ಘಟಕರ್ಪರ ಎನ್ನುವುದು ಒಂದು ಪುಟ್ಟ ಶೃಂಗಾರ ಕಾವ್ಯ. ಇದರಲ್ಲಿ ಇಪ್ಪತ್ತೆರಡು ಶ್ಲೋಕಗಳು ಮಾತ್ರ ಇವೆ. ಇದನ್ನು ಕಾಳಿದಾಸ ಬರೆದನೆಂದೂ ಪ್ರತೀತಿ ಇದೆ. ಘಟಕರ್ಪರವೆಂದರೆ ಗಡಿಗೆಪ್ಪರ, ಹರವಿಯೋಡು. ಈ ಕಾವ್ಯದಲ್ಲಿ ಕೊನೆಯ ಪದ್ಯದ ಕೊನೆಯ ಮಾತು ಘಟಕರ್ಪರ ಎಂದು. ಇದೇ ಹೆಸರಿನ ಕವಿಯೊಬ್ಬ ವಿಕ್ರಮಾದಿತ್ಯ ರಾಜನ ಆಸ್ಥಾನದ ನವಮಣಿಗಳಲ್ಲಿ ಒಬ್ಬನಾಗಿದ್ದನೆಂಬುದು ಈ ಮುಂದಿನ ಶ್ಲೋಕದಿಂದ ತಿಳಿದು ಬರುತ್ತದೆ.[]

ಧನ್ವಂತರಿ ಕ್ಷಪಣಕಾಮರಸಿಂಹ ಶಂಕು
ವೇತಾಲಭಟ್ಟ ಘಟಕರ್ಪರ ಕಾಲಿದಾಸಾಃ |
ಖ್ಯಾತೋ ವರಾಹಮಿಹಿರೋ ನೃಪತೇಸ್ಸಭಾಯಂ
ರತ್ನಾನಿ ವೈ ವರರುಚಿರ್ನವ ವಿಕ್ರಮಸ್ಯ ||

ಈ ಮೇಲಿನ ಶ್ಲೋಕದಲ್ಲಿ ಹೆಸರಿಸಲ್ಪಟ್ಟಿರುವ ಧನ್ವಂತರಿ ಮುಂತಾದವರು ಒಂದೇ ಕಾಲದವರಲ್ಲ. ಕೆಲವರ ವಿಚಾರವಂತೂ ಹೆಸರಿನ ವಿನಾ ಮತ್ತೇನೂ ತಿಳಿದಿಲ್ಲ. ಇವರಲ್ಲಿ ಘಟಕರ್ಪರ ಒಬ್ಬ. ಕಾಳಿದಾಸನೊಡನೆ ಕೂರಿಸಬಹುದಾದ ಈ ಘಟಕರ್ಪರ ಯಾರು, ಅವನ ಕಾಲವಾವುದು, ಮತ್ತು ಅವನ ಉದ್ಗ್ರಂಥ ಮುಂದಿರುವ ಇಪ್ಪತ್ತೆರಡು ಪದ್ಯಗಳ ಶೃಂಗಾರ ಪ್ರಧಾನವಾದ ಚಿತ್ರ ಕಾವ್ಯವೇ ಎಂಬ ಪ್ರಶ್ನೆಗಳು ಏಳುತ್ತವೆ. ಈ ಪುಟ್ಟ ಕಾವ್ಯಕ್ಕೆ ಅಭಿನವಗುಪ್ತನ ಹೆಸರಿನಲ್ಲಿ ವಿವೃತಿ ಒಂದಿರುವುದು ಮತ್ತೊಂದು ಅದ್ಭುತ ಸಂಗತಿ. ಅಭಿನವಗುಪ್ತ ಈ ಕಾವ್ಯದ ವಾಚ್ಯಾರ್ಥಕ್ಕಿಂತಲೂ ಧ್ವನ್ಯರ್ಥಕ್ಕೆ ಹೆಚ್ಚು ಪ್ರಾಧಾನ್ಯವಿತ್ತಿದ್ದಾನೆ. ಕಾವ್ಯದ ಉದ್ದೇಶ ವಿಪ್ರಲಂಭಶೃಂಗಾರವರ್ಣನೆ. ಆದರೆ ಕವಿ ಕೊನೆಯ ಪದ್ಯದಲ್ಲಿ ತಾನೇ ಹೇಳಿಕೊಳ್ಳುವಂತೆ ಯಮಕ ನೇಮಕವೂ ಅಷ್ಟೇ ಪ್ರಧಾನವಾದುದು; ಏಕೆ, ಅದಕ್ಕೂ ಮೀರಿದ ಗುರಿ ಎಂತಲೇ ಕಾಣುತ್ತದೆ. ಯಮಕ ನೇಮಕವೇನೋ ಶ್ರವಣಮಧುರವಾಗಿದ್ದರೂ ಶಬ್ದಕ್ಕಾಗಿ ಅರ್ಥವನ್ನು ಬಲಿಗೊಡಬೇಕಾದ ಅನರ್ಥವನ್ನು ತಪ್ಪಿಸುವುದಕ್ಕಾಗಿಲ್ಲ. “ಯಮಕ ಪ್ರಯೋಗದಲ್ಲಿ ಯಾರಾದರೂ ನನ್ನನ್ನು ಮೀರಿಸುವ ಕವಿಯಿದ್ದಲ್ಲಿ ಅವನಿಗೆ ಹರವಿಯೋಡಿನಲ್ಲಿ ನೀರನ್ನು ಹೊತ್ತು ತರುತ್ತೇನೆ, ಕುಡಿಯಲು ಹಿಡಿದಿರುವ ಬೊಗಸೆ ನೀರಿನ ಆಣೆಯಿಡುತ್ತೇನೆ. ಭಾವಾನುರಕ್ತೆಯಾದ ವನಿತೆಯ ಆಣೆಗೂ ಹೇಳುತ್ತೇನೆ” - ಹೀಗೆಂದು ಕವಿ ಪ್ರತಿಜ್ಞೆ ಮಾಡುತ್ತಾನೆ.

ಆಲಂಬ್ಯ ಚಾಂಬು ತೃಷಿತಃ ಕರಕೋಶಪೇಯಂ
ಭಾವಾನುರಕ್ತವನಿತಾ ಸುರತೈಃ ಶಪೇಯಮ್ |
ಜೀಯೇಯ ಯೇನ ಕವಿನಾ ಯಮಕೈಃ ಪರೇಣ
ತಸ್ಮೈ ವಹೇಯಮುದಕಂ ಘಟಕಪೃರೇಣ ||

ಸಂಸ್ಕೃತ ಸಾಹಿತ್ಯ ಚರಿತ್ರೆಯನ್ನು ಬಲ್ಲವರಿಗೆ ನಿಜವಾದ ಪ್ರತಿಭೆ ಮತ್ತು ಅದರಿಂದ ಉದ್ಭವವಾದ ಮಹಾಕಾವ್ಯಗಳು ಮತ್ತು ನಾಟಕಗಳು ಚಿರಪರಿಚಿತವಾಗಿವೆ. ರೀತಿ, ಅರ್ಥಾಲಂಕಾರಗಳು, ಕೊನೆಗೆ ರಸ ಮತ್ತು ರಸಧ್ವನಿ - ಇವುಗಳೇ ಕಾವ್ಯದ ಜೀವಾಳವೆಂಬುದೂ ಮತ್ತು ಕೇವಲ ಶಬ್ದಾಲಂಕಾರ ಮತ್ತು ಚಿತ್ರಕಾವ್ಯ ವರಕವಿಗಳ ಕಾವ್ಯಕ್ಕೆ ಹೆಗಲೆಣೆಯಾಗಿ ನಿಲ್ಲಲಾರವೆಂಬುದೂ ಕಾವ್ಯ ವಿಮರ್ಶೆಯ ಖಚಿತಾಭಿಪ್ರಾಯ. ಘಟಕರ್ಪರ ಕಾವ್ಯವನ್ನು ಪರಿಶೀಲಿಸಿದಾಗ ಅದು ಮತ್ತು ಅದರ ಕರ್ತೃ ಕಾಳಿದಾಸಾದಿ ವರಕವಿಗಳ ಸಾಲಿನಲ್ಲಿ ಕೊಟ್ಟ ಕೊನೆಯಲ್ಲೂ ನಿಲ್ಲಲನರ್ಹನೆಂಬುದು ಯಾರಿಗಾದರೂ ಹೊಳೆದೀತು.

ಇರುವ ಇಪ್ಪತ್ತರೆಡು ಪದ್ಯಗಳಲ್ಲಿ ಮೊದಲನೆಯದು ಮತ್ತು ಕೊನೆಯ ಎರಡು ಹೀಗೆ ಒಟ್ಟಿಗೆ ಮೂರು ಕವಿ ಉಕ್ತಿ. ಎರಡನೆಯದರಿಂದ ಐದನೆಯ ಪದ್ಯ ಮತ್ತು ಎಂಟರಿಂದ ಹದಿನಾಲ್ಕನೆಯ ಪದ್ಯಗಳು ಪ್ರೋಷಿತಭರ್ತೃಕೆಯಾದ ನಾಯಿಕೆಯ ಸಂದೇಶ.[] ಆರು ಏಳನೆಯ ಪದ್ಯಗಳು ನಾಯಕನಿಗೆ ದೂತೀವಾಕ್ಯ. ಹದಿನೈದರಿಂದ ಹತ್ತೊಂಬತ್ತು ನಾಯಕ ನಾಯಕಿಗೆ ಕಳುಹಿಸಿದ ಪ್ರತಿಸಂದೇಶ. ಹೀಗೆ ಇದು ಮೇಘದೂತಕದಂತೆ ಒಂದು ಸಂದೇಶ ಕಾವ್ಯ. ಸಂದೇಶವಾಹಕ, ಮೇಘ, ಯಮಕ ಪ್ರಯೋಗಗಳ ಸೊಗಸಂತೂ ಕರ್ಣಮನೋಹರವಾಗಿದೆ. ಅಲ್ಲಲ್ಲಿ ಹೃದಯಂಗಮವೂ ಅಹುದು.

ಹಂಸಾ ನದನ್ಮೇಘಭಯಾ ದ್ರವಂತಿ
ನಿಶಾಮುಖಾನ್ಯದ್ಯ ನ ಚಂದ್ರವಂತಿ |
ನವಾಂಬುಮತ್ತಾಃ ಶಿಖಿನೋ ನದಂತಿ
ಮೇಘಾಗಮೇ ಕುಂದಸಮಾನ ದಂತಿ ||

ಗುಡುಗುಮೋಡದ ಭಯದಿ ನೋಡಿತಿವೆ ಅಂಚೆಗಳು
ಯಾಮಿನೀಕಾಮಿನಿಯಮಿಂದಲ್ಲವಿಂದುವದನೆ|
ಅಮಲಜಲದಮಲಿನಲಿ ಉಲಿಯುತಿವೆ ನವಿಲುಗಳು
ಮೋಡ ಮೂಡಲು ನೋಡು ಕುಂದಸುಮಧವಲರದನೆ ||

ಇಲ್ಲಿನ ಕನ್ನಡಾನುವಾದ ಸಿ.ಜಿ. ಪುರುಷೋತ್ತಮರ ಕನ್ನಡ ಘಟಕರ್ಪರದಿಂದ ಉದ್ಧೃತ.

ಈ ಕಾವ್ಯದ ಸೌಂದರ್ಯವೆಲ್ಲ ಶಬ್ದಾಡಂಬರದಲ್ಲಡಗಿದೆ. ಇರುವ ವರ್ಣನೆಗಳು, ಕೊಡುವ ಉಪಮೆಗಳು, ಸನ್ನಿವೇಶದ ಕಲ್ಪನೆ ಎಲ್ಲವೂ ಸಂಸ್ಕೃತ ಶೃಂಗಾರಕಾವ್ಯದ ಪ್ರಣಯಗೀತೆಗಳ ಚರ್ವಿತಚರ್ವಣ ಮಾತ್ರ. ಇಂಥ ಪುಟ್ಟ ಕಾವ್ಯದಲ್ಲೂ ಎರಡು ಮೂರು ಪ್ರಕ್ಷಿಪ್ತ ಪದ್ಯಗಳಿವೆಯೆಂಬುದೇ ಇದರ ಇನ್ನೊಂದು ಅದ್ಭುತ ವಿಷಯ.

ಘಟಕರ್ಪರ ಕಾವ್ಯ ಮುಂಬಯಿ ಮತ್ತು ಕಲ್ಕತ್ತಗಳಿಂದ ಕಾವ್ಯ ಸಂಗ್ರಹವೆಂಬ ಗ್ರಂಥ ಸರಣಿಯಲ್ಲಿ ಪ್ರಕಟವಾಗಿದೆ. ಅಭಿನವಗುಪ್ತರ ವಿವೃತಿಯೊಡನೆ ಪ್ರಕಟಗೊಂಡ ಸಂಪಾದನೆ ಕಾಶ್ಮೀರ ಗ್ರಂಥಮಾಲೆಯದು; ಶ್ರೀನಗರದಿಂದ ಪ್ರಕಟವಾಗಿದೆ.

ಉಲ್ಲೇಖಗಳು

ಬದಲಾಯಿಸಿ
  1. M. Srinivasachariar (1974). History of Classical Sanskrit Literature. Motilal Banarsidass. pp. 94–111. ISBN 9788120802841.
  2. Datta, Amaresh (1988). Encyclopaedia of Indian Literature: Devraj to Jyoti (in ಇಂಗ್ಲಿಷ್). Sahitya Akademi. p. 1124. ISBN 978-81-260-1194-0.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಘಟಕರ್ಪರ&oldid=1260885" ಇಂದ ಪಡೆಯಲ್ಪಟ್ಟಿದೆ