ಗುಬ್ಬಿಯ ಮಲ್ಲಣ್ಣ
ಗುಬ್ಬಿಯ ಮಲ್ಲಣ್ಣ (ಸು. 1475) ಗಣಭಾಷ್ಯರತ್ನಮಾಲೆ ಮತ್ತು ವಾತುಲತಂತ್ರ ಟೀಕೆಗಳ ಕರ್ತೃ;[೧][೨] ಅಮರಗುಂಡದ (ಗುಬ್ಬಿ) ಅಮರ ಗುಂಡಾರ್ಯನ ಮಗ. ಈತನ ವಂಶಸ್ಥರು ವೀರಶೈವ ಮತಕ್ಕೂ, ಕನ್ನಡ ಸಾಹಿತ್ಯಕ್ಕೂ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಈತನ ಮೊಮ್ಮಗನೇ ಭಾವಚಿಂತಾರತ್ನದ ಕರ್ತೃವಾದ ಗುಬ್ಬಿಯ ಮಲ್ಲಣ್ಣಾರ್ಯ. ಮರಿಮಗನಾದ ಶಾಂತೇಶನ ಸಿದ್ಧೇಶ್ವರ ಪುರಾಣದಿಂದ ಮಲ್ಲಣ್ಣ ತೋಂಟದ ಸಿದ್ಧಲಿಂಗಯತಿಯ (ಸು.1470) ಶಿಷ್ಯನಾಗಿದ್ದನೆಂದು ತಿಳಿದುಬರುತ್ತದೆ.
ಕೃತಿಗಳು
ಬದಲಾಯಿಸಿವಾತುಲತಂತ್ರಟೀಕೆ
ಬದಲಾಯಿಸಿವಾತುಲತಂತ್ರಟೀಕೆಯು ವಾತುಲತಂತ್ರವೆಂಬ ಶೈವಾಗಮ ಸಿದ್ಧಾಂತಕ್ಕೆ ಸಂಬಂಧಿಸಿದ ಸಂಸ್ಕೃತ ಗ್ರಂಥದ ಕನ್ನಡ ವಾಖ್ಯಾನವಾಗಿದೆ. ಇದರಲ್ಲಿ ವೀರಶೈವ ಧರ್ಮದ ಪರವಾಗಿ ಮಲ್ಲಣ್ಣ ಕನ್ನಡ ವ್ಯಾಖ್ಯಾನವನ್ನು ವಿವರವಾಗಿ ಕೊಟ್ಟಿದ್ದಾನೆ.
ಗಣಭಾಷ್ಯ ರತ್ನಮಾಲೆ
ಬದಲಾಯಿಸಿಗಣಭಾಷ್ಯ ರತ್ನಮಾಲೆಯಲ್ಲಿ ವೀರಶೈವ ತತ್ತ್ವ ವಿವೇಚನೆಯನ್ನು ಯುಕ್ತಾಯುಕ್ತ ವಾದದಿಂದ ಪ್ರಮಾಣಬದ್ಧವಾಗಿ, ವಿಸ್ತಾರವಾಗಿ, ಸರಳರೀತಿಯಲ್ಲಿ ಮಾಡಲಾಗಿದೆ. ವೀರಶೈವ ಆಚರಣೆಗಳನ್ನು ಅನುಭವಾದಿ ಸದ್ಭಕ್ತ ಮಹಿಮಾಂತವಾದ 101 ಸ್ಥಲಗಳೆಂದು ವಿಭಾಗಿಸಿ ವೇದಾಗಮ, ಪುರಾಣೇತಿಹಾಸಾದಿ ಗ್ರಂಥಗಳಿಂದ ಪ್ರಮಾಣಗಳನ್ನು ಒದಗಿಸಿ ಉದಾಹರಣೆಯಾಗಿ ಪುರಾತನರ ಕನ್ನಡ ವಚನಗಳನ್ನು ಕೊಡಲಾಗಿದೆ. ಇದರಲ್ಲಿ ಅಂಗಸ್ಥಲ 44, ಲಿಂಗಸ್ಥಲ 45, ನಿರಂಗಲಿಂಗಸ್ಥಲ 12 ಎಂದು ಮೂರು ವಿಭಾಗಗಳಿವೆ. ಅಂಗಸ್ಥಲದಲ್ಲಿ 234 ಶ್ಲೋಕಗಳೂ, 225 ವಚನಗಳೂ, ಲಿಂಗಸ್ಥಲದಲ್ಲಿ 195 ಶ್ಲೋಕಗಳೂ, 193 ವಚನಗಳೂ, ನಿರಂಗಲಿಂಗಸ್ಥಲದಲ್ಲಿ 51 ಶ್ಲೋಕಗಳೂ, 67 ವಚನಗಳೂ ಇವೆ. ಇವೆಲ್ಲ 38 ಜನ ಶಿವಶರಣರ ವಚನಗಳಿಂದಲೂ, 53 ಸಂಸ್ಕೃತ ಗ್ರಂಥಗಳಿಂದಲೂ ಉದಾಹೃತವಾಗಿವೆ. ಸಂಸ್ಕೃತದ ಎಲ್ಲ ಶ್ಲೋಕಗಳಿಗೂ ಕನ್ನಡ ತಾತ್ಪರ್ಯವಿದೆ. ಪ್ರತಿ ಸ್ಥಲದ ಆರಂಭದಲ್ಲಿಯೂ ಕನ್ನಡ ಅವತರಣಿಕೆಯೊಂದಿದೆ. ಅನಂತರ ಸಂಸ್ಕೃತ ಪುರಾಣಶಾಸ್ತ್ರಗಳಿಂದ ಅಲ್ಲಿನ ವಾದವನ್ನು ಸಮರ್ಥಿಸಲಾಗಿದೆ. ಆಮೇಲೆ ವಿಷಯ ಸಮರ್ಥನೆಗಾಗಿ ಪುರಾತನ ವಚನಗಳನ್ನು ಉದಾಹರಿಸಿ ಪ್ರತಿ ಸ್ಥಲವನ್ನು ಮುಗಿಸಲಾಗಿದೆ. ಇಲ್ಲಿ ಪ್ರತಿಪಾದಿತವಾಗಿರುವ ಇಂದ್ರಿಯ ನಿರಸನಸ್ಥಲ, ಹಿಂಸಾನಿರಸನ ಸ್ಥಲ, ಹುಸಿ ನಿರಸನ ಸ್ಥಲ, ಕಳವು ನಿರಸನ ಸ್ಥಲ, ಆಶಾನಿರಸನ ಸ್ಥಲ, ಪರದಾರ ನಿರಸನ ಸ್ಥಲ-ಇವುಗಳಲ್ಲಿ ಸಾಮಾನ್ಯ ಧರ್ಮವನ್ನೂ, ಕೆಲವು ಸ್ಥಲಗಳಲ್ಲಿ ವಿಶೇಷ ಧರ್ಮವನ್ನೂ ಪ್ರತಿಪಾದಿಸಲಾಗಿದೆ. ಪ್ರಸ್ತಾವನೆಯಲ್ಲಿ ಗ್ರಂಥದ ವಿಷಯವಾಗಿ ಈ ಮಾತುಗಳಿವೆ:
ಇದು ಪರಮ ವೀರಶೈವ ಸಿದ್ಧಾಂತ ಜ್ಞಾನ
ಇದು ವೀರಶೈವ ಪ್ರತಿಷ್ಠಾಸ್ಥಾಪನಾಚಾರ್ಯ
ಇದು ದಿವ್ಯ ವೇದಾಂತ ಶಿರೋಮಣಿ
ಇದು ಸಮಸ್ತ ಶಾಸ್ತ್ರ ಮುಖ್ಯ ಮುಖದರ್ಪಣ
ಇದು ಮಹಾಜ್ಞಾನ ಪ್ರವರ್ಧನ ಪರಮಾನುಭವ ಸಂಬೋಧೆ
ಇದು ಸರ್ವಾಚಾರ ಸಂಪನ್ನರ ಸಮಾರೂಢ ಸಂಗ್ರಹ
ಇದು ಪರಮ ರಾಜಯೋಗಸಾಧ್ಯ ಸನ್ನಿಧಾನ
ಇದು ರಸಾಮೃತ ಪ್ರಸನ್ನ ಪ್ರಸಾದ
ಇದು ಅಜ್ಞಾನ ತಿಮಿರಾಂಜನವಪ್ಪ ಮಹಾ ಪ್ರಸಂಗ
ಬಸವರಾಜದೇವರು, ಚೆನ್ನಬಸವರಾಜದೇವರು, ಪ್ರಭುದೇವರು, ಮುಖ್ಯವಾದ ಅಸಂಖ್ಯಾತ ಮಹಾಗಣಂಗಳು ನೂರೊಂದು ಸ್ಥಲದಲ್ಲಿ ನಡೆದು ನುಡಿದ ವಚನಂಗಳು ಸ್ಥಲ ಭಿನ್ನವಾಗಿರ್ದಡೆ ಚೆಂದವಲ್ಲೆಂದು ಕಂಠಮಾಲೆಯ ಪವಣಿಗೆಯನರಿದು ಸೇರಿಸಿದೆನು. ನಿಮ್ಮ ಕಾರುಣ್ಯದ ಶಿಶು ಗುಬ್ಬಿಯ ಮಲ್ಲಣ್ಣಗಳು ಶಿವಗಣಂಗಳ ಶಿವಾನುಭವ ಸ್ತೋತ್ರಮಂ ಮಾಡಿ ಶಿವಗಣಂಗಳ ಮುಖಕ್ಕೆ ನಿರ್ಮಲ ದರ್ಪಣ ಮೆನೆ ಸಮರ್ಪಿಸಿದೆನು.