ಗೌಡ ದೇಶ

ಪ್ರಾಚೀನ ಮತ್ತು ಮಧ್ಯಕಾಲೀನ ಕಾಲದಲ್ಲಿ ಬಂಗಾಳದಲ್ಲಿ ನೆಲೆಗೊಂಡಿರುವ ಪ್ರದೇಶ

ಗೌಡ ದೇಶಪಶ್ಚಿಮ ಮತ್ತು ವಾಯವ್ಯ ಬಂಗಾಲ ಪ್ರದೇಶಕ್ಕೆ ಹಿಂದೆ ಇದ್ದ ಹೆಸರು. ಈ ಪ್ರದೇಶದ ರಾಜಧಾನಿಯಾಗಿದ್ದ ಗೌಡ ನಗರದಿಂದಾಗಿ ಇದಕ್ಕೆ ಗೌಡದೇಶವೆಂಬ ಹೆಸರು ಬಂದಿರಬಹುದು.

Early 19th century lithograph of the Muslim ruins of Dakhil Darwaza at Gaur, West Bengal.

ಶಬ್ದ ವ್ಯುತ್ಪತ್ತಿ ಬದಲಾಯಿಸಿ

ಗೌಡ ಎಂಬುದು ಗೊನರ್ಧ ಎಂಬುದರ ಅಪಭ್ರಂಶವಿರಬಹುದೆಂಬುದು ಕನ್ನಿಂಗ್‍ಹ್ಯಾಮನ ಅಭಿಪ್ರಾಯ. ಗೌಡ ಎಂಬ ಶಬ್ದ ದೇಶ ಹಾಗೂ ಜನ ವಾಚಕವಾಗಿ ಬಳಕೆಯಲ್ಲಿತ್ತು. ಪಾಣಿನಿ, ಕೌಟಿಲ್ಯ ಮುಂತಾದವರು ಈ ಎರಡೂ ಅರ್ಥಗಳಲ್ಲಿ ಈ ಶಬ್ದವನ್ನು ಬಳಸಿದ್ದಾರೆ.

ಪ್ರದೇಶ ಮತ್ತು ವ್ಯಾಪ್ತಿ ಬದಲಾಯಿಸಿ

ಶ್ರಾವಸ್ತಿಯ ದಕ್ಷಿಣಕ್ಕೆ 72ಕಿಮೀ ದೂರದಲ್ಲಿರುವ ಇಂದಿನ ಗೋಂಡದ ಸುತ್ತಮುತ್ತಲಿನ ಪ್ರದೇಶವೇ ಗೌಡದೇಶವೆಂದು ಕೂರ್ಮಲಿಂಗ ಪುರಾಣಗಳಿಂದ ತಿಳಿದುಬರುತ್ತದೆ. ಹಿತೋಪದೇಶದ ಪ್ರಕಾರ ಕೌಶಾಂಬಿನಿ ಕೂಡ ಗೌಡ ದೇಶದಲ್ಲಿತ್ತು. ವಂಗದೇಶದಿಂದ ಹಿಡಿದು ಭುವನೇಶದ (ಒರಿಸ್ಸದ ಭುವನೇಶ್ವರ) ವರೆಗಿನ ಪ್ರದೇಶ ಗೌಡದೇಶವೆಂದು ಸ್ಕಾಂದಪುರಾಣದಲ್ಲಿ ವರ್ಣಿತವಾಗಿದೆ. ಬಾಣಭಟ್ಟನ ಹರ್ಷ ಚರಿತೆಯಲ್ಲೂ ಇದರ ಉಲ್ಲೇಖವುಂಟು. ಕಲ್ಹಣರಾಜತರಂಗಿಣಿಯಲ್ಲಿ ಪಂಚಗೌಡ ಎಂಬ ಶಬ್ದ ಬರುತ್ತದೆ. ಬಂಗಾಲ, ಸಾರಸ್ವತ, ಕನ್ಯಾಕುಬ್ಜ, ಗೌಡ, ಉತ್ಕಲ, ಮೈಥಿಲ - ಇವು ದೇಶಗಳಾಗಿದ್ದುವೆಂದು ತಿಳಿದುಬರುತ್ತದೆ. ಗೌಡದೇಶ ಗುಪ್ತಸಾಮ್ರಾಜ್ಯದ ಅಂಗವಾಗಿದ್ದರೂ ಸಮುದ್ರಗುಪ್ತನ ಅಲಹಾಬಾದ್ ಶಾಸನ ಆ ಕುರಿತು ಏನನ್ನೂ ಸ್ಪಷ್ಟವಾಗಿ ಹೇಳಿದಂತಿಲ್ಲ. ಬಹುಶಃ ಗುಪ್ತ ಸಾಮ್ರಾಜ್ಯದ ಪತನಾನಂತರ ಗೌಡದೇಶ ಪ್ರಸಿದ್ಧಿಗೆ ಬಂದಿರಬಹುದು. ಗೌಡದೇಶದ ಉಲ್ಲೇಖ ಪ್ರಥಮತಃ ಬಂದಿರುವುದು ಹರಾಹಾ ಶಿಲಾಶಾಸನದಲ್ಲಿ (554) ಎಂದು ತಿಳಿಯಲಾಗಿದೆ. ಈಗಿನ ಗೊಂಡ್ವಾನದ ಹತ್ತಿರದ ಪ್ರದೇಶಗಳನ್ನೂ ಗೌಡ ದೇಶವೆಂದು ಕರೆಯುತ್ತಿದ್ದರೆಂದು ಚೇದಿರಾಜರ ತಾಮ್ರಪತ್ರದಿಂದ ತಿಳಿದುಬರುತ್ತದೆ.

ಆಳ್ವಿಕೆ ಬದಲಾಯಿಸಿ

ಗೌಡ ದೇಶವನ್ನು ಆಳಿದ ಅನೇಕ ಸ್ಥಳೀಯ ಅರಸರಲ್ಲಿ ಗೋಪಚಂದ್ರ, ಸಮಯಾಚಾರ ದೇವ-ಇವರು ಪ್ರಸಿದ್ಧರು. ಇವರು ಗೌಡ ದೇಶದ ಶಕ್ತಿಯನ್ನು ವೃದ್ಧಿಸಿದರು. 7ನೆಯ ಶತಮಾನದಲ್ಲಿ ಗೌಡ ರಾಜನಾದ ಶಶಾಂಕನಿಗೂ ಥಾಣೇಶ್ವರದ ಹರ್ಷವರ್ಧನನಿಗೂ ಯುದ್ಧ ನಡೆದಿತ್ತು. ಶಶಾಂಕನ ಮರಣಾನಂತರ ಸುಮಾರು ಒಂದು ಶತಮಾನ ಕಾಲ ಗೌಡದೇಶ ಪರಕೀಯರ ಆಕ್ರಮಣ, ಆಂತರಿಕ ಅಶಾಂತಿಗಳಿಗೆ ಒಳಗಾಗಿತ್ತು. 750ರಲ್ಲಿ ಪಾಲವಂಶದ ಅರಸು ಅಧಿಕಾರಕ್ಕೆ ಬಂದಾಗಿನಿಂದ ಪರಿಸ್ಥಿತಿ ಸುಧಾರಿಸಿತು. ಪಾಲ ಅರಸರು ಗೌಡೇಶ್ವರ ಎಂಬ ಬಿರುದಿನಿಂದ ರಾಜ್ಯವಾಳಿದರು. ಧರ್ಮಪಾಲ (ಸು.752-810) ಮತ್ತು ದೇವನಪಾಲನ ಕಾಲದಲ್ಲಿ (ಸು. 810-49) ಗೌಡದೇಶ ಇಡೀ ಉತ್ತರ ಭಾರತದಲ್ಲೇ ಒಂದು ಪ್ರಬಲ ಶಕ್ತಿಯಾಗಿತ್ತು. ಕಾಲಕ್ರಮದಲ್ಲಿ ಗೌಡದೇಶ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡು ಗೌಡ ನಗರದ ರೂಪದಲ್ಲಿ ಮುಂದುವರಿಯಿತು. ಮುಂದೆ ದೆಹಲಿ ಸುಲ್ತಾನರು ಈ ಪ್ರದೇಶವನ್ನಾಕ್ರಮಿಸಿಕೊಂಡರು.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗೌಡ_ದೇಶ&oldid=818349" ಇಂದ ಪಡೆಯಲ್ಪಟ್ಟಿದೆ