ಪ್ರಾಚೀನ ಗುಜರಾತೀ ಸಾಹಿತ್ಯ

ಬದಲಾಯಿಸಿ

ಗುಜರಾತಿ ಸಾಹಿತ್ಯದ ಇತಿಹಾಸವನ್ನು ಸಮೀಕ್ಷಿಸುವಾಗ ಗುಜರಾತಿನ ಮುಖ್ಯ ಭೂಮಿ ಮತ್ತು ಸೌರಾಷ್ಟ್ರ ಹಾಗೂ ಕಚ್ ಅನ್ನು ಒಳಗೊಂಡಿರುವ ಪರ್ಯಾಯ ದ್ವೀಪ ಭಾಗಗಳ ಸಾಹಿತ್ಯ ಕೃತಿಗಳನ್ನಲ್ಲದೆ ಮೌಂಟ್ ಅಬುವಿನ ಉತ್ತರಕ್ಕಿರುವ ಪ್ರದೇಶಗಳ ಸಾಹಿತ್ಯ ಕೃತಿಗಳನ್ನೂ ಪರ್ಯಾಲೋಚನೆಗೆ ತೆಗೆದುಕೊಳ್ಳಬೇಕು, ಏಕೆಂದರೆ ಅಹಮದಾಬಾದಿನಲ್ಲಿ ಹದಿನೈದನೆಯ ಶತಮಾನ ಮತ್ತು ಪ್ರಾಯಶಃ ಹದಿನಾರನೆಯ ಶತಮಾನಗಳ ಅವಧಿಯಲ್ಲಿ, ಗುಜರಾತಿ ಸುಲ್ತಾನಿಕೆ ಸ್ಥಾಪಿತವಾಗುವವರೆಗೆ, ಗುಜರಾತು ಮತ್ತು ರಾಜಸ್ತಾನಗಳಿಗೆ ಒಂದೇ ಒಂದು ಭಾಷೆಯಿತ್ತು. ಇದರಿಂದಲೇ ಟೆಸ್ಸಿಟೊರಿ ಮೊದಲಾದ ವಿದ್ವಾಂಸರು ಪ್ರಾಚೀನ ಗುಜರಾತಿಯೆಂದು ಹೆಸರಾಂತ ಈ ಪ್ರಾಂತಗಳ ಭಾಷೆಯ ಪ್ರಾಚೀನ ರೂಪವನ್ನು ಪ್ರಾಚೀನ ಪಶ್ಚಿಮ ರಾಜಸ್ತಾನೀ ಎಂದು ಕರೆದಿರುವುದು. ಈ ಎರಡು ಪ್ರಾಂತಗಳಿಗೂ ಸಾಧಾರಣವಾಗಿರುವ ಪ್ರಾಚೀನ ರೂಪಗಳನ್ನೂ ಈ ಭಾಷೆಯಲ್ಲಿ ಸೇರಿಸಿಕೊಳ್ಳಲು ಅನುಕೂಲವಾಗುವಂತೆ ಇದನ್ನು ಮಾರೂ ಗುರ್ಜರ್ (ಮಾರವಾಡ ಮತ್ತು ಗುಜರಾತುಗಳ ಭಾಷೆ) ಎಂದೇ ಕರೆಯಬೇಕೆಂದು ಯು. ಜೆ. ಜೋಷಿಯವರು ಸೂಚಿಸಿದ್ದಾರೆ.

ಗುಜರಾತ್ ಮತ್ತು ಲಾಟ (ದಕ್ಷಿಣ ಗುಜರಾತ್) ದೇಶಗಳ ಜನಗಳ ಭಾಷೆಯನ್ನು ಕುರಿತ ಬಹು ಹಳೆಯ ಪ್ರಸ್ತಾಪ ಉದ್ಯೋತನಸೂರಿಯ ಕುವಲಯ ಮಾಲಾ (ಪ್ರ.ಶ. 798) ಎಂಬ ಗ್ರಂಥದಲ್ಲಿ ಗೋಚರಿಸುತ್ತದೆ. ಪ್ರಾಕೃತದಲ್ಲಿ ರಚಿತವಾಗಿರುವ ಈ ಗ್ರಂಥ ಭಾರತ ದೇಶದ ವಿವಿಧ ಪ್ರಾಂತಗಳಲ್ಲಿ ಪ್ರಚಲಿತವಾಗಿದ್ದ ಭಾಷೆಗಳನ್ನು ಕುರಿತು ಹೇಳುತ್ತದೆ. ಗುಜರಾತ್ ಮತ್ತು ಲಾಟಗಳ ಭಾಷೆಯನ್ನು ಕುರಿತು ಅಲ್ಲಿನ ಶ್ಲೋಕಗಳ ಅರ್ಥ ಇದು: ‘ಬಳಿಕ ಆತ ಗುಜ್ಜರರನ್ನು (ಗುಜರಾತ್ ದೇಶದವರನ್ನು) ಕಂಡ. ಅವರು ಅಲ್ಲಿ ಸಮೃದ್ಧವಾಗಿದ್ದ ಬೆಣ್ಣೆಯನ್ನು ಮೆದ್ದು ಪುಷ್ಟರಾಗಿದ್ದರು. ಅವರು ಧಾರ್ಮಿಕರು. ಯುದ್ಧದಲ್ಲಿಯೂ ಶಾಂತಿಯಲ್ಲಿಯೂ ನಿಷ್ಣಾತರು ಮತ್ತು ‘ನೌರೇ ಭಲ್ಲೌ’ ಮುಂತಾದ ಉಗ್ಗಡಣೆಗಳು ಅವರ ಮುಖದಿಂದ ಹೊರಡುತ್ತಿದ್ದವು.’ ಬಳಿಕ ಆತ ಲಾಟರನ್ನು ಎಂದರೆ ಲಾಟದೇಶದ ಜನರನ್ನು ಕಂಡನು. ಅವರು ಸ್ನಾನಾಂತರದಲ್ಲಿ ತಮ್ಮ ಮೈಗೆ ಶ್ರೀಗಂಧವನ್ನು ಬಳಿದುಕೊಳ್ಳುತ್ತಿದ್ದರು; ತಲೆಯನ್ನು ಆ ಕಡೆ ಈ ಕಡೆಗೆ ಬಾಚಿಕೊಳ್ಳುತ್ತಿದ್ದರು. ಅವರ ಅಂಗಗಳು ಸುಂದರವಾಗಿದ್ದವು. ‘ಅಂಹನ್ ಕೌತುಂಹ್’ ಮುಂತಾದ ಶಬ್ದಗಳನ್ನು ಅವರು ಉಚ್ಚರಿಸುತ್ತಿದ್ದರು.

ಈ ತೆಳ್ಳನೆ ಸಾಕ್ಷ್ಯದಿಂದ ಗುಜರಾತಿನಲ್ಲೂ ಲಾಟದಲ್ಲೂ ಎಂಟನೆಯ ಶತಮಾನದಲ್ಲಿ ಪ್ರಚಲಿತವಾಗಿದ್ದ ಭಾಷೆಯ ಸ್ವರೂಪವನ್ನು ಕುರಿತು ಯಾವುದನ್ನೂ ಖಚಿತವಾಗಿ ಹೇಳುವುದು ಕಷ್ಟ; ಆದರೆ ಒಂದು ಬಗೆಯ ಅಪಭ್ರಂಶ ಅಲ್ಲಿ ಪ್ರಚಲಿತವಾಗಿತ್ತೆಂದು ನಿಸ್ಸಂಶಯವಾಗಿ ಹೇಳಬಹುದು.

ಇದಕ್ಕೆ ಭೋಜ (1000) ತನ್ನ ಸರಸ್ವತೀ ಕಂಠಾಭರಣದಲ್ಲಿ ಹೇಳುವ ಈ ಮಾತು ಒತ್ತು ನುಡಿಯಾಗಿದೆ. ಆತ ಹೇಳುತ್ತಾನೆ: ಅಪಭ್ರಂಶೇನ ತುಷಂತಿ ಸ್ವೇನ ನಾನ್ಯೇನ ಗುರ್ಜರಾಃ (ತಮ್ಮ ಅಪಂಭ್ರಂಶದಿಂದಲೇ ಗುರ್ಜರರು ಸಂತುಷ್ಟಿಗೊಳ್ಳುತ್ತಾರೆ, ಮತ್ತೊಂದನ್ನು ಒಲ್ಲರು.) ಮಾರ್ಕಂಡೇಯನೆಂಬ (1000) ಪ್ರಾಕೃತ ವೈಯಾಕರಣಿ ಅಪಭ್ರಂಶದ ಇಪ್ಪತ್ತೇಳು ಪ್ರಕಾರಗಳನ್ನು ಹೇಳುತ್ತ ಗುರ್ಜರೀ ಎಂಬೊಂದನ್ನು ಹೆಸರಿಸುತ್ತಾನೆ. ಇವುಗಳೆಲ್ಲದರ ಮಥಿತಾರ್ಥವೇನೆಂದರೆ ದೇಶದ ಈ ಭಾಗಗಳಲ್ಲಿ ಪ್ರಚಲಿತವಾಗಿದ್ದ ಅಪಭ್ರಂಶದ ಒಂದು ಪ್ರಕಾರದಿಂದ ಪ್ರಾಚೀನ ಗುಜರಾತಿ ಭಾಷೆ (ಅಥವಾ ಪ್ರಾಚೀನ ಪಶ್ಚಿಮ ರಾಜಸ್ತಾನೀ ಭಾಷೆ) ಹುಟ್ಟಿತು ಎಂದು.

ಭಾರತದ ಉತ್ತರ ಮತ್ತು ಪಶ್ಚಿಮ ಪ್ರಾಂತಗಳ ಭಾಷೆಗಳೆಲ್ಲ ಇಂಡೊ - ಆರ್ಯನ್ ಭಾಷೆ ಅಪಭ್ರಂಶದ ಘಟ್ಟವನ್ನು ಮುಟ್ಟಿದಾಗ ವಿಕಾಸಗೊಂಡವೆಂಬುದು ಭಾರತೀಯ ಭಾಷೆಗಳ ಭಾಷಾ ಶಾಸ್ತ್ರಜ್ಞರಿಗೆ ಚೆನ್ನಾಗಿ ತಿಳಿದಿರುವ ವಿಷಯ.ಅಪಭ್ರಂಶ ಮೊದಲು ಜನರಾಡುವ ಒಂದು ಉಪಭಾಷೆಯಾಗಿತ್ತು. ಇಂಡೋ - ಆರ್ಯನ್ ಭಾಷೆಯ ಒಂದು ಘಟ್ಟದಲ್ಲಿ ಪ್ರಾಕೃತವನ್ನು ಬೇಗ ಹಿಂಬಾಲಿಸಿ ಬಂದ ಜನರಾಡುವ ಭಾಷೆಯಾಗಿತ್ತು ಅಪಭ್ರಂಶ. ಆ ಬಳಿಕ ಅದು ಸಾಹಿತ್ಯ ಭಾಷೆ ಆಯಿತು ಮತ್ತು ಅದರದೊಂದು ವಿಪುಲ ಸಾಹಿತ್ಯರಾಶಿ ಈಗಲೂ ಉಳಿದುಕೊಂಡು ಬಂದಿದೆ. ಈ ಸಾಹಿತ್ಯಕ ಅಪಭ್ರಂಶ ಉತ್ತರ ಮತ್ತು ಪಶ್ಚಿಮ ಭಾರತದ ಸಾಹಿತ್ಯ ಭಾಷೆಯಾಗಿ ಪರಿಣಮಿಸಿತು ಹಾಗೂ ಗುಜರಾತ್ ಮತ್ತು ಮಹಾರಾಷ್ಟ್ರಗಳಿಂದ ಅಸ್ಸಾಂ ಮತ್ತು ನೇಪಾಲಗಳವರೆಗೆ ಭಾರತದ ವಿವಿಧ ಪ್ರಾಂತಗಳ ಕವಿಗಳು ಅಲ್ಪಸ್ವಲ್ಪ ಸ್ಥಳೀಯ ವ್ಯತ್ಯಾಸಗಳೊಡನೆ ಈ ಅಪಭ್ರಂಶವನ್ನು ತಮ್ಮ ಕವಿತೆಗಳಿಗೆ ಉಪಯೋಗಿಸಿಕೊಂಡರು.

ಆದರೆ ಚಾಳುಕ್ಯರ ಕಾಲದಲ್ಲಿ (942-1304) ಗುಜರಾತಿನಲ್ಲೂ ರಾಜಸ್ತಾನದಲ್ಲೂ ಅಪಭ್ರಂಶದಲ್ಲಿ ಪ್ರಚಲಿತ ಸಾಹಿತ್ಯರಾಶಿಯೊಂದಿತ್ತು. ಅದು ಜನಪದ ಸಾಹಿತ್ಯದೊಂದು ಭಾಗವಾಗಿತ್ತು. ಅದರ ಹೆಚ್ಚು ಪಾಲು ನಮಗೀಗ ಲಭ್ಯವಾಗಿಲ್ಲ. ಅದೃಷ್ಟವಶಾತ್, ಈ ತೇಲುವ ಸಾಹಿತ್ಯದ ಅನೇಕ ದ್ವಿಪದಿಗಳನ್ನು ಪ್ರಸಿದ್ಧ ಜೈನ ಸಾಧು ಹೇಮಚಂದ್ರ (1087-1174) ತನ್ನ ಪ್ರಾಕೃತ ವ್ಯಾಕರಣದಲ್ಲಿ ಅಪಭ್ರಂಶದ ಉದಾಹರಣೆಗಳಾಗಿ ಎತ್ತಿಕೊಂಡು ಕೂಡಿಟ್ಟಿದ್ದಾನೆ. ಈ ದ್ವಿಪದಿಗಳು ಯಾವ ಗ್ರಂಥದ ಭಾಗಗಳಾಗಿವೆಯೋ ಆ ಗ್ರಂಥವನ್ನು ರಚಿಸಲು ಹೇಮಚಂದ್ರನನ್ನು ಸಿದ್ಧರಾಜ ಜಯಸಿಂಹ ಎಂಬ ಅರಸ ಕೋರಿದ. ಇದರಿಂದ ಇವುಗಳ ಬೆಳಸು ಹೆಚ್ಚಿದೆ ಮತ್ತು ಈ ಉದಾಹೃತಪದ್ಯಗಳು 11 ಮತ್ತು 12ನೆಯ ಶತಮಾನದ ಗುಜರಾತಿನ ಜನಪದ ಸಾಹಿತ್ಯವನ್ನು ಪ್ರತಿನಿಧಿಸುತ್ತವೆ ಎಂದು ಧಾರಾಳವಾಗಿ ಹೇಳಬಹುದು. ವಸ್ತುತಃ ಹೇಮಚಂದ್ರ ಉದ್ಧರಿಸಿರುವ ಪದ್ಯಗಳು ಪಶ್ಚಿಮ ಭಾರತದ ಆ ಭಾಗದ ಅತಿ ಪ್ರಾಚೀನ ಸಾಹಿತ್ಯದಲ್ಲೂ ಮಾದರಿಗಳಾಗಿವೆ.

ಹೇಮಚಂದ್ರ ಉದಹರಿಸಿರುವ ಪದ್ಯಗಳಲ್ಲಿ ಬಹುಭಾಗ ವೀರರಸವನ್ನೂ ಶೃಂಗಾರ ರಸವನ್ನೂ ಪ್ರತಿಪಾದಿಸುತ್ತವೆ. ಈ ರಸಗಳೇ ಆ ಕಾಲದ ಜನಪದ ಸಾಹಿತ್ಯದಲ್ಲಿನ ಬಹುಪ್ರಧಾನ ರಸಗಳಾಗಿದ್ದು ಸ್ವಲ್ಪ ಮಟ್ಟಿಗೆ ಆ ಕಾಲದ ಜನಜೀವನದ ಕೆಲವು ಮುಖಗಳನ್ನು ಪ್ರತಿಬಿಂಬಿಸುತ್ತವೆ. ಇಲ್ಲಿ ಅನೇಕ ಸುಭಾಷಿತಗಳಾಗಿವೆ; ಮತ್ತೆ ಕೆಲವು ಜೈನ ಮತ್ತು ಬ್ರಾಹ್ಮಣ ಪುರಾಣಗಳನ್ನು ಕುರಿತವಾಗಿವೆ. ಈ ಪದ್ಯಗಳ ಮನೋಜ್ಞವಾದ ಶೈಲಿ, ಚಿತ್ರಮಯವಾದ ಕಲ್ಪನೆ, ಸಮರ್ಥವಾದ ಉಪಮೆಗಳು ಆಗಿನ ಸಾಹಿತ್ಯ ಚೆನ್ನಾಗಿ ಬೆಳೆವಣಿಗೆ ಹೊಂದಿತ್ತೆಂಬುದನ್ನು ಸೂಚಿಸುತ್ತವೆ. ಹೇಮಚಂದ್ರನ ತರುವಾಯ ಸಂಸ್ಕೃತ ಪ್ರಬಂಧಗಳನ್ನು (ಐತಿಹಾಸಿಕ ಕಥೆಗಳನ್ನು ವರ್ಣಿಸಿರುವ ಕೃತಿಗಳನ್ನು) ಬರೆದ ಅನೇಕ ಲೇಖಕರು ಇಂಥ ಅಪಭ್ರಂಶ ಪದ್ಯಗಳನ್ನು ಉಲ್ಲೇಖಿಸಿದ್ದಾರೆ. ಇವುಗಳ ಪೈಕಿ ಮೇರುತುಂಗನ ಪ್ರಬಂಧ ಚಿಂತಾಮಣಿ (1305) ಎಂಬ ಗ್ರಂಥವನ್ನು ಎತ್ತಿ ಹೇಳಬಹುದಾಗಿದೆ. ಅದರಲ್ಲಿ ಸಿದ್ಧರಾಜ ಜಯಸಿಂಹ ಜುನಾಗಡದ ಅರಸ ಖಂಗಾರನನ್ನು ಕೊಂದಾಗ, ಅವನ ರಾಣಿಗೆ ಸೋನಲ ದೇವಿ ಹೇಳಿದ ಹಾಗೆ ಅನೇಕ ಅಪಭ್ರಂಶ ದುಹಾಗಳು ಉದ್ಧೃತವಾಗಿವೆ. ಈ ದುಹಾಗಳಲ್ಲಿ ಪ್ರಾಯಶಃ ಎಲ್ಲವೂ ಈಗಿನ ಗುಜರಾತ್ ಮತ್ತು ಸೌರಾಷ್ಟ್ರಗಳ ಜನಪದ ಸಾಹಿತ್ಯದಲ್ಲಿಯೂ ಜೀವಂತವಾಗಿರುವುದು ಗಮನಾರ್ಹವಾದ ಸಂಗತಿ. ಆದರೆ ಇವುಗಳ ಭಾಷೆ ಈಗಿನ ಜನರಾಡುವ ಭಾಷೆ. ಇವು ಎಲ್ಲ ಕಾಲದಲ್ಲೂ ಜನಪ್ರಿಯವಾಗಿದ್ದವೆಂಬುದಕ್ಕೆ ಇದೇ ಸಾಕ್ಷಿ. ಗುಜರಾತಿನ ಇನ್ನೂ ಕೆಲವು ಪ್ರಾಚೀನ ದುಹಾಗಳು ತಲೆಮಾರಿನಿಂದ ತಲೆಮಾರಿಗೆ ಅನುಸ್ಯೂತವಾಗಿ ಇಳಿದು ಬಂದು ಇಂದೂ ಸೌರಾಷ್ಟ್ರ ರಾಜಸ್ತಾನಗಳಲ್ಲಿ ಗೋಚರಿಸುತ್ತವೆ ಎಂಬುದನ್ನು ಪ್ರಖ್ಯಾತ ಜನಪದ ಸಾಹಿತ್ಯ ಸಂಗ್ರಾಹಕ ಜಾವೇರ್ಚಂದ್ ಮೇಘಾನಿ ಮತ್ತು ಇತರ ವಿದ್ವಾಂಸರು ತೋರಿಸಿಕೊಟ್ಟಿದ್ದಾರೆ.

ಪ್ರಾಚೀನ ಗುಜರಾತೀ ಸಾಹಿತ್ಯವನ್ನು ಮೂರು ಅವಧಿಗಳಾಗಿ ವಿಂಗಡಿಸಬಹುದು:

  1. ಹೇಮಚಂದ್ರನಿಂದ ಮುಗ್ಧಾವಬೋಧ ಔಕ್ತಿಕವೆಂಬ ವ್ಯಾಕರಣ ಗ್ರಂಥದ (1394)ವರೆಗೆ. ಈ ವ್ಯಾಕರಣ ಗ್ರಂಥ ಭಾಷೆಯ ಇತಿಹಾಸದಲ್ಲಿ ಒಂದು ದೊಡ್ಡ ಮೈಲಿಗಲ್ಲು. ಈ ಅವಧಿ ಸುಮಾರು 12ನೆಯ ಶತಮಾನದಿಂದ 14ನೆಯ ಶತಮಾನದವರೆಗೆ ಹರಡಿದೆ.
  2. ಹದಿನೈದನೆಯ ಶತಮಾನದ ಆದಿಯಿಂದ 17ನೆಯ ಶತಮಾನದ ಮಧ್ಯ ಭಾಗದವರೆಗೆ, ಎಂದರೆ, ಪ್ರೇಮಾನಂದ ಮಹಾಕವಿ ಇನ್ನು ತರುಣನಾಗಿದ್ದಾಗಿನವರೆಗೆ.
  3. ಹದಿನೇಳನೆಯ ಶತಮಾನದ ಉತ್ತರಾರ್ಧದಿಂದ 1853ರವರೆಗೆ ಎಂದರೆ, ಪ್ರೇಮಾನಂದನಿಂದ ಹಿಡಿದು ಪ್ರಾಚೀನ ಕವಿತಾಸಂಪ್ರದಾಯದ ಬಹು ಸಮರ್ಥ ಪ್ರತಿನಿಧಿಯಾಗಿದ್ದ ದಯರಾಮನವರೆಗೆ.

ಮೊದಲನೆಯ ಅವಧಿ

ಬದಲಾಯಿಸಿ

ಈ ಅವಧಿಯಲ್ಲಿ ಈ ಸಾಹಿತ್ಯ ರೂಪಗಳು ಗೋಚರಿಸುತ್ತವೆ.

  1. ರಾಸು, ರಾಸ, ಅಥವಾ ರಾಸೋ -ಇದು ಮತೀಯ ಕಥೆಗಳನ್ನು ಪದ್ಯಗಳಲ್ಲಿ ಹೇಳುವ ಅಖ್ಯಾನ,
  2. ಕಥಾ,
  3. ಅನ್ಯಾಪದೇಸ,
  4. ಫಾಗು ಅಥವಾ ವಸಂತಕಾಲದ ಕವಿತೆ,
  5. ಬಾರಾಮಾಸೀ ಅಥವಾ ಹನ್ನೆರಡು ತಿಂಗಳುಗಳನ್ನು ವರ್ಣಿಸುವ ಕವಿತೆ,
  6. ಮಾತೃಕಾ ಮತ್ತು ಕಕ್ಕ, ಎಂದರೆ ನೀತಿಯನ್ನು ಬೋಧಿಸುವ ಪದ್ಯಗಳು, ಇವುಗಳಲ್ಲಿ ಒಂದೊಂದೂ ಒಂದೊಂದು ಅಕ್ಷರಮಾಲಿಕೆಯ ಅಕ್ಷರದಿಂದ ಪ್ರಾರಂಭವಾಗುತ್ತದೆ.
  7. ಸ್ತೋತ್ರಗಳು, ಭಾವಗೀತೆಗಳು,
  8. ಗದ್ಯಕೃತಿಗಳು
  9. ಔಕ್ತಿಕಗಳು ಅಥವಾ ಸಂಸ್ಕೃತ ವ್ಯಾಕರಣವನ್ನು ಕುರಿತ ಗುಜರಾತಿ ಗ್ರಂಥಗಳು.

ಈ ರೂಪಗಳೆಲ್ಲವೂ ಇತರ ಕೆಲವೂ 19ನೆಯ ಶತಮಾನದವರೆಗೂ ಅನುಸ್ಯೂತವಾಗಿ ಬೆಳೆದುಬಂದವು. ಈ ಅವಧಿಗೆ ಮುಂಚೆ ಪ್ರಣೀತವಾದ ಅನೇಕ ಗ್ರಂಥಗಳು ಬಹುಮುಖ್ಯವಾದ ಭಾಷಾ ಶಾಸ್ತ್ರೀಯ ಹಾಗೂ ಸಾಂಸ್ಕೃತಿಕ ವಿಷಯಗಳನ್ನು ಒದಗಿಸುತ್ತವೆ. ಈ ಪುಟ್ಟ ಲೇಖನದಲ್ಲಿ ಪ್ರಧಾನ ಗ್ರಂಥಕರ್ತರನ್ನಾಗಲೀ ಅವರ ಕೃತಿಗಳನ್ನಾಗಲಿ ಕುರಿತು ಹೇಳುವುದು ಕೂಡ ಅಸಾಧ್ಯವಾಗಿದೆ.

ಎರಡನೆಯ ಅವಧಿ

ಬದಲಾಯಿಸಿ

ಇಲ್ಲಿ ಗುಜರಾತೀ ಸಾಹಿತ್ಯದ ಅತ್ಯಂತ ಶ್ರೇಷ್ಠ ಕವಿಗಳಲ್ಲಿ ಒಬ್ಬನಾದ ನರಸಿಂಹ ಮೆಹತನ ಕೃತಿಗಳನ್ನು ಕುರಿತು ಪ್ರತ್ಯೇಕವಾಗಿ ಪ್ರಸ್ತಾವಿಸಬೇಕಾಗಿದೆ. ನರಸಿಂಹ ಸೌರಾಷ್ಟ್ರದ ಜುನಾಗಡದಲ್ಲಿನ ನಾಗರ ಬ್ರಾಹ್ಮಣ. ತನ್ನ ಅತ್ತಿಗೆಯ ಕಾಟದಿಂದ ಈತ ಭಕ್ತಿಯತ್ತ ತಿರುಗಿದನೆಂದು ಹೇಳಲಾಗಿದೆ. ಹನ್ನೆರಡರಿಂದ ಹದಿನಾರನೆಯ ಶತಮಾನದವರೆಗೆ ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಪ್ರವೃದ್ಧವಾಗುತ್ತಿದ್ದ ಭಕ್ತಿಪಂಥಗಳನ್ನು ಈ ಕವಿ ಬಹುಸಮರ್ಥವಾಗಿ ಪ್ರತಿನಿಧಿಸಿ ಅವುಗಳ ಮೇಲೆ ತನ್ನ ಮುದ್ರೆಯೊತ್ತಿ ಕವಿತಾ ಪ್ರತಿಭೆಯಿಂದ ಅವಕ್ಕೆ ನುಡಿಗೊಡುತ್ತಾನೆ. ಒಂದು ದೃಷ್ಟಿಯಲ್ಲಿ ಈತ ಸಮಾಜ ಸುಧಾರಕ; ಸಮಾಜದ ಕೆಲಸಕ್ಕೆ ಬಾರದ ಸತ್ತರೂಢಿಗಳಿಗೆ ಯಾವ ಗಮನವನ್ನೂ ಕೊಡಲಿಲ್ಲ. ಸ್ವತಃ ಅಸ್ಪೃಶ್ಯರೊಂದಿಗೆ ಸ್ವೇಚ್ಛೆಯಾಗಿ ಬೆರೆಯುತ್ತಿದ್ದ. ಅವರನ್ನು ಅವರ ಭಕ್ತಿಗಾಗಿ ಪ್ರೀತಿಸುತ್ತಿದ್ದ. ನರಸಿಂಹನ ಒಂದು ಪ್ರಖ್ಯಾತ ಪದ್ಯದಿಂದ ಮಹಾತ್ಮಗಾಂಧಿ ಹರಿಜನ ಎಂಬ ಶಬ್ದವನ್ನು ಎತ್ತಿಕೊಂಡರು. ಗಾಂಧಿಯವರಿಂದ ಪ್ರಖ್ಯಾತಿಯನ್ನು ಹೊಂದಿದ ಈತನ ವೈಷ್ಣವ ಜನತೋ ಎಂಬ ಕವಿತೆ ಈತನ ಜೀವನ ತತ್ತ್ವವನ್ನು ಬಹು ವಿಶದವಾಗಿ ಸಂಕ್ಷೇಪಿಸುತ್ತದೆ. ನರಸಿಂಹನ ಮುಖ್ಯ ಕೃತಿಗಳೆಂದರೆ ಜ್ಞಾನಭಕ್ತಿಶೃಂಗಾರ ಪರವಾದ ಪದಗಳು. ಈತನ ಶೃಂಗಾರ ಬಹಳ ಸಲ ಅಷ್ಟು ನವಿರಾಗಿರದೆ ಅಸಂಸ್ಕೃತವೆನಿಸಿದರೂ ಕೊನೆಗೆ ಭಕ್ತಿಯಲ್ಲಿ ಲೀನವಾಗುತ್ತದೆ. ಪದಗಳಲ್ಲಿನ ಈತನ ಶೈಲಿ ನಿಸ್ಸಂಶಯವಾಗಿ ತುಂಬ ಶ್ರೇಷ್ಠವಾದದ್ದು.

ಯಾರ ಹೆಸರು ಎಲ್ಲರ ಮನೆಮಾತಾಗಿದೆಯೋ ಅಂಥ ಮಹಾಭಕ್ತಳೂ ಅಸಮಾನ ಕವಯಿತ್ರಿಯೂ ಆದ ಮೀರಾಬಾಯಿಯ (1499-1547) ಕೃತಿಗಳನ್ನು ಪರಿಶೀಲಿಸದಿದ್ದರೆ ಗುಜರಾತೀ ಸಾಹಿತ್ಯದ ಯಾವ ಸಮೀಕ್ಷೆಯೂ ಸಮಗ್ರವೆನಿಸುವುದಿಲ್ಲ. ಗುಜರಾತು ಮತ್ತು ರಾಜಸ್ತಾನಗಳೆರಡೂ ಮೀರಾಬಾಯಿ ತಮಗೆ ಸೇರಿದವಳೆಂದು ಸ್ಪರ್ಧಿಸುತ್ತಿವೆ. ಆದರೆ ಹದಿನಾರನೆಯ ಶತಮಾನದವರೆಗೂ ಗುಜರಾತಿನಲ್ಲೂ ರಾಜಸ್ತಾನದಲ್ಲೂ ಒಂದೇ ಒಂದು ಭಾಷೆ ಪ್ರಚಲಿತವಾಗಿತ್ತೆಂಬ ಐತಿಹಾಸಿಕ ಸಂಗತಿಯನ್ನು ನೆನಪಿಗೆ ತಂದುಕೊಂಡರೆ ಈ ವಿವಾದ ಕೊನೆಗಾಣುತ್ತದೆ. ರಾಜಸ್ತಾನದ ಮೆಡ್ತಾ ಎಂಬ ಒಂದು ಸಣ್ಣ ಸಂಸ್ಥಾನದ ಅರಸನಾದ ರಾವ್ ದೂದಾಜೀ ಎಂಬ ಕೃಷ್ಣಭಕ್ತನ ಮೊಮ್ಮಗಳು ಮೀರಾ. ಈಕೆಯನ್ನು ಚಿತ್ತೋಡಿನ ಪ್ರಖ್ಯಾತ ರಾಣಾಸಿಂಗ ಅಥವಾ ಸಂಗ್ರಾಮಸಿಂಹನ ಮಗ ಭೋಜರಾಜನಿಗೆ ಕೊಟ್ಟು ಮದುವೆಯಾಗಿತ್ತು. ಮದುವೆಯಾದ ಸ್ವಲ್ಪಕಾಲದೊಳಗೆಯೇ ಮೀರಾ ವಿಧವೆಯಾದಳು. ತನ್ನ ಕೃಷ್ಣಭಕ್ತಿಯ ನಿಮಿತ್ತವಾಗಿ ತನ್ನ ಪತಿಯ ಸಂಬಂಧಿಕರಿಗೂ ಆಕೆಗೂ ಮನಸ್ಸು ಹೊಂದಿಕೊಳ್ಳಲಿಲ್ಲವಾದುದರಿಂದ ಆಕೆ ಮೇವಾಡವನ್ನು ತ್ಯಜಿಸಿ ದ್ವಾರಕೆಯಲ್ಲಿರತೊಡಗಿದಳು. ಮೀರಾ ಯಾವ ದೊಡ್ಡ ಗ್ರಂಥವನ್ನೂ ರಚಿಸಲಿಲ್ಲ. ಆದರೆ ಅವಳ ಪ್ರತಿಭೆ ಸಣ್ಣ ಸಣ್ಣ ಪದಗಳಲ್ಲಿ ವ್ಯಕ್ತವಾಗತೊಡಗಿತು. ಆಕೆಯ ಅತಿ ಮನೋಹರವಾದ ಕವಿತೆಯಲ್ಲಿ ಒಂದೇ ಒಂದು ಭಾವವಾದ ಅವಳ ಕೃಷ್ಣಪ್ರೇಮ ಹರಿದು ಬರುತ್ತದೆ. ಮೀರಾ ತನ್ನ ಪ್ರಭುವಿನ ಹಂಬಲವನ್ನು ಚೆಲುವಾದ ಕೆಲವೇ ಮಾತುಗಳಲ್ಲಿ ತೋಡಿಕೊಳ್ಳುತ್ತಾಳೆ. ಆಕೆಯ ಕವಿತೆಯಲ್ಲಿ ಗುಜರಾತು ಪ್ರಖರ ಪ್ರತಿಭಾವಿಲಾಸದಿಂದ ಶೋಭಿಸುವ ಅತಿಮಧುರ ಭಾವಗೀತಗಳನ್ನು ಪಡೆದಿದೆ.

ಭಾಲಣ ಮತ್ತು ಪದ್ಮನಾಭ ಎಂಬುವರು ನರಸಿಂಹನ ಸಮಕಾಲೀನ ಪ್ರಸಿದ್ಧ ಕವಿಗಳ ಪೈಕಿ ಶ್ರೇಷ್ಠರಾಗಿದ್ದಾರೆ. ಗುಜರಾತೀ ಭಾಷೆಯಲ್ಲಿ ಸಮಗ್ರವಾದ ಆಖ್ಯಾನಗಳನ್ನು ಮೊದಲು ರಚಿಸಿದವ ಕವಿ ಭಾಲಣ. ಇದಕ್ಕಾಗಿ ಈತನನ್ನು ಕೆಲವರು ಆಖ್ಯಾನ ರೂಪದ ಜನಕನೆಂದು ಕರೆಯುತ್ತಾರೆ. ಕಾನ್ಹಡದೇ ಪ್ರಬಂಧವೆಂಬ ಶಕ್ತಿಯುತವಾದ ಐತಿಹಾಸಿಕ ಚರಿತ್ರೆಯನ್ನು ಬರೆದ ಕವಿ ಪದ್ಮನಾಭ. ಮುಖ್ಯ ಅಖ್ಯಾನ ಲೇಖಕರಾದ ಭಾಲಣ ಮತ್ತು ಪ್ರೇಮಾನಂದ ಎಂಬಿಬ್ಬರ ನಡುವಣ ಅವಧಿಯನ್ನು ನಾಕರ್ ಮತ್ತು ವಿಷ್ಣುದಾಸರು ತುಂಬಿದ್ದಾರೆ.

ಆದರೆ ಪ್ರೇಮಾನಂದನ ವಿಷಯಕ್ಕೆ ಬರುವ ಮುಂಚೆ ಆಖೋ ಎಂಬ ಶ್ರೇಷ್ಠ ವೇದಾಂತ ಕವಿಯನ್ನು ಕುರಿತು ಒಂದೆರಡು ಮಾತುಗಳನ್ನು ಹೇಳುವುದು ಅಗತ್ಯ. ಈತ ಹದಿನೇಳನೆಯ ಶತಮಾನದಲ್ಲಿ ಬಾಳಿದವ. ಈತನ ಆಖೋಗೀತ (1659), ಅನುಭವ ಬಿಂದು ಮುಂತಾದ ಕೃತಿಗಳ ಹೆಸರನ್ನು ಓದಿದರೆ ಅವು ವೇದಾಂತ ತತ್ತ್ವವನ್ನು ಕುರಿತ ಗ್ರಂಥಗಳೆಂಬುದು ಸ್ಪಷ್ಟವಾಗುತ್ತದೆ. ಇಂಥ ಕೃತಿಗಳಲ್ಲಿ ಆಖೋವಿನ ಶೈಲಿ ಪೆಡಸಾಗಿದೆ. ಆದರೆ ಈತನ ದಾರ್ಶನಿಕ ಪದಗಳ ಪರಿಯೇ ಬೇರೆ. ಇವಕ್ಕೆ ಒಂದು ಸಾಂಪ್ರದಾಯಿಕ ಶೈಲಿಯ ಸೌಕರ್ಯವೂ ಒದಗಿದೆ. ಈ ಶೈಲಿ ನರಸಿಂಹ ಮೆಹತನ ಕಾಲದಿಂದಲೂ ಬೆಳೆದು ಬಂದಿರುವ ರಚನೆಗಳಿಂದಲೂ ಮತ್ತು ಗುಜರಾತಿನ ಜನಪದ ಸಾಹಿತ್ಯದಲ್ಲಿ ರೂಪಗೊಂಡಿರುವ ತತ್ತ್ವಜ್ಞಾನಿಗಳ ಉಪದೇಶಗಳಿಂದಲೂ ಈತನದೇ ಆದ ಛಪ್ಪಾಗಳಿಂದ, ಎಂದರೆ, ಆರು ಸಾಲಾಗಿ ರಚಿಸಿದ ಛೋಪಾಯಿಗಳಿಂದಲೂ ಪುಷ್ಟಗೊಂಡಿದೆ.

ಗುಜರಾತಿಯಲ್ಲಿ ನಿಸ್ಸಂದೇಹವಾಗಿ ಆಖೋ ತುಂಬ ಶ್ರೇಷ್ಠನಾದ ದಾರ್ಶನಿಕ ಕವಿ.

ಆಖೋವಿನ ಹಿಂದುಗಡೆಯೇ ಪ್ರೇಮಾನಂದ (1634-1700) ಗೋಚರಿಸುತ್ತಾನೆ. ಈತ ಅತ್ಯಂತ ಶ್ರೇಷ್ಠನಾದ ಆಖ್ಯಾನ ಕವಿ. ನಾಕರನ ಸಾಹಿತ್ಯಕರ್ಮದ ಬೀಡಾದ ವಡೋದರಕ್ಕೆ ಸೇರಿದವನೀತ. ಇವನು ಅನೇಕ ಆಖ್ಯಾನಗಳನ್ನು ರಚಿಸಿದ್ದಾನೆ. ಅವುಗಳ ಪೈಕಿ ನಳಾಖ್ಯಾನ, ಸುದಾಮ ಚರಿತ್ರೆ, ಮಾಮೇರುಣ್ (ನರಸಿಂಹ ಮೆಹತನ ಜೀವನ ಚರಿತೆಯಲ್ಲಿನ ಒಂದು ಪ್ರಸಂಗವನ್ನು ಕುರಿತದ್ದು) ಮತ್ತು ದಶಮಸ್ಕಂಧ ತುಂಬ ಗಮನಾರ್ಹವಾಗಿವೆ. ಪ್ರೇಮಾನಂದನ ಕೃತಿಗಳು ಗುಜರಾತಿನಲ್ಲೆಲ್ಲ ಜನಪ್ರಿಯವಾಗಿವೆ. ಒಬ್ಬ ವಿಮರ್ಶಕ ಮನಮುಟ್ಟ ಹೇಳಿರುವಂತೆ ಪ್ರೇಮಾನಂದ ಎಲ್ಲ ಗುಜಾರಾತೀ ಕವಿಗಳಿಗಿಂತಲೂ ಅಚ್ಚಗುಜರಾತೀ ಕವಿ. ಆತನನ್ನು ಜನತೆ ಮೆಚ್ಚಿಕೊಂಡಿರುವುದಕ್ಕೆ ಇದೂ ಒಂದು ಕಾರಣ. ಗುಜರಾತೀ ಸಮಾಜದ ಪ್ರತಿಯೊಂದು ಜಾತಿ ಮತ್ತು ಪಂಗಡಗಳ ಜೀವನಕ್ರಮಗಳನ್ನು ಆತ ಬಹು ಚೆನ್ನಾಗಿಯೂ ವಿಶದವಾಗಿಯೂ ಕಂಡಿದ್ದಾನಲ್ಲದೆ ತನ್ನ ಕವಿತೆಗಳಲ್ಲಿ ಅವನ್ನು ಸ್ವಾರಸ್ಯವಾಗಿ ವರ್ಣಿಸಿದ್ದಾನೆ. ಕೆಲವು ಸಲ ಪುರಾಣಗಳಲ್ಲಿ ಗೋಚರಿಸುವ ಮಹಾ ಪಾತ್ರಗಳ ಗುಜರಾತೀರೂಪ ಮೂಲದ ಘನತೆಗೆ ಭಂಗ ತರುವಂತಿತ್ತು. ಆದರೆ ಒಟ್ಟಿನಲ್ಲಿ ಪ್ರೇಮಾನಂದನಿಗೆ ಅದೊಂದು ಮೂಲಧನವಾಗಿತ್ತು. ಏಕೆಂದರೆ ಗುಜರಾತೀ ಜನರ ಅನುಭವದ ಮಿತಿಗೆ ತನ್ನ ಕೃತಿಗಳನ್ನು ತರಲು ಅದು ಮುಖ್ಯ ಸಾಧನವಾಗಿತ್ತು. ಪ್ರೇಮಾನಂದನ ವಿಪುಲ ಲೇಖನಗಳನ್ನು ವ್ಯಾಸಂಗ ಮಾಡಿದ ವಿದ್ವಾಂಸನೊಬ್ಬ ಹದಿನೇಳನೆಯ ಶತಮಾನದ ಗುಜರಾತಿನ ಸಮಾಜದ ಅನೇಕ ಮುಖಗಳ ನೈಜಚಿತ್ರವನ್ನು ಇಲ್ಲಿ ಕಾಣಬಹುದು ಎಂದು ಹೇಳಿದ್ದರೆ ಅದು ಅತ್ಯುಕ್ತಿಯಾಗಲಾರದು. ಕಥೆ ಹೇಳುವುದರಲ್ಲೂ ವರ್ಣನೆಗಳಲ್ಲೂ ಗುಜರಾತೀ ಸಾಹಿತ್ಯದಲ್ಲಿ ಪ್ರೇಮಾನಂದನಿಗೆ ಸರಿಸಮವಾದವರು ಯಾರೂ ಇಲ್ಲ. ಈ ಕೆಲಸಕ್ಕೆ ಆತನಿಗೆ ಬಹು ದಕ್ಷವಾದ ಶೈಲಿಯೂ ವಿಪುಲವಾದ ಭಾಷಾಪ್ರಭುತ್ವವೂ ಇದೆ. ಆತನ ಕವಿತೆಗಳೆಲ್ಲವೂ ಅಪಭ್ರಂಶದ ಕಥಾ - ಕಾವ್ಯಗಳ ಕಾಲದಿಂದಲೂ ಜನರಿಗೆ ಇಷ್ಟವಾಗಿದ್ದ ದೇಸೀ ಛಂದಸ್ಸುಗಳಲ್ಲಿವೆ. ಈ ದೆಸೆಯಿಂದ ಆತನ ಕೃತಿಗಳನ್ನು ಹಾಡುವವರು ಎಷ್ಟು ದೊಡ್ಡ ಸಭೆಗಳಲ್ಲೂ ಜನರ ಗಮನವನ್ನು ಸೆಳೆದು ಮೆಚ್ಚುಗೆಯನ್ನು ಪಡೆಯಬಹುದಾಗಿತ್ತು. ಪ್ರೇಮಾನಂದ ಆಖ್ಯಾನ ರೂಪದ ಪರಮೋಚ್ಚಸ್ತರವನ್ನು ಮುಟ್ಟಿರುವ ಕವಿ. ಆತನ ಹಿಂದೆಯೂ ತರುವಾಯವೂ ಯಾರೂ ಈ ಮಟ್ಟಕ್ಕೆ ಏರಲಿಲ್ಲ.

ಪ್ರೇಮಾನಂದನ ತರುವಾಯ ಶಾಮಲಭಟ್ಟನೆಡೆಗೆ (1718-1765) ಬರುತ್ತೇವೆ. ಪದ್ಯಗಳಲ್ಲಿ ಈತ ಜನಪ್ರಿಯ ಕಥೆಗಳನ್ನು ವಿಪುಲವಾಗಿ ರಚಿಸಿದ್ದಾನೆ. ಅಹಮದಾಬಾದಿನ ಒಂದು ಹರವಿನಲ್ಲಿ ಈತ ವಾಸಿಸುತ್ತಿದ್ದ. ಮುಂದೆ ಖೇಡಾ ಜಿಲ್ಲೆಯ ರಖಿದಾಸ್ ಎಂಬೊಬ್ಬ ಜಮೀನುದಾರನ ಆಶ್ರಯದಲ್ಲಿದ್ದ. ಶಾಮಲನ ಮುಖ್ಯ ಕೃತಿಗಳೆಂದರೆ, ಆತನ ಕಥಾಪುಸ್ತಕಗಳು. ಇವುಗಳೆಲ್ಲ ಬಹುತರವಾಗಿ ವಿಕ್ರಮ ಭೋಜ ಮತ್ತು ಇಂಥ ಇತರ ಜನಪ್ರಿಯ ಶೂರರ ಕತೆಗಳ ಸುತ್ತ ಹೆಣೆದುಕೊಳ್ಳುತ್ತ ಹೋಗುತ್ತವೆ. ಇಲ್ಲಿ ಗುಜರಾತಿನ ಜೈನ ಲೇಖಕರು ಸಂಸ್ಕೃತ, ಪ್ರಾಕೃತ ಮತ್ತು ಪ್ರಾಚೀನ ಗುಜರಾತಿಯಲ್ಲಿ ರಚಿಸಿದ ವಿಪುಲ ಜಾನಪದ ಕಥೆಗಳು ಮತ್ತು ಜನಪ್ರಿಯ ಕಥೆಗಳನ್ನು ಎತ್ತಿ ಹೇಳಬಹುದು. ಈ ಹಳೆಯ ಗ್ರಂಥಗಳಿಗೆ ತಾನು ತುಂಬ ಋಣಿ ಎಂದು ಶಾಮಲ ಮನಃಪೂರ್ವಕವಾಗಿ ಒಪ್ಪಿಕೊಂಡಿದ್ದಾನೆ.

ವರ್ಣನೆಯಲ್ಲೂ ಕಥೆ ಹೇಳುವುದರಲ್ಲೂ ಶಾಮಲ ತುಂಬ ಗಟ್ಟಿಗ. ಈ ಕಾರಣದಿಂದಲೇ ಈತನ ಕಥೆಗಳು ಹುಟ್ಟಿಕೊಂಡು ಹರಡಿದ ಮೇಲೆ ಹಿಂದಿನ ಕಥೆಗಳೆಲ್ಲ ಮೂಲೆಪಾಲಾಗಿ ಜನ ಅವನ್ನು ಮರೆತುಬಿಟ್ಟರು. ಜನಪ್ರಿಯ ಕಥಾ ಕ್ಷೇತ್ರದಲ್ಲಿ ಶಾಮಲನ ಸ್ಥಾನ ಆಖ್ಯಾನ ಕ್ಷೇತ್ರದಲ್ಲಿ ಪ್ರೇಮಾನಂದನದಕ್ಕೆ ಸಮಾನವಾಗಿದೆ.

ಮೂರನೆಯ ಅವಧಿ

ಬದಲಾಯಿಸಿ

ಪ್ರಾಚೀನ ಕವಿತಾ ಸಂಪ್ರದಾಯದ ಕೊನೆಯ ಸಮರ್ಥ ಪ್ರತಿನಿಧಿ ದಯಾರಾಮ (1783-1853). ಈತ ವಡೋದರದ ಹತ್ತಿರವಿರುವ ಚಾಂದೋಡಿಯಲ್ಲಿ ಜನಿಸಿದ ಮತ್ತು ತನ್ನ ಜೀವಿತ ಕಾಲದ ಬಹು ಭಾಗವನ್ನು ಚಾಂದೋಡಿಗೆ ಕೆಲವು ಮೈಲಿಗಳ ದೂರದಲ್ಲಿದ್ದ ದಭೋಯೀಯಲ್ಲಿ ಕಳೆದ. ಈತ ಅನೇಕ ದೇಶಗಳನ್ನು ಸುತ್ತಿದವ ಮತ್ತು ಸಂಗೀತದಲ್ಲಿ ಒಳ್ಳೆ ಪರಿಶ್ರಮಿ. ಸಾಂಪ್ರದಾಯಿಕವಾಗಿ ಹೇಳುವ ಅರ್ಥದಲ್ಲಿ ಈತ ಪಂಡಿತನಲ್ಲ. ಆದರೆ ಸಂಸ್ಕೃತದಲ್ಲಿ ನಿಷ್ಣಾತ, ಗುಜರಾತಿಯೊಂದರಲ್ಲಿ ಅಲ್ಲದೆ, ಈತ ವ್ರಜ, ಮರಾಠಿ, ಪಂಜಾಬೀ, ಸಂಸ್ಕೃತ ಮತ್ತು ಉರ್ದು ಭಾಷೆಗಳಲ್ಲೂ ಪದಗಳನ್ನು ರಚಿಸಿದ್ದಾನೆ. ವಲ್ಲಭಾಚಾರ್ಯ ಪಂಥದ ನಿಷ್ಠಭಕ್ತನಾದ ಈತ ಆ ಪಂಥದ ಶುದ್ಧಾದ್ವೈತ ದರ್ಶನವನ್ನು ವಿವರಿಸಿ ಅನೇಕ ಗ್ರಂಥಗಳನ್ನು ಬರೆದಿದ್ದಾನೆ. ಆದರೆ ಕವಿ ಎಂಬ ಈತನ ಮಹಾಯಶಸ್ಸು ಇವನ ಕೃತಿಗಳ ಪೈಕಿ ಬಹು ಸ್ವಲ್ಪ ಭಾಗದ ಮೇಲೆ, ಎಂದರೆ ಈತನ ಕೃಷ್ಣ ಗೋಪಿಯರ ಪ್ರಣಯವನ್ನು ಕುರಿತ ಭಾವಗೀತಗಳ ಮೇಲೆ ನಿಂತಿದೆ. ಇದಕ್ಕೇನು ಕಾರಣ ಎಂದರೆ, ಈ ಗರಬೀಗಳು ಗುಜರಾತಿಗೆ ವಿಶಿಷ್ಟವಾಗಿರುವ ಗರ್ಬಾ ನರ್ತನಕ್ಕೆ ಅನುಗುಣವಾದ ಜನಪ್ರಿಯ ಹಾಡುಗಳನ್ನು ಒದಗಿಸುತ್ತವೆ. ಈ ಪದಗಳು ಮತ್ತು ಗರಬೀಗಳು ಅನೇಕ ಶತಸಂಖ್ಯೆಯಲ್ಲಿ ಈಗಲೂ ರಕ್ಷಿತವಾಗಿವೆ. ಇವು ಗುಜರಾತಿನಲ್ಲಿ ಈ ಕವಿಯನ್ನು ಅಮರನನ್ನಾಗಿ ಮಾಡಿವೆ.

ದಯಾರಾಮನ ಕಾಲಕ್ಕಾಗಲೇ ಗುಜರಾತಿನಲ್ಲಿ ಮೊಗಲರ, ಪೇಷ್ವೆಗಳ ಪ್ರಭುತ್ವ ಕೊನೆಗೊಂಡಿತ್ತು. ಕೆಲವು ಜಿಲ್ಲೆಗಳಲ್ಲಿ ಗಾಯಕವಾಡರೂ ಮತ್ತೆ ಕೆಲವು ಕಡೆ ಬ್ರಿಟಿಷರೂ ನೆಲೆಗೊಂಡಿದ್ದರು. ನರ್ಮದನೆಂದು ಜನಾಖ್ಯಾತನಾಗಿ ನವೋದಯದ ಕಹಳೆಯನ್ನೂದಿದ ನರ್ಮದಾಶಂಕರನೆಂಬ ಕವಿ 1833 ರಲ್ಲಿ ಸ್ವರ್ಗಸ್ಥನಾದ. ಆದರೆ ಆತ ಗತಿಸುವುದಕ್ಕೆ ಎಂಟು ವರ್ಷಗಳ ಮುಂಚೆ, 1844 ರಲ್ಲಿ ದುರ್ಗಾರಾಮ ಮಂಛಾರಾಮ ಮೆಹತಾಜೀ ಎಂಬ ಗುಜರಾತಿನ ಪ್ರಥಮ ಸಮಾಜ ಸುಧಾರಕ ಸೂರತ್ತಿನಲ್ಲಿ ತನ್ನ ಮಾನವ ಧರ್ಮ ಸಭೆಯನ್ನು ಸಂಸ್ಥಾಪಿಸಿದ. ಒಂದು ನೂರು ವರ್ಷಗಳ ಕಾಲ ಸಾಹಿತ್ಯದಲ್ಲೂ ವಿದ್ಯಾ ಪ್ರಸಾರದಲ್ಲೂ ಪ್ರಧಾನ ಕಾರ್ಯವನ್ನೆಸಗಿರುವ ಗುಜರಾತ್ ಭಾಷಾ ಸಂಘ (ಈಗಿನ ಗುಜರಾತ್ ವಿದ್ಯಾಸಭಾ) ಎ. ಕೆ. ಫೋಬ್ರ್ಸ್‌ ಎಂಬ ಗುಜರಾತಿನ ಪ್ರಥವi ಆಂಗ್ಲ ಚರಿತ್ರೆಕಾರ ಮತ್ತು ಕವಿ ದಲಪತರಾಮ-ಇವರಿಂದ 1848 ರಲ್ಲಿ ಸ್ಥಾಪಿತವಾಯಿತು. ನರ್ಮದಾಶಂಕರ ಈ ಸಂಘಸ್ಥಾಪನೆಯ ಪ್ರಯೋಜನಗಳನ್ನು ಕುರಿತು ತನ್ನ ಪ್ರಥಮ ಗದ್ಯ ಲೇಖನವನ್ನು ಮುಂಬಯಿಯಲ್ಲಿ ಬುದ್ಧಿವರ್ಧಕ ಸಭೆಯ ಮುಂದೆ 1851 ರಲ್ಲಿ ಓದಿದ. ಈ ಸಂಗತಿ ನಡೆದ ಸ್ವಲ್ಪ ಕಾಲದಲ್ಲೇ, 1857 ರಲ್ಲಿ, ಮುಂಬಯಿಯ ವಿಶ್ವವಿದ್ಯಾಲಯ ಸ್ಥಾಪಿತವಾಯಿತು. ಪಾಶ್ಚಾತ್ಯ ಸಂಪರ್ಕದಿಂದ ಒಂದು ಹೊಸಯುಗ ಆಗಲೇ ಉದಿಸಿತ್ತು. ಸಂಸ್ಕೃತ ಸಾಹಿತ್ಯವನ್ನೂ ಭಾರತದ ಪ್ರಾಚೀನ ಸಂಸ್ಕೃತಿಯ ಜನ ಹೊಸ ದೃಷ್ಟಿಯಿಂದ ವ್ಯಾಸಂಗಿಸಲು ತೊಡಗಿದ್ದರು. ಪ್ರಬಂಧ, ನಾಟಕ, ಕಾದಂಬರಿ, ಸಣ್ಣ ಕಥೆ, ಜೀವನಚರಿತ್ರೆ ಮುಂತಾದ ಹೊಸ ಸಾಹಿತ್ಯದ ಪ್ರಕಾರಗಳನ್ನು ಬೆಳೆಸಲು, ವರ್ಧಿಸುತ್ತಿರುವ ಸಾಮಥರ್ಯ್‌ದಿಂದ ಬೆಳೆಸಲು ಸಾಹಿತಿಗಳು ಯತ್ನಗೊಂಡರು. ಇಂಗ್ಲಿಷ್ ಕವಿಗಳಲ್ಲಿ ಅತ್ಯುತ್ತಮರಾದವರ ಕೃತಿಗಳಿಂದ ಪ್ರಭಾವಿತವಾಗಿ ಭಾವಗೀತೆಗಳು ಹುಟ್ಟಿಕೊಂಡವು. ಗುಜರಾತಿನ ಪ್ರತಿಭಾವಂತ ಕಲೆಗಾರ ತನ್ನ ಮನಸ್ಸನ್ನು ಜೀವನ ಮತ್ತು ಸಾಹಿತ್ಯಗಳಲ್ಲೇಳುವ ಹೊಸ ತರಂಗಗಳಿಗೆ ಯಾವಾಗಲೂ ತೆರದೇ ಇದ್ದಾನೆ ಮತ್ತು ಈ ಸಾಹಿತ್ಯ ರೂಪಗಳೆಲ್ಲ ಈಗಿನ ಕಾಲದವರೆಗೂ ಅನೇಕ ವಿಧಗಳಲ್ಲಿ ವಿಕಾಸಗೊಳ್ಳುತ್ತಲೇ ಬಂದಿವೆ. ಆಧುನಿಕ ಕಾಲದಲ್ಲಿ ಸಾಹಿತ್ಯದ ವಿವಿಧ ರೂಪಗಳಲ್ಲಿ ಜಯಪ್ರದವಾದ ಪ್ರಯತ್ನಗಳನ್ನು ನಡೆಸಿರುವ ಪ್ರಧಾನ ಲೇಖಕರ ಹೆಸರನ್ನು ಸಹ ಎತ್ತಿ ಹೇಳಲು ಇಲ್ಲಿ ಅವಕಾಶವಿಲ್ಲ. ಎಲ್ಲೋ ಕೆಲವು ಗ್ರಂಥಕರ್ತರ ಮತ್ತು ಅವರ ಮುಖ್ಯ ಕೃತಿಗಳು- ಇವು ಕೂಡ ಸಮಗ್ರವಾಗಿಲ್ಲದಿರಬಹುದು- ಒಂದು ಚಿಕ್ಕ ಪಟ್ಟಿಯನ್ನು ಇಲ್ಲಿ ಕೊಡಬಹುದು, ಅಷ್ಟೆ.

ಈಗ ನಮ್ಮ ವಿವೇಚನೆ 19ನೆಯ ಶತಮಾನವನ್ನು ದಾಟಿ 20ನೆಯ ಶತಮಾನದ ಮೊದಲ ಅರ್ಧಕ್ಕೆ ಕಾಲಿಡುತ್ತದೆ.

ಇಂಗ್ಲೀಷ್ ಸಾಹಿತ್ಯದಿಂದಲೂ ಸಮಾಜ ಪರಿಷ್ಕರಣದ ಭಾವನೆಗಳಿಂದಲೂ ಪ್ರೇರಿತನಾದ ನರ್ಮದ ಕಾದಂಬರಿಯನ್ನು ಬಿಟ್ಟು ಮಿಕ್ಕೆಲ್ಲ ಸಾಹಿತ್ಯ ಪ್ರಕಾರಗಳಲ್ಲೂ ಪ್ರಯತ್ನಗಳನ್ನು ನಡೆಸಿದ್ದಾನೆ. ಆದರೆ ಕವಿತೆಯಲ್ಲಿ ಆತನ ಶೈಲಿ ಅಷ್ಟು ನವುರಾಗಿಲ್ಲ. ಸಕಲ ವಿಶಾರದನಾದ ನರಸಿಂಹರಾಲ್ ಎಂಬಾತನ ಲೇಖನಿಯಿಂದ ಮಾತ್ರ ಮೊದಲ ಬಾರಿಗೆ ಅತ್ಯುತ್ತಮವಾದ ಕೆಲವು ಭಾವಗೀತೆಗಳು ಹೊರಹೊಮ್ಮಿವೆ. ಮಣಿಶಂಕರಭಟ್ಟ (ಕಾಂತ) ಮತ್ತು ಕಲಾಪೀ ಎಂಬವರು ಸಹ ಗಮನಾರ್ಹರಾದ ಸಮಕಾಲೀನರು. ಅನೇಕ ಧ್ಯೇಯಪುರ್ಣ ನಾಟಕಗಳನ್ನೂ ಅತಿ ಮನೋಹರವಾದ ಭಾವಗೀತೆಗಳನ್ನೂ ರಚಿಸಿರುವ ಕವಿ ನಾನಾಲಾಲ ಆಧುನಿಕ ಗುಜರಾತಿ ಸಾಹಿತ್ಯದಲ್ಲಿನ ಅತಿ ವಿಲಕ್ಷಣಕವಿ. ವಿದ್ವಾಂಸ - ವಿಮರ್ಶಕ ಮತ್ತು ಕವಿಯಾದ ಬಿ. ಕೆ. ಥಾಕೂರ್ ಎಂಬಾತ ತಲೆಮಾರಿಗೆ ಸೇರುತ್ತಾನೆ. ಸುಂದರರಾಮ್ ಮತ್ತು ಉಮಾಶಂಕರ ಜೋಶಿ ಎಂಬವರು ಥಾಕೂರ್ ಪಂಥದ ಕವಿತ್ವವನ್ನು ರಚಿಸುವುದರಲ್ಲಿ ಅತ್ಯಂತ ಯಶಸ್ವಿಗಳಾಗಿದ್ದಾರೆ. ಆದರೆ ಇವರು ಥಾಕೂರ ನಂತಲ್ಲದೆ ಗಾಂಧಿಯವರ ಭಾವನೆ ಮತ್ತು ಸ್ವಾತಂತ್ರ್ಯ ಚಳುವಳಿಗಳಿಂದ ಗಾಢವಾಗಿ ಪ್ರಭಾವಿತರಾಗಿದ್ದಾರೆ. ಜೋಶಿ (1967) ಜ್ಞಾನಪೀಠ ಪ್ರಶಸ್ತಿಯನ್ನು ಗಳಿಸಿರುವ ಕವಿಶ್ರೇಷ್ಠ (ನಿಷೀತ್). ಶೇಷ್ (ಆರ್. ವಿ. ಪಾಠಕ್) ಮತ್ತು ಮುಸಿಕಾರ್ (ಆರ್. ಸಿ. ಪರೀಖ್) ಎಂಬವರು ಶ್ಲಾಘ್ಯವಾದ ಕವಿತೆಯನ್ನು ಬರೆದಿದ್ದಾರೆ. ಮನ್ಶುಖಿಲಾಲ್ ಜ್ಹಾವೇರಿ, ಸ್ನೇಹರಶ್ಮಿ, ಚಂದ್ರವದನ ಮೆಹತಾ ಬೇಟೈ, ಕರ್ಸಂದಾಸ್ ಮಾಣಿಕ್ ಮತ್ತು ಇಂದೂಲಾಲ್ ಗಾಂಧಿ, ರಾಜೇಂದ್ರಷಹ ಮತ್ತು ನಿರಂಜನ ಭಗತ್ ಎಂಬವರು ಇತರ ಪ್ರಸಿದ್ಧ ಗುಜರಾತೀ ಕವಿಗಳು.

ನರ್ಮದ ಸಾಹಿತ್ಯಗುಣವುಳ್ಳ ಅನೇಕ ನಾಟಕಗಳನ್ನು ಬರೆದಿದ್ದಾನೆ. ಆದರೆ ರಣಛೋಡ್ಭಾಯ್ ಉದೈರಾಂ ಎಂಬಾತ ನಾಟಕರಂಗದ ಮೇಲೆ ತುಂಬ ಹೆಸರು ಗಳಿಸಿರುವ ನಾಟಕಗಳನ್ನು ರಚಿಸಿದ ಪ್ರಥಮ ಗುಜರಾತಿ ನಾಟಕಕಾರ. ಈತನದಾದ ಮೇಲೆ ನಭುಭಾಯಿಯ ಕಾಂತಾನಾಟಕ ಮತ್ತು ರಮಣ್ ಭಾಯ್ ನೀಲಕಂಠನ ರಾಯ್ನೋ ಪರ್ವತ ಎಂಬ ನಾಟಕಗಳು ಬರುತ್ತವೆ. ಇವೆರಡೂ ತಮ್ಮ ಶ್ರೇಷ್ಠಗುಣಗಳಿಂದ ಸ್ಥಿರವಾಗಿ ನಿಲ್ಲಬಲ್ಲ ನಾಟಕಗಳು. ಇದಾದ ಮೇಲೆ ಕೆ. ಎಂ. ಮುನ್ಷಿಯ (ಪೌರಾಣಿಕ ಮತ್ತು ಸಾಮಾಜಿಕ) ಗದ್ಯನಾಟಕಗಳತ್ತಲೂ ಬಟುಭಾಯಿಯ ಏಕಾಂಕ ನಾಟಕಗಳತ್ತಲೂ ನಾವು ಬರುತ್ತೇವೆ. ಉಮಾಶಂಕರ ಜೋಶಿ ತುಂಬ ಯಶಸ್ವಿಗಳಾದ ಏಕಾಂಗ ನಾಟಕಗಳನ್ನು ಬರೆದಿದ್ದಾನೆ. ಚಂದ್ರವದನ ಮೆಹತ, ತಾನೇ ಒಳ್ಳೆ ನಟನೂ ನಿರ್ದೇಶಕನೂ ಆಗಿದ್ದು, ರಂಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಅನೇಕ ಸಾಹಿತ್ಯಕ ನಾಟಕಗಳನ್ನು ರಚಿಸಿದ್ದಾನೆ. ಶ್ರೀಮತಿ ಹಂಸಾ ಮೆಹತ ಪೇಕ್ಸ್‌ಪಿಯರಿನ ಎರಡು ನಾಟಕಗಳನ್ನು ತರ್ಜುಮೆ ಮಾಡುವುದರ ಜೊತೆಗೆ ಕೆಲವು ಸ್ವಂತ ನಾಟಕಗಳನ್ನೂ ಬರೆದು ರಾಮಾಯಣವನ್ನು ಪದ್ಯರೂಪದಲ್ಲಿ ಭಾಷಾಂತರಿಸಿ ಪ್ರಕಟಿಸಿದ್ದಾಳೆ. ಯಶವಂತ ಪಾಂಡ್ಯ. ಆರ್. ಸಿ. ಪರೀಖ್, ಜಯಂತೀಲಾಲ್, ಶ್ರೀಧರಾಣಿ, ಚುನಿಲಾಲ್ ಮಡಿಯಾ, ಗುಲಾಬ್ದಾಸ್ ಬ್ರೋಕರ್, ಪುಷ್ಕರ್ ಚಂದರವಾರ್ಕರ್ ಎಂಬವರು ಇತರ ಯಶಸ್ವೀ ನಾಟಕಕಾರರು.

ಕಾದಂಬರಿ

ಬದಲಾಯಿಸಿ

ಹತ್ತೊಂಬತ್ತನೆಯ ಶತಮಾನದಲ್ಲಿ ಅನೇಕ ಕಾದಂಬರಿಗಳು ಇಂಗ್ಲಿಷ್ ಮತ್ತು ಇತರ ಭಾಷೆಗಳಿಂದ ಭಾಷಾಂತರಗೊಂಡವು. ಆದರೆ ಗುಜರಾತಿಯಲ್ಲೇ ಬರೆದ ಸ್ವತಂತ್ರ ಪ್ರಥಮ ಕಾದಂಬರಿ ಎಂದರೆ 1868ರಲ್ಲಿ ಪ್ರಕಟವಾದ ನಂದಶಂಕರನ ಕರಣ್ ಘೆಲೋ ಎಂಬುದು. ಆ ಕಾದಂಬರಿ ವಸ್ತು ಮಧ್ಯಯುಗದ ಗುಜರಾತಿನ ಚರಿತ್ರೆಯಿಂದ ಆರಿಸಿಕೊಂಡದ್ದು. ಇದು ಪ್ರಕಟವಾದ ಹತ್ತು ವರ್ಷಗಳೊಳಗೆ ಗೋವರ್ಧನ ರಾಮನ ಸರಸ್ವತೀ ಚಂದ್ರವೆಂಬ ಕಾದಂಬರಿ ಬರುತ್ತದೆ. ಮುಂದೆ ಬರುವ ಜನ ತನ್ನನ್ನು ಕಡೆಗಾಣಿಸಲಾಗದಷ್ಟು ಮಹಾಕಾವ್ಯದ ಗಾಂಭೀರ್ಯವನ್ನು ಮೆರೆಸುವ ಬಹು ಘನವಾದ ಕಾದಂಬರಿ ಇದು. ಕೆ.ಎಂ. ಮುನ್ಷಿಯ ಐತಿಹಾಸಿಕ ಮತ್ತು ಸಾಮಾಜಿಕ ಕಾದಂಬರಿಗಳು ಕತೆಯನ್ನು ಕಳಕಳನೆ ಹೊಳೆವಂತೆ ಹೇಳುತ್ತವೆಯಲ್ಲದೆ ಬೆರಗು ಮೂಡಿಸುವಂತೆ ನಾಟಕೀಯವಾಗಿಯೂ ಇದ್ದು ವಿಲಕ್ಷಣವಾಗಿವೆ. ಗುಜರಾತಿ, ಹಿಂದಿ ಮತ್ತು ಸಂಸ್ಕೃತ ಭಾಷಾ ಪ್ರಸಾರಕ್ಕಾಗಿ ಭಾರತೀಯ ಸಂಸ್ಕೃತಿಯ ಪುನರುಜ್ಜೀವನಕ್ಕಾಗಿ ಮುನ್ಷಿ ದಂಪತಿಗಳು ಮಾಡಿದ ಕೆಲಸಗಳು ಅದ್ವಿತೀಯವಾದುವು. ಅವರು ಸ್ಥಾಪಿಸಿದ ಭಾರತೀಯ ವಿದ್ಯಾಭವನ ಭಾರತದ ಚರಿತ್ರೆಯಲ್ಲಿ ಮರೆಯಲಾಗದ ಹೆಸರಾಗಿದೆ. ಯುಗಮೂರ್ತಿ ವಾರ್ತಾಕರ್ ಎಂದು ನ್ಯಾಯವಾಗಿಯೇ ವಿಮರ್ಶಕರು ಹೊಗಳುವ ರಮಣಲಾಲ ದೇಸಾಯಿ ನಾಟಕಗಳು, ಸಣ್ಣ ಕಥೆಗಳು, ಕಾದಂಬರಿಗಳು, ಸಾಹಿತ್ಯ ಮತ್ತು ಇತಿಹಾಸಗಳ ಮೇಲಿನ ಪ್ರಬಂಧಗಳು-ಹೀಗೆ ಹಲವು ಪ್ರಕಾರಗಳಲ್ಲಿ ದುಡಿದಿದ್ದಾನೆ. ಸತ್ಯಾಗ್ರಹ ಚಳವಳಿಯನ್ನು ಕುರಿತ ದಿವ್ಯ ಚಕ್ಷು ಎಂಬುದು ಅವುಗಳಲ್ಲೊಂದು. ಮೇಘಾನಿ, ಧೂಮಕೇತು, ಚುನಿಲಾಲ್ ಷಹ, ಪನ್ನಾಲಾಲ್ ಪಟೇಲ್, ಗುಣವಂತರಾಯ್ ಆಚಾರ್ಯ ಮತ್ತು ದರ್ಶಕ ಎಂಬುವರು ಇತರ ಜನಪ್ರಿಯ ಕಾದಂಬರಿಕಾರರು. ಮಡಿಯಾ, ಪೆಟ್ಲೀಕರ್. ಚಂದರವಾರ್ಕರ್, ಪೀತಾಂಬರ್ ಪಟೇಲ್, ಮುಂತಾದವರು ಕಿರಿಯ ಕಾದಂಬರಿಕಾರರಲ್ಲಿ ಕೆಲವರು.

ಸಣ್ಣಕಥೆ

ಬದಲಾಯಿಸಿ

ಮಲಯಾನಿಲ (ಕಾಂಚನಲಾಲ್ ಮೆಹತ) ಮೊದಲು ಆಮೇಲೆ ಮಟುಭಾಯ್ ಕಾಂತಾವಾಲಾ ಮತ್ತು ಕೆ. ಎಂ. ಮುನ್ಷಿಯವರು ಯಶಸ್ವೀ ಸಣ್ಣ ಕಥೆಗಳನ್ನು ಬರೆದರು. ಗುಜರಾತಿಯಲ್ಲಿ ಆರ್.ವಿ. ಪಾಠಕ್ ಅವರು ಧೂಮಕೇತು ಮತ್ತು ದ್ವಿರೇಫ್ ಎಂಬ ಕೆಲವು ಅತ್ಯುತ್ತಮ ಸಣ್ಣ ಕಥೆಗಳನ್ನು ಬರೆದಿದ್ದಾರೆ. ರಮಣಲಾಲ್ ದೇಸಾಯಿ, ಮೇಘಾನಿ, ಸೋಪಾನ್, ಉಮಾಶಂಕರ್, ಸುಂದರಂ, ಪನ್ನಾಲಾಲ್ ಪಟೇಲ್, ಗುಲಾಬ್ದಾಸ್, ಮಡಿಯಾ, ಪೆಟ್ಲೀಕರ್ ಮುಂತಾದವರು ಪ್ರತ್ಯೇಕವಾಗಿ ಕಥಾಸಂಗ್ರಹಗಳನ್ನು ಪ್ರಕಟಿಸಿದ್ದಾರೆ.

ನೂರು ವರ್ಷಗಳಿಂದೀಚೆಗೆ ಗುಜರಾತಿಯಲ್ಲಿ ಅನೇಕ ಮನೋಹರ ಜೀವನ ಚರಿತ್ರೆಗಳೂ ಆತ್ಮಕಥೆಗಳೂ ರಚಿತವಾಗಿವೆ. ಅವುಗಳ ಪೈಕಿ ಅತಿವಿಲಕ್ಷಣವಾಗಿರುವುದು ಮಹಾತ್ಮಾ ಗಾಂಧೀಜಿಯ ಆತ್ಮಕಥೆ. ಗಾಂಧಿಯವರ ಬರೆಹಗಳಿಂದಾಗಿ ಗುಜರಾತಿ ಸಾಹಿತ್ಯ ಭಾರತೀಯ ಸಾಹಿತ್ಯದಲ್ಲಿ ಮಾತ್ರವಲ್ಲದೆ ವಿಶ್ವಸಾಹಿತ್ಯದಲ್ಲಿ ಶಾಶ್ವತ ಸ್ಥಾನವನ್ನು ಗಳಿಸುವಂತಾಗಿದೆ. ಸಮಾಜ ಪರಿಷ್ಕರಣೆಗೆ ಬಹು ಉತ್ಸಾಹದಿಂದ ನರ್ಮದನೂ ಬಳಿಕ ಆರ್ಯ ಸಂಸ್ಕೃತಿಯ ಮೇಲಣ ಧಾಳಿಯನ್ನು ಎದುರಿಸುವುದಕ್ಕೂ ಮತ್ತು ಅದರ ಗುಣಗಳನ್ನು ವಿವರಿಸುವುದಕ್ಕೂ ಮಣಿಲಾಲನೂ ಬಳಸಿಕೊಂಡ ಪ್ರಬಂಧವನ್ನು ಇತರರೂ ಬಳಸಿಕೊಂಡಿದ್ದಾರೆ. ಅವರ ಪೈಕಿ, ಆನಂದ ಶಂಕರ ಧ್ರುವ, ಮಹಾತ್ಮಗಾಂಧಿ, ಕಾಕಾ ಕಾಲೇಲ್ಕರ್ ಮತ್ತು ಮಶ್ರುವಾಲರು ಪ್ರಸಿದ್ಧರಾದವರು. ಲಘು ಪ್ರಬಂಧಗಳನ್ನು ಸ್ವೈರವಿಹಾರಿ (ಆರ್.ವಿ.ಪಾಠಕ್), ಜ್ಯೋತೀಂದ್ರ ದಾವೆ, ದೂರ್ಕಾಲ್, ವಿ.ಕೆ. ವೈದ್ಯ, ಮುನಿಕುಮಾರ ಭಟ್, ಜಿ.ಎಲ್.ಮೆಹತ. ನವಲ್ ರಾಂ ತ್ರಿವೇದಿ ಮತ್ತು ಇತರರು ಬರೆದಿದ್ದಾರೆ.

ಗುಜರಾತಿನಲ್ಲಿ ಐತಿಹಾಸಿಕ ಮತ್ತು ಸಾಹಿತ್ಯಕ ಸಂಶೋಧನೆಗಳು: ಎ.ಕೆ. ಫೋಬ್ರ್ಸ್‌ ಮತ್ತು ಕವಿ ದಲಪತರಾಮ ಎಂಬವರು ಮೊದಲ ಬಾರಿಗೆ ಗುಜರಾತಿ ಮಾತಿನ ಇತಿಹಾಸವನ್ನು ರಚಿಸಲು ಬೇಕಾದ ವಸ್ತುಗಳೆಲ್ಲದರ ಶೋಧನೆಗೆ ತೊಡಗಿದಂದಿನಿಂದ ಪ್ರಾರಂಭವಾದವು. ಈ ಕೆಲಸವನ್ನು ಇಂದಿನವರೆಗೂ ಅನೇಕ ವಿದ್ವಾಂಸರು ಮುಂದುವರಿಸಿಕೊಂಡು ಬಂದಿದ್ದಾರೆ. ವ್ರಜಲಾಲಶಾಸ್ತ್ರಿ ತನ್ನ ಗ್ರಂಥಗಳನ್ನೂ ಗುಜರಾತಿಯಲ್ಲಿನ ಗಮನಾರ್ಹವಾದ ಪ್ರಥಮ ಶಬ್ದಕೋಶವಾದ ನರ್ಮಕೋಶಕ್ಕೆ ನರ್ಮದ ಪೀಠಕೆಯನ್ನೂ ಬರೆದಂದಿನಿಂದ, ಭಾಷಾಶಾಸ್ತ್ರ ಸಂಶೋಧನೆಗಳೂ ಉಪಕ್ರಮಿಸಿವೆ. ಪ್ರವೃದ್ಧವಾಗಿರುವ ಭಾಷಾಶಾಸ್ತ್ರದ ದೃಷ್ಟಿಯಿಂದ ನೋಡಿದರೆ ಈ ದಿವಸ ಈ ಕೃತಿಗಳು ಹಳೆಯವೆನ್ನಿಸಬಹುದು. ಆದರೆ ಈ ಶಾಸ್ತ್ರ ತುಂಬ ಪ್ರಧಾನವಾದುದೆಂಬುದನ್ನು ಬಲು ಹಿಂದೆಯೇ ವಿದ್ವಾಂಸರು ಕಂಡುಕೊಂಡ ವಿಷಯವನ್ನು ಇವು ಜ್ಞಾಪಿಸುತ್ತವೆ. ಎನ್. ಬಿ. ದಿವೇಟಿಯಾ ಎಂಬ ಗುಜರಾತಿ ಭಾಷೆಯ ಘನ ಪಂಡಿತ. ತಾನು ಮುಂಬಯಿ ವಿಶ್ವವಿದ್ಯಾಲಯದ ಆಸರೆಯಲ್ಲಿ ಕೊಟ್ಟ ವಿಲ್ಸನ್ ಭಾಷಾ ಶಾಸ್ತ್ರೋಪನ್ಯಾಸಗಳಲ್ಲಿಯೂ ಸ್ವಂತ ಪ್ರಬಂಧಗಳಲ್ಲಿಯೂ ವಿಶೇಷವಾದ ಕಾಣಿಕೆಯನ್ನು ಸಲ್ಲಿಸಿದ್ದಾನೆ. ಈ ಕ್ಷೇತ್ರದಲ್ಲಿ ಆತನ ಕೆಲಸವನ್ನು ಈ ದಿವಸ ವಿದ್ವಾಂಸರ ಸಂಘವೊಂದು ಮುಂದುವರಿಸುತ್ತಿದೆ. ನರ್ಮದನ ತರುವಾಯ ಅನೇಕ ಗುಜರಾತೀ ಶಬ್ದಕೋಶಗಳು ರಚಿತವಾಗಿವೆ; ಇವನ್ನು ಕುರಿತ ವ್ಯಾಸಂಗವೇ ತುಂಬ ಕುತೂಹಲಜನಕವಾಗಿದೆ. ಮಹಾತ್ಮ ಗಾಂಧಿಯವರ ಆಶೀರ್ವಚನದಿಂದ ಪುಷ್ಟಿಗೊಂಡು, ಗುಜರಾತ್ ವಿದ್ಯಾಪೀಠದಿಂದ 1929ರಲ್ಲಿ ಪ್ರಕಟವಾದ ಸಾರ್ಥ ಜೋಡಣೀ ಕೋಶ, ಗುಜರಾತೀ ಶಬ್ದ ರೂಪಗಳನ್ನು ಶಿಷ್ಟೀಕರಿಸುವ ಕೆಲಸದಲ್ಲಿ ಮುಖ್ಯ ಸಾಧನವಾಯಿತು.

ವಿಷಯಗಳ ಸಾಮಾನ್ಯ ಜ್ಞಾನವನ್ನು ಪ್ರಸರಿಸುವ ಅನೇಕ ಗ್ರಂಥಗಳನ್ನು ವಿವಿಧ ಸಂಘಗಳೂ ವ್ಯಕ್ತಿಗಳೂ ಪ್ರಕಟಿಸಿದ್ದಾರೆ. ಪ್ರಮಾಣ ಮತ್ತು ಗುಣದ ದೃಷ್ಟಿಯಿಂದ ವಡೋದರ ಮತ್ತು ಅಹಮದಾಬಾದುಗಳಲ್ಲಿ ನಡೆದಿರುವ ಕೆಲಸ ಗಮನಾರ್ಹವಾಗಿದೆ. ಹಳೆಯ ವಡೋದರ ಸಂಸ್ಥಾನ ವಿವಿಧ ಜ್ಞಾನ ಶಾಖೆಗಳಲ್ಲಿ 1500ಕ್ಕಿಂತಲೂ ಹೆಚ್ಚಿನ ಪುಸ್ತಕಗಳನ್ನು ಗುಜರಾತಿಯಲ್ಲಿ ಒಂದರಲ್ಲೇ ಅಲ್ಲದೆ ಹಿಂದಿ, ಮರಾಠಿ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಲ್ಲೂ ಪ್ರಕಟಿಸಿದೆ. ಇಂಥ ಪುಸ್ತಕಗಳ ಪಟ್ಟಿಯೊಂದನ್ನು ವಡೋದರ ವಿಶ್ವವಿದ್ಯಾಲಯ ಅಚ್ಚುಹಾಕಿದೆಯಲ್ಲದೆ ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರುತ್ತಿದೆ. ವಡೋದರದ ಶ್ರೀಮಂತ ಗಾಯಕವಾಡರ ಆಶ್ರಯದಲ್ಲಿ ಇನ್ನೂ ಅನೇಕ ಪುಸ್ತಕಗಳ ಪ್ರಕಟನೆಗೆ ಧನಸಹಾಯ ಲಭಿಸಿತು. ಅಹಮದಾಬಾದಿನ ಗುಜರಾತ್ ವೆರ್ನಾಕ್ಯುಲರ್ ಸೊಸೈಟಿ (ಈಗಿನ ಗುಜರಾತ್ವಿದ್ಯಾಸಭಾ) 500ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅನೇಕ ಶಾಸ್ತ್ರ ಮತ್ತು ವೈಜ್ಞಾನಿಕ ಗ್ರಂಥಗಳನ್ನು ಪ್ರಕಟಿಸಿದೆ.; ಅದರ ಕಾರ್ಯ ಇನ್ನೂ ಮುಂದುವರಿಯುತ್ತಲೇ ಇದೆ. ಫೋಬ್ರ್ಸ್‌ ಗುಜರಾತೀ ಸಭಾ, ಭಾರತೀಯ ವಿದ್ಯಾಭವನ ಮತ್ತು ಮುಂಬಯಿಯ ಗುಜರಾತ್ ರಿಸರ್ಚ್ ಸೊಸೈಟಿ ಸಹ ಶ್ಲಾಘ್ಯವಾದ ಕೆಲಸ ಮಾಡಿವೆ.

ಹತ್ತೊಂಬತ್ತನೆಯ ಶತಮಾನದ ಮಧ್ಯಕಾಲದಿಂದ ವಿಜ್ಞಾನ ಮತ್ತು ಯಂತ್ರತಂತ್ರ ಸಂಬಂಧಿ ಗ್ರಂಥಗಳು ಗುಜರಾತಿಯಲ್ಲಿ ಅನೇಕವಾಗಿ ಪ್ರಕಟವಾಗಿವೆ. ಇವುಗಳಲ್ಲಿ ಕೆಲವು ಸಾಮಾನ್ಯ ಓದುಗರಿಗಾಗಿ ರಚಿತವಾದವು ಮತ್ತೆ ಕೆಲವು-- ಹಳೆಯ ವಡೋದರಾ ರಾಜ್ಯ ಪ್ರಕಟಿಸಿದ ಶ್ರೀ ಸಯ್ಯಾಜೀ ಜ್ಞಾನ ಮಂಜೂಷ್ದಂಥವು-ಪ್ರೌಢ ವಿದ್ಯಾರ್ಥಿಗಳಿಗಾಗಿ ರಚಿತವಾದವು. ಸದಾ ಬೆಳೆಯುತ್ತಲೇ ಇರುವ ವೈಜ್ಞಾನಿಕ ವಿಷಯಗಳನ್ನು ಕುರಿತವಾದುದರಿಂದ ಈ ದಿವಸ ಅವುಗಳಲ್ಲಿ ಎಲ್ಲವೂ ಉಪಯುಕ್ತವಾದ ವೆಂದೆನಿಸದಿರಬಹುದು; ಆದರೆ ವೈಜ್ಞಾನಿಕ ವಿಷಯಗಳ ಪ್ರಾಧಾನ್ಯವನ್ನು ವಿದ್ಯಾವಂತರು ಮುಂಚೆಯೇ ಮನಗಂಡಿದ್ದರೆಂಬ ಬಗೆಗೆ ಇವು ದೊಡ್ಡ ಸಾಕ್ಷಿಗಳಂತಿವೆ.

ಕೊನೆಗೆ ನಾವು ವೈಜ್ಞಾನಿಕ ಶಬ್ದಕೋಶದತ್ತ ಬರುತ್ತೇವೆ. ವೈಜ್ಞಾನಿಕ ಶಬ್ದಗಳಿಗೆ ಗುಜರಾತಿ ಪಾರಿಭಾಷಿಕ ಕೋಶವೊಂದನ್ನು ರಚಿಸಲು ಅನೇಕ ಪ್ರಯತ್ನಗಳು ಜರುಗಿವೆ. ಹಳೆಯ ವಡೋದರ ರಾಜ್ಯದ ಆಸರೆಯಲ್ಲಿ ಟಿ.ಕೆ. ಗಜ್ಜರ್ ಎಂಬಾತ ಒಂದು ಶಬ್ದಕೋಶವನ್ನು ಬೃಹತ್ ಪ್ರಮಾಣದಲ್ಲಿ ತಯಾರಿಸಿದ. ಆದರೆ ಅದು ಪ್ರಕಟವಾಗದೆ ಹಾಗೆಯೇ ಉಳಿಯಿತು. ಇದರ ಕೈಬರೆಹದ ಸಂಪುಟಗಳನ್ನು ಓರಿಯಂಟಲ್ ಇನ್ಸ್ಟಿಟ್ಯೂಟ್ ಆಫ್ ಬರೋಡದ ಪುಸ್ತಕಾಲಯದಲ್ಲಿ ಪರಿಶೀಲಿಸಬಹುದು. ಪಿ.ಜಿ.ಷಾಹ, ಎಂ.ಪಿ ದೇಸಾಯಿ, ವೈ ಜಿ. ನಾಯಕ್ ಮತ್ತು ಇತರ ಅನೇಕ ವಿದ್ವಾಂಸರೂ ಮತ್ತು ಬರೋಡ ವಿಶ್ವವಿದ್ಯಾಲಯವೂ ಇಂಥ ಶಬ್ದಕೋಶವನ್ನು ತಯಾರಿಸಿ ಪ್ರಕಟಿಸಿವೆ. ಅನೇಕ ದೃಷ್ಟಿಗಳಿಂದ, ಅದರಲ್ಲೂ ಭಾರತ ದೇಶಕ್ಕೆಲ್ಲ ಅನ್ವಯಿಸುವಂತೆ, ಒಂದು ಶಬ್ದಕೋಶವನ್ನು ರಚಿಸುವುದು ಅಗತ್ಯದ ಕೆಲಸವೆಂದು ಎಲ್ಲರೂ ಭಾವಿಸುತ್ತಿರುವ ಈ ವೇಳೆಯಲ್ಲಿ ಇವೆಲ್ಲ ಕೃತಿಗಳ ಉಪಯೋಗಕ್ಕೆ ಬರುತ್ತವೆ.

ಸಮಕಾಲೀನ ಗುಜರಾತಿ ಸಾಹಿತ್ಯದಲ್ಲಿ 1967ರಲ್ಲಿ ಉಮಾಶಂಕರ ಜೋಶಿ, 1985ರಲ್ಲಿ ಪನ್ನಲಾಲ್ ಪಟೇಲ್ ಮತ್ತು 2001ರಲ್ಲಿ ರಾಜೇಂದ್ರ ಕೇಶವಲಾಲ್ ಷಹ ಅವರು ಜ್ಞಾನಪೀಠ ಪ್ರಶಸ್ತಿಯನ್ನು ಗಳಿಸಿರುವ ಕವಿ ಶ್ರೇಷ್ಠರು.