆಯನ್ನು ಸಭೆಗೆ ಕರೆಸಿದರೆ ಈತ ತಪ್ಪದೆ ಹಾಡುತ್ತಾನೆಂದೂ ಇತರ ಆಸ್ಥಾನಿಕರು ತಿಳಿಸಿದರು. ಬಾದಷಾಹ ಹಾಗೆ ಮಾಡಿದಾಗ ಘನ ಆನಂದ ಅವಳತ್ತ ಮುಖಮಾಡಿ ಕುಳಿತುಕೊಂಡು ಆಸ್ಥಾನದಲ್ಲಿ ನೆರೆದಿದ್ದವರೆಲ್ಲರೂ ಮುಗ್ಧರಂತೆ ದಿವ್ಯಗಾನ ಪ್ರವಾಹವನ್ನೇ ಹರಿಯಿಸಿದನೆಂದು ಹೇಳಲಾಗಿದೆ. ಸಂಗೀತದಿಂದ ಸಂತುಷ್ಟನಾದರೂ ತನ್ನ ಆಜ್ಞೆಯನ್ನು ಧಿಕ್ಕರಿಸಿ ಸುಜಾನಳಿಗಾಗಿಯೇ ಹಾಡಿದನೆಂಬ ರೋಷದಿಂದ ಬಾದಷಾಹ ಈತನನ್ನು ದೆಹಲಿಯಿಂದ ಹೊರಹಾಕಿಸಿದ. ತನ್ನ ನೆರಳಾಗಿ ಬರುವಳೆಂದು ಭಾವಿಸಿದ್ದ ಸುಜಾನಳೂ ಈತನನ್ನು ಕೈಬಿಟ್ಟಳು. ಈ ಘಟನೆ ಈತನ ಮನಸ್ಸಿನ ಮೇಲೆ ತುಂಬ ಪರಿಣಾಮ ಬೀರಿತು. ಪ್ರೇಮವ್ಯಥಿತ ಮನದಿಂದ ವೃಂದಾವನಕ್ಕೆ ತೆರಳಿ, ನಿಂಬಾರ್ಕ ಸಂಪ್ರದಾಯದ ಶ್ರೀವೃಂದಾವನದೇವನಿಂದ ದೀಕ್ಷೆ ಪಡೆದು ಭಗವದ್ಧ್ಯಾನ ಸಂಕೀರ್ತನೆಗಳಲ್ಲಿ ಮುಳುಗಿದ. ಪ್ರೇಮಸಾಧನೆಯ ಪಥದಲ್ಲಿ ಈತನ ಅನನ್ಯ ಸಾಧನೆ ನಾಗರೀದಾಸನಂಥ ಶ್ರೇಷ್ಠ ಮಹಾತ್ಮರಿಂದಲೂ ಈತನಿಗೆ ಗೌರವವನ್ನು ತಂದುಕೊಟ್ಟಿತು. ಬಹುಗುನೀ ಎಂಬ ಈತನ ಹೆಸರು ಸಖೀಭಾವಸೂಚಕವಾಗಿಯೇ ಇದೆ ಎಂಬುದನ್ನೂ ಗಮನಿಸಬಹುದು.

ನಾದಿರ್ ಷಾಹನ ಪೈಶಾಚಿಕ ಸೈನ್ಯದ ಪಾಶವೀಕೃತ್ಯಗಳಿಗೆ ವೃಂದಾವನವೂ ತುತ್ತಾಯಿತಷ್ಟೆ. ಆ ಅವಧಿಯಲ್ಲಿ ಸೈನಿಕರು ಈತನ ಬಳಿ ಬಂದು ಜರವನ್ನು (ಹಣ) ಕೊಡುವಂತೆ ಒತ್ತಾಯಪಡಿಸಿದರೆಂದೂ, ಆಗ ಈತ ರಜವನ್ನು ಕೊಳ್ಳಿರೆಂದು ಹೇಳಿ ಮೂರು ಹಿಡಿ ಮಣ್ಣನ್ನು ಸುರಿದನೆಂದೂ, ಇದರಿಂದ ಕುಪಿತರಾದ ಸೈನಿಕರು ಈತನ ಕೈಗಳನ್ನು ಕತ್ತರಿಸಿ ಹಾಕಿದರೆಂದೂ ಹೇಳಲಾಗಿದೆ. ಕೊನೆಯುಸಿರನ್ನೆಳೆಯುವ ಮೊದಲು ತನ್ನ ರಕ್ತದಿಂದಲೇ ಬಹುತ್ ದಿನಾನ್ ಕೀ ಅವಧಿ . . . . . . ಸಂದೇಸೋ ಲೈ ಸುಜಾನ್ ಕೋ - ಎಂಬ ಪದ್ಯವನ್ನು ಬರೆದನೆಂದೂ ಹೇಳಲಾಗಿದೆ.

ಕೃತಿಗಳು

ಬದಲಾಯಿಸಿ

ಈತ ರಚಿಸಿದ ಕೃತಿಗಳ ಸಂಖ್ಯೆ ನಲವತ್ತೊಂದು ಎಂದು ಹೇಳಲಾಗಿದೆ. ವ್ರಜವರ್ಣನ ಎಂಬ ಕೃತಿ ಇಂದಿಗೂ ಲಭ್ಯವಾಗಿಲ್ಲ; ವ್ರಜಸ್ವರೂಪ ಎಂಬುದೇ ವ್ರಜವರ್ಣನವೂ ಆಗಿದ್ದಲ್ಲಿ ಈತನ ಎಲ್ಲ ಕೃತಿಗಳೂ ದೊರೆತಿವೆ ಎಂದುಕೊಳ್ಳಬಹುದು. ಈತನ ಉಪಲಬ್ಧ ಕೃತಿಗಳಿವು:

  • ಸುಜಾನ ಹಿತ,
  • ಕೃಪಾಕಂದನಿಬಂಧ,
  • ವಿಯೋಗ ಬೇಲಿ,
  • ಇಷ್ಕೆ ಲತಾ,
  • ಯಮುನಾಚರಣ (ಇದನ್ನು ಯಮುನಾಯಶ ಎಂದೂ ಕರೆಯಲಾಗಿದೆ),
  • ಪ್ರೀತಿ ಪಾವಸ,
  • ಪ್ರೇಮಪತ್ರಿಕಾ,
  • ಪ್ರೇಮಸರೋವರ,
  • ವ್ರಜವಿಲಾಸ ಸರಲವಸಂತ (ಅಥವಾ ರಸವಸಂತ),
  • ಅನುಭವಚಂದ್ರಿಕಾ,
  • ರಂಗಬಧಾಈ,
  • ಪ್ರೇಮ ಪದ್ಧತಿ,
  • ವೃಷಭಾನುಪುರ ಸುಷಮಾ,
  • ಗೋಕುಲಗೀತ,
  • ನಾಮಮಾಧುರೀ,
  • ಗಿರಿ ಪೂಜನ,
  • ವಿಚಾರಸಾರ,
  • ದಾನಘಟಾ,
  • ಭಾವನಾಪ್ರಕಾಶ,
  • ಕೃಷ್ಣಕೌಮುದೀ,
  • ಧಾಮ ಚಮತ್ಕಾರ,
  • ಪ್ರಯಾಪ್ರಸಾದ,
  • ವೃಂದಾವನಮುದ್ರಾ,
  • ವ್ರಜಸ್ವರೂಪ,
  • ಗೋಕುಲ ಚರಿತ್ರ,
  • ಪ್ರೇಮಪಹೇಲೀ,
  • ರಸನಾಯಶ,
  • ಗೋಕುಲವಿನೋದ,
  • ವ್ರಜಪ್ರಸಾದ,
  • ಮುರಲಿ ಕಾಮೋದ,
  • ಮನೋರಥಮಂಜರೀ,
  • ವ್ರಜವ್ಯವಹಾರ,
  • ಗಿರಿಗಾಥಾ,
  • ವ್ರಜವರ್ಣನ,
  • ಛಂದಾಷ್ಟಕ,
  • ತ್ರಿಭಂಗೀಛಂದ,
  • ಕವಿತ್ತಸಂಗ್ರಹ,
  • ಸ್ಫುಟ ಪದಾವಲೀ ಮತ್ತು
  • ಪರಮಹಂಸ ವಂಶಾವಲೀ

ಸುಜಾನಹಿತ ಮೊದಲಾದ ಕೃತಿಗಳಿಗೆ ಪ್ರೇಮವಿರಹಗಳೇ ವಸ್ತುವೆಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಛಂದಾಷ್ಟಕ, ತ್ರಿಭಂಗೀಛಂದ, ಕವಿತ್ತ ಸಂಗ್ರಹ ಮತ್ತು ಸ್ಫುಟ - ಇವು ಮುಕ್ತಕ ರಚನೆಗಳ್ನೊಳಗೊಂಡಿರುವ ಕಿರಿಯ ಕೃತಿಗಳು. ವಂಶಾವಲಿಯಲ್ಲಿ ಈತನ ಗುರುಪರಂಪರೆಯ ಉಲ್ಲೇಖ ಕಾಣದೊರೆಯುತ್ತದೆ. ಪಾರಸೀ ಮಸನವೀಗಳನ್ನೂ ಈತ ರಚಿಸಿದ್ದಾನೆಂದು ಹೇಳಲಾಗಿದೆಯಾದರೂ ಅವು ಯಾವುವೂ ಇನ್ನೂ ಉಪಲಬ್ಧವಾಗಿಲ್ಲ. ಈತನ ರಚನೆಗಳಲ್ಲಿ ಸಂಯೋಗ ಹಾಗೂ ವಿಯೋಗ ಶೃಂಗಾರಗಳೆರಡರ ಚಿತ್ರಣವೂ ಕಾಣದೊರೆಯುತ್ತದೆಯಾದರೂ ಈತ ವಿಯೋಗ ಶೃಂಗಾರದ ಅನನ್ಯ ಕವಿಯೆಂದೇ ಪ್ರಸಿದ್ಧನಾಗಿದ್ದಾನೆ. ಈತನ ವರ್ಣನೆಗಳಲ್ಲಿ ಬಾಹ್ಯ ಅಲಂಕರಣ, ಪ್ರೌಢಿಮೆಗಳು ಕಂಡುಬರದಿದ್ದರೂ ಮನಸ್ಸನ್ನು ತಟ್ಟುವಂಥ ಶಕ್ತಿ ಮಾತ್ರ ಇದೆ. ಮನೋಭಾವಗಳನ್ನು ಮೂರ್ತೀಕರಿಸುವ, ಹೃದಯ ವ್ಯಾಪಾರದ ಅನಂತಮುಖಗಳನ್ನು ತೆರೆದು ತೋರುವ ಇಲ್ಲಿನ ಅನುಪಮ ಕೌಶಲ ಸಾಮರ್ಥ್ಯಗಳು ಓದುಗರನ್ನು ಸೆರೆಹಿಡಿದು ನಿಲ್ಲಿಸುತ್ತವೆ.

ವಿಮರ್ಶಕರೂ ಈತನನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಪ್ರೇಮದ ಗೂಢ ಮನೋಭಾವಗಳನ್ನು ಈತ ತೆರೆದು ತೋರಿರುವಂತೆ ಹಿಂದಿಯ ಬೇರಾವ ಶೃಂಗಾರ ಕವಿಯೂ ತೋರಿಲ್ಲ ಎಂದೂ, ಈತನಂತೆ ಭಾಷೆಯನ್ನು ಬಳಸಿರುವ ರೀತಿಕಾಲದ ಕವಿಗಳು ಬಹುಮಂದಿ ಇಲ್ಲ ಎಂದೂ, ಪ್ರೇಮಗೀತಗಳ ರಚನೆಯಲ್ಲಿ ಈತ ಸರ್ವಶ್ರೇಷ್ಠನೆಂದೂ ಪ್ರಸಿದ್ಧಿ ವಿಮರ್ಶಕರು ಬಗೆಬಗೆಯಾಗಿ ಹಾಡಿ ಹೊಗಳಿದ್ದಾರೆ.

ಈತನ ಬಗೆಗೆ ರಚಿಸಲಾಗಿರುವ, ಈ ಮುಂದೆ ಕಾಣಿಸಿರುವ ಪ್ರಶಸ್ತಿ ಪದ್ಯ ಈತನ ವ್ಯಕ್ತಿತ್ವ ಮತ್ತು ಸಾಹಿತ್ಯ ಸಾಧನೆಗಳನ್ನು ಸಮರ್ಪಕವಾಗಿ ಪರಿಚಯಿಸಿಕೊಡುತ್ತದೆ.

ನೇಹೀ ಮಹಾ ಬ್ರಜಭಾಷಾಪ್ರವೀನ ಔ ಸುಂದರಾಹು ಕೇ ಭೇದ ಕೋ ಜಾನೈ |
ಯೋಗವಿಯೋಗ ಕೀ ರೀತಿ ಮೇಂ ಕೋವಿದ್ ಭಾವನಾ ಭೇದ ಸ್ವರೂಪ ಕೋ ಠಾನೈ |
ಚಾಹ ಕೇ ರಂಗ ಮೇಂ ಭೀಜ್ಯೋ ಹಿಯೋ ಬಿಛುರೇ ಮಿಲೇ ಪ್ರೀತಿಮ ಸಾಂಚಿ ನ ಮಾನೈ |
ಭಾಷಾ-ಪ್ರವೀನ ಸುಛಂದ ಸದಾ ರಹೈ ಸೋ ಘನ ಜೂ ಕೇ ಕಬಿತ್ತ ಬಖಾನೈ ||

ಉಲ್ಲೇಖಗಳು

ಬದಲಾಯಿಸಿ
  1. Amaresh Datta (1988). Encyclopaedia of Indian Literature. Sahitya Akademi. pp. 1585–1386. ISBN 9788126011940. Retrieved 21 May 2021.
  2. https://hi.wikipedia.org/wiki/घनानन्द
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಘನ_ಆನಂದ&oldid=1270532" ಇಂದ ಪಡೆಯಲ್ಪಟ್ಟಿದೆ