ಪಾರ್ವತಿಯ ರೂಪಾಂತರ. ಪೂಜಿಸುವುದರಿಂದ ಸಂತುಷ್ಟಳಾಗಿ ಸರ್ವಾಭೀಷ್ಟಗಳನ್ನು ಕೊಡುತ್ತಾಳೆಂದು ಪುರಾಣಗಳು ಹೇಳುತ್ತವೆ. ಚೈತ್ರ ಮೊದಲಾದ ಹನ್ನೆರಡು ಚಾಂದ್ರಮಾಸಗಳಲ್ಲೂ ಬರುವ ಶುಕ್ಲ ತೃತೀಯಾ ಮತ್ತು ಕೃಷ್ಣತೃತೀಯಾ ತಿಥಿಗಳಲ್ಲಿ ಗೌರಿಯನ್ನು ಬೇರೆ ಬೇರೆ ಹೆಸರುಗಳಿಂದ ಪೂಜಿಸುವ ವಿಧಾನ ಪುರಾಣಗಳಲ್ಲಿ ಉಕ್ತವಾಗಿದೆ. ತೃತೀಯಾತಿಥಿ ಮಾತ್ರವಲ್ಲದೆ ವೈಶಾಖ ಶುಕ್ಲಪಂಚಮಿ, ಜೇಷ್ಠ ಶುಕ್ಲ ಪ್ರಥಮಾ ಶ್ರಾವಣಮಾಸದ ಎಲ್ಲ ಮಂಗಳವಾರಗಳು, ಸೂರ್ಯ ಹಸ್ತ ನಕ್ಷತ್ರವನ್ನು ಪ್ರವೇಶಿಸುವ ದಿನ-ಕಾಲಗಳಲ್ಲೂ ಗೌರೀ ಪೂಜೆಯನ್ನು ಮಾಡಬೇಕೆಂದಿದೆ. ಗೌರ(ಹಳದಿ-ಬಿಳುಪು ಮಿಶ್ರ) ವರ್ಣದ ಶರೀರದಿಂದ ಕೂಡಿ ಪಾರ್ವತಿ ರೂಪಾಂತರವನ್ನು ತಳೆದುದರಿಂದ ಆಕೆಗೆ ಗೌರೀ ಎಂದು ಹೆಸರು ಬಂದಿದೆ. ಈ ವಿಚಾರವಾಗಿ ಒಂದು ಪೌರಾಣಿಕ ಕಥೆಯೂ ಇದೆ.

ಪುರಾಣ/ಇತಿಹಾಸ ಬದಲಾಯಿಸಿ

  • ದಕ್ಷಬ್ರಹ್ಮನಿಗೆ ಕಾಳೀ ಎಂಬ ಮಗಳಿದ್ದಳು. ಆಕೆ ಕನ್ನೈದಿಲೆಯಂತೆ ಕಪ್ಪು ಬಣ್ಣದಿಂದ ಕೂಡಿದ್ದಳು. ದಕ್ಷ ಆಕೆಯನ್ನು ಈಶ್ವರನಿಗೆ ಕೊಟ್ಟು ವಿವಾಹವನ್ನು ಮಾಡಿದ್ದ. ಶಿವನೂ ಆಕೆಯೊಡನೆ ಸಂತೋಷದಿಂದಿದ್ದ. ಒಮ್ಮೆ ಆಸ್ಥಾನ ಮಂಟಪದಲ್ಲಿ ವಿಷ್ಣು ಮತ್ತು ದೇವತೆಗಳೊಡನೆ ಈಶ್ವರ ತನ್ನ ಪತ್ನಿಯನ್ನು ಕೃಷ್ಣ ವರ್ಣಳಾದ ಕಾಳಿಯೇ ಬಾ. ನಿನ್ನ ಬಣ್ಣ ಕಪ್ಪಾಗಿದ್ದರೂ ಸೌಂದರ್ಯದಿಂದ ಕೂಡಿದ ನಿನ್ನ ರೂಪ ನನಗೆ ಪ್ರಿಯವಾಗಿದೆ ಎಂದು ಹೇಳಿದ.
  • ಈ ಮಾತನ್ನು ಕೇಳಿದ ಕಾಳಿ ಲಜ್ಜಿತಳಾಗಿ, ದುಃಖಿಸಿ ತನ್ನ ಕಪ್ಪು ದೇಹವನ್ನು ನೀಗಲು ದೇವ ಸಮುದಾಯದೆದುರಿನಲ್ಲೇ ಅಗ್ನಿಪ್ರವೇಶಮಾಡಿ ಮತ್ತೆ ಪರ್ವತರಾಜನಿಗೆ ಮಗಳಾಗಿ ಗೌರವರ್ಣ ಶರೀರದಿಂದ ಕೂಡಿದವಳಾಗಿ ಹುಟ್ಟಿ ಈಶ್ವರನನ್ನೇ ವಿವಾಹವಾದಳು. ಈ ಬಗ್ಗೆ ಇನ್ನೊಂದು ಕಥೆ ಇದೆ. ಶುಂಭ ನಿಶುಂಭರೆಂಬ ದೈತ್ಯರು ಲೋಕಕಂಟಕರಾಗಿ ದೇವತೆಗಳನ್ನು ತೊಂದರೆಪಡಿಸುತ್ತಿರಲು ದೇವತೆಗಳೆಲ್ಲ ಪಾರ್ವತಿಯನ್ನು ಮೊರೆ ಹೊಕ್ಕರು.
  • ಆಗ ಪಾರ್ವತಿಯ ಶರೀರದಿಂದ ಕೌಶಿಕಿ ಎಂಬ ಸುಂದರಿ ಆವಿರ್ಭವಿಸಿ ಆ ರಾಕ್ಷಸರನ್ನು ಸಂಹರಿಸಿದಳು. ಕೌಶಿಕಿ ಆವಿರ್ಭವಿಸಿದಮೇಲೆ ಪಾರ್ವತಿ ಕಪ್ಪಾಗಿ ಕಂಡಳು, ಶಿವ ಆಕೆಯನ್ನು ಕಾಳಿ ಎಂದು ಕರೆದ. ಆಗ ಪಾರ್ವತಿ ತಪಸ್ಸುಮಾಡಿ ಗೌರಶರೀರವನ್ನು ಪಡೆದಳು.
  • ಕಥೆಯ ನಿರೂಪಣೆಯಲ್ಲಿ ಬದಲಾವಣೆ ಇದ್ದರೂ ಕಪ್ಪುಶರೀರವನ್ನು ತ್ಯಜಿಸಿ ಗೌರ ಶರೀರವನ್ನು ಪಡೆದ ಕಾರಣ ಪಾರ್ವತಿಗೆ ಗೌರಿ ಎಂಬ ಅನ್ವರ್ಥನಾಮ ಬಂತು ಎಂಬ ವಿಷಯ ಸತ್ಯ. ಭಾದ್ರಪದ ಶುದ್ಧ ತೃತೀಯಾ ದಿವಸಾದಿಯಾಗಿ ಪಾರ್ವತಿ-ಆವಿರ್ಭವಿಸಿದುದರಿಂದ ಆ ದಿವಸ ಸ್ವರ್ಣಗೌರೀವ್ರತವನ್ನು ತಪ್ಪದೆ ಆಚರಿಸುವುದು ಕರ್ನಾಟಕದಲ್ಲಿ ರೂಢಿಯಲ್ಲಿದೆ.

ಫಲ ಬದಲಾಯಿಸಿ

  • ಪೂಜೆಗೆ ಮೊದಲು ಜನ್ಮಜನ್ಮಾಂತರದಲ್ಲಿ ಸೌಭಾಗ್ಯ ಮತ್ತು ಪುತ್ರಪೌತ್ರ ಧನ ಧಾನ್ಯೈಶ್ವರ್ಯಗಳು ಲಭಿಸಲು ವ್ರತವನ್ನು ಮಾಡುತ್ತೇನೆಂದು ಸಂಕಲ್ಪ ಮಾಡಬೇಕು. ಬಳಿಕ ಗೌರಿಯನ್ನು ಆಹ್ವಾನಿಸಿ ಆಸನ ಪಾದ್ಯ ಅಘ್ರ್ಯ ಆಚಮನ ಸ್ನಾನವಸ್ತ್ರ ಚಂದನ ಸೌಭಾಗ್ಯದ್ರವ್ಯ (ಅರಿಶಿನ-ಕುಂಕುಮ) ಮತ್ತು ಪುಷ್ಪಗಳನ್ನು ಸಮರ್ಪಣೆ ಮಾಡಿ ಅಷ್ಟೋತ್ತರ ಶತನಾಮಗಳಿಂದ ಪೂಜಿಸಬೇಕು.
  • ಬಳಿಕ ಧೂಪ ದೀಪ ನೈವೇದ್ಯ ದಕ್ಷಿಣೆ ಸಹಿತ ತಾಂಬೂಲವನ್ನು ಸಮರ್ಪಿಸಿ ನೀರಾಜನವನ್ನು ಬೆಳಗಿ ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ಪುತ್ರದೇಹಿ ಧನಂ ದೇಹಿ ಸೌಭಾಗ್ಯಂ ದೇಹಿ ಸುವ್ರತೇ ! ಅನ್ಯಾಂಶ್ಚ ಸರ್ವಕಾಮಾಂಶ್ಚ ದೇಹಿ ದೇವಿ ನಮೋಸ್ತುತೇ-ಎಂದು ಪ್ರಾರ್ಥಿಸಿ ಪುಷ್ಪಾಂಜಲಿಯನ್ನು ಸಮರ್ಪಿಸಬೇಕು. [೧]

ಸ್ವರ್ಣಗೌರೀವ್ರತ ಕಥೆ ಬದಲಾಯಿಸಿ

  • ಸರಸ್ವತೀ ತೀರದಲ್ಲಿ ವಿಮಲಾ ಎಂಬ ಪಟ್ಟಣವಿತ್ತು. ಅಲ್ಲಿಗೆ ಚಂದ್ರಪ್ರಭ ಎಂಬಾತ ರಾಜ. ಆತನಿಗೆ ಇಬ್ಬರು ಹೆಂಡಿರು. ಆತನಿಗೆ ಜ್ಯೇಷ್ಠ ಪತ್ನಿಯಲ್ಲಿ ಅಧಿಕವಾದ ಪ್ರೀತಿ ಇತ್ತು. ಒಮ್ಮೆ ರಾಜ ಬೇಟೆಗಾಗಿ ಕಾಡಿಗೆ ಹೋದ. ಬೇಟೆ ಎಲ್ಲ ಮುಗಿದ ಮೇಲೆ ಬರುವಾಗ ಒಂದೆಡೆಯಲ್ಲಿ ಅಪ್ಸರೆಯರೆಲ್ಲ ಸೇರಿ ದೇವಿಯ ಅರ್ಚನೆ ಮಾಡುತ್ತಿದ್ದುದನ್ನು ಕಂಡು ಅದೇನೆಂದು ಪ್ರಶ್ನಿಸಿದ.
  • ಆಗ ಅವರು ತಾವು ಮಾಡುತ್ತಿದ್ದ ಸ್ವರ್ಣಗೌರೀಪೂಜೆಯ ವಿಷಯವನ್ನು ತಿಳಿಸಿ ಸರ್ವಸಂಪದ್ಯಭಿವೃದ್ಧಿಕರವಾದ ಆ ವ್ರತವನ್ನು ಆತನೂ ಮಾಡುಂತೆ ಪ್ರೇರೇಪಿಸುತ್ತಾರೆ. ಭಾದ್ರಪದ ಶುದ್ಧ ತೃತೀಯೆಯಾದ ಅಂದೇ ಸಂಕಲ್ಪಮಾಡಿ ಹದಿನಾರು ಗಂಟುಗಳುಳ್ಳ ದಾರವನ್ನು ಬಲಗೈಗೆ ಕಟ್ಟಿಕೊಂಡು ವ್ರತವನ್ನು ಮಾಡಿ ಮುಗಿಸುತ್ತಾನೆ. ಅನಂತರ ಅರಮನೆಗೆ ಹಿಂತಿರುಗಿ ಬಂದು ತನ್ನ ಪತ್ನಿಯರಿಗೆ ಗೌರೀವ್ರತದ ಮಹಿಮೆಯನ್ನು ತಿಳಿಸುತ್ತಾನೆ.
  • ಜ್ಯೇಷ್ಠ ಪತ್ನಿ ಆತನ ಕೈಯಲ್ಲಿ ಕಟ್ಟಿದ್ದ 16 ಗ್ರಂಥಿಗಳಿಂದ ಕೂಡಿದ ದಾರವನ್ನು ನೋಡಿ ಕುಪಿತಳಾಗಿ, ರಾಜ ಬೇಡವೆಂದು ತಡೆದರೂ ಕೇಳದೆ ಅದನ್ನು ಕಿತ್ತು ಒಂದು ಒಣಗಿದ ಮರದ ಮೇಲಕ್ಕೆಸೆಯುತ್ತಾಳೆ. ಕೂಡಲೆ ಆ ಮರ ಚಿಗುರುತ್ತದೆ. ಕಿರಿಹೆಂಡತಿ ಅದನ್ನು ನೋಡಿ ಕೂಡಲೆ ಆ ಸೂತ್ರವನ್ನು ತೆಗೆದುಕೊಂಡು ತನ್ನ ಕೈಗೆ ಕಟ್ಟಿಕೊಳ್ಳುತ್ತಾಳೆ. ಅದರ ಮಹಾತ್ಮ್ಯದಿಂದ ಆಕೆ ಪತಿಗೆ ಪ್ರೀತಿಪಾತ್ರಳಾಗುತ್ತಾಳೆ.
  • ಅಪಚಾರವೆಸಗಿದ ಜ್ಯೇಷ್ಠಭಾರ್ಯೆ ಪತಿಯಿಂದ ತ್ಯಕ್ತಳಾಗಿ ದುಃಖದಿಂದ ಕಾಡಿಗೆ ಹೋಗುತ್ತಾಳೆ. ಯಾವ ಮುನಿಯೂ ಅವಳನ್ನು ಹತ್ತಿರಕ್ಕೆ ಸೇರಿಸುವುದಿಲ್ಲ. ಕೊನೆಗೆ ನಿರಾಹಾರಳಾಗಿ ಗೌರಿಯನ್ನೆ ಧ್ಯಾನಿಸುತ್ತಾಳೆ. ಆಗ ಗೌರಿ ಪ್ರತ್ಯಕ್ಷಳಾಗುತ್ತಾಳೆ. ಗೌರಿಯಿಂದ ವರಪಡೆದ ರಾಣಿ ಭಕ್ತಿಶ್ರದ್ಧೆಗಳಿಂದ ಗೌರೀವ್ರತವನ್ನು ಆಚರಿಸುತ್ತಾಳೆ. ಬಳಿಕ ಅವಳಿಗೆ ಸರ್ವವಿಧವಾದ ಸಂಪತ್ತೂ ಲಭಿಸುತ್ತದೆ. ಪತಿಯೊಡನೆ ಸುಖದಿಂದ ಬಹುಕಾಲ ಜೀವಿಸಿದ್ದು ಮರಣಾನಂತರ ಶಿವಲೋಕವನ್ನು ಪಡೆಯುತ್ತಾಳೆ.

ಗೌರಿ ವ್ರತದ ಕಥೆ ಬದಲಾಯಿಸಿ

  • ಪ್ರತಿಯೊಂದು ಗೌರಿ ವ್ರತಕ್ಕೂ ಒಂದೊಂದು ವ್ರತಕಥೆ ಇದೆ- ಗೌರೀವ್ರತದ ದಿನ ಸ್ನಾನಾನಂತರ ನದಿಯ ಸಮೀಪಕ್ಕೆ ಹೋಗಿ ಶುಭವೇಳೆಯಲ್ಲಿ ಪೂಜಿಸಿ ನದಿಯಲ್ಲಿರುವ ಮರಳನ್ನು ತೆಗೆದುಕೊಂಡು ವಸ್ತ್ರದ ಮೇಲಿಟ್ಟು ಹಿಂಡಿ ಗೌರಿಯ ಆಕಾರದಂತೆ ಮಾಡಿ ಅದನ್ನು ಪೂಜಿಸಿ ಬಳಿಕ ವಾದ್ಯದೊಡನೆ ಗೃಹಕ್ಕೆ ತಂದು ವ್ರತವನ್ನು ಮಾಡುವುದು ಈಗಲೂ ರೂಢಿಯಲ್ಲಿದೆ. ಕೆಲವರು ದಾರಕ್ಕೆ 16 ಗಂಟುಗಳನ್ನು ಹಾಕಿ ಅದರಲ್ಲೇ ಗೌರಿಯನ್ನು ಆವಾಹನೆ ಮಾಡಿ ಪೂಜಿಸುತ್ತಾರೆ.
  • ಪೂಜೆ ಮಾಡಿದ ದಿನವೇ ವಿಸರ್ಜಿಸುವುದು ವಾಡಿಕೆ. ಕೆಲವು ದಿನಗಳಿಟ್ಟುಕೊಂಡಿದ್ದು ಪೂಜಿಸಿ ಶುಭದಿನವನ್ನು ನೋಡಿ ವಿಸರ್ಜಿಸುವುದೂ ಉಂಟು. ಗೌರೀ ಪೂಜೆಯ ಸಂದರ್ಭದಲ್ಲಿ ಮೊರದಲ್ಲಿ ಐದು ವಿಧ ಧಾನ್ಯ, ಹಣ್ಣು, ಸುಗಂಧದ್ರವ್ಯ, ಮಂಗಳ ದ್ರವ್ಯಗಳನ್ನು ಇಟ್ಟು ಪೂಜಿಸಿ ವಿಸರ್ಜನೆಯಾದ ಬಳಿಕ ಅದನ್ನು ಸುಮಂಗಲಿಯರಿಗೆ ಕೊಡುವುದು ಇಂದಿಗೂ ರೂಢಿ. ಇದನ್ನು ಗೌರಿಬಾಗಿನ ಎಂದು ಕರೆಯುತ್ತಾರೆ.
  • ಸ್ವರ್ಣಗೌರೀ ವ್ರತವನ್ನು ತಪ್ಪದೆ ಪ್ರತಿವರ್ಷದಲ್ಲೂ ಆಚರಿಸುತ್ತಾರೆ. ಗೌರಿಯನ್ನು ಎಲ್ಲ ಮನೆಗಳಲ್ಲೂ ಇಡುವುದಿಲ್ಲ. ಇಡುವ ಪದ್ಧತಿ ಇಲ್ಲದವರು ಗೌರಿಯನ್ನು ಇಟ್ಟು ಪೂಜೆಮಾಡುವ ಮನೆಗೆ ಹೋಗಿ ಅಲ್ಲೇ ವಿಧಿವತ್ತಾಗಿ ಗೌರಿಯನ್ನು ಪೂಜಿಸುತ್ತಾರೆ. ಸ್ತ್ರೀಯರಿಗೆ ಇದೊಂದು ಸಂಭ್ರಮದ ಹಬ್ಬ. ವಿವಾಹದ ದಿವಸದಲ್ಲಿ ಕನ್ಯಾದಾನಕ್ಕೆ ಪೂರ್ವಭಾವಿಯಾಗಿ ಕನ್ಯೆ ಗೌರೀಪೂಜೆಯನ್ನು ಮಾಡುವುದು ಕೆಲವರಲ್ಲಿರುವ ಪದ್ಧತಿ.
  • ಸ್ವರ್ಣಗೌರೀ ಪೂಜೆಯಂತೆಯೇ ಮಂಗಳ ಗೌರೀ ಪೂಜೆಯೂ ಬಹು ಮುಖ್ಯವಾದ್ದು. ಸ್ತ್ರೀಯರು ಇದನ್ನು ಸೌಮಾಂಗಲ್ಯ ವೃದ್ಧಿಗಾಗಿ ಮಾಡುತ್ತಾರೆ. ಶ್ರಾವಣಮಾಸದ ಎಲ್ಲ ಮಂಗಳವಾರಗಳಲ್ಲೂ ಈ ವ್ರತವನ್ನು ಮಾಡಿ ವ್ರತೋದ್ಯಾಪನೆ ಮಾಡುತ್ತಾರೆ. ವಿವಾಹವಾದ ವರ್ಷದಲ್ಲಿ ತಂದೆಯ ಗೃಹದಲ್ಲೂ ಬಳಿಕ ನಾಲ್ಕು ವರ್ಷಗಳ ಕಾಲ ಪತಿಯ ಗೃಹದಲ್ಲೂ ಈ ವ್ರತವನ್ನು ಮಾಡುತ್ತಾರೆ.
  • ಸೂರ್ಯ ಹಸ್ತ ನಕ್ಷತ್ರಕ್ಕೆ ಪ್ರವೇಶಮಾಡುವ ದಿನದಲ್ಲಿ ಹಸ್ತಗೌರೀ ವ್ರತ ಮಾಡಬೇಕು. ಆನೆಯ ಮೇಲೆ ಗೌರಿಯನ್ನಿಟ್ಟು ಪೂಜಿಸುವುದರಿಂದ ಇದಕ್ಕೆ ಹಸ್ತ ಗೌರೀ ವ್ರತವೆಂದೂ ಹೆಸರು. ಈ ವ್ರತವನ್ನು ಗಾಂಧಾರಿ ಕುಂತಿಯರು ಮಾಡಿದರೆಂದು ವ್ರತಕಥೆಯಲ್ಲಿದೆ. ಇದಕ್ಕೆ ಐರಾವತ ಪೂಜೆ ಎಂಬ ಹೆಸರೂ ಇದೆ. ಇದರಂತೆಯೇ ಭಿನ್ನ ಭಿನ್ನ ಕಾಲಗಳಲ್ಲಿ ಮಾಡುವ ಹಲವು ಗೌರೀ ಪೂಜೆಗಳಿವೆ.
  • ಅವುಗಳಲ್ಲಿ ಈಗ ಪ್ರಚಲಿತವಾಗಿರುವ ಕೆಲವು ವ್ರತಗಳ ಹೆಸರು ಮತ್ತು ವ್ರತಾನುಷ್ಠಾನ ಕಾಲ ಹೀಗಿದೆ. ಚೈತ್ರ ಮಾಸದ ಶುಕ್ಲಪಕ್ಷ ತೃತೀಯ ದಿವಸ ವಾರ್ತಾಕ ಗೌರೀವ್ರತ, ವೈಶಾಖ ಮಾಸದ ಶುಕ್ಲಪಕ್ಷ ಪಂಚಮಿಯ ದಿವಸ ಲಾವಣ್ಯಗೌರೀವ್ರತ, ಜ್ಯೇಷ್ಠ ಶುಕ್ಲಪಕ್ಷದ ಪ್ರಥಮಾ ದಿವಸ ಪುನ್ನಾಗಗೌರೀವ್ರತ, ಜ್ಯೇಷ್ಠ ಶುಕ್ಲಪಕ್ಷದ ತೃತೀಯ ದಿವಸ ಕದಳೀಗೌರೀವ್ರತ, ಶ್ರಾವಣ ಶುಕ್ಲಪಕ್ಷದ ತೃತೀಯ ದಿವಸ ಸಂಪದ್ಗೌರೀವೃತ, ಮಾಘ ಶುಕ್ಲಪಕ್ಷದ ತೃತೀಯ ದಿವಸ ಮೌನಗೌರೀವ್ರತ.ಸೂರ್ಯೋದಯ ಕಾಲದಲ್ಲಿ ಉಕ್ತತಿಥಿ ಇರುವ ದಿವಸದಲ್ಲೇ ವ್ರತಾನುಷ್ಠಾನ ಮಾಡಬೇಕು.ಕನ್ಯಾಕುಬ್ಜದಲ್ಲಿ ಪಾರ್ವತಿ ಗೌರೀಮೂರ್ತಿಯಾಗಿ ಪೀಠಾರೂಢಳಾಗಿದ್ದಳೆಂದು ದೇವಿಭಾಗವತದಲ್ಲಿದೆ.

ಉಲ್ಲೇಖಗಳು ಬದಲಾಯಿಸಿ



"https://kn.wikipedia.org/w/index.php?title=ಗೌರಿ&oldid=1175627" ಇಂದ ಪಡೆಯಲ್ಪಟ್ಟಿದೆ