ಗಳಗನಾಥ
ಗಳಗನಾಥ(೧೮೬೯-೧೯೪೨). ಕಾವ್ಯನಾಮದ ವೆಂಕಟೇಶ ತಿರಕೊ ಕುಲಕರ್ಣಿಯವರು. ಗಳಗನಾಥರನ್ನು ಕನ್ನಡ ಕಾದಂಬರಿಗಳ ಪಿತಾಮಹ ಎಂದು ಕರೆಯಲಾಗುತ್ತದೆ. ಕನ್ನಡದ ಹೊಸ ಹುಟ್ಟಿನ ಕಾಲದ ಪ್ರಾರಂಭದಲ್ಲಿ ತಮ್ಮ ವಿಪುಲವಾದ ಕನ್ನಡ ಬರೆವಣಿಗೆಯಿಂದ ಇಡೀ ನಾಡಿನಲ್ಲಿ ಭಾಷಾ ಜಾಗೃತಿಯನ್ನುಂಟುಮಾಡಿದ ಪ್ರಸಿದ್ಧ ಲೇಖಕರಲ್ಲೊಬ್ಬರು. ವೆಂಕಣ್ಣ, ವೆಂಕಟೇಶ ಎಂಬುದು ಮನೆಯ ಹೆಸರುಗಳು.
ಜನನ
ಬದಲಾಯಿಸಿಹುಟ್ಟಿದ್ದು ೧೮೬೯ ಜನೆವರಿಯಲ್ಲಿ,ಹಾವೇರಿ ತಾಲೂಕಿನ ಗಳಗನಾಥ ಎನ್ನುವ ಹಳ್ಳಿಯಲ್ಲಿ. ಮುಲ್ಕಿ ಪರೀಕ್ಷೆ ಹಾಗು ಶಿಕ್ಷಕರ ಟ್ರೇನಿಂಗ ಪರಿಕ್ಷೆ ಪಾಸು ಮಾಡಿದ ಬಳಿಕ ಇವರು ಶಿಕ್ಷಕರಾಗಿ ಕೆಲಸ ಮಾಡಿದರು. ೧೯೦೬ ರ ಸುಮಾರಿಗೆ ಗುತ್ತಲದಲ್ಲಿ ಕೆಲಸ ಮಾಡುತ್ತಿದ್ದಾಗ, ಸಮೀಪದ ಅಗಡಿಯಲ್ಲಿದ್ದ ಆನಂದವನದ ಶ್ರೀ ಶೇಷಾಚಲ ಸದ್ಗುರುಗಳಿಂದ ಪ್ರಭಾವಿತರಾದರು.ಅಲ್ಲಿಂದಲೇ ೧೯೦೮ನೆಯ ಇಸವಿಯಲ್ಲಿ “ ಸದ್ಬೋಧ ಚಂದ್ರಿಕೆ” ಎನ್ನುವ ಮಾಸಪತ್ರಿಕೆಯ ಪ್ರಾರಂಭಕ್ಕೆ ಕಾರಣರಾದರು ಹಾಗು ೧೯೧೮ ರವರೆಗೆ ಅದರ ಮುಖ್ಯ ಲೇಖಕರಾಗಿದ್ದರು.[೧]
ಬಾಲ್ಯ
ಬದಲಾಯಿಸಿ- ಗಳಗನಾಥರು ಹಾವೇರಿ ಜಿಲ್ಲೆಯ ಹಾವೇರಿ ತಾಲ್ಲೂಕಿನ ಗಳಗನಾಥ ಎಂಬ ಹಳ್ಳಿಯಲ್ಲಿ ೧೮೬೯ರ ಜನವರಿ ೫ರಂದು ಹುಟ್ಟಿದರು. ಇವರು ಊರಿನ ಕುಲಕರ್ಣಿಯವರ ಚೊಚ್ಚಲು ಮಗನಾದುದರಿಂದ ಇಡಿಯ ಊರಿನಲ್ಲಿ ಯೇ ಅಂದು ಒಂದು ದೊಡ್ಡ ಸಂಭ್ರಮ. ತನ್ನಿಮಿತ್ತ ಆ ಊರಿನ ಸ್ವಾಮಿಯಾದ ಗಳಗೇಶ್ವರನ ದೇವಾಲಯದಲ್ಲಿ ವಿಶೇಷ ಪೂಜಾದಿಗಳು ಜರುಗಿದವು. ಮುಂದೆ ವೆಂಕಣ್ಣನ ಬಾಲ್ಯ ಆ ಪರಿಸರದಲ್ಲಿಯೇ ಕಳೆಯಿತು.
- ವರದಾ ಹಾಗೂ ತುಂಗಭದ್ರಾ ನದಿಗಳ ಸಂಗಮ ಸ್ಥಾನದ ಹತ್ತಿರ ರಮಣೀಯ ಸ್ಥಳದಲ್ಲಿರುವ ಗಳಗನಾಥದ ಗಳಗೇಶ್ವರ ದೇವಾಲಯವೇ ಇವರ ಪ್ರಥಮ ಪಾಠಶಾಲೆಯಾಯಿತಲ್ಲದೆ ಅಲ್ಲಿ ಇವರಿಗೆ ಅಕ್ಕರೆಯ ಗುರುಕುಲ ಶಿಕ್ಷಣ ದೊರೆಯಿತು. ಇದರಿಂದಾಗಿ ಗಳಗನಾಥರಲ್ಲಿ ಸ್ವಾಭಿಮಾನ, ಸ್ವಭಾಷೆ ಹಾಗೂ ಸಂಸ್ಕೃತಿಗಳ ಬಗ್ಗೆ ವಿಶೇಷ ಪ್ರೇಮ ಬೆಳೆದವು.
- ಹಾವನೂರಿನಲ್ಲಿ ಮುಲ್ಕಿ ಪರೀಕ್ಷೆ ಮುಗಿಸಿದನಂತರ ಶಿಕ್ಷಕನಾಗಬೇಕೆಂಬ ಹಂಬಲವು ಸ್ವಭಾವತಃ ಇದ್ದುದರಿಂದ ಗಳಗನಾಥರು ಧಾರವಾಡ ಟ್ರೇನಿಂಗ್ ಕಾಲೇಜಿಗೆ ಸೇರಿದರು (೧೮೮೬). ಕಾಲೇಜಿನ ಎಲ್ಲಾ ಪರೀಕ್ಷೆಗಳಲ್ಲೂ ಮೇಲ್ದರ್ಜೆಯಲ್ಲಿ ತೇರ್ಗಡೆ ಹೊಂದಿ ಮೂರು ವರ್ಷದ ಶಿಕ್ಷಕ ತರಬೇತಿಯನ್ನು ಮುಗಿಸಿ (೧೮೮೯) ಶಿಕ್ಷಕರಾಗಿ ಕೆಲಸಕ್ಕೆ ಸೇರಿದರು. ಉತ್ತಮ ಶಿಕ್ಷಕರೆಂದು ಹೆಸರು ಗಳಿಸಿದರು.
- ಗಳಗನಾಥರ ಜೀವನದಲ್ಲಿ ಧಾರವಾಡ ಮಹತ್ತ್ವದ ಸ್ಥಾನವನ್ನು ಪಡೆದಿದೆ. ಅದು ಇವರನ್ನು ಸಾಹಿತಿಯನ್ನಾಗಿ ರೂಪಿಸಿದ ಕ್ಷೇತ್ರ. ಟ್ರೇನಿಂಗ್ ಕಾಲೇಜಿನ ವಾತಾವರಣ ತುಂಬ ಉತ್ತಮವಾಗಿತ್ತು. ಪಂಡಿತರಾದ ಕಿತ್ತೂರ ಅಯ್ಯನವರು, ಧೋಂಡೋ ನರಸಿಂಹ ಮುಳಬಾಗಲ ಅವರು ತಮ್ಮ ಪ್ರಭಾವಬೀರಿ ಗಳಗನಾಥರಿಗೆ ಕನ್ನಡ ಕಲಿಸಿದರು.
- ಅದೇ ಪ್ರಕಾರ ಪ್ರಭಾವ ಬೀರಿದವರು ರೊದ್ದ ಶ್ರೀನಿವಾಸರಾಯರು ಹಾಗೂ ಕರಂದೀಕರರು. ಕರಂದೀಕರರ ಅಚ್ಚುಕಟ್ಟು, ಶಿಸ್ತು, ಗಳಗನಾಥರಿಗೂ ಬಂದವು. ಆ ಸಮಯದಲ್ಲಿ ಅಪ್ರತ್ಯಕ್ಷವಾಗಿ ಇವರ ಜೀವನದ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳೆಂದರೆ ಮಹಾರಾಷ್ಟ್ರದ ಲೋಕಮಾನ್ಯ ಬಾಲ ಗಂಗಾಧರ ತಿಲಕರು ಹಾಗೂ ಹರಿ ನಾರಾಯಣ ಆಪ್ಟೆ ಅವರು.
ಜೀವನ
ಬದಲಾಯಿಸಿ- ಆಗ ಉತ್ತರ ಕರ್ನಾಟಕದಲ್ಲಿ ಟಿಳಕ ಹಾಗೂ ಆಪ್ಟೆಯವರ ಹೆಸರುಗಳು ಮನೆಮಾತಾಗಿದ್ದವು. ತಿಲಕರ ಕೇಸರಿ, ಆಪ್ಟೆಯವರ ಕರಮಣೂಕ ಪತ್ರಿಕೆಗಳು ಹೆಚ್ಚು ಪ್ರಚಾರದಲ್ಲಿದ್ದವು. ಕನ್ನಡ ಪತ್ರಿಕೆಗಳ ಅಭಾವದಿಂದಾಗಿ ಕನ್ನಡಿಗರು ಮರಾಠಿ ಪತ್ರಿಕೆ ಗಳನ್ನೇ ಓದುತ್ತಿದ್ದರು. ಇಷ್ಟೇ ಅಲ್ಲದೇ ಪೇಶ್ವೆ ಕಾಲದ ರಾಜಭಾಷೆಯಾದ ಮರಾಠಿ ತನ್ನ ರಾಜಕೀಯ ಮುದ್ರೆಯನ್ನೊತ್ತಿ ತನ್ನದೇ ಆದ ವಿಶಿಷ್ಟ ಪ್ರಭಾವವನ್ನು ಬೀರುತ್ತಿತ್ತು.
- ಟ್ರೇನಿಂಗ್ ಕಾಲೇಜಿಗೆ ಬರುತ್ತಿದ್ದ ಈ ಎರಡು ಪತ್ರಿಕೆಗಳನ್ನು ಗಳಗನಾಥರು ತಪ್ಪದೆ ಓದುತ್ತಿದ್ದರಲ್ಲದೆ ತಮ್ಮ ಗೆಳೆಯರೊಂದಿಗೆ ಅಲ್ಲಿನ ವಿಷಯಗಳನ್ನು ಚರ್ಚಿಸುತ್ತಿದ್ದರು. ತಿಲಕರ ವಿಚಾರಧಾರೆ ಇವರ ಮನಸ್ಸನ್ನು ಸಂಪೂರ್ಣ ಆಕರ್ಷಿಸಿತ್ತು; ಅಷ್ಟೇ ಸತ್ತ್ವಶಾಲಿಯಾಗಿ ಆಪ್ಟೆಯವರ ಕಾದಂಬರಿಗಳಲ್ಲಿಯ ಕಲ್ಪನಾ ವೈಭವದ ವೈಖರಿ ಮನಸ್ಸನ್ನು ಬೆರಗುಗೊಳಿಸುತ್ತಿತ್ತು. ಆ ಭಾಗದ ಕನ್ನಡ ಜನತೆ ಮರಾಠಿ ವ್ಯಾಮೋಹದಲ್ಲಿದ್ದುದು ಇವರಿಗೆ ಕಂಡುಬಂದಿತು.
- ತಿಲಕರ ವಿಚಾರಧಾರೆಯನ್ನೂ ಆಪ್ಟೆಯವರ ಕಾದಂಬರಿ ಕತೆಗಳನ್ನೂ ಕನ್ನಡದಲ್ಲಿಯೇ ಹೇಳಿ ಕನ್ನಡಿಗರ ವಾಚನಾಭಿರುಚಿಯನ್ನು ಬೆಳೆಸುವ ಉತ್ಕಟ ಆಸೆ ಇವರಲ್ಲಿ ಮೂಡಿತು. ಅದೇ ಕಾಲಕ್ಕೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದವರು ಕನ್ನಡ ಗ್ರಂಥಕರ್ತರಿಗೆ ಬಹುಮಾನ ಕೊಡುವ ಪರಿಪಾಠವನ್ನು ಹಾಕಿದರು. ಆ ಸಂದರ್ಭದಲ್ಲಿ ಇವರು ಬರೆದ ಪ್ರಥಮ ಕಾದಂಬರಿ ಪ್ರಬುದ್ಧ ಪದ್ಮನಯನೆಗೆ ಬಹುಮಾನ ದೊರಕಿತು.
- ಹೀಗೆ ೧೮೯೮ರಲ್ಲಿ ಆರಂಭವಾದ ಇವರ ಬರೆವಣಿಗೆ ೧೯೪೨ರ ವರೆಗೂ ಅವ್ಯಾಹತವಾಗಿ ಸಾಗಿತು. ನರೇಂದ್ರ, ಶಿರಗುಪ್ಪ, ಅಗಡಿ, ಹಾವೇರಿ ಇವು ಇವರು ನೆಲಸಿನಿಂತು ಕನ್ನಡಕ್ಕೆ ದುಡಿದ ಇತರ ಸ್ಥಳಗಳು. ಅಗಡಿಯ ಶ್ರೀ ಶೇಷಾಚಲ ಸ್ವಾಮಿಗಳು ಗಳಗನಾಥರ ಮೇಲೆ ವಿಶೇಷ ಪ್ರಭಾವವನ್ನು ಬೀರಿದರು. ಅಂತೆಯೇ ಸರ್ಕಾರಿ ಕೆಲಸದಲ್ಲಿ ಘರ್ಷಣೆ ಬಂದಾಗ ಕಾಲಕ್ಕೆ ಮೊದಲೆ ಪಿಂಚಣಿ ಪಡೆದು ಅಗಡಿಯ ಆನಂದವನದಲ್ಲಿ ನೆಲೆಸಿದರು.
- ಅಲ್ಲಿನ ವಾತಾವರಣ ವಿಪರೀತವಾದಾಗ ಹಾವೇರಿಗೆ ಹೋಗಿ ರಾಮದೇವರ ಗುಡಿಯ ಆವಾರವನ್ನೆ ತಮ್ಮ ಆಶ್ರಮವನ್ನಾಗಿ ಮಾಡಿಕೊಂಡು ಸುತ್ತಣ ಜನತೆಯೊಂದಿಗೆ ಬೆರೆತು ಬಾಳಿದರು. ಆನಂದವನದಲ್ಲಿದ್ದಾಗ ಸದ್ಬೋಧ ಚಂದ್ರಿಕೆ ಎಂಬ ಪತ್ರಿಕೆಯ ಮೂಲಕ ಮತ್ತು ಹಾವೇರಿಯಲ್ಲಿ ಇರತೊಟ್ಟಂದಿನಿಂದ "ಸದ್ಗುರು" (೧೯೧೯) ಎಂಬ ಪತ್ರಿಕೆಯ ಮೂಲಕ ತಮ್ಮ ಬರೆವಣಿಗೆಯನ್ನು ಪ್ರಕಟಿಸಿದರು. ಸದ್ಬೋಧ ಚಂದ್ರಿಕೆಗೆ ೭೦೦೦ದಷ್ಟು ಚಂದಾದಾರರು ಇದ್ದರೆಂಬುದು ನಿಜವಾಗಿಯೂ ಅಚ್ಚರಿಯ ವಿಷಯ.
- ಅಂದು ಹಾವೇರಿ ತಾಲೂಕಿನ ಗುತ್ತಲದಲ್ಲಿ ಬೀಕರ ಕ್ಷಾಮ. ಗುತ್ತಲದಲ್ಲಿಯೇ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಗಳಗನಾಥರು. ಶಾಲಾ ಮಕ್ಕಳೊಂದಿಗೆ ಶ್ರಮದಾನದ ಮೂಲಕ ಬಾವಿಯನ್ನು ತೋಡಿಸಿ ಗುತ್ತಲದ ನೀರಿನ ಬರವನ್ನು ನಿವಾರಸಿದ್ದರು. ಶ್ರಮದಾನದ ಮೂಲಕ ದೇಶದಲ್ಲಿಯೇ ಪ್ರಥಮ ಬಾವಿಯನ್ನು ತೋಡಿಸಿದ ಕೀರ್ತಿ ಅದು ಗಳಗನಾಥರಿಗೆ ಸಲ್ಲುತ್ತದೆ.
- ಗುತ್ತಲದಲ್ಲಿನ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದ ಸಂದರ್ಭದಲ್ಲಿ ಬ್ರಿಟಿಷ್ ಅಧಿಕಾರಿ ಶಾಲೆಗೆ ಬಂದು ಗಳಗನಾಥರನ್ನು ಕರೆಸಲು ಮಕ್ಕಳಿಗೆ ಪಾಠ ಮಾಡುತ್ತಿದ್ದ ಗಳಗನಾಥರು ಬ್ರೀಟಿಷ ಅಧಿಕಾರಿ ಆಜ್ಞೆಗೆ ಓಗೊಡದೇ ಪಾಠ ಮಾಡುವತ್ತ ತಲ್ಲೀನರಾಗಿ ಪಾಠ ಮುಗಿದ ತಕ್ಷಣ ಆ ಬ್ರಿಟಿಷ್ ಅಧಿಕಾರಿಯನ್ನು ಭೇಟಿ ಮಾಡಿದಾಗ ಆ ಅಧಿಕಾರಿ ಗಳಗನಾಥರ ಮೇಲೆ ಜೋರ ಧ್ವನಿಯಿಂದ ದರ್ಫವನ್ನು ತೋರುತ್ತಿದ್ದಾಗ "ನನಗೆ ನನ್ನ ಮಕ್ಕಳು ಹಾಗೂ ಕರ್ತವ್ಯ ಮುಖ್ಯ" ಎಂದು ಉತ್ತರಿಸಿದ ತಕ್ಷಣ ಆಗ ಬ್ರಿಟಿಷ್ ಅಧಿಕಾರಿ ಗಳಗನಾಥರ ಕರ್ತವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ತನ್ನ ತಪ್ಪಿಗೆ ಕ್ಷಮೆ ಕೋರಿದನು.
ಸಾಹಿತ್ಯ ಸೇವೆ
ಬದಲಾಯಿಸಿ- ಬಂಗಾಲಿ ಸಾಹಿತ್ಯಕ್ಕೆ ಬಂಕಿಮ ಚಂದ್ರ, ಮರಾಠಿ ಸಾಹಿತ್ಯಕ್ಕೆ ಹರಿ ನಾರಾಯಣ ಆಪ್ಟೆ ಯಾವ ಬಗೆಯ ಸೇವೆಯನ್ನು ಸಲ್ಲಿಸಿದರೊ ಅದೇ ಬಗೆಯ ಸೇವೆಯನ್ನು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಪ್ರಮುಖ ಮಹನೀಯರು ಗಳಗನಾಥರು. ಇವರು ವಿಶೇಷವಾಗಿ ಹರಿ ನಾರಾಯಣ ಆಪ್ಟೆಯವರ ಗ್ರಂಥಗಳನ್ನು ಅನುವಾದಿಸಿ ಕೊಟ್ಟರು. ಮರಾಠೀ ಸಾಹಿತ್ಯ ಕ್ಷೇತ್ರದಲ್ಲಿ ಆಪ್ಟೆಯವರು ಯುಗಪ್ರವರ್ತಕ ಲೇಖಕರು.
- ಕಥಾನಕ ಪ್ರಾಧಾನ್ಯ, ವ್ಯಕ್ತಿದರ್ಶನ, ಮೂರ್ತಿಮತ್ತ ಪ್ರಸಂಗವರ್ಣನೆ, ವೈಚಿತ್ರ್ಯ ಮತ್ತು ಅದ್ಭುತಗಳ ನಿರೂಪಣೆಯಲ್ಲಿ ಪಳಗಿದ ಚಿತ್ತಾಕರ್ಷಕ ಶೈಲಿ, ಆಪ್ಟೆಯವರದು. ಆ ಶೈಲಿಯನ್ನೇ ಗಳಗನಾಥರು ಅನುಸರಿಸಿದರು. ಅನುಸರಣೆ ಇದ್ದರೂ ಅದು ಸಂಪೂರ್ಣ ಅನುಕರಣೆಯಲ್ಲ. ಒಂದು ಉದಾತ್ತವಾದ ಭಾವನೆಯಿಂದ, ದಿವ್ಯವಾದ ಆದರ್ಶದಿಂದ, ಅದ್ಭುತವಾದ ದೃಷ್ಟಿಯಿಂದ ಜನರಲ್ಲಿ ಪ್ರೇಮ, ದಯೆ, ತ್ಯಾಗ, ಸ್ವಾತಂತ್ರ್ಯ, ಸ್ವಾಭಿಮಾನಗಳು ಒಡಮೂಡಬೇಕು, ನೆಲೆನಿಲ್ಲಬೇಕು, ಬೆಳಗಬೇಕು ಎಂಬ ಹೆಗ್ಗುರಿಯಿಂದ ಗಳಗನಾಥರು ಸಾಹಿತ್ಯವನ್ನು ಸೃಜಿಸಿದರು. ಪ್ರಾಯಶಃ ಇದೇ ಕಾರಣದಿಂದ ಇವರು ಸಮಕಾಲೀನ ಚಿತ್ರವನ್ನು ಕೊಡುವ ಸಾಮಾಜಿಕ ಕಾದಂಬರಿಯನ್ನು ರಚಿಸಲಿಲ್ಲವೆಂದು ತೋರುತ್ತದೆ.
- ಗಳಗನಾಥರು ರಚಿಸಿದ ಸಾಹಿತ್ಯ ವಿಪುಲವಾದುದು, ವಿವಿಧ ಮುಖವಾದುದು-೨೪ ಕಾದಂಬರಿಗಳು, ೯ ಪೌರಾಣಿಕ ಕಥೆಗಳು, ೩ ಸತ್ಪುರುಷ ಚರಿತ್ರೆಗಳು (ಮಹಾಭಾರತದ ೧೮ ಪರ್ವಗಳಲ್ಲಿ ಮೊದಲಿನ ೨ ಪರ್ವಗಳು ಅಚ್ಚಾಗಿವೆ; ಮಿಕ್ಕಿನ ೧೬ ಪರ್ವ ಗಳು ಅಚ್ಚಾಗಿಲ್ಲ. ಕಲಿಕುಠಾರದ ೨ನೆಯ ಭಾಗ ಮತ್ತು ಬಿಚ್ಚುಗತ್ತಿಯ ೨ನೆಯ ಭಾಗ ಅಚ್ಚಾಗಿಲ್ಲ.) ಮತ್ತು ೮ ನಿಬಂಧಗಳು ಇಲ್ಲವೇ ಪ್ರಬಂಧಗಳು, ೨೪ ಕಾದಂಬರಿಗಳಲ್ಲಿ ಆರು ಸ್ವತಂತ್ರ, ಮಿಕ್ಕಿನವು ಅನುವಾದಿತ.
- ಅನುವಾದಿತ ಕಾದಂಬರಿಗಳನ್ನು ಅನುವಾದಗಳೆಂದು ಹೇಳುವುದಕ್ಕಿಂತ ರೂಪಾಂತರಗಳೆಂದು ಕರೆಯುವುದೇ ಹೆಚ್ಚು ಸಮಂಜಸ. ಕಮಲಕುಮಾರಿ ಕೃತಿಯೊಂದೇ ಶಬ್ದಶಃ ಅನುವಾದ; ಇದಕ್ಕೆ ಮೂಲ, ಆಪ್ಟೆಯವರ ಕೃತಿ "ಗಡ ಆಲಾ ಪಣ ಸಿಂಹ ಗೇಲಾ" (ಕೋಟೆ ಕೈವಶವಾಯಿತು ಆದರೆ ಸಿಂಹ ಹೋಯಿತು) ಎಂಬುದು.
- ಕಲ್ಪಕತೆ, ಭಾವೋದ್ರೇಕತೆ, ಐತಿಹಾಸಿಕ ವ್ಯಕ್ತಿಗಳ ಮೂಲಕ ವೀರಸಾಹಸರಸಿಕತೆ ಸಾಧುಸಂತರ ಪಾತ್ರಗಳ ಮೂಲಕ ಸದುಪದೇಶ-ಇವನ್ನು ಕನ್ನಡ ಜನತೆಗೆ ಗಳಗನಾಥರು ತಮ್ಮ ಹಲವಾರು ಕೃತಿಗಳ ಮೂಲಕ ಒದಗಿಸಿದ್ದಾರೆ. ಇವರ ಕೃತಿಗಳಲ್ಲಿ ಮಾನವೀಯ ಹೋರಾಟ ರಾಷ್ಟ್ರೀಯತೆಯಲ್ಲಿ ಪರ್ಯವಸಾನವಾಗಿ ಈಶ್ವರೀ ಭಾವದತ್ತ ನಡೆಯುತ್ತದೆ.
- ಕೃತಿಗಳಲ್ಲಿ ಸಮಕಾಲೀನ ರಾಜಕೀಯ ಆಂದೋಲನಗಳ ಪ್ರಭಾವ ಇಲ್ಲದಿದ್ದರೂ ಸನಾತನಧರ್ಮದ ಪುನರುಜ್ಜೀವನದ ಹೆಬ್ಬಯಕೆ ಇತ್ತೆಂಬುದು ಸ್ಪಷ್ಟವಿದೆ. ಇದು ಗಳಗನಾಥರ ಜೀವನಕಾಲದ ಭಾರತೀಯ ಸಾಹಿತ್ಯದ ಲಕ್ಷಣವೇ ಆಗಿತ್ತು. ಆದುದರಿಂದ ಅವು ಆಗಿನ ಕಾಲಕ್ಕೆ ತಕ್ಕಂತೆ ಜನರ ಮನೋಧರ್ಮವನ್ನು ಸಂಸ್ಕಾರಗೊಳಿಸಿದ, ಜಾಗೃತಿಯನ್ನುಂಟುಮಾಡಿದ ಕೃತಿಗಳಾದವು.
- ಗಳಗನಾಥರು ಸಂಸ್ಕೃತ ಭಾಷೆ ಹಾಗೂ ಸಾಹಿತ್ಯಗಳಲ್ಲಿ ವಿಶೇಷ ಪ್ರೇಮವುಳ್ಳವರಾಗಿದ್ದರೂ ಸಂಸ್ಕೃತ ಶಬ್ದಗಳ ಜಡಪ್ರಯೋಗಗಳಿಗೆ ಮರುಳಾಗದೆ, ಎಷ್ಟು ಬೇಕೋ ಅಷ್ಟನ್ನು ಮಾತ್ರ ತೆಗೆದುಕೊಂಡು ಅದಕ್ಕೆ ತಿರುಳ್ಗನ್ನಡ ಶಬ್ಧಗಳನ್ನೂ ಕೆಲವು ಬಾರಿ ಮನೆಮಾತುಗಳ ಪಡೆನುಡಿಗಳನ್ನೂ ಸೇರಿಗೆ ಸವ್ವಾಸೇರು ಎಂಬಂಥ ಗಾದೆಮಾತುಗಳನ್ನೂ ಬೆರೆಸಿ ಹಾಳತವಾದ ಶೈಲಿಯೊಂದನ್ನು ಸೃಷ್ಟಿಸಿದರು.
- ಅಷ್ಟೆ ಅಲ್ಲ ಉತ್ತರ, ಮಧ್ಯ, ದಕ್ಷಿಣ ಕನ್ನಡಗಳಿಗೆ ಸಮಾನ ಬೆಲೆ ಕೊಟ್ಟು ಎಲ್ಲರಿಗೂ ಅರ್ಥವಾಗಬಲ್ಲ ಕನ್ನಡ ಒಂದೇ ಎಂಬುದನ್ನೂ ತಮ್ಮ ಕೃತಿಗಳ ಮೂಲಕ ವ್ಯಕ್ತಪಡಿಸಿದರು. ಮೈಸೂರಿನ ಮಹಾರಾಜಾ ಕಾಲೇಜಿನ ಕರ್ಣಾಟಕ ಸಂಘ ಇವರಿಗರ್ಪಿಸಿದ ಮಾನಪತ್ರವೇ ಇದಕ್ಕೆ ಸಾಕ್ಷಿ. ಹೀಗೆ ಕನ್ನಡಕ್ಕೆ ಏಕರೂಪತೆಯನ್ನು ಕೊಟ್ಟವರಲ್ಲೂ ಇವರು ಆದ್ಯರಾಗಿದ್ದಾರೆ.
ಕಾಲಾನುಕ್ರಮವಾಗಿ ಹೊರಬಂದ ಇವರ ಕೃತಿಗಳ ಪಟ್ಟಿಕೆ ಹೀಗಿದೆ
ಬದಲಾಯಿಸಿಕಾದಂಬರಿಗಳು
ಬದಲಾಯಿಸಿ- ಪದ್ಮನಯನೆ ಅಥವಾ ಪ್ರಬುದ್ಧ ಪದ್ಮನಯನೆ, ಸ್ವತಂತ್ರ ರಮ್ಯಾದ್ಭುತ ಕಾದಂಬರಿ.
- ಕಮಲಕುಮಾರಿ, ಮರಾಠಿಯ ಹರಿನಾರಾಯಣ ಆಪಟೆಯವರ ಕೃತಿ - ಗಡ ಆಲಾ ಪಣ ಸಿಂಹ ಗೇಲಾ.(ರೂಪಾಂತರವಾಗಿದೆ.)
- ಮೃಣಾಲಿನಿ ಅಥವಾ ರಾಣಿ ಮೃಣಾಲಿನಿ. ಇದು ಬಂಕಿಮ್ಚಂದ್ರರ ಮೃಣಾಲಿನಿ ಕೃತಿಯ ಮರಾಠಿ ಅನುವಾದದ ಅನುವಾದ.
- ವೈಭವ. ಮೌರ್ಯರ ಇತಿಹಾಸಕ್ಕೆ ಸಂಬಂಧಪಟ್ಟಿದೆ. ಇದರ ಇನ್ನೊಂದು ಹೆಸರೇ ಚಾಣಕ್ಯನ ಕಾರಸ್ಥಾನ. ಇದರ ಕತೆ ಮುದ್ರಾರಾಕ್ಷಸ (ಸಂಸ್ಕೃತ) ಹಾಗೂ ಕೆಂಪುನಾರಾಯಣನ ಮುದ್ರಾಮಂಜೂಷಗಳಿಂದ ಭಿನ್ನವಾಗಿದೆ.
- ಕುಮುದಿನಿ ಅಥವಾ ಬಾಲಕ್ಕೆ ಬಡಿದಾಟ. 2ನೆಯ ಸ್ವತಂತ್ರ ಕಾದಂಬರಿ ಹಾಗೂ ಕರ್ನಾಟಕದ ಇತಿಹಾಸಕಕ್ಕೆ ಸಂಬಂಧಪಟ್ಟ ಮೊದಲ ಕಾದಂಬರಿ (೧೯೧೩). ಚಂದ್ರಗಿರಿಯಲ್ಲಿ ಬಾಳಿದ ವಿಜಯನಗರದ ರಾಜಮನೆತನದ ಕೊನೆಗಾಲದ ಚಿತ್ರವೇ ಇದರ ವಸ್ತು.
- ಈಶ್ವರೀ ಸೂತ್ರವೆಂಬುದು ಉಷಃಕಾಲ ಎಂಬ ಮರಾಠೀ ಗ್ರಂಥದ ಅನುವಾದ. ಮರಾಠರ ಇತಿಹಾಸಕ್ಕೆ ಸಂಬಂಧ ಪಟ್ಟಿದೆ.
- ಕ್ಷಾತ್ರತೇಜ. ಇದು ಮರಾಠೀ ಕೃತಿ ರೂಪನಗರೇಚಿ ರಾಜಕನ್ಯಾ ಎಂಬುದರ ಅನುವಾದ. ರಾಜಪುತ್ರರ ಇತಿಹಾಸಕ್ಕೆ ಸಂಬಂಧಪಟ್ಟಿದೆ. ರಜಪುತರ ಕ್ಷಾತ್ರತೇಜಸ್ಸನ್ನೇ ಎತ್ತಿ ತೋರುತ್ತದೆ.
- ಧರ್ಮರಹಸ್ಯ ಅಥವಾ ಸತ್ಸಮಾಗಮ ಪ್ರಭಾವ. ಇದಕ್ಕೆ ಮೂಲ ಮರಾಠಿಯ ಎರಡು ಕೃತಿಗಳು:
- ಸಮ್ರಾಟ ಅಶೋಕಅಶೋಕ ಅಥವಾ ಆರ್ಯಾ ವೃತ್ತಾಂತಲಾ ಪಹಿಲಾ. ಚಕ್ರವರ್ತಿ ರಾಜಾಚಂಡಾಶೋಕ ಧರ್ಮಾಶೋಕನಾದುದೇ ಇದರ ವಸ್ತು.
- ಸತ್ವಸಾರ ಅಥವಾ ಶೌರ್ಯಸಂಜೀವಿನಿ-ರಜಪುತರ ಇತಿಹಾಸಕ್ಕೆ ಸಂಬಂಧಪಟ್ಟಿದೆ. ಗಳಗನಾಥರ 3ನೆಯ ಸ್ವತಂತ್ರ ಕಾದಂಬರಿಯಿದು. ಮೇವಾಡದ ಪ್ರತಾಪಸಿಂಹನ ಕತೆಯೇ ಇದರ ವಸ್ತು.
- ತಿಲೋತ್ತಮೆ ಅಥವಾ ಸರಸ ಪ್ರೇಮ. ಅಕ್ಬರನ ಕಾಲದಲ್ಲಿದ್ದ ರಾಣಾ ಮಾನಸಿಂಗನ ಮಗ ಜಗತ್ಸಿಂಗನ ಪ್ರೇಮ ಕಥೆ. ರಜಪುತರ ಇತಿಹಾಸಕ್ಕೆ ಸಂಬಂಧಪಟ್ಟಿದೆ. ಇಲ್ಲಿಯ ಪ್ರೇಮದಲ್ಲಿ ಸರಸಕ್ಕಿಂತ ವಿರಸವೇ ಹೆಚ್ಚು. ಗಳಗನಾಥರು ವೀರರ ಕತೆಗಳಂತೆ ಪ್ರೇಮಕಥೆಯನ್ನು ಹೇಳಲಾರರೆಂಬುದು ಇಲ್ಲಿ ವ್ಯಕ್ತವಾಗಿದೆ.
- ಕನ್ನಡಿಗರ ಕರ್ಮಕಥೆ ಇದು ವಿಜಯನಗರದ ಪತನವನ್ನು ಸೂಚಿಸುವ ಕಾದಂಬರಿ. ಇದಕ್ಕೆ ಮೂಲ ಮರಾಠೀಕೃತಿ ವಜ್ರಾಘಾತ.
- ಶಿವಪ್ರಭುವಿನ ಪುಣ್ಯ. ಮರಾಠೀ ಇತಿಹಾಸಿಕ ಕಾದಂಬರಿಯ ಅನುವಾದ.ಶಿವಾಜಿಯ ಅನಂತರದಲ್ಲಿ ಆತನ ಮನೆಯಲ್ಲಿ ನಡೆದ ಘಟನೆಗಳೇ ಇದರ ವಸ್ತು.
- ಕುರುಕ್ಷೇತ್ರ ಇದು ಪಾಣೀಪತಚಾ ಮೋಹಿಮ್ ಎಂಬುದರ ಅನುವಾದ; ಪೇಶ್ವೆಯವರ ಐತಿಹಾಸಕ್ಕೆ ಸಂಬಂಧಪಟ್ಟಿದೆ.
- ಮರಾಠರ ಅಭ್ಯುದಯ. ಇದು ಶಿವಾಜಿ ಅಫ್ಜಲಖಾನನನ್ನು ಕೊಂದ ಕತೆಯನ್ನು ವಿವರಿಸುತ್ತದೆ. ಮರಾಠಿಯಿಂದ ಅನುವಾದಿತ.
- ಛತ್ರಪತಿ. ಛತ್ರಪತಿ ಶಿವಾಜಿಯ ಕತೆಗೆ ಸಂಬಂಧಿಸಿದೆ.
- ಮಾಧವಕರುಣವಿಲಾಸ. ಗಳಗನಾಥರ ನಾಲ್ಕನೆಯ ಸ್ವತಂತ್ರ ಕಾದಂಬರಿ. ಇದು ತಮ್ಮ ಹಿರಿಯ ಕೃತಿಯೆಂದು ಅವರೇ ಹೇಳಿಕೊಂಡಿದ್ದಾರೆ. ವಿಜಯನಗರ ರಾಜ್ಯ ಸ್ಥಾಪನೆಯ ವಿಷಯವೇ ಇದರ ವಸ್ತು. ಕನ್ನಡ ಜನತೆಯಲ್ಲಿ ಜಾಗೃತಿಯನ್ನುಂಟು ಮಾಡಿದ ಮಹಾಕೃತಿ.
- ಗೃಹಕಲಹ. ಮರಾಠೀ ಕೃತಿಯ ಅನುವಾದ. ಮರಾಠರ ಇತಿಹಾಸಕ್ಕೆ ಸಂಬಂಧಪಟ್ಟಿದೆ.
- ರಾಣಾ ರಾಜಸಿಂಹ. ರಜಪುತ ಇತಿಹಾಸಕ್ಕೆ ಸಂಬಂಧಿಸಿದ ಮರಾಠೀ ಕೃತಿಯ ಅನುವಾದ.
- ಧಾರ್ಮಿಕತೇಜ ಅಥವಾ ಪರಹಿತದಕ್ಷತಾ. ಇದೂ ರಜಪುತರ ಇತಿಹಾಸಕ್ಕೆ ಸಂಬಂಧಿಸಿದೆ. ಬುಂದೇಲ ಖಂಡದ ರಾಜಾ ಛತ್ರಸಾಲನ ಕಥೆ. ಮರಾಠಿಯಿಂದ ಅನುವಾದಿತ.
- ಸಂಸಾರ ಸುಖ. ಮರಾಠಿಯಿಂದ ಅನುವಾದಿತ. ಮೊಗಲರ ಇತಿಹಾಸಕ್ಕೆ ಸಂಬಂಧಪಟ್ಟಿದೆ.
- ಸ್ವರಾಜ್ಯ ಸುಗಂಧ. ಅನುವಾದಿತ ಕೃತಿ. ಮರಾಠರ ಇತಿಹಾಸಕ್ಕೆ ಸಂಬಂಧಿಸಿದೆ.
- ಸತ್ವಾದರ್ಶ.
- ದುರ್ಗದ ಬಿಚ್ಚುಗತ್ತಿ. ಚಿತ್ರದುರ್ಗದ ನಾಯಕರ ಇತಿಹಾಸಕ್ಕೆ ಸಂಬಂಧಪಟ್ಟಿದೆ. ಗಳಗನಾಥರ ಐದನೆಯ ಸ್ವತಂತ್ರ ಕಾದಂಬರಿ. ಒಂದನೆಯ ಭಾಗ ಮಾತ್ರ ಅಚ್ಚಾಗಿದೆ.
- ಭಗವತೀ ಕಾತ್ಯಾಯಿನಿ. ಪೌರಾಣಿಕ ಕಾದಂಬರಿ. ಗಳಗನಾಥರ ಆರನೆಯ ಸ್ವತಂತ್ರ ಕಾದಂಬರಿ.
ಪೌರಾಣಿಕ ಕಥೆಗಳು
ಬದಲಾಯಿಸಿ- ಗಿರಿಜಾಕಲ್ಯಾಣ
- ಉತ್ತರರಾಮಚಂದ್ರ
- ನಳಚರಿತ್ರ
- ಚಿದಂಬರ ಚರಿತ್ರ
- ಭಾಗವತಾಮೃತ
- ಶೈವಸುಧಾರ್ಣವ
- ತುಲಸೀರಾಮಾಯಣ
- ಮಹಾಭಾರತ (ಆದಿಪರ್ವ ಮತ್ತು ಸಭಾಪರ್ವ ಮಾತ್ರ ಅಚ್ಚಾಗಿವೆ.)
ಸತ್ಪುರುಷ ಚರಿತ್ರೆಗಳು
ಬದಲಾಯಿಸಿ- ನಿರ್ಯಾಣ ಮಹೋತ್ಸವ
- ಸದ್ಗುರು ಪ್ರಭಾವ
- ಕಲಿಕುಠಾರ (1ನೆಯ ಭಾಗ ಮಾತ್ರ ಅಚ್ಚಾಗಿದೆ.)
ನಿಬಂಧಗಳು
ಬದಲಾಯಿಸಿ- ದಾಂಪತ್ಯ
- ಕುಟುಂಬ
- ಸುಂದರಲೇಖ ಸಮುಚ್ಚಯ
- ನಿಬಂಧ ಶಿಕ್ಷಣ
- ಕನ್ಯಾಶಿಕ್ಷಣ
- ರಾಜನಿಷ್ಠೆ
- ಶ್ರೇಷ್ಠ ಸದುಪದೇಶ ಹಾಗೂ
- ಬ್ರಾಹ್ಮಣ ಪ್ರಾಪ್ತಿ ಸಾಧನೆ.
ಪ್ರಶಸ್ತಿಗಳು
ಬದಲಾಯಿಸಿಕ್ರಿ.ಶ.೧೮೯೭ನೆಯ ಇಸವಿಯಲ್ಲಿ ಗಳಗನಾಥರು ಬರೆದ ---“ಪದ್ಮನಯನೆ”--- ಎಂಬ ಕಾದಂಬರಿಗೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದವರು ಏರ್ಪಡಿಸಿದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸಿಕ್ಕಿತ್ತು. ಗಳಗನಾಥರು ಐದು ಸ್ವತಂತ್ರ ಕಾದಂಬರಿಗಳನ್ನು ಹಾಗು ೧೫-೧೬ ಅನುವಾದಿತ ಕಾದಂಬರಿಗಳನ್ನು ರಚಿಸಿದ್ದಾರೆ.
ಗಳಗನಾಥರ ಕೃತಿಗಳು
ಬದಲಾಯಿಸಿ- ಪ್ರಬುದ್ಧ ಪದ್ಮನಯನೆ
- ನಿಬಂಧ ಶಿಕ್ಷಣ
- ಈಶ್ವರೀಸೂತ್ರ
- ಮರಾಠರ ಅಭ್ಯುದಯ
- ಛತ್ರಪತಿ
- ಕಮಲಕುಮಾರಿ
- ಶಿವಪ್ರಭುವಿನ ಪುಣ್ಯ
- ಗೃಹಕಲಹ
- ರಾಣಿ ಮೃಣಾಲಿನಿ
- ಧಾರ್ಮಿಕತೇಜ
- ಧರ್ಮರಹಸ್ಯ
- ಕ್ಷಾತ್ರತೇಜ
- ತಿಲೋತ್ತಮೆ
- ರಾಣಾ ರಾಜಸಿಂಹ
- ವೈಭವ
- ಸತ್ವಸಾರ
- ಕುಮುದಿನಿ
- ಸಂಸಾರಸುಖ
- ಲಕ್ಷ್ಮೀಬಾಯಿ
- ಸತಿ ಸಾಹಸ
- ಅದ್ಭುತ ಶೌರ್ಯ
- ಶುಕಸಂಜೀವನಿ
- ಭಾಗವತಾಮೃತ
- ಶೈವ ಸುಧಾರ್ಣವ
- ತುಲಸೀ ರಾಮಾಯಣ
- ಕನ್ನಡಿಗರ ಕರ್ಮಕಥೆ
- ಆನಂದ ರಾಮಾಯಣ
- ವೆಂಕಟೇಶಮಹಾತ್ಮ್ಯ
- ದುರ್ಗದ ಬಿಚ್ಚುಗತ್ತಿ-ಭಾಗ ೧ ಮತ್ತು ೨
- ಚಿದಂಬರ ಚರಿತ
- ಉತ್ತರ ರಾಮಚರಿತ
- ಗಿರಿಜಾ ಕಲ್ಯಾಣ
- ಸತ್ವಾದರ್ಶ
- ಭಕ್ತಿವಿಜಯ
- ಶ್ರೀಸುರೇಶ್ವರಾಚಾರ್ಯ ಚರಿತ್ರೆ
- ದತ್ತ ಕಥಾಮೃತಸಾರ
- ಸಾಧು ಸದಾಶಿವಲೀಲೆ
- ಫಕೀರೇಶ್ವರಪುರಾಣ
- ಕುಟುಂಬ
- ದಾಂಪತ್ಯ
- ನಿರ್ಯಾಣ ಮಹೋತ್ಸವ
- ಹಿಂದೂ ಸಮಾಜವ್ಯವಸ್ಥೆ
- ವರ್ಣಾಶ್ರಮಧರ್ಮ
- ಪುನರ್ಜನ್ಮ
- ಮಾಧವ ಕರುಣಾವಿಲಾಸ
- ಗೀತಾವಲೋಕನೆ
- ಶ್ರೇಷ್ಠ-ಸದುಪದೇಶ
- ಬ್ರಾಹ್ಮಣ ಪ್ರಾಪ್ತಸಾಧನ
- ಕಣ್ವಸಂಹಿತೆ
- ಸುಂದರಲೇಖ ಸಮುಚ್ಚಯ
- ಭಗವತಿ ಕಾತ್ಯಾಯಿನಿ
- ಕಲಿಕುಠಾರ -ಭಾಗ ೧ ಮತ್ತು ೨
- ನಳಚರಿತ್ರೆ
- ರಹಸ್ಯಗಳು
- ಮಹಾಭಾರತ - ೧೮ ಪರ್ವಗಳು
- ನಿಬಂಧ ಲೇಖನ
- ಆಧ್ಯಾತ್ಮ ರಾಮಾಯಣ
ನಿಧನ
ಬದಲಾಯಿಸಿಕಾಲ ಕಳೆದಂತೆ ಗಳಗನಾಥರ ಆದಾಯ ಇಳಿಮುಖವಾಗಹತ್ತಿ ಸಾಲ ಬೆಳೆಯತೊಡಗಿತು. ಸಾಲ ತೀರಿಸುವುದಕ್ಕಾಗಿ ಗಳಗನಾಥರು ಪುಸ್ತಕಗಳನ್ನು ಬರೆದು ಊರಿಂದೂರಿಗೆ, ಓಣಿಯಿಂದ ಓಣಿಗೆ, ಮನೆಯಿಂದ ಮನೆಗೆ, ಮಳೆಗಾಳಿ ಚಳಿಬಿಸಿಲು ಒಂದನ್ನೂ ಗಮನಿಸದೆ ತಿರುಗಿ ತಿರುಗಿ ಸೋತು ಸುಣ್ಣವಾದರು. ಸಾಲದ ಶೂಲ ನಿತ್ಯ ತಿವಿದಿತಾಗಿ ಆರೋಗ್ಯ ತೀರ ಕೆಟ್ಟು ಕ್ಯಾನ್ಸರ್ ಮೊದಲಾಯಿತು. ಗಳಗನಾಥರು ಆ ಬೇನೆಯಿಂದ ತಮ್ಮ ೭೪ನೆಯ ವಯಸ್ಸಿನಲ್ಲಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ೧೯೪೨ರ ಏಪ್ರೀಲ್ ೨೨ರಂದು ಕೊನೆಯುಸಿರೆಳೆದರು. ಸರಳತೆ, ಅನುಕಂಪ, ಗುರಿಯನ್ನು ಸಾಧಿಸುವಲ್ಲಿ ನಿಸ್ಸೀಮ ತ್ಯಾಗ, ಉಜ್ಜ್ವಲ ಸ್ವಾಭಿಮಾನ, ಮಡಿವಂತ ಜೀವನ ಇತ್ಯಾದಿಗಳಿಗೆ ಸಂಕೇತವಾಗಿದ್ದ ಗಳಗನಾಥರು ಶುಚಿಯಾದದ್ದನ್ನೇ ನೋಡಿದರು, ಮಾಡಿದರು, ಬರೆದರು. ಪ್ರಾಥಮಿಕ ಶಾಲೆಯ ಕಿರುಬಯಲಿನಲ್ಲಿಯೇ ತಮ್ಮ ಶಕ್ತಿಯನ್ನು ಸಂಪೂರ್ಣ ವ್ಯಯಗೊಳಿಸದೆ ಅಲ್ಲಿಗೆ ಸಲ್ಲುವಷ್ಟನ್ನು ಸಲ್ಲಿಸಿ ಹೊರಜಗತ್ತಿಗೂ ಜಾಗೃತಚೇತನ ಶಕ್ತಿಯನ್ನು ಒದಗಿಸಿದರು.
ಉಲ್ಲೇಖಗಳು
ಬದಲಾಯಿಸಿ
ಹೊರಗಿನ ಕೊಂಡಿಗಳು
ಬದಲಾಯಿಸಿ- ಕವಿಸಮಯದಲ್ಲಿ ಚಕ್ರವರ್ತಿ ಸೂಲಿಬೆಲೆಯವರಿಂದ ಗಳಗನಾಥರ ಪರಿಚಯ
- ಕಣಜ ತಾಣದಲ್ಲಿ ಬರಹ
- ಗಳಗನಾಥರ ಕುರಿತು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಸಿಗುವ ಪುಸ್ತಕ
- ನಲಚರಿತ್ರೆ-ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಸಿಗುವ ಪುಸ್ತಕ
- ಕನ್ನಡಿಗರ ಕರ್ಮಕಥೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಸಿಗುವ ಪುಸ್ತಕ
- ಪ್ರಬುದ್ಧ ಪದ್ಮನಯನೆ-ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಸಿಗುವ ಪುಸ್ತಕ
- ಕ್ಷಾತ್ರತೇಜ-ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಸಿಗುವ ಪುಸ್ತಕ
- ಮಹಾಭಾರತಾಮೃತದ ಸಭಾಪರ್ವದೊಳಗಿನ ರಹಸ್ಯಗಳು-ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಸಿಗುವ ಪುಸ್ತಕ
- ಸಂಸಾರಸುಖ-ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಸಿಗುವ ಪುಸ್ತಕ
- ಕ್ಷಾತ್ರತೇಜ-ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಸಿಗುವ ಪುಸ್ತಕ
- ಮರಾಠರ ಅಭ್ಯುದಯ -ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಸಿಗುವ ಪುಸ್ತಕ
- ದುರ್ಗದ ಬಿಚ್ಚುಗತ್ತಿ-ಭಾಗ ೧ -ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಸಿಗುವ ಪುಸ್ತಕ
- ಧಾರ್ಮಿಕ ತೇಜ ಅಥವಾ ಪರಹಿತ ದಕ್ಷತಾ -ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಸಿಗುವ ಪುಸ್ತಕ
- ಮಹಾಭಾರತಾಮೃತ ಆದಿಪರ್ವ-ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಸಿಗುವ ಪುಸ್ತಕ
- ಕಲಿಕುಠಾರ- ಭಾಗ ೨-ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಸಿಗುವ ಪುಸ್ತಕ
- ಕುಮುದಿನಿ -ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಸಿಗುವ ಪುಸ್ತಕ
- ಸ್ವರಾಜ್ಯ-ಸುಗಂಧ-ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಸಿಗುವ ಪುಸ್ತಕ