ಗುಬ್ಬಿಯ ಮಲ್ಲಣ್ಣಾರ್ಯ

ಗುಬ್ಬಿಯ ಮಲ್ಲಣ್ಣಾರ್ಯನು (ಸು. 1513) ಭಾವಚಿಂತಾರತ್ನ ಮತ್ತು ವೀರಶೈವಾಮೃತಪುರಾಣಗಳ ಕರ್ತೃ.[][][] ವೀರಶೈವ ಕವಿ. ಹುಟ್ಟಿದ ಸ್ಥಳ ತುಮಕೂರು ಜಿಲ್ಲೆಯ ಗುಬ್ಬಿ. ಪುರಾತನ ರಗಳೆ ಎಂಬ ಗ್ರಂಥವನ್ನೂ ಬರೆದನೆಂಬ ಪ್ರತೀತಿಯಿದೆ. ಆದರೆ ಅದು ಉಪಲಬ್ಧವಿಲ್ಲ. ಗಣಭಾಷ್ಯರತ್ನಮಾಲೆಯನ್ನು ಬರೆದ ಗುಬ್ಬಿಯ ಮಲ್ಲಣ್ಣ (ಸು.1475) ಈತನ ಪಿತಾಮಹ. ಈತನ ಮಗನೇ ತೋಂಟದ ಸಿದ್ಧೇಶ್ವರ ಪುರಾಣವನ್ನು ಬರೆದ ಶಾಂತೇಶ (1561).

ವೀರಶೈವಾಮೃತಪುರಾಣದಲ್ಲಿ ಕವಿ ತನ್ನ ಪರಂಪರೆಯನ್ನು ಹೀಗೆ ಹೇಳಿಕೊಂಡಿದ್ದಾನೆ. ಅಮರಗುಂಡದ ಮಲ್ಲೇಶ್ವರಾಚಾರ್ಯ; ಅವನ ಶಿಷ್ಯ ಶೂಲವೇರಿದ ಮಹತ್ತ್ವವುಳ್ಳ ಗುರುಭಕ್ತ; ಅವನ ಮಗ ದೇಶಿಕ ಪಟ್ಟವರ್ಧನ ಸೌಂದರ್ಯ ಮಲ್ಲಿಕಾರ್ಜುನ ಪಂಡಿತ; ಅವನ ಮಗ ನಾಗನಾಥಾರ್ಯ; ಅವನ ಮಗ ಅಹಿಯಂ ಲಿಂಗಕೆ ಛತ್ರಮಂ ಮಾಡಿದ ಅಮರ ಗುಂಡಾರ್ಯ; 'ಅವನ ವಂಶದೊಳು ಗುಬ್ಬಿಯ ಮಲ್ಲಣ್ಣನು ಹುಟ್ಟಿ ಅನುಭವಯೋಗ ಷಟ್‍ಸ್ಥಲಖ್ಯಾತಮಂ ಗಣಭಾಷ್ಯರತ್ನಮಾಲೆಯಂ ಮಾಡಿ ವಾತೂಲಕ್ಕೆ ಟಿಪ್ಪಣವನೆಸಗಿದಂ'; ಅವನ ಮಗ ಗುರುಭಕ್ತ; ಅವನ ಹೆಂಡತಿ ಸಪ್ಪೆಯಮ್ಮ-ಇವರ ಮಗ ಕವಿ ಗುಬ್ಬಿಯ ಮಲ್ಲಣ್ಣಾರ್ಯ. ಶಿವಗಂಗೆಯ ಶಾಂತನಂಜೇಶ, ಸಿದ್ಧಮಲ್ಲೇ ಈತನಿಗೆ ಗುರುವಾಗಿದ್ದರೆಂದು ತಿಳಿದುಬರುತ್ತದೆ.

ಕೃತಿಗಳು

ಬದಲಾಯಿಸಿ

ಭಾವ ಚಿಂತಾರತ್ನ

ಬದಲಾಯಿಸಿ

ವಾರ್ಧಕ ಷಟ್ಪದಿಯಲ್ಲಿರುವಕಾವ್ಯದಲ್ಲಿ 9 ಸಂಧಿಗಳೂ 391 ಪದ್ಯಗಳೂ ಇವೆ. ಇದಕ್ಕೆ ಸತ್ಯೇಂದ್ರಚೋಳನಾಥ ಕಥೆ ಎಂಬ ಹೆಸರೂ ಇದೆ. ತಿರುಜ್ಞಾನ ಸಂಬಂಧರು ಕುಲಚ್ಚರೆಯಗೆ ಪಂಜಾಕ್ಷರೀ ಮಹಿಮೆಯನ್ನು ತಿಳಿಸುವುದಕ್ಕಾಗಿ ದ್ರಾವಿಡದಲ್ಲಿ ಹೇಳಿದ ಸತ್ಯೇಂದ್ರ ಚೋಳನ ಕಥೆಯನ್ನು ತಾನು ಕನ್ನಡದಲ್ಲಿ ಹೇಳಿರುವುದಾಗಿ ಕವಿ ತಿಳಿಸುತ್ತಾನೆ. ಈ ಗ್ರಂಥ ಪಂಚಾಕ್ಷರಿಯ ಮಹತ್ತ್ವದ ಬೋಧೆ ಎಂದು ಕವಿ ಸ್ಪಷ್ಟವಾಗಿ ತಿಳಿಸುತ್ತಾನೆ. ಗ್ರಂಥಾವತಾರದಲ್ಲಿ ಅನೇಕ ಕವಿಗಳನ್ನೂ, ಬಸವ, ಅಲ್ಲಮ್ಮ ಚೆನ್ನಬಸವ ಮುಂತಾದ ವಚನಕಾರರನ್ನೂ ಸ್ತುತಿಸಿದ್ದಾನೆ. ಕಾವ್ಯಬಂಧ ಪ್ರೌಢವಾಗಿದೆ.

ವೀರಶೈವಾಮೃತಪುರಾಣ

ಬದಲಾಯಿಸಿ

ವಾರ್ಧಕ ಷಟ್ಪದಿಯ ಕಾವ್ಯ. ಇದರಲ್ಲಿರುವ ಕಾಂಡ 8, ಸಂಧಿ 136, ಪದ್ಯ 7,099. ಇದರಲ್ಲಿ ವೀರಶೈವ ಸಿದ್ಧಾಂತವನ್ನು ಸವಿಸ್ತಾರವಾಗಿ ಪ್ರತಿಪಾದಿಸಲಾಗಿದೆ. `ಸಾಕ್ಷಿ' ಎಂದು ವೇದಾಗಮ ಪುರಾಣೇತಿಹಾಸ ಸ್ಮೃತಿಗಳಿಂದ ವಾಕ್ಯಗಳು ಅನುವಾದ ಮಾಡಲ್ಪಟ್ಟಿವೆ. ಅಲ್ಲದೆ ಶಿವನ ಪಂಚವಿಂಶತಿ ಲೀಲೆಗಳು, ಪುರಾತನ ಹಾಗೂ ನೂತನ ಶರಣರ ಕಥೆಗಳು, ಶೈವ ವೀರಶೈವ ತತ್ತ್ವ ವಿಚಾರ, ಧರ್ಮಾಧರ್ಮ ಸ್ವರೂಪ, ಬಸವ ಪುರಾಣ, ಶಿವತತ್ತ್ವ ಚಿಂತಾಮಣಿ ಮೊದಲಾದ ಕಾವ್ಯಗಳ ಕಥಾಸಂಗ್ರಹ- ಇವನ್ನು ಕಾವ್ಯದಲ್ಲಿ ಕಾಣಬಹುದು. ಶೀಲವಂತಾರ್ಯನ ಕರಜಾತನಾದ ಹಲಗೆಯಾರ್ಯ ತನ್ನ ಶಿಷ್ಯ ಕೆಂಚವೀರನಿಗೆ ಬೋಧಿಸಿದ ಉಪದೇಶವನ್ನು ಪದ್ಯರೂಪವಾಗಿ ರಚಿಸು ಎಂದು ಹೇಳಲು ತಾನು ಅವನ ಆಜ್ಞಾನುಸಾರವಾಗಿ ಈ ಕೃತಿಯನ್ನು ಬರೆದಂತೆ ಕವಿ ಹೇಳಿಕೊಂಡಿದ್ದಾನೆ.

ಬಸವ ಪುರಾಣಾರ್ಥವಂ ಪೇಳ್ವೋಡೆ ಅರ್ಣವ ಪ್ರಾಂತದ ಭೂಮಿಯೊಳುಪೆಸರಾಗಿರ್ದೆ ಎಂದು ಈತನನ್ನು ಇತರರು ಸ್ತುತಿಸಿರುವುದರಿಂದ ಈತ ಉಭಯ ಭಾಷಾ ಕವಿಯೆಂದೂ, ಬಸವ ಪುರಾಣದ ಅರ್ಥವನ್ನು ಹೇಳುವುದರಲ್ಲಿ ಪ್ರಸಿದ್ಧನೆಂದೂ ತಿಳಿದುಬರುತ್ತದೆ. ಇವನಿಗೆ ಬಸವಪುರಾಣದ ಮಲ್ಲಣಾರ್ಯನೆಂಬ ಹೆಸರೂ ಉಂಟು. ಭಾವಚಿಂತಾರತ್ನವನ್ನು 1513ರಲ್ಲೂ ವೀರಶೈವಾಮೃತ ಪುರಾಣವನ್ನು 1530ರಲ್ಲೂ ಬರೆದಂತೆ ಕವಿಯ ಹೇಳಿಕೆಯಿಂದ ಗೊತ್ತಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: