ಗೌಡ ನಗರ

ಭಾರತ ಮತ್ತು ಬಾಂಗ್ಲಾದೇಶದ ಪ್ರಾಚೀನ ನಗರ

ಗೌಡ ನಗರಪಶ್ಚಿಮ ಬಂಗಾಲಮಾಲ್ಡಾ ಜಿಲ್ಲೆಯಲ್ಲಿದ್ದ ಒಂದು ಪ್ರಾಚೀನ ನಗರ. ಇದನ್ನು ಲಕ್ಷ್ಮಣಾವತಿ, ಲಖ್ನೌತಿ, ನಿರ್ವಿತಿ, ವಿಜಯಪುರ, ಪುಂಡ್ರವರ್ಧನ, ಬರೇಂದ್ರ ಎಂದೂ ಕರೆಯುತ್ತಿದ್ದರು. ಮಾಲ್ದಾದಿಂದ 16 ಕಿಮೀ ದೂರದಲ್ಲಿದ್ದ ಈ ನಗರ ಗಂಗಾ ಮತ್ತು ಮಹಾನಂದಾ ನದಿಗಳ ಸಂಗಮ ಸ್ಥಾನದಲ್ಲಿತ್ತು.

ಗೌಡ ನಗರ
গৌড়
The historical entry gate to Gaur
ಪೂರ್ವ ಹೆಸರುಗಳುಲಖ್ನೌತಿ
ಪ್ರಕಾರSettlement
ಉದ್ದ7 1/8 km
ಅಗಲ1 – 2 km
ವಿಸ್ತೀರ್ಣ20 to 30 km2
ಇತಿಹಾಸ
ಸ್ಥಾಪಿತ15th century (earlier establishment not clear)
ತ್ಯಜಿಸಿದ್ದು16th century

ಇತಿಹಾಸ

ಬದಲಾಯಿಸಿ
 
ಸುಲ್ತಾನ್ ಯೂಸುಫ್‌ಶಾಹ್, 1477 AD, ಬ್ರಿಟಿಷ್ ಮ್ಯೂಸಿಯಂ ಹೆಸರಿನಲ್ಲಿ ಅಡಿಪಾಯ ಶಾಸನದ ಭಾಗ.[]

ಮೇರುತುಂಗನ ಪ್ರಬಂಧಚಿಂತಾಮಣಿಯ ಪ್ರಕಾರ 730 ರಲ್ಲಿ ಗೌಡ ನಗರ ಗೌಡ ದೇಶದ ರಾಜಧಾನಿಯಾಗಿತ್ತೆಂದು ತಿಳಿದುಬರುತ್ತದೆ. ದೇವಪಾಲ, ಮಹೇಂದ್ರಪಾಲ, ಆದಿಸುರ, ಬಲ್ಲಾಳ ಮೊದಲಾದ ಅರಸರ ಕಾಲದಲ್ಲೂ (11-12ನೆಯ ಶತಮಾನ) ಇದು ರಾಜಧಾನಿಯಾಗಿ ಮುಂದುವರಿಯಿತು. ದಿಯೊಪಾರ ಶಾಸನದಂತೆ ಬಲ್ಲಾಳಸೇನನ ಮಗನಾದ ಲಕ್ಷ್ಮಣಸೇನ ಗೌಡ ನಗರದಲ್ಲಿ ದೇವಾಲಯಗಳನ್ನೂ ಇತರ ಇಮಾರತುಗಳನ್ನೂ ಕಟ್ಟಿಸಿದನೆಂದೂ ನಗರಕ್ಕೆ ತನ್ನ ಹೆಸರನ್ನೆ (ಲಕ್ಷ್ಮಣಾವತಿ, ಲಖ್ನೌತಿ) ಇಟ್ಟಿದ್ದನೆಂದೂ ಗೊತ್ತಾಗುತ್ತದೆ. ಈತ ಸಂಸ್ಕೃತಕ್ಕೆ ವಿಶೇಷ ಪ್ರೋತ್ಸಾಹ ನೀಡಿದ್ದ. ಗೌಡ ನಗರ ಅನೇಕ ಉದ್ದಾಮ ಪಂಡಿತರಿಂದಲೂ ಕವಿಗಳಿಂದಲೂ ಶೋಭಿಸುತ್ತಿತ್ತು. ಗೀತ ಗೋವಿಂದದ ಕವಿ ಜಯದೇವ, ಕಲಾಪ ವ್ಯಾಕರಣದ ವ್ಯಾಖ್ಯಾನಕಾರನೂ ಲಕ್ಷ್ಮಣಸೇನನ ಮಂತ್ರಿಯೂ ಆಗಿದ್ದ ಉಮಾಪತಿಧರ, ಲಕ್ಷ್ಮಣಸೇನನ ಧರ್ಮಗುರುವೂ ಆರ್ಯ ಸಪ್ತಶತಿಯ ಕರ್ತೃವೂ ಆಗಿದ್ದ ಗೋವರ್ಧನಾಚಾರ್ಯ, ಶರಣ, ಪವನಧೂತದ ಕರ್ತೃವೂ ಗೀತಗೋವಿಂದದಲ್ಲಿ ಜಯದೇವನಿಂದ ಕವಿ ಕ್ಷಮಾಪತಿ ಶ್ರುತಿಧರನೆಂಬ ಹೊಗಳಿಕೆಗೆ ಭಾಜನನೂ ಆಗಿದ್ದ ಧೋಯಿ - ಈ ಐವರೂ ಲಕ್ಷ್ಮಣಸೇನನ ಆಸ್ಥಾನದ ಪಂಚರತ್ನರು ಎಂದು ವರ್ಣಿತರಾಗಿದ್ದಾರೆ. ಶಬ್ದಕೋಶಕಾರನೂ ರಾಜನ ಧರ್ಮೋಪದೇಶಕನೂ ಆಗಿದ್ದ ಹಲಾಯುಧ, ಸಾಧೂಕ್ತಿಕರ್ಣಾಮೃತದ ಕರ್ತೃ ಶ್ರೀಧರದಾಸ ಮುಂತಾದ ಇನ್ನೂ ಹಲವು ವಿದ್ವಾಂಸರು ಇಲ್ಲಿ ಇದ್ದರೆಂದು ಹೇಳಲಾಗಿದೆ. ಹೀಗೆ ಗೌಡ ನಗರ ಹಿಂದೂರಾಜರ ಉತ್ಕರ್ಷೆಯ ಕಾಲದಲ್ಲಿ ಒಂದು ಪ್ರಸಿದ್ಧ ಸಂಸ್ಕೃತ ವಿದ್ಯಾಕೇಂದ್ರವಾಗಿದ್ದಿರಬಹುದು. ಈ ನಗರ 12 ಕಿಮೀ ಉದ್ದವೂ 3.2 ಕಿಮೀ ಅಗಲವೂ ಇತ್ತೆಂದೂ ಇದರ ಸುತ್ತಲೂ ಭದ್ರವಾದ ಕೋಟೆಗೋಡೆಗಳಿದ್ದುವೆಂದೂ ತಿಳಿದುಬರುತ್ತದೆ.

ಮುಸ್ಲಿಂ ಆಡಳಿತ

ಬದಲಾಯಿಸಿ

ಗೌಡ ನಗರ 1203 ರಲ್ಲಿ ಮಲಿಕ್ ಇಕ್ತ್ಯಾರುದ್ದೀನ್ ಮಹಮದ್ ಬಖ್ತಿಯಾರನ ವಶವಾಯಿತು. 1220 ರಲ್ಲಿ ಘಿಯಾಸುದ್ದೀನ್ ಇವಾಜ಼್ ಇದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ. ಷೇರ್ ಶಹ 1538 ರಲ್ಲಿ ಈ ನಗರವನ್ನು ಕೊಳ್ಳೆಹೊಡೆದು ಸುಟ್ಟು ಹಾಕಿದ್ದ. ಹುಮಾಯೂನ್ ಗೌಡ ನಗರವನ್ನು ಪುನರ್ರಚಿಸಿ ಜೀರ್ಣೋದ್ಧಾರ ಮಾಡಿದ್ದ. 1570 ರಲ್ಲಿ ಅಕ್ಬರನ ದಂಡಯಾತ್ರೆಯ ವೇಳೆಯಲ್ಲಿ, ಆತನ ದಳದವರು ಈ ನಗರವನ್ನು ವಶಪಡಿಸಿಕೊಂಡಿದ್ದರು. 1575 ರಲ್ಲಿ ಅಕ್ಬರನ ಸುಬೇದಾರನೊಬ್ಬ ಈ ನಗರದ ಸೌಂದರ್ಯಕ್ಕೆ ಮಾರುಹೋಗಿ ತನ್ನ ರಾಜಧಾನಿಯನ್ನು ಪಾಂಡುವಾದಿಂದ ಗೌಡ ನಗರಕ್ಕೆ ಸ್ಥಳಾಂತರಿಸಿಕೊಂಡ. ಅನಂತರ ಬಂದ ಪಿಡುಗೊಂದರಿಂದಾಗಿ ನಗರದ ಜನಸಂಖ್ಯೆ ಬಹುವಾಗಿ ಇಳಿದುಹೋಯಿತು. ನಗರದ ಪಕ್ಕದಲ್ಲಿ ಹರಿಯುತ್ತಿದ್ದ ಗಂಗಾನದಿಯ ಪಾತ್ರವೂ ಬದಲಾಯಿತು. ಈ ಎಲ್ಲ ಕಾರಣಗಳಿಂದಾಗಿ ಗೌಡ ನಗರ ಪಾಳುಬಿದ್ದಿತು. ಕಾಡು ಬೆಳೆದುಕೊಂಡಿತು. ಪುರಾತತ್ತ್ವಜ್ಞರು ಇಲ್ಲಿಯ ಅವಶೇಷಗಳನ್ನು ಅಭ್ಯಸಿಸಿ ಪ್ರಾಚೀನ ನಗರದ ಇತಿಹಾಸ ವೈಭವಗಳನ್ನು ಅರಿಯಲು ಯತ್ನಿಸಿದ್ದಾರೆ. ಇಲ್ಲಿ ಈಗ ಉತ್ಖನನವನ್ನೂ ನಡೆಸಿದ್ದು ಅರಮನೆಯ ಅವಶೇಷಗಳು ಬೆಳಕಿಗೆ ಬಂದಿವೆ.

ವಾಸ್ತುಶಿಲ್ಪ

ಬದಲಾಯಿಸಿ
 
ಗೌಡದಲ್ಲಿ ಫಿರೋಜ್ ಮಿನಾರ್
 
ಗೌಡದಲ್ಲಿರುವ ಹಳೆಯ ಸ್ಮಾರಕ

ಕಾವ್ಯದಲ್ಲಿ ಗೌಡಶೈಲಿಯೊಂದಿದ್ದಂತೆ, ವಾಸ್ತುಶಿಲ್ಪ ದೃಷ್ಟಿಯಿಂದಲೂ ಈ ನಗರದ್ದು ವಿಶಿಷ್ಟ ಶೈಲಿ. ದಪ್ಪನೆಯ ಕುಳ್ಳು ಕಲ್ಗಂಬಗಳು, ಚೂಪನೆಯ ಕಮಾನು, ಇಟ್ಟಿಗೆಗಳಿಂದ ರಚಿಸಿದ ಗೋಳಾಕಾರದ ಮುಚ್ಚಿಗೆ-ಇವು ಗೌಡ ನಗರದ ವಾಸ್ತುವಿನಲ್ಲಿ ಕಂಡುಬರುವ ಕೆಲವು ವೈಲಕ್ಷಣ್ಯಗಳು. ಅಲ್ಲಿಯ ಖಜೆಕಿ ಮಸೀದಿ, ದರಸ್ ಮಸೀದಿ ಮತ್ತು ದಖಲ್ ದರವಾಜಾ (ನಗರದ್ವಾರ) ಇವನ್ನು ಹುಸೆನ್ ಷಹ ಎಂಬ ಸುಲ್ತಾನ ಕಟ್ಟಿಸಿದ. ಇಲ್ಲಿಯ ನತುನ್ ಮಸೀದಿಯಂಥ ಒಂದೆರಡು ಕಟ್ಟಡಗಳನ್ನು ಬಣ್ಣ ಬಣ್ಣದ ಹೊಳಪಿಟ್ಟಿಗೆಗಳಿಂದ ಕಟ್ಟಿರುವುದು ಒಂದು ವಿಶೇಷ.

ಒಟ್ಟಿನಲ್ಲಿ, ಐತಿಹಾಸಿಕವಾಗಿ ಅನೇಕ ಏರಿಳಿತಗಳನ್ನು ಕಂಡುಂಡು ಅನೇಕ ಶತಮಾನಗಳವರೆಗೆ ಪ್ರಾಚೀನ ಬಂಗಾಲದ ರಾಜಧಾನಿಯಾಗಿ ಮೆರೆದ ಗೌಡ ನಗರ ಈಗ ಒಂದು ಹಳ್ಳಿಯಾಗಿದೆ. ಚೈತನ್ಯನ ಕಾಲದಿಂದಲೂ ನಡೆದುಕೊಂಡು ಬಂದ ರಾಮಕೇಳಿ ಎಂಬ ಉತ್ಸವ ಇಲ್ಲಿ ಇಂದಿಗೂ ನಡೆಯುತ್ತದೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "British Museum Collection". Archived from the original on 2016-09-24. Retrieved 2021-07-21.


"https://kn.wikipedia.org/w/index.php?title=ಗೌಡ_ನಗರ&oldid=1216797" ಇಂದ ಪಡೆಯಲ್ಪಟ್ಟಿದೆ