ಗೀತಪ್ರಿಯ
ಗೀತಪ್ರಿಯ ಕನ್ನಡ ಚಲನಚಿತ್ರರಂಗದ ಪ್ರಮುಖ ಗೀತರಚನಕಾರ ಹಾಗೂ ನಿರ್ದೇಶಕ. ಜನನ ೧೯೩೧ರ ಜೂನ್ ೧೫ರಂದು. ನಿಜವಾದ ಹೆಸರು ಲಕ್ಷ್ಮಣರಾವ್ ಮೋಹಿತೆ. ಗೀತಪ್ರಿಯ ಅವರು 40 ಚಿತ್ರಗಳನ್ನು ನಿರ್ದೇಶಿಸುವುದರ ಜೊತೆಗೆ 250 ಚಿತ್ರಗಳಿಗೆ ಗೀತರಚನೆಕಾರರಾಗಿಯೂ ಹೆಸರು ಮಾಡಿದ್ದರು. 1954 ರಲ್ಲಿ 'ಶ್ರೀರಾಮ ಪೂಜಾ' ಚಿತ್ರಕ್ಕೆ ಗೀತೆ ರಚಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಗೀತಪ್ರಿಯ ಅವರು, ಡಾ.ರಾಜ್‌ಕುಮಾರ್ ಹಾಗೂ ಕಲ್ಪನಾ ಅಭಿನಯದ 'ಮಣ್ಣಿನ ಮಗ' ಚಿತ್ರದ ಮೂಲಕ ನಿರ್ದೇಶಕರಾದರು. ವಿಜಯಭಾಸ್ಕರ್ ಅವರಿಂದಲೇ "ಗೀತಪ್ರಿಯ" ಎಂಬ ನಾಮಕರಣ.
ಕೌಟುಂಬಿಕ ಹಿನ್ನೆಲೆ, ಜೀವನ
ಬದಲಾಯಿಸಿತಂದೆ ರಾಮರಾವ್ ಮೋಹಿತೆ, ತಾಯಿ ಲಕ್ಷ್ಮೀಬಾಯಿ. ಬೆಂಗಳೂರಿನ ಮಲ್ಲೇಶ್ವರಂ ಪ್ರೌಢಶಾಲೆಯಲ್ಲಿ ಓದಿದ ಇವರಿಗೆ ಕವಿ ಹೊಯಿಸಳರು ಗುರುಗಳಾಗಿದ್ದರು. ಇಂಟರ್ಮೀಡಿಯಟ್ನಲ್ಲಿ ಜಿ.ಪಿ.ರಾಜರತ್ನಂ ಗುರುಗಳಾಗಿ ದೊರೆತರು. ಸಾಹಿತ್ಯ ದಿಗ್ಗಜಗಳ ಪರಿಚಯ ಪ್ರಭಾವಗಳಿಂದಾಗಿ ಸುಪ್ತವಾಗಿದ್ದ ಇವರ ಸಾಹಿತ್ಯ ರಚನಾಶಕ್ತಿಗೆ ಇಂಬು ದೊರೆಯಿತು. ಇವರು ಪ್ರೌಢಶಾಲೆಯ ದಿನಗಳಲ್ಲೇ ಪದ್ಯ, ನಾಟಕಗಳನ್ನು ಬರೆಯಲಾರಂಭಿಸಿದರು. ಇವರ ರಚನೆಗಳು ಅಂದಿನ ತಾಯಿನಾಡು ಪತ್ರಿಕೆಯಲ್ಲಿ ಬೆಳಕು ಕಂಡವು. ಶಾಲಾದಿನಗಳಲ್ಲಿಯೇ ಉರ್ದು ಶಾಯರಿಗಳು ಇವರನ್ನು ವಿಶೇಷವಾಗಿ ಆಕರ್ಷಿಸಿದವು. ನಾಟಕದತ್ತ ಒಲವು ಬೆಳೆದು ಹವ್ಯಾಸಿ ಕಲಾವಿದರ ಒಡನಾಟ ಒದಗಿ ಬಂತು. ಆ ವೇಳೆಯಲ್ಲಿ ಇವರು ಬರೆದ 'ಮದ್ವೆ ಮಾರ್ಕೆಟ್' ನಾಟಕ ಅಂದಿನ ದಿನಗಳಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿತು. ತಾವೇ ನಾಟಕಗಳಲ್ಲಿ ಕೂಡ ಅಭಿನಯಿಸಿದರು. ಮಿಲಿಟರಿ ಪರಂಪರೆಯ ಕುಟುಂಬದಿಂದ ಬಂದವರು ಗೀತಪ್ರಿಯ. ಅವರ ತಂದೆ, ಮೊದಲ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ಸೇನಾನಿ. ಮಹಾಯುದ್ಧದಲ್ಲಿ ಪಾಲ್ಗೊಂಡು ನಂತರದ ದಿನದಲ್ಲಿ ಬೆಂಗಳೂರು ದಂಡು ಪ್ರದೇಶಕ್ಕೆ ಬಂದು ನೆಲೆಸಿದವರು ಅದಕ್ಕೂ ಹಿಂದೆ, ಗೀತಪ್ರಿಯ ಅವರ ತಾತ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಪು.ತಿ.ನ. ಅವರಿಂದ ಪ್ರಭಾವಿತರಾಗಿ ಅವರಿಂದ ಕನ್ನಡ ಕಲಿತು, ಪು.ತಿ.ನ.ಪ್ರೇರಣೆಯಿಂದ ಮೊದಲನೆಯದಾಗಿ 'ಲವ ಕುಶ"ಎಂಬ ನಾಟಕ ಬರೆದರು.
ಸಿನೆಮಾ ಜೀವನ
ಬದಲಾಯಿಸಿಭಾಗ್ಯ ಚಕ್ರ (1956) ಎಂಬುದು ಇವರು ಸಂಭಾಷಣೆ ಹಾಗೂ ಹಾಡುಗಳನ್ನು ರಚಿಸಿದ ಮೊದಲ ಚಿತ್ರ. ಇವರಲ್ಲಿ ಅಡಗಿದ್ದ ನಿರ್ದೇಶಕನನ್ನು ಗುರುತಿಸಿದವರು ಕರ್ನಾಟಕ ಫಿಲಂಸ್ ಸಂಸ್ಥೆಯಲ್ಲಿದ್ದ ಎಂ.ವಿ. ವೆಂಕಟಾಚಲಂ. ಅವರು ತಮ್ಮ ಮಣ್ಣಿನ ಮಗ ಚಿತ್ರದ ನಿರ್ದೇಶನದ ಹೊಣೆಗಾರಿಕೆಯನ್ನು ಇವರಿಗೆ ವಹಿಸಿದರು (1968). ಬೆಂಗಳೂರಿನ ಕಪಾಲಿ ಚಿತ್ರ ಮಂದಿರದಲ್ಲಿ ಶತದಿನೋತ್ಸವ ಕಂಡ ಪ್ರಥಮ ಕನ್ನಡ ಚಿತ್ರವೆಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಯಿತು. ಎಂ.ಪಿ. ಶಂಕರರ ಕಾಡಿನ ರಹಸ್ಯ (1969) ಇವರು ನಿರ್ದೇಶಿಸಿದ ಎರಡನೆಯ ಚಿತ್ರ. ಅದೇ ವರ್ಷ ಮದುವೆ, ಮದುವೆ, ಮದುವೆ, ಎಂಬ ಹಾಸ್ಯ ಚಿತ್ರವನ್ನೂ ಇವರು ನಿರ್ದೇಶಿಸಿ ದರು. ಇವರು ನಿರ್ದೇಶಿಸಿದ ಬಹುತೇಕ ಚಿತ್ರಗಳ ಸಾಹಿತ್ಯವನ್ನು ರಚಿಸಿದವರು ಇವರೇ.
ಗೀತಪ್ರಿಯರಿಗೆ ಚಿತ್ರರಂಗದ ಗೀಳು ಅಂಟಿಕೊಂಡದ್ದಕ್ಕೂ ಒಂದು ಹಿನ್ನೆಲೆಯಿದೆ. ಅದು 1943ರ ಮಾತು. ಆಗಷ್ಟೇ `ಸತ್ಯಹರಿಶ್ಚಂದ್ರ’ ಸಿನಿಮಾ ಬಿಡುಗಡೆಯಾಗಿತ್ತು. ಆ ಸಿನಿಮಾ ನೋಡಿದ ಗೀತಪ್ರಿಯ, ಚಿತ್ರನಟನಾಗಲೇಬೇಕು ಎಂದು ಆ ಕ್ಷಣದಲ್ಲೇ ನಿರ್ಧರಿಸಿದರಂತೆ. ಅಷ್ಟೇ ಅಲ್ಲ, ನಟನಾಗುವ ಉದ್ದೇಶದಿಂದಲೇ ಮದ್ರಾಸಗೆ ಹೋದರು. ಅಲ್ಲಿ ಕಥಕ್ ಡ್ಯಾನ್ಸ್ ಕಲಿತರು. ನಾಟಕ ಕಂಪನಿಗಳಲ್ಲಿ ಅಭಿನಯಿಸಿ `ಅನುಭವ’ ಪಡೆದುಕೊಂಡರು. ನಂತರ ಒಂದೆರಡು ತೆಲುಗು ಚಿತ್ರಗಳಲ್ಲಿ `ಡ್ಯಾನ್ಸರ್’ ಆಗಿಯೂ ಕಾಣಿಸಿಕೊಂಡದ್ದಾಯಿತು. ಹೀಗಿದ್ದಾಗಲೇ ಆರ್. ನಾಗೇಂದ್ರರಾವ್ ಅವರು ಒಂದು ಸಿನಿಮಾ ತಯಾರಿಸಲಿದ್ದಾರೆ ಎಂಬ ಸುದ್ದಿ ಕಿವಿಗೆ ಬಿತ್ತು. ತಕ್ಷಣವೇ ಅಲ್ಲಿಗೆ ಹೋದ ಗೀತಪ್ರಿಯ,`ನನಗೆ ಒಂದು ಪಾತ್ರ ಕೊಡಿ’ ಅಂದರಂತೆ. ಅದಕ್ಕೆ ನಾಗೇಂದ್ರರಾಯರು- ಈಗಾಗಲೇ ಎಲ್ಲ ಪಾತ್ರಗಳ ಆಯ್ಕೆ ಮುಗಿದಿದೆಯಪ್ಪಾ. ಮುಂದೆ ನೋಡೋಣ. ಈಗ ನೀನು ಬೆಂಗಳೂರಿಗೆ ಹೋಗು’ ಎಂದರಂತೆ. ಬೇಸರದಿಂದಲೇ ಬೆಂಗಳೂರಿಗೆ ಹಿಂತಿರುಗಿದರು ಗೀತಪ್ರಿಯ. ಇದಾಗಿ ಕೆಲದಿನಗಳಲ್ಲೇ ಗೀತಪ್ರಿಯರ ತಂದೆ ಅನಾರೋಗ್ಯದಿಂದ ತೀರಿಕೊಂಡರು. ಮುಂದೆ, ಅನುಕಂಪದ ಆಧಾರದ ಮೇಲೆ ತಂದೆಯವರು ನೌಕರಿ ಮಾಡುತ್ತಿದ್ದ ಮೈಸೂರು ಲ್ಯಾನ್ಸರ್ಸ್ ಕಂಪನಿಯಲ್ಲೇ ಕೆಲಸಕ್ಕೆ ಸೇರಿಕೊಂಡರು ಗೀತಪ್ರಿಯ. ಆದರೆ, ಕೆಲವೇ ದಿನಗಳಲ್ಲಿ ಆ ಕಂಪನಿ ಕೂಡ ಮುಚ್ಚಿಹೋಯಿತು. ಈ ಸಂದರ್ಭದಲ್ಲಿ ತಾಯಿ, ಇಬ್ಬರು ತಂಗಿಯರು ಹಾಗೂ ಮೂವರು ಸೋದರರನ್ನು ಸಾಕುವ ಹೊಣೆ ಗೀತಪ್ರಿಯರ ಮೇಲಿತ್ತು. ಕಬ್ಬನ್ ಪಾರ್ಕ್ ಬಳಿ ಇದ್ದ ಬಾರ್ ಒಂದರಲ್ಲಿ ಬಿಲ್ರೈಟರ್ ಆಗಿ ಸೇರಿಕೊಂಡರು. ಸಿನಿಮಾ ಸೇರಬೇಕೆಂಬ ಗೀಳು ಇದ್ದೇ ಇತ್ತು. ಆ ಕಾರಣದಿಂದಲೇ ರಾತ್ರಿ ಬಂದು ಸಿನಿಮಾಕ್ಕೆ ಹಾಡು, ಚಿತ್ರಕತೆ ಬರೆಯುತ್ತಿದ್ದರು. ಒಂದು ದಿನ ಪ್ರತಿಭೆಯನ್ನು ಕಂಡ ವಿಜಯಭಾಸ್ಕರ್ `ನಿನಗೆ ಇಲ್ಲಿ ಎಷ್ಟು ಸಂಬಳ ಸಿಗುತ್ತೆ, 40 ರೂಪಾಯಿ ಕೊಡ್ತೇನೆ, ನನ್ನ ಜೊತೆ ಮದ್ರಾಸಿಗೆ ಬಂದುಬಿಡು' ಎಂದರು. ಕೇವಲ ಐದು ರೂಪಾಯಿ ಹೆಚ್ಚಿನ ಸಂಬಳದ ಆಸೆಗೆ ಮದ್ರಾಸಿಗೆ ಹೋಗಿ, ಅಲ್ಲಿ ತೆಲುಗು, ತಮಿಳು ಚಿತ್ರಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತ, ಸಂಭಾಷಣೆ, ಗೀತರಚನೆಯಲ್ಲಿ ತೊಡಗಿಸಿಕೊಂಡರು. ಮುಂದೆ, ೧೯೬೭ ರಲ್ಲಿ ವನಮಾಲ ಎಂಬಾಕೆ ಅಶ್ವತ್ಥ್, ರಾಜಾಶಂಕರ್, ಪಂಡರಿಭಾಯಿ, ಜಯಂತಿ ತಾರಾಗಣದ ಒಂದು ಸಿನಿಮಾ ನಿರ್ಮಾಣಕ್ಕೆ ಮುಂದಾದರು. ಎಂ.ಎಸ್. ನಾಯಕ್ ಅವರಿಗೆ ನಿರ್ದೇಶನದ ಹೊಣೆ ಬಿತ್ತು. ಚಿತ್ರಕಥೆ -ಹಾಡು ಬರೆವ ಜವಾಬ್ಧಾರಿ ಇವರ ಹೆಗಲಿಗೇರಿತು. ಇವರು ಬರೆದ ಒಂದೇ ಬಳ್ಳಿಯ ಹೂಗಳು ಚಿತ್ರದ "ನೀನೆಲ್ಲಿ ನಡೆವೆ ದೂರ…" ಹಾಡು ಮಹಮ್ಮದ್ ರಫಿಯವರು ಹಾಡಿರುವ ಏಕೈಕ ಕನ್ನಡ ಗೀತೆ ಇದು. ಅವರ ಗೀತೆಗಳಲ್ಲಿ ಅಡಗಿರುವ ಮಾನವ ಪ್ರೀತಿ, ಶೋಷಣೆಯ ಬಗ್ಗೆ ಆಕ್ರೋಶ, ಬಡವರ ಪರ ದನಿ, ದೇವರ ಮೇಲೆ ಸಿಟ್ಟು ಇವೆಲ್ಲವೂ ಜನಸಾಮಾನ್ಯರ ದನಿಯೆನಿಸಿ ಪ್ರಸಿದ್ಧವಾಗಿವೆ. ಇವರ ಪತ್ನಿಯ ಹೆಸರು ಸುಶೀಲಾ ಬಾಯಿ. ವಿಜಯ್ ಇನ್ಸ್ ಟ್ಯೂಟ್ ನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದರು.
ಚಿತ್ರರಂಗದಲ್ಲಿ
ಬದಲಾಯಿಸಿಗೀತರಚನೆ
ಬದಲಾಯಿಸಿಗೀತಪ್ರಿಯ ೨೫೦ ಕ್ಕೂ ಹೆಚ್ಚಿನ ಚಿತ್ರಗಳಿಗೆ ಗೀತೆಗಳನ್ನು ರಚಿಸಿದ್ದಾರೆ. ಅವರ ರಚಿಸಿದ ಗೀತೆಗಳ ಸಂಖ್ಯೆ ಸಾವಿರ ದಾಟಿದೆ.[೧]
ಗೀತರಚನೆ ಮಾಡಿದ ಸಿನೆಮಾಗಳು.
ನಿರ್ದೇಶನ
ಬದಲಾಯಿಸಿಸುಮಾರು 40 ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಕನ್ನಡ
ಬದಲಾಯಿಸಿ- ಮಣ್ಣಿನಮಗ-ಶತದಿನೋತ್ಸವ ಹಾಗೂ ರಾಷ್ಟ್ರಪ್ರಶಸ್ತಿ ಪಡೆದ ಚಿತ್ರ.
- ಯಾವ ಜನ್ಮದ ಮೈತ್ರಿ
- ಬೆಸುಗೆ-ಕಾದಂಬರಿ ಅಧಾರಿತ
- ಹೊಂಬಿಸಿಲು-ಕಾದಂಬರಿ ಅಧಾರಿತ
- ಶ್ರಾವಣ ಸಂಭ್ರಮ
- ಕಾಡಿನ ರಹಸ್ಯ
- ಮದುವೆ ಮದುವೆ ಮದುವೆ
- ಭೂಪತಿರಂಗ
- ಕಲ್ಯಾಣಿ
- ನಾರಿ ಮುನಿದರೆ ಮಾರಿ
- ಜೀವನ ಜೋಕಾಲಿ
- ಬೆಳುವಲದ ಮಡಿಲಲ್ಲಿ
- ಅನುರಾಗ ಬಂಧನ
- ಪ್ರೇಮ ಜ್ವಾಲೆ
- ಪ್ರೇಮಾಯಣ
- ಪುಟಾಣಿ ಏಜೆಂಟ್ ೧,೨,೩
- ಪ್ರಚಂಡ ಪುಟಾಣಿಗಳು
- ಜೋಡಿ ಜೀವ
- ಸುವರ್ಣ ಸೇತುವೆ
- ಪ್ರೀತಿಸಿ ನೋಡು
- ಬಾಳು ಬಂಗಾರ
- ಮೌನ ಗೀತೆ
- ಮನೆಗೆ ಬಂದ ಮಹಾಲಕ್ಷ್ಮಿ
- ಶುಭ ಮಹೂರ್ತ
- ಬಾಳೊಂದು ಭಾವಗೀತೆ
- ದುರ್ಗಾಷ್ಟಮಿ
- ಮಾನಸವೀಣೆ
- ಶ್ರಾವಣ ಸಂಭ್ರಮ -2003
ತುಳು ಚಿತ್ರಗಳು
ಬದಲಾಯಿಸಿ- ಕಾಸ್ದಾಯೆ ಕಂಡನೆ
- ಯಾನ್ ಸನ್ಯಾಸಿ ಆಪೆ
- ಸಾವಿರಡೋರ್ತಿ ಸಾವಿತ್ರಿ.
ಹಿಂದಿ
ಬದಲಾಯಿಸಿ- ಪ್ರಚಂಡ ಪುಟಾಣಿಗಳು ಚಿತ್ರವನ್ನು ಹಿಂದಿಯಲ್ಲಿ "ಅನ್‌ಮೋಲ್ ಸಿತಾರೆ"ಯಾಗಿ ನಿರ್ದೇಶಿಸಿದರು.
ನೀರ ಬಿಟ್ಟು ನೆಲದ ಮೇಲೆ (ಹೊಂಬಿಸಿಲು), ಹನುಮನ ಪ್ರಾಣ ಪ್ರಭೋ ರಘು ರಾಮಾ, ಜಗದೀಶನಾಡುವ ಜಗವೇ ನಾಟಕರಂಗ (ಶ್ರೀರಾಮಾಂಜ ನೇಯ ಯುದ್ಧ), ಹೂವಿಂದ ಹೂವಿಗೆ ಹಾರುವ ದುಂಬಿಯು ಏನನು ಹೇಳುತಿದೆ (ಹೊಂಬಿಸಿಲು), ರಸಿಕ ರಸಿಕ ಬಲು ಮೆಲ್ಲನೆ ತೂರಾಡು (ಭೂಪತಿ ರಂಗ), ಇದೇನು ಸಭ್ಯತೆ (ಮಣ್ಣಿನ ಮಗ), ಏನೋ ಸಂತೋಷ ಏನೋ ಉಲ್ಲಾಸ ಏನೋ ವಿಶೇಷ ಈ ದಿನ (ಪುಟಾಣಿ ಏಜೆಂಟ್ 123), ನೀನೆಲ್ಲಿ ನಡೆವೆ ದೂರ (ಒಂದೇ ಬಳ್ಳಿಯ ಹೂಗಳು), ಬೆಳುವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ (ಬೆಳವಲದ ಮಡಿಲಲ್ಲಿ), ಇಲ್ಲೆ ಸ್ವರ್ಗ ಇಲ್ಲೆ ನರಕ, ಮೇಲೆ ಇಲ್ಲ ಸುಳ್ಳು (ನಾಗರ ಹೊಳೆ), ಗೋಪಿಲೋಲ, ಹೇ ಗೋಪಾಲ, ಈ ಜಗವೆಲ್ಲ ನಿನ್ನದೇ ಜಾಲ (ನಾರಿ ಮುನಿದರೆ ಮಾರಿ), ನಮ್ಮೊರ್ನಾಗ್ ನಾನೊಬ್ಬನೆ ಜಾಣ, ನನ್ನ ಹಾಡಂದ್ರೆ ಎಲ್ಲಾರ್ಗು ಪ್ರಾಣ (ನಾರಿ ಮುನಿದರೆ ಮಾರಿ), ನನ್ನ ನಿನ್ನ ಆಸೆ ನಮ್ಮ ಪ್ರೇಮ ಭಾಷೆ, ಸವಿಜೇನಿನಂತೆ, ಶ್ರುತಿ ಸೇರಿದಾಗ ಅದೇ ಆಶಾಗೀತೆ (ಮಿಡಿದ ಶೃತಿ), ಆಡುತಿರುವ ಮೋಡಗಳೆ ಹಾರುತಿರುವ ಹಕ್ಕಿಗಳೆ, ಯಾರ ತಡೆಯೂ ನಿಮಗಿಲ್ಲ ನಿಮ್ಮ ಭಾಗ್ಯ ನಮಗಿಲ್ಲ (ಬೆಟ್ಟದ ಹುಲಿ), ಪ್ರೇಮವಿದೆ ಮನದೆ ನಗುತ ನಲಿವ ಹೂವಾಗಿ, ಬಂದೆ ಇಲ್ಲಿಗೆ..ನಾ ಸಂಜೆ ಮಲ್ಲಿಗೆ..ನಾ ಸಂಜೆ ಮಲ್ಲಿಗೆ (ಅಂತ), ತಂದಾನಿ ತಂದ ನಾನ ತನ ನನನಾ, ಮಲೆನಾಡಿನ ಮೂಲೆನಾಗೆ ಇತ್ತೊಂದು ಸೋಮನ ಹಳ್ಳಿ (ಸುವರ್ಣ ಸೇತುವೆ), ಜೀವವೀಣೆ ನೀಡು ಮಿಡಿತದ ಸಂಗೀತ, ಭಾವಗೀತೆ ಬಾಳಿನೊಲುಮೆಯ ಸಂಕೇತ (ಹೊಂಬಿಸಿಲು), ಮುತ್ತುಮಳೆಗಾಗಿ ಹೊತ್ತು ಕಾದಿದೆ, ಕೆನ್ನೆಕೆಂಪಗಾಗಿ ತಂಪು ಕೋರಿದೆ (ಬೆಳುವಲದಾ ಮಡಿಲಲ್ಲಿ), ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ, ಜೀವನವೆಲ್ಲ ಸುಂದರ ಬೆಸುಗೆ (ಬೆಸುಗೆ), ನಿನ್ನ ಸವಿನೆನಪೆ ಮನದಲ್ಲಿ ಆರಾಧನೆ, ಪ್ರೀತಿಯ ಸವಿಮಾತೇ ಉಪಾಸನೆ (ಅನುರಾಗ ಬಂಧನ).
- ಆಡುತಿರುವ ಮೋಡಗಳೇ
- ನೀನೆಲ್ಲಿ ನಡೆವೆ ದೂರ
- ಇದೇನ ಸಭ್ಯತೆ,ಇದೇನ ಸಂಸ್ಕೃತಿ
- ಹಕ್ಕಿಯು ಹಾರುತಿದೆ
- ಎಲ್ರನ್ ಕಾಯೋ ದ್ಯಾವ್ರೆ
- ವೀಣಾ ನಿನಗೇಕೋ ಈ ಕಂಪನ
- ಜೀವ ವೀಣೆ ನೀಡು ಮಿಡಿತದ ಸಂಗೀತ
- ಬೆಸುಗೆ... ಬೆಸುಗೆ... ಜೀವನವೆಲ್ಲ ಸುಂದರ ಬೆಸುಗೆ
ಪುಸ್ತಕಗಳು
ಬದಲಾಯಿಸಿ೨ ಕಾದಂಬರಿ ಮತ್ತು ೨ ನಾಟಕಗಳು ಅಚ್ಚಾಗಿವೆ. ಗೀತಪ್ರಿಯ ಅವರು "ಬಾಳ ಲಹರಿ" ಎಂಬ ಹೆಸರಿನ ತಮ್ಮ ಆತ್ಮ ಕಥನ ಪುಸ್ತಕ ಬರೆದಿದ್ದಾರೆ.
- ಕರ್ನಾಟಕ ರಾಜ್ಯಸರ್ಕಾರದಿಂದ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ. (೧೯೯೨)
- ರಾಜ್ಯೋತ್ಸವ ಪ್ರಶಸ್ತಿ(೧೯೯೨)
- 'ಮಣ್ಣಿನ ಮಗ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ(೧೯೬೮)
- 'ಯಾವ ಜನ್ಮದ ಮೈತ್ರಿ'ಗೆ ರಾಜ್ಯ ಪ್ರಶಸ್ತಿ(೧೯೭೧)
- ರಾಜ್ಯ ಚಲನಚಿತ್ರ ತೀರ್ಪುಗಾರರ ಸಮಿತಿ ಅದ್ಯಕ್ಷ (೧೯೯೭)
- ಚಿ.ಉದಯಶಂಕರ್ ಪ್ರಶಸ್ತಿ (೨೦೦೫)
- ಅರ್.ಎನ್.ಅರ್. ಪ್ರಶಸ್ತಿ.(೨೦೦೫)
- ಇಂಡಿಯನ್ ಪೊಯಟ್ರಿಂಗ್ ರೈಟರ್ ಪ್ರಶಸ್ತಿ(೨೦೦೫)
- ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಕೆ.ಸಿ.ಎನ್. ಪ್ರಶಸ್ತಿ (1993),
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1992),
- ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ರಾಜಕುಮಾರ್ ಪ್ರಶಸ್ತಿ (1996-97)
- ಸರೋಜಾ ದೇವಿ ಪ್ರಶಸ್ತಿ
ನಿಧನ
ಬದಲಾಯಿಸಿ೧೭ಜನವರಿ೨೦೧೬ ರಂದು 'ಗೀತಪ್ರಿಯ'ರು ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.[೪]
ಉಲ್ಲೇಖಗಳು
ಬದಲಾಯಿಸಿ- ↑ ವಿಜಯಕರ್ನಾಟಕ, 18ಜನವರಿ2016
- ↑ ಗೀತಪ್ರಿಯ ರಚನೆಯ ಜನಪ್ರಿಯ ಗೀತೆಗಳು Archived 2016-01-21 ವೇಬ್ಯಾಕ್ ಮೆಷಿನ್ ನಲ್ಲಿ., ಉದಯವಾಣಿ, ಜನವರಿ೧೬, ೧೦೧೬
- ↑ ಬ್ಯಾಂಗಲೋರ್ ನ್ಯೂಸ್
- ↑ ಹಿರಿಯ ಚಿತ್ರ ನಿರ್ದೇಶಕ ಗೀತಪ್ರಿಯ ನಿಧನ Archived 2020-08-08 ವೇಬ್ಯಾಕ್ ಮೆಷಿನ್ ನಲ್ಲಿ., ಪ್ರಜಾವಾಣಿ ವಾರ್ತೆ, Sun, 01/17/2016
ಹೊರ ಸಂಪರ್ಕಗಳು
ಬದಲಾಯಿಸಿ- ಗೀತಪ್ರಿಯರು ರಚಿಸಿದ ಕೆಲವು ಪ್ರಸಿದ್ಧ ಗೀತೆಗಳ ವಿಡಿಯೋ Archived 2016-01-21 ವೇಬ್ಯಾಕ್ ಮೆಷಿನ್ ನಲ್ಲಿ., ಅಂತೆಕಂತೆ.ಕಾಂ
- ಅಗಲಿದ ಚೇತನಕ್ಕೊಂದು ನುಡಿ ನಮನ : ಗೀತಪ್ರಿಯ ನಡೆದು ಬಂದ ಹಾದಿ... Archived 2016-01-21 ವೇಬ್ಯಾಕ್ ಮೆಷಿನ್ ನಲ್ಲಿ., ಉದಯವಾಣಿ, Jan 18, 2016
- ತುಳು ಸಾಹಿತ್ಯ ಚರಿತ್ರೆ: ಮಾಧ್ಯಮಗಳಲ್ಲಿ ತುಳು: ಚಲನಚಿತ್ರ (೧), ಕಣಜ
- ಕಳಚಿತು ಚಿತ್ರರಂಗದ ಬೆಸುಗೆ, ವಿಜಯವಾಣಿ ನ್ಯೂಸ್ · JAN 18, 2016