ಕರ್ನಾಟಕ ವಿದ್ಯಾವರ್ಧಕ ಸಂಘ
ರಾ.ಹ.ದೇಶಪಾಂಡೆ ಯವರಿಂದ ಸ್ಥಾಪಿತವಾದ ಕರ್ನಾಟಕ ವಿದ್ಯಾವರ್ಧಕ ಸಂಘ ನಾಡು ನುಡಿಗಳ ಸೇವೆಯನ್ನೇ ಉದ್ದೇಶವಾಗಿಟ್ಟುಕೊಂಡು ಧಾರವಾಡದಲ್ಲಿ ೧೮೯೦ರ ಜುಲೈ ೨೦ರಂದು ಪ್ರಾರಂಭವಾದ ಒಂದು ಮುಖ್ಯ ಸಂಸ್ಥೆ. ಅಖಿಲ ಕರ್ನಾಟಕದ ವ್ಯಾಪ್ತಿಯನ್ನುಳ್ಳ ಸಂಸ್ಥೆಗಳಲ್ಲಿ ಮೊಟ್ಟ ಮೊದಲಿನದೆನಿಸಿದ ಈ ಸಾಂಸ್ಕೃತಿಕ ಸಂಸ್ಥೆಯ ಪ್ರಥಮ ಅಧ್ಯಕ್ಷ ಶಾಮರಾವ್ ಕೈಕಿಣಿ, ಪ್ರಥಮ ಕಾರ್ಯದರ್ಶಿ ರಾ.ಹ.ದೇಶಪಾಂಡೆ
ಮುಂಬಯಿ, ಮದ್ರಾಸ್, ಪೂನಾ, ಅಹಮ್ಮದನಗರ, ಹೈದ್ರಾಬಾದ್, ಕಾರವಾರ, ಮಂಗಳೂರು, ಮೈಸೂರು,ಚಿತ್ರದುರ್ಗ, ಬಳ್ಳಾರಿ, ರಾಯಚೂರು, ಮಡಿಕೇರಿ ಇತ್ಯಾದಿ ಕರ್ನಾಟಕದ ಒಳ ಹೊರಗಿನ ಪಟ್ಟಣಗಳ ಕನ್ನಡಿಗರು. ಕನ್ನಡಾಭಿಮಾನಿಗಳು ಇದರ ಆಜೀವ ಸದಸ್ಯರಾಗಿ ಅಂದಿಗೆ ಈ ಸಂಸ್ಥೆಯನ್ನು ಇಡೀ ಕರ್ನಾಟಕದ ಪ್ರಾತಿನಿಧಿಕ ಸಂಸ್ಥೆಯನ್ನಾಗಿ ಮಾಡಿದರು. ಎಂಥ ಹಿರಿಯರ ಮಾರ್ಗದರ್ಶನ ಈ ಸಂಸ್ಥೆಗೆ ಇತ್ತೆಂಬುದಕ್ಕೆ ಮುಂದಿನ ಪಟ್ಟಿಯೇ ನಿದರ್ಶನವಾಗಿದೆ. ಶಾಮರಾವ್ ಕೈಕಿಣಿ, ಸಿ ಸಿ. ಹುಲಕೋಟಿ ಮುಂತಾದವರು ಅಧ್ಯಕ್ಷರು; ಬಿ. ಎಲ್. ರೈಸ್, ಕಿಟ್ಟೆಲ್, ಫ್ಲೀಟ್, ಭಂಡಾರಕರರಂಥ ಎತ್ತರದ ವ್ಯಕ್ತಿಗಳು ಗೌರವ ಸದಸ್ಯರು; ಬೆಳವಿ ವಕೀಲರು, ಬಿ.ಎಂ.ಶ್ರೀ. ಮೊದಲಾದವರು ಉದ್ಧಾರಕರು. ರಾಮಚಂದ್ರರಾವ್ ದೇಶಪಾಂಡೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮುಂತಾದವರು ಪ್ರದಾತೃಗಳು; ಆಲೂರ ವೆಂಕಟರಾವ್, ಮುದವೀಡು ಕೃಷ್ಣರಾವ್, ಎಸ್. ಸಿ. ನಂದೀಮಠ. ಟಿ. ಕೆ. ತುಕೋಳ್, ಕೆ. ಜಿ. ಕುಂದಣಗಾರ, ಎ. ಆರ್. ಕೃಷ್ಣಶಾಸ್ತ್ರೀ, ಎಂ.ಎಚ್. ಕೃಷ್ಣ, ಕಡೆಂಗೋಡ್ಲು ಶಂಕರಭಟ್ಟ, ಮಧುರಚೆನ್ನ, ಬಿ. ವೆಂಕಟಾಚಾರ್ಯರಂಥ ಕೀರ್ತಿವಂತ ಕನ್ನಡಿಗರು ಸದಸ್ಯರು. ಈ ಸಂಘ ಮೈಸೂರ ಅರಸರು, ವಂಟಮುರಿ ಸಿರಸಿಂಗಿ ದೇಸಾಯಿಗಳು ಮೊದಲುಗೊಂಡು, ಶ್ರೀಸಾಮಾನ್ಯರವರೆಗಿನ ಅನೇಕಾನೇಕ ವ್ಯಕ್ತಿಗಳ ಉದಾರಾಶ್ರಯದಲ್ಲಿ ಬೆಳೆಯಿತು. ಪ್ರತಿವರ್ಷದ ವಾರ್ಷಿಕ ಸಭೆಗೆ ಮೈಸೂರಿನಿಂದ ಪ್ರತಿನಿಧಿಗಳನ್ನು ಕರೆಸಿಕೊಂಡುದುಂಟು (೧೧-೩-೧೯೦೦ರ ಸಭೆಗೆ ಮೈಸೂರು ಸರ್ಕಾರದವರು ಬಿ. ಎಂ. ಶ್ರೀ. ಅವರನ್ನು ಕಳಿಸಿದ್ದರು). ಕಟ್ಟಡದ ಉಪಸಭೆಗೆ ಬೆಳಗಾಂವಿ, ಬಿಜಾಪುರ, ರಾಯಚೂರು, ಗುಲ್ಬರ್ಗ, ಬಳ್ಳಾರಿಗಳಿಂದ ಗಣ್ಯ ವ್ಯಕ್ತಿಗಳನ್ನು ಬರಮಾಡಿಕೊಳ್ಳಲಾಗಿತ್ತು. ಹೀಗೆ ಎಲ್ಲ ಪ್ರದೇಶಗಳ ಎಲ್ಲ ವರ್ಗದ ಪ್ರಜಾಸ್ತೋಮಕ್ಕೆ ಮುಕ್ತ ದ್ವಾರವಾಗಿ ನಿಂತು ಅಖಿಲ ಕರ್ನಾಟಕವನ್ನೇ ಪ್ರತಿನಿಧಿಸುವ ಸಂಸ್ಥೆಯಾಗಿ ಇದು ಬೆಳೆದು ಬಂತು. ಈ ಸಂಘ ಹುಟ್ಟಿದ ೨೫ ವರ್ಷಗಳ ತರುವಾಯ ಇದರ ದುಡಿಮೆ, ಬಯಕೆಗಳ ಫಲವಾಗಿ ಕರ್ನಾಟಕದಲ್ಲಿ ಮಿಕ್ಕ ಸಂಸ್ಥೆಗಳು ಹುಟ್ಟಿದುವು; ಅನೇಕ ಕಡೆಗೆ ಕನ್ನಡ ಸಂಘಗಳು ಉದಯಿಸತೊಡಗಿದುವು. ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೇರೂರಿತು. ಒಟ್ಟಾರೆ ವಿದ್ಯಾವರ್ಧಕ ಸಂಘದ ೨೫ ವರ್ಷಗಳ ಕನಸು ಒಂದೊಂದೇ ನಿಜಸ್ವರೂಪ ತಾಳತೊಡಗಿದುವು. ಪ್ರಾರಂಭದಲ್ಲಿ ಈ ಸಂಘದ ಶಾಖೆಯೊಂದು ವಿಜಾಪುರದಲ್ಲಿದ್ದು ಮುಂದೆ ಕಾರವಾರಕ್ಕೆ ಸ್ಥಳಾಂತರಿಸಲ್ಪಟ್ಟಿತು.
ಕನ್ನಡ ಭಾಷೆಯ ಪುನರುಜ್ಜೀವನ
ಬದಲಾಯಿಸಿಮುಂಬಯಿ ಕರ್ನಾಟಕದಲ್ಲಿ ಮರಾಠಿ, ನಿಜಾಮ ಕರ್ನಾಟಕದಲ್ಲಿ ಉರ್ದು, ತೆಲುಗು, ಮದ್ರಾಸ್ ಕರ್ನಾಟಕದಲ್ಲಿ ತಮಿಳು ಭಾಷೆಗಳ ಪ್ರಾಬಲ್ಯದಿಂದ ಕನ್ನಡ ಕಡೆಗಣಿಸಲ್ಪಟ್ಟ ಸಮಯದಲ್ಲಿ ಈ ಸಂಘ ಕನ್ನಡದ ಪುನರುಜ್ಜೀವನಕ್ಕೆ ಅಹೋರಾತ್ರಿ ದುಡಿಯಿತು. ಕನ್ನಡ ಭಾಗಗಳಲ್ಲಿನ ಶಾಲೆಗಳಲ್ಲಿ ಕಲಿಸುತ್ತಿದ್ದ ಮರಾಠಿಯನ್ನು ವ್ಯವಸ್ಥಿತವಾಗಿ ನಿಲ್ಲಿಸಿತು. ಮುಂಬಯಿ ವಿಶ್ವವಿದ್ಯಾಲಯದಲ್ಲಿ ಮರಾಠಿ, ಗುಜರಾತಿಗಳ ಜೊತೆ ಕನ್ನಡವನ್ನೂ ಎಂ. ಎ. ಪರೀಕ್ಷೆಗೆ ಅಂಗೀಕರಿಸಲು ಒತ್ತಾಯಿಸಿತು. ಸಂಘಕ್ಕೆ ಕನ್ನಡದ ಬಗ್ಗೆ ಇರುವ ಆಸ್ಥೆಯನ್ನು ಕಂಡು ಹರ್ಷಪಟ್ಟ ಜೆ. ಎಫ್, ಫ್ಲೀಟ್ರು ೧೯೫೯ರಲ್ಲಿ ಒಂದು ಪತ್ರ ಬರೆದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ಉಪನ್ಯಾಸ ಮಾಲೆ
ಬದಲಾಯಿಸಿವ್ಯವಹಾರದಿಂದ ದೂರವಾಗುತ್ತಿದ್ದ ಕನ್ನಡವನ್ನು ಉಪನ್ಯಾಸಕ್ಕೆ ಯೋಗ್ಯವಾಗುವಂತೆ ಪಳಗಿಸಲು ಸಂಸ್ಥೆ ೧೮೯೧ರಿಂದ ಮುಂದೆ ಪ್ರತಿವರ್ಷವೂ ವಾಕ್ ಸ್ಪರ್ಧೆಗಳನ್ನು ಏರ್ಪಡಿಸಿತು. ವಿದ್ಯಾರ್ಥಿಗಳಿಗಾಗಿ ೧೯೨೯ರಿಂದ ಲೋಕಮಾನ್ಯ ವಕ್ತೃತ್ವ ಸ್ಪರ್ಧೆ, ೧೯೪೫ರಿಂದ ತಾರಾನಾಥ ವಕ್ತೃತ್ವ ಸ್ಪರ್ಧೆಗಳನ್ನು ನಡೆಸಿಕೊಂಡು ಬರುವುದರ ಜೊತೆಗೆ ವಿದ್ವಾಂಸರಿಗಾಗಿ ೧೯೩೬ರಿಂದ ಸಾಸನೂರ ವ್ಯಾಖ್ಯಾನ ಮಾಲೆಯನ್ನು ನಡೆಸಿಕೊಂಡು ಬರುತ್ತಿದೆಯಲ್ಲದೆ, ಸಾಹಿತ್ಯ, ಸಂಸ್ಕೃತಿ ಏಳ್ಗೆಯ ಅಭಿಲಾಷೆ ಹೊಂದಿ ೧೩೩ಕ್ಕೂ ಹೆಚ್ಚು ಮಹನೀಯರು ಇರಿಸಿದ ದತ್ತಿಗಳಿಂದ ವಚನಸಾಹಿತ್ಯ, ಜನಪದ ಸಾಹಿತ್ಯ,ಶಿಷ್ಟಸಾಹಿತ್ಯ ಹೀಗೆ ಎಲ್ಲ ಪ್ರಕಾರದ ಸಾಹಿತ್ಯಗಳ ಕುರಿತು ಉಪನ್ಯಾಸ, ಸಂವಾದ, ವಿಚಾರ ಸಂಕಿರಣ ಮಾಡುತ್ತಾ ಬಸವ ಜಯಂತಿ, ಕಿತ್ತೂರು ಚೆನ್ನಮ್ಮ ವಿಜಯೋತ್ಸ ದಿನಾಚರಣೆ ಜನಪದ ಹಾಡು,ನೃತ್ಯ, ಚಿತ್ರಕಲೆ ಹೀಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲದೆ ನಾಡು-ಹೊರನಾಡುಗಳ ಸಾಹಿತಿ ಕಲಾವಿದರುಗಳ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಮುನ್ನಡೆದಿದೆ. ಇತ್ತೀಚಿನ ದಿನಗಳಲ್ಲಿ ಸಂಘ ನಾಡಿನ ಬೇರೆ ಬೇರೆ ಪ್ರದೇಶಗಳಲ್ಲಿ ತನ್ನ ಕಾರ್ಯಕ್ರಮಗಳನ್ನು ಏರ್ಪಡಿಸುತ್ತ ಸಾಗಿರುವುದಲ್ಲದೆ ನೆರೆಯ ರಾಜ್ಯಗಳಾದ ಗೋವ, ಮುಂಬಯಿಗಳಲ್ಲೂ ಕನ್ನಡ ಸಮ್ಮೇಳನ ಏರ್ಪಡಿಸಿ ಜನಮನವನ್ನು ಮುಟ್ಟುತ್ತಿರುವುದಲ್ಲದೆ ಕನ್ನಡಿಗರ ಸಂಘಟನೆಯಲ್ಲೂ ವಿಶೇಷ ಪಾತ್ರವನ್ನು ವಹಿಸುತ್ತಲಿದೆ.ಇತ್ತೀಚೆ ಹೊರನಾಡ ಕನ್ನಡಿಗರ ಸಂಘಗಳ ಪ್ರತಿನಿಧಿಗಳ ಮಹಾ ಮೇಳವನ್ನು ದೆಹಲಿ, ಬರೋಡ, ಅಮರಕಂಟಕ, ಮುಂಬೈ, ಹೈದರಾಬಾದ,ಅಕ್ಕಲಕೋಟ, ಧಾರವಾಡ ಹೀಗೆ ಪ್ರತಿ ವರ್ಷ ಮಹಾಮೇಳ ಮಾಡುತ್ತಾ ಹೊರನಾಡ ಕನ್ನಡಿಗರು ಸಂಘಟನಾತ್ಮಕವಾಗಿ ಕನ್ನಡದ ಕಂಪನ್ನು ಉಳಿಸಿಬೆಳೆಸುವಂತೆ ಮತ್ತು ಅವರುಗಳ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಮಾಡುತ್ತಾ ಬಂದಿದೆ.
ಸಾಹಿತ್ಯ ಪರೀಕ್ಷೆಗಳು
ಬದಲಾಯಿಸಿಹಳಗನ್ನಡ ಅಭ್ಯಾಸದ ಅಗತ್ಯವನ್ನು ಮನಗಂಡು ಪ್ರಾಚೀನ ಕಾವ್ಯ ಭಾಗಗಳನ್ನು ಪಠ್ಯವೆಂದು ನಿರ್ದಿಷ್ಟಪಡಿಸಿ ಪ್ರತಿವರ್ಷ ಸಂಘದಿಂದ ಪರೀಕ್ಷೆಗಳನ್ನು ಜರುಗಿಸಲಾಯಿತು. ಇವಕ್ಕೆ ಪರೀಕ್ಷಕರಾಗಿ ಹೊರಗಿನಿಂದ ಅನೇಕ ವಿದ್ವಾಂಸರು ಬರುತ್ತಿದ್ದುದೂ ಉಂಟು.
ಗ್ರಂಥಕರ್ತರ ಸಮ್ಮೇಳನ
ಬದಲಾಯಿಸಿಗ್ರಂಥಪ್ರಚಾರ, ಗ್ರಂಥಸ್ಥ ಭಾಷೆಯ ಏಕರೂಪತೆ, ಸಾಹಿತಿಗಳ ಪರಸ್ಪರ ಪರಿಚಯಗಳಿಗಾಗಿ ಧಾರವಾಡದಲ್ಲಿ ೧೯೦೭ ಜೂನ್ ೨ ಮತ್ತು ೩ ರಂದು ಅಖಿಲ ಕರ್ನಾಟಕದ ಗ್ರಂಥಕರ್ತರ ಮೊದಲ ಸಮ್ಮೇಳನವನ್ನು ಕರೆಯಲಾಯಿತು. ದೇಶದ ಎಲ್ಲ ಭಾಗಗಳಿಂದ ಪ್ರತಿನಿಧಿಗಳು ಆಗಮಿಸಿದ್ದರು. ಇದರ ಫಲವಾಗಿ ಪಠ್ಯಪುಸ್ತಕ, ಪಾರಿಭಾಷಿಕ ಪದ, ರಂಗಭೂಮಿ ನಾಟ್ಯ, ಇತಿಹಾಸ, ಸಾಹಿತ್ಯಗಳಿಗೆ ಸಂಬಂಧಪಟ್ಟ ಹಲವಾರು ಯೋಜನೆಗಳು ರೂಪುಗೊಂಡುವು.
ಜಿಲ್ಲಾ ಸಾಹಿತ್ಯ ಸಮ್ಮೇಳನ
ಬದಲಾಯಿಸಿ೧೯೩೯ರಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಪ್ರಾರಂಭ ಮಾಡಲಾಯಿತು. ಧಾರವಾಡದಲ್ಲಿ ಜರುಗಿದ ಪ್ರಥಮ ಸಮ್ಮೇಳನಕ್ಕೆ ಅಧ್ಯಕ್ಷರು ಕಡೆಂಗೋಡ್ಲು ಶಂಕರಭಟ್ಟರು, ತರುವಾಯ ಗದಗ, ಹಾವೇರಿ, ನವುಲಗುಂದ, ರಾಣೆಬೆನ್ನೂರ, ಹುಬ್ಬಳ್ಳಿ ಮೊದಲಾದ ಸ್ಥಳಗಳಲ್ಲಿ ಈ ಸಮ್ಮೇಳನಗಳು ಜರುಗಿದುವು. ಮೂರು ದಿನ ನಡೆದ ಹುಬ್ಬಳ್ಳಿ ಸಮ್ಮೇಳನದ ಕವಿಗೋಷ್ಠಿ. ನಾಟ್ಯ ಗೋಷ್ಠಿ, ವಿಜ್ಞಾನಗೋಷ್ಠಿ, ಕರ್ನಾಟಕದ ವಿಶ್ವವಿದ್ಯಾಲಯ ಗೋಷ್ಠಿಗಳು ಈ ಜಿಲ್ಲಾ ಸಾಹಿತ್ಯ ಸಮ್ಮೇಳನಗಳ ಕಾರ್ಯಸ್ವರೂಪವನ್ನು ವ್ಯಕ್ತಪಡಿಸುತ್ತವೆ.
ವಾಗ್ಭೂಷಣ ಪತ್ರಿಕೆ
ಬದಲಾಯಿಸಿಸಂಸ್ಥೆಯ ಮುಖಪತ್ರವಾಗಿ ೧೮೯೬ರಲ್ಲಿ ಈ ಮಾಸ ಪತ್ರಿಕೆಯನ್ನು ಹೊರತರಲಾಯಿತು. ಕರ್ನಾಟಕ ಹಾಗೂ ಮೈಸೂರು ಸೀಮೆಯ ಗ್ರಂಥಸ್ಥ ಭಾಷೆ ಸಾಧ್ಯವಿದ್ದ ಮಟ್ಟಿಗೆ ಒಂದೇ ಆಗುವಂತೆ ಮಾಡುವುದೇ ಈ ಮಾಸಪತ್ರಿಕೆಯ ಉದ್ದೇಶ. ಹಳಗನ್ನಡ ಗ್ರಂಥಸಂಶೋಧನ, ಪರಿಷ್ಕರಣ, ಹೊಸಗನ್ನಡದ ಹೊಸ ಸಾಹಿತ್ಯ ನಿರ್ಮಾಣಗಳಿಗೆ ಈ ಪತ್ರಿಕೆ ಪ್ರೋತ್ಸಾಹ ಕೊಟ್ಟಿತು. ೨೩ ವರ್ಷಗಳಲ್ಲಿ ಧರ್ಮ, ಇತಿಹಾಸ, ಸಂಶೋಧನೆ, ವಿಜ್ಞಾನ, ಸಂಸ್ಕೃತಿ ಮತ್ತು ಸಾಹಿತ್ಯ ಕ್ಷೇತ್ರಗಳಿಗೆ ಸಂಬಂಧಿಸಿ ೮೫ ಗ್ರಂಥಗಳು ಪ್ರಕಟವಾದುವು. ಇವುಗಳಲ್ಲಿ ಧಾರವಾಡದ ಕುರಡಿ ಅವರು ಬರೆದ ಆರ್. ನರಸಿಂಹಾಚಾರ್ ಚರಿತ್ರೆ, ಮೈಸೂರಿನ ಬಿ.ವೆಂಕಟಾಚಾರ್ಯರು ಬರೆದ ಅಮೃತಪುಲಿನಗಳು ಪರಸ್ಪರ ಬಾಂಧವ್ಯದ ಪ್ರತೀಕಗಳಾಗಿವೆ.
ಗ್ರಂಥ ಪ್ರಕಟನೆ
ಬದಲಾಯಿಸಿಉನ್ನತಮಟ್ಟದ ಗ್ರಂಥಗಳನ್ನು ಹೊರತರಲು ಬಯಸಿದ ಸಂಸ್ಥೆ ಮಾಲವಿಕಾಗ್ನಿಮಿತ್ರ, ಉತ್ತರರಾಮಚರಿತೆ, ವೇಣೀಸಂಹಾರ, ಕನ್ನಡ, ತಮಿಳು ಮೊದಲನೆಯ ಪುಸ್ತಕ, ಬಾಣ ಕಾದಂಬರಿ, ಕನ್ನಡದ ನೆಲೆ, ಕರ್ನಾಟಕ ಜನಜೀವನ, ಕರ್ನಾಟಕ ಸಾಹಿತ್ಯ ಸಂಸ್ಕೃತಿ ದರ್ಶನ, ಕನ್ನಡ ಕಾನೂನು ಪದ ವಿವರಣಕೋಶ, ಗೋಕಾಕ ವರದಿ, ಕಾವ್ಯಯಾನ, ಸ್ವಾತಂತ್ರ್ಯ ಚಿಂತನೆ, ೨೦ನೆಯ ಶತಮಾನದ ಕನ್ನಡ ಸಾಹಿತ್ಯ ಘಟ್ಟಗಳು, ಬಯಲ ಬೇರು ಚಿಗುರು, ಕವಿ ಬಿ. ಎ, ಸನದಿ ಕಾವ್ಯಾವಲೋಕನ, ಶಬ್ದಾನುಶಾಸನ, ದಿ ಹರಿದಾಸಾಸ್ ಆಫ್ ಕರ್ನಾಟಕ-ಮೊದಲಾದ ನೂರಾಹತ್ತಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದೆ. ಕನ್ನಡ ಬರಹಗಾರರಿಗೆ ಪ್ರೋತ್ಸಾಹ : ೧೯೦೦-೧೯೪೦ರ ಅವಧಿಯಲ್ಲಿ ಈ ಸಂಘ ೧೭೫ ಗ್ರಂಥಕಾರರಿಗೆ ೧೮,೯೯೦ ರೂಪಾಯಿಗಳ ಸಂಭಾವನೆಯನ್ನು ನೀಡಿದೆ. ಪ್ರತಿಯೊಂದು ವಿಷಯಕ್ಕೆ ಸಂಬಂಧಪಟ್ಟಂತೆ ಸಂಶೋಧನೆ ೪೪, ಶಿಕ್ಷಣ ೭, ಪ್ರಬಂಧ ೯, ಪೌರಾಣಿಕ ೩೩, ವೇದಾಂತ ೨೩ ಸಾಹಿತ್ಯ ವಿಮರ್ಶೆ ೧೧, ಕಾವ್ಯ ೩೧, ಗಣಿತ ೧, ಶಾಸ್ತ್ರೀಯ ವಿಷಯ ೧೦, ಇತರ ೩೨, ಚರಿತ್ರೆ ೬೦, ಇತಿಹಾಸ ೨೮, ಕಾದಂಬರಿ ೯೫, ನಾಟಕ ೩೦, ಒಕ್ಕಲುತನ ೯-ಹೀಗೆ ೪೨೩ ಪುಸ್ತಕಗಳಿಗೆ ಸಂಭಾವನೆ ನೀಡಿದೆ. ಈಗಲೂ ಮಾತೊಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನವನ್ನು ಪ್ರತಿವರ್ಷ ತಪ್ಪದೆ ನಡೆಸಿಕೊಂಡು ಮುನ್ನಡೆದಿದೆ.
ವಾಚನಾಲಯ
ಬದಲಾಯಿಸಿಸಾವಿರ ರೂಪಾಯಿ ಸಂಗ್ರಹವಾದ ಕೂಡಲೇ ೩೦೦ ರೂ. ಗಳನ್ನು ವಾಚನಾಲಯಕ್ಕೆ ವಿನಿಯೋಗಿಸಬೇಕೆಂದು ತನ್ನ ಮೊದಲ ಸಭೆ (೨೦-೭-೧೮೯೦) ಯಲ್ಲಿಯೇ ನಿರ್ಧರಿಸಿ ಅಂದೇ ಗ್ರಂಥ ಸಂಗ್ರಹಕ್ಕೆ ಮೊದಲು ಮಾಡಲಾಯಿತು. ೧೯೪೦ರಲ್ಲಿ ಶಾಂತೇಶ ವಾಚನಾಲಯವನ್ನು ಒಳಗು ಮಾಡಿಕೊಂಡು ಗ್ರಂಥ ಭಂಡಾರವನ್ನು ವಿಸ್ತರಿಸಿಕೊಂಡಿತು. ಅಹಮ್ಮದಾಬಾದ್, ಪುಣೆ ಧಾರವಾಡಗಳಲ್ಲಿ ಕ್ರಮವಾಗಿ ಗುಜರಾತಿ, ಮರಾಠಿ, ಕನ್ನಡ ಗ್ರಂಥಗಳ ಪ್ರಾದೇಶಿಕ ಗ್ರಂಥಾಲಯಗಳನ್ನು ಪ್ರಾರಂಭಿಸಲು ಮುಂಬಯಿ ಸರಕಾರ ಬಯಸಿದಾಗ ಕರ್ನಾಟಕದ ಎಲ್ಲ ಸಂಸ್ಥೆಗಳೂ ಪತ್ರಿಕೆಗಳೂ ಆ ಹೊಣೆಗೆ ವಿದ್ಯಾವರ್ಧಕ ಸಂಘವೇ ಯೋಗ್ಯ ಎಂದು ಸೂಚಿಸಿದುವು. ಈ ಸೂಚನೆ ಆ ಕಾಲದಲ್ಲಿ ಸಂಘ ಸಾಧಿಸಿದ್ದ ಗೌರವ, ಪ್ರತಿಷ್ಠೆಯನ್ನು ವ್ಯಕ್ತಪಡಿಸುತ್ತದೆ. ಹತ್ತು ಸಾವಿರ ರೂಪಾಯಿಗಳ ಈ ಹೊಣೆಯನ್ನು ಸಂಘ ಹೊತ್ತು ವಾಚನಾಲಯಗಳನ್ನು ನಡೆಸಿತು. ಈಗ ಶಾಂತಕವಿಗಳ ಹೆಸರಿನಲ್ಲಿ ‘ಶಾಂತೇಶ ವಾಚನಾಲಯ’ವನ್ನು ನಡೆಸುತ್ತಲಿದ್ದು, ಅದು ಸಂಶೋಧನ ವಿದ್ಯಾರ್ಥಿಗಳಿಗೆ ಆಕರ ಸಾಮಗ್ರಿಯನ್ನು ಒದಗಿಸುವಂತಹ ಹಿರಿಮೆಯನ್ನು ಹೊಂದಿದೆ. ಈಗಾಗಲೇ ಸಂಘವನ್ನು, ವಾಚನಾಲಯವನ್ನು ಕುರಿತು ಇಬ್ಬರು ವಿದ್ಯಾರ್ಥಿಗಳು ಸಂಶೋಧನೆಗೈದು ಪಿ.ಎಚ್.ಡಿ. ಪದವಿ ಪಡೆದಿದ್ದಾರೆ. ಕನ್ನಡ ಸಂಶೋಧನ ಕೇಂದ್ರ : ಮುಂಬಯಿ ಸರಕಾರ ಕನ್ನಡ ಸಂಶೋಧನೆ ಕೇಂದ್ರವನ್ನು ಸ್ಥಾಪಿಸುವ ಯೋಚನೆ ನಡೆಸಿದಾಗ ಈ ಸಂಘ ಮುಂದೆ ಬಂದು ಯೋಜನೆಯನ್ನು ಸಿದ್ಧಪಡಿಸಿ ಹೊಣೆ ಹೊರಲು ಮುಂದಾಗಿ ಅದರ ಯಶಸ್ಸಿಗೆ ದುಡಿಯಿತು.
ನಾಡಹಬ್ಬ
ಬದಲಾಯಿಸಿ೧೯೨೬ರಲ್ಲಿ ಬೆಟಗೇರಿ ಕೃಷ್ಣಶರ್ಮ ಮತ್ತು ದ. ರಾ. ಬೇಂದ್ರೆಯವರಿಂದ ಪ್ರಾರಂಭವಾದ ನಾಡಹಬ್ಬ ಕಾರ್ಯಕ್ರಮವನ್ನು ಸಂಘ ಪ್ರತಿವರ್ಷ ತಪ್ಪದೇ ಆಚರಿಸುತ್ತ ಬಂದಿದೆ. ಈ ಸಮಾರಂಭದಲ್ಲಿ ಉಪನ್ಯಾಸ, ಗೋಷ್ಠಿ, ಸಂಗೀತ, ಕಲಾ ಪ್ರದರ್ಶನ, ವ್ಯಾಯಾಮ, ಸ್ಪರ್ಧೆ, ನಾಟಕ ಮೊದಲಾದ ಕಾರ್ಯಕ್ರಮಗಳು ಈವರೆಗೆ ನಡೆಯುತ್ತಲಿವೆ. ಇದಕ್ಕೆ ನಾಡಹಬ್ಬವೆಂಬ ಮನ್ನಣೆ ಲಭಿಸಲು ಮೂಲಕಾರಣ ಈ ಸಂಘವೇ.ಇಂದು ನಾಡ ಹಬ್ಬವನ್ನು ನವಂಬರ ತಿಂಗಳವನ್ನು ಆಚರಿಸುತ್ತದೆ. ನಾಟಕೋತ್ಸವ, ಹಚ್ಚೇವು ಕನ್ನಡದೀಪ, ಬಾರಿಸಿ ಕನ್ನಡ ಡಿಂಡಿಮವ ಹೆಸರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸುವ ಪ್ರಯತ್ನ ತಿಂಗಳಪೂರ್ಣ ನಡೆಸುತ್ತಾ ಬಂದಿದೆ.
ಪಠ್ಯಪುಸ್ತಕ, ಆಕಾಶವಾಣಿ
ಬದಲಾಯಿಸಿಸಂಘದಂಥ ಸಂಸ್ಥೆಗೆ ವನಾರ್ಯ್‌ಕ್ಯುಲರ ಟೆಕ್ಸ್‌್ಟಬುಕ್ ಕಮಿಟಿಯಲ್ಲಿ ಪ್ರಾತಿನಿಧ್ಯ ಅವಶ್ಯ (೧೦-೨-೧೯೩೧). ಪಠ್ಯಪುಸ್ತಕಗಳ ಭಾಷೆಯಲ್ಲಿ ಏಕರೂಪ ಅವಶ್ಯ (೨-೩ ಜೂನ್ ೧೯೦೭). ಅಖಿಲ ಭಾರತ ಆಕಾಶವಾಣಿಯಲ್ಲಿ ಕನ್ನಡಕ್ಕೆ ಮಿಕ್ಕ ಭಾಷೆಗಳ ಕಾರ್ಯಕ್ರಮದಷ್ಟೇ ಸ್ಥಾನ ಬೇಕು. (೧೨-೯-೧೯೩೯) ಇವೇ ಮೊದಲಾದ ಗೊತ್ತುವಳಿಗಳನ್ನು ಅಂಗೀಕರಿಸಿ ಅವನ್ನು ಕಾರ್ಯಕ್ರಮಕ್ಕೆ ತರಲು ಸಂಘ ಮಾಡಿದ ಪ್ರಯತ್ನಗಳು ಸ್ಮರಣೀಯವಾಗಿವೆ.
ಸಾಹಿತ್ಯ ಸಮ್ಮೇಳನಕ್ಕೆ ಆಮಂತ್ರಣ
ಬದಲಾಯಿಸಿಸಾಹಿತ್ಯ ಸಮ್ಮೇಳನವನ್ನು ಧಾರವಾಡದಲ್ಲಿ ನಡೆಸಲು ಬೆಂಗಳೂರು ಪರಿಷತ್ತು ಯೋಚಿಸಿದಾಗ ಸಂಘ ಎರಡು ಸಲ ಮುಂದೆ ಬಂದು ಹೊಣೆ ಹೊತ್ತಿತು. ಆರ್. ನರಸಿಂಹಾಚಾರ್ಯರ ಅಧ್ಯಕ್ಷತೆಯಲ್ಲಿ ನಡೆದ ೪ನೆಯ ಸಮ್ಮೇಳನ, ಚಂದ್ರಶೇಖರಶಾಸ್ತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ೨೫ನೆಯ ಸಮ್ಮೇಳನಗಳ ಹೊಣೆಯನ್ನು ತ್ರಿಕರಣಪೂರ್ವಕವಾಗಿ ನಿರ್ವಹಿಸಿತು.
ಗೋಕಾಕ ಚಳವಳಿ
ಬದಲಾಯಿಸಿಕನ್ನಡ, ಕನ್ನಡಿಗ ಹಾಗೂ ಕರ್ನಾಟಕದ ಹಿತಕ್ಕೆ ಧಕ್ಕೆ ಬಂದಾಗ ಸಂಘ ಸ್ಥಳೀಯ ಸಂಘಟನೆಗಳ ಸಹಕಾರ-ಸಹಾಯವನ್ನು ಪಡೆದುಕೊಂಡು ರಾಜ್ಯಮಟ್ಟದ ಚಳವಳಿಗಳನ್ನು ಕೈಗೊಂಡಿದೆ. ಇದಕ್ಕೆ ಉದಾಹರಣೆ : ಕನ್ನಡ ಭಾಷಾನೀತಿಗೆ ಸಂಬಂಧಪಟ್ಟಂತೆ ‘ಗೋಕಾಕ ಚಳವಳಿ’ ಯನ್ನು ಹಮ್ಮಿಕೊಂಡು ಯಶಸ್ವಿಗೊಳಿಸಿದುದು.
ಇತರ ಕಾರ್ಯಗಳು
ಬದಲಾಯಿಸಿಇತ್ತೀಚೆಗೆ ‘ರವಿವಾರದ ನಾಟಕಶಾಲೆ’ಯನ್ನು ಪ್ರಾರಂಭಿಸಿ ಉದಯೋನ್ಮುಖ ಕಲಾವಿದರಿಗೆ ರಂಗತರಬೇತಿ ನೀಡುವಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.
ಸಂಘ ಸಾಹಿತ್ಯ ಮಂಟಪ, ವಿಜ್ಞಾನ ಮಂಟಪ, ಜಾನಪದ ಮಂಟಪ, ಕಾನೂನು ಮಂಟಪ, ಯುವಜನ ಮಂಟಪ, ಶಿಕ್ಷಣ ಮಂಟಪ, ಮಕ್ಕಳ ಮಂಟಪ, ಮಹಿಳಾ ಮಂಟಪ, ಶಿಕ್ಷಣ ಮಂಟಪ ಹೀಗೆ ಒಂಬತ್ತು ಮಂಟಪಗಳ ಅಡಿಯಲ್ಲಿ ಪ್ರಾರಂಭದಿಂದಲು ತನ್ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ.
ಕನ್ನಡದ ಮತ್ತು ಕರ್ನಾಟಕದ ಹಿತರಕ್ಷಣೆಗೆ ಈ ಸಂಘ ಬದ್ಧವಾಗಿ ಐತಿಹಾಸಿಕ ಪಾತ್ರವಹಿಸಿದೆ. ಕರ್ನಾಟಕ ಏಕೀಕರಣಕ್ಕಾಗಿ ಪ್ರಥಮ ಗೊತ್ತುವಳಿ ಅಂಗೀಕರಿಸಿದ (೧೯೧೭) ಹೆಗ್ಗಳಿಕೆ ಇದಕ್ಕಿದೆ. ಈ ಸಂಬಂಧದ ಚಳವಳಿಯಲ್ಲೂ ಸಕ್ರಿಯ ಪಾತ್ರವಹಿಸಿತು. ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯ ಸ್ಥಾಪನೆಯಾಗುವಲ್ಲಿ ಇದು ಮುಖ್ಯ ಪಾತ್ರವಹಿಸಿತು. ಸಂಘ, ಸರಕಾರ ಹಾಗೂ ನಾಡಿನ ಹಿರಿಯ ದಾನಿಗಳ ಸಹಾಯ, ಸಹಕಾರದಿಂದ ಸಂಘದ ಶತಮಾನೋತ್ಸವದ ಸ್ಮಾರಕವಾಗಿ ದೊಡ್ಡ ಸಭಾಭವನವನ್ನು ನಿರ್ಮಿಸಿದ್ದು, ಅದಕ್ಕೆ ನಾಡೋಜ ‘ಡಾ. ಪಾಟೀಲ ಪುಟ್ಟಪ್ಪ ಸಭಾಭವನ’ ಎಂದು ನಾಮಕರಣ ಮಾಡಲಾಗಿದೆ. ಸಂಘ ಪ್ರತಿವರ್ಷ ಜುಲೈ ೨೦ರಂದು ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಿ ಅದರಲ್ಲಿ ನಾಡು-ನುಡಿಯ ಸೇವೆ ಸಲ್ಲಿಸಿದ ಮಹನೀಯರುಗಳನ್ನು ಗೌರವಿಸಿ ಸನ್ಮಾನಿಸುವ ಸತ್ಕಾರ್ಯವನ್ನು ಕೈಕೊಳ್ಳುತ್ತ ಮುನ್ನಡೆದಿದೆ. ಕರ್ನಾಟಕ ಸರ್ಕಾರ ಸಂಘ, ಸಂಸ್ಥೆಗಳಿಗೆ ನೀಡುತ್ತಲಿರುವ ರಾಜ್ಯೋತ್ಸವ ಪ್ರಶಸ್ತಿಯ ಮೊದಲ ಗರಿಯನ್ನು ಮುಡಿದುಕೊಂಡ ಹಿರಿಯ ಸಾಹಿತ್ಯಕ-ಸಾಂಸ್ಕೃತಿಕ ಸಂಸ್ಥೆ ಕರ್ನಾಟಕ ವಿದ್ಯಾವರ್ಧಕ ಸಂಘವಾಗಿದೆ.
೧೯೫೬ ನವೆಂಬರ ೧ರಂದು ಏಕೀಕೃತ ಕರ್ನಾಟಕ ರಾಜ್ಯವು ಉದಯವಾಗುವ ಪೂರ್ವದಲ್ಲಿ ಕನ್ನಡ ನಾಡು ನಾಲ್ಕು ಭಾಗಗಳಲ್ಲಿ ಹರಿದು ಹಂಚಿ ಹೋಗಿದ್ದಿತು:
(೧) ಮುಂಬಯಿ ಕರ್ನಾಟಕ (ಬ್ರಿಟಿಷ್ ಆಧಿಪತ್ಯ)
(೨) ಹೈದರಾಬಾದ ಕರ್ನಾಟಕ ( ನಿಜಾಮ ಅಧಿಪತ್ಯ)
(೩) ಮದ್ರಾಸ ಕರ್ನಾಟಕ (ಬ್ರಿಟಿಷ್ ಆಧಿಪತ್ಯ)
(೪) ಮೈಸೂರು ಸಂಸ್ಥಾನ (ಸ್ವಾಯತ್ತ ಕನ್ನಡ ಸಂಸ್ಥಾನ)
(೫) ಕೊಡಗು
ಮೈಸೂರು ಸಂಸ್ಥಾನವನ್ನು ಹೊರತುಪಡಿಸಿ ಉಳಿದ ಭಾಗಗಳಲ್ಲಿ ಕನ್ನಡವು ಕಾಲುಕಸವಾಗಿತ್ತು. ಮುಂಬಯಿ ಕರ್ನಾಟಕದಲ್ಲಿ ಮರಾಠಿ ಸರ್ವಾಧಿಕಾರತ್ವವನ್ನು ಕಿತ್ತೊಗೆದು ಕನ್ನಡದ ಪುನರ್ ಪ್ರತಿಷ್ಠಾನ ಮಾಡುವ ಕನಸು ಕಂಡವರಲ್ಲಿ ರಾ.ಹ.ದೇಶಪಾಂಡೆ ಅಗ್ರಗಣ್ಯರು. ಇವರ ಪ್ರಯತ್ನಗಳಿಂದಾಗಿ ಕರ್ನಾಟಕ ವಿದ್ಯಾವರ್ಧಕ ಸಂಘವು ಅಸ್ತಿತ್ವದಲ್ಲಿ ಬಂದಿತು.
ಸಂಘದ ಜನನ
ಬದಲಾಯಿಸಿ೧೮೯೦ ಜುಲೈ ೨೦ರಂದು ಸಂಜೆ ೫ ಗಂಟೆಗೆ ಧಾರವಾಡದ ಹೊಸಯಲ್ಲಾಪುರ ಭಾಗದಲ್ಲಿರುವ ಗದಗಕರ ವಕೀಲರ ಅಟ್ಟದ ಮೇಲೆ (“ಮಂಗ್ಯಾನ ಮಹಲ”) ರಾ.ಹ.ದೇಶಪಾಂಡೆಯವರು ಕರೆದ ಸಭೆಯಲ್ಲಿ ಧಾರವಾಡದ ಗಣ್ಯ ನಾಗರಿಕರೆಲ್ಲರೂ ಉಪಸ್ಥಿತರಿದ್ದರು. ಕನ್ನಡದ ಬೆಳೆವಣಿಗೆಗಾಗಿ ‘ಕರ್ನಾಟಕ ವಿದ್ಯಾವರ್ಧಕ ಸಂಘ’ ಎನ್ನುವ ಸಂಘವನ್ನು ಸ್ಥಾಪಿಸಲು ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಸಂಘದ ಕಾರ್ಯಕಾರಿಣಿಯ ಮೊದಲ ಅಧ್ಯಕ್ಷರು ಶ್ರೀ ಶ್ಯಾಮರಾವ ವಿಠ್ಠಲ ಕಾಯಿಕಿಣಿ; ಮೊದಲ ಕಾರ್ಯದರ್ಶಿ ರಾ.ಹ.ದೇಶಪಾಂಡೆ.
ಪಾಪು ಸಂಪಾದಕತ್ವದಲ್ಲಿ ನಂತರ ಹುಟ್ಟಿದ ವಾರ ಪತ್ರಿಕೆಯೇ ‘ಪ್ರಪಂಚ’. ಪಾಪು ನೇತೃತ್ವದಲ್ಲಿ ಬೆಳೆದ ಇನ್ನೊಂದು ಸಂಘಟನೆ ಧಾರವಾಡದ ಐತಿಹಾಸಿಕ ವಿದ್ಯಾವರ್ಧಕ ಸಂಘ.ಐವತ್ತಮೂರು ವರ್ಷಗಳ ಕಾಲ ಅಧ್ಯಕ್ಷರಾಗಿ ಈ ಸಂಘವನ್ನು ಪಾಪು ಮುನ್ನಡೆಸಿದರು.
ಕಾಕತಾಳೀಯ ಅಂದರೆ ಇದುವೇ ನೋಡಿ; ಪಾಪು ಬೆಳೆಸಿದ ವಿದ್ಯಾವರ್ಧಕ ಸಂಘ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿಯ ಮನ್ನಣೆಗೆ ಪಾತ್ರವಾದ ನೆನಪು ಹಸಿರಾಗಿರುವಾಗಲೇ- ಪಾಪು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿದ್ದಾರೆ.